ನೆಚ್ಚಿನ ಲೇಖಕ ದು.ಗು.ಲಕ್ಷ್ಮಣ್ ರಿಗೆ ಇಂದು ಅರವತ್ತು ತುಂಬಿದ ಸಂಭ್ರಮ. ‘ನೇರನೋಟ’ದಿಂದ ನೋಡಿದರೆ ಅವರಿಗಷ್ಟು ಪ್ರಾಯವಾದಂತೆ ಕಾಣಲ್ಲ. ಆದರೂ ಸಾಧನೆಯ 60 ಸಂವತ್ಸರಗಳನ್ನು ದಾಟಿದ ಈ ಸಂದರ್ಭದಲ್ಲಿ ಅವರ ಬಾಳಹಾದಿಯ ಒಂದಷ್ಟು ಮೈಲಿಗಲ್ಲುಗಳ ನೆನಪುಗಳನ್ನು ಮೆಲುಕು ಹಾಕೋಣ.

Du Gu Lakshman, turns 60

ಲಕ್ಷ್ಮಣ್ ಹುಟ್ಟಿದ್ದು 1952 ಜುಲೈ 13ರಂದು, ಶೃಂಗೇರಿ ತಾಲೂಕಿನ ಮೇಗೂರು ಎಂಬ ಗ್ರಾಮದಲ್ಲಿ. ತಂದೆ ಗುಂಡೂರಾವ್ – ತಾಯಿ ಗಿರಿಜಮ್ಮರಿಗೆ ಇಬ್ಬರು ಮಕ್ಕಳು. ಮೊದಲನೆಯವರು ಲಕ್ಷ್ಮಣ್ ಮತ್ತು ತಂಗಿ ಜ್ಯೋತಿ. ಲಕ್ಷ್ಮಣ್‌ರಿಗೆ ೪ ವರ್ಷವಾದಾಗಲೇ ಗುಂಡೂರಾಯರು ಸ್ವರ್ಗಸ್ಥರಾದರು. ಬಸ್ರೀಕಟ್ಟೆಯ ಸದ್ಗುರು ಆಶ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಪೂರೈಸಿದ ಲಕ್ಷ್ಮಣ್,  ಹರಿಹರಪುರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಪೂರ್ಣಗೊಳಿಸಿದರು. ನಂತರ ಕಾಲೇಜು ಮೆಟ್ಟಿಲು ಹತ್ತಿದ್ದು ಶಿವಮೊಗ್ಗದ ಡಿ.ವಿ.ಎಸ್. ಕಾಲೇಜು ಆವರಣದಲ್ಲಿ. ಅಲ್ಲೇ ಪಿ.ಯು.ಸಿ, ಬಳಿಕ ವಿಜ್ಞಾನ ವಿಷಯದಲ್ಲಿ ಪದವಿ.

ಕಾಲೇಜು ವಿದ್ಯಾರ್ಥಿ ಜೀವನ ಲಕ್ಷ್ಮಣ್‌ರಿಗೆ ಹೊಸ ತಿರುವು ನೀಡಿತು ಎನ್ನಲಡ್ಡಿಯಿಲ್ಲ. ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಇತರ ಸಾಮಾಜಿಕ ವಿಷಯಗಳ ಕುರಿತು ತಾವು ಆಸಕ್ತಿ-ಅಭಿರುಚಿ ಮೈಗೂಡಿಸಿಕೊಂಡಿದ್ದರಿಂದ ಓರ್ವ ಸಾಮಾಜಿಕ ಹೋರಾಟಗಾರರಾಗಿ ರೂಪಗೊಳ್ಳಲು ಪ್ರೇರಣೆಯಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಸಾಮಾಜಿಕ ಸಂಘಟನೆಗಳ ಒಡನಾಟ, ಅವುಗಳಲ್ಲಿ ಕಾರ್ಯಕರ್ತನಾಗಿ ತೊಡಗಿಸಿಕೊಳ್ಳುವಿಕೆ. ವೈಚಾರಿಕ ಆಂದೋಲನಗಳತ್ತ ಹರಿದ ಒಲವು ಇವೆಲ್ಲವೂ ಲಕ್ಷ್ಮಣ್‌ರನ್ನು ಓರ್ವ ಪಕ್ವ ಸಾಮಾಜಿಕ ಮುಂದಾಳುವನ್ನಾಗಿ ರೂಪಿಸಿತು. ವಿದ್ಯಾರ್ಥಿ ದಿನಗಳಿಂದಲೇ ಲೇಖನ-ಬರವಣಿಗೆಯಲ್ಲಿ ಇದ್ದ ಆಸಕ್ತಿ ಮುಂದೊಂದು ದಿನ ಅವರನ್ನು ಓರ್ವ ಪತ್ರಕರ್ತನಾಗಿ, ಪುಸ್ತಕಗಳ ಲೇಖಕನಾಗಿ, ಪ್ರತಿಷ್ಠಿತ ದೈನಿಕವೊಂದರ ಸಂಪಾದಕತ್ವದವರೆಗೆ ತಂದು ನಿಲ್ಲಿಸಿತು.

ವಿದ್ಯಾರ್ಥಿ ದೆಸೆಯಲ್ಲೇ ಆರೆಸ್ಸೆಸ್ ಜತೆಗಿನ ನಿಕಟ ಸಂಬಂಧ ಹಾಗೂ ತೀವ್ರ ಸಾಮಾಜಿಕ ಕಳಕಳಿ ಹೊಂದಿದ್ದರಿಂದ, 1975ರ ಜೂನ್ 10ರಂದು ಲಕ್ಷ್ಮಣ್ ಸಂಘದ ಪ್ರಚಾರಕರಾಗಿ ಹೊರಟರು. (ಪ್ರಚಾರಕ್ ಅಂದರೆ ಸಂಘದ ಕಾರ‍್ಯ ಚಟುವಟಿಕೆಗಳಿಗಾಗಿ ಪೂರ್ಣ ಸಮಯ ಮೀಸಲಿಟ್ಟು ಕೆಲಸ ಮಾಡುವವರು. ಅವರಿಗೆ ಸಂಬಳವಾಗಲೀ, ಮಾಶಾಸನವಾಗಲೀ ಇಲ್ಲ. ಧ್ಯೇಯಬದ್ಧ ಜೀವನವದು). ಮನೆಯಲ್ಲಿ ತಾನೊಬ್ಬನೇ ಗಂಡುಮಗ ಎಂಬ ಅರಿವಿದ್ದರೂ ಸಮಾಜದ ಮೇಲಿನ ಉತ್ಕಟ ಕಾಳಜಿಯಿಂದ ಪ್ರಚಾರಕರಾಗಿದರು. ಈ ಮುನ್ನ ತಂಗಿ ಜ್ಯೋತಿಯ ಮದುವೆಯನ್ನು ನೆರವೇರಿಸಿ, ಅಣ್ಣನ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದರು.

ಲಕ್ಷ್ಮಣ್ ಪ್ರಚಾರಕ್ ಆದ ಎರಡೇ ವಾರಗಳಲ್ಲಿ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ಆಗ 23ರ ಬಿಸಿರಕ್ತದ ಯುವಕ ಲಕ್ಷ್ಮಣ್ ಮೊದಲೇ ಹೋರಾಟದ ಮನೋಭಾವದವರು. ತುರ್ತು ಪರಿಸ್ಥಿತಿಯ ಸನ್ನಿವೇಶಗಳು ಹೋರಾಟದ ಬೆಂಕಿಗೆ ತುಪ್ಪ ಸುರಿಯಿತು. ಸುಳ್ಯ ತಾಲೂಕಿನಲ್ಲಿ ಭೂಗತರಾಗಿ ಹೋರಾಟ ನಡೆಸುತ್ತಿದ್ದ ಲಕ್ಷ್ಮಣ್ ’ಕಹಳೆ’ ಎಂಬ ಭೂಗತ ಪತ್ರಿಕೆ ಹೊರತರುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಮೊನಚಾದ ಲೇಖನ-ವರದಿಗಳ ಜೊತೆಗೆ ಯಶಸ್ವಿಯಾಗಿ ’ಕಹಳೆ’ ಓದುಗರನ್ನು ತಲುಪಿ ಅವರಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತಿತ್ತು. ಕೊನೆಗೆ ಲಕ್ಷ್ಮಣ್‌ರನ್ನು ಪೋಲೀಸರು ಬಂಧಿಸಿದ ನಂತರ   ಮಡಿಕೇರಿಯಲ್ಲಿ ೩ ತಿಂಗಳು ಜೈಲುವಾಸ ಅನುಭವಿಸಬೇಕಾಯಿತು. ಇದೇ ವೇಳೆ ಲಕ್ಷ್ಮಣ್‌ರ ತಂಗಿ ಜ್ಯೋತಿ ಅಕಾಲ ಮೃತ್ಯುವಿಗೀಡಾದರು. ಆದರೆ ಲಕ್ಷ್ಮಣ್‌ರಿಗೆ ಈ ವಿಷಯ ತಿಳಿದದ್ದು ಮೂರು ತಿಂಗಳ ಸೆರವಾಸದ ನಂತರ ಜೈಲಿನಿಂದ ಬಿಡುಗಡೆಗೊಂಡಾಗ!

ಬಳ್ಳಾರಿಗೆ ತೆರಳಿ ಅಲ್ಲಿ ಮತ್ತೊಂದು ಭೂಗತ ಪತ್ರಿಕೆ ’ರಣದುಂಧುಬಿ’ಯನ್ನು ಹೊರತರುವಲ್ಲಿ ಲಕ್ಷ್ಮಣ್ ಪಾತ್ರ ಮಹತ್ವದ್ದು. ಅದರ ಸಂಪಾದಕರಾಗಿಯೂ ವಿತರಕರಾಗಿಯೂ ಓಡಾಡಿದರು. ನಂತರ ಬೆಂಗಳೂರಿಗೆ ಬಂದಾಗ ವಿಧಾನ ಪರಿಷತ್ ಸದಸ್ಯ ಗುಂಡಯ್ಯ ಶೆಟ್ಟಿ, ಭಾವೂರಾವ್ ದೇಶ್‌ಪಾಂಡೆ ಜತೆಗೆ ಸಂಪರ್ಕ, ಒಡನಾಟ.

ತುರ್ತು ಪರಿಸ್ಥಿತಿ ವೇಳೆ ಸುಳ್ಯ-ಸುಬ್ರಹ್ಮಣ್ಯ ಪ್ರದೇಶದಲ್ಲಿ ಸಂಘದ ಪ್ರಚಾರಕರಾಗಿದ್ದ ಲಕ್ಷ್ಮಣ್ ನೂರಾರು ಯುವಕರನ್ನು ಸತ್ಯಾಗ್ರಹಕ್ಕೆ ಹೊರಡಿಸಿದ್ದರು. ಸುಬ್ರಹ್ಮಣ್ಯದ ಹಿರಿಯ ಕಾರ್ಯಕರ್ತ ಅನಂತ ನಲ್ಲೂರಾಯರ ಜತೆ ಸೇರಿ ಹೊರಡಿಸಿದ ಮೊದಲನೇ ತಂಡದ ಅನೇಕ ಯುವಕರನ್ನು ಪೋಲೀಸರು ಬಂಧಿಸಿದರು. ಮತ್ತೆ ಎರಡನೇ ತಂಡ ಹೊರಡಿಸಲು ಗ್ರಾಮಕ್ಕೆ ಹೋದಾಗ ’ಮತ್ತೆ ಬಂದಿರಾ? ನಮ್ಮ ಮಕ್ಕಳನ್ನು ಜೈಲಿಗೆ ಕಳುಹಿಸಿ ನೀವು ಆರಾಮವಾಗಿ ತಿರುಗಾಡ್ತಾ ಇದ್ದೀರಲ್ಲಾ’ ಎಂದು ಕೆಲ ತಾಯಂದಿರು ಕೈಗೆ ಪೊರಕೆ ಎತ್ತಿದ್ದನ್ನು ಲಕ್ಷ್ಮಣ್ ಇನ್ನೂ ಮರೆತಿಲ್ಲ.

ತುರ್ತು ಪರಿಸ್ಥಿತಿ ಮುಗಿದ ಮೇಲೆ ಆ ಸಂಘರ್ಷದ ದಿನಗಳು, ಹೋರಾಟದ ಹಾದಿ, ವಿವಿಧ ಘಟನೆಗಳು, ಮರೆಯಲಾರದ ಪ್ರಸಂಗಗಳನ್ನು ಕ್ರೋಢೀಕರಿಸಿ ’ಭುಗಿಲು’ ಎಂಬ ಪುಸ್ತಕ ಹೊರತರಲಾಯಿತು. ಆ ಉದ್ಗ್ರಂಥದ ೪ ಪ್ರಮುಖ ರೂವಾರಿಗಳೆಂದರೆ ಸ್ವರ್ಗೀಯ ಹೊ.ವೆ.ಶೇಷಾದ್ರಿಗಳು, ದತ್ತಾತ್ರೇಯ ಹೊಸಬಾಳೆ (ಈಗಿನ ಆರೆಸ್ಸೆಸ್ ಸಹಪ್ರಧಾನ ಕಾರ್ಯದರ್ಶಿ), ಕಾ.ಶ್ರೀ ನಾಗರಾಜ (ಹಿರಿಯ ಪ್ರಚಾರಕರು, ಲೇಖಕರು), ಹಾಗೂ ದು.ಗು.ಲಕ್ಷ್ಮಣ್.

1979ರಲ್ಲಿ ಅರಸೀಕೆರೆಗೆ ಪ್ರಚಾರಕರಾಗಿ ತೆರಳಿದ ಲಕ್ಷ್ಮಣ್, 1980ರಿಂದ 1985ರವರೆಗೆ ಶಿವಮೊಗ್ಗದಲ್ಲಿ ಜಿಲ್ಲಾ ಪ್ರಚಾರಕರಾಗಿ ಜವಾಬ್ದಾರಿ ನಿರ್ವಹಿಸಿದರು. ಸಾವಿರಾರು ತರುಣರನ್ನು ಸಂಘದ ಸಂಪರ್ಕಕ್ಕೆ ತಂದರು. 1985ರ ಮಧ್ಯ ಭಾಗದಿಂದ 1986ರ ತನಕ ಮಂಗಳೂರಿನಲ್ಲಿ ಪ್ರಚಾರಕರಾಗಿ ಕಡಲತಡಿಯಲ್ಲಿ ಸಂಘದಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಶ್ರಮಿಸಿದರು.

12 ವರ್ಷಗಳ ಪ್ರಚಾರಕ ಬದುಕಿನ ನಿವೃತ್ತಿಯ ಬಳಿಕ, ಮಂಗಳೂರಿನಲ್ಲಿ ಆದಾಗಲೇ ಪ್ರಾರಂಭಗೊಂಡಿದ್ದ ಹೊಸದಿಗಂತ ಪತ್ರಿಕೆಯ ಕಚೇರಿಗೆ ಕಾಲಿರಿಸಿದ ಲಕ್ಷ್ಮಣ್ ನಂತರ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು.1995ರಲ್ಲಿ ಬೆಂಗಳೂರು ಆವೃತ್ತಿಯ ಸಂಪಾದಕರಾಗಿ ಜವಾಬ್ದಾರಿ. 2012ರ ವೇಳೆಗೆ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಬೆಂಗಳೂರು – ಈ ನಾಲ್ಕೂ ಆವೃತಿಗಳ ಪ್ರಧಾನ ಸಂಪಾದಕರಾಗಿದ್ದ ಲಕ್ಷ್ಮಣ್ ಇತ್ತೀಚೆಗೆ, ಜೂನ್ ೧೮ರಂದು ಸಂಪಾದಕ ಹುದ್ದೆಯಿಂದ ನಿರ್ಗಮಿಸಿದರು. ಇದೀಗ ಹೊಸದಿಗಂತ ಆಡಳಿತ ಮಂಡಳಿಯ ನಿರ್ದೇಶಕರಲ್ಲಿ ಓರ್ವರಾಗಿ ಪತ್ರಿಕೆಯ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದಾರೆ. ಕಳೆದ ೨೬ ವರ್ಷಗಳಿಂದ ಹೊಸದಿಗಂತದೊಂದಿಗೆ ಬೆಸೆದುಕೊಂಡಿರುವ ಲಕ್ಷ್ಮಣ್‌ರಿಗೆ ಪತ್ರಿಕೆಯ ಜತೆಗಿನ ಸಂಬಂಧ ’ಕರುಳಬಳ್ಳಿಯದ್ದು’ ಎಂದರೂ ಅತಿಶಯೋಕ್ತಿಯಲ್ಲ. ಲಕ್ಷ್ಮಣ್, ಸಂಪಾದಕರಾಗಿ ನಿವೃತ್ತರಾದಾಗ ಹೇಳಿದ ಮಾತು “Hosadigantha is in my heart”.  ಹೃದಯದ ಅಂತಃಕರಣದಲ್ಲಿ ಹೊಸದಿಗಂತ ಕುರಿತು ಅವರ ಕಾಳಜಿ ಇನ್ನೂ ಬತ್ತಿಲ್ಲ.

’ನೇರನೋಟ’ – ಹೆಸರಲ್ಲಿ ಪ್ರತಿ ಸೋಮವಾರ ಹೊಸದಿಗಂತದಲ್ಲಿ ಪ್ರಕಟಗೊಳ್ಳುವ ಲಕ್ಷ್ಮಣ್‌ರ ಅಂಕಣವು ವಿವಿಧ ಕನ್ನಡ ಪತ್ರಿಕೆಗಳ ಚರ್ಚಿತ ಅಂಕಣಗಳ ಪೈಕಿ ಒಂದು. ಮೊನಚು ಶಬ್ದಗಳಲ್ಲಿ, ಸ್ಪಷ್ಟವಾಗಿ ಸಾಮಯಿಕ ವಿಶ್ಲೇಷಣೆಗಳನ್ನು ತೆರೆದಿಡುತ್ತಿದ್ದ ಈ ಅಂಕಣವು, ಲಕ್ಷ್ಮಣ್‌ರಿಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿ ಓದುಗರನ್ನು ಹುಟ್ಟು ಹಾಕಿತು. 2011ರ ಮಾರ್ಚ್ 24ರಂದು ಇಸ್ರೇಲ್ ಕುರಿತ ಲೇಖನ, 2012ರ ಮಾರ್ಚ್ 26ರಂದು ಬಿಜೆಪಿ ಬಿಕ್ಕಟ್ಟು-ಕಾರ್ಯಕರ್ತರ ಇಕ್ಕಟ್ಟಿನ ಕುರಿತ ಲೇಖನಗಳನ್ನು ಇಂದಿಗೂ ಅವರ ಓದುಗರು ನೆನಪಿಸಿಕೊಳ್ಳುತ್ತಾರೆ. ಪತ್ರಿಕೆಯ ಸಂಪಾದಕರೊಬ್ಬರ ಸಾಮಾಜಿಕ ಆಗು ಹೋಗುಗಳ ಬಗ್ಗೆ ಇರಬೇಕಾದ ಒಳನೋಟ , ವಿಶ್ಲೇಷಣಾತ್ಮಕ ದೃಷ್ಟಿ ಎಲ್ಲವೂ ನೇರ ನೋಟ ಅಂಕಣದಲ್ಲಿ ವ್ಯಕ್ತವಾಗುತ್ತಿತ್ತು.

ಕಾರ್ಗಿಲ್ ಯುದ್ಧದ ತರುವಾಯ ಕಾರ್ಗಿಲ್ ಯುದ್ಧದ ಹಿನ್ನೆಲೆ-ನೆನಪು ಹೊತ್ತ ಪುಸ್ತಕ ’ಕಾರ್ಗಿಲ್ ಕಂಪನ’, ಹಿರಿಯ ಪ್ರಚಾರಕರಾಗಿದ್ದ ಸುಬ್ಬು ಶ್ರೀನಿವಾಸ್‌ರ ಕುರಿತ ’ಘೋಷ್ ತಪಸ್ವಿ’ ಪುಸ್ತಕ, ರಾಷ್ಟ್ರೋತ್ಥಾನ ಸಾಹಿತ್ಯ ಹೊರತಂದು ’ಭಾರತ-ಭಾರತಿ’ ಸರಣಿಯ ಕೆಲ ಪುಸ್ತಕಗಳನ್ನು ಲಕ್ಷ್ಮಣ್ ಬರೆದಿದ್ದಾರೆ.

2003ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಂದ ಪ್ರತಿಷ್ಠಿತ ’ನಚಿಕೇತ’ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಲಕ್ಷ್ಮಣ್‌ರಿಗೆ ಹತ್ತಾರು ಪ್ರಶಸ್ತಿ-ಸಮ್ಮಾನಗಳು ದೊರೆತಿವೆ. ಹಿಂದೂಸ್ಥಾನ್ ಸಮಾಚಾರ್ ಸಂಸ್ಥೆಯ ’ನಾ.ಬಾ.ಲೇಲೆ’ ಪ್ರಶಸ್ತಿ, ಕರ್ನಾಟಕದ ರಾಜ್ಯಪಾಲರಿಂದ ’ಚರಕ ಪ್ರಶಸ್ತಿ’, ೨೦೧೦ರಲ್ಲಿ ’ರಾಜ್ಯೋತ್ಸವ ಪ್ರಶಸ್ತಿ’, ಸೇರಿದಂತೆ ನಾಡಿನ ಹಲವಾರು  ಸಂಘ ಸಂಸ್ಥೆಗಳಿಂದ ಲಕ್ಷ್ಮಣ್‌ರನ್ನು ಅಭಿನಂದಿಸಿ, ಪ್ರಶಸ್ತಿಗಳು ಅರಸಿ ಬಂದಿವೆ.

ಆರೆಸ್ಸೆಸ್ ಕರ್ನಾಟಕದ ಮೊಟ್ಟಮೊದಲ ಪತ್ರಿಕೆ, ’1948ರಲ್ಲಿ ಪ್ರಾರಂಭಗೊಂಡ ’ವಿಕ್ರಮ’ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ ಲಕ್ಷ್ಮಣ್ ಮುಂದುವರೆಯಲಿದ್ದಾರೆ. ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಹ ಪ್ರಚಾರ ಪ್ರಮುಖರಾಗಿಯೂ ಸಂಘದ ಜವಾಬ್ದಾರಿ ಹೊಂದಿದ್ದಾರೆ. ಪತ್ನಿ ಸುಜಾತಾ, ಮಗ ಪ್ರದೀಪ್, ತಾಯಿ ಗಿರಿಜಮ್ಮ ಜತೆ ಸಂತೃಪ್ತ ಸಂಸಾರ ಸಾಗಿಸುತ್ತಿರುವ ಲಕ್ಷ್ಮಣ್‌ರಿಗೆ ಅಭಿಮಾನಿ ಓದುಗರ ಹಾಗೂ ಸಂಘಪರಿವಾರದ ಎಲ್ಲ ಗೆಳೆಯರ ಪರವಾಗಿ ಅಭಿನಂದನೆ.

ಹಿರಿಯರು ಅಂದಂತೆ:

ದುಗುಲ ತನ್ನನ್ನು ತಾನೇ ಕೆತ್ತಿಕೊಂಡ ಒಬ್ಬ ಶಿಲ್ಪಿ. ಪರಿಸ್ಥಿತಿಗೆ ತಕ್ಕಂತೆ ತನ್ನನ್ನು ರೂಪಿಸಿಕೊಂಡು ಅದರಂತೆ ಬೆಳೆದು ನಿಂತ ವ್ಯಕ್ತಿತ್ವ ಅವರದ್ದು.  ಬದುಕಿನಲ್ಲಿ ರಾಷ್ಟ್ರ ಮತ್ತು ಜೀವನ ಮೌಲ್ಯಕ್ಕೆ ಅತ್ಯಂತ ಆದ್ಯತೆಯ ಸ್ಥಾನವನ್ನು ಅವರು ಕೊಟ್ಟಿದ್ದಾರೆ. ನನ್ನ ಸ್ನೇಹಿತರಾದ ಅವರು ಜೀವನದುದ್ದಕ್ಕೂ ಮೌನವಾಗಿ ಆದರೆ ಹಿರಿದಾದ ಸಾಧನೆಯನ್ನು ತಪಸ್ಸಿನಂತೆ ಮಾಡಿದವರು.

–     ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹ,  ಆರೆಸ್ಸೆಸ್

ಇದ್ದಿದ್ದನ್ನು ಇದ್ದಹಾಗೆ ಯಾವುದೇ ದುಗುಡವಿಲ್ಲದೆ ಹೇಳುವ ಸ್ವಭಾವ ಲಕ್ಷ್ಮಣ್‌ರದ್ದು. ನೇರವಾಗಿ, ನಿಸ್ಸಂಕೋಚವಾಗಿ, ಸ್ಪಷ್ಟ ಶಬ್ದಗಳಲ್ಲಿ ಬರೆಯುವ ಪ್ರಕೃತಿ ಅವರದ್ದು. ಯಾರ ಬಗ್ಗೆಯೂ, ಯಾವತ್ತೂ, ಯಾವುದೇ ಮುಜುಗರವಿಲ್ಲದೆ ಬರೆದವರು. ಕನ್ನಡದಲ್ಲಿ ಆ ರೀತಿ ಬರೆಯುವ ವಿರಳ ಲೇಖಕರ ಪೈಕಿ ಲಕ್ಷ್ಮಣ್ ಒಬ್ಬರು.

– ದಿನೇಶ್ ಕಾಮತ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಸಂಸ್ಕೃತ ಭಾರತಿ

ಲಕ್ಷ್ಮಣ್ ಕೇವಲ ಒಬ್ಬ ಲೇಖಕರಲ್ಲ, ನೇರನೋಟ ಅಂಕಣಗಳನ್ನೆಲ್ಲಾ ಅಧ್ಯಯನ ಮಾಡಿದ ಮೇಲೆ ಅವರೊಬ್ಬ ಸಮಾಜ ವಿಜ್ಞಾನಿ ಅನ್ನಿಸುತ್ತಿದೆ. ಇದು ನನ್ನ ಅಂತರಂಗದ ಅಕಳಂಕ  ಅಭಿಪ್ರಾಯ.

ಡಾ ದೊಡ್ಡರಂಗೇಗೌಡ, ಸಾಹಿತಿ

2 thoughts on “Lakshman @ 60: ’ದುಗು’ಡವಿಲ್ಲದ ಸಾಧಕನಿಗೆ ಅರುವತ್ತು

  1. “dugu”ge aravattu andare nambalaguttilla.Adare satya.dugu bagge yenu helali? ondu vishayada aalakke hogi kedaki bidibidiyagi aritu bareuvakale duguge siddisittu.avara lekhana karya nirantaravagi hariyali.baradaada managalannu toysali

Leave a Reply

Your email address will not be published.

This site uses Akismet to reduce spam. Learn how your comment data is processed.