ಅಟಲ್‌ಜಿ ಜೊತೆ ನನ್ನ ಆ 50 ವರ್ಷಗಳು
ನಿರೂಪಣೆ:ದು.ಗು.ಲಕ್ಷ್ಮಣ
ದೇಶ ಕಂಡ ಮಹಾನ್ ಮುತ್ಸದ್ದಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ತಿಳಿಯದವರು ವಿರಳ. ಆದರೆ 50 ವರ್ಷಗಳ ದೀರ್ಘಕಾಲ ಆಟಲ್‌ಜಿ ಜೊತೆಗೆ ನಿಕಟ ಒಡನಾಟ ಹೊಂದಿದವರೊಬ್ಬರು ಅವರ ಬಗ್ಗೆ ಹೇಳುವ ಮಾತುಗಳು ಎಂಥದ್ದಿರಬಹುದು? ಅವರ ಮನದ ಭಾವನೆಗಳು ಯಾವ ಚಿತ್ರಣ ಮೂಡಿಸಬಲ್ಲದು? ಎಂಬುದು ಕುತೂಹಲಕರ. ಆಟಲ್‌ಜಿ ಯವರ ಆಪ್ತ ಸಹಾಯಕನಾಗಿ, ಚಾಲಕನಾಗಿ, ಅಂಗರಕ್ಷಕನಾಗಿ, ಸಂತಸದ, ಸಂಕಟದ ಎಲ್ಲ ಸನ್ನಿವೇಶಗಳಲ್ಲೂ ಭಾಗೀದಾರನಾಗಿ ಅತಿ ಹತ್ತಿರದಿಂದ ಕಂಡ ಶಿವಕುಮಾರ್ ತಮ್ಮ ನೆನಪಿನ ಸುರಳಿಯನ್ನು ಬಿಚ್ಚಿಟ್ಟಿದ್ದಾರೆ. ಆಟಲ್‌ಜಿ ಕುರಿತು ಶಿವಕುಮಾರ್ ರವರ ಮಾತುಗಳಲ್ಲೇ ಕೇಳಿ:
ಆಟಲ್‌ಜಿ ಒಬ್ಬ ಯುಗ ಪುರುಷ. ಈ ಶತಮಾನದಲ್ಲಿ ಅಂತಹ ಮಹಾನುಭಾವನೊಬ್ಬನನ್ನು ನಾನು ಬೇರೆ ನೋಡಿಲ್ಲ ಅಥವಾ ಅಂಥವರೊಬ್ಬರು ಮುಂದಿನ ಶತಮಾನದಲ್ಲಿ ಹುಟ್ಟಿ ಬರಬಹುದೆಂಬ ನಂಬಿಕೆಯೂ ನನಗಿಲ್ಲ. ಬಹುಮುಖ ಆಟಲ್‌ಜಿ ಎಂಬ ಒಬ್ಬ ವ್ಯಕ್ತಿಯಲ್ಲಿ ಸಂಚಯವಾಗಿತ್ತು. ರಾಮನ ಆದರ್ಶ, ವಿವೇಕಾನಂದರ ಕ್ಷಾತ್ರ ತೇಜಸ್ಸು, ಬುದ್ಧನ ಧ್ಯಾನಸ್ಥ ಶಾಂತ ಸ್ಥಿತಿ, ಕೃಷ್ಣನ ಕುಶಲತೆ -ಎಲ್ಲವೂ ಆಟಲ್‌ಜೀಯವರಲ್ಲಿ ಅಡಕವಾಗಿತ್ತು. ಎಂಥವರನ್ನೂ ಮೋಡಿ ಮಾಡಿಬಿಡುವ ಆಕರ್ಷಕ ವ್ಯಕ್ತಿತ್ವ ಅವರದಾಗಿತ್ತು.
ಹೊಸದಾಗಿ ಆಟಲ್‌ಜಿಯವರನ್ನು ಭೇಟಿ ಮಾಡಿದರೂ ಕೂಡ ತಾನು ಅವರಿಗೆ ಅತ್ಯಂತ ನಿಕಟವರ್ತಿ ಎನ್ನುತ್ತಿದ್ದುಂಟು. ಏಕೆಂದರೆ ಅಟಲ್‌ಜಿ ಒಬ್ಬ ತಾಳ್ಮೆಯ ಕೇಳುಗರಾಗಿದ್ದರು. ಎದುರುಗಡೆಯ ವ್ಯಕ್ತಿ ಹೇಳಿದ್ದನ್ನೇ ಮತ್ತೆ ಹೇಳುತ್ತಿರುವಾಗ ಎಂಥವರಿಗಾದರೂ ಕಿರಿಕಿರಿ ಆಗುವುದು ಸಹಜ. ಅಟಲ್‌ಜಿ ಮಾತ್ರ ಇದಕ್ಕೆ ಅಪವಾದ. ತನ್ನೆದುರಿಗಿನ ವ್ಯಕ್ತಿ ಹೇಗೇ ಹೇಳಲಿ, ಏನೇ ಹೇಳಲಿ, ಕ್ಲುಪ್ತವಾಗಿ ಒಂದೆರಡು ವಾಕ್ಯಗಳಲ್ಲಿ ಆತನ ಸಮಸ್ಯೆಗೊಂದು ಪರಿಹಾರ ಹೇಳಿ ಸಮಾಧಾನಿಸುವ ಶಕ್ತಿ ಅವರಿಗಿತ್ತು. ಈ ಗುಣ ಎಲ್ಲರಲ್ಲೂ ಇರುವುದು ವಿರಳ. ಶ್ರೀಮಂತ – ಬಡವ, ಪಾಮರ – ಪಂಡಿತ ಎಲ್ಲರನ್ನೂ ಸಮಾನಭಾವದಿಂದ ಕಾಣುತ್ತಿದ್ದ ಅವರೊಬ್ಬ ಮುತ್ಸದ್ದಿ, ಮಾನವ ಶಿಲ್ಪಿ.
ನಾನು 13ರ ಹರೆಯದಲ್ಲೇ ಸಂಘದ ಸ್ವಯಂಸೇವಕನಾದೆ. 1948ರ ಸಂಘದ ಮೇಲಿನ ಮೊದಲ ನಿಷೇಧದ ಸಂದರ್ಭದಲ್ಲಿ ಜೈಪುರದಲ್ಲಿ ರೈಲೊಂದರ ಮೇಲೆ ಭಿತ್ತಿಪತ್ರ ಅಂಟಿಸುತ್ತಿದ್ದಾಗ ಬಂಧಿತನಾಗಿ 13 ದಿನ ಜೈಲುವಾಸ ಅನುಭವಿಸಿದೆ. ನಾನು ಜೈಲಿಗೆ ಹೋಗಿದ್ದು ನನ್ನ ಮನೆಗೆ, ತಂದೆಗೆ ಒಂದು ಅಪಮಾನದ ಸಂಗತಿ ಎನಿಸಿ. ನನ್ನನ್ನು ಮನೆಯಿಂದ ಹೊರದಬ್ಬಿದರು. ಅನಂತರ ಶಾಖೆಯಲ್ಲಿ ಗಟನಾಯಕ, ಮುಖ್ಯ ಶಿಕ್ಷಕ, ಶಾಖಾ ಕಾರ್ಯವಾಹ, ನಗರ ಕಾರ್ಯವಾಹ ಮೊದಲಾದ ಜವಾಬ್ದಾರಿಗಳನ್ನು ನಿರ್ವಹಿಸಿದೆ. ಮುಂದೆ ಕಾಲೇಜು ಓದುತ್ತಿದ್ದಾಗಲೂ ಸಂಘದ ವಿವಿಧ ಹೊಣೆಗಾರಿಕೆ ನಿಭಾಯಿಸಿದೆ.
ಅಟಲ್‌ಜಿ ಜೊತೆ ನಾನು ಸೇರಿದ್ದು ಹೇಗೆ?
ನಾನು ಕಾನೂನು ಪದವಿ ಮುಗಿಸಿ, 1969ರಲ್ಲಿ ಸುಪ್ರಿಂಕೋರ್ಟ್‌ನಲ್ಲಿ ವಕೀಲವೃತ್ತಿ ಮಾಡುತ್ತಿದ್ದಾಗ ಆಟಲ್‌ಜಿ ಜೊತೆ ಸೇರುವ ಸೌಭಾಗ್ಯ ಒದಗಿತು. ಅವರೊಂದಿಗೇ ಇರಬೇಕು ಎನ್ನುವುದೂ ನನ್ನ ಸ್ವಂತ ನಿರ್ಧಾರ ಆಗಿತ್ತು. ಜೈಪುರದ ಸಾಮಾನ್ಯ ಕಾಲೇಜಿನಲ್ಲಿ ನಾನು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದೆ. ಸಂಘದ ಉದ್ಘಾಟನೆ ಅಟಲ್‌ಜಿ ಅವರಿಂದಲೇ ಆಗಬೇಕೆಂಬುದು ನಮ್ಮೆಲ್ಲರ ಆಸೆಯಾಗಿತ್ತು.
ಆದರೆ ಆಗಿನ ರಾಜಸ್ತಾನ ಮುಖ್ಯಮಂತ್ರಿ ಮೋಹನ್‌ಲಾಲ್ ಸುಖಾಡಿಯಾ ಅದಕ್ಕೆ ಅವಕಾಶ ನೀಡಲಿಲ್ಲ. ವಿದ್ಯಾರ್ಥಿ ಸಂಘಟನೆಗಳಲ್ಲಿ ರಾಜಕೀಯ ಸಲ್ಲದೆಂಬುದು ಇದಕ್ಕೆ ಕಾರಣ. ರಾಜಕೀಯವಿಲ್ಲದಿದ್ದರೆ ವಿದ್ಯಾಭ್ಯಾಸವೂ ಇಲ್ಲ ಎಂದು ನಾವೆ ಲ್ಲ ಅನಿರ್ದಿಷ್ಟ ಚಳವಳಿಗೆ ಮುಂದಾದೆವು. ಕೊನೆಗೆ ಜನಸಂಘದ ಹಿರಿಯ ನಾಯಕ ಭೈರವ್ ಸಿಂಗ್ ಶೆಖಾವತ್ ಅವರ ಮಧ್ಯಪ್ರವೇಶದಿಂದಾಗಿ ಚಳವಳಿ ಸ್ಥಗಿತಗೊಂಡು, 1967ರ ಫೆ.11 ರಂದು ವಿದ್ಯಾರ್ಥಿ ಸಂಘದ ಉದ್ಘಾಟನೆಗೆ ಆಟಲ್‌ಜಿ ಆಗಮಿಸಿದರು. ಅವರ ಭಾಷಣ ಅತ್ಯಂತ ಅದ್ಭುತ ಹಾಗೂ ಸ್ಫೂರ್ತಿಪ್ರದವಾಗಿತ್ತು. ನನ್ನ ಮೇಲಂತೂ ಅದು ಭಾರಿ ಪರಿಣಾಮ ಬೀರಿತ್ತು. ಅವರ ಬಗ್ಗೆ ಒಂದು ಬಗೆಯ ಆರಾಧನಾ ಭಾವ ಆಗಲೇ ಶುರುವಾಗಿತ್ತು.
ಈ ನಡುವೆ ಜನಸಂಘದ ಅಧ್ಯಕ್ಷರಾಗಿದ್ದ ದೀನದಯಾಳರ ಬರ್ಬರ ಹತ್ಯೆ ನನ್ನನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಆಟಲ್‌ಜಿ, ತೆರವಾಗಿದ್ದ ಜನಸಂಘದ ಅಧ್ಯಕ್ಷಸ್ಥಾನ ವಹಿಸಿಕೊಂಡರು. ನನಗಾದರೋ ಒಳಗೊಳಗೆ ಭಯ. ಏಕೆಂದರೆ ಅದುವರೆಗೆ ಜನಸಂಘದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶ್ಯಾಮಪ್ರಸಾದ್ ಮುಖರ್ಜಿ, ಆಚಾರ್ಯ ರಘುವೀರ್, ಅನಂತರ ದೀನದಯಾಳ್ – ಹೀಗೆ ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಿಗೂಢವಾಗಿ ಹತ್ಯೆಯಾಗಿದ್ದರು. ಆಟಲ್‌ಜಿಗೂ ಹೀಗೇನಾದರೂ ಆದರೆ ಜನಸಂಘದ ಅಂತ್ಯವಾಗುತ್ತೆ ಎಂದು ನನಗೆ ಗಾಬರಿಯಾಯಿತು. ಅದೇ ವಾರಾಂತ್ಯದಲ್ಲಿ ಒಂದು ದಿನ ದೆಹಲಿಯ ಫಿರೋಜ್ ಷಾ ರಸ್ತೆಯಲ್ಲಿದ್ದ ಆಟಲಜೀ ನಿವಾಸಕ್ಕೆ ಧಾವಿಸಿ ನನ್ನ ಮನದ ದುಗುಡವನ್ನೆಲ್ಲ ನಿವೇದಿಸಿಕೊಂಡೆ. ಪ್ರವಾಸದ ವೇಳೆ ನೀವು ಒಬ್ಬರೇ ಇರುವುದು ಸರಿಯಲ್ಲ, ನಿಮ್ಮ ಜೊತೆಗೊಬ್ಬರು ಇರುವುದು ಸೂಕ್ತ ಎಂಬ ಸಲಹೆ ನೀಡಿದೆ. ಆಗ ಅಟಲ್‌ಜಿ ಏನೆಂದರು ಗೊತ್ತೆ?”‘ನಾನೊಬ್ಬ ಸನ್ಯಾಸಿ, ನನಗೇಕೆ ಯಾರಾದರೂ ಹಾನಿ ಎಸಗುತ್ತಾರೆ?”ನಾನಂದೆ ‘ಅದು ಹಾಗಲ್ಲ, ದೀನದಯಾಳಜಿ ಜೊತೆಗೆ ಯಾರಾದರೂ ಒಬ್ಬರಿದ್ದಿದ್ದರೆ ಅವರ ಕೊಲೆ ಆಗುತ್ತಿರಲಿಲ್ಲ’.’ಏನೂ ಅಗೋಲ್ಲ ಬಿಡು’ ಎಂದು ಅಟಲ್‌ಜಿ ಶಾಂತವಾಗಿ ಹೇಳಿದರು. ಕೆಲವು ತಿಂಗಳಾದ ಮೇಲೆ ಮತ್ತೆ ಅವರಿಗೆ ಇದೇ ವಿಷಯದ ಕುರಿತು ನೆನಪಿಸಿದೆ.
ಒಮ್ಮೆ ಜೈಪುರದ ಕಾರ್ಯಕ್ರಮವೊಂದಕ್ಕೆ ಅವರು ಹೋಗಬೇಕಿತ್ತು. ನಾನು ಆಗ ಅವರ ಜೊತೆಗಿದ್ದೆ. ನಾನು ಮತ್ತೊಮ್ಮೆ ಅವರನ್ನು ಭೇಟಿ ಮಾಡಿ, ನನ್ನನ್ನು ಅವರ ಸಹಾಯಕನನ್ನಾಗಿ ನೇಮಿಸಿಕೊಳ್ಳುವಂತೆ ಇನ್ನಿಲ್ಲದಂತೆ ಆಗ್ರಹಿಸಿದೆ. ಅಟಲಜೀಗೆ ಏನಾದರೂ ಹೆಚ್ಚು ಕಡಿಮೆ ಆದರೆ… ಅದೊಂದೇ ನನಗೆ ಚಿಂತೆ. ಕೊನೆಗೆ ದೀರ್ಘವಾಗಿ ಆಲೋಚಿಸಿದ ಬಳಿಕ ಅಟಲ್‌ಜಿ ಹೇಳಿದರು:
‘ಶಿವಕುಮಾರ್‌ಜಿ, ನೀವು ನನ್ನ ಸಹಾಯಕನಾದರೆ ನಿಮಗೆ ಸಂಬಳ ಕೊಡಲು ನನ್ನ ಬಳಿಯಾಗಲೀ, ನನ್ನ ಪಕ್ಷದ ಬಳಿಯಾಗಲೀ ಬಿಡಿಗಾಸೂ ಇಲ್ಲ, ನೀವು ಸುಪ್ರಿಂಕೋರ್ಟ್‌ನಲ್ಲಿ ಲಾಯರ್ ಆಗಿ ಸಂಪಾದಿಸುತ್ತಿದ್ದೀರಿ. ಅಲ್ಲೇ ನೀವು ಮುಂದುವರಿಯುವುದು ಸೂಕ್ತ’. ನಾನೂ ಅಷ್ಟೇ ಗಂಭೀರವಾಗಿ ಹೇಳಿದೆ: ‘ನಿಮ್ಮಿಂದಾಗಲಿ, ನಿಮ್ಮ ಪಕ್ಷದಿಂದಾಗಲಿ ನಾನು ಸಂಬಳ ನಿರೀಕ್ಷಿಸಿಲ್ಲ’. ಒಂದು ಕ್ಷಣ ಆಟಲ್‌ಜಿ ಅವಾಕ್ಕಾದರು. ‘ಈ ನಿಮ್ಮ ನಿರ್ಧಾರ ಪಕ್ಕಾ ತಾನೇ’ ಎಂದು ಕೇಳಿದರು. ‘ಹೌದು ಪಕ್ಕಾ’ ಎಂದೆ. ‘ನಾನು ಈ ವಿಷಯವನ್ನು ಈಗಾಗಲೇ ನಾನಾಜಿ ದೇಶ್‌ಮುಖ್ ಮತ್ತು ಸೋಹನ್ ಸಿಂಗ್ ಜಿ ಅವರೊಂದಿಗೆ ಚರ್ಚಿಸಿದ್ದು, ಅವರೂ ಸಮ್ಮತಿಸಿದ್ದಾರೆ’ ಎಂಬ ಮಾಹಿತಿಯನ್ನು ನೀಡಿದೆ. ಕೊನೆಗೂ ಅವರು ಒಪ್ಪಿಕೊಂಡರು. ಅಂದಿನಿಂದ 2018 ಆಗಸ್ಟ್ 16 ರಂದು ಆಟಲ್‌ಜಿ ಕೊನೆ ಉಸಿರಿನವರೆಗೂ ಸೇವಕನಾಗಿ, ಸಹಾಯಕನಾಗಿ, ಡ್ರೈವರ್ ಆಗಿ ಹೀಗೇ ಏನೇನೋ ಆಗಿ ಅವರ ಸೇವೆ ಮಾಡಿರುವೆ.
ಅಟಲ್‌ಜಿ ರೈಲು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ಅವರ ಜೊತೆ ನಾನೂ ಹೋಗುತ್ತಿದ್ದೆ. ವಿಮಾನದಲ್ಲಿ ಮಾತ್ರ ಸಹಾಯಕರನ್ನು ಬಿಡುತ್ತಿರಲಿಲ್ಲ. ಅದೂ ಅಲ್ಲದೆ ಸಹಾಯಕನ ಪ್ರಯಾಣ ವೆಚ್ಚ ಭರಿಸುವಷ್ಟು ತಾಕತ್ತು ಪಕ್ಷಕ್ಕೂ ಇರಲಿಲ್ಲ. ಅಟಲ್‌ಜಿ ಹತ್ತಿರ ಆಗ ಕಾರು ಇರಲಿಲ್ಲ. ನಾನೊಂದು ಸ್ಕೂಟರ್ ಖರೀದಿಸಿದೆ. ಪಾರ್ಲಿಮೆಂಟ್ ಭವನಕ್ಕೆ ಅವರನ್ನು ಕರೆದುಕೊಂಡು ಹೋಗುವ, ವಾಪಸ್ ಬರುವ ವಾಹನ ಅದೇ ಆಗಿತ್ತು. 1971ರಲ್ಲಿ ಹೇಗೋ ಹಣ ಹೊಂದಿಸಿ. ನಾವೊಂದು ಅಂಬಾಸಿಡರ್ ಕಾರು ಖರೀದಿಸಿದೆವು. ಅದನ್ನು ನಾನೇ ಚಲಾಯಿಸುತ್ತಿದ್ದೆ. ಜೊತೆಗೆ ಅವರ ವೈಯಕ್ತಿಕ ಹಾಗೂ ಅಧಿಕೃತ ಪತ್ರ ವ್ಯವಹಾರಗಳನ್ನು ನಾನೇ ನಿರ್ವಹಿಸುತ್ತಿದ್ದೆ. ಇಷ್ಟಾಗಿಯೂ ಐದು ದಶಕಗಳ ಅವಧಿಯಲ್ಲಿ ಅವರು ನನ್ನನ್ನು ಎಂದೂ ‘ಶಿವಕುಮಾರ್’ ಎಂದು ಸಂಬೋಧಿಸಲಿಲ್ಲ. ‘ಶಿವಕುಮಾರ್‌ಜಿ’ ಎಂದು ಗೌರವದಿಂದಲೇ ಕರೆಯುತ್ತಿದ್ದರು.
ನಾನು ಅವರಿಗಿಂತ 14 ವರ್ಷ ಚಿಕ್ಕವನು. ಆದರೂ ನನ್ನನ್ನು ಅವರು ಕಾಣುತ್ತಿದ್ದುದ್ದು ಅದೇ ಗೌರವಭಾವದಿಂದ.
ಅಟಲ್‌ಜಿ ಅರ್ಥವಾಗೋದು ಹೇಗೆ?
ನಿಮಗೆ ಆಟಲ್‌ಜಿ ವ್ಯಕ್ತಿತ್ವ ಅರ್ಥವಾಗಬೇಕಾದರೆ ನೀವು ಅವರ ಕವನಗಳನ್ನು ಅದರಲ್ಲಿರುವ ವ್ಯಂಗ್ಯ, ಕ್ರೋಧ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿ ಹುಟ್ಟುಹಬ್ಬದ ದಿನ ತಪ್ಪದೆ ಅವರೊಂದು ಕವನ ಬರೆಯುತ್ತಿದ್ದರು. ಪಾರ್ಲಿಮೆಂಟ್‌ನಲ್ಲಿ ಮಾತನಾಡುವ ಮುನ್ನ ಅವರೆಂದೂ ತಮ್ಮ ಭಾಷಣವನ್ನು ಬರೆದುಕೊಂಡು ಹೋಗುತ್ತಿರಲಿಲ್ಲ. ಕೆಲವು ಅಂಶಗಳನ್ನು ಮಾತ್ರ ಗುರುತು ಮಾಡಿಕೊಂಡು ಆಮೋಘವಾಗಿ ತಮ್ಮ ವಾಗ್‌ಝರಿ ಹರಿಸುತ್ತಿದ್ದರು. ಅದೊಂದು ಜನಾಕ್ರೋಶ ರಸಧಾರೆಯಾಗಿರುತ್ತಿತ್ತು. ಅಂಕಿ ಸಂಖ್ಯೆಗಳನ್ನು ಮಾತ್ರ ಎಚ್ಚರಿಕೆಯಿಂದ ಹೇಳುತ್ತಿದ್ದರು.
ಅವರನ್ನು ಬಹುವಾಗಿ ಇನ್ನಿಲ್ಲದಂತೆ ಕಾಡಿದ್ದು ಅಲ್ಸರ್ ಮತ್ತು ಮೈಗ್ರೇನ್ ಕಾಯಿಲೆಗಳು. ಅವುಗಳಿಂದಾಗಿ ಅವರು ಪಡುತ್ತಿದ್ದ ಯಾತನೆ ಅಪಾರ. ಆದರೂ ನೋವು ನಿವಾರಕ ಔಷಧಿಗಳನ್ನು ತೆಗೆದುಕೊಂಡು ತಮ್ಮ ದಿನಚರಿ ಮುಂದುವರಿಸುತ್ತಿದ್ದರು. ಆದರೆ ಮುಂದೆ ಸಹಿಸಲಾಗದಷ್ಟು ಹೊಟ್ಟೆ ನೋವು ಮರುಕಳಿಸಿದಾಗ, ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ಸೇರಿ
ಡಾ. ಚಂದ್ರಪ್ರಕಾಶ್ ಅವರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹಿಂದಿರುಗಿದರು. ಶಸ್ತ್ರಚಿಕಿತ್ಸೆಗೆ ತಗುಲಿದ ವೆಚ್ಚದ ಬಿಲ್‌ನ್ನು ನಾನು ಪಾರ್ಲಿಮೆಂಟ್ ಲೆಕ್ಕ ವಿಭಾಗಕ್ಕೆ ಕಳುಹಿಸಿಕೊಟ್ಟೆ. ಆದರೆ ಆ ಬಿಲ್ ಪಾವತಿಯಾಗದೆ ವಾಪಸ್ ಬಂತು. ಎಂಪಿಗಳಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅನುಮತಿ ಇಲ್ಲ. ಅವರೇನಿದ್ದರೂ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕೆಂಬ ಷರಾದೊಂದಿಗೆ ಪತ್ರ ಬೇರೆ. ಅಟಲ್‌ಜಿ ತಕ್ಷಣ ನನ್ನ ಬಳಿಯಿಂದ ಒಂದು ಕಾಗದದ ಹಾಳೆ ತೆಗೆದುಕೊಂಡರು (ಅಟಲ್‌ಜಿ ಎಂದಿಗೂ ಪ್ರಿಂಟೆಡ್ ಲೆಟರ್‌ಪ್ಯಾಡ್ ಬಳಸಲಿಲ್ಲ). ಆಗ ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ. ಕರಣ್ ಸಿಂಗ್‌ಗೆ ಪತ್ರ ಬರೆದರು. ಆ ಪತ್ರದಲ್ಲಿ ಒಂದು ವಾಕ್ಯ ಹೀಗಿತ್ತು: ‘ನಾನು ಆಸ್ಪತ್ರೆಗೆ ಸೇರಿದ್ದು ನನ್ನ ಕಾಯಿಲೆಯ ಚಿಕಿತ್ಸೆಗೆಂದು.ನನ್ನ ಅಂತಿಮ ಸಂಸ್ಕಾರಕ್ಕಾಗಿ ಅಲ್ಲ’ (ಮುಝೆ ಅಪನಾ ಇಲಾಜ್ ಕರಾನಾ ಥಾ, ಅಂತಿಮ್ ಸಂಸ್ಕಾರ್ ನಹೀ). ಕೊನೆಗೆ ಡಾ. ಕರಣ್‌ಸಿಂಗ್ ಎಂಪಿಗಳಿಗೆ ಏಮ್ಸ್ ಆಸ್ಪತ್ರೆಯಲ್ಲಿ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಿದರು.
1984ರಲ್ಲಿ ಗ್ವಾಲಿಯರ್ ಕ್ಷೇತ್ರದಲ್ಲಿ ಅಟಲ್‌ಜಿ ಚುನಾವಣೆ ಸೋತು ದೆಹಲಿಗೆ ಹಿಂದಿರುಗಿದಾಗ ತುಂಬಾ ಹೈರಾಣ ಆಗಿದ್ದರು. ತಪಾಸಣೆ ನಡೆಸಿದಾಗ ಯಾವುದೇ ಕೊರತೆ ಇಲ್ಲವೆಂದು ಹೇಳಲಾಗಿತ್ತು. ಒಮ್ಮೆ ಹೈದರಾಬಾದ್‌ಗೆ ಹೋದಾಗ ಡಾ. ಚನ್ನಾರೆಡ್ಡಿ ಅಟಲ್‌ಜಿ ಸೊರಗಿದಂತೆ ಕಾಣಿಸುತ್ತಿದ್ದನ್ನು ಗಮನಿಸಿದರು. ಹೌದು ನನಗೇಕೋ ಬಹಳ ಬೇಗ ಸುಸ್ತಾಗುತ್ತದೆ ಎಂದರು ಅಟಲ್‌ಜಿ.
ಆಗ ಡಾ. ರೆಡ್ಡಿಯವರೇ ಖುದ್ದಾಗಿ ಆಟಲ್‌ಜಿ ಯವರ ಸಮಗ್ರ ಆರೋಗ್ಯ ತಪಾಸಣೆ ನಡೆಸಿ ಹೇಳಿದ್ದು – ನಿಮ್ಮ ಒಂದು ಮೂತ್ರಪಿಂಡ ಸಂಪೂರ್ಣ ನಿಷ್ಕ್ರಿಯ ಸ್ಥಿತಿಯಲ್ಲಿದೆ. ಅದನ್ನು ತಕ್ಷಣ ತೆಗೆಸದಿದ್ದರೆ ಜೀವಕ್ಕೆ ಹಾನಿಯಾಗಬಹುದು’. ತಕ್ಷಣ ಶಸ್ತ್ರ ಚಿಕಿತ್ಸೆಗೂ ಡಾ. ರೆಡ್ಡಿ ಏರ್ಪಾಡು ಮಾಡಿದರು. ಆದರೆ ಅಟಲ್‌ಜೀ ತಮ್ಮ ಆಪ್ತರೊಂದಿಗೆ ಚರ್ಚಿಸಿ, ಏಮ್ಸ್ ನ ಕರಗತ ತಜ್ಞ ವೈದ್ಯರಿಂದ ಮೂತ್ರಪಿಂಡ ವೈಫಲ್ಯವನ್ನು ಮತ್ತೊಮ್ಮೆ ಖಚಿತಪಡಿಸಿಕೊಂಡ ನಂತರವೇ. ಅದನ್ನು ತೆಗೆಯಲು ನಿರ್ಧರಿಸಿದ್ದು.
ಅದಾದ ಮೇಲೆ ಆಟಲ್‌ಜಿ ಅವರು ಅದೆಷ್ಟೋ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಉದರ, ಮೂತ್ರಪಿಂಡ, ಮೊಣಕಾಲು ಗಂಟು, ಸೊಂಟ… ಹೀಗೆ ಹಲವು ರೀತಿಯ ಬಾಧೆಗಳು. ಅವರಿಗೆ ಮೊಣಕಾಲು ಗಂಟು ಚಿಕಿತ್ಸೆಯಾದಾಗ ನನಗೂ ಮೊಣಕಾಲುಗಂಟು ನೋವಿನ ಬಾಧೆ. ಅಟಲ್‌ಜಿ ತಕ್ಷಣ ನನ್ನ ಶಸ್ತ್ರಚಿಕಿತ್ಸೆಗೆ ಏರ್ಪಾಡು ಮಾಡಿದರು. ನಾನಾದರೋ ಸುತಾರಾಂ ಅದಕ್ಕೆ ಒಪ್ಪಲಿಲ್ಲ. ಅವರ ಆಪ್ತ ಸಹಾಯಕನಾಗಿದ್ದ ,ಅವರ ಸೇವೆ ಮಾಡಬೇಕಾದ ನಾನು ಹೀಗೆ ಆಸ್ಪತ್ರೆಯ ಹಾಸಿಗೆಯಲ್ಲಿ ಆರಾಮಾಗಿ ಮಲಗುವುದೆಂದರೆ… ಛೇ, ಖಂಡಿತ ಬೇಡ ಎಂದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿಲ್ಲ.
ಅಟಲ್‌ಜಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರಾದರೂ ಅವರ ಕಾರ್ಯದೊತ್ತಡದಿಂದ ಕಾಲುನೋವು ಇನ್ನಷ್ಟು ಉಲ್ಬಣಿಸಿತು.
ಕೊನೆಯ ದಿನಗಳು
2005ರಲ್ಲಿ ಮುಂಬೈನ ಶಿವಾಜಿಪಾರ್ಕ್ ಮೈದಾನದಲ್ಲಿ ನಡೆದ ಭವ್ಯ ಸಭೆಯಲ್ಲಿ ಅವರು ಮಾಡಿದ ಭಾಷಣವೇ ಕೊನೆಯದು. ಆನಂತರ ಅವರು ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡಿದ್ದಿಲ್ಲ. 2007ರ ವರೆಗೆ ಹಾಗೂ ಹೀಗೂ ಅವರ ಆರೋಗ್ಯ ಸ್ಥಿರವಾಗಿತ್ತು. 2007ರಲ್ಲಿ ಒಮ್ಮೆ ಬಚ್ಚಲು ಮನೆಯಲ್ಲಿ ಜಾರಿ ಬಿದ್ದು, ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡರು. ಅದೇ ವೇಳೆ ಮಿದುಳಿನ ಪಾರ್ಶ್ವವಾಯು ಕಾಯಿಲೆಗೂ ತುತ್ತಾದರು. ಮತ್ತೆ ಏಮ್ಸ್‌ಗೆ ದಾಖಲಾದ ಅಟಲ್‌ಜಿಗೆ 22 ದಿನಗಳ ಕಾಲ ಕೃತಕ ಉಸಿರಾಟ ವ್ಯವಸ್ಥೆ. ದೇವರ ದಯೆ ಮತ್ತೆ ಅವರು ಚೇತರಿಸಿಕೊಂಡರು. ಆದರೆ ವಿಪರೀತ ಔಷಧಿ ಸೇವನೆಯಿಂದಾಗಿ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿತು. ಮಾತಿನಲ್ಲಿ ತೊದಲು, ಅವರು ಹೇಳಿದ್ದು ಯಾರಿಗೂ ಸ್ಪಷ್ಟವಾಗಿ ತಿಳಿಯುತ್ತಿರಲಿಲ್ಲ. ಇಳಿವಯಸ್ಸಿನ ಕಾರಣದಿಂದಾಗಿ ಅವರ ಶ್ರವಣಶಕ್ತಿಯೂ ಕುಂದತೊಡಗಿತು. ಅದಾದ ಬಳಿಕ ಪ್ರತಿ ತಿಂಗಳು ಏಮ್ಸ್ ಆಸ್ಪತ್ರೆಯಲ್ಲಿ ಅವರ ಸಮಗ್ರ ಆರೋಗ್ಯ ತಪಾಸಣೆ.ಸೋಂಕು ಹರಡುವ ಭಯದಿಂದ, 2007ರ ಬಳಿಕ ಅಟಲ್‌ಜಿ ಬಳಿಗೆ ಯಾರನ್ನೂ ನಾವು ಬಿಡುತ್ತಿರಲಿಲ್ಲ. ಅವರ ಹುಟ್ಟು ಹಬ್ಬದ ದಿನವಾದ ಡಿಸೆಂಬರ್ 25ರಂದು ಮಾತ್ರ ಆಟಲ್‌ಜಿ ದರ್ಶನ ಎಲ್ಲರಿಗೂ ಸಿಗುವಂತೆ ಏರ್ಪಾಡು ಮಾಡುತ್ತಿದ್ದೆವು.
2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ನಿಚ್ಚಳ ಬಹುಮತ ಪಡೆದು ಸರ್ಕಾರ ರಚಿಸಿದಾಗ, ನರೇಂದ್ರ ಮೋದಿ ಮೊಟ್ಟ ಮೊದಲು ಆಟಲ್‌ಜಿಯವರ ಮನೆಗೆ ತೆರಳಿ ಸಾಷ್ಟಾಂಗ ಪ್ರಣಾಮ ಮಾಡಿದ್ದರು.
ಆಟಲ್‌ಜಿ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಲೇ ಹೋಯಿತು. ನಂತರದಲ್ಲಿ ಇನ್ನಷ್ಟು ಉಲ್ಬಣಿಸಿತ್ತು. ಪ್ರಧಾನಿ ಮೋದಿ ಆಗಾಗ ಏಮ್ಸ್ ಗೆ ಬಂದು ಆರೋಗ್ಯ ವಿಚಾರಿಸುತ್ತಲೇ ಇದ್ದರು. ಆಟಲ್‌ಜಿ ಬಳಿಗೆ ಯಾರನ್ನೂ ಹೋಗಲು ಬಿಡುತ್ತಿರಲಿಲ್ಲ.
ಅಟಲ್‌ಜಿ ಭೀಷ್ಮ ಪಿತಾಮಹರಂತೆ ಇಚ್ಛಾಮರಣಿ. ಇಡೀ ದೇಶ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಮಿಂದೆದ್ದ ಬಳಿಕ, ಆಗಸ್ಟ್ 16ರಂದು ಅವರ ಆರೋಗ್ಯ ಮಧ್ಯಾಹ್ನ 3ರ ವೇಳೆಗೆ ತುಂಬಾ ಕ್ಷೀಣಿಸಿತು. ಇನ್ನು ಚೇತರಿಕೆ ಕಷ್ಟವೆಂದು ಡಾ. ಗುಲೇರಿಯಾ ನನ್ನ ಬಳಿ ಹೇಳಿದರು. ನನಗೆ ಐಸಿಯು ಒಳಗೆ ಹೋಗಲು ಅವರು ಅನುಮತಿ ನೀಡಿದರು. ಒಳಗೆ ಹೋಗಿ, ಅವರ ಕಾಲಿಗೆರಗಿ ಕೈಮುಗಿದು ಹೊರಬಂದೆ. ಸಂಜೆ 5.05ಕ್ಕೆ ಅವರ ಉಸಿರು ಸ್ತಬ್ದವಾಯಿತು.
50 ವರ್ಷಗಳ ದೀರ್ಘಕಾಲದ ಅಟಲ್‌ಜಿ ಜೊತೆಗಿನ ನನ್ನ ನಂಟಿನ ಕೊಂಡಿ ಕೊನೆಗೂ ಕಳಚಿಬಿತ್ತು.