ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರದಲ್ಲಿ, ನಡೆಯುತ್ತಿರುವ ಹಿಂಸಾಚಾರ ಎಲ್ಲರಿಗೂ ತಿಳಿದಿರುವ ಸಂಗತಿಯೇ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳಾದ ಎನ್ ವಿ ರಮಣ ಅವರು ತಕ್ಷಣವೇ ಗಮನ ಹರಿಸಿ, ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕೆಂದು ದೇಶಾದ್ಯಂತದ ಮಹಿಳಾ ವಕೀಲರು ಆಗ್ರಹಿಸಿದ್ದಾರೆ. ಭಾರತದ ೨೮ ರಾಜ್ಯಗಳ, ೮ ಕೇಂದ್ರಾಡಳಿತ ಪ್ರದೇಶಗಳ ವಕೀಲರು ಈ ಪತ್ರದಲ್ಲಿ ಸಹಿ ಹಾಕುವ ಮೂಲಕ ನೊಂದ ಕುಟುಂಬಗಳ ಜೊತೆ ನಿಂತಿದ್ದೇವೆ ಎಂಬ ಸಂದೇಶ ನೀಡಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳಿಗೆ ಬರೆಯಲಾಗಿರುವ ಪತ್ರದಲ್ಲಿ ೨೦೯೩ ಮಹಿಳಾ ವಕೀಲರ ಸಹಿ ಇದ್ದು, ಪಶ್ಚಿಮ ಬಂಗಾಳದ ವಕೀಲರೂ ಭಾಗವಹಿಸಿದ್ದಾರೆ. ಮೇ ೨ ರ ನಂತರದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಮಹಿಳೆಯರು, ಮಕ್ಕಳು ತೀವ್ರ ಸಾವು ನೋವುಗಳನ್ನು, ಕುಟುಂಬದವರನ್ನು ಕಳೆದುಕೊಂಡ ಘಟನೆಗಳು ನಡೆದಿವೆ ಎಂಬ ಕಾರಣಕ್ಕೆ ಮುಖ್ಯ ನ್ಯಾಯಮೂರ್ತಿಗಳಾದ ಎನ್ ವಿ ರಮಣ ಅವರು ತಕ್ಷಣವೇ ಗಮನ ಹರಿಸಬೇಕೆಂದು ಕೇಳಿಕೊಂಡಿದ್ದಾರೆ.

ಇಂತಹ ಹಿಂಸಾಚಾರದಿಂದಾಗಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದ್ದು ನಾಗರಿಕರ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯದ ಪೊಲೀಸರು ಅಲ್ಲಿನ ಗುಂಡಾಗಳ ಜೊತೆ ಶಾಮೀಲು ಆಗಿದ್ದು, ಪ್ರಕರಣಗಳನ್ನು ದಾಖಲುಗೊಳಿಸುತ್ತಿಲ್ಲವಾದ್ದರಿಂದ ಪಶ್ಚಿಮ ಬಂಗಾಳದ ಪೊಲೀಸ್ ಇಲಾಖೆಗೆ ಸೇರದ ಒಬ್ಬರನ್ನು ನೋಡಲ್ ಆಫಿಸರ್ ಆಗಿ ನೇಮಿಸಬೇಕೆಂದು ಪತ್ರದಲ್ಲಿ ವಕೀಲರು ಕೇಳಿಕೊಂಡಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರವು ಹಿಂಸಾಚಾರದಲ್ಲಿ ಮೃತಪಟ್ಟವರಿಗೆ ಸೂಕ್ತ ಪರಿಹಾರ ಘೋಷಿಸಲು ನಿರ್ದೇಶಿಸಬೇಕೆಂದು ಕೇಳಿಕೊಂಡಿದ್ದಾರೆ. ೫೪ ಪುಟಗಳ ಪತ್ರದಲ್ಲಿ ಆಗ್ರಹ, ವಕೀಲರ ಸಹಿ ಸೇರಿದಂತೆ ಘಟನೆಗಳ ಬಗ್ಗೆ ವರದಿಗಳನ್ನು ಸೇರಿಸಲಾಗಿದೆ. ಅದರ ಪ್ರತಿಯನ್ನು ಇಲ್ಲಿ ನೋಡಬಹುದು.

Leave a Reply

Your email address will not be published.

This site uses Akismet to reduce spam. Learn how your comment data is processed.