ಇಂದು ಯುಗಾದಿ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ.ಕೇಶವ ಬಲಿರಾಮ ಹೆಡಗೇವಾರ್ ಅವರ ಜಯಂತಿಯೂ ಇಂದೇ ಆಗಿದೆ. ಶ್ರೀ ಚಂದ್ರಶೇಖರ ಭಂಡಾರಿ ಅವರ ‘ಸ್ಮೃತಿ ಮಂದಾರ’ ಕೃತಿಯಿಂದ ಡಾ.ಕೇಶವ ಬಲರಾಮ ಹೆಡಗೇವಾರ್ ಅವರ ಜೀವನದ ಕುರಿತು ಆಯ್ದ ಕೆಲವು ಘಟನೆಗಳನ್ನು ಇಲ್ಲಿವೆ.
ದಾಸ್ಯದ ಮಿಠಾಯಿ
ಅಂದು ಜೂನ್ 22, 1897. ಇಂಗ್ಲೆಂಡಿನ ಮಹಾರಾಣಿ ವಿಕ್ಟೋರಿಯಾ ಅವರ ರಾಜ್ಯಾರೋಹಣದ ವಜ್ರ ಮಹೋತ್ಸವ. ಆಗ ದೇಶವನ್ನಾಳುತ್ತಿದ್ದ ಆಂಗ್ಲ ಸರಕಾರದಿಂದ ಉತ್ಸವದ ಆಚರಣೆಗೆ ತುಂಬ ಸಂಭ್ರಮದ ವ್ಯವಸ್ಥೆ. ಊರೂರುಗಳಲ್ಲಿ ಸಭೆ, ಸಮಾರಂಭ, ಮೆರವಣಿಗೆಗಳು, ಶಾಲಾಮಕ್ಕಳಿಗೆ ಮಿಠಾಯಿ ವಿತರಣೆ.
ಕೇಶವ ಆಗ ಇನ್ನೂ ಎಂಟು ವ?ದ ಬಾಲಕ. ಶಾಲೆಯಲ್ಲಿ ಅವನಿಗೂ ಮಿಠಾಯಿ ದೊರಕಿತು. ಮಿಠಾಯಿ ಕೈಗೆ ಬಂದಂತೆಯೇ ಆತನ ಮಿಕ್ಕ ಸಹಪಾಠಿಗಳೆಲ್ಲ ಚಪ್ಪರಿಸಿ ತಿಂದರು. ಆದರೆ ಕೇಶವನೊಬ್ಬನೇ ತುಂಬ ಗಂಭೀರನಾಗಿದ್ದ. ಕೈಗೆ ಬಂದ ಮಿಠಾಯಿಯನ್ನು ಆತ ತಿನ್ನಲಿಲ್ಲ. ಮನೆಗೆ ತಂದು ಕಸದ ಬುಟ್ಟಿಯಲ್ಲಿ ಎಸೆದ.
ಮಿಕ್ಕ ಬಾಲಕರೆಲ್ಲರೂ ಕುಣಿದು ಕುಪ್ಪಳಿಸುತ್ತಿದ್ದಾಗ ಕೇಶವನೊಬ್ಬನೇ ಗಂಭೀರವೇಕೆ? ಏನಾಗಿರಬಹುದು? ಅಣ್ಣ ಮಹಾದೇವನಿಗೆ ಅದೊಂದು ಒಗಟಾಯಿತು. “ಯಾಕೋ ಕೇಶವಾ, ನಿನಗೆ ಮಿಠಾಯಿ ಸಿಗಲಿಲ್ಲವೇ?” – ಅಣ್ಣ ನೇರವಾಗಿಯೇ ಕೇಳಿದ.
ಸಿಕ್ಕು ಆದರೆ ನನಗದು ಬೇಡ. ಅದನ್ನು ತಿನ್ನಬಾರದು.” – ಕೇಶವ ಸಹಜವಾಗಿಯೇ ಉತ್ತರಿಸಿದ.
“ಯಾಕೆ? ಏನು ತಪ್ಪು?” – ಅಣ್ಣನ ಪ್ರಶ್ನೆಯಲ್ಲಿ ಆಶ್ಚರ್ಯ ಸೇರಿತ್ತು.
“ನಮ್ಮ ಭೋಂಸ್ಥೆ ಅವರ ರಾಜ್ಯವನ್ನು ಅನ್ಯಾಯದಿಂದ ಆಳುವವರ ಸಮಾರಂಭದಲ್ಲಿ ನಾನೇಕೆ ಮಿಠಾಯಿ ತಿನ್ನಲಿ? ಅದರಲ್ಲಿ ಏನಿದೆ ಸಂತೋ??” – ಮುಗ್ಧ ಬಾಲಕನಿಂದ ಉತ್ತರ ಸಿಡಿಲಿನಂತೆ ಅಪ್ಪಳಿಸಿತು.
ಕೇಶವನ ಬಾಲಮನದಲ್ಲಿ ತುಡಿಯುತ್ತಿದ್ದ ಭಾವನೆಗಳಿಗೆ ಸಾಕ್ಷಿ ಹೇಳುತ್ತಿತ್ತು -ಕಸದ ಬುಟ್ಟಿಯಲ್ಲಿನ ಮಿಠಾಯಿ.
ಗುಲಾಮಗಿರಿಯ ದೀಪಾವಳಿ ಬೇಡ
ಇಸವಿ 1901, ಏಳನೆಯ ಎಡ್ವರ್ಡ ಅವರ ರಾಜ್ಯಾರೋಹಣದ ಸಂದರ್ಭ. ಗುಲಾಮ ರಾಷ್ಟ್ರ ಭಾರತದ ಮೇಲೆ ತಮ್ಮ ಆಳ್ವಿಕೆಯ ದರ್ಪದ ಮುದ್ರೆ ಬಲವಾಗಿ ಒತ್ತಬೇಕೆಂದು ಆಂಗ್ಲ ಸರಕಾರದ ಭಾರೀ ಪ್ರಯತ್ನ. ಅದಕ್ಕಾಗಿ ನಾಗಪುರದ ’ಎಂಪ್ರೆಸ್ ಮಿಲ್ಸ್’ ಗಿರಣಿಯ ಮಾಲಿಕರಿಂದ ದೀಪಾವಳಿಯಂತಹ ಹಬ್ಬದ ಏರ್ಪಾಡು. ರಾಜ್ಯಾರೋಹಣದಂದು ರಾತ್ರಿ ಕಣ್ಣನ ಸೆಳೆಯುವಂತಹ ಬಿರುಸುಬಾಣಗಳ ಕಾರ್ಯಕ್ರಮ.
ಕೇಶವನ ವಯಸ್ಸು ಆಗ ಕೇವಲ ಹನ್ನೆರಡು. ಆತನ ಒಡನಾಡಿಗಳಿಗೆಲ್ಲ ಅಂದು ರಾತ್ರಿಯ ಕಾರ್ಯಕ್ರಮ ಕಾಣಲು ತುಂಬ ತವಕ. ಗುಂಪುಗೂಡಿ ಹೊರಟಿದ್ದರು. ಕೇಶವನ ಮನೆ ಅಲ್ಲಿಗೆ ಸಮೀಪವೇ. ಆದರೆ ಆತ ಪೂರಾ ನಿರಾಸಕ್ತ. ಮನೆಯಿಂದ ಹೊರಗೆ ಕಾಲಿಡಲೇ ಇಲ್ಲ. “ವಿದೇಶಿರಾಜನ ರಾಜ್ಯಾರೋಹಣ ನಾವು ಆಚರಿಸುವುದೇ? ಛೀ, ತೀರ ನಾಚಿಕೆಗೇಡು. ನಾನಂತೂ ಬರಲಾರೆ” – ತನ್ನ ಮನದ ಒಳಗುದಿಯನ್ನು ಕೇಶವ ಮುಚ್ಚುಮರೆಯಿಲ್ಲದೆ ತಿಳಿಸಿದ. ಆತ ಅಂದು ರಾತ್ರಿ ಮನೆಯಲ್ಲೆ ಉಳಿದ. ದೇಶಭಕ್ತಿ ಎನ್ನುವುದು ಕೇಶವನಿಗೆ ಹುಟ್ಟಿನಿಂದಲೇ ಬೆಳೆದು ಬಂದ ಗುಣ; ಪುಸ್ತಕದಿಂದ ಕಲಿತ ಪಾಠವಲ್ಲ.
ಸೀತಾಬರ್ಡಿ ಗೆಲ್ಲೋಣ
ಬಾಲ್ಯದಿಂದಲೂ ಕೇಶವನಿಗೆ ಛತ್ರಪತಿ ಶಿವಾಜಿಯ ಕತೆ ಎಂದರೆ ಸ್ಫೂರ್ತಿಯ ಸೆಲೆ. ದೇಶದಲ್ಲಿ ಪರಕೀಯರ ಆಳ್ವಿಕೆಯಿರುವುದು ನೆನಪಾದಾಗಲೆಲ್ಲ ಶಿವಾಜಿಯಂತೆಯೇ ಆತನ ಬಾಲಮನದಲ್ಲೂ ಅಸಹ್ಯ ತಳಮಳ ಉಂಟಾಗುತ್ತಿತ್ತು. ಸಹಪಾಠಿಗಳು ಒಂದುಗೂಡಿ ಬಂದಾಗ ಅವರು ಸಾಮಾನ್ಯವಾಗಿ ನಡೆಸುತ್ತಿದ್ದ ಚರ್ಚೆ, ಪರಕೀಯರನ್ನು ದೇಶದಿಂದ ಓಡಿಸುವುದು ಹೇಗೆ ಎಂಬ ಬಗ್ಗೆ ಮಾತ್ರ. ಕೇಶವ ಹಲವು ವಿಧ ಮಾರ್ಗಗಳನ್ನು ಹೇಳುತಿದ್ದ.
ಒಮ್ಮೆ ಅವನಿಗೊಂದು ಯೋಚನೆ ಮಿಂಚಿತು. “ಶಿವಛತಪತಿ ತನ್ನ ಹದಿಮೂರರ ಎಳೆ ಹರೆಯದಲ್ಲೆ ತೋರಣಗಡವನ್ನು ಗೆದ್ದು ಹಿಂದವಿ ಸ್ವರಾಜ್ಯಕ್ಕೆ ತೋರಣ ಕಟ್ಟಿದರಲ್ಲವೇ? ನಾವೂ ಒಂದು ಕೋಟೆಯನ್ನು ಏಕೆ ಗೆಲ್ಲಬಾರದು? ನಾಗಪುರದಲ್ಲಿನ ಸೀತಾಬರ್ರ್ಇ ಕೋಟೆಯ ಮೇಲೆ ಆಳರಸರ ’ಯೂನಿಯನ ಚಾಕ್’ ಸದಾ ಹಾರುತ್ತಿದೆ. ಅದನ್ನು ಕೆಳಗಿಳಿಸಿ. ಅಲ್ಲಿ ಭಗವಾಧ್ವಜ ಹಾರಿಸೋಣ. ಆ ಕೋಟೆಯನ್ನು ಗೆಲ್ಲೋಣ” ಕೇಶವ ತನ್ನ ಮನದ ಯೋಜನೆಯನ್ನು ಗೆಳೆಯರೊಂದಿಗೆ ಹಂಚಿಕೊಂಡ.
ಕಲ್ಪನೆಗೆ ಎಲ್ಲರೂ ಒಪಿ ತಲೆದೂಗಿದರು. ಆದರೆ ಕೋಟೆಯನ್ನು ಗೆಲ್ಲುವ ಬಗೆ ಹೇಗೆ ಸಾಧ್ಯ? ಕೇವಲ ಹತ್ತು ಹದಿನೈದು ಹುಡುಗರ? ಧಾಳಿ ಮಾಡುವುದು ಸಾಧ್ಯವೇ? ಹೇಗೆ? ಅಲ್ಲಿ ಸದಾ ಕಾವಲು ಪಹರೆ ಇದೆಯಲ್ಲ… ಕೋಟೆಯನ್ನು ತಲುಪುವುದಾದರೂ ಅದಕ್ಕಾಗಿ ಏನು ಮಾಡೋಣ ? ನೆಲದಾಳದಲ್ಲಿ ಸುರಂಗ ಕೊರೆದು ಗುಟ್ಟಾಗಿ ಕೋಟೆಯನ್ನು ಪ್ರವೇಶ ಮಾಡುವುದೊಂದೇ ಅವರಿಗೆ ಹೊಳೆದ ಉಪಾಯ. ಗೆಳೆಯರೆಲ್ಲರಿಗೂ ಅದೇ ಸರಿಯಾದ ಮಾರ್ಗ ಎನಿಸಿತು.
ಸರಿ, ಮರುದಿನದಿಂದಲೇ ಕಾರ್ಯ ಶುರು. ಅವರೆಲ್ಲರೂ ಪಾಠ ಓದಲು ಸೇರುತ್ತಿದ್ದ ವಝ ಮಾಸ್ತರರ ಮನೆಯ ಕೋಣೆಯಲ್ಲಿ ಬಂದು ಸೇರಿದರು. ಬಾಗಿಲು ಮುಚ್ಚಿ ಹಾರೆ ಪಿಕಾಸಿಗಳಿಂದ ಅಗೆತ ಆರಂಭವಾಯಿತು. ಮೂರು ದಿನಗಳು ಕಳೆದವು. ತುಂಬ ಹೊತ್ತು ಕೋಣೆಯ ಬಾಗಿಲು ಮುಚ್ಚಿರುವುದು ಕಂಡು ವಝ ಮಾಸ್ತರರಿಗೆ ಏನೋ ಸಂಶಯ. ಪ್ರತ್ಯಕ್ಷ ನೋಡೋಣವೆಂದು ಅವರು ಕೋಣೆಯೊಳಗೆ ಬಂದರು. ನೋಡುವುದೇನು ?
ಒಂದು ಕಡೆ ಮಣ್ಣಿನ ರಾಶಿ. ಇನ್ನೊಂದು ಕಡೆ ಕೆಲವು ಅಡಿಗಳ? ಆಳದ ಹೊಂಡ. ಮಾಸ್ತರರ ಕೈಗಳಿಂದ ಇನ್ನು ಛಡಿಯೇಟು ಖಚಿತ ಎಂದು ಎಳೆಯರಿಗೆ ಅನಿಸಿತ್ತು. ಇಡೀ ಗುಂಪು ಒಂದು ಮೂಲೆ ಸೇರಿಕೊಂಡಿತ್ತು.
“ಏನಿದು? ಏನು ಮಾಡುತಿದ್ದಿರಾ? ಕೋಣೆಯೊಳಗಿನ ಸ್ಥಿತಿ ಕಂಡು ಮಾಸ್ತರರ ಪ್ರಶ್ನೆ ಗುಡುಗಿತು.
ಕೇಶವ ಬಾಲಸಹಜ ಮುಗ್ಧತೆಯಿಂದ ತನ್ನ ಯೋಜನೆಯನ್ನು ವಿವರಿಸಿದ.
ಇಂತಹ ನಿರುಪಯೋಗಿ ಪ್ರಯತ್ನಗಳಿಂದ ಏನನ್ನೂ ಸಾಧಿಸಲಾಗದು ಎಂದು ಮಾಸ್ತರರು ಆ ಬಾಲಕರಿಗೆ ಮೈತಡವಿ ಸಮಾಧಾನಗೊಳಿಸಿದರು. ಕೇಶವನ ಬಾಲ್ಯದ ಆಟಗಳಲ್ಲಿ ಉಕ್ಕಿ ಹರಿಯುತಿದ್ದ ದೇಶಭಕ್ತಿಯನ್ನು ಕಂಡು ವಝ ಮಾಸ್ತರರಿಗೆ ಆತನ ಬಗ್ಗೆ ತುಂಬ ಅಭಿಮಾನ. ಮುಂದೆ ಅವನು ದೊಡ್ಡವನಾಗಿ ಹೆಚ್ಚಿನ ಓದಿಗಾಗಿ ಕಲ್ಕತ್ತಾಗೆ ಹೋದ ಮೇಲೂ ಈ ಪ್ರಸಂಗವನ್ನು ಆಗಾಗ ಸ್ಮರಿಸಿ ಅವರು ಮಿಕ್ಕವರಿಗೆ ಅದೇ ಅಭಿಮಾನದಿಂದ ಹೇಳುತಿದ್ದುದುಂಟು.
ಚಳವಳಿಯ ಅಗ್ರಣಿ
ಕೇಶವ ಓದುತಿದ್ದುದು ನಾಗಪುರದ ನೀಲಸಿಟಿ ಹೈಸ್ಕೂಲ್ನಲ್ಲಿ. ಸರಕಾರದ ಕೃಪೆಯಲ್ಲಿ ನಡೆಯುತ್ತಿದ್ದ ಶಾಲೆಯಾಗಿದ್ದರೂ ಅಲ್ಲಿನ ಅಧ್ಯಾಪಕರಲ್ಲಿ ಹೆಚ್ಚಿನವರು ರಾಷ್ಟ್ರೀಯ ಮನೋವೃತ್ತಿಯವರು. ಪಠ್ಯ ವಿಷಯಗಳ ಜೊತೆಯಲ್ಲಿ ತಮ್ಮ ಸಾದಾ ಉಡುಪು, ಸರಳ ಜೀವನ, ಸ್ವದೇಶಿವಸ್ತುಗಳ ಬಳಕೆ ಇತ್ಯಾದಿಗಳಿಂದ ವಿದ್ಯಾರ್ಥಿಗಳಲ್ಲೂ ಅದೇ ಮನೋವೃತ್ತಿಯನ್ನು ರೂಪಿಸುತ್ತಿದ್ದವರು. ಶ್ರೀ ಜನಾರ್ದನ ವಿನಾಯಕ ಓಕ್ ಆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದವರು.
ಇಸವಿ 1908, ಕೇಶವ ಆಗ ಹತ್ತನೆ ತರಗತಿಯ ವಿದ್ಯಾರ್ಥಿ. ವಯಸ್ಸು ಹತ್ತೊಂಭತ್ತು. ಆಗ ಸ್ವಾತಂತ್ರ್ಯ ಹೋರಾಟದ ಕಾವು ತುಂಬ ತೀವ್ರಗೊಂಡಿದ್ದ ದಿನಗಳು. ’ವಂದೇಮಾತರಂ’ ನ ಉಚ್ಚಾರವೂ ಸರಕಾರದ ಪಾಲಿಗೆ ಮೈಮೇಲೆ ಹಾವು ಹರಿದಂತೆ. ಸರಕಾರವು ಅವೆರಡು ಶಬ್ದಗಳ ಮೇಲೆ ನಿಷೇಧ ಹೇರಿತ್ತು. ಸಭೆ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಹೆಸರುಗಳನ್ನು ತಿಳಿಸಬೇಕೆಂದು ಒಂದು ಪರಿಪತ್ರಕವನ್ನೇ ಹೊರಡಿಸಿತು. ರಿಸ್ಥೆ ಸರ್ಕುಲರ್ ಎಂಬ ಕುಖ್ಯಾತ ಪತ್ರಕ ಅದು.
ನೀಲಸಿಟಿ ಹೈಸ್ಕೂಲ್ನಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಈ ಪರಿಪತ್ರಕವನ್ನು ಓದಿ ವಿವರಿಸಿದರು. ಆದರೆ ಅದರ ಪ್ರತಿಕ್ರಿಯೆ ತದ್ವಿರುದ್ಧವೇ ಆಯಿತು. “ಶಾಲೆಯ ಹೊರಗಿನ ನಮ್ಮ ಚಟುವಟಿಕೆಗಳ ಮೇಲೆ ಸರಕಾರದ್ದೇನು ಜಬರದಸ್ತಿ? ನಾವೇ ಅವರಿಗೊಂದು ಪಾಠ ಕಲಿಸೋಣ” – ವಿದ್ಯಾರ್ಥಿಗಳೆಲ್ಲ ಕೂಡಿ ನಿರ್ಧರಿಸಿದರು.
ಕೆಲವೇ ದಿನಗಳಲ್ಲಿ ಶಾಲೆಯ ನಿರೀಕ್ಷಣೆ ಆಗುವುದರಲ್ಲಿತ್ತು. ಅದೇ ಸಂದರ್ಭದಲ್ಲಿ ರಿಸ್ತೆ ಪರಿಪತ್ರಕದ ವಿರುದ್ಧ ಪ್ರದರ್ಶನ ನಡೆಸಲು ಕೇಶವನ ನಾಯಕತ್ವದಲ್ಲಿ ವಿದ್ಯಾರ್ಥಿ ಸಮುದಾಯ ನಿರ್ಧರಿಸಿತು. ನಿರೀಕ್ಷಕರು ಯಾವುದೇ ಕೋಣೆಗೆ ಬಂದರೂ ಅವರನ್ನು ’ವಂದೇ ಮಾತರಂ’ ನೊಂದಿಗೆ ಸ್ವಾಗತಿಸಬೇಕೆಂಬುದು ಈ ಯೋಜನೆಯ ವಿಶೇ?ತೆ. ಜೊತೆಯಲ್ಲಿ ಮುಂದೆ ವಿಚಾರಣೆಯಾರಂಭಗೊಂಡಾಗ ನಾಯಕನ ಹೆಸರು ಯಾರೂ ತಿಳಿಸಬಾರದು ಎನ್ನುವುದು ಮುಖ್ಯ ಸೂತ್ರ. ಅಧ್ಯಾಪಕರಾರಿಗೂ ಈ ಯೋಜನೆಯ ಸುಳಿವು ಸಹ ಇರಲಿಲ್ಲ.
ನಿಶ್ಚಿತ ದಿನ ಬಂತು. ಮುಖ್ಯೋಪಾಧ್ಯಾಯ ಶ್ರೀ ಓಕ್ ಅವರೊಂದಿಗೆ ನಿರೀಕ್ಷಕರು ಮೊದಲು ಮ್ಯಾಟ್ರಿಕ್ ತರಗತಿಯ ಕೋಣೆಗೆ ಬಂದರು. ಬರುತಿದ್ದಂತೆಯೇ ವಿದ್ಯಾರ್ಥಿಗಳೆಲ್ಲ ಎದ್ದು ನಿಂತು ’ವಂದೇ ಮಾತರಂ’ ಘೋಷಣೆಯೊಂದಿಗೆ ಸ್ವಾಗತಿಸಿದರು. ನಿರೀಕ್ಷಣೆಗೆ ಬಂದ ಮುಸಲ್ಮಾನ ಅಧಿಕಾರಿಗೆ ವಿದ್ಯುತ್ ಆಘಾತವಾದಂತಹ ಅನುಭವ, ಮುಖ್ಯೋಪಾಧ್ಯಾಯರಿಗೂ ಗಾಬರಿ. ನಿರೀಕ್ಷಕರು ತರಗತಿಯೊಳಗೆ ಕಾಲಿಡದೆ ಅಲ್ಲಿಂದಲೇ ಬೇರೊಂದು ಕೊಟಡಿಗೆ ತೆರಳಿದರು. ಅಲ್ಲೂ ಅದೇ ಸ್ವಾಗತ – ಇನ್ನಷ್ಟು ಎತ್ತರದ ಸ್ವರದಲ್ಲಿ.
ನಿರೀಕ್ಷಣೆ ಅಲ್ಲಿಗೆ ಮುಕ್ತಾಯ. ನಿರೀಕ್ಷಕರು ಕಿಡಿಕಿಡಿಗೊಂಡಿದ್ದರು. “ಈ ಪಿತೂರಿಯ ಹಿಂದೆ ಕೈವಾಡ ಯಾರದು? ಹುಡುಕಿ” – ಅವರು ಆಜ್ಞೆ ಹೊರಡಿಸಿದರು. ಆದರೆ ಮಾಹಿತಿ ಯಾರಿಂದಲೂ ಸಿಗಲೊಲ್ಲದು. ಹೆಸರು ಹೇಳದೆ ಹೋದಲ್ಲಿ ಎರಡೂ ತರಗತಿಗಳ ಯಾವನೇ ವಿದ್ಯಾರ್ಥಿಗೆ ಶಾಲೆಯೊಳಗೆ ಪ್ರವೇಶ ಸಿಗದು ಎಂಬ ಬೆದರಿಕೆಯನ್ನು ಒಡ್ಡಲಾಯಿತು. ಎಲ್ಲ ವಿದ್ಯಾರ್ಥಿಗಳೂ ’ವಂದೇ ಮಾತರಂ’ ಘೋ?ಣೆ ಯೊಂದಿಗೆ ಶಾಲೆಯಿಂದ ಹೊರನಡೆದರು.
ಕೇಶವ ಮತ್ತು ಅವನ ಎಲ್ಲ ಸಹಕಾರಿಗಳಿಗೆ ಡಾ. ಮುಂಜೆ ಮತ್ತು ’ದೇಶಭಕ್ತ’ ಪತ್ರಿಕೆಯ ಸಂಪಾದಕ ಶ್ರೀ ಅಚ್ಯುತ ಬಲವಂತ ಕೋಲ್ಡಟಕರ ಅವರಂತಹ ಹಿರಿಯರ ಪೂರ್ಣ ಆಶೀರ್ವಾದವಿತ್ತು. ಮರುದಿನದಿಂದ ತರಗತಿಗಳಿಗೆ ಬಹಿ?ರ ಹಾಕಿ ರಸ್ತೆ ರಸ್ತೆಗಳಲ್ಲಿ ಧರಣಿ ಆರಂಭವಾಯಿತು. ವಿದ್ಯಾರ್ಥಿಗಳ ಐಕ್ಯವನ್ನು ಕಾಪಾಡುವ ಸಲುವಾಗಿ ಕೇಶವ ಮನೆಮನೆಗಳಿಗೂ ಹೋಗಿ ವೈಯಕ್ತಿಕ ಸಂಪರ್ಕ ನಡೆಸುತ್ತಿದ್ದ. ಮನೆಯ ಹಿರಿಯರ ಒತ್ತಡಕ್ಕೊಳಗಾಗಿ ಕೆಲವು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಯತ್ನಿಸಿದಾಗ ಅಂತಹವರಿಗೆ ಬಳೆ, ಕುಂಕುಮ ಇತ್ಯಾದಿ ಉಡುಗೊರೆಯಾಗಿ ಬಂದವು. ಹೀಗಾಗಿ ಅವರೂ ಬಹಿಷ್ಕಾರ ಮುಂದುವರಿಸಿದರು. ಸುಮಾರು ಎರಡು ತಿಂಗಳ ಕಾಲ ಈ ಚಳವಳಿ ಯಶಸ್ವಿಯಾಗಿ ನಡೆಯಿತು.
ಕೊನೆಯಲ್ಲಿ ಒಂದು ಸಣ್ಣ ಒಪ್ಪಂದವಾಯಿತು. ಮನೆಯ ಹಿರಿಯರ ಮುಂದೆ ಪ್ರತಿಯೊಬ್ಬ ವಿದ್ಯಾರ್ಥಿಗೂ ನೀನು ತಪ್ಪು ಮಾಡಿರುವೆಯಲ್ಲವೇ?” ಎಂಬ ಪ್ರಶ್ನೆ ಕೇಳಲಾಗುವುದು. ಆಗ ಆತ “ಹೌದು” ಎನ್ನುವಂತೆ ಕತ್ತು ಆಡಿಸಬೇಕು. ಅಂತಹವರಿಗೆ ಮಾತ್ರ ತರಗತಿಗೆ ಬರಲು ಅನುಮತಿ. ವಿದ್ಯಾರ್ಥಿಗಳ ಒಂದು ವ?ದ ಶಿಕ್ಷಣ ವ್ಯರ್ಥವಾಗಬಾರದೆಂಬುದಕ್ಕಾಗಿ ಮಾಡಲಾಗಿದ್ದ ಈ ಕಾಜಿನ್ಯಾಯದಿಂದಾಗಿ ಅಂತೂ ಚಳವಳಿ ಕೊನೆಗೊಂಡಿತು.
ಆದರೆ ಕೇಶವ ಅದಕ್ಕೂ ತಲೆಬಾಗಲಿಲ್ಲ. ಅವನು ಶಾಲೆಯಿಂದ ವಜಾ ಆದ.
ಮಾಡಿಯೂ ಮಾಡದಂತೆ
ಕೇಶವನಿಗೆ ನೀಲಸಿಟಿ ಹೈಸ್ಕೂಲ್ನ ಶಿಕ್ಷಣ ಇತಿಶೀಗೊಂಡಿತು. ಮುಂದೇನು? ಈ ಪ್ರಶ್ನೆ, ಶಾಲಾ ನಿರೀಕ್ಷೆಯ ಸಂದರ್ಭದಲ್ಲಿ ’ವಂದೇ ಮಾತರಂ’ ಹೇಳಿದ ಹಗರಣದಿಂದಾಗಿ ಅವನ ಹಿರಿಯರೆಲ್ಲರನ್ನು ಕಾಡುತ್ತಿದ್ದ ಸಂದರ್ಭ, ಚಿಕ್ಕಪ್ಪ ಆಬಾಜಿ ಅವರ ಸಲಹೆ ಪಡೆಯಲು ಕೇಶವ ರಾಮಪಾಯಲಿಗೆ ಬಂದಿದ್ದ.
ಕೇಶವನ ದೇಶಭಕ್ತಿ ಕಂಡು ಆಬಾಜಿ ಅವರು ತುಂಬ ಪ್ರಸನ್ನರಾಗಿದ್ದರು. ಆದರೆ ಅವನ ಭವಿಷ್ಯದ ಗತಿಯೇನು? ಈ ಚಿಂತೆಯೂ ಅವರನ್ನು ಕಾಡುತಿತ್ತು. ಅದೇ ದಿನಗಳಲ್ಲಿ ರಾಮಪಾಯಲಿಗೆ ವ್ಯಾಖ್ಯಾನವೊಂದರ ಸಲುವಾಗಿ ಬಂದಿದ್ದ ಲೋಕನಾಯಕ ಆಣೆ ಅವರೊಂದಿಗೆ ಚರ್ಚಿಸಿ ಯವತಮಾಳದ ರಾಷ್ಟ್ರೀಯ ಶಾಲೆಯಲ್ಲಿ ಕೇಶವನ ಪ್ರವೇಶಕ್ಕಾಗಿ ಅವರು ಅನುಮತಿ ಗಳಿಸಿದರು.
ಇಂತಹ ಸ್ಥಿತಿಯಲ್ಲೂ ಕೇಶವ ಮಾತ್ರ ನಿಶ್ಚಿಂತನಾಗಿಯೇ ಇದ್ದ. ಶಿಕ್ಷಣದ ವ್ಯವಸ್ಥೆಯ ಹೊಣೆ ಹಿರಿಯರಿಗೆ ಬಿಟ್ಟು ಆತ ತನ್ನ ಚಟುವಟಿಕೆಗಳಲ್ಲಿ ತಲ್ಲೀನನಾಗಿದ್ದ. ಒಂದು ರಾತ್ರಿ ಸುಮಾರು 9 ಗಂಟೆಗೆ ರಾಮಪಾಯಲಿಯ ಪೊಲೀಸ್ ಚೌಕಿಯ ಮೇಲೆ ತೆಂಗಿನ ಕರಟದಿಂದ ತಯಾರಾದ ಬಾಂಬ್ ಒಂದು ಸ್ಫೋಟಿಸಿತು. ತುಂಬ ಚಾಕಚಕ್ಯತೆಯಿಂದ ನಡೆಸಲಾಗಿದ್ದ ಕಾರ್ಯಾಚರಣೆ ಅದು. ಅನೇಕ ದಿನಗಳವರೆಗೆ ಪೋಲಿಸರಿಂದ ತಪಾಸಣೆ ನಡೆದರೂ ಅದು ಯಾರ ಕೈವಾಡ ಎಂದು ಕೊನೆಗೂ ತಿಳಿಯಲಿಲ್ಲ.
ತನ್ನ ಯೋಜನೆಗನುಸಾರವಾಗಿ ಕೆಲಸ ಪೂರೈಸಿ ಕೇಶವ ನಿರಾತಂಕವಾಗಿಯೇ ನಾಗಪುರಕ್ಕೆ ವಾಪಸಾದ.
’ವಂದೇ ಮಾತರಂ’ ಚಳಿವಳಿಯಿಂದಾಗಿ ಕೇಶವನ ಶಿಕ್ಷಣ ಅನಿಶ್ಚಿತತೆಯಲ್ಲಿದ್ದ ದಿನಗಳು. ಒಮ್ಮೆ ಅವನು ಭಂಡಾರಾದಲ್ಲಿನ ತನ್ನ ಸಂಬಂಧಿಕರೊಬ್ಬರ – ಶ್ರೀ ಜಕಾತದಾರ ಮನೆಗೆ ಹೋಗಿದ್ದ. ಅದೇ ಸಂದರ್ಭದಲ್ಲಿ ಅವನ ಇನ್ನೋರ್ವ ಸಂಬಂಧಿಕರು – ಶ್ರೀ ಅಮೃತರಾವ್ ಬಂಬಾವಾಲೆ ಎಂಬವರು ಸಹ ಇನ್ನಾವುದೋ ಕಾರ್ಯನಿಮಿತ್ತ ಅಲ್ಲಿಗೆ ಬಂದಿದ್ದರು. ಒಂದು ಉನ್ನತ ಸರಕಾರಿ ಉದ್ಯೋಗದಲ್ಲಿ ಇದ್ದವರು ಅವರು. ಮಾತುಕತೆಯ ನಡುವೆ ಜಕಾತದಾರರು ಅಮೃತರಾಯರಿಗೆ ಕೇಶವನ ಪರಿಚಯ ಮಾಡಿಸಿದರು. ಅದರಲ್ಲಿ ’ ಈ ಹುಡುಗನೇನೋ ಬಲು ಚುರುಕು. ಆದರೆ ಓದಿಗಿಂತ ಚಳವಳಿಗಳಲ್ಲಿ ಹೆಚ್ಚು ಆಸಕ್ತಿ. ಓದಿನ ಕಡೆ ಲಕ್ಷ್ಯ ಕಡಿಮೆ’ ಎಂಬ ಮಾತನ್ನೂ ಸೇರಿಸಿದರು.
ಅಮೃತರಾಯರು ಸರಕಾರಿ ಅಧಿಕಾರಿಯ ಠೀವಿಯಲ್ಲಿ ಕೇಶವನ ಬೆನ್ನು ನೇವರಿಸುತ್ತ “ನೋಡಪ್ಪ, ನೀನಿನ್ನೂ ಚಿಕ್ಕವನು. ವಿದ್ಯಾರ್ಥಿಯಾಗಿದ್ದಿಯಾ. ಅನಗತ್ಯದ ಆಂದೋಲನಗಳಲ್ಲಿ ತಲೆ ಹಾಕಿ ಭವಿ?ವನ್ನು ಯಾಕೆ ಹಾಳು ಮಾಡಿಕೊಳ್ಳುತ್ತಿಯಾ? ಅದೆಲ್ಲ ಮುಂದೆ ದೊಡ್ಡವನಾದ ಮೇಲೆ ಮಾಡಬೇಕಾದಂತಹದು. ವಿದ್ಯಾಭ್ಯಾಸದಲ್ಲಿ ತೊಡಗಿರುವಾಗ ಕೇವಲ ಓದುವಿಕೆಯೊಂದೇ ವಿದ್ಯಾರ್ಥಿಗೆ ಶೋಭೆ” ಎಂದು ಉಪದೇಶ ಮಾಡಿದರು.
ಆಗ ಕೇಶವ. ಸರಿ, ನೀವು ಹೇಳಿದಂತೆಯೇ ಮಾಡುವೆ. ಕೇವಲ ಕಲಿಯುವಿಕೆ ಯೊಂದನ್ನೇ ಮಾಡುವೆ. ಚಳವಳಿಯಲ್ಲಿ ತಲೆ ಹಾಕುವುದಿಲ್ಲ. ಆದರೆ ದೇಶವನ್ನು ಸ್ವತಂತ್ರಗೊಳಿಸಲು ಯಾರಾದರೊಬ್ಬರು ಕೆಲಸ ಮಾಡಲೇಬೇಕಲ್ಲ. ನೀವೀಗ ವಿದ್ಯಾರ್ಥಿಯಲ್ಲ. ದೊಡ್ಡವರೂ ಆಗಿದ್ದೀರಿ. ದೇಶದ ಸ್ವಾತಂತ್ರ್ಯಕ್ಕಾಗಿ ನೀವು ಚಳವಳಿಯಲ್ಲಿ ತೊಡಗಿಕೊಳ್ಳಿ. ಆಗ ನಾನು ಕೇವಲ ವಿದ್ಯಾಭ್ಯಾಸವನ್ನ? ಮಾಡುವೆ” – ತುಂಬ ಸ್ಪ?ವಾಗಿ, ಆದರೆ ಅ? ವಿನಮ್ರನಾಗಿ ಉತ್ತರಿಸಿದ. ಅಮೃತರಾಯರು ಸುಸ್ತು. ತಮ್ಮ ಉಪದೇಶ ತನಗೇ ತಿರುಗುಬಾಣ ವಾಗಬಹುದೆಂದು ಅವರು ನಿರೀಕ್ಷಿಸಿರಲಿಲ್ಲ.
ಗುಪ್ತಚರ ಬೇಸ್ತು
ಆಗ ಕೇಶವರಾವ್ ಕಲ್ಕತ್ತಾದಲ್ಲಿ ವೈದ್ಯಕೀಯ ಓದುತ್ತಿದ್ದರು. ಚಳವಳಿಕೋರನೆಂಬ ಕಾರಣ ಪೋಲಿಸರಿಗೆ ಅವರ ಚಲನವಲನಗಳ ಬಗ್ಗೆ ವಿಶೇಷ ನಿಗಾ. ಕಲ್ಕತ್ತಾದಲ್ಲಿನ ಅವರ ನಿವಾಸದ ಮೇಲೂ ಗುಪ್ತಚರರಿಗೆ ಸದಾ ಹದ್ದುಗಣ್ಣು.
ಒಮ್ಮೆ ಕೇಶವರಾವ್ ನಾಗಪುರದಿಂದ ಕಲ್ಕತ್ತಾಗೆ ಹೊರಟಿದ್ದ ಪ್ರಸಂಗ. ಅವರ ಯೋಜನೆಯಂತೆ ಮೊದಲು ಜಬಲಪುರಕ್ಕೆ ಹೋಗಿ ನಂತರ ಕಲ್ಕತ್ತಾಗೆ ಪ್ರಯಾಣ ಮುಂದುವರಿಸುವಂತಹದಾಗಿತ್ತು. ನಾಗಪುರ ನಿಲ್ದಾಣದಲ್ಲೇ ಓರ್ವ ಗುಪ್ತಚರ ತನಗಾಗಿ ಕಾದಿರುವುದು ಕೇಶವರಾವ್ ಗಮನಿಸಿದರು. ಸರಿ, ತಕ್ಷಣ ಅವರ ಬುದ್ದಿ ಚುರುಕಾಯಿತು. ಕಲ್ಕತ್ತಾಗೆ ಹೊರಟಿರುವ ಇನ್ನೊಬ್ಬ ಮಿತ್ರನ ಮೂಲಕ ತನಗಾಗಿ ಜಬಲಪುರಕ್ಕೆ ಟಿಕೇಟು ಕೊಂಡುಕೊಳ್ಳುವಂತೆ ತಿಳಿಸಿದರು. ತಾವು ಕಲ್ಕತ್ತಾಗೆ ಟಿಕೇಟು ಪಡೆದು ರೈಲಿನಲ್ಲಿ ಕೂತರು. ಟಿಕೇಟ್ ಪರೀಕ್ಷಕ ಎಲ್ಲರ ಟಿಕೇಟ್ ನೋಡುತ್ತಾ, ಕೇಶವರಾಯರ ಬಳಿಯೂ ಬಂದ. ಅವರು ಕಲ್ಕತ್ತಾಗೆ ಹೊರಟಿರುವರೆಂಬ ಸುದ್ದಿಯನ್ನು ಆತ ಗುಪ್ತಚರನಿಗೆ ಮುಟ್ಟಿಸಿದ. ಗಾಡಿ ಹೊರಡುವ ವೇಳೆ ಆ ಗುಪ್ತಚರ ತಾನೂ ಅದೇ ಡಬ್ಬಿಯಲ್ಲಿ ಬಂದು ಕುಳಿತ.
ರೈಲು ಗೊಂದಿಯಾ ತಲಪಿತು. ಕೇಶವರಾವ್ ನೀರು ಕುಡಿಯುವ ನೆಪದಿಂದ ಗುಪ್ತಚರನ ಕಣ್ಣು ತಪ್ಪಿಸಿ ರೈಲಿನಿಂದ ಇಳಿದರು. ಮಿತ್ರರಿಬ್ಬರೂ ಟಿಕೇಟ್ ಬದಲಿಸಿಕೊಂಡರು. ಕೇಶವರಾವ್ ಜಬಲಪುರದ ಗಾಡಿ ಹತ್ತಿದರು. ಅವರ ಸಾಮಾನುಗಳನ್ನು ಆ ಮಿತ್ರ ಗುಟ್ಟಾಗಿ ಅವರಿಗೆ ತಲಪಿಸಿದ. ತಾನು ಕಲ್ಕತ್ತಾ ಗಾಡಿಯಲ್ಲಿ ಕುಳಿತ.
ಕಲ್ಕತ್ತೆಯ ಗಾಡಿ ಹೊರಟಿತು. ಕೇಶವರಾವ್ ಮಾತ್ರ ಕಾಣೆ. ಗುಪ್ತಚಾರನಿಗೆ ಭಾರೀ ಫಜೀತಿ. ಕೇಶವರಾವ್ ಅವರನ್ನು ಕಾಣಲಾಗದೆ Hedgewar missing ಎಂಬ ತಂತಿ ಸಮಾಚಾರ ನಾಗಪುರಕ್ಕೆ ಕಳುಹಿಸಿದ. ಕೇಶವರಾವ್ ಭೂಗತವಾದುದರಿಂದ ಪೊಲೀಸ್ ಪಡೆಯೆಲ್ಲ ಪೆಚ್ಚಾಯಿತು. ಕಲ್ಕತ್ತೆಯ ಅವರ ನಿವಾಸದ ಮೇಲೆ ಕಾವಲು ಬಿಗಿಯಾಯಿತು.
ಕೇಶವರಾವ್ ಜಬಲಪುರದಲ್ಲಿ ತಮ್ಮ ಸೋದರಮಾವನ ಮನೆಯಲ್ಲಿ ಆರಾಮವಾಗಿ 10-15 ದಿನಗಳನ್ನು ಕಳೆದು ನಂತರ ಕಲ್ಕತ್ತಾ ತಲಪಿದರು. ಅಲ್ಲಿ ಅವರನ್ನು ಕಂಡ ಆ ಗುಪ್ತಚರ ನಿಟ್ಟುಸಿರು ಬಿಟ್ಟ. ನೇರವಾಗಿ ಕೇಶವರಾವ್ ಅವರ ಬಳಿಯೇ ಬಂದು ಹೀಗೂ ಆಟ ಆಡುವುದುಂಟೇ? ನೀವಂತೂ ಮಂಗಮಯವಾಗಿ ತಪ್ಪಿಸಿಕೊಂಡಿರಿ.
ಪರಿಣಾಮವಾಗಿ ಈಗ ನನ್ನ ಪಾಡು ನೋಡಿ. ಜಮೇದಾರನಾಗಿದ್ದವನು ಈಗ ಸಾಧಾ ಕಾನಸ್ಟೇಬಲ್ ಆಗಿ ಹಿಂಬಡ್ತಿಯಾಯ್ತು” ಎಂದು ತನ್ನ ಅಳಲನ್ನು ತೋಡಿಕೊಂಡ, ಹೋರಾಟವೆನ್ನುವುದು ಸಹ ಒಂದು ಆಟವೇ. ಇದರಲ್ಲಿ ಪಳಗಿದ ಆಟಗಾರನಿಗೆ ಪ್ರತಿಯೊಂದು ಸವಾಲು ಒಂದೊಂದು ರಸನಿಮಿಷವಲ್ಲದೆ ಇನ್ನೇನು?
ಬೇಟೆಗಾರ ಬೇಟೆಯಾದಾಗ
ಕೇಶವರಾವ್ ಓರ್ವ ಅಸಾಮಾನ್ಯ ಹೋರಾಟಗಾರ ಎನ್ನುವುದನ್ನು ಆಂಗ್ಲ ಸರಕಾರ ಚೆನ್ನಾಗಿ ಗುರುತಿಸಿತ್ತು. ಅದರಿಂದಾಗಿ ಅವರ ಓಡಾಟ, ಭೇಟಿಗಳು ಇತ್ಯಾದಿ ಎಲ್ಲ ಗಮನಿಸಿ ಮಾಹಿತಿ ಸಂಗ್ರಹಿಸಲು ಶತಪ್ರಯತ್ನ ಮಾಡುತಿದ್ದವರು ಪೋಲಿಸರು. ಗುಪ್ತಚರ ಇಲಾಖೆಯಲ್ಲಿ ಇಂತಹ ’ರಾಜದ್ರೋಹಿ’ ಗಳಿಗಾಗಿಯೇ ಉಪಯೋಗಿ ಸಲಾಗುತ್ತಿದ್ದ ವಿಶೇ? ಉಪನಾಮ ’ರಾಜಕೀಯ ಗುಮಾನಿ’ (Political Suspect) ಜೊತೆಯಲ್ಲಿ ಇಂತಹ ಒಬ್ಬೊಬ್ಬರಿಗೂ ಒಂದೊಂದು ಕಮಾಂಕ. ಕೇಶವರಾವ್ ಗೆ ಕೊಡಲಾಗಿದ್ದ ಸಮಾಚಾರ ಮುಂಚಿತವಾಗಿ ತಲಪಿರುತ್ತಿತು ‘ರಾಜಕೀಯ ಗುಮಾನಿ ಕಮಾಂಕ 51. ಕೇಶವರಾವ್ ಎಲ್ಲೇ ಹೋಗಲಿ, ಆಯಾ ಊರಿನ ಪೊಲೀಸರಿಗೆ ತಂತಿ ಬರುವವನಿದ್ದಾನೆ. ನಿಗಾ ಇರಲಿ.’ ಕೇಶವರಾವ್ ಆ ಊರಿಗೆ ತಲುಪುತ್ತಿರುವಾಗಲೇ ಅಲ್ಲಿನ ನಿಲ್ದಾಣದಲ್ಲಿ ಒಬ್ಬ ಗುಪ್ತಚರ ಇವರ ದಾರಿ ಕಾಯುತಿದ್ದ. ಸರಿ, ಅಲ್ಲಿಂದ ಮುಂದೆ ಅವರು ಊರು ಬಿಡುವವರೆಗೂ ಅವನು ಅವರ ನೆರಳಿನಂತೆ.
ಒಮ್ಮೆ ಕೇಶವರಾವ್ ನಾಗಪುರದಿಂದ ಬೇರೊಂದು ಊರಿಗೆ ಹೋಗಿದ್ದರು. ನಿಲ್ದಾಣದಲ್ಲಿ ಇಳಿಯುವಾಗ ಎಂದಿನಂತೆ ಪೋಲಿಸ್ ಇನ್ಸ್ಪೆಕ್ಟರ್ ಹಾಗೂ ಗುಪ್ತಚರ ಹಾಜರ್. ಆದರೆ ಅವರಿಬ್ಬರಿಗೂ ಕೇಶವರಾವ್ ಅಪರಿಚಿತರು. ಎಲ್ಲರ ಕುರಿತಾಗಿಯೂ ಅವರಿಗೆ ಸಂಶಯದ ದೃಷ್ಟಿ; ಜೊತೆಯಲ್ಲಿ ತಮ್ಮ ಬೇಟೆ ತಪ್ಪಿ ಹೋಗಬಹುದೆಂಬ ಚಿಂತೆ ಬೇರೆ. ಅವರಿಬ್ಬರ ಪೇಚಾಟವನ್ನು ಕೇಶವರಾವ್ ಸರಿಯಾಗಿ ಗುರುತಿಸಿದರು.
ಕೊನೆಯಲ್ಲಿ ತಾವೇ ಸ್ವತಃ ಅವರ ಬಳಿ ಹೋಗಿ, “ನೀವು ಬಂದಿರುವುದು ನನಗಾಗಿಯೇ ಅಲ್ವೇ? ಪೊಲಿಟಿಕಲ್ ಸಸ್ಪೆಕ್ಸ್ 51 ನಾನೇ, ನಡೆಯಿರಿ ಹೋಗೋಣ” ಎಂದರು !
ಇಬ್ಬರ ಮುಖವೂ ಬಿಳಿಚಿಕೊಂಡಿತು. ಬೇಟೆಗಾರ ತಾನೇ ಬೇಟೆಯಾದಂತಹ ಪಾಡು ಅವರದಾಗಿತ್ತು.
ಗುಪ್ತಚರನ ಗುಟ್ಟು ರಟ್ಟು
ಡಾ. ಮುಂಜೆ ಅವರ ಪರಿಚಯ ಪತ್ರದೊಂದಿಗೆ ಕಲ್ಕತ್ತಾಗೆ ಬಂದ ಕೇಶವರಾವ್ಗೆ ಶ್ರೀ ಅಣ್ಣಾಸಾಹೇಬ್ ಖಾಪರ್ಡೆ ಅವರು ವಸತಿ ಸೌಕರ್ಯ ಒದಗಿಸಿದರು. ತಮ್ಮ
ಇಸವಿ 1911. ರಜಾದಿನಗಳಲ್ಲಿ ನಾಗಪುರಕ್ಕೆ ವಾಪಸಾಗಿದ್ದ ಕೇಶವರಾವ್ ಅನ್ಯ ಕೆಲಸದ ನಿಮಿತ್ತ ಯವತಮಾಳ್ಗೂ ಬಂದಿದ್ದರು. ಒಂದು ಸಂಜೆ ಗೆಳೆಯರಾದ ಗೋವಿಂದರಾವ್ ಅವದೆ ಮತ್ತು ಯಾದವರಾವ್ ಆಣೆ ಅವರ ಜೊತೆ ಸಿವಿಲ್ ಲೈನ್ಸ್ ರಸ್ತೆಯಲ್ಲಿ ತಿರುಗಾಡಲು ಹೊರಟಿದ್ದರು ಅದೇ ರಸ್ತೆಯಲ್ಲಿ ಇವರಿಗೆದುರಾಗಿ ಅಲ್ಲಿನ ಆಂಗ್ಲ ಜಿಲ್ಲಾಧಿಕಾರಿಯೂ ನಡೆದು ಬರುತಿದ್ದ. ಅವನ ಜೊತೆ ಸರಕಾರಿ ವೈದ್ಯರು ಹಾಗೂ ಇನ್ನೋರ್ವ ಅಧಿಕಾರಿಯೂ ಇದ್ದರು. ತುಂಬ ಕೊಬ್ಬಿನಿಂದ ಮೆರೆಯುತ್ತಿದ್ದ ಜಿಲ್ಲಾಧಿಕಾರಿ ಆತ. ತನ್ನ ದರ್ಪದ ಮುದ್ರೆ ಈ ಗುಲಾಮ ಜನರ ಮೇಲೆ ಸದಾ ಒತ್ತಿರಬೇಕೆಂದು ಅವನ ಇಚ್ಛೆ. ಅದಕ್ಕಾಗಿ ರಸ್ತೆಯಲ್ಲಿ ಎದುರಿಗೆ ಬರುವವರೆಲ್ಲರೂ ತನಗಾಗಿ ದಾರಿಬಿಟ್ಟು ಪಕ್ಕಕ್ಕೆ ಸರಿಯಬೇಕಲ್ಲದೆ ಸೆಲ್ಯೂಟ್ ಸಲ್ಲಿಸಬೇಕೆಂದು ಸಹ ಒಂದು ರೀತಿ ಅಲಿಖಿತವಾದ ಪದ್ಧತಿಯನ್ನೇ ಆತ ಬೆಳೆಸಿದ್ದ.
ಕೇಶವರಾವ್ ಊರಿಗೆ ಹೊಸಬರು. ಅದಕ್ಕಾಗಿ ದೂರದಿಂದ ಬರುತಿದ್ದ ಜಿಲ್ಲಾಧಿಕಾರಿಯನ್ನು ಕಂಡಂತೆಯೇ ಅವರ ಗೆಳೆಯರು, ನೋಡಪ್ಪಾ, ಅಲ್ಲಿ ಸೆಲ್ಯೂಟ್ ಪ್ರಿಯ ಅಧಿಕಾರಿ ಬರುತ್ತಿದ್ದಾನೆ. ಇಲ್ಲಿನ ಪದ್ಧತಿಯನ್ನು ನೆನಪಿಟ್ಟುಕೋ” ಎಂದು ತಿಳಿಸಿದರು. ಆದರೆ ಹಮ್ಮಿನಿಂದ ಬೀಗುತ್ತಿದ್ದ ಜಿಲ್ಲಾಧಿಕಾರಿಗೆ ಸರಿಯಾದ ಪಾಠ ಕಲಿಸಬೇಕೆಂದು ಕೇಶವರಾವ್ ಮೊದಲೇ ನಿರ್ಧರಿಸಿದ್ದರು. ಇದು ಹೇಳಿ ಕೇಳಿ ಸಾರ್ವಜನಿಕ ರಸ್ತೆ, ಇದರಲ್ಲಿ ನನಗೆ ಬೇಕೆನಿಸಿದಂತೆ ನಡೆಯಲು ಇವರ ಮುಲಾಜೇನು?” ಎನ್ನುವ ನಿಲುವು ಕೇಶವರಾವ್ ಅವರದ್ದು.
ಇಷ್ಟರಲ್ಲೇ ಆ ಮೂವರ ಟೋಳಿ ಗೆಳೆಯರಿಗೆ ಎದುರಾಯಿತು. ಸೆಲ್ಯೂಟ್ ಕೊಡುವುದಿರಲಿ, ಕೇಶವರಾವ್ ಒಂದಿ? ಪಕ್ಕಕ್ಕೆ ಸಹ ಸರಿಯದೆ ನೇರ ತಮ್ಮ ದಾರಿಯಲ್ಲಿ ನಡೆದರು. ಪರಿಣಾಮವಾಗಿ ಆ ಮೂವರು ಅಧಿಕಾರಿಗಳೇ ಪಕ್ಕಕ್ಕೆ ಸರಿದು ಮುಂದುವರಿಯಬೇಕಾಯಿತು.
ಹೆಡೆ ತುಳಿಯಲ್ಪಟ್ಟ ಹಾವಿನಂತೆ ಬುಸುಗುಟ್ಟುತ್ತ ಆ ಜಿಲ್ಲಾಧಿಕಾರಿ ಕೇಶವರಾವ್ ರನ್ನು ಸಮಾಪ ಕರೆದು, ಹೆಸರು ವಿಳಾಸ ಇತ್ಯಾದಿ ವಿಚಾರಿಸಿದ. “ಸೆಲ್ಯೂಟ್ ಮಾಡಬೇಕೆಂಬ ಶಿ?ಚಾರ ತಿಳಿಯದೇನು?” – ಜರ್ಬಿನಿಂದ ಗುಡುಗಿದ.
ಕೇಶವರಾವ್ ಅಷ್ಟೇ ಶಾಂತವಾಗಿ ’ಇಲ್ಲಿನ ಶಿಷ್ಟಾಚಾರ ಕಟ್ಟಿಕೊಂಡು ನನಗೇನಾಗಬೇಕು? ನಾನು ಪ್ರಾಂತ್ಯದ ರಾಜಧಾನಿಯಿಂದ ಬಂದವನು ಅಲ್ಲಿ ಇಂತಹ ಪದ್ಧತಿ ಇಲ್ಲವಲ್ಲ. ಅದಿರಲಿ, ಪರಸ್ಪರ ಪರಿಚಯವೇ ಇಲ್ಲದವರು ಸೆಲ್ಯೂಟ್ ಕೊಡಬೇಕೆನ್ನುವುದು ಯಾವ ಸೀಮೆಯ ಶಿಷ್ಟಾಚಾರ?’ – ಚಾಟಿಯೇಟಿನಂತೆ ಬಂದ ಉತ್ತರದಿಂದ ಜಿಲ್ಲಾಧಿಕಾರಿ ಸುಸ್ತು. ಅಷ್ಟರಲ್ಲಿ ಕೇಶವರಾವ್ ತಮ್ಮ ಎರಡೂ ಕೈಗಳನ್ನು ಕೋಟಿನ ಜೇಬುಗಳಲ್ಲಿ ಇಳಿಬಿಟ್ಟಿದ್ದರು.
ಸರಕಾರಿ ವೈದ್ಯರಾದ ಮಿ. ಪೆಡೊಗೆ ತಮ್ಮದೇ ತಪ್ಪಾಯ್ತು ಎಂಬ ಅರಿವಾಗಿತ್ತು. ಜೇಬಿನಿಂದ ಕೈಗಳನ್ನು ಹೊರತೆಗೆಯಲು ಕೇಶವರಾವ್ಗೆ ಹೇಳುವುದರೊಂದಿಗೆ ಶಿ?ಚಾರಕ್ಕಾಗಿ ಅಲ್ಲದೆ ಹೋದರೂ, ಮುಂದೆ ವಿರಸಕ್ಕೆಡೆಯಾಗದಂತೆ ಸೌಜನ್ಯಕ್ಕಾಗಿ ಸೆಲ್ಯೂಟ್ ಕೊಡುವಂತೆ ಕೇಳಿಕೊಂಡರು. ಕೇಶವರಾಯರು ಅಷ್ಟೇ ವಿನಮ್ರತೆಯಿಂದ “ನಿಮ್ಮ ಸಲಹೆಗಾಗಿ ಧನ್ಯವಾದಗಳು” ಎನ್ನುತ್ತಾ ಮುಖ ತಿರುಗಿಸಿ ತಮ್ಮ ದಾರಿ ಹಿಡಿದರು.
ಈ ಪ್ರಸಂಗ ಯವತಮಾಳದ ಸರಕಾರಿ ವಲಯಗಳಲ್ಲಿ ಭಾರೀ ಸುದ್ದಿಯಾಯಿತು. ನಾಗಪುರಕ್ಕೆ ವಾಪಸ್ ಬಂದ ನಂತರ ಡಾ. ಮುಂಜೆ ಅವರೂ “ಒಳ್ಳೆಯ ಕೆಲಸ ಮಾಡಿದೆ” ಎಂದು ಕೇಶವರಾಯರ ಬೆನ್ನು ಚಪ್ಪರಿಸಿದರು.
ಆದರ್ಶವಾದದ ಚಕ್ರವರ್ತಿ
ಶ್ರೀ ಶ್ಯಾಮಸುಂದರ ಚಕ್ರವರ್ತಿ ಅವರು ಬಂಗಾಲದ ಸುವಿಖ್ಯಾತ ಲೇಖಕರು. ಆಂಗ್ಲ, ಸಂಸ್ಕೃತ, ಹಾಗೂ ಬಂಗಾಲಿ ಭಾ?ಗಳಲ್ಲಿ ನಿರರ್ಗಳವಾಗಿ ಬರೆಯುವಂತಹ ಭಾರೀ ಮೇಧಾವಿ. ಅವರದು ಮೊನಚಾದ ಲೇಖನಿ. ಅದರಿಂದ ಹೊಮ್ಮಿ ಹರಿಯುತ್ತಿದ್ದುದು ಕೆರಳಿಸುವಂತಹ ವ್ಯಂಗ್ಯ ಮಿಶ್ರಿತ ಚುಚ್ಚು ಭಾಷೆ. ಇದರಿಂದಾಗಿ ಕಿಡಿಕಿಡಿಗೊಂಡ ಆಂಗ್ಲ ಸರಕಾರ ಅವರಿಗೊಮ್ಮೆ ದೇಶಾಂತರದ ಶಿಕ್ಷೆಯನ್ನು ವಿಧಿಸಿತ್ತು. ತುಸು ಕಾಲ ಬರ್ಮಾ ಸೆರೆಮನೆಯಲ್ಲಿದ್ದು ಬಿಡುಗಡೆಯಾಗಿ ಬಂದ ಮೇಲೂ ಶ್ಯಾಮಬಾಬು ಸ್ವಲ್ಪವೂ ಬದಲಾದವರಲ್ಲ.
ಅವರ ಲೇಖನಗಳ ಒಂದೊಂದು ಪದವೂ ಓದುಗರಿಗೆ ದೇಶಭಕ್ತಿಯ ಬುಗ್ಗೆಯಂತಿರುತ್ತಿದ್ದುದು ಸರ್ವೆಸಾಮಾನ್ಯ. ಒಮ್ಮೆ ಲೋಕಮಾನ್ಯ ತಿಲಕರು ಕಲ್ಕತ್ತಾಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಶ್ರೀ ಅರವಿಂದ ಘೋ?ರು ಸಂಪಾದಕರಾಗಿದ್ದ ’ವಂದೇ ಮಾತರಂ’ ಪತ್ರಿಕೆಯಲ್ಲಿ ರಾಷ್ಟ್ರೀಯತೆಯ ಅಪರಾಧ (Crime of Nationalism) ಎಂಬ ಸಂಪಾದಕೀಯವೊಂದು ಪ್ರಕಟಗೊಂಡಿತ್ತು. ಭಾಷೆ, ಭಾವನೆ ಮತ್ತು ವಿಚಾರಗಳ ತ್ರಿವೇಣಿಸಂಗಮವಾಗಿದ್ದ ಅಗ್ರಲೇಖ ಅದು. ಅದರಿಂದ ಪ್ರಭಾವಿತರಾಗಿ ಸ್ವತಃ ಲೋಕಮಾನ್ಯರೇ ತಮ್ಮ ಅಭಿನಂದನೆ ತಿಳಿಸಲು ಶ್ರೀ ಅರವಿಂದರ ಬಳಿ ಬಂದಿದ್ದರು. ಆದರೆ ಅದರ ಎಲ್ಲ ಶ್ರೇಯಸ್ಸನ್ನು ಸಲ್ಲಿಸಬೇಕಾದುದು ತನಗಲ್ಲ, ಶ್ಯಾಮಬಾಬು ಅವರಿಗೆ ಎಂಬುದು ಬಹಿರಂಗಗೊಂಡಿದ್ದುದು ಶ್ರೀ ಅರವಿಂದರಿಂದಲೇ.
ಶ್ಯಾಮಬಾಬು ಅವರದು ಮನೆತುಂಬ ಬಂಧುಬಳಗ. ಆಗಾಗ ಬಂದು ಹೋಗುವ ಆಪ್ತರೂ ಲೆಕ್ಕವಿಲ್ಲದಷ್ಟು ಸಾಂಪತ್ತಿಕವಾಗಿ ಅವರು ಸಾಕ್ಷಾತ್ ಕುಚೇಲ ಎಂದರೂ ತಪ್ಪಲ್ಲ. ಮನೆಯಲ್ಲಿ ಅಂತಹ ಕಡು ಬಡತನ. ಹೆಸರಿಗನುಗುಣವಾಗಿ ಅವರ ಮೈಬಣ್ಣ ಕಪ್ಪು. ಆದರೆ ಸ್ವಭಾವದಲ್ಲಿ ತಿಳಿಯಾದ ಆಗಸದಂತಹ ವಿಶಾಲತೆ. ಸಾದಾ ಧೋತಿ ಮತ್ತು ಮೇಲೊಂದು ದುಪ್ಪಟಿ, ಇದಿಷ್ಟು ಅವರ ಉಡುಪು. ನಡಿಗೆಯಂತೂ ಸದಾ ಬರಿಗಾಲು. ಆದರೆ ಎಂದೂ ಇತರರ ಮುಂದೆ ಕೈಯೊಡ್ಡಿದವರಲ್ಲ.
ಕೇಶವರಾವ್ ಕಲ್ಕತ್ತಾದಲ್ಲಿದ್ದಾಗ ಅವರ ಮೇಲೆ ತುಂಬ ಪ್ರಭಾವ ಬೀರಿದ ವ್ಯಕ್ತಿತ್ವ ಶ್ಯಾಮಬಾಬು ಅವರದು. ಕ್ಷಣಕ್ಷಣಕ್ಕೂ ಚುಚ್ಚುತ್ತಿದ್ದ ಬಡತನದ ನಡುವೆಯೂ ಸದಾ ನಗುಮೊಗದ ಈ ಕರ್ಮಯೋಗಿ ಕೇಶವರಾವ್ ಅವರಿಗೆ ಅತ್ಯಂತ ಅಚ್ಚುಮೆಚ್ಚಿನ ಹಿರಿಯರು. ಶ್ಯಾಮಬಾಬು ತಮ್ಮ ವಸತಿಗೃಹಕ್ಕೆ ಬಂದಾಗಲೆಲ್ಲ ಅಲ್ಲಿನ ತರುಣರೊಂದಿಗೆ ನಡೆಯುತ್ತಿದ್ದ ಮಾತುಕತೆ ಕೇವಲ ಪ್ರಯತ್ನವಾದ ಮತ್ತು ಧೈಯವಾದಗಳದ್ದು ಮಾತ್ರ. ಅವರ ದಾರಿದ್ರದ ಅರಿವಿದ್ದ ಕೇಶವರಾವ್ ಹಾಗೂ ಅವರ ತರುಣ ಮಿತ್ರರೆಲ್ಲ ಅವರು ಪ್ರತಿಬಾರಿ ವಸತಿಗೃಹಕ್ಕೆ ಬಂದಾಗಲೂ ಆಗ್ರಹಪೂರ್ವಕ ಊಟ ಮಾಡಿಸಿ ಒಂದಿ? ಹಣ ಕೊಟ್ಟು ಕಳುಹಿಸುವ ಪದ್ಧತಿಯನ್ನೇ ತಮ್ಮದಾಗಿಸಿದ್ದರು. ಶ್ಯಾಮಬಾಬು ಅವರು ಹಣ ಪಡೆಯುತ್ತಿದ್ದದೇನೋ ನಿಜ, ಆದರೆ ದಾರಿಯಲ್ಲಿ ಯಾರೇ ಕೇಳಲಿ, ಅಷ್ಟು ಸಲೀಸಾಗಿ ತಮ್ಮಲ್ಲಿರುವುದೆಲ್ಲವನ್ನೂ ಕೊಟ್ಟು ಸಂತಸಪಡುವ ಧಾರಾಳಿ.
ಶ್ಯಾಮಬಾಬು ಅವರ ಜತೆ ಕೇಶವರಾವ್ ಮನೆಯ ಮಗನಂತೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಅವರ ಮನೆಗೆ ಹೋಗಿ ಬರುತ್ತಿದ್ದುದು ಧಾರಾಳ. ಅವರ ಮಗಳಿಗೆ ಅನುರೂಪನಾದ ಗಂಡು ಹುಡುಕಿ ವಿವಾಹದ ಎಲ್ಲ ವ್ಯವಸ್ಥೆಯ ಹೊಣೆ ಸಹ ನಿರ್ವಹಿಸಿದವರು ಕೇಶವರಾವ್ ಅವರು. ಅದಕ್ಕಾಗಿ ಮಿತ್ರರಿಂದ ಹಣ ಸಂಗ್ರಹ ಸಹ ಮಾಡಿದ್ದರು.
ಸ್ವತಃ ಬಡತನದ ಬೇಗೆಯಲ್ಲಿ ಬೆಂದು, ಮೇಲಿಂದ ಮೇಲೆ ವಿಪತ್ತುಗಳ ಹೊಡೆತ ತಿಂದು ಕೇಶವರಾವ್ ಅವರ ಬದುಕು ಉಕ್ಕುಗೊಂಡಿತ್ತು. ಶ್ಯಾಮಬಾಬು ಅವರ ಉಜ್ವಲ ಆದರ್ಶದ ಎರಕದಲ್ಲಿ ಅದು ಇನ್ನಷ್ಟು ಪುಟಗೊಂಡು ಮೆರಗು ಪಡೆದುದರಲ್ಲಿ ಆಶ್ಚಯವೇನು?
ಮೌಲವಿ ಲಿಯಾಕತ್ ಹುಸೇನರು ಬಂಗಾಲದ ಓರ್ವ ಸ್ವಾತಂತ್ರ್ಯ ಹೋರಾಟಗಾರರು. ವ?ದಲ್ಲಿ ಹೆಚ್ಚಿನ ದಿನಗಳು ಕಾರಾಗೃಹದಲ್ಲಿ ಹಾಗೂ ಕೆಲವು ದಿನಗಳ ಕಾಲ ಹೊರಗೆ ಹೀಗೆ ನಡೆಯುತ್ತಿತ್ತು ಅವರ ಬದುಕು. ವಯಸ್ಸು ಆರುವತ್ತು ದಾಟಿದ್ದರೂ ತರುಣರನ್ನು ನಾಚಿಸುವ? ಸದಾ ಉತ್ಸಾಹಿ. ಬಡಬಗ್ಗರಿಗಾಗಿ ಹಣ ಸಂಗ್ರಹಿಸಿ ಹಂಚುವುದೆಂದರೆ ಅವರಿಗೆ ಎಲ್ಲಿಲ್ಲದ ಆನಂದ. ಬಡವಿದ್ಯಾರ್ಥಿಗಳಿಗೆ ಪುಸ್ತಕ, ಬಟ್ಟೆ, ಶುಲ್ಕ ಇತ್ಯಾದಿಗಳ ವ್ಯವಸ್ಥೆ ಮಾಡುವುದು ಅವರ ಪ್ರಾಣಪ್ರಿಯ ಕಾಯಕ. ಇಂತಹ ಹತ್ತಾರು ವಿಧ ಕೆಲಸಗಳಲ್ಲಿ ಸದಾ ಮಗ್ನರಾಗಿರುತ್ತಿದ್ದವರು ಅವರು.
ಮೌಲವಿ ಅವರು ಅಪ್ಪಟ ದೇಶಭಕ್ತರು. ಸ್ವದೇಶಿ ವಸ್ತುಗಳ ಬಗ್ಗೆ ಅವರದು ನಿತಾಂತ ನಿಷ್ಠೆ. ಪಾಯಿಜಾಮ, ಜುಬ್ಬ ಮತ್ತು ಬಿಳಿಟೋಪಿ ಇಂತಹ ಸರಳ ಉಡುಪಿನಲ್ಲೇ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದವರು. ’ಕುಬೇರ ವಸ್ತು ಭಂಡಾರ’ ಎಂಬ ಹೆಸರಲ್ಲಿ ಸ್ವದೇಶಿವಸ್ತುಗಳ ಅಂಗಡಿಯೊಂದನ್ನು ಕೆಲವು ದಿನಗಳ ಕಾಲ ನಡೆಸಿದ್ದೂ ಉಂಟು. ಸ್ವದೇಶಿ ವಸ್ತುಗಳ ಪ್ರಚಾರಕ್ಕಾಗಿ ಪ್ರಭಾತ ಫೇರಿ, ಸಭೆ ಮೆರವಣಿಗೆಗಳಲ್ಲಿ ಕೈಯಲ್ಲಿ ಭಗವಾಧ್ವಜ ಹಿಡಿದುಕೊಂಡೇ ಮೌಲವಿ ಅವರು ಮುಂದಾಳುತನ ವಹಿಸುತ್ತಿದ್ದರು.
ಅವರ ಆಪ್ತರ ಗುಂಪಿನಲ್ಲಿ ಕೇಶವರಾವ್ ಸಹ ಒಬ್ಬರು. ಅವರ ಸಭೆಗಳನ್ನು ಏರ್ಪಡಿಸುವುದಲ್ಲದೆ ತನಗೆ ತಿಳಿದಷ್ಟು ಹರಕುಮುರುಕು ಹಿಂದಿಯಲ್ಲಿ ಕೇಶವರಾವ್ ಒಮ್ಮೊಮ್ಮೆ ಭಾಷಣ ಸಹ ಮಾಡುತ್ತಿದ್ದರು. ಮೌಲವಿ ಅವರು ಒಮ್ಮೆ ಕಾಯಿಲೆ ಮಲಗಿದ್ದಾಗ ಸುಮಾರು ಎರಡು ತಿಂಗಳ ಕಾಲ ಅವರ ಸ್ವಂತ ಮಗನಂತೆ ಕೇಶವರಾವ್ ಅವರ ಶುಶ್ರೂಷೆ ಮಾಡಿರುವುದೂ ಇದೆ.
ಕೇಶವರಾವ್ರಂತೆ ಮೌಲವಿಯವರಿಗೂ ಲೋಕಮಾನ್ಯ ತಿಲಕರ ಬಗ್ಗೆ ಅನನ್ಯ ಭಕ್ತಿ. ಒಮ್ಮೆ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಯೊಂದರಲ್ಲಿ ಭಾ?ಣಕಾರ ಲೋಕಮಾನ್ಯರ ಬಗ್ಗೆ ಅಪಶಬ್ದಗಳನ್ನಾಡಿದ. ಸಭೆಯ ಅಧ್ಯಕ್ಷರಾಗಿದ್ದ ಮೌಲವಿಯವರು ಸಿಟ್ಟು ತಡೆಯಲಾಗದೆ ಒಳಗಿಂದೊಳಗೆ ಕುದಿಯುತ್ತಿದ್ದರು. ಮುಂದೆ ಕುಳಿತಿದ್ದ ಕೇಶವರಾವ್ ಅವರದೂ ಅದೇ ಮನಸ್ಥಿತಿ. ಅವರು ನೇರವಾಗಿ ವೇದಿಕೆ ಹತ್ತಿ ಸಭೆ ನಡೆಯುತ್ತಿದ್ದಂತೆಯೇ ಭಾ?ಣಕಾರರ ಕಪಾಳಕ್ಕೆ ಎರಡು ಬಿಗಿದರು.
ಕೇಶವರಾವ್ ಅವರ ಕ್ರಮಕ್ಕೆ ಮೌಲವಿ ಅವರು ಮನಃಪೂರ್ವಕ ಮೆಚ್ಚುಗೆ ತಿಳಿಸಿದರು.
ಬಂಗಾಲದ ಕ್ರಾಂತಿಕಾರಿಗಳ ಪ್ರಮುಖ ಸಂಘಟನೆ ’ಅನುಶೀಲನ ಸಮಿತಿ’ ಜತೆ ಅವರ ಸಂಬಂದವಿದ್ದುದಂತೂ ನಿಜ. ಕೇಶವರಾವ್ ಕಲ್ಕತ್ತಾದಲ್ಲಿದ್ದ ವರ್ಷಗಳಲ್ಲಿ ಅನುಶೀಲನ ಸಮಿತಿಯ ಪ್ರಮುಖ ನಾಯಕ ಶ್ರೀ ಪುಲಿನ ಬಿಹಾರಿ ದಾಸರು ಹೆಚ್ಚಿನ ಅವಧಿ ಕಾರಾವಾಸದಲ್ಲಿ ಇದ್ದರು. 1911 ರಿಂದ 1913ರ ನಡುವೆ ಸುಮಾರು ಒಂದು ವರ್ಷದ ಕಾಲ ಅವರು ಹೊರಗಡೆ ಇದ್ದಾಗ ಮಾತ್ರ ಕೇಶವರಾವ್ ಅವರಿಗೆ ಸಮಿತಿಯ ನಾಯಕರ ಜೊತೆ ಸಂಬಂಧ ಬಂದಿರಬಹುದೆಂದು ಊಹೆ. ಈ ಅವಧಿಯಲ್ಲಿ ಕೇಶವರಾವ್ ಮತ್ತು ಪುಲಿನಬಾಬು ಅವರ ಹಿಂದೆ ಸದಾ ಗುಪ್ತಚರರಿರುತ್ತಿದ್ದರಿಂದ ಪರಸ್ಪರ ಭೇಟಿ ಅಷ್ಟು ಸುಲಭವಿರಲಿಲ್ಲ.
ಆದರೆ ಕ್ರಾಂತಿಕಾರಿ ಶ್ರೀ ರಾಮಲಾಲ್ ವಾಜಪೇಯಿ ಬರೆದಿರುವ ತನ್ನ ಆತ್ಮಚರಿತ್ರೆಯಲ್ಲಿ ರಜಾ ದಿನಗಳಲ್ಲಿ ಕೇಶವರಾವ್ ನಾಗಪುರಕ್ಕೆ ಬರುತ್ತಿದ್ದಾಗಲೆಲ್ಲ ಇನ್ನೂರು,ಮುನ್ನೂರು ರೂಪಾಯಿಗಳ? ಬೆಲೆಬಾಳುವ ರಿವಾಲ್ವರ್ಗಳನ್ನು ನಾಗಪುರದ ಕ್ರಾಂತಿಕಾರಿಗಳಿಗೆ ತಂದು ಕೊಡುತ್ತಿದ್ದುದರ ಉಲ್ಲೇಖವಿದೆ. ಅನುಶೀಲನ ಸಮಿತಿಯಲ್ಲಿ ಅವರ ಸೇರ್ಪಡೆಯಾಗಿರುವುದೂ ಅದರಲ್ಲಿ ಸ್ಪಷ್ಟವಾಗಿ ಇದೆ. ಸುವಿಖ್ಯಾತ ಕ್ರಾಂತಿಕಾರಿ ಶ್ರೀ ತ್ರೈಲೋಕ್ಯನಾಥ ಚಕ್ರವರ್ತಿ ಅವರು. ಬರೆದಿರುವ ’ಕಾರಾಗೃಹದಲ್ಲಿ ಮೂವತ್ತು ವರ್ಷಗಳು’ ಗ್ರಂಥದಲ್ಲಿ ಪುಟ 159ರಲ್ಲಿ ಶ್ರೀ ನಲಿನಿ ಕಿಶೋರ ಗುಹ ಅವರು ಕೇಶವರಾವ್ ಮತ್ತು ನಾರಾಯಣ ರಾವ್ ಸಾವರಕರರನ್ನು ಅನುಶೀಲನ ಸಮಿತಿಯಲ್ಲಿ ಕರೆತಂದಿರುವ ವಿವರಗಳಿವೆ.
ಅನುಶೀಲನ ಸಮಿತಿಯಲ್ಲಿ ಪ್ರವೇಶ ಅಷ್ಟು ಸರಳವಿರಲಿಲ್ಲ. ಅನೇಕ ವಿಧ ಕಠಿಣ ಪರೀಕ್ಷೆಗೊಳಪಡಿಸಿ ಅಭ್ಯರ್ಥಿಯ ಸ್ವಭಾವ, ಚಾರಿತ್ರ್ಯ, ಶಾರೀರಿಕ ಕಸುವು, ಬೌದ್ಧಿಕ ಚುರುಕುತನ, ಸಹನಶೀಲತೆ, ಆಜ್ಞಾಪಾಲನೆ, ಸಂಯಮ ಇತ್ಯಾದಿಗಳನ್ನು ಪರೀಕ್ಷಿಸಿ ತಿಳಿದು, ಅವರವರ ಯೋಗ್ಯತೆಗನುಗುಣವಾಗಿ ಕ್ರಮೇಣ ಸಮಿತಿಯಲ್ಲಿ ಪ್ರವೇಶ ನೀಡಲಾಗುತ್ತಿತ್ತು. ಸಮಿತಿಯ ಕೇಂದ್ರ ವಲಯದಲ್ಲಿ ಕೆಲವು ಮಂದಿ ಆರಿಸಲ್ಪಟ್ಟಂತಹವರು ಮಾತ್ರವಿದ್ದು ಹೊರಗೆ ಅನೇಕ ಹಂತಗಳಲ್ಲಿ ಪಾತ್ರತೆಗನುಗುಣವಾದ ವಿವಿಧ ವಲಯಗಳು ಇರುತ್ತಿದ್ದವು. ಪ್ರವೇಶ ದೊರೆತ ಮೇಲೆ ಪ್ರಮುಖ ಹಿರಿಯ ಸದಸ್ಯರ ಸಮ್ಮುಖದಲ್ಲಿ ಕಾಳಿ ಮಂದಿರದಲ್ಲಿ ಅಥವಾ ಸ್ಮಶಾನದಲ್ಲಿ ಹೊಸ ಸದಸ್ಯರು ಪ್ರತಿಜ್ಞೆ ಸ್ವೀಕರಿಸಬೇಕಾಗುತ್ತಿತ್ತು. ಸದಸ್ಯರಲ್ಲಿ ನಾಲ್ಕು ವಿಧ ವರ್ಗಗಳಿದ್ದು, ಒಳವಲಯಕ್ಕೆ ಹೋದಷ್ಟು ಪ್ರತಿಜ್ಞೆಯ ಸ್ವರೂಪ ಹೆಚ್ಚು ಕಠೋರ ಹಾಗೂ ಉಗ್ರವಾಗುತ್ತಿತ್ತು. ಕೇಶವರಾವ್ ಇದರಲ್ಲಿ ಕಟ್ಟಕಡೆಯ ಪ್ರತಿಜ್ಞೆ ಸ್ವೀಕರಿಸಿದಂತಹ ಕೇಂದ್ರ ವಲಯದ ಸದಸ್ಯರಾಗಿದ್ದಲ್ಲಿ ಆಶ್ಚರ್ಯವೇನಿಲ್ಲ. ಅನುಶೀಲನ ಸಮಿತಿಯ ಅಂತಹ ಸದಸ್ಯರಿಗೆ ಗುಪ್ತನಾಮ ಒಂದನ್ನೂ ನೀಡಲಾಗುತ್ತಿದ್ದು ಕೇಶವರಾವ್ ಅವರನ್ನು ’ಕೊಕೇನ್’ ಎಂಬ ಹೆಸರಲ್ಲಿ ಗುರುತಿಸಲಾಗುತ್ತಿತ್ತು. ತ್ರೈಲೋಕ್ಯನಾಥ ಚಕ್ರವರ್ತಿಯವರ ಗ್ರಂಥದಲ್ಲಿ ಕೊನೆಯ ಪ್ರತಿಜ್ಞೆ ಕೈಗೊಂಡವರು ಮಾತ್ರ ಅನುಶೀಲನ ಸಮಿತಿಯ ನಿಜವಾದ ಸದಸ್ಯರು ಎಂದು ತಿಳಿಸಲಾಗಿದೆ. ಈ ಪುಸ್ತಕದಲ್ಲಿ ಅವರು ಕೆಲವೇ ಮಂದಿಯ ಭಾವಚಿತ್ರವನ್ನು ಪ್ರಕಟಿಸಿದ್ದು ಅದರಲ್ಲಿ ಕೇಶವರಾವ್ ಅವರದ್ದೂ ಇದೆ. ನಿಜವಾದ ಸದಸ್ಯರಿಗೆ ಅನ್ವಯವಾಗುವಂತೆ ಅವರು ಬರೆದಿರುವ ಎಲ್ಲ ಶರತುಗಳು ಕೇಶವರಾವ್ಗೆ ಒಪ್ಪುವಂತಿದ್ದವು ಎಂಬುದು ಮಾತ್ರ ನಿಸ್ಸಂಶಯ.
ಗುಪ್ತಚರನಿಂದ ಸೇವಾರ್ಥ
ಅನುಶೀಲನ ಸಮಿತಿಯಲ್ಲಿ ಕೇಶವರಾವ್ ನಿರ್ವಹಿಸುತ್ತಿದ್ದ ಕೆಲಸವೇನೆಂಬುದು ನಿಗೂಢವೇ. ಆದರೆ ತನ್ನ ವಸತಿಗೃಹ ’ಶಾಂತಿನಿಕೇತನ’ದಿಂದ ಅವರು ಆಗಾಗ ನಡುರಾತ್ರಿ ಎಲ್ಲೋ ಹೋಗಿ ಬರುತ್ತಿದ್ದುದುಂಟು. ತುಂಬ ತಡವಾಗಿ ಮಲಗಲು ಬರುತ್ತಿದ್ದ ಪ್ರಸಂಗಗಳೂ ಅನೇಕ.
ಗೆಳೆಯ ಪರಾಶರ ಜತೆ ಅವರು ರಸಾಯನಶಾಸ್ತ್ರದ ಪ್ರಾಧ್ಯಾಪಕ ಶ್ರೀ ಚೌಧುರಿ ಅವರಲ್ಲಿಗೆ ಹೋಗುತ್ತಿದ್ದುದೇ ಹೆಚ್ಚು. ಶ್ರೀ ಚೌಧುರಿಯವರು ಬಾಂಬ್ ತಯಾರಿಯ ಶಿಕ್ಷಣ ನೀಡುತ್ತಿದ್ದರೆಂದು ಗುಪ್ತಚರ ಇಲಾಖೆ ನಂಬಿತ್ತು. ಅದಕ್ಕಾಗಿ ಅವರಲ್ಲಿ ವಿದ್ಯಾರ್ಥಿಗಳು ಬಂದಾಗಲೆಲ್ಲ ಗುಪ್ತಚರರು ಮನೆ ಬಳಿ ಗಂಟೆಗಟ್ಟಲೆ ಕಾವಲಿರುತ್ತಿದ್ದರು.
ಒಮ್ಮೆ ವಿದ್ಯಾರ್ಥಿಗಳ ಜತೆ ಪ್ರಾಧ್ಯಾಪಕರ ಚರ್ಚೆ ನಡುರಾತ್ರಿ ದಾಟಿ ಮುಂದುವರಿಯಿತು. ಮಹಡಿ ಮೆಟ್ಟಿಲ ಮೇಲೆ ಕುಳಿತಿದ್ದ ಗುಪ್ತಚರನಿಗೆ ಕೂತಲ್ಲೆ ಜೊಂಪು ಹತ್ತಿತ್ತು. ಕೇಶವರಾವ್ ಮತ್ತು ಸಂಗಡಿಗರು ತುಂಬ ತಡವಾಗಿ ಹೊರ ಬಂದರು. ಹೊರಗಡೆ ಎಲ್ಲೆಲ್ಲೂ ಗಾಢ ಅಂಧಕಾರ. ಕೂತಲ್ಲೆ ನಿದ್ರಿಸಿದ ಗುಪ್ತಚರನಿಗೆ ಎಲ್ಲರಿಗಿಂತ ಮೊದಲು ಹೊರಬಂದು ಮಹಡಿ ಇಳಿಯುತ್ತಿದ್ದವರು ಎಡವಿ ಉರುಳಿ ಬಿದ್ದರು. ’ಯಾರದು?’ ಎಂಬ ಪ್ರಶ್ನೆ ಕೇಳಿದುದೇ ತಡ, ಗುಪ್ತಚರ ಗಾಬರಿಗೊಂಡು ಮೇಲೆದ್ದವನು ಕತ್ತಲೆಯಲ್ಲಿ ಓಡಲಾರಂಭಿಸಿದ. ಆದರೆ ಎಲ್ಲರೂ ಕೂಡಿ ಅವನನ್ನು ಹಿಡಿದು ಚೆನ್ನಾಗಿ ಥಳಿಸಿದರು. ’ನಡಿ, ಸ್ಟೇಶನ್ಗೆ ಹೋಗೋಣ’ ಎಂದಾಗಲಂತೂ ಆತ ಹೆದರಿ ಪೂರಾ ಕಂಗಾಲಾದ. ಬಿಟ್ಟು ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡ. ಕೊನೆಯಲ್ಲಿ ಕೇಶವರಾವ್, ’ಹೋಗಲಿ ಬಿಡಿ, ನಮ್ಮ ಮಿತ್ರನೇ ಅವನು. ಪ್ರತಿನಿತ್ಯ ಇದೇ ಕೆಲಸ ಮಾಡುತ್ತಿದ್ದರೂ, ನಮ್ಮ ವಿರುದ್ಧ ಎಂದೂ ದೂರು ಕೊಟ್ಟವನಲ್ಲ’ ಎಂದರು. ಈ ಮಾರ್ಮಿಕ ಮಾತಿನೇಟಿನಿಂದ ಅವನು ಪೂರಾ ಇಳಿದು ಹೋದ. ಅವನಿಗೆ ದಯೆ ತೋರಿದುದಕ್ಕೆ ಪ್ರತಿಯಾಗಿ ರಾತ್ರಿ ಕೇಶವರಾವ್ ಹಾಗೂ ಗೆಳೆಯರು ಅವನ ಕೈಯಲ್ಲಿ ಚೆನ್ನಾಗಿ ’ಮಿಠಾಯಿ ಸೇವಾರ್ಥ’ ಮಾಡಿಸಿದರು.
ಜನತಾ ಜನಾರ್ದನನ ಸೇವೆಯಲ್ಲಿ
ಇಸವಿ 1913. ಬಂಗಾಲದಲ್ಲಿ ಆ ವರ್ಷ ಭಾರೀ ಪ್ರವಾಹ. ದಾಮೋದರ ನದಿ ಹುಚ್ಚುಹೊಳೆಯಾಗಿ ಹರಿದಿತ್ತು. ನದಿಯ ಪಶ್ಚಿಮ ತೀರದಲ್ಲಿನ ವರ್ಧಮಾನ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ನೀರೇ ನೀರು, ಸಂಕಟಗ್ರಸ್ತ ಜನರಿಗಾಗಿ ರಾಮಕೃಷ್ಣ ಮಿಶನ್ ವತಿಯಿಂದ ಪರಿಹಾರ ಕಾರ್ಯ ಕೈಗೊಳ್ಳಲಾಗಿತ್ತು. ಸಮಾಜದ ಕಷ್ಟಸುಖಗಳಲ್ಲಿ ಒಂದಾಗುವ ತನ್ನ ಸಹಜಗುಣದಿಂದಾಗಿ ಕೇಶವರಾವ್ ಕೂಡಲೇ ಪರಿಹಾರ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡರು. ಸಹಪಾಠಿಗಳಾದ ಸರ್ವಶ್ರೀ ನಲಿನಿ, ಗೋಖಲೆ, ದೇಶಪಾಂಡೆ, ಆರ್.ಎಸ್.ಸುರ್ವೆ ಮತ್ತು ಕೆ.ಎಸ್.ವೆಂಕಟರಾಮನ್ ಇವರುಗಳು ಒಳಗೊಂಡಿರುವ ಆರು ಮಂದಿಯ ತಂಡ ವರ್ಧಮಾನ ಜಿಲ್ಲೆಯಲ್ಲಿ ಆಗಸ್ಟ್ 11, 12 ಮತ್ತು 13 ಈ ಮೂರು ದಿನಗಳ ಕಾಲ ಅವಿಶ್ರಾಂತವಾಗಿ ದುಡಿಯಿತು. ಪ್ರವಾಹ ಪೀಡಿತರಿಗಾಗಿ ಅಕ್ಕಿ, ಬೇಳೆ, ಅವಲಕ್ಕಿ, ಉಪ್ಪು, ಬೆಲ್ಲ, ಕಂಬಳಿ, ಬಟ್ಟೆ ಇತ್ಯಾದಿ ವಸ್ತುಗಳನ್ನು ಸಾಧ್ಯವಿರುವಲ್ಲೆಲ್ಲ ದೋಣಿಗಳಲ್ಲಿ ಹಾಗೂ ಕೆಲವೊಮ್ಮೆ ಸೊಂಟದೆತ್ತರ ನೀರಲ್ಲಿ ನಡೆದು ಈ ತಂಡದಲ್ಲಿದ್ದವರು ತಲುಪಿಸುತ್ತಿದ್ದರು.
ಎಲ್ಲೆಲ್ಲೂ ನೀರು ತುಂಬಿದ್ದ ಕಾರಣ ಸಣ್ಣ ಸಣ್ಣ ಮಕ್ಕಳೊಂದಿಗೆ ಮನೆಗಳ ಛಾವಣಿಯ ಮೇಲೆ, ಮರಗಳ ಮೇಲೆ ಏರಿ ಕುಳಿತಿದ್ದ ಭಯಗ್ರಸ್ತ ಜನರಿಗೆ ಆಹಾರ ಒದಗಿಸಿ ಧೈರ್ಯ ತುಂಬಿ ಸುರಕ್ಷಿತ ಸ್ಥಾನ ತಲುಪಿಸುವ ವರೆಗೆ ಎಲ್ಲ ವಿಧದಲ್ಲೂ ನೆರವಾಗುತ್ತಿದ್ದವರು ಅವರೇ.
ಅದಾದ ಕೆಲವು ದಿನಗಳ ನಂತರ ಗಂಗಾಸಾಗರ ಸಂಗಮ ಪ್ರದೇಶದಲ್ಲಿ ಭಾರೀ ಕಾಲರಾ ಕಾಯಿಲೆ ಹಬ್ಬಿತು. ಆ ದಿನಗಳಲ್ಲಿ ತಮ್ಮ ಗೆಳೆಯರಾದ ಸರ್ವಶ್ರೀ ನಾರಾಯಣ ರಾವ್ ಸಾವರಕರ್, ಯಾದವರಾವ್ ಅಣೆ ಹಾಗೂ ತೆಂಡೂಲ್ಕರ್ ಅವರನ್ನು ಜತೆಗೂಡಿಸಿ ಕೇಶವರಾವ್ ಜನರಿಗೆ ಔ?ಧಿ ಹಂಚುವ, ರೋಗಿಗಳ ಶುಶ್ರೂಷೆ ಮಾಡುವ ಸೇವಾ ಕಾರ್ಯದಲ್ಲಿ ಮುಂದಾದರು.
ಪ್ರತಿಯೊಂದು ಸಣ್ಣ ಪುಟ್ಟ ಗುಡಿಸಿಲಿನ ವರೆಗೆ ತಲಪಿ ಅಲ್ಲಿನ ನಿವಾಸಿಗಳಿಗೆ ಆರೈಕೆ ಒದಗಿಸಿ ಧೈರ್ಯ ನೀಡುತ್ತಿದ್ದ ಕೇಶವರಾವ್ ಸ್ವಂತದ ಕ?, ದಣಿವು ಇತ್ಯಾದಿ ಲೆಕ್ಕಿಸುತ್ತಿದ್ದವರೇ ಅಲ್ಲ. ಆ ದಿನಗಳಲ್ಲಿ ಬಂಗಾಲದ ಗ್ರಾಮೀಣ ಜೀವನದಲ್ಲಿನ ದಾರಿದ್ರ, ಅಜ್ಞಾನ, ಅನಾರೋಗ್ಯಕರ ಸ್ಥಿತಿ ಇವೆಲ್ಲದರ ಪ್ರತ್ಯಕ್ಷ ಪರಿಚಯವನ್ನು ಸಹ ಅವರು ಮಾಡಿಕೊಂಡರು. ಇಂತಹ ದಯನೀಯ ಸ್ಥಿತಿಯಲ್ಲಿರುವ ಸಮಾಜದ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿರಿಸುವ ಸಂಕಲ್ಪ ಅವರಲ್ಲಿ ಸಹಜವಾಗಿಯೇ ಬಲಗೊಂಡಿತು.
ಪರಿಹಾರ ಸಮಿತಿಯಲ್ಲಿ ಕೇಶವರಾವ್ ಸ್ವತಃ ಸದಸ್ಯರಾಗಿದ್ದವರು. ಸಮಿತಿಯ ಸಭೆಯಲ್ಲಿ ಸದಸ್ಯರೆಲ್ಲರೂ ಕನಿಷ್ಠ ರೂ.೧೦೧ ಸಹಾಯನಿಧಿ ಕೊಡಬೇಕೆಂದು ನಿರ್ಣಯವಾದಾಗ ತನ್ನ ಪಾಲಿನ ಸಹಾಯ ನಿಧಿಯನ್ನು ಮೊದಲು ಕೊಟ್ಟವರು ಅವರೇ. ಕಡು ಬಡವರಾಗಿದ್ದಾಗಲೂ ಹೃದಯದ ಶ್ರೀಮಂತಿಕೆಯಲ್ಲಿ ಕೇಶವರಾವ್ ಎಲ್ಲರಿಗಿಂತಲೂ ಮೊದಲಿಗರಾಗಿರುತ್ತಿದ್ದರು.
ಮುಳ್ಳಿನಿಂದಲೇ ಮುಳ್ಳಿನ ನಿವಾರಣ
ಕೇಶವರಾವ್ ವೈದ್ಯಕೀಯ ಓದುತ್ತಿದ್ದುದು ರಾಷ್ಟ್ರೀಯವಾದಿಗಳಿಂದ ನಡೆಸಲ್ಪಡುತ್ತಿದ್ದ ಹೊರಬೀಳುವ ವಿದ್ಯಾರ್ಥಿಗಳ ಪದವಿಗೆ ರಾಜಮಾನ್ಯತೆ ಇಲ್ಲದಂತೆ ಮಾಡುವ ಕಲ್ಕತ್ತಾದ ನ್ಯಾಶನಲ್ ಮೆಡಿಕಲ್ ಕಾಲೇಜಿನಲ್ಲಿ. ಅಂತಹ ಸರಕಾರೇತರ ಕಾಲೇಜುಗಳಿಂದ ದುರಾಲೋಚನೆ ಆಗಿನ ಬ್ರಿಟಿಷ್ ಸರಕಾರದ ಉನ್ನತ ವಲಯದಲ್ಲಿ ನಡೆದಿತ್ತು. ಅಂತಹ ಒಂದು ವಿಧೇಯಕವನ್ನು ಸರ್ ಪಾರ್ಡೆ ಲೂಕಸ್ ಎಂಬವನು ಕೇಂದ ವಿಧಾನ ಸಭೆಯಲ್ಲಿ ಮಂಡಿಸಿಯೂ ಇದ್ದ. ಈ ಕಾನೂನು ಮೂಲಕ ಅಂತಹ ಕಾಲೇಜುಗಳಲ್ಲಿ ಓದಿ ಪದವಿಗಳಿಸಿದವರಿಗೆ ವೃತಿ ನಡೆಸಲು ಅನುಮತಿಯಿದ್ದರೂ ಅವರು ನೀಡುವು ಪ್ರಮಾಣ ಪತ್ರಗಳಿಗೆ ಸರಕಾರದ ಮನ್ನಣೆಯಿಲ್ಲವೆಂದು ಆಗುವುದಿತ್ತು. ಸರಕಾರವನ್ನು ಅಲಕ್ಷಿಸಿ ಸ್ವತಂತ್ರವಾಗಿ ತಲೆಯೆತ್ತುತ್ತಿರುವ ರಾಷ್ಟ್ರೀಯವಾದಿ ಶೈಕ್ಷಣಿಕ ಸಂಸ್ಥೆಗಳ ಬುಡ ಕತ್ತರಿಸಬೇಕೆನ್ನುವುದೇ ಮುಖ್ಯವಾಗಿ ಈ ವಿಧೇಯಕದ ಹಿಂದಿದ್ದ ಹುನ್ನಾರು. ’ಬೋಗಸ್ ಮೆಡಿಕಲ್ ಡಿಗ್ರಿಸ್ ಬಿಲ್’ ಎಂಬ ಕುಖ್ಯಾತ ವಿಧೇಯಕ ಅದು.
ಸರಕಾರ ಎಸೆದಿರುವ ಈ ಸವಾಲಿಗೆ ತಕ್ಕ ಭಾಷೆಯಲ್ಲಿ ಉತ್ತರಿಸಬೇಕೆಂದು ಕೇಶವರಾವ್ ನಿರ್ಧರಿಸಿದರು. ಆ ಕಾಲೇಜಿನ ಹಳೆಯ ಹಾಗೂ ಪ್ರಚಲಿತ ವಿದ್ಯಾರ್ಥಿಗಳನ್ನು ಸೇರಿಸಿ ಅವರೊಂದು ವಿನೂತನ ಆಂದೋಲನವನ್ನು ರೂಪಿಸಿದರು. ಅದನ್ನು ಪ್ರತ್ಯಕ್ಷ ಆರಂಭಿಸುವ ಮೊದಲು ಅವರು ಡಾ. ಅಶುತೋಷ್ ಮುಖರ್ಜಿಯವರನ್ನು ಕಂಡು ತನ್ನ ಯೋಜನೆಯ ರೂಪುರೇಷೆಗಳನ್ನು ಅವರಿಗೆ ವಿವರಿಸಿದರು. ಅದರಲ್ಲಿನ ನಾವಿನ್ಯವನ್ನು ತಿಳಿದು ಮೆಚ್ಚಿದ ಆ ಹಿರಿಯರು ಕೇಶವರಾವ್ ಅವರ ಬೆನ್ನು ಚಪ್ಪರಿಸುತ್ತ, “ಕೇಶೋಬ್, ನಿಮ್ಮ ಈ ಯೋಜನೆ ಅದ್ಭುತವಾದುದು. ಅದಕ್ಕೆ ಪ್ರಚಾರ ದೊರೆತ? ಅದರ ಪ್ರಭಾವ, ಪರಿಣಾಮವೂ ಹೆಚ್ಚುವುದು. ಅದಕ್ಕಾಗಿ ಹೆಚ್ಚಿನ ಪ್ರಚಾರದ ಬಗ್ಗೆ ಗಮನ ವಹಿಸಿ. ನಿಮಗೆ ಗೆಲುವಾಗಲಿ” ಎಂದು ಮನಃಪೂರ್ವಕ ಹರಸಿದರು.
ಅಮೃತ ಬಜಾರ್ ಪತ್ರಿಕೆಯ ಸಂಪಾದಕ ಶ್ರೀ ಮೋತಿಲಾಲ ಘೋಷರಂತೂ “ತುಂಬ ಸೊಗಸಾದ ಯೋಜನೆ, ನೀವು ಕೊಡುವ ಒಂದೊಂದು ಶಬ್ದವನ್ನೂ ನಾನು ಪ್ರಕಟಿಸುವೆ. ನಮ್ಮ ಪತ್ರಿಕೆಯ ಕಡೆಯಿಂದ ನಿಮಗೆ ಪೂರ್ಣ ಸಹಕಾರ” ಎಂದು ಭರವಸೆಯಿತ್ತರು.
ಸರಿ, ಕೇಶವರಾಯರ ಪ್ರತಿಭೆ ಮಿಂಚಿತು. ಬುದ್ಧಿ ಚುರುಕಾಯಿತು. ಕಲ್ಕತ್ತಾದಲ್ಲಿ ಅಲ್ಲಲ್ಲಿ ಸಾರ್ವಜನಿಕ ಸಭೆಗಳು ನಡೆದು ಸರಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿದ ವರದಿಗಳು ಪತ್ರಿಕೆಗಳಲ್ಲಿ ಬರತೊಡಗಿದವು. ಈ ಅನ್ಯಾಯದ ವಿಧೇಯಕವನ್ನು ವಾಪಸ್ ಪಡೆಯಬೇಕೆಂಬ ಆಂದೋಲನ ಕಾಳಿಚ್ಚಿನಂತೆ ವ್ಯಾಪಿಸುತ್ತಿದೆ ಎಂಬ ಸುದ್ದಿಗೆ ಭಾರೀ ಪ್ರಚಾರ ಲಭಿಸತೊಡಗಿತು. ಪ್ರತಿಭಟನೆಯ ಮೆರವಣಿಗೆ, ಸಭೆಗಳ ರಸವತ್ತಾದ ವರ್ಣನೆಸಹಿತ ವರದಿ ಪ್ರಮುಖ ಪತ್ರಿಕೆಗಳಲ್ಲಿ ಬರಲಾರಂಭವಾದವು. ಹಿರಿಯ ನಾಯಕರ ಹೇಳಿಕೆಗಳು ವಿವಿಧ ಪತ್ರಿಕೆಗಳ ಮುಖಪುಟಗಳಲ್ಲಿ ದಪ್ಪ ಅಕ್ಷರಗಳಲ್ಲಿ ಕಾಣಿಸಿಕೊಂಡವು. ಆಂದೋಲನದ ಈ ವಾರ್ತೆಗಳಿಂದ ಪೋಲೀಸ್ ವಿಭಾಗ ನಿಬ್ಬೆರಗಾಯಿತು. ಈ ಆಂದೋಲನದ ತಲೆ ಬಾಲವೇ ಅವರಿಗೆ ಅರ್ಥವಾಗದಾಯಿತು. ಪತ್ರಿಕೆಗಳಲ್ಲಿ ವರದಿಯಾದಂತೆ ಸಭೆಯ ಅಧ್ಯಕ್ಷರು, ಭಾ?ಣಕಾರರನ್ನು ಅವರು ವಿಚಾರಿಸಿದಾಗ ವರದಿಯಲ್ಲಿನ ಒಂದೊಂದು ಪದವೂ ನಿಜವೆನ್ನುತ್ತಿದ್ದರು ಅವರೆಲ್ಲ. ಹಿಂದಿನ ದಿನದ ಸಭೆಯ ವರದಿ ಲಭಿಸುತ್ತಿತ್ತೇ ವಿನಃ ಮುಂದಿನ ಸಭೆ, ಮೆರವಣಿಗೆ ಎಲ್ಲಿ ಎಂಬುದು ಗುಪ್ತಚರ ವಿಭಾಗಕ್ಕೆ ತಿಳಿಯುತ್ತಲೇ ಇರಲಿಲ್ಲ. ಇಲಾಖೆಗಂತೂ ತುಂಬಾ ಪೇಚು. ಇತ್ತ ಸಭೆಯ ಮಾಹಿತಿ ತಿಳಿಯುತ್ತಿರಲಿಲ್ಲ. ಅತ್ತ ಮೇಲಧಿಕಾರಿಗಳಿಂದ ನಿತ್ಯ ಪೋಲೀಸ್ ಭಾಯ ’ಪೂಜೆ’ ಆಗುತ್ತಿತ್ತು.
ಸರಕಾರದ ನೀತಿಯನ್ನು ಕಟುವಾಗಿ ಖಂಡಿಸಿ ಕಲ್ಕತ್ತಾದ ಪ್ರಮುಖ ಪತ್ರಿಕೆಗಳಲ್ಲಿ ಸಂಪಾದಕೀಯಗಳು ಬರಲಾರಂಭವಾದವು. ಇಂತಹ ಸಂಪಾದಕೀಯ ಹಾಗೂ ಸುದ್ದಿಗಳ ಪತ್ರಿಕಾ ತುಣಕುಗಳನ್ನು ಕೇಶವರಾವ್ ಅನ್ಯ ಪ್ರಾಂತ್ಯಗಳ ಪ್ರಮುಖ ಪತ್ರಿಕೆಗಳಿಗೂ ಕಳುಹಿಸುತ್ತಿದ್ದರು. ಪರಿಣಾಮವಾಗಿ ಅಲ್ಲಲ್ಲಿನ ಪತ್ರಿಕೆಗಳಲ್ಲೂ ಕಲ್ಕತ್ತಾದ ಜನಾಂದೋಲನಕ್ಕೆ ಹೆಚ್ಚಿನ ಪ್ರಚಾರ ದೊರಕಿತು. ಅನ್ಯ ಪ್ರಾಂತ್ಯಗಳ ಪತ್ರಿಕೆಗಳೂ ಸರಕಾರದ ಈ ಅಕ್ರಮವನ್ನು ಖಂಡಿಸಿ ಅಗ್ರಲೇಖಗಳನ್ನು ಪ್ರಕಟಿಸಲಾರಂಭಿಸಿದವು. ಒಟ್ಟಿನಲ್ಲಿ ಆಂದೋಲನದ ಕಾವು ಬಂಗಾಲದ ಗಡಿದಾಟಿ ದೇಶಾದ್ಯಂತ ವಾತಾವರಣವನ್ನು ಬಿಸಿಗೊಳಿಸಿತು.
ವಾಸ್ತವಿಕವಾಗಿ ಈ ’ಪ್ರಚಂಡ ಚಳವಳಿ’ ಕಲ್ಕತ್ತಾ ನಗರದಲ್ಲಿನ ಯಾವುದೋ ಸಣ್ಣ ಕೋಣೆಯೊಂದರಲ್ಲಿರುವ ಸಾಮಾನ್ಯ ತರುಣನೋರ್ವನ ಅದ್ಭುತ ಕಲ್ಪನೆಯ ಶಿಶು ಮಾತ್ರವೆಂಬುದು ಪೋಲಿಸ್ ಇಲಾಖೆಗೆ ಕೊನೆಗೂ ತಿಳಿಯಲಿಲ್ಲ. ತುಂಬ ದಿನಗಳ ಈ ಪ್ರಚಾರ ದಾಂಧಲೆಯ ನಂತರ ಕೊನೆಗೊಮ್ಮೆ ಕಲ್ಕತ್ತಾದಲ್ಲಿ ವಿರಾಟ ಸಾರ್ವಜನಿಕ ಸಭೆಯೊಂದು ನಡೆಯಿತು. ಸುವಿಖ್ಯಾತ ನಾಯಕ ಶ್ರೀ ಸುರೇಂದ್ರನಾಥ ಬ್ಯಾನರ್ಜಿ ಅವರು ಅದರ ಅಧ್ಯಕ್ಷತೆ ವಹಿಸಿದ್ದರು. ಅದರಲ್ಲಿ ಎಲ್ಲ ಪ್ರಮುಖ ಪೋಲಿಸ್ ಅಧಿಕಾರಿಗಳ ಸಮಕ್ಷಮದಲ್ಲಿ ಸರಕಾರವನ್ನು ತೀವ್ರವಾಗಿ ಖಂಡಿಸಿ ಆಂದೋಲನಕ್ಕೆ ಜನಮತದ ಬಲವಾದ ಮುದ್ರೆಯನ್ನೊತ್ತಲಾಯಿತು.
ಇನ್ನು ಅಲಕ್ಷಿಸಿದಲ್ಲಿ ಪರಿಸ್ಥಿತಿ ಹೆಚ್ಚಿನ ವಿಕೋಪಕ್ಕೆ ತಿರುಗಬಹುದೆಂದು ಸರಕಾರಕ್ಕೆ ಅನಿಸಿತು. ಅದು ಕಾಜಿ ನ್ಯಾಯಕ್ಕೆ ಮುಂದಾಯಿತು. ವಿಧೇಯಕವನ್ನಂತೂ ವಾಪಸ್ ಪಡೆಯಲಾಯಿತು. ಅಂತಹ ಪದವಿಧರರಿಗೆ ನೆಪಕ್ಕೊಂದು ವಿಶೇ? ಪರೀಕ್ಷೆ ನಡೆಸಿ ನಂತರ ರಾಜ ಮಾನ್ಯತೆ ನೀಡುವುದಾಗಿ ಸರಕಾರ ಘೋಷಿಸಿತು.
1915ರ ನವೆಂಬರ್ 3ರಂದು ನಡೆದ ಈ ಪರೀಕ್ಷೆಯಿಂದಾಗಿ ಮಿಕ್ಕ ಸಹ ಪಾಠಿಗಳಿಗೇನೋ ಲಾಭವಾಯಿತು. ಕೇಶವರಾವ್ಗೂ ಪರೀಕ್ಷೆಯ ಅನುಮತಿ ಪತ್ರ ಬಂದಿತ್ತು. ಆದರೆ ’ಈ ಸರಕಾರದ ಮಾನ್ಯತೆ ಕಟ್ಟಿಕೊಂಡು ನನಗೇನಾಗಬೇಕು? ನನ್ನ ಪಾಲಿಗೆ ರಾಷ್ಟ್ರೀಯ ವಿದ್ಯಾಪೀಠದ ಪದವಿಯೇ ಹೆಚ್ಚು ಗೌರವಾಸ್ಪದ’ ಎಂಬ ನಿಲುವು ಧರಿಸಿ ಅವರು ಪರೀಕ್ಷೆಗೆ ಹಾಜರಾಗಲಿಲ್ಲ. ಅಂತೂ ಮುಳ್ಳಿನಿಂದಲೇ ಮುಳ್ಳಿನ ನಿವಾರಣೆಯಾಯಿತು. ಸರಕಾರ ರೂಪಿಸಿದ ’ಬೋಗಸ್ ಮೆಡಿಕಲ್ ಡಿಗ್ರಿಸ್ ಬಿಲ್’ ಕೇಶವರಾವ್ ರೂಪಿಸಿದ ’ಬೋಗಸ್ ಆಂದೋಲನ’ದಿಂದಾಗಿ ರದ್ದಾಯಿತು.
ಸುಳಿವು ಸಿಗದ ಕಾರ್ಯಾಚರಣೆ
ವೈದ್ಯಕೀಯ ಶಿಕ್ಷಣ ಪೂರೈಸಿ ನಾಗಪುರಕ್ಕೆ ವಾಪಸ್ ಬಂದ ಮೇಲೂ ಅನುಶೀಲನ ಸಮಿತಿಯ ಜತೆ ಡಾಕ್ಟರಜಿಯವರಿಗೆ ಬಹುಕಾಲದವರೆಗೆ ನಿಕಟ ಸಂಬಂಧವಿತ್ತು, ಬಂಗಾಲ ಮತ್ತು ನಾಗಪುರ ಪ್ರದೇಶದ ಕ್ರಾಂತಿಕಾರಿಗಳ ನಡುವೆ ಕೊಂಡಿಯಾಗಿದ್ದವರು ಅವರು. ವಿವಿಧ ಪ್ರದೇಶಗಳಲ್ಲಿನ ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ, ಅಗತ್ಯಬಿದ್ದಾಗ ಅವುಗಳ ರಿಪೇರಿ ಇತ್ಯಾದಿ ಕೆಲಸಗಳನ್ನು ಅತ್ಯಂತ ರಹಸ್ಯವಾಗಿ ನಿರ್ವಹಿಸುತ್ತಿದ್ದವರು ಅವರೇ. ಓರ್ವ ಚಾಣಾಕ್ಷ ಕ್ರಾಂತಿಕಾರಿಯಾಗಿ ತಿಳಿಯಲಾಗುತ್ತಿದ್ದ ಅವರ ಮೇಲೆ ಗುಪ್ತಚರರ ಹದ್ದುಗಣ್ಣು ಸದಾ ಇದ್ದರೂ, ತಾನು ನಿರ್ವಹಿಸುತ್ತಿದ್ದ ಯಾವುದೇ ಕೆಲಸದ ಸುಳಿವು ಅವರಿಗೆ ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದರು ಅವರು ಅಂತಹ ಒಂದು ರೋಮಾಂಚಕಾರಿ ಪ್ರಸಂಗ.
ಸುಮಾರು 1915-16 ರ ಕಾಲಾವಧಿ. ಪ್ರಥಮ ವಿಶ್ವಯುದ್ಧ ಆರಂಭವಾಗಿದ್ದು, ಅದರಲ್ಲಿ ಪ್ರಧಾನ ಪಾತ್ರವಿದ್ದುದು ಬ್ರಿಟಿಷ್ ಸರಕಾರದ್ದೇ. ಆಗ ತನ್ನ ವಸಾಹತಾಗಿದ್ದ ಭಾರತದ ಸೇನೆಯನ್ನು ಈ ಯುದ್ಧದಲ್ಲಿ ಸರಕಾರ ಪೂರಾ ತೊಡಗಿಸಿಕೊಂಡಿತ್ತು. ಬ್ರಿಟಿ? ಸೈನಿಕರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಆಗ ರೈಲ್ವೇ ವ್ಯವಸ್ಥೆಯ ಯುದ್ಧಕಾಲದ ಒಂದು ಚಟುವಟಿಕೆಯಾಗಿತ್ತು.
ಆ ದಿನಗಳಲ್ಲಿ ಪ್ರತಿನಿತ್ಯ ಹೌರಾದಿಂದ ಬರುತ್ತಿದ್ದ ಒಂದು ರೈಲಿನಲ್ಲಿ ಅಮ್ಯುನಿಶನ್ಸ್ (ಮದ್ದು ಗುಂಡುಗಳು) ತುಂಬಿ ಬಂದ್ ಮಾಡಿ ಸೀಲ್ ಹಾಕಲಾಗಿರುತ್ತಿದ್ದ ಡಬ್ಬಿಯೊಂದು ಇರುತ್ತಿದ್ದುದು ಕ್ರಾಂತಿಕಾರಿಗಳು ಚೆನ್ನಾಗಿ ತಿಳಿದಿದ್ದ ಸಂಗತಿ. ಆ ಡಬ್ಬಿಯನ್ನು ನಾಗಪುರ ಸ್ಟೇಶನ್ನಲ್ಲಿ ಹೌರಾ ರೈಲಿನಿಂದ ಕಳಚಿ, ಮುಂದೆ ಮುಂಬಯಿಗೆ ಹೋಗುವ ರೈಲಿಗೆ ಅದನ್ನು ಜೋಡಿಸಲಾಗುತ್ತಿತ್ತು.
ಕ್ರಾಂತಿಕಾರಿಗಳಿಗೂ ಶಸ್ತ್ರಾಸ್ತ್ರಗಳು ತುರ್ತಾಗಿ ಬೇಕಾಗಿದ್ದ ಸಂದರ್ಭ ಅದು. ಮೇಲೆ ಹೇಳಲಾಗಿರುವ ಶಸ್ತ್ರಾಸ್ತ್ರದ ಡಬ್ಬಿಯನ್ನು ಒಂದು ರೈಲಿನಿಂದ ಇನ್ನೊಂದಕ್ಕೆ ಜೋಡಿಸುವಂತಹ ಅವಕಾಶವನ್ನು ಬಳಸಿ, ಅದರ ಸೀಲ್ ಒಡೆದು ಶಸ್ತ್ರಾಸ್ತ್ರ ತುಂಬಿರುವ ಒಂದು ಪೆಟ್ಟಿಗೆಯನ್ನು ಎಗರಿಸುವಂತಹ ರೋಮಾಂಚಕಾರಿ ಯೋಜನೆಯೊಂದನ್ನು ನಾಗಪುರದ ಕ್ರಾಂತಿಕಾರಿಗಳ ಟೋಳಿಯೊಂದು ರೂಪಿಸಿತು.
ಈ ಸಾಹಸೀ ಕಲ್ಪನೆಯಲ್ಲಿ ಪ್ರಧಾನ ಪಾತ್ರವಿದ್ದುದು ಡಾಕ್ಟರಜಿಯವರ ಕ್ರಾಂತಿಕಾರಿ ಮಿತ್ರ ನಾನಾಜಿ ಪುರಾಣಿಕ ಎಂಬುವರದು. ಈ ಸಂಚು ಸಫಲವಾಗಬೇಕಾಗಿದ್ದಲ್ಲಿ ರೈಲ್ವೇ ಕರ್ಮಚಾರಿಗಳ ಪೂರ್ಣ ಸಹಕಾರ ಬೇಕಾಗಿದ್ದುದು ಸಹಜವೇ ಅವರ ಆಶ್ವಾಸನೆ ಗಿಟ್ಟಿಸುವುದರಲ್ಲಿ ನಾನಾಜಿಗೆ ಯಶಸ್ಸು ಲಭಿಸಿತ್ತು. ಹೀಗಾಗಿ ಅವರು ತುಂಬ ಉತ್ಸಾಹಿತರಾಗಿದ್ದರು. ಡಬ್ಬಿಯ ಸೀಲ್ ಮುರಿದು, ಪೆಟ್ಟಿಗೆಯನ್ನು ಎಗರಿಸಿ, ಓರ್ವ ಪರಿಚಿತ ಪೋಲಿಸ್ ಜಮಾದಾರನ ನೆರವಿನಿಂದ ಹೊರಗೆ ಅದನ್ನು ಒಯ್ಯುವ ವರೆಗಿನ ಎಲ್ಲ ಕೆಲಸಗಳನ್ನು ಅವರು ಅತ್ಯಂತ ಚಾಕಚಕ್ಯತೆಯಿಂದ ಯೋಜಿಸಿದ್ದರು.
ಆದರೆ ಡಾಕ್ಟರಜಿ ಮತ್ತು ಅವರ ಇನ್ನೋರ್ವ ಹಿರಿಯ ಕ್ರಾಂತಿಕಾರಿ ಮಿತ್ರ ಭಾವೂಜಿ ಕಾವರೆ ಅವರಿಗೆ ಈ ಯೋಜನೆಯಲ್ಲಿ ಸಹಮತವಿರಲಿಲ್ಲ. ಅಷ್ಟೇ ಅಲ್ಲ, ಅವರದನ್ನು ಕಟುವಾಗಿ ವಿರೋಧಿಸಿದರು ಸಹ. ಕಾರಣವಿಷ್ಟೇ, “ಅತ್ಯಂತ ಅಪಾಯಕಾರಿ ಯೋಜನೆಯಿದು. ಅದರಿಂದಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಕೆಲಸ ಸಾಧಿತವಾದರೇನೋ ಸಂತೋಷವೇ, ಆದರೆ ಸಿಗುವುದೆಷ್ಟು? ಒಂದು ಪೆಟ್ಟಿಗೆಯಷ್ಟು ಅಮ್ಯುನಿಶನ್ಸ್ ಮಾತ್ರ. ಆದರೆ ಯೋಜನೆ ವಿಫಲಗೊಂಡಲ್ಲಿ ಅಥವಾ ಬಯಲಾದಲ್ಲಿ ಆಗುವ ದುಷ್ಪರಿಣಾಮ ಮಾತ್ರ ಭಾರೀ ಗಂಭೀರ ಪ್ರಮಾಣದ್ದು. ಅತ್ತ ಕೆಲಸವೂ ಕೈಗೂಡಲಿಲ್ಲ. ಇತ್ತ ನಮ್ಮ ಸಂಘಟನೆಗೂ ಭಾರೀ ಹಾನಿಯಾಗುವುದು ಖಂಡಿತ.” ಎಂಬ ವಾದ ಅವರದಾಗಿತ್ತು.
ಆದರೆ ತಾರುಣ್ಯದ ಹುಮ್ಮಸ್ಸಿನಿಂದ ಕೂಡಿದ್ದ ಕಿರಿಯ ಕ್ರಾಂತಿಕಾರಿಗಳ ಟೋಳಿಗೆ ತನ್ನ ಯೋಜನೆಯ ಯಶಸ್ಸಿನ ಬಗ್ಗೆ ವಿಪರೀತ ಆತ್ಮವಿಶ್ವಾಸವಿತ್ತು. ಹಿರಿಯರ ಎಚ್ಚರಿಕೆಯ ಮಾತನ್ನು ಕೇಳಿ ತೆಪ್ಪಗಿರುವಂತಹ ಮಾನಸಿಕತೆ ಟೋಳಿಯಲ್ಲಿರುವವರಲ್ಲಿರಲಿಲ್ಲ, ಅದಕ್ಕಾಗಿ ಕಟ್ಟಕಡೆಯಲ್ಲಿ ಡಾಕ್ಟರಜಿ ಮತ್ತು ಭಾವೂಜಿ ಕಾವರೆಯುವರು ’ಏನೇ ಇರಲಿ, ಪ್ರತ್ಯಕ್ಷ ಕಾರ್ಯಾಚರಣೆ ನಡೆಸುವ ಮೊದಲು ನಮಗೂ ಮಾಹಿತಿ ನೀಡಿ” ಎಂಬ ಕಿವಿಮಾತು ತಿಳಿಸಿದರು.
ಸೀಲ್ ಮಾಡಿದ ಡಬ್ಬಿಯನ್ನು ಪ್ರತಿನಿತ್ಯ ನಾಗಪುರ ಸ್ಟೇಶನ್ನಲ್ಲಿ ಒಂದು ರೈಲಿನಿಂದ ಇನ್ನೊಂದಕ್ಕೆ ಜೋಡಿಸುವಂತಹ ಕ್ರಮ ಮಾಮೂಲಿಯದಾಗಿದ್ದುದರಿಂದ, ರೈಲಿನ ಅಧಿಕಾರಿಗಳ ಮತ್ತು ಪೋಲಿಸರ ನಿಗಾ ಅಲ್ಲಿ ತುಸು ಸಡಿಲಾಗಿರುತ್ತಿದ್ದುದು ನಿಜ. ಈ ಅಲಕ್ಷ್ಯದ ಲಾಭ ಮಾಡಿಕೊಳ್ಳಲು ಕ್ರಾಂತಿಕಾರಿಗಳು ನಿರ್ಧರಿಸಿದ್ದರು. ಕಾರ್ಯಾಚರಣೆಯ ದಿನ ಸಮಯ, ಇತ್ಯಾದಿ ಡಾಕ್ಟರಜಿಯವರಿಗೆ ತಿಳಿಸಲಾಗಿತ್ತು.
ನಿಗದಿತ ದಿನದಂದು ನಾನಾ ಪುರಾಣಿಕರು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪೋಷಾಕು ಧರಿಸಿ ಒಂದು ಟಾಂಗಾದಲ್ಲಿ ಸ್ಟೇಶನ್ಗೆ ಬಂದರು. ಟಾಂಗಾದಲ್ಲಿ ಹೋಗುವಾಗ ದಾರಿಯುದ್ದಕ್ಕೂ ಅಲ್ಲಲ್ಲಿ ಭರವಸೆಯ ನಗುಮುಖದ ವ್ಯಕ್ತಿಗಳು ಪುರಾಣಿಕರಿಗೆ ಕಂಡರು. ಕಾರ್ಯಾಚರಣೆಯಲ್ಲಿ ತಮ್ಮ ಪೂರ್ಣ ಸಹಕಾರವಿರುವುದನ್ನು ಸಂಕೇತಿಸಲು ಡಾಕ್ಟರಜಿ ಮಾಡಿದ್ದ ವ್ಯವಸ್ಥೆ ಅದು. ಸ್ಟೇಷನ್ನಲ್ಲಂತೂ ಸ್ವತಃ ಭಾವೂಜಿ ಕಾವರೆಯವರೇ ಓರ್ವ ಹಮಾಲಿಯ ವೇಷದಲ್ಲಿ ಸಿದ್ಧರಾಗಿದ್ದರು. ಹೀಗಾಗಿ ರೈಲು ಬಂದಂತೆ ಕೆಲವೇ ಕ್ಷಣಗಳಲ್ಲಿ ಸೀಲ್ ಒಡೆದು, ಪೆಟ್ಟಿಗೆ ಹೊರಗೆ ತೆಗೆಯುವ ಹಾಗೂ ಕಾದು ನಿಂತಿದ್ದ ಹಮಾಲಿಯ ಸಬ್ಇನ್ಸ್ಪೆಕ್ಟರ್ ಪಾತ್ರಧಾರಿ ನಾನಾ ಪುರಾಣಿಕರ ಕೈಗೆ ತಲುಪಿತು. ಟಾಂಗಾ ಆ ಕೈಗೆ ಅದನ್ನು ಒಪ್ಪಿಸುವ ಕೆಲಸ ಮುಗಿಯಿತು. ಯೋಜನೆಯಂತೆ ಪೆಟ್ಟಿಗೆ ಟಾಂಗಾದಲ್ಲಿದ್ದ ಕೂಡಲೇ ಮಿಕ್ಕವರ ಕಣ್ಣು ತಪ್ಪಿಸಿ ಅಲ್ಲಿಂದ ತನ್ನ ಯೋಜಿತ ಗುರಿಗೆ ಸಾಗಿಸಲ್ಪಟ್ಟಿತು.
ಪೆಟ್ಟಿಗೆ ಸುರಕ್ಷಿತವಾಗಿ ಹೊರ ಹೋದ ಮೇಲೆ, ಮುಂದಿನ ರೈಲಿಗೆ ಡಬ್ಬಿ ತಗುಲಿಸಿ ಅದು ಹೊರಡುವ ಸಿದ್ಧತೆಯಲ್ಲಿದ್ದಾಗಲ? ರೈಲ್ವೇ ಕರ್ಮಚಾರಿ ಸೀಲ್ ಮುರಿದುದು ಲಕ್ಷ್ಯಕ್ಕೆ ಬಂದಿರುವುದಾಗಿ ಕಿರುಚಾಡಿದ. ಈ ಕುರಿತ ತನಿಖೆ ಆರಂಭವಾಗಿ ಹಲವು ದಿನಗಳ ಕಾಲ ಅದು ಮುಂದುವರಿದರೂ, ಸೀಲ್ ಮುರಿದುದು ಎಲ್ಲಿ, ಹೇಗೆ ಎಂಬ ಬಗ್ಗೆ ಪತ್ತೆ ಕೊನೆಗೂ ಆಗಲಿಲ್ಲ.
ಕಾರ್ಯಾಚರಣೆಯ ಬಗ್ಗೆ ತನಗೆ ಒಪ್ಪಿಗೆಯಿಲ್ಲದಿದ್ದರೂ, ತನ್ನ ಸಹಕಾರಿಗಳು ಅದನ್ನು ನಡೆಸುವುದು ಖಂಡಿತವೆಂಬುದು ಅರಿವಾದ ನಂತರ ಅದು ವಿಫಲವಾಗದಂತೆ ಸರ್ವವಿಧ ಎಚ್ಚರ ಮತ್ತು ಅಗತ್ಯದ ವ್ಯವಸ್ಥೆಗಳನ್ನು ಡಾಕ್ಟರಜಿ ಮಾಡಿದ್ದರು. ಅಷ್ಟೇ ಅಲ್ಲ, ಮುಂದೆ ತನಿಖೆ ಆರಂಭವಾದಾಗ ಯಾವ ಕುರುಹು ಸಹ ಸಿಗದಂತೆ ಮಾಡಲು ನಾನಾ ಪುರಾಣಿಕ ಧರಿಸಿದ್ದ ಪೋಲಿಸ್ ಸಮವಸ್ತ್ರವನ್ನು ಸಹ ಸುಟ್ಟು ಅದರ ಬೂದಿಯನ್ನು ನೀರಿನ ನಾಲೆಯಲ್ಲಿ ಹರಿಸಿದರು.
ಸಹಕಾರಿಗಳು ಕೆಲವೊಮ್ಮೆ ದುಡುಕಬಹುದು; ಆದರೂ ಅವರ ಕೈಬಿಡಬಾರ ದೆಂಬುದು ಸಂಘಟನ ಶಾಸ್ತ್ರದಲ್ಲಿ ಹೆಚ್ಚಿನ ಮಹತ್ವದ ಸಂಗತಿ. ಡಾಕ್ಟರಜಿಯವರ ಕಾರ್ಯಶೈಲಿಯಲ್ಲಿದ್ದ ವಿಶೇ?ತೆ ಅದು.
ಅಸಹಕಾರ ಚಳವಳಿಯ ದಿನಗಳು. ಶಾಲೆ ಕಾಲೇಜ್ಗಳಿಗೆ, ನ್ಯಾಯಾಲಯಕ್ಕೆ ಬಹಿ?ರ. ಈ ಸಂಸ್ಥೆಗಳ ಮುಂದೆ ಧರಣಿ ಸತ್ಯಾಗ್ರಹ ಇತ್ಯಾದಿ ಭರದಿಂದ ನಡೆಯುತ್ತಿದ್ದ ದಿನಗಳು ಅವು. ಇವೆಲ್ಲದಕ್ಕೂ ನಾಯಕತ್ವವಿದ್ದುದು ಡಾಕ್ಟರಜಿಯವರದೇ.
ನಮ್ಮ ಕಾಲೇಜ್ ಗೇಟ್ ಮುಂದೆಯೂ ಧರಣಿ ನಡೆದಿತ್ತು. ಚಳವಳಿಯಲ್ಲಿ ಸಹಭಾಗಿಯಾಗಲು ನನ್ನ ಮನದ ಸಿದ್ಧತೆಯಾಗಿರಲಿಲ್ಲ. ತರಗತಿಯಲ್ಲಿ ಹಾಜರಿರುವ ಸಲುವಾಗಿ ನಾನು ಕಾಲೇಜ್ ಗೇಟ್ಗೆ ತಲುಪಿದ್ದೆ. ಅಲ್ಲಿ ನನ್ನನ್ನು ಕಂಡ ಡಾಕ್ಟರಜಿ, ಈ ಚಳವಳಿ ನಡೆಯುತ್ತಿದ್ದರೂ ನೀನು ಕಾಲೇಜಿಗೆ ಹೋಗ್ತಿಯೇನು?” ಎಂದು ಕೇಳಿದರು. ನಾನು ಅವರಿಗೆ ಉತ್ತರಿಸಲಾಗದೆ, ತಲೆ ತಗ್ಗಿಸಿ ಗೇಟ್ ದಾಟಿ ಒಳಗೆ ಹೋಗಿ ತರಗತಿಗೆ ಹಾಜರಾದೆ.
ಕೆಲವು ದಿನಗಳ ನಂತರ ನಾನು ಪತ್ರಿಕೋದ್ಯಮ ಪ್ರಶಿಕ್ಷಣಕ್ಕಾಗಿ ’ಮಹಾರಾಷ್ಟ್ರ’ ಪತ್ರಿಕೆಯ ಕಾರ್ಯಾಲಯದಲ್ಲಿ ಸಂಪಾದಕ ದಾದಾಸಾಹೇಬ ಓಗ್ಗೆಯವರ ಕೈ ಕೆಳಗೆ ಕೆಲಸಕ್ಕೆ ಸೇರಿದ್ದೆ. ಅಲ್ಲಿಗೆ ಡಾಕ್ಟರಜಿ ಆಗಾಗ ಬರುವ ರೂಢಿಯಿತ್ತು. ಒಮ್ಮೆ ಅವರು ನನ್ನನ್ನು ಅಲ್ಲಿ ಕಂಡರು. ನನಗಾಗ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ಡಾಕ್ಟರಜಿಗೆ ಇನ್ನೂ ನನ್ನ ಮೇಲೆ ಅಸಮಾಧಾನವಿರಬಹುದು ಎಂದುಕೊಂಡಿದ್ದೆ. ಆದರೆ ದಾದಾಸಾಹೇಬರ ಬಳಿ ನನ್ನ ಬಗ್ಗೆ ಅವರು ಪ್ರಸ್ತಾಪಿಸಿದುದು ಕೇಳಿ ಆಶ್ಚರ್ಯವಾಯಿತು. “ದಾದಾಸಾಹೇಬ್, ಹೊಸ ಶಿಷ್ಯನ ತರಬೇತಿ ನಡೆಯುತ್ತಿರುವಂತಿದೆ. ಈ ಹುಡುಗ ಜಾಣ, ಚುರುಕು ಸಹ ಇದ್ದಾನೆ. ಬೇಗನೆ ಚೆನ್ನಾಗಿ ತಯಾರಾದಾನು” ಎಂದರು. ಅವರ ಮಾತು ಕೇಳಿ ನಾನು ನಿಬ್ಬೆರಗಾಗಿ ಹೋದೆ. ಹಿಂದಿನ ಪ್ರಸಂಗದ ಒಂದು ಸೊಲ್ಲು ಸಹ ಅವರ ಮಾತಿನಲ್ಲಿರಲಿಲ್ಲ. ನಾನೆಸಗಿರುವ ತಪ್ಪು ತಿಳಿದಿದ್ದರೂ ಅದೆ? ತುಂಬು ಮನದ ಉದಾತ್ತತೆ! ಅವರ ಹೃದಯದ ವಿಶಾಲತೆಗಾಗಿ ಮನದಲ್ಲೆ ಅವರನ್ನು ವಂದಿಸಿದೆ”.
- ಶ್ರೀ ಕಾಲಿ, ಮರಾಠಿ ಸಾಹಿತಿ
ಸವಾಲುಗಳೆದುರು ಸ್ತಿಮಿತ ಮನಸ್ಸು
ಡಾಕ್ಟರಜಿಯವರು ವೈದ್ಯಕೀಯ ಶಿಕ್ಷಣ ಪೂರೈಸಿ ಕಲ್ಕತ್ತಾದಿಂದ ವಾಪಸ್ ಆದ ಮೇಲೆ ಅನೇಕ ದಿನಗಳ ಕಾಲ ವಸತಿ ಹೂಡಿದ್ದುದು ಡಾ| ಮುಂಜೆ ಅವರ ಮನೆಯಲ್ಲಿ. ಅವರ ಓಡಾಟ, ಇನ್ನಿತರ ಚಟುವಟಿಕೆಗಳ ಮೇಲೆ ಪೋಲಿಸರ ನಿಗಾ ಸದಾ ಇರುತ್ತಿದ್ದುದು ಸರ್ವವಿದಿತ. ನಾಗಪುರ ಮತ್ತು ಕಲ್ಕತ್ತಾ ಇವೆರಡೂ ಕಡೆಗಳಲ್ಲಿ ಪೋಲಿಸರಿಗೆ ಬೇಕಾಗಿದ್ದವರ ಪಟ್ಟಿಯಲ್ಲಿ ಅವರು ಒಬ್ಬರಾಗಿದ್ದವರು. ಆದರೆ ಎರಡೂ ಕಡೆಗಳಲ್ಲಿ ಪೋಲಿಸರಿಗೆ ತಲೆನೋವಾಗಿದ್ದ ಸಂಗತಿಯೆಂದರೆ ಅವರು ಬಂಧನಕ್ಕೆ ಅರ್ಹರೆಂಬುದನ್ನು ಸಾಬೀತು ಪಡಿಸಲು ಸಮರ್ಥನೀಯ ಸಾಕ್ಷ್ಯಗಳೇ ಲಭಿಸದಿರುತ್ತಿದ್ದುದು. ಮೇಲ್ನೋಟಕ್ಕೆ ಅವರ ನಡೆವಳಿಕೆ, ಚಟುವಟಿಕೆಗಳು ಎಲ್ಲವು ಖುಲ್ಲಂಖುಲ್ಲಾ, ತೆರೆದ ಪುಸ್ತಕವೇ. ಆದರೆ ವಾಸ್ತವಿಕತೆ ಹಾಗಿಲ್ಲವೆಂಬುದು ಸಹ ಪೋಲಿಸರಿಗೆ ಚೆನ್ನಾಗಿ ಗೊತ್ತಿತ್ತು. ಅ?ದರೂ ಬಂಧಿಸಿದ್ದೇ ಆದಲ್ಲಿ ಸಾಕ್ಷ್ಯವೇ ಇಲ್ಲದೆ ನ್ಯಾಯಾಲಯದಲ್ಲಿ ತಾವೇ ಉಗಿಸಿಕೊಳ್ಳ ಬೇಕಾದೀತೆಂಬುದು ಅವರಿಗಿದ್ದ ಭೀತಿ. ಕೊನೆಗೊಮ್ಮೆ ನಾಗಪುರದ ಪೋಲಿಸರು ಧೈರ್ಯವಹಿಸಿ ಸರ್ಚ್ ವಾರೆಂಟ್ ಹೊರಡಿಸಿ ಝಡ್ತಿಗಾಗಿ ಮನೆಗೆ ಬಂದರು. ಆದರೆ ಆಕ್ಷೇಪಾರ್ಹವಾದುದು ಏನೂ ಸಿಗದ ಕಾರಣದಿಂದಾಗಿ ಬರಿಗೈಯಲ್ಲಿ ವಾಪಸ್ ಹೋಗಬೇಕಾದ ಫಜೀತಿ ಅವರದಾಯಿತು.
ಡಾ| ಮುಂಜೆ ಅವರ ಮನೆ ಮೇಲೂ ಪೋಲಿಸರು ಧಾಳಿ ಮಾಡಿದರು. ಆ ಸಂದರ್ಭದಲ್ಲಿ ಡಾ| ಮುಂಜೆಯವರು ಸ್ನಾನ ಪೂರೈಸಿ ಸಂಧ್ಯಾವಂದನೆಯಲ್ಲಿ ತೊಡಗಿದ್ದರು. ಆದರೆ ಡಾಕ್ಟರಜಿಯವರು ಆ ಮನೆಯಲ್ಲಿದ್ದರು ಮತ್ತು ಕೆಲವು ನಿ?ಧಿತ ಪುಸ್ತಕಗಳೂ ಮನೆಯಲ್ಲಿದ್ದವು. ಅವು ಪೋಲಿಸರ ಲಕ್ಷ್ಯಕ್ಕೆ ಬಂದಲ್ಲಿ ಖಂಡಿತವಾಗಿ ಡಾಕ್ಟರಜಿಯವರ ಬಂಧನವಾಗುವ ಸಂಭವವಿತ್ತು. ಹೀಗಾಗಿ ಅವರ ಬುದ್ದಿ ಕೂಡಲೇ ಚುರುಕಾಯಿತು.
ಡಾ| ಮುಂಚೆಯವರ ಓರ್ವ ಸಹಕಾರಿ ಭೀ? ಎಂಬುವರು ಆ ಮನೆಯಲ್ಲಿದ್ದರು. ಡಾಕ್ಟರಜಿಯವರ ಕಣ್ಣ ಸನ್ನೆ ಮಾತ್ರದಿಂದಲೇ ಅವರು ಕೂಡಲೇ ಮನೆಯ ನೌಕರನಂತಾದರು. ಮನೆಯ ಕಸದ ಜತೆಯಲ್ಲಿ ನಿ?ಧಿತ ಪುಸ್ತಕಗಳನ್ನು ಕಸ ಬುಟ್ಟಿಯಲ್ಲಿ ತುಂಬಿದರು. ಪೋಲಿಸರು ನೋಡುತ್ತಿದ್ದಂತೆಯೇ ಅವರ ಮುಂದೆಯೇ ಕಸದ ಬುಟ್ಟಿಯನ್ನು ಹೊತ್ತು ಅವರು ಹೊರ ನಡೆದರು. ಇಲ್ಲಿ ಮನೆಯಲ್ಲಿ ಪೋಲಿಸರು ಆಕ್ಷೇಪಾರ್ಹ ಸರಕಿಗಾಗಿ ಹುಡುಕಿದ್ದೇ ಹುಡುಕಿದ್ದು; ಅಲ್ಲಿ ಅವರ ಕಣ್ಣ ಮುಂದೆಯೇ ಅವರಿಗೆ ಬೇಕಾಗಿದ್ದ ಸರಕು ಸುರಕ್ಷಿತವಾಗಿ ಹೊರಗೆ ದೂರ ಸಾಗಿತ್ತು.
ಸವಾಲುಗಳೆದುರಾದಾಗ ಮನಸ್ಸಿನ ಸ್ತಿಮಿತತೆ ಕಳೆದುಕೊಳ್ಳದೆ ಅವುಗಳನ್ನು ಪರಿಹರಿಸಿಕೊಳ್ಳುವುದೇ ಡಾಕ್ಟರಜಿಯವರ ವಿಶೇ?ತೆಯಾಗಿತ್ತು.
ಕೈ ತಪ್ಪಿದ ಶುಭಮುಹೂರ್ತ
ವೈದ್ಯಕೀಯ ಶಿಕ್ಷಣ ಪೂರೈಸಿ ಡಾಕ್ಟರಜಿ ನಾಗಪುರಕ್ಕೆ ಬಂದಾಗ ಮೊದಲನೇ ವಿಶ್ವಸಮರ ಗಂಭೀರ ಹಂತಕ್ಕೆ ತಲುಪಿತ್ತು. ಈ ಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಸರಕಾರದ ಸ್ಥಿತಿ ಸಹ ತುಂಬ ನಾಜೂಕಿನದಾಗಿತ್ತು. ಭಾರತದಲ್ಲಿ ಆಗ ಇದ್ದ ಬ್ರಿಟಿಷ್ ಸೈನ್ಯ ಸುಮಾರು ೨೦೦೦ದಷ್ಟು ಮಾತ್ರ. ಅಷ್ಟಾದರೂ ತಮ್ಮ ಶಕ್ತಿ ಸಾಕಷ್ಟಿದೆ ಎಂಬ ಭ್ರಮ ಮೂಡಿಸಲು ದೇಶಾದ್ಯಂತ ಮುಖ್ಯ ನಗರಗಳಲ್ಲೆಲ್ಲ ಅದನ್ನೇ ಒಯ್ದು ಬ್ರಿಟಿಷ್ ಸರಕಾರ ಪ್ರದರ್ಶಿಸುತ್ತಿತ್ತು.
ಡಾಕ್ಟರಜಿಗೆ ಆಗ ವಯಸ್ಸು 27-28ರ ನಡುವೆ. ತುಂಬು ತಾರುಣ್ಯದ ಜತೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಿಯಾಶೀಲ ಸಹಭಾಗಿತ್ವದಿಂದಾಗಿ, ಸರಕಾರದ ನಾಜೂಕಿನ ಸ್ಥಿತಿಯನ್ನು ಯಥಾರ್ಥವಾಗಿ ಅಳೆಯುವಂತಹ ಪರಿಪಕ್ವತೆ ಆಗ ಅವರಲ್ಲಿತ್ತು. ಶತ್ರುವಿನ ಸಂದಿಗ್ಧತೆಯ ಲಾಭ ಪಡೆಯಲು ಇದು ಸಕಾಲವೆಂದು ಅವರಿಗೆ ಅನಿಸಿದ್ದುದರಲ್ಲಿ ಆಶ್ಚರ್ಯವೇನಿಲ್ಲ. ದೇಶದ ಸ್ವಾತಂತ್ರ್ಯವನ್ನು ಘೋಷಿಸಲು ಶುಭಮುಹೂರ್ತ ಬಂದಿದೆ ಎಂಬುದೇ ಅವರ ನಿಷ್ಠೆಯಾಗಿತ್ತು.
ಆಗ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಪ್ರಭಾವೀ ನಾಯಕರ ಪೈಕಿ ಡಾ| ಮುಂಜೆ ಅವರೂ ಒಬ್ಬರು. ಡಾಕ್ಟರಜಿ ಅವರನ್ನು ಕಂಡು ತಮ್ಮ ಪೌರು?ಪೂರ್ಣಿ ಯೋಜನೆಯನ್ನು ಅವರ ಮುಂದಿರಿಸಿದರು: “ಬ್ರಿಟಿಷ್ ಶಾಸನದ ಹಿಡಿತ ಅತ್ಯಂತ ದುರ್ಬಲವಾಗಿರುವ ಕ್ಷಣ ಇದು. ಪ್ರಸ್ತುತ ಭಾರತದಲ್ಲಿ ಅದರ ಸೈನ್ಯ ಎರಡು ಸಾವಿರಕ್ಕಿಂತ ಹೆಚ್ಚಿಲ್ಲವೆಂಬ ಖಚಿತ ಮಾಹಿತಿಯನ್ನು ನಾನು ತಿಳಿದಿರುವೆ. ತನ್ನ ಶಕ್ತಿಯ ಭ್ರಮೆ ಸೃಷ್ಟಿಸಿ, ಜನರಲ್ಲಿ ಭಯ ಹುಟ್ಟಿಸುವ ಸಲುವಾಗಿ ಮಾತ್ರ ಅದು ತನ್ನಲ್ಲಿರುವ ಈ ಅಲ್ಪಸ್ವಲ್ಪ ಸೈನ್ಯವನ್ನು ಅಲ್ಲಲ್ಲಿ ಒಯ್ದು ಪ್ರದರ್ಶಿಸುತ್ತಿದೆ. ಈ ಶಕ್ತಿ ಕೇವಲ ತೋರಿಕೆಯದು, ಅಷ್ಟೆ. ಅದಕ್ಕಾಗಿ ಒಂದು ದಿನಾಂಕವನ್ನು ನಿರ್ಧರಿಸಿ ಅಂದು ಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಬೇಕು. ನಮ್ಮ ಸ್ವಾತಂತ್ರ್ಯಕ್ಕೆ ಹಿತೈಷಿಗಳಾದ ಅಮೆರಿಕ, ಫ್ರಾನ್ಸ್, ಐಗ್ಲೆಂಡ್ ಮುಂತಾದ ದೇಶಗಳಲ್ಲಿ ನಮ್ಮ ಸ್ವಾತಂತ್ರ್ಯದ ಬಹಿರಂಗ ಘೋಷಣೆಯ ವ್ಯವಸ್ಥೆಯಾಗಬೇಕು. ಅಂತಹ ಘೋಷಣೆಯಿಂದ ನಮ್ಮ ಜನರಲ್ಲಿ ಸ್ಫೂರ್ತಿ, ಆವೇಶ ಉಕ್ಕಿ ಹರಿಯುವುದು ನಿಶ್ಚಿತ. ಆಳುವ ಸರಕಾರ ಅದನ್ನು ಮಟ್ಟ ಹಾಕಲು ಮುಂದಾದರೂ ಜನಶಕ್ತಿ ಅದನ್ನು ನಿರಸ್ತಗೊಳಿಸುವುದರಲ್ಲಿ ಸಮರ್ಥವಾದೀತೆಂಬುದು ನಿಸ್ಸಂದೇಹ. ದೇಶದ ಸ್ವಾತಂತ್ರ್ಯದ ಸುವರ್ಣಗಳಿಗೆ ಈಗ ಸಮೀಪಿಸಿದೆ ಎಂದು ನನಗನ್ನಿಸುತ್ತಿದೆ”
ಆದರೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಹಿರಿಯರ ದೃಷ್ಟಿಯಲ್ಲಿ ಡಾಕ್ಟರಜಿ ಅವರು ಆಗ ಇನ್ನೂ ಬಿಸಿರಕ್ತದ ತರುಣ ಎಂದ? ಕಾಣಿಸುತ್ತಿತ್ತು. “ಹುಮ್ಮಸ್ಸು ಮೆಚ್ಚಬೇಕಾದುದೇ, ಆದರೆ ಅನುಭವ ಸಾಲದು” ಎಂದವರಿಗೆ ಅನಿಸುತ್ತಿತ್ತು. ಡಾ| ಮುಂಜೆ ಅವರ ಮನಸ್ಸಿನಲ್ಲೂ ಆಗ ಇದ್ದುದು ’ಸಾಮ್ರಾಜ್ಯಾಂತರ್ಗತ ಸ್ವರಾಜ್ಯದ್ದು’ (Donimion Status) ಮಾತ್ರ. ಅವರು ಡಾಕ್ಟರಜಿಯವರ ಕಲ್ಪನೆ, ಅವಲೋಕನ ಸಾಮರ್ಥ್ಯ, ವಿಶ್ಲೇಷಣೆ, ಇತ್ಯಾದಿ ಎಲ್ಲ ಮೆಚ್ಚಿ ಅವರ ಬೆನ್ನು ಚಪ್ಪರಿಸಿದರೂ ಪ್ರತ್ಯಕ್ಷ ವ್ಯವಹಾರಕ್ಕೆ ಅದನ್ನು ಇಳಿಸಲು ಮುಂದಾಗಲಿಲ್ಲ.
ಡಾಕ್ಟರಜಿಗೆ ಸ್ವರಾಜ್ಯ ಪ್ರಾಪ್ತಿಯ ಐತಿಹಾಸಿಕ ಸದವಕಾಶವೊಂದು ಕೈತಪ್ಪಿ ಹೋಯಿತೆಂದು ಅನಿಸಿದುದು ಸಹಜ.
ನಿಷ್ಕ್ರಿಯತೆಯ ದುಷ್ಪಲ ಅಪ್ರಸ್ತುತತೆ
ಗಾಂಧೀಜಿಯವರು ಅದೇ ತಾನೇ ಭಾರತದ ರಾಜಕೀಯ ರಂಗದಲ್ಲಿ ಪಾದಾರ್ಪಣೆ ಮಾಡಿದ್ದರು. ಅವರ ಅಸಹಕಾರ ಆಂದೋಲನದ ಕಲ್ಪನೆ, ಒಂದು ವ?ದಲ್ಲಿ ಸ್ವರಾಜ್ಯಪ್ರಾಪ್ರಿಯ ಭರವಸೆ ಇತ್ಯಾದಿ ಜನಮಾನಸದ ಮೇಲೆ ಮೋಡಿ ಮಾಡಿತ್ತು. ಆದರೆ ಈ ವಿಚಾರ ಕಾರ್ಯ ಸಾಧುವಲ್ಲ ಎಂದು ತಿಳಿಯುವವರಿಗೂ ಕಾಂಗ್ರೆಸ್ನಲ್ಲಿ ಕೊರತೆಯಿರಲಿಲ್ಲ. ಡಾ| ಮುಂಜೆ, ಸಿ.ಆರ್.ದಾಸ್ ಮೊದಲಾದವರು ಪೂರಾ ಭಿನ್ನಮತ ಹೊಂದಿದವರಾಗಿದ್ದರು. ಅವರು ತಮ್ಮ ಮುಂದಿನ ನಿಲುವು ಏನು, ಪರ್ಯಾಯ ಮಾರ್ಗ ಯಾವುದು ಎಂಬ ಬಗ್ಗೆಯೂ ಅನಿಶ್ಚಿತ ಸ್ಥಿತಿಯಲ್ಲಿದ್ದರು ಈ ಕುರಿತಾಗಿ ಚರ್ಚಿಸಿ ತಮ್ಮ ಮುಂದಿನ ಹೆಜ್ಜೆ ನಿರ್ಧರಿಸುವ ಸಲುವಾಗಿ ಅವರು ನಾಗಪುರದಲ್ಲಿ ಸೇರಿದ್ದರು. ಡಾಕ್ಟರಜಿ ಸಹ ಈ ಬೈಠಕ್ನಲ್ಲಿದ್ದರು. ಸಾಕಷ್ಟು ದೀರ್ಘ ಚರ್ಚೆಯ ನಂತರ ’ಒಂದು ವರ್ಷ ಕಾದು ನೋಡುವ’ ಎಂಬ ನಿಷ್ಕರ್ಷೆಗೆ ಅವರೆಲ್ಲ ತಲುಪಿದರು. ಡಾಕ್ಟರಜಿಗೆ ಈ ನಿರ್ಧಾರದಲ್ಲೂ ಅಪಾಯ ಗೋಚರಿಸಿತು. ವಯಸ್ಸಿನಲ್ಲಿ ಮಿಕ್ಕವರಿಗಿಂತ ಕಿರಿಯರಾಗಿದ್ದ ಅವರು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದರು.
“ಅರೆ ಮನಸ್ಸಿನಿಂದ ಕೈಗೊಳ್ಳುವ ನಿರ್ಧಾರದಿಂದ ಆಗುವ ಲಾಭವೇನೂ ಇಲ್ಲ. ಗಾಂಧಿಜಿಯವರ ವಿಚಾರವನ್ನು ಪೂರಾ ಒಪ್ಪಿ ಸ್ವೀಕರಿಸುವುದು ಅಥವಾ ಪೂರಾ ವಿರೋಧಿಸಿ ತಿರಸ್ಕರಿಸುವುದು – ಇವೆರಡರಲ್ಲಿ ಯಾವುದಾರೂ ಒಂದನ್ನು ಮಾತ್ರ ನಾವು ಸ್ವೀಕರಿಸುವುದು ಸೂಕ್ತವಾದೀತು. ಕಾದು ನೋಡುವಂತಹ ಕ್ರಿಯಾಹೀನ ಶೂನ್ಯತೆಯಿಂದ ನಾವು ನಿಂತ ನೆಲವನ್ನೇ ಕಳೆದುಕೊಳ್ಳುವ ಸಂಭವವಿದೆ. ಪ್ರಕೃತಿ ಶೂನ್ಯವನ್ನು ಎಂದೂ ಸಹಿಸದು. ನಾವೀಗ ಕ್ರಿಯಾಶೀಲರಾಗಿರದಿದ್ದಲ್ಲಿ ಸದಾಕಾಲಕ್ಕೂ ಅಪ್ರಸ್ತುತರಾಗುತ್ತೇವೆ. ಈಗ ಬೇಕಾದುದು ನಿಷ್ಕ್ರಿಯತೆಯೂ ಅಲ್ಲ, ತಾಟಸ್ಥ್ಯವೂ ಅಲ್ಲ, ಆದರೆ ಪೌರುಷದ ಹೆಜ್ಜೆ. ಸಾಹಸದ ಕೃತಿ.” ಡಾಕ್ಟರಜಿಯವರ ಮಾತಿನಲ್ಲಿ ಆವೇಶವಿತ್ತು. ಆದರೆ ಅಲ್ಲಿ ಸೇರಿದ್ದವರಲ್ಲಿ ಅವರು ವಯಸ್ಸಿನಿಂದ ಕಿರಿಯರಾಗಿದ್ದು ಉಳಿದವರೆಲ್ಲ ಹಿರಿಯರಾಗಿದ್ದವರು. ಡಾಕ್ಟರಜಿ ಹೇಳಿದ್ದ ಎಚ್ಚರಿಕೆಯ ಮಾತು ಅವರಾರಿಗೂ ಒಪ್ಪಿಗೆಯಾಗಲಿಲ್ಲ. ಹೀಗಾಗಿ ಕಾದು ನೋಡುವ ನಿರ್ಣಯ ಸ್ವೀಕೃತವಾಯಿತು. ಕಾಲ ಕಳೆದಂತೆ ಗಾಂಧೀಜಿಯವರ ವಿಚಾರದ ಮೋಡಿಯೇ ಜನಮಾನಸದಲ್ಲಿ ಉಳಿಯಿತು. ಭಿನ್ನ ಮತೀಯರೆಲ್ಲ ಅಪ್ರಸ್ತುತರಾದರು. ಡಾಕ್ಟರಜಿ ಹೇಳಿದುದೇ ಸತ್ಯವಾಯಿತು.
ಕ್ರಾಂತಿಕಾರಿಗಳ ಖಂಡನೆ ಸಲ್ಲದು
ಅಂದಿನ ಸಭೆಯಲ್ಲಿ ಇನ್ನೊಂದು ನಿರ್ಣಯವೂ ಚರ್ಚೆಗಾಗಿ ಮಂಡಿತವಾಯಿತು. ಕ್ರಾಂತಿಕಾರಿಗಳನ್ನು ಖಂಡಿಸುವ ನಿರ್ಣಯ ಅದು. ಅದು ಪ್ರಸ್ತಾಪಿತವಾದಂತೆಯ, ಡಾಕ್ಟರಜಿ ಎದ್ದು ನಿಂತರು, ಒಂದೇ ಮಾತಿನಲ್ಲಿ, ’ಈ ನಿರ್ಣಯಕ್ಕೆ ನನ್ನ ಪೂರಾ ವಿರೋಧವಿದೆ” ಎಂದು ಗುಡುಗಿದರು.
ಮೊದಲೇ ಹೇಳಿರುವಂತೆ ಆ ಸಭೆಯಲ್ಲಿ ಎಲ್ಲರಿಗಿಂತ ಕಿರಿಯರಾಗಿದ್ದವರು ಅವರೇ ಆದರೆ ಅವರ ಧ್ವನಿ, ಪ್ರತಿಕ್ರಿಯೆಯ ಶೈಲಿ ಇವನ್ನು ಕಂಡು, ಹೆಚ್ಚಿನ ಹಿರಿತಲೆಗಳು ಕ್ಷಣಕಾಲ ಸ್ತಂಭಿತವಾದವು. ಆಗ ಡಾಕ್ಟರಜಿಯವರ ಬೆಂಬಲಕ್ಕೆ ನಿಂತವರು ಲೋಕನಾಯಕ ಅಣೆಯವರು. ಡಾಕ್ಟರಜಿಯವರ ಕ್ರಾಂತಿಕಾರಿ ಮನೋಧರ್ಮ, ಈ ಹಿಂದಿನ ಅವರ ಚಟುವಟಿಕೆಗಳ ಪರಿಚಯ ಮತ್ತು ಚೌಕಾಸಿಯೇ ಇಲ್ಲದ ಅವರ ರಾಷ್ಟ್ರನಿಷ್ಠೆ ಇವೆಲ್ಲವನ್ನು ಚೆನ್ನಾಗಿ ತಿಳಿದಿದ್ದವರು. ಅಣೆ ಅವರು. ’ವಂದೇಮಾತರಂ’ ಚಳವಳಿಯಿಂದಾಗಿ ನೀಲಸಿಟಿ ಶಾಲೆಯಿಂದ ನಿಷ್ಕಾಸಿತರಾದ ಡಾಕ್ಟರಜಿ ಶಿಕ್ಷಣ ಮುಂದುವರಿಸಲು ಯವತಮಾಳ್ಗೆ ಬಂದಾಗ ತಮ್ಮಲ್ಲಿ ಅವರು ಉಳಿದುಕೊಂಡಿದ್ದುದು, ವೈದ್ಯಕೀಯ ಶಿಕ್ಷಣಕ್ಕಾಗಿ ಅವರನ್ನು ಕಲ್ಕತ್ತಾಗೆ ಕಳುಹಿಸುವುದರಲ್ಲಿ ಹಾಗೂ ಅಲ್ಲಿ ಅವರ ವಸತಿಗಾಗಿ ವ್ಯವಸ್ಥೆ ಮಾಡುವುದರಲ್ಲಿ ತಾನು ನಿರ್ವಹಿಸಿದ ಆಸಕ್ತಿ ಇವೆಲ್ಲವೂ ಅವರಿಗೆ ಕೂಡಲೇ ನೆನಪಾದವು. ಅವರು ಸಭೆಯನ್ನುದ್ದೇಶಿಸಿ ಮಾತಾಡುತ್ತ,
ಈ ನಿರ್ಣಯವನ್ನು ಡಾ| ಹೆಡಗೆವಾರ್ ವಿರೋಧಿಸುತ್ತಿರುವುದಕ್ಕೆ ಬಲವಾದ ಕಾರಣವಿದೆ. ಅವರು ಕ್ರಾಂತಿಕಾರಿಗಳ ಖಂಡನೆ ಸಹಿಸುವವರಲ್ಲ. ಇಲ್ಲಿರುವ ನಾವು ಕ್ರಾಂತಿಮಾರ್ಗವನ್ನು ಒಪ್ಪದೆ ಇರಬಹುದು. ಆದರೆ ಕ್ರಾಂತಿಕಾರಿಗಳ ದೇಶಭಕ್ತಿ ಪ್ರಶ್ನಾತೀತವಾದುದು. ಮಾರ್ಗ ಯಾವುದೇ ಇರಲಿ, ಆದರೆ ಸ್ವರಾಜ್ಯಪ್ರಾಪ್ತಿಗಾಗಿ ಕ್ರಾಂತಿಕಾರಿಗಳು ಮಾಡುವಂತಹ ಅಪೂರ್ವ ತ್ಯಾಗ, ಬಲಿದಾನ, ಅವರ ತೇಜಸ್ವಿ ರಾಷ್ಟ್ರನಿಷ್ಠೆ ಇವುಗಳನ್ನು ಖಂಡಿಸಲು ನಮಗೆ ಅಧಿಕಾರವಿಲ್ಲ. ನಾವು ಮಾಡಬೇಕಾದುದು ಅವರ ಖಂಡನೆಯಲ್ಲ, ಆದರೆ ಅವರಿಗೆ ಆದರಸಹಿತ ಕೃತಜ್ಞತೆಯ ಸಲ್ಲಿಸುವಿಕೆ” ಎನ್ನುತ್ತ ಡಾಕ್ಟರಜಿಯವರ ಜತೆ ತಮ್ಮ ಸಹಮತವನ್ನು ಪ್ರಕಟಿಸಿದರು.
ಇರುವಲ್ಲಿ ಒಂದಾಗಿ
ಕಾಂಗ್ರೆಸ್ ಎರಡು ಬಣಗಳಾಗಿ ಒಡೆದು ಹೋಗಿದ್ದ ಸಂದರ್ಭ. ಮಧ್ಯಪ್ರಾಂತೀಯ ಕಾಂಗ್ರೆಸ್ ಸಮಿತಿಯಲ್ಲಿ ಬಲವಾದ ಹಿಡಿತವಿದ್ದುದು ತಿಲಕರ ಅನುಯಾಯಿಗಳಾದ ತೀವ್ರಗಾಮಿಗಳದು. ಈ ಬಣದ ನಾಯಕರಲ್ಲಿ ಡಾಕ್ಟರಜಿಯವರೂ ಒಬ್ಬರು. ತೀವ್ರಗಾಮಿಗಳು ’ರಾಷ್ಟ್ರೀಯ ಮಂಡಲ’ ಎಂಬ ಹೆಸರಲ್ಲಿ ಕಾಂಗ್ರೆಸನ ಭಾಗವಾಗಿಯೇ ಪ್ರತ್ಯೇಕ ಸಂಸ್ಥೆಯೊಂದನ್ನು ರಚಿಸಿಕೊಂಡಿದ್ದರು.
’ರಾಷ್ಟ್ರೀಯ ಮಂಡಲ’ದ ವತಿಯಿಂದ ’ಸಂಕಲ್ಪ’ ಎಂಬ ಹಿಂದಿ ಸಾಪ್ತಾಹಿಕ ವೊಂದನ್ನು ಪ್ರಕಟಿಸಲು ನಿರ್ಧರಿಸಲಾಗಿತ್ತು. ಪತ್ರಿಕೆ ಹಿಂದಿ ಭಾ?ಯದಾದುದರಿಂದ ಅದರ ಹೆಚ್ಚಿನ ಪ್ರಸಾರವಾಗಬೇಕಾಗಿದುದು ಮಹಾಕೋಶಲ ಪ್ರದೇಶದಲ್ಲಿ. ಪ್ರಸಾರದ ಹೊಣೆಯನ್ನು ಸ್ವತಃ ನಿರ್ವಹಿಸಿದ ಡಾಕ್ಟರಜಿಯವರು ಅದಕ್ಕಾಗಿ 1919ರಲ್ಲಿ 4-5 ತಿಂಗಳ ಕಾಲ ಸಂಪೂರ್ಣ ಮಹಾಕೋಶಲ ಪ್ರದೇಶದಲ್ಲಿ ಪ್ರವಾಸ ಕೈಗೊಂಡರು.
ಅಲ್ಲಿನ ಪ್ರಮುಖ ನಗರ ರಾಯಪುರದಲ್ಲಿ ಪತ್ರಿಕೆಗೆ ಅನೆಕ ಚಂದಾದಾರರನ್ನು ಸೇರಿಸುವುದರಲ್ಲಿ ಅವರು ಸಫಲರಾದರು. ಸಾಮಾನ್ಯವಾಗಿ ಅವರು ಭೇಟಿ ಯಾಗುತ್ತಿದ್ದವರೆಲ್ಲ ಸಂತೋ?ದಿಂದಲೇ ಚಂದಾದಾರರಾಗಲು ಒಪ್ಪುತ್ತಿದ್ದರು. ಆದರೆ ಶ್ರೀ ಜ್ಞಾನರಂಜನ ಸೇನ್ ಎಂಬ ವಕೀಲರೊಬ್ಬರ ಬಳಿ ಅವರು ಹೋಗಿದ್ದ ಸಂದರ್ಭ. ಡಾಕ್ಟರಜಿ ಪತ್ರಿಕೆ ಬಗ್ಗೆ ಹೇಳಿದ ವಿಚಾರಗಳನ್ನೆಲ್ಲ ಕೇಳಿದ ಅವರು, “ನೋಡಿ, ನನಗೀಗ ಇಂಗ್ಲೀ? ಮತ್ತು ಬಂಗಾಲಿ ಪತ್ರಿಕೆಗಳು ಬರುತ್ತಿವೆ. ಅವುಗಳಿಂದಲೇ ಧಾರಾಳ ಸುದ್ದಿಗಳು ನನಗೆ ಲಭಿಸುತ್ತಿವೆ. ಅನಗತ್ಯವಾಗಿ ನಾನೇಕೆ ಹಿಂದಿ ಪತ್ರಿಕೆಗೆ ಚಂದಾದಾರನಾಗಲಿ? ಎಂದು ನಯವಾಗಿ ತಿರಸ್ಕರಿಸಿದರು.
ಅವರ ಈ ವಾದ ಕೇಳಿದ ಡಾಕ್ಟರಜಿಯವರು ಅಷ್ಟೇ ಬಲವಾಗಿ ’ನೋಡಿ, ನೀವೀಗ ಇರುವುದು ಹಿಂದಿ ಭಾಷೆಯ ಪ್ರದೇಶದಲ್ಲಿ. ನೀವು ವೃತ್ತಿ ನಡೆಸುತ್ತಿರುವುದು ಇಲ್ಲಿ. ನಿಮ್ಮ ವೃತ್ತಿಗೆ ನೀವು ಅವಲಂಬಿತರಾಗಿರುವುದು ಇಲ್ಲಿನ ಜನರ ಮೇಲೆ, ನಿಮಗೆ ಹಣಸಂಪಾದನೆಯಾಗುವುದು ಇಲ್ಲಿನವರಿಂದ. ಅಷ್ಟಾದರೂ ಇಲ್ಲಿನ ಭಾಷೆಯ ಪತ್ರಿಕೆಯೊಂದರ ಚಂದಾದಾರರಾಗಲು ನಿಮಗೆ ಭಾರವಾಗಬೇಕೇ’ ಎಂದು ತುಸು ಕಠೋರವಾಗಿಯೇ ಅವರನ್ನು ಪ್ರಶ್ನಿಸಿದರು. ಮಾತು ಮುಂದುವರಿಸುತ್ತ ಹಿಂದುಸ್ಥಾನದಲ್ಲಿರುವ ನಾವು ಇಲ್ಲಿನ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನವರಾಗಬೇಕು. ಅಲ್ಲಿನ ಭಾ?, ರೀತಿನೀತಿ ಇವೆಲ್ಲವುಗಳಲ್ಲಿ ಸಮರಸರಾಗಬೇಕು. ಅದು ಸಾಧ್ಯವಿಲ್ಲವೆಂದಾದಲ್ಲಿ ಅಲ್ಲಿ ಉಳಿಯಲೇಬಾರದು” ಎನ್ನುತ್ತ ಇನ್ನಷ್ಟು ಉಗ್ರವಾಗಿ ವಾದಿಸಿದರು. ಅವರ ಮಾತಿನಲ್ಲಿ ಉಕ್ಕಿ ಹರಿದ ಭಾರತದ ಏಕತೆಯ ಅನುಭೂತಿ ಅದೆಷ್ಟು ಪ್ರಭಾವಿಯಾಗಿತ್ತೆಂದರೆ ಆ ವಕೀಲರು ಮುಂದೆ ದುಸರಾ ಮಾತಿಲ್ಲದೆ ಪತ್ರಿಕೆಗೆ ಒಂದು ವರ್ಷದ ಚಂದಾ ಕಟ್ಟಿ ಗ್ರಾಹಕರಾದರು.
ಪ್ರೇರಕ ಕೋಪ
ಅಂದು 1920ರ ಜುಲಾಯಿ 1. ಸೂರ್ಯೋದಯದೊಂದಿಗೆ ಮರ್ಮಘಾತಕ ಸುದ್ದಿಯೊಂದನ್ನು ಕೇಳಿ ಸಂಪೂರ್ಣ ದೇಶವೇ ತಲ್ಲಣಿಸಿತ್ತು. ನಮ್ಮ ಸ್ವಾತಂತ್ರ್ಯ ಹೋರಾಟದ ಅಗಣಿ ಲೋಕಮಾನ್ಯ ತಿಲಕರು ಕೆಲವೇ ದಿನಗಳ ಕಾಯಿಲೆಯಿಂದಾಗಿ ತೀರಾ ಅನಿರೀಕ್ಷಿತವಾಗಿ ಹಿಂದಿನ ರಾತ್ರಿ ಮುಂಬಯಿಯಲ್ಲಿ ತಮ್ಮ ಕೊನೆಯುಸಿರು ಬಿಟ್ಟಿದ್ದರು. ಅದೇ ವ?ದ ಕೊನೆಯಲ್ಲಿ ನಾಗಪುರದಲ್ಲಿ ಕಾಂಗ್ರೆಸ್ ಅಧಿವೇಶನವನ್ನು ಅವರ ಅಧ್ಯಕ್ಷತೆಯಲ್ಲಿ ನಡೆಸಲು ಸರ್ವ ಸಿದ್ಧತೆಗಳು ರಭಸ ಪಡೆದಿದ್ದವು. ಆದರೆ ವಿಧಿಯ ಆಟ ನಾಗಪುರವಾಸಿಗಳ ಉತ್ಸಾಹಕ್ಕೆ ತಣ್ಣೀರೆರಚಿತ್ತು.
ಡಾಕ್ಟರಜಿಯವರ ಮನಸ್ಸಿಗಾದ ಆಘಾತವಂತೂ ಹೇಳಲಾಗದ? ತೀವ್ರ ರೀತಿಯದು. ಅವರು ಅದೇ ಮನಸ್ಥಿತಿಯಲ್ಲಿ ಡಾ| ಮುಂಜೆ ಅವರನ್ನು ಕಾಣಲು ಧಾವಿಸಿ ಹೋಗುತ್ತಿದ್ದರು. ದಾರಿಯಲ್ಲೊಂದು ಕಡೆ ಕೆಲವು ಶಾಲಾ ಬಾಲಕರು ಚೆಂಡಾಟದಲ್ಲಿ ತೊಡಗಿರುವುದು ಅವರಿಗೆ ಕಾಣಿಸಿತು. ಅದನ್ನು ಕಂಡು ಡಾಕ್ಟರಜಿಗೆ ಕೋಪ ತಡೆಯಲಾಗಲಿಲ್ಲ. ಅವರು ಆ ಬಾಲಕರನ್ನುದ್ದೇಶಿಸಿ, “ಅರೆ, ನಾಚಿಕೆ ಯಾಗುವುದಿಲ್ಲವೇ ನಿಮಗೆ? ಲೋಕಮಾನ್ಯ ತಿಲಕರು ಮೃತ್ಯುವಶರಾಗಿದ್ದಾರೆ. ನೀವು ಆಟದಲ್ಲಿ ಮಗ್ನರಾಗಿದ್ದೀರಿ. ಹೋಗಿ, ಹೋಗಿ, ಮನೆಗೆ ಹೋಗಿ” ಎಂದು ಕೆರಳಿ ನುಡಿದರು. ಆಗಲೂ ಆ ಬಾಲಕರಲ್ಲಿ ಒಬ್ಬಿಬ್ಬರು ಚರ್ಚೆಗೆ ಮುಂದಾದರು. ಆಗ ಡಾಕ್ಟರಜಿಯವರ ಕಣ್ಣುಗಳಲ್ಲಿ ಮಿಂಚಿದ ಕೆಂಡದಂತಹ ಕೋಪ ಅವರನ್ನು ಪೂರಾ ತಣ್ಣಗಾಗಿಸಿತು. ಎಲ್ಲರೂ ಆಟ ನಿಲ್ಲಿಸಿ ಮನೆಗೆ ತೆರಳಿದರು.
ಆ ಸಂದರ್ಭದಲ್ಲಿ ಡಾಕ್ಟರಜಿ ಹೇಳಿದ ಮಾತು, ದುಃಖ ಮತ್ತು ಕೋಪ ಇವುಗಳೇ ಮೈವೆತ್ತಂತೆ ಕಂಡ ಅವರ ರೂಪ, ಅವರಲ್ಲೊಬ್ಬ ಕಿಶೋರನ ಮನದ ಮೇಲೆ ಅದೆ? ಪ್ರಭಾವ ಬೀರಿತೆಂದರೆ, ಅವನ ಜೀವನದ ದಿಕ್ಕೇ ಬದಲಾಯಿತು. ಚೆಂಡಾಟಕ್ಕೆ ಶಾಶ್ವತ ವಿದಾಯ ಬಯಸಿ ಡಾಕ್ಟರಜಿಯವರ ಅನುಯಾಯಿಯಾದ ಆ ಕಿಶೋರನೇ ಮುಂದೆ ಸಂಘದ ಸ್ಥಾಪನೆಯ ನಂತರ ಅವರ ಬಲಗೈಯಂತೆ ಪ್ರಚಾರಕಾರ್ಯಕ್ಕಾಗಿ ತನ್ನ ಬದುಕನ್ನು ಮುಡುಪಾಗಿಸಿದ ದಾದಾ ಪರಮಾರ್ಥ.