ಲೇಖಕರು: ನಾರಾಯಣ ಶೇವಿರೆ

ಇತ್ತೀಚೆಗೆ ಬೇಡಿಕೆಯಲ್ಲಿರುವ ಪದಗಳಲ್ಲಿ ಒಂದು “ಬಹುತ್ವ”. ಇದೀಗ ಅದಕ್ಕೆ ಸೆಕ್ಯುಲರಿಸಮ್ಮಿನ ತಮ್ಮನಂತೆ ಮೆರೆವ ಭಾಗ್ಯ!

ಹಾಗೆ ಮೆರೆಯುತ್ತಿದೆ ಎಂದರೆ ಮೆರೆಸುವವರೂ ಬೇಕಷ್ಟೆ. ಸೆಕ್ಯುಲರಿಸಂ ಕೂಡಾ ಮೆರೆಸುವವರಿಂದಾಗಿ ಮೆರೆದದ್ದು ತಾನೇ!

ಸೆಕ್ಯುಲರಿಸಮ್ಮನ್ನು ಮೆರೆಸುವವರೇ ಇದನ್ನೂ ಮೆರೆಸುತ್ತಿದ್ದಾರೆ ಅನಿಸುತ್ತದೆ. ಅವರಷ್ಟೇ ಮೆರೆಸುವುದು ಬೇಡ, ಅದು ಅವರ ಪದವಷ್ಟೇ ಆಗುವುದು ಬೇಡ, ಅದರ ಮೇಲೆ ಅವರಷ್ಟೇ ಅಧಿಕಾರ ನಡೆಸುವುದು ಬೇಡ ಎಂದು ಇನ್ನೂ ಕೆಲವರು ಅದನ್ನು ಉಪಯೋಗಿಸುತ್ತಿದ್ದಾರೆ.

ಎರಡೂ ವಲಯದವರು ಹಿಡಕೊಂಡ ಈ ಒಂದು ಪದ ಎರಡು ವಿಭಿನ್ನ ಧ್ವನಿಯಲ್ಲಿ ಬಳಕೆಯಾಗುತ್ತಿದೆ ಅನಿಸುತ್ತದೆ.

ಪರ್ಯಾಯ-ಪದ

ಒಂದು ವಲಯದವರು, ಅವರು ಬಹುತೇಕ ರಾಷ್ಟ್ರೀಯ ವಿಚಾರಗಳ ಕುರಿತು ಒಲವಿರುವವರು, ಬಹುತ್ವವನ್ನು ವೈವಿಧ್ಯದ ಅರ್ಥದಲ್ಲಿ ಉಪಯೋಗಿಸುತ್ತಿದ್ದಾರೆ; ವೈವಿಧ್ಯಕ್ಕೂ ಬಹುತ್ವಕ್ಕೂ ಅರ್ಥಸಾಮ್ಯ ಇದೆಯೆಂಬಂತೆ, ಪರ್ಯಾಯಪದವೆಂಬಂತೆ, ಅವುಗಳ ನಡುವೆ ಯಾವುದೇ ಅಂತರ ಇಲ್ಲವೆಂಬಂತೆ.

ಅಭಾರತೀಯ ನಿಲುವಿನಲ್ಲಿ ಗಟ್ಟಿತನದಿಂದ ನಿಂತವರೂ ಬಹುತ್ವವನ್ನು ಆತುಕೊಂಡಿದ್ದಾರೆ. ಅವರದನ್ನು ವೈವಿಧ್ಯದ ಅರ್ಥದಲ್ಲಿ ಬಳಸುತ್ತಿಲ್ಲ. ಆದರೆ ವೈವಿಧ್ಯಕ್ಕೆ ಪರ್ಯಾಯವಾಗಿ, ವೈವಿಧ್ಯದ ಅರ್ಥಕ್ಕಿಂತ ಹೆಚ್ಚಿನದೆಂಬ ಧ್ವನಿಯಲ್ಲಿ ಬಳಸುತ್ತಿದ್ದಾರೆ. ರಾಷ್ಟ್ರೀಯರು ಉಪಯೋಗಿಸುವ ವೈವಿಧ್ಯ ಪದವನ್ನು ವಿರೋಧಿಸಬೇಕೆಂಬ ಇರಾದೆಯ ಅವರಿಗೆ, ಹಾಗೆ ವಿರೋಧಿಸಲು ಬಲವಾದ ಕಾರಣಗಳು ಇಲ್ಲದಿರುವುದೇ ದೊಡ್ಡ ತೊಡಕು.

ಒಂದನ್ನು ನಿರಾಕರಿಸಲು ಇಲ್ಲವೇ ವಿರೋಧಿಸಲು ಬಲವಾದ ಕಾರಣ ಸಿಗದೇ ಹೋದಲ್ಲಿ ಅದಕ್ಕೆ ಪರ್ಯಾಯವನ್ನು ಹುಡುಕಬೇಕು ಎನ್ನುವುದು ಒಂದು ಜಾಣ್ಮೆಯ ಸೂತ್ರ. ತಮತಮಗೆ ಬೇಕಾದಂತೆ ಬಳಸಲು ಎಲ್ಲರಿಗೂ ಈ ಸೂತ್ರ ಸಹಾಯಕ್ಕೆ ಬರುತ್ತದೆ.

ವೈವಿಧ್ಯವನ್ನು ವಿರೋಧಿಸಲು ಕಾರಣವಿಲ್ಲವಾಗಿ, ಅದು ಧ್ವನಿಸುತ್ತಿರುವ ಅರ್ಥವು ತಮ್ಮ ಪಾಳಯಕ್ಕೆ ಪ್ರತಿಕೂಲವಿರಲಾಗಿ; ಪರ್ಯಾಯಪದವಾಗಿ ಬಹುತ್ವವು ದಕ್ಕಿದೆ.

ನೋಡಿ ; ಪರ್ಯಾಯಪದ ಎಂಬಲ್ಲಿ ಸಮಾನಾರ್ಥಕ ಎಂಬುದು ಧ್ವನಿ. ಬರಿಯ ‘ಪರ್ಯಾಯ’ ಎಂದು ಹೇಳಿದಾಗ ಒಂದರ ಬದಲಿಗೆ ಮತ್ತೊಂದು ಎಂಬ ಧ್ವನಿ. ವಿರೋಧದ ಧ್ವನಿಯೂ ಇದರಲ್ಲಿ ಒಳಗೊಳ್ಳುವಂತೆ ಒಂದು ಯುಕ್ತಿ ಈ ಪದಬಳಕೆಯಲ್ಲಿದೆ.

ಅಲ್ಲೂ ಸಲ್ಲುವ, ಇಲ್ಲೂ ಸಲ್ಲುವ

ವೈವಿಧ್ಯಕ್ಕೆ ಬಹುತ್ವವು ಪರ್ಯಾಯ.

ಅಂದರೆ; ಒಂದರ ಅರ್ಥವೇ ಮತ್ತೊಂದರದೂ ಆದದ್ದರಿಂದ ಯಾವುದನ್ನು ಬೇಕಾದರೂ ಉಪಯೋಗಿಸಲಡ್ಡಿಯಿಲ್ಲ ಎಂಬ ದಾರಿ ರಾಷ್ಟ್ರೀಯ ವಿಚಾರಗಳುಳ್ಳವರದು.

ಇದಕ್ಕೆ ವಿಪರ್ಯಯವಾಗಿ; ಒಂದಕ್ಕೆ ಮತ್ತೊಂದು ಪರ್ಯಾಯ ಅಂದರೆ ಒಂದರ ಬದಲಿಗೆ ಮತ್ತೊಂದು, ಬದಲಿಗೆ ಎಂದು ಮತ್ತೊಂದು ಬಂದದ್ದೇ ಮೊದಲಿನದನ್ನು ಬಳಸಕೂಡದೆಂಬ ನಿಲುವಿನಿಂದ ಎಂಬ ಖಚಿತ ನಿಲುವು ಅಭಾರತೀಯ ಒಲವುಳ್ಳವರದು.

ವೈವಿಧ್ಯವನ್ನು ಉಪಯೋಗಿಸುವವರಿಗೆ ಬಹುತ್ವವನ್ನು ಅದೇ ಅರ್ಥದಲ್ಲಿ ಉಪಯೋಗಿಸಲು ಯಾವುದೇ ಅಭ್ಯಂತರವಿಲ್ಲ. ಯಥೇಚ್ಛವಾಗಿ ಉಪಯೋಗಿಸುತ್ತಿದ್ದಾರೆ ಕೂಡ. ವೈವಿಧ್ಯಕ್ಕೆ ಪರ್ಯಾಯವಾಗಿ ಬಹುತ್ವವನ್ನು ಠಂಕಿಸಿದವರಿಗೆ ವೈವಿಧ್ಯ ಪದ ಸುತರಾಂ ಬೇಡ. ಅವರದನ್ನು ಅಪ್ಪಿತಪ್ಪಿಯೂ ಬಳಸುವುದಿಲ್ಲ. ಬಹುತ್ವವೂ ಅವರಿಗೆ ತುಂಬಾ ಇಷ್ಟವಾಗುವ ಪದ ಎಂದಲ್ಲ, ವೈವಿಧ್ಯಕ್ಕೆ ಧಕ್ಕೆ ಕೊಡಬಲ್ಲ ಪದವೆಂದು ಅದರ ಬಗ್ಗೆ ಅವರಿಗೆ ಒಂದು ವಿಶ್ವಾಸವಿದೆ. ಒಂದು ಆಗ್ರಹವಿದೆ.

ವೈವಿಧ್ಯವನ್ನು ಬಳಸಲೇಕೂಡದು ಎಂಬ ಕೆಟ್ಟ ಎಚ್ಚರ ಬಹುತ್ವವನ್ನು ಠಂಕಿಸಿದವರಿಗಿದೆ.

ಪದ ಯಾವುದಾದರೇನು, ಅರ್ಥ ಮುಖ್ಯ ಎಂದು ಆಲೋಚಿಸುವ ರಾಷ್ಟ್ರೀಯರಿಗೆ ವೈವಿಧ್ಯದಂತೆ ಬಹುತ್ವವೂ ಆಪ್ಯಾಯವೇ.

ಬಹುತ್ವವನ್ನು ತಮ್ಮದೇ ಪದ ಎಂದು ಹೇಳಿಕೊಳ್ಳಲು ಅಸಾಧ್ಯವಾಗುವಷ್ಟು ಆ ಪದದ ಬಳಕೆ ಠಂಕಿಸಿದವರ ವಿರೋಧಿಗಳಿಂದ ನಡೆದಿದೆ.

ಸಾರ್ಥಕವಾಗಬಲ್ಲುದೇ ಪದಜಗಳ

ಪದಗಳ ಬಗೆಗೆ ಇಷ್ಟೊಂದು ಯೋಚನೆಯೇ! ನಿರ್ದಿಷ್ಟ ಪದದ ಬಗೆಗೆ ಹೀಗೆಲ್ಲ ವಿರೋಧವೋ ಆಗ್ರಹವೋ ಇರಲು ಸಾಧ್ಯವೇ ಎಂದು ಅಚ್ಚರಿಪಡುವಿರೇನೋ!

ಅಚ್ಚರಿಯಾಗದಿರಲು ಅಸಾಧ್ಯ.

ಇಲ್ಲಿ ಒಂದು ಪದವನ್ನು ಬೇಕೆಂದಾಗಲೀ ಬೇಡವೆಂದಾಗಲೀ ನೋಡುತ್ತಿರುವ ಉಭಯ ಬಣಗಳೂ ವ್ಯಾಕರಣದ ಜಿಜ್ಞಾಸೆಗೆ ಇಳಿದಿಲ್ಲ. ಅವುಗಳಿಗೆ ಅದರ ಗಂಧಗಾಳಿ ಇರುವುದೂ ಸಂದೇಹವೇ ಇದೆ.

ಅವರಿಗೆ ವಿರೋಧವಿರುವುದು ಪದದ ಬಗೆಗಲ್ಲ, ನಿರ್ದಿಷ್ಟ ಪದ ಬಳಸುವವರ ಬಗೆಗೆ.

ಖಚಿತವಾಗಿ ಹೇಳುವುದಾದರೆ; ವೈವಿಧ್ಯ ಪದವನ್ನು ಉಪಯೋಗಿಸುವವರ ಬಗೆಗೆ ಬಹುತ್ವ ಪದವನ್ನು ಠಂಕಿಸಿದವರಿಗೆ ಒಂದು ವಿದ್ವೇಷದಿಂದ ಕೂಡಿದ ವಿರೋಧ.

ಅಲ್ಲಿಯವರೆಗೆ ವೈವಿಧ್ಯ ಪದವನ್ನೇ ಉಪಯೋಗಿಸಿ ಉಪಯೋಗಿಸಿ, ಹೊಸಪದವಾಗಿ ಬಂದ ಬಹುತ್ವದ ಬಗೆಗೆ – ಅದು ವೈವಿಧ್ಯದ ವಿರೋಧಿಗಳಿಂದಲೇ ಬಂದುದಾದರೂ – ಒಂದು ವಿಶೇಷ ಒಲವು ವಿಶಾಲವಾಗಿ ಯೋಚಿಸುವ ರಾಷ್ಟ್ರೀಯರಿಗೆ. ವೈವಿಧ್ಯವೂ ನಮ್ಮದೇ ಪದ, ಬಹುತ್ವವೂ ನಮ್ಮದೇ ಪದ ಎಂಬ ಆತ್ಮೀಯಭಾವ ಎರಡೂ ಪದಗಳ ಬಗೆಗೆ.

ವಿರೋಧಿಗಳ ವಿರೋಧವನ್ನೇ ವಿದ್ವೇಷವನ್ನೇ ನಷ್ಟಪಡಿಸುವಂಥ ನಡೆ ಇದು!

ವಿದ್ವೇಷವನ್ನು ನಷ್ಟಪಡಿಸಬೇಕಾದದ್ದೇ. ವಿದ್ವೇಷ ನಷ್ಟಗೊಂಡಾಗ ಉಳಿಯುವುದು ಪ್ರೀತಿ ಇಲ್ಲವೇ ಸ್ವೀಕಾರ.

ರಾಷ್ಟ್ರೀಯತೆಯು ಎಲ್ಲರೂ ಸ್ವೀಕರಿಸಬೇಕಾದ ವಿಚಾರದ್ರವ್ಯವೇ ಹೌದಷ್ಟೆ. ಯಾವುದೇ ದೇಶದ ರಾಷ್ಟ್ರೀಯರಿಗೆ ಅವಶ್ಯವಾಗಿ ಬೇಕಾದ ವಿಚಾರದ್ರವ್ಯವಿದು. ಅರಾಷ್ಟ್ರೀಯತೆಯನ್ನೇ ಆತುಕೊಂಡವರಿಗಂತೂ ಇದು ನಿಜಕ್ಕೂ ಒಂದು ಉತ್ತಮ ಔಷಧವೇ ಹೌದು.

‘ಪದ’ನಿಮಿತ್ತದ ಜಗಳವು ಜಿಜ್ಞಾಸೆಯಾಗಿ ವಿಚಾರವಾಗಿ ಮನಸ್ಸನ್ನು ಒಂದು ಸಾತ್ತ್ವಿಕ ಭಾವವಾಗಿ, ಬುದ್ಧಿಯನ್ನು ಒಂದು ಸಾತ್ತ್ವಿಕ ಆಲೋಚನೆಯಾಗಿ ಆವರಿಸಿಕೊಂಡುಬಿಟ್ಟರೆ ಈ ಜಗಳವು ಸಾರ್ಥಕವೇ ಆದೀತು.

ಅರ್ಥಜಿಜ್ಞಾಸೆ

ಬಹು ಎಂಬ ಪದಕ್ಕೆ ಅನೇಕ, ತುಂಬಾ, ಹೆಚ್ಚು ಇತ್ಯಾದಿ ಅರ್ಥಗಳಿವೆ

ವಿವಿಧ ಎಂಬ ಪದಕ್ಕೆ ಇರುವ ಅರ್ಥಗಳು ತರಹತರಹದ, ಹಲವು ಬಗೆಯ, ಹಲವು ರೀತಿಯ..

ಇಲ್ಲೊಂದು ಅರ್ಥ-ಅಂತರ ಇದೆ, ಗೋಚರಿಸುವ ಸ್ಪಷ್ಟ ವ್ಯತ್ಯಾಸವಿದೆ. ಅದೆಂದರೆ; ‘ಹಲವು ಬಗೆಯ’ ಅಂದರೆ ‘ಅನೇಕ’ ಆಗಬಹುದು, ಆದರೆ ‘ಅನೇಕ’ ಅಂದರೆ ‘ಹಲವು ಬಗೆಯ’ ಎಂದಾಗಬೇಕಿಲ್ಲ.

ಒಂದೇ ಬಗೆಯ ಹಲವು ಇದ್ದಾಗ ಅನೇಕ. ಬಹು.

ಹಲವು ಬಗೆಯವು ಇದ್ದಾಗ ವೈವಿಧ್ಯ.

ಇದನ್ನು ದೃಷ್ಟಾಂತವೊಂದರಿಂದ ಇನ್ನಷ್ಟು ಸ್ಪಷ್ಟಪಡಿಸುವುದಾದರೆ; ಒಂದೇ ಜಾತಿಯ ನೂರು ಬಾಳೆಹಣ್ಣುಗಳು ಇದ್ದಾಗ ‘ಬಹು’ತ್ವ.
ನೂರು ಬೇರೆ ಬೇರೆ ಜಾತಿಯ ಇಲ್ಲವೇ ರೀತಿಯ ಹಣ್ಣುಗಳಿದ್ದಾಗ ವೈವಿಧ್ಯ.

ವ್ಯಾಕರಣದ ‘ಬಹುವಚನ’ದಲ್ಲಿ ಬಹುತ್ವ ಇದೆ. ನೂರು ಜನರು ಇದ್ದಾರೆ – ಇದು ಬಹುತ್ವ.
ನೂರು ಇವೆ; ಅದರಲ್ಲಿ ಒಬ್ಬ ಮನುಷ್ಯ, ಒಂದು ಕುರಿ, ಒಂದು ಹುಲಿ, ಒಂದು ಸೇಬು ಇತ್ಯಾದಿ ಇದ್ದಾಗ ನೂರು ಇದ್ದಾರೆ ಎನ್ನಲೂ ಆಗಲ್ಲ, ನೂರು ಇವೆ ಎನ್ನಲೂ ಆಗಲ್ಲ. ಇದು ಬಹುತ್ವವಲ್ಲ, ವೈವಿಧ್ಯ.

ಬಹುತ್ವಕ್ಕೆ ಏಕರೂಪತೆ ಬೇಕು.
ವೈವಿಧ್ಯಕ್ಕೆ ಅನೇಕತೆ ಅನಿವಾರ್ಯ.

ಅವನೊಬ್ಬನೇ (ಏಕ) ಇದ್ದ, ಅನೇಕವಾಗಬೇಕೆಂದು (ಬಹು) ಬಯಸಿದ ಎಂದು ಒಂದು ಕಡೆ ಉಪನಿಷದ್ ತೊಡಗುತ್ತದೆ. ಇಲ್ಲಿ ಉಪನಿಷದ್ ಅನೇಕ ಎಂಬ ಪದದ ಧ್ವನಿಯಾಗಿ ‘ಬಹು’ ಎಂಬ ಪದವನ್ನು ಬಳಸಿದೆ. ಅದಕ್ಕೆ ಭಿನ್ನಬಗೆಗಳಲ್ಲಿ ಸಮಾಧಾನವೂ ಇದೆ. ಬಹು ಎಂಬುದಕ್ಕೆ ಇಲ್ಲಿ ಹಲವು ಬಗೆ ಎಂದೇ ಅರ್ಥ ಎಂಬ ಅರ್ಥವ್ಯಾಖ್ಯಾನದಿಂದ ತೊಡಗಿ ಹಲವು ಬಗೆಗಳಾದರೂ ಆತ್ಮೈಕದೃಷ್ಟಿಯಿಂದ ಎಲ್ಲವೂ ಒಂದೇ ಎಂಬ ತಾತ್ತ್ವಿಕ ನೆಲೆಗಟ್ಟಿನ ವಿವರಗಳವರೆಗೆ ಈ ಸಮಾಧಾನ ಮುಂಬರಿಯುತ್ತದೆ.

ಪ್ರತ್ಯೇಕತೆಯ ಬೀಜ

ಏಕರೂಪತೆ ಏಕತೆಯಲ್ಲ.

ಏಕರೂಪತೆಗೆ ರೂಪದಲ್ಲಿ ಎಲ್ಲವೂ ಒಂದೇ ರೀತಿ ಇರಬೇಕು. ಏಕತೆಯಲ್ಲಿ; ಎಷ್ಟಿದ್ದರೂ, ಅವು ನೋಡುವ ನೋಟಕ್ಕೆ ಬಗೆಬಗೆಯದಾಗಿ ಇದ್ದರೂ, ಮೂಲಸ್ಫೂರ್ತಿ ಒಂದೇ ಎಂಬ ತತ್ತ್ವವು ಕಾರ್ಯಮಾಡುತ್ತದೆ.

ನೋಡಿ, ಶರೀರದಲ್ಲಿ ಇರುವ ಯಾವುದೇ ಅವಯವವೂ ಮತ್ತೊಂದರಂತಿಲ್ಲ. ಅದರ ರೂಪ ಗುಣಧರ್ಮಗಳು ಇತ್ಯಾದಿ ಎಲ್ಲವೂ ಭಿನ್ನ. ಆದರೆ ಅವು ಪರಸ್ಪರ ಸಮನ್ವಯದಿಂದ ಇವೆ. ಶರೀರಕ್ಕಾಗಿ ಒಗ್ಗೂಡಿ ಕಾರ್ಯನಿರ್ವಹಿಸುತ್ತವೆ. ಪರಸ್ಪರರ ನಿಟ್ಟಿನಲ್ಲಿ ಅವು ವೈವಿಧ್ಯವಾಗಿವೆ. ಶರೀರದ ನಿಟ್ಟಿನಲ್ಲಿ ಅವುಗಳ ನಡುವೆ ಏಕತೆ ಇದೆ. ವಿವಿಧತೆಯಲ್ಲಿ ಏಕತೆ ಎನ್ನುವುದು ಇದನ್ನೇ ಅಲ್ಲವೆ!

ಶರೀರದಲ್ಲಿ ಎಲ್ಲಾ ಅಂಗಗಳೂ ಒಂದೇ ರೀತಿ ಇರಬೇಕು ಎಂದು ರಿಲಿಜನ್ ಯೋಚನೆಯಂತೆ ತೊಡಗಿದರೆ ಏನಾದೀತು? ಅದು ಶರೀರವಾಗದು, ಏಕತೆ ಉಂಟಾಗದು. ಏಕತೆಯುಂಟಾಗದೆ ಏಕಘಟಕವಾದ ಶರೀರವು ಸಾಧ್ಯಗೊಳ್ಳದು.

ಶರೀರವೇನೋ ಯಾವುದೇ ರೀತಿಯಲ್ಲಿಯೂ ಪಾರಸ್ಪರಿಕತೆಯನ್ನು ಪ್ರತ್ಯೇಕಿಸಲಾಗದ ಒಂದು ಸುಂದರ ಅವಿಭಾಜ್ಯ ಘಟಕ. ಅದರಲ್ಲಿ ಎರಡು ಕೈಗಳು ಒಂದೇ ರೀತಿ ಇದ್ದರೂ ಅವುಗಳೊಳಗೆ ಗಟ್ಟಿಯಾದ ಪಾರಸ್ಪರಿಕತೆಯಿದೆ. ಎಡಗೈ ವಿರುದ್ಧ ಬಲಗೈಯನ್ನೋ ಬಲಗೈ ವಿರುದ್ಧ ಎಡಗೈಯನ್ನೋ ಇಡಿಯ ಶರೀರದ ವಿರುದ್ಧ ಎರಡೂ ಕೈಗಳನ್ನೋ ಎಷ್ಟೇ ಪ್ರಯತ್ನಿಸಿದರೂ ಯಾರಿಗೂ ಎತ್ತಿಕಟ್ಟಲಾಗದು. ಒಂದು ಮನೆಯೋ ಸಮಾಜವೋ ಹಾಗಿರಲಾರದಷ್ಟೆ. ಹಾಗಾಗಿ ಅಲ್ಲಿ ಒಂದಿದ್ದಂತೆ ಮತ್ತೊಂದಿಲ್ಲ ಎಂಬುದರ ಜತೆಗೆ ಹಾಗೆ ಏಕರೂಪವಾಗಿಲ್ಲ ಎಂಬುದು ಏಕತೆಗೆ ಪೂರಕವಾಗಿಯೂ ಇದೆ ಮತ್ತು ಪೂರಕಗೊಳಿಸುವ ಸಾಧ್ಯತೆಯನ್ನು ಪೂರ್ತಿ ಆಗುಮಾಡಬೇಕು ಎಂಬ ಅನುಕೂಲ ಲಕ್ಷ್ಯವು ನಮ್ಮೆದುರು ನಿಂತಿದೆ.

ಒಂದಿದ್ದಂತೆ ಮತ್ತೊಂದಿಲ್ಲ ಎಂಬ ವೈವಿಧ್ಯಸ್ಥಿತಿಯು ಏಕತೆಗೆ ಪೂರಕ. ಎಲ್ಲವೂ ಒಂದೇ ರೀತಿ ಇರಬೇಕು ಎಂಬ ಸೃಷ್ಟಿವಿರೋಧೀ ಏಕರೂಪಸ್ಥಿತಿಯು ತನ್ನೊಳಗೆ ಹೊಂದಿರುವುದು ಪ್ರತ್ಯೇಕತೆಯ ಬೀಜವನ್ನೇ, ಪರಿಸರದಲ್ಲಿ ಬಿತ್ತಹೊರಡುವುದೂ ಪ್ರತ್ಯೇಕತೆಯ ಬೀಜವನ್ನೇ.

ಬಹುತ್ವವು ಅಂಥದ್ದೊಂದು ಏಕರೂಪತೆಯ ಲಕ್ಷಣವುಳ್ಳ ಬೀಜವಾಗಿ ಗೋಚರಿಸುತ್ತದೆ.

ಬಹುತ್ವದ ದುರುಪಯೋಗ

ಇಲ್ಲಿ ನಮ್ಮನ್ನು ಸ್ಪಷ್ಟತೆಯೆಡೆಗೆ ಕೊಂಡೊಯ್ಯುವ ಇನ್ನೂ ಒಂದು ಸನ್ನಿವೇಶವಿದೆ. ಅದು ಬಹುತ್ವವನ್ನು ಪ್ರತಿಪಾದಿಸುವವರ ಒಲವಿನ ವಿವರ.

ಅವರೆನ್ನುವಂತೆ ಎಲ್ಲವನ್ನೂ ಒಳಗೊಳ್ಳಬೇಕಾದುದು ಬಹುತ್ವ. ಒಳ್ಳೆಯದು. ಹಾಗೆ ಹೇಳುತ್ತಲೇ ಒಂದು ರಿಲಿಜನ್ನಿನವರ ಕುರಿತು ಮಾತ್ರ ಒತ್ತುಕೊಟ್ಟು ಸಮರ್ಥನೆಯ ಧಾಟಿಯಲ್ಲಿ ಮಾತನಾಡುವುದು ಸರಿಯಾದೀತೆ?

ಅವರು ಹಾಗೆ ಮಾತನಾಡುತ್ತಾರೆ. ಅಥವಾ ಅವರು ಮಾತನಾಡುವುದೇ ಹಾಗೆ!

ಭಾರತೀಯ ರಾಷ್ಟ್ರೀಯ ವಿಚಾರಗಳನ್ನು ಕುರಿತು ಏನೇ ಹೇಳಿದರೂ ಅವರಿಗೆ ಅಭಿವ್ಯಕ್ತಿಸಲು ಆಕ್ಷೇಪಗಳ ಬೆಟ್ಟವೇ ಇರುತ್ತದೆ. ರಾಷ್ಟ್ರೀಯ ವಿಚಾರವುಳ್ಳವರು ಮುಟ್ಟಿದ್ದನ್ನೆಲ್ಲಾ ಉಲ್ಲೇಖಿಸಿದ್ದನ್ನೆಲ್ಲಾ ಅವರು ಆಕ್ಷೇಪಿಸುತ್ತಲೇ ಇರುತ್ತಾರೆ. ಆದರೆ ಭಯೋತ್ಪಾದನೆಯ ಕೃತ್ಯಗಳು ನಡೆದಾಗ, ಭಯೋತ್ಪಾದಕರು ನೂರಾರು ಮುಗ್ಧರನ್ನು ಚೆಂಡಾಡಿ ಕೊಂದಾಗ ಜಾಣ ಮೌನಕ್ಕೆ ಜಾರಿಕೊಳ್ಳುತ್ತಾರೆ! ಇಲ್ಲಿಯ ಭಯೋತ್ಪಾದಕರಷ್ಟೆ ಅಲ್ಲ, ನಮ್ಮನ್ನು ನಖಶಿಖಾಂತ ದ್ವೇಷಿಸುತ್ತಿರುವ ಪಾಕಿಸ್ತಾನ ನಮ್ಮ ದೇಶದ ಗಡಿಭಾಗದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದಾಗಲೂ ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಸಾಮೂಹಿಕವಾಗಿ ಹಲ್ಲೆ – ಕೊಲೆಗಳು ನಡೆದಾಗಲೂ ಅವರ ಈ ಜಾಣ ಮೌನಕ್ಕೆ ಯಾವುದೇ ಭಂಗವುಂಟಾಗಿಲ್ಲ. ಕಣ್ಣೆದುರೇ ನಡೆದ ಭಯೋತ್ಪಾದಕ ಕೃತ್ಯವನ್ನು ಬರಿಯ ಖಂಡಿಸಲು ಕೂಡಾ ಅವರಿಗೆ ‘ಕಾರಣ’ವೇ ಸಿಗುವುದಿಲ್ಲ!

ತಾವು ಸಮರ್ಥಿಸುತ್ತಿರುವ ರಿಲಿಜನ್ನಿನ ರಕ್ಷಣೆಗೆ ಅವರು ಬಹುತ್ವ ಪದವನ್ನು ಬಳಕೆಮಾಡುತ್ತಿದ್ದಾರೆ. ಅಂದರೆ; ಬಹುತ್ವದ ರಕ್ಷಣೆಯೆಂದರೆ ನಿರ್ದಿಷ್ಟ ರಿಲಿಜನ್ನಿನ ರಕ್ಷಣೆ. ಏಕರೂಪತೆಯನ್ನಷ್ಟೆ ಉಸಿರಾಡುತ್ತ ಉಳಿದೆಲ್ಲವನ್ನೂ ಧ್ವಂಸಗೊಳಿಸಿಯೇ ಸಿದ್ಧವೆಂಬಷ್ಟು ದ್ವೇಷಿಸುವ ರಿಲಿಜನ್ನಿನ ರಕ್ಷಣೆ. ಉಳಿದ ಸಭ್ಯತೆಗಳು ಮುಖ್ಯವಾಗಿ ಭಾರತೀಯ ಮೂಲದ ಸಮಾಜವು ಅಳಿವಿನ ಕಡೆಗೆ ಸಾಗುತ್ತಿದ್ದರೂ ಆ ಕುರಿತು ಅವರದೇನೂ ಯಾವುದೇ ಅಭಿವ್ಯಕ್ತಿಯಿಲ್ಲ. ಅವುಗಳ ಉಳಿವಿನ ಬಗೆಗೆ ಯಾರಾದರೂ ತುಟಿಪಿಟಕ್ ಎಂದರೂ ಅವರ ಅಭಿವ್ಯಕ್ತಿ ತಕ್ಷಣವೇ ಜಾಗೃತಗೊಳ್ಳುತ್ತದೆ!

ಅವರ ಉದ್ದೇಶವೇನೆಂಬುದನ್ನು ಇಂಥ ಸನ್ನಿವೇಶಗಳಿಂದ ಯಥೇಚ್ಛವಾಗಿ ಸ್ಪಷ್ಟಪಡಿಸಿಕೊಳ್ಳಬಹುದು.

ಹಲವು ದೇವನಾಮಗಳು, ಹಲವು ಬಗೆಯ ಆರಾಧನಾವಿಧಾನಗಳು, ಹಲವು ಆಚಾರ್ಯಪುರುಷರು.. ಹೀಗೆ ಎಲ್ಲ ಆಯಾಮಗಳಲ್ಲಿಯೂ ಸಂಪನ್ನ ವೈವಿಧ್ಯವನ್ನು ಹೊಂದಿರುವ ಭಾರತೀಯ ಸಭ್ಯತೆಯು ಇನಿತೂ ಏಕರೂಪವಾಗಿಲ್ಲದೆ ವೈವಿಧ್ಯದಿಂದ ಕಂಗೊಳಿಸುತ್ತಿದೆ. ಒಂದೇ ಹೆಸರಿನ ದೇವರು, ಒಬ್ಬನೇ ಪ್ರವಾದಿ, ಒಂದೇ ಮತೀಯ ಗ್ರಂಥ ಇತ್ಯಾದಿ ಏಕರೂಪತೆಯನ್ನಷ್ಟೆ ಹೊದ್ದುಕೊಂಡು ಜಗತ್ತಿನಲ್ಲಿ ಉಲ್ಲೋಲಕಲ್ಲೋಲವನ್ನೇ ಗೈಯಹೊರಟಿರುವ ನಿರ್ದಿಷ್ಟ ರಿಲಿಜನ್ ಯಾವುದೇ ರೀತಿಯಲ್ಲಿಯೂ ವೈವಿಧ್ಯವನ್ನು ಹೊಂದಿಲ್ಲ ಮಾತ್ರವಲ್ಲ, ವೈವಿಧ್ಯದ ನಾಶಕ್ಕೆ ಟೊಂಕಕಟ್ಟಿ ನಿಂತಿದೆ.

ತಾನು ವೈವಿಧ್ಯವನ್ನು ಹೊಂದಿರುವುದರ ಜತೆಗೆ ತನಗೆ ವಿರೋಧದಂತಿರುವ, ತನ್ನ ನಾಶಕ್ಕೆ ಟೊಂಕಕಟ್ಟಿನಿಂತಿರುವ ಸಭ್ಯತೆ – ಜನಾಂಗಗಳನ್ನೂ ಸ್ವೀಕರಿಸಿ ಅಪ್ಪಿಕೊಳ್ಳುವ ಹಿಂದೂ ಪರಂಪರೆಯ ಬಗೆಗೆ ಬಹುತ್ವವಿರೋಧಿಗಳೆಂಬ ಹಣೆಪಟ್ಟಿ! ತಾನು ಏಕರೂಪವಾಗಿರುವುದಷ್ಟೇ ಅಲ್ಲದೆ ಉಳಿದೆಲ್ಲವನ್ನೂ ಧ್ವಂಸಗೊಳಿಸಲು ಸೊಂಟಕಟ್ಟಿ ಹೊರಟ ರಿಲಿಜನ್ ಬಗೆಗೆ ಬಹುತ್ವದ ಹೆಸರಿನಲ್ಲಿ ಸಲ್ಲದ ಸಮರ್ಥನೆ!

ವೈವಿಧ್ಯವನ್ನು ಉಳಿಸಲಾದರೂ ಈ ಸಲ್ಲದ ಸಮರ್ಥನೆಗೆ, ದೌಷ್ಟ್ಯದ ದ್ವೇಷಕ್ಕೆ ಕೊನೆಹಾಡಬೇಡವೆ!

("ವಿಕ್ರಮ" ವಾರಪತ್ರಿಕೆಯ 'ಕಡೆಗೋಲು' ಅಂಕಣದಲ್ಲಿ ಪ್ರಕಟಿತ ಲೇಖನ)

Leave a Reply

Your email address will not be published.

This site uses Akismet to reduce spam. Learn how your comment data is processed.