
ಮೈಸೂರು, ಫೆ. 02, 2024: ಮೈಸೂರು ಸಿನಿಮಾ ಸೊಸೈಟಿ ಆಯೋಜಿಸಿರುವ ಎರಡು ದಿನಗಳ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವ ‘ಪರಿದೃಶ್ಯ’ ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ನಟ ಹಾಗೂ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಮಾಧ್ಯಮವನ್ನು ಮಾನಸಿಕವಾಗಿ, ಸೈದ್ಧಾಂತಿಕವಾಗಿ ಮನುಷ್ಯರನ್ನು ಬದಲಾಯಿಸಲು ಬಳಸಿಕೊಳ್ಳಲಾಗುತ್ತಿದೆ. ಸಿನಿಮಾ ಮಾಧ್ಯಮ ಮತ್ತು ಅದರ ತಾಂತ್ರಿಕ ಕೌಶಲ್ಯಗಳು ಉದ್ಯೋಗ, ಉದ್ಯಮ, ಶಿಕ್ಷಣ ಸೇರಿದಂತೆ ಎಲ್ಲ ಕಡೆಗಳಲ್ಲೂ ಅತ್ಯಗತ್ಯ ಮಾಧ್ಯಮ. ಇದನ್ನು ಅರ್ಥ ಮಾಡಿಕೊಂಡು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಈ ವಿಷಯದಲ್ಲಿ ಭಾರತ ಎದುರಿಸುತ್ತಿರುವ ತಿಳುವಳಿಕೆಯ ಕೊರತೆಯ ಕುರಿತು ನಾವು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಶರಣಪ್ಪ ವಿ. ಹಲಸೆ, ಮೈಸೂರು ಸಿನಿಮಾ ಸೊಸೈಟಿಯ ಅಧ್ಯಕ್ಷ ಚಂದ್ರಶೇಖರ್ ಜಿ.ಆರ್. ಅವರು ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ನಡೆಯಲಿರುವ ಪರಿದೃಶ್ಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದಲ್ಲಿ ನಾಡಿನ ಪ್ರಖ್ಯಾತ ನಿರ್ದೇಶಕರು ಮತ್ತು ತಂತ್ರಜ್ಞರು ಭಾಗವಹಿಸಲಿದ್ದಾರೆ. ಅನೇಕ ಭಾಷೆಗಳ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ. ಹಾಗೆಯೇ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾದ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರ ಸ್ಪರ್ಧೆಯಲ್ಲಿ ಇಪ್ಪತ್ತು ದೇಶಗಳ ಮುನ್ನೂರಕ್ಕೂ ಹೆಚ್ಚು ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರಗಳು ಸ್ಪರ್ಧಿಸಿವೆ. ಪರಿದೃಶ್ಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದ ಅಂತಿಮ ದಿನ ಇಪ್ಪತ್ತೈದು ಪ್ರಶಸ್ತಿಗಳು ಘೋಷಣೆಯಾಗಲಿವೆ.
