ಲೇಖಕರು: ಶ್ರೀಪಾದ, ಕೇಂದ್ರೀಯ ಕಾರ್ಯಾಲಯ ಪ್ರಮುಖ್, ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮ, ಜಶಪುರ
ಪ್ರತಿಯೊಂದು ಜೀವಿಯ ಹುಟ್ಟಿಗೆ ಒಂದು ನಿರ್ದಿಷ್ಟ ಉದ್ದೇಶ ಇರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಆದರೆ ಇದನ್ನು ಅರ್ಥ ಮಾಡಿಕೊಂಡವರು ಮಾತ್ರ ಬೆರಳೆಣಿಕೆಯಷ್ಟು ಜನರು. ಅಂತಹವರು ಮಹಾನ್ ಕಾರ್ಯಮಾಡುತ್ತಾರೆ ಮತ್ತು ಮಹಾತ್ಮರಾಗುತ್ತಾರೆ. ಅಂತಹ ರತ್ನಗಳಲ್ಲಿ ಸ್ವರ್ಗೀಯ ಬಾಳಾಸಾಹೇಬ ದೇಶಪಾಂಡೆಯವರು ಶ್ರೇಷ್ಠರಾಗಿದ್ದಾರೆ ಎಂದರೆ ಉತ್ಪ್ರೇಕ್ಷೆ ಆಗಲಿಕ್ಕಿಲ್ಲ.
ರಮಾಕಾಂತ ಕೇಶವರಾವ್ ದೇಶಪಾಂಡೆಯವರು 1913 ಡಿಸೆಂಬರ 26 ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದರು. ತಂದೆಯವರು ಕೇಶವರಾವ್ ದೇಶಪಾಂಡೆಯವರು ಜೈಲಿನ ಅಧಿಕಾರಿಯಾಗಿದ್ದರು. ತಾಯಿ ಶ್ರೀಮತಿ ಲಕ್ಷ್ಮೀಬಾಯಿ. ಅವರು ಒಟ್ಟು ನಾಲ್ಕು ಜನ ಸಹೋದರರು. 1926ರಲ್ಲಿ ಹದಿಮೂರನೆಯ ವರ್ಷದಲ್ಲಿದ್ದಾಗ ಸಂಘದ ಸ್ವಯಂಸೇವಕರಾದರು. ಆಗ ಡಾ॥ಹೆಡಗೇವಾರ ಅವರ ಸಂಪರ್ಕಕ್ಕೆ ಬಂದರು. ಬಿ.ಎ.ಎಲ್.ಎಲ್.ಬಿ ಮತ್ತು ಎಂ.ಎ ಪದವಿಯನ್ನು ಪೂರೈಸಿದರು. ಪೂಜನೀಯ ಗುರೂಜಿಯವರು We or Our Nationhood Defined ಇಂಗ್ಲೀಷ್ ಪುಸ್ತಕ ಅನುವಾದ ಮಾಡುತ್ತಿದ್ದಾಗ ಅದರ ಪಾಂಡುಲಿಪಿ ಓದುವ ಕಾರ್ಯ ಮಾಡಿದ್ದಾರೆ. 1942 ಭಾರತ ಬಿಟ್ಟು ತೊಲಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸ್ವಲ್ಪ ಸಮಯ ಜೈಲುವಾಸ ಅನುಭವಿಸಿದ್ದಾರೆ. 1943ರಲ್ಲಿ ಮಹಾರಾಷ್ಟ್ರದ ಅಚಲಪುರ ಪರತವಾಡಾದ ನಿವಾಸಿಯಾದ ಶ್ರೀ ಅಪ್ಪಾ ಸಾಹೇಬ ಜಹಗೀರಧಾರ ಮಗಳಾದ ವನಮಾಲರ ಜೊತೆ ವಿವಾಹ ಆದರು. 1944ರಲ್ಲಿ ಪಡಿತರ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಆದರೆ ಅಲ್ಲಿನ ಭ್ರಷ್ಟಾಚಾರವನ್ನು ಬೆಂಬಲಿಸುವ ಅಧಿಕಾರಿಗಳ ಕಾರ್ಯನೋಡಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು.
1948ರ ಮೇ 15ಕ್ಕೆ ಮಧ್ಯಪ್ರಾಂತ ಸರ್ಕಾರದಲ್ಲಿ ಜಶಪುರದ ಹಿಂದುಳಿದ ಪ್ರದೇಶದ ಕ್ಷೇತ್ರೀಯ ಸ್ವತಂತ್ರ ನಿರ್ವಹಣೆಯ ಅಧಿಕಾರಿಯಾಗಿ ನಿಯುಕ್ತರಾದರು. ಒಂದೇ ವರ್ಷದಲ್ಲಿ 100 ಪ್ರಾಥಮಿಕ ಹಾಗೂ 8 ಪೂರ್ವ ಮಾಧ್ಯಮಿಕ ವಿದ್ಯಾಲಯಗಳನ್ನು ಪ್ರಾರಂಭಿಸಿದರು. ವಿದೇಶಿ ಮಿಷನರಿಗಳ ದಬ್ಬಾಳಿಕೆಯ ಪ್ರದೇಶದಲ್ಲಿ ಈ ರೀತಿ ಸಾಹಸ ಮಾಡಿದ್ದು ವಿಶೇಷವಾಗಿತ್ತು. 1949ರಲ್ಲಿ ಶ್ರೀ ಠಕ್ಕರ ಬಾಪಾರವರಿಗೆ ಅದ್ಭುತ ಸ್ವಾಗತ ಕಾರ್ಯಕ್ರಮ ನಡೆಯಿತು. ತುಷ್ಟೀಕರಣದ ರಾಜಕಾರಣಿಗಳು ಮತ್ತು ಮಿಶನರಿಗಳು ಕುತಂತ್ರಮಾಡಿ ತಪ್ಪು ಆಪಾದನೆ ಹೊರೆಸಿ ಮಹಾರಾಷ್ಟ್ರದ ಚಂದ್ರಪುರದ ಗಡಚಿರೋಲಿಗೆ ವರ್ಗಮಾಡಿದರು. ಈ ಆಪಾದನೆ ಸುಳ್ಳೆಂದು ಸಿದ್ಧವಾಗಿ ಮರಳಿ ಜಶಪುರದಲ್ಲಿ ಕಾರ್ಯನಿರತರಾದರು. ಈ ಅನ್ಯಾಯವನ್ನು ವಿರೋಧಿಸಿ ಸರ್ಕಾರದ ಉದ್ಯೋಗಕ್ಕೆ ರಾಜೀನಾಮೆ ನೀಡಿ ಜಶಪುರದಲ್ಲಿ ವಕೀಲ ವೃತ್ತಿ ಮಾಡತೊಡಗಿದರು. ವನವಾಸಿ ಹಾಗೂ ಉಳಿದ ಸಮಾಜದ ಜನರ ಸಮಸ್ಯೆಗಳ ಪರಿಹಾರಗೊಳಿಸುತ್ತ ಜನಪ್ರಿಯರಾದರು. ಜಶಪುರದಲ್ಲಿ ಕಾನೂನು ಪದವಿ ಪೂರೈಸಿದ ಮೊದಲ ವಕೀಲರಾಗಿದ್ದರು. ಪೂಜನೀಯ ಶ್ರೀ ಗುರೂಜಿಯವರೊಂದಿಗೆ ಸಮಾಲೋಚಿಸಿ ವನವಾಸಿಗಳ ಸಮಗ್ರವಿಕಾಸಕ್ಕಾಗಿ 1952ರ ಡಿಸೆಂಬರ 26ರಂದು ಕಲ್ಯಾಣಾಶ್ರಮ ಪ್ರಾರಂಭಿಸಿದರು. ವನವಾಸಿಗಳ ಮಧ್ಯೆ ಕೆಲಸಮಾಡಿದ್ದರಿಂದ ಅವರ ಸಮಸ್ಯೆಗಳನ್ನು ಹತ್ತಿರದಿಂದ ಅರಿತವರಾಗಿದ್ದರು. ವನವಾಸಿಗಳು ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ, ಸುಸಂಘಟಿತರಾಗಿ ಬಾಳುವಂತಾಗಬೇಕು ಎಂಬುದು ಅವರ ಹಂಬಲವಾಗಿತ್ತು.ತಾನು ಗೃಹಸ್ಥನಾಗಿದ್ದರಿಂದ ಉತ್ತಮ ಸಂಘಟನೆಯನ್ನು ಕಟ್ಟಲು ಪೂರ್ಣ ಸಮಯಕೊಟ್ಟು ಕೆಲಸ ಮಾಡುವ ಕಾರ್ಯಕರ್ತರ ಅಗತ್ಯವನ್ನು ತಿಳಿದಿದ್ದರು. ಶ್ರೀ ಗುರೂಜಿಯವರಲ್ಲಿ ಈ ವಿಷಯ ಪ್ರಸ್ತಾಪಿಸಿ ಪ್ರಚಾರಕರನ್ನು ಕಳುಹಿಸುವಂತೆ ಕೋರಿದ್ದರು. ಅವರು ಶ್ರೀ ಮೋರೋಪಂತ ಕೇತ್ಕರವರನ್ನು ಕಲ್ಯಾಣಾಶ್ರಮದ ಕೆಲಸಮಾಡಲು ಜಶಪುರಕ್ಕೆ ಕಳುಹಿಸಿಕೊಟ್ಟರು. ಚುನಾಯಿತ ಜನಪ್ರತಿನಿಧಿಗಳ ಆಗ್ರಹದಿಂದ 1958ರಲ್ಲಿ ಜಶಪುರ ನಗರದ ಪುರಸಭೆಯ ಅಧ್ಯಕ್ಷರಾದರು.1966ರವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.1975ರ ತುರ್ತುಪರಿಸ್ಥಿಯ ಕಾಲದಲ್ಲಿ ಮಿಸಾಬಂಧಿಯಾಗಿ ಹದಿನೆಂಟು ತಿಂಗಳು ಸೆರೆವಾಸವನ್ನು ಅನುಭವಿಸಿದರು.1977ರಲ್ಲಿ ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮ ಹೆಸರಿನಿಂದ ನೋಂದಾಯಿತ ಸಂಸ್ಥೆಯ ಮೊದಲ ಅಧ್ಯಕ್ಷರಾದರು.1990 ಜನೆವರಿ 20 ರಂದು ಬಡಾಬಜಾರ ಕುಮಾರ ಸಭಾದ ” ವಿವೇಕಾನಂದ ಪ್ರಶಸ್ತಿಗೆ ಪಾತ್ರರಾದರು.
1992ರಲ್ಲಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಮೂಲನಿವಾಸಿ ಬಗ್ಗೆ ಭಾರತದ ಅಂದಿನ ಪ್ರಧಾನಮಂತ್ರಿಗಳಿಗೆ ಭಾರತದಲ್ಲಿರುವವರೆಲ್ಲರೂ ಮೂಲನಿವಾಸಿಗಳು ಎಂಬ ನಿಲುವನ್ನು ಮಂಡಿಸಲು ಸಂಬಂಧಿಸಿದ ವಿಚಾರವನ್ನು ತಿಳಿಸಿದ್ದರು ಮತ್ತು ಬರವಣಿಗೆಯಲ್ಲೂ ವಿವರವನ್ನು ನೀಡಿದ್ದರು.ಇದರ ಮಹತ್ವವನ್ನು ಅರಿತ ಶ್ರೀ ನರಸಿಂಹ ರಾವ್ ಭಾರತದ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದರಿಂದ ಭಾರತದಲ್ಲಿ ಮೂಲನಿವಾಸಿಗಳು ಎಂದು ಬಿಂಬಿಸಿ ಸಮಾಜವನ್ನು ವಿಭಜಿಸುವ ದೇಶವಿರೋಧಿ ಶಕ್ತಿಗಳ ಸಂಚು ಶಾಶ್ವತವಾಗಿ ವಿಫಲವಾಯಿತು. 1993, ಸೆಪ್ಟಂಬರ್ 30ರಂದು ಕಟಕನಲ್ಲಿ ನಡೆದ ಸಮ್ಮೇಳನದಲ್ಲಿ ವನವಾಸಿ ಬಂಧುಗಳಾದ ಶ್ರೀ ಜಗದೇವರಾಮ ಉರಾಂ ಅವರನ್ನು ಕಾರ್ಯಾಧ್ಯಕ್ಷರಾಗಿ ಘೋಷಿಸಿ ವನವಾಸಿ ಕಲ್ಯಾಣಾಶ್ರಮಕ್ಕೆ ಆ ಸಮಾಜದವರೇ ನೇತೃತ್ವ ವಹಿಸುವಂತೆ ಮಾಡಿದರು.
ಈಶಾನ್ಯ ಭಾರತದ ಪ್ರವಾಸದಲ್ಲಿ ಅವರು ನುಡಿದ ‘ತೂ ಮೈ ಏಕ ರಕ್ತ’ ಆ ವಾಕ್ಯ ಪ್ರಮುಖ ಘೋಷವಾಕ್ಯವಾಗಿ ವನವಾಸಿ ಕಲ್ಯಾಣಾಶ್ರಮದ ಲಾಂಚನದಲ್ಲಿ ಬಿಂಬಿತವಾಗಿದೆ. ವನವಾಸಿಗಳ ಜೀವನ ಹಸನವಾಗಲು ವನಗಂಗೆಯನ್ನು ಭಾರತದಾದ್ಯಂತ ಹರಿಸಿದ ಆಧುನಿಕ ಭಗೀರಥ ಬಾಳಾಸಾಹೇಬ ದೇಶಪಾಂಡೆಯವರು. ಅದರ ಪರಿಣಾಮ ವನವಾಸಿಗಳು ಅವರ ಮೂಲ ಸಂಸ್ಕೃತಿಯ ಪ್ರವಾಹದಲ್ಲಿ ಉಳಿದಿದ್ದಾರೆ.
ವನವಾಸಿಗಳಲ್ಲಿ ಕೀಳರಿಮೆ ಬರಬಾರದು, ದಾನಿಗಳಲ್ಲೂ ಮೇಲರಿಮೆ ಬರಬಾರದು ಎಂಬ ದೃಷ್ಟಿಯಿಂದ ದಾನ ನೀಡುವ ಕೈ ಕೆಳಗಿರ ಬೇಕು, ಆಗ ದಾನ ಸ್ವೀಕರಿಸುವ ಕೈ ಬೇಕಾದಷ್ಟು ಸ್ವೀಕರಿಸುತ್ತಾರೆ ಮತ್ತು ಸೇವೆ ಮಾಡುವವರು ಕರುಣಾಭಾವದಿಂದಲ್ಲ ಕರ್ತವ್ಯ ಭಾವದಿಂದ ಮಾಡಬೇಕು ಎಂದು ಹೇಳುತ್ತಿದ್ದರು. ಸೇವೆ, ಜಾಗೃತಿ ಮತ್ತು ಸಂಘಟನೆ ಈ ಮೂರು ರೀತಿಯಲ್ಲಿ ಕಾರ್ಯವನ್ನು ಬೆಳೆಸಲು ಭದ್ರ ಅಡಿಪಾಯ ಹಾಕಿಕೊಟ್ಟರು. ವನವಾಸಿಗಳ ಸಮಗ್ರ ವಿಕಾಸಕ್ಕಾಗಿ ಶ್ರಮಿಸುತ್ತಿರುವ ಜಗತ್ತಿನಲ್ಲೇ ಅತ್ಯಂತ ಬೃಹತ್ತಾದ ಸಂಸ್ಥೆಯಾಗಿ ಬೆಳೆಯುತ್ತಿದೆ. ಬಾಳಾಸಾಹೇಬ ದೇಶಪಾಂಡೆಯವರ ಜನ್ಮದಿನ ಹಾಗೂ ವನವಾಸಿ ಕಲ್ಯಾಣಾಶ್ರಮದ ಸ್ಥಾಪನಾ ದಿನ ಎರಡೂ ಡಿಸೆಂಬರ 26 ಆಗಿದೆ. ಆಕಾಶವನ್ನು ಮುಷ್ಟಿಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದಂತೆ ಬಾಳಾಸಾಹೇಬ ದೇಶಪಾಂಡೆಯವರ ವಿಶಾಲ ಜೀವನದ ಅಲ್ಪ ವಿವರವನ್ನು ನೀಡುವ ಪ್ರಯತ್ನವಾಗಿದೆ.