ಹುಬ್ಬಳ್ಳಿ : ಇಲ್ಲಿನ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ್ ಗಾರ್ಡನ್‌ನಲ್ಲಿ ಜುಲೈ 22 ರಿಂದ ಆಗಸ್ಟ್ 6 ರವರೆಗೆ ವಿಶ್ವಸಮಿತಿ ಶಿಕ್ಷಾ ವರ್ಗ (ಶಿಬಿರ) ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಸ್ವಯಂ ಸೇವಕಿ ಹಾಗೂ ಶಿಬಿರ ಸರ್ವಾಧಿಕಾರಿಣಿ ಅಲಕಾ ಇನಾಮದಾರ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 22 ರಂದು ಬೆಳಗ್ಗೆ 10.30 ಶಿಕ್ಷಾ ವರ್ಗಕ್ಕೆ ಚಾಲನೆ ದೊರೆಯಲಿದೆ. ವಕ್ತಾರರಾಗಿ ಅಖಿಲ ಭಾರತೀಯ ಕಾರ್ಯವಾಹಿಕಾ ಶಾಂತಕ್ಕ ಪಾಲ್ಗೊಳ್ಳುವರು. ವೇದವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕ ಡಾ. ರಾಮಚಂದ್ರ ಭಟ್ ಕೋಟೆಮನೆ ಅಧ್ಯಕ್ಷತೆ ವಹಿಸುವರು ಎಂದರು.
ದೇಶವಿದೇಶದಲ್ಲಿ ನೆಲೆಸಿದ ಹಿಂದು ಮಹಿಳೆಯರನ್ನು ಸಂಘಟಿಸುವ, ಧರ್ಮ, ಸಂಸ್ಕೃತಿ ರಕ್ಷಣೆಗಾಗಿ ಪ್ರೇರೇಪಿಸುವ ಕಾರ್ಯ ಈ ಸಮಿತಿ ಮಾಡುತ್ತಿದೆ. ಮಹಿಳೆಯರಿಗೆ ಶಾರೀರಿಕ , ಬೌದ್ಧಿಕ , ಮಾನಸಿಕ ಬೆಳವಣಿಗೆಗೆ ಪೂರಕ ಕಾರ್ಯಚಟುವಟಿಕೆ ನೀಡಲಾಗುತ್ತಿದೆ. ಜಗತ್ತಿನ ೩೪ರಾಷ್ಟ್ರಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಹರಡುವಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವಿಶ್ವವಿಭಾಗದ ಶಿಬಿರವನ್ನು ನಡೆಸಲಾಗುತ್ತಿದೆ. ಈಗಾಗಲೇ ನಾಸಿಕ್, ಪುಣೆ, ನಾಗಪೂರ ಮೊದಲಾದೆಡೆ ಶಿಬಿರಗಳಾಗಿವೆ. ೫ನೇ ವಿಶ್ವ ಸಮಿತಿ ಶಿಕ್ಷಾ ವರ್ಗ ಶಿಬಿರ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಎಂದರು.
ಶಿಬಿರದಲ್ಲಿ ಸುಮಾರು ೧೬ ರಾಷ್ಟಗಳಿಂದ, ಪ್ರಮುಖವಾಗಿ ಅಮೆರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಮಲೇಶಿಯಾ, ಸಿಂಗಪೂರ, ಟ್ರೇನಿಡಾಡ್ ಮುಂತಾದ ಕಡೆಗಳಿಂದ ೬೦ ಶಿಬಿರಾರ್ಥಿಗಳು ಬರುತ್ತಿದ್ದಾರೆ ಎಂದರು.
ಸಮಿತಿ ಐದು ಸಾವಿರ ಶಾಖೆ ಹೊಂದಿದ್ದು, ೧೫ ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಉತ್ತಮ ಪ್ರಶಿಕ್ಷಣ ನೀಡಲು ಆಸ್ಸಾಂ, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ ಮುಂತಾದ ಕಡೆಗಳಿಂದ ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಅಧಿಕಾರಿ ವರ್ಗದವರು ಬರುತ್ತಿದ್ದಾರೆ ಎಂದರು.
ರಾಷ್ಟ್ರಸೇವಿಕಾ ಸಮಿತಿಯ ವಿಶ್ವ ಸಮಿತಿಯ ಶಿಕ್ಷಾವರ್ಗದ ಸ್ವಾಗತ ಸಮಿತಿಯ ಅಧ್ಯಕ್ಷೆ ನಯನಾ ದೇಸಾಯಿ, ವರ್ಗಕಾರ್ಯವಾಹಿಕಾ ವೇದಾ ಕುಲಕರ್ಣಿ, ಕಾರ್ಯದರ್ಶಿ ಸುಲೋಚನಾ ನಾಯಕ, ರಾಧಾ ಕುಲಕರ್ಣಿ, ಸಂಧ್ಯಾ ದೀಕ್ಷಿತ್, ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.