
ಮೈಸೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ನಡೆಯುತ್ತಿರುವ ಮೂರನೇ ‘ಪರಿದೃಶ್ಯ’ ಅಂತರರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವವನ್ನು ಹಿರಿಯ ರಂಗಕರ್ಮಿ ಹಾಗೂ ನಟ ಪ್ರಕಾಶ್ ಬೆಳವಾಡಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿನೆಮಾ ಕ್ಷೇತ್ರಕ್ಕೆ ಮೈಸೂರು ನೀಡಿರುವ ಕೊಡುಗೆ ಅಪಾರ. ಮುಂದಿನ ದಿನಗಳಲ್ಲಿ ಮೈಸೂರು ಅವಕಾಶಗಳ ಆಗರವಾಗಲಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದಲ್ಲಾಗುತ್ತಿರುವ ಬದಲಾವಣೆಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ನುಡಿದರು.

ಪ್ರತಿ ಕ್ಷೇತ್ರದಲ್ಲಿಯೂ ಬದಲಾವಣೆಗಳು ಆಗುತ್ತಿರುತ್ತವೆ. 2004ರ ಹೊತ್ತಿಗೆ ಡಿಜಿಟಲ್ ಸಿನೆಮಾ ಕಾಲಿಡುತ್ತಿದ್ದ ಸಮಯದಲ್ಲಿ ಸೆಲ್ಯುಲಾಯ್ಡ್ ಸಿನೆಮಾದ ಛಾಯಚಿತ್ರಗಾರರು ಅದಕ್ಕೆ ಒಗ್ಗಿಕೊಳ್ಳದ ಕಾರಣ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಮುಂದೆಯೂ ಇಂತಹ ಅನೇಕ ಆವಿಷ್ಕಾರಗಳು ಸಿನೆಮಾರಂಗದಲ್ಲಿ ಆಗಲಿದೆ. ಅದಕ್ಕೆ ಈಗಿನವರು ತಯಾರಿರಬೇಕು ಎಂದರು.

ಶ್ರೇಷ್ಠ ಚಲನಚಿತ್ರಗಳನ್ನು ಮತ್ತು ಗಮನಾರ್ಹ ವ್ಯಕ್ತಿಗಳನ್ನು ಪಾರಂಪರಿಕ ನಗರವಾದ ಮೈಸೂರು ಪೋಷಿಸಿದೆ. ಮುಂದಿನ ದಿನಗಳಲ್ಲಿ ಮೂವಿಂಗ್ ಇಮೇಜ್ ಮೀಡಿಯಾಕ್ಕಾಗಿ ಮೂಲಸೌಕರ್ಯವನ್ನು ನಿರ್ಮಿಸಲು ಗಮನವಹಿಸುವಂತೆ ಅವರು ಸೂಚಿಸಿದರು.

ಮಾಣೆಕ್ ಪ್ರೇಮ್ ಚಂದ್ ಅವರು ತಮ್ಮ ಭಾಷಣದಲ್ಲಿ ಸಿನಿಮಾಗಳ ಮಹತ್ವ ಮತ್ತದರ ಸಾಂಸ್ಕೃತಿಕ ಪ್ರಭಾವಗಳ ಕುರಿತು ಮಾತನಾಡಿದರು. ಚಲನಚಿತ್ರ ರಂಗವು ಅತ್ಯಂತ ಪ್ರಭಾವೀ ಮಾಧ್ಯಮವಾಗಿ ಬೆಳೆದುಬಂದ ಬಗೆಯನ್ನು ಅವರು ವಿವರಿಸಿದರು. ಪ್ರಪಂಚದಾದ್ಯಂತ ಇರುವ ಕಥೆಗಾರರು, ನಿರ್ಮಾಪಕರು, ನಿರ್ದೇಶಕರು ಮತ್ತು ಪ್ರೇಕ್ಷಕರನ್ನು ಒಂದುಗೂಡಿಸುವ ಶಕ್ತಿ ಪರಿದೃಶ್ಯಕ್ಕೆ ಇದೆ ಎನ್ನುವ ಭರವಸೆಯೊಂದಿಗೆ ಅವರು ಚಲನಚಿತ್ರೋತ್ಸವಕ್ಕೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಹಿರಿಯ ಸಿನೆಮಾ ಇತಿಹಾಸಕಾರ ಮಾಣಿಕ್ ಪ್ರೇಮ್ ಚಂದ್, ಸಿನೆಮಾ ನಿರ್ದೇಶಕ ಪೃಥ್ವಿ ಕೊಣನೂರು, ಮೈಸೂರು ಸಿನೆಮಾ ಸೊಸೈಟಿಯ ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್ ಉಪಸ್ಥಿತರಿದ್ದರು.

ಮತ್ತೊಬ್ಬ ಅತಿಥಿಗಳಾದ ನಿರ್ದೇಶಕ ಪೃಥ್ವಿ ಕೊಣನೂರು ಅವರು ಮಾತನಾಡುತ್ತಾ, ಸಿನಿಮಾಗಳ ನಿಜವಾದ ಸಾರ ಅಡಗಿರುವುದು ಬರವಣಿಗೆಯಲ್ಲಿ, ಬರಹಗಾರನೇ ಸಿನಿಮಾದ ಮೊದಲ ನೋಡುಗ ಎಂದು ತಿಳಿಸಿದರು. ಇಂದು ತಂತ್ರಜ್ಞಾನ ಚಿತ್ರ ನಿರ್ಮಾಣವನ್ನು ಅದೆಷ್ಟೇ ಸುಲಲಿತವಾಗಿಸಿದ್ದರೂ, ಬರವಣಿಗೆಯ ಮಹತ್ವ ಕಡಿಮೆಯಾಗದು ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಕೊಣನೂರು ಪ್ರೊಡಕ್ಷನ್ಸ್’ ಪ್ರತಿ ವರ್ಷ ಒಂದು ಚಿತ್ರವನ್ನು ನಿರ್ಮಿಸಲಿದೆ ಮತ್ತು ಒಳ್ಳೆಯ ಚಿತ್ರಕಥೆಯೊಂದಿಗೆ ಬರುವವರನ್ನು ಮುಕ್ತವಾಗಿ ಆಹ್ವಾನಿಸುತ್ತಿದ್ದೇವೆ ಎಂದು ಅವರು ಘೋಷಿಸಿದರು.

ಪರಿದೃಶ್ಯ ಚಿತ್ರೋತ್ಸವಕ್ಕೆ ಪ್ರಪಂಚದಾದ್ಯಂತ 109 ದೇಶಗಳಿಂದ 3123 ಕಿರು ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ. ಈ ಚಿತ್ರಗಳಲ್ಲಿ ಆಯ್ಕೆಯಾದ ಸಿನಿಮಾಗಳಿಗೆ 26 ವರ್ಗಗಳ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭಾರತದಿಂದ 985, ಇರಾನ್ ಇಂದ 413, ಸ್ಪೇನ್ ಇಂದ 138, ಫ್ರಾನ್ಸ್ 137, ಬ್ರೆಜಿಲ್ 108, ಚೀನಾ 99, ಇಂಡೋನೇಷಿಯಾ 91, ಟರ್ಕಿ 88, USA 82, ಇಟಲಿ 81 ಮುಂತಾದ ದೇಶಗಳಿಂದ 3123 ಸಿನಿಮಾಗಳು ಬಂದಿವೆ. ಕನ್ನಡದ ಒಟ್ಟು 73 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಸೇರಿವೆ.
ಉದ್ಘಾಟನಾ ಕಾರ್ಯಕ್ರಮವು ಉಕ್ರೇನ್ ದೇಶದ ‘God will forgive us’ ಎನ್ನುವ ಚಿತ್ರ ಪ್ರದರ್ಶನದೊಂದಿಗೆ ಮುಕ್ತಾಯಗೊಂಡಿತು.
ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಎಂ. ಜಯಪ್ರಕಾಶ್, ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತ ಪ್ರಚಾರ ಪ್ರಮುಖ್ ಅರುಣ್ ಕುಮಾರ್, ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ಚಿಂತಕ ಡಾ। ಸುಧಾಕರ ಹೊಸಳ್ಳಿ, ಸಿನಿಮಾ ಆಯಾಮದ ಪ್ರಮುಖರಾದ ಶ್ರೀರಾಜ್ ಗುಡಿ, ಸಹಪ್ರಮುಖರಾದ ಶೈಲೇಶ್ ಕುಲಕರ್ಣಿ ಉಪಸ್ಥಿತರಿದ್ದರು.





ಕಾರ್ಯಕ್ರಮದ ವಿಶೇಷ: ‘ಪರಿದೃಶ್ಯ’ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳಿಗಾಗಿ ‘ದಿ ಸರ್ಕಸ್’ ಮೂಕಿಚಿತ್ರವನ್ನು ಪ್ರದರ್ಶಿಸಲಾಯಿತು. ಹಾಗೆಯೇ ಡಾ. ಪುನೀತ್ ರಾಜ್ ಕುಮಾರ್ ಅವರ ‘ಗಂಧದಗುಡಿ’ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.









ಮಾಸ್ಟರ್ ಟಾಕ್ಸ್: ಮಾಸ್ಟರ್ ಟಾಕ್ – 1ರಲ್ಲಿ ಹಿರಿಯ ರಂಗಕರ್ಮಿ ಮತ್ತು ನಟ ಪ್ರಕಾಶ್ ಬೆಳವಾಡಿ ಸಂವಾದದಲ್ಲಿ ಪಾಲ್ಗೊಂಡರು. ಮಾಸ್ಟರ್ ಟಾಕ್ – 2 ರಲ್ಲಿ ಛಾಯಗ್ರಾಹಕ ಮತ್ತು ಲೇಖಕ ಸತ್ಯಬೋಧ ಜೋಶಿ ಮಾತನಾಡಿದರು. ನೂರಾರು ಯುವ ಚಿತ್ರ ನಿರ್ದೇಶಕರು, ಕಥೆಗಾರರು ಹಾಗೂ ತಂತ್ರಜ್ಞರು ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡು ಮಾಹಿತಿಗಳನ್ನು ಪಡೆದುಕೊಂಡರು.








ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತ ಸಂಜೆ: ಕಾರ್ಯಕ್ರಮದಲ್ಲಿ ಮೈಸೂರಿನ ಚಿದಂಬರ ನಟೇಶ ನಾಟ್ಯಶಾಲೆ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಗಾಯಕಿ ಜಯಂತಿ ಭಟ್ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.










