ಬೆಂಗಳೂರು: ದೇಶದ ಬಗ್ಗೆ ಪ್ರೀತಿ ಮತ್ತು ಈ ನೆಲದ ಕಾನೂನುಗಳನ್ನು ಪಾಲಿಸುವ ಶಿಸ್ತನ್ನು ಹೊಂದಿದ ಯುವಕರು ಯಾವುದೇ ದೇಶದ ದೊಡ್ಡ ಅಂತಃಶಕ್ತಿ ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ‌. ನಮ್ಮ ದೇಶದ ಅತ್ಯಂತ ದೊಡ್ಡ ಶಕ್ತಿ ಅಂತಹ ಯುವಜನತೆ. ಅವರು ತಾನು ಏನನ್ನು ಬೇಕಾದರೂ ಸಾಧನೆ ಮಾಡಬಲ್ಲಂತಹ ಆತ್ಮವಿಶ್ವಾಸವನ್ನು ಹೊಂದಿರುವವರು . ಅಂತಹ ಯುವಕರು ಸ್ವಾಮಿ ವಿವೇಕಾನಂದರ ಉತ್ತಮನಾಗು ಉಪಕಾರಿಯಾಗು ಎಂಬ ಮಾತಿನಂತೆ ದೇಶದಲ್ಲಿ ಉತ್ತಮ ಸಂಗತಿಗಳನ್ನು ಹರಡಿಸಬೇಕು ಎಂದು ಸಮರ್ಥ ಭಾರತದ ಮಾರ್ಗದರ್ಶಕ ಎನ್.ತಿಪ್ಪೇಸ್ವಾಮಿ ಹೇಳಿದರು.

ಸಮರ್ಥ ಭಾರತ ವತಿಯಿಂದ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಹಲವೆಡೆ ನಾವು ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಅನೇಕ ವಿದ್ಯಾಸಂಸ್ಥೆಗಳು ಮತ್ತು ಸಂಘಸಂಸ್ಥೆಗಳನ್ನು ಕಾಣಬಹುದು. ಅಷ್ಟರ ಮಟ್ಟಿಗೆ ಸ್ವಾಮಿ ವಿವೇಕಾನಂದರು ನಮಗೆ ಆದರ್ಶಪ್ರಾಯರಾಗಿದ್ದಾರೆ. ಸಮರ್ಥ ಭಾರತವೂ ಸ್ವಾಮಿ ವಿವೇಕಾನಂದರ ‘ಉತ್ತಮನಾಗು, ಉಪಕಾರಿಯಾಗು’ ಎಂಬ ಸಂದೇಶವನ್ನು ‘ಬಿ ಗುಡ್ ಡು ಗುಡ್’ ಅಭಿಯಾನದ ಮೂಲಕ ಯುವಕರಿಗೆ ತಲುಪಿಸುತ್ತಿದೆ‌. ಯುವಕರಲ್ಲಿ ಅನ್ಯಾಯವನ್ನು ಪ್ರಶ್ನಿಸುವ, ನ್ಯಾಯಕ್ಕಾಗಿ ಹೋರಾಡುವ ಸ್ವಭಾವ ಜಾಗೃತಿಯಾಗಬೇಕು. ಸಮಾಜದಲ್ಲಿರುವ ಅಸ್ಪೃಶ್ಯತೆ, ಬಡತನ ಮುಂತಾದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬೇಕು. ಸಣ್ಣ ಸಣ್ಣ ಕೆಲಸಗಳನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಆಗ ಸಮರ್ಥ ರಾಷ್ಟ್ರ ಕಟ್ಟುವುದಕ್ಕೆ ಸಾಧ್ಯ ಎಂದರು‌.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ನರಸಿಂಹಮೂರ್ತಿ ಅವರು ಮಾತನಾಡಿ ಯಾವುದೇ ದೇಶದ ಅಭಿವೃದ್ಧಿಗೆ ಯುವಜನರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅಂತಹ ಯುವ ಶಕ್ತಿಯಲ್ಲಿ ಒಳ್ಳೆಯ ವಿಚಾರಗಳನ್ನು ತುಂಬುವಂತಹ ಕೆಲಸಗಳು ಆಗಬೇಕಿದೆ. ಜೊತೆಗೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲನೆ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಲೇಖಕಿ ಸ್ಪೂರ್ತಿ ಮುರಳೀಧರ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಸ್ವಾಮಿ ವಿವೇಕಾನಂದರು ನಮಗೆ ಯಾಕೆ ಮುಖ್ಯ ಎಂಬುದು ಅರಿತುಕೊಳ್ಳಬೇಕಿದೆ. ಅವರು ತಿಳಿಸಿದ ಜೀವನಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಚಿಕ್ಕ ಚಿಕ್ಕ ಭಯಗಳನ್ನು ಹೋಗಲಾಡಿಸುವ ಮೂಲಕ ನಮ್ಮ ಗುರಿಯನ್ನು ತಲುಪುವ ಕಡೆಗೆ ಗಮನ ಹರಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮರ್ಥಭಾರತದ ಟ್ರಸ್ಟಿ ರಾಜೇಶ್ ಪದ್ಮಾರ್, ಪತ್ರಕರ್ತೆ ಹಾಗೂ ಸಮರ್ಥ ಭಾರತದ ಸದಸ್ಯೆ ಚೇತನಾ ರಾಜೇಂದ್ರ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.