ಶಿವಮೊಗ್ಗ June 27: ಹಿಂದೂ ಸೇವಾ ಪ್ರತಿಷ್ಠಾನ ಚಿಂದಿ ಆಯುವ ಮಕ್ಕಳಿಗಾಗಿ ರೂಪಿಸಿರುವ ಮಾಧವ ನೆಲೆಯ ನೂತನ ಕಟ್ಟಡದ ಲೋಕಾರ್ಪಣೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಕೃ.ಸೂರ್ಯನಾರಾಯಣರಾವ್ ಬುಧವಾರ ಲೋಕಾರ್ಪಣೆ ಮಾಡಿದರು.
ಬೀದಿ ಬೀದಿಗಳಲ್ಲಿ ಚಿಂದಿ ಆಯ್ದು ಜೀವನ ಮಾಡುತ್ತಿದ್ದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಹಿಂದೂ ಸೇವಾ ಪ್ರತಿಷ್ಠಾನದ ಕಲ್ಪನೆಯಲ್ಲಿ ಮೂಡಿ ಬಂದ ಮಾಧವ ನೆಲೆ ಕಳೆದ ೬ ವರ್ಷಗಳಿಂದ ಕಾರ್ಯ ಪ್ರವೃತ್ತವಾಗಿದ್ದು, ಅದಕ್ಕೊಂದು ಸ್ವಂತ ಕಟ್ಟಡ ಒದಗಿಸಿ ಸಂಸ್ಥೆ ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಬೇಕೆಂಬ ಕನಸು ಈಗ ಸಾಕಾರಗೊಂಡಿದೆ. ಕಲ್ಲಹಳ್ಳಿಯಲ್ಲಿ ಸುಮಾರು 1.20 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೂರು ಅಂತಸ್ತಿನ ಈ ಕಟ್ಟಡದಲ್ಲಿ ನಿವಾಸಿಗಳು ತಂಗಲು ಬೇಕಾದ ಕೊಠಡಿ, ಊಟದ ಹಾಲ್, ಅಡುಗೆ ಕೋಣೆ, ಮನೋರಂಜನೆಗೆ ಬೇಕಾದ ಟಿವಿ, ಸಂಗೀತ, ನೃತ್ಯ, ಯೋಗ ಮೊದಲಾದ ವುಗಳ ಅಭ್ಯಾಸಕ್ಕೆ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಶಾಸ್ತ್ರೋಕ್ತವಾಗಿಯೇ ಲೋಕಾರ್ಪಣೆ ಸಮಾರಂಭ ನಡೆಸಲಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಹಬ್ಬದ ಸಡಗರ ಏರ್ಪಟ್ಟಿತ್ತು. ಹೊಸ ಕಟ್ಟಡಕ್ಕೆ ಧಾವಿಸುವ ತರಾತುರಿಯಲ್ಲಿರುವ ಮಕ್ಕಳು, ಸ್ವಯಂ ಸೇವಕರು, ಸಾರ್ವಜನಿಕರೂ ಕೂಡ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಆರ್ಎಸ್ಎಸ್ನ ಜ್ಯೇಷ್ಠ ಪ್ರಚಾರಕರಾದ ಶ್ರೀ ಕೃ. ಸೂರ್ಯನಾರಾಯಣ ರಾವ್ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ನೆಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಕಾಸ ಟ್ರಸ್ಟ್ನ ಅಧ್ಯಕ್ಷ ಡಿ.ಎಚ್. ಸುಬ್ಬಣ್ಣ, ವಿಧಾನಪರಿಷತ್ ಸದಸ್ಯ ಪಿ.ವಿ. ಕೃಷ್ಣ ಭಟ್ ಮೊದಲಾದವರಿದ್ದರು.
24 ಮಕ್ಕಳು ಮಕ್ಕಳು ಮಾಧವ ನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಓರ್ವ ಪದವಿ, ೮ ಮಂದಿ ಪ್ರೌಢಶಾಲೆ, ಇಬ್ಬರು ಐಟಿಐ, ಉಳಿದ ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ.