ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಭಾರತದಲ್ಲಿ ನಡೆಯುವ ರಾಷ್ಟ್ರ ಸೇವಿಕಾ ಸಮಿತಿಯ ವಿಶ್ವ ಸಮಿತಿ ಶಿಕ್ಷಾ ವರ್ಗ ಈ ಬಾರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಇಂದಿನಿಂದ ಪ್ರಾರಂಭವಾದ ಈ ವರ್ಗ ಆಗಸ್ಟ 5 ರವರೆಗೆ ನಡೆಯಲಿದೆ. ಈ ಪ್ರಶಿಕ್ಷಣ ವರ್ಗದಲ್ಲಿ 7 ದೇಶಗಳ 52ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ವಿಶ್ವ ಸಮಿತಿ ಶಿಕ್ಷಾ ವರ್ಗ 2012ಕ್ಕೆ ಚಾಲನೆ
ಹುಬ್ಬಳ್ಳಿ July 22: ವಯಂ ವಿಶ್ವಶಾಂತೈ ಚಿರಂ ಯತ್ನ ಶೀಲಾಃ ಎಂಬ ದ್ಯೇಯದೊಂದಿಗೆ ರಾಷ್ಟ್ರ ಸೇವಿಕಾ ಸಮಿತಿಯ ವಿಶ್ವ ಸಮಿತಿ ಶಿಕ್ಷಾ ವರ್ಗ 2012 ಕ್ಕೆ ಇಂದಿಲ್ಲಿ ಚಾಲನೆ ನೀಡಲಾಯಿತು.
ಇಲ್ಲಿಯ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನ್‌ನಲ್ಲಿ ಇಂದು ಮುಂಜಾನೆ ವೇದ ವಿeನ ಗುರುಕುಲದ ಡಾ.ರಾಮಚಂದ್ರ ಭಟ್ ಕೋಟೆಮನೆಯವರ ಸಾರಥ್ಯದಲ್ಲಿ ನಡೆದ ನವಗೃಹ ಹೋಮ ಶಿಬಿರಕ್ಕೆ ಮಂಗಲಕರವಾದ ಪ್ರಾರಂಭವನ್ನು ನೀಡಿತು.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಭಾರತದಲ್ಲಿ ನಡೆಯುವ ವಿಶ್ವ ಸಮಿತಿ ಶಿಕ್ಷಾ ವರ್ಗದಲ್ಲಿ ಸಮಿತಿಯ ಕಾರ್ಯವಿರುವ ದೇಶಗಳ ಆಯ್ದ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಈ ಪ್ರಶಿಕ್ಷಣ ವರ್ಗದಲ್ಲಿ ಸಂಘಟನೆಯ ಕಾರ್ಯದ ಜೊತೆಗೆ ವಿಶ್ವ ಮಾಂಗಲ್ಯದ ಗುರಿ ಸಾಧನೆಗಾಗಿ ಬೇಕಾದ ಶಿಕ್ಷಣವನ್ನು ನೀಡಲಾಗುತ್ತದೆ. ಇಂತಹ ಒಂದು ಶಿಬಿರ ಕರ್ನಾಟದಲ್ಲಿ ಪ್ರಥಮ ಬಾರಿ ನಡೆಯುತ್ತಿದ್ದು, ಹುಬ್ಬಳ್ಳಿಗೆ ಅದರ ಆತಿಥ್ಯದ ಸೌಭಾಗ್ಯ ದೊರಕಿದೆ. ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಗಣ್ಯರನ್ನು ಒಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದ್ದು ಕಳೆದ ಒಂದು ತಿಂಗಳಕ್ಕೂ ಹೆಚ್ಚು ಸಮಯದಿಂದ ಹತ್ತಾರು ಕಾರ್ಯಕರ್ತೆಯರಿ ಸಿದ್ಧತೆಯ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಶಿಬಿರದಲ್ಲಿ ಭಾಗವಹಿಸಲು ೭ ದೇಶಗಳಿಂದ ೫೨ ಪ್ರತಿನಿಧಿಗಳು ಆಗಮಿಸಿದ್ದಾರೆ. ಇಂಗ್ಲೆಂಡ್, ಶ್ರೀಲಂಕಾ, ಕೀನ್ಯಾ, ಟ್ರಿನಿಡಾಡ್, ಮೊರೆಶಿಯಸ್, ಮುಂತಾದ ದೇಶಗಳಿಂದ ಈ ಪ್ರತಿನಿಧಿಗಳು ಆಗಮಿಸಿದ್ದಾರೆ. ಈ ಎಲ್ಲ ಪ್ರತಿನಿಧಿಗಳು ಆಯಾ ದೇಶದ ಸಮಿತಿ ಕಾರ್ಯದ ಪ್ರಮುಖ ಕಾರ್ಯಕರ್ತೆಯರಾಗಿದ್ದಾರೆ. ಶಿಬಿರದಲ್ಲಿ ವ್ಯವಸ್ಥೆಗಳ ಉಸ್ತುವಾರಿಗಾಗಿ 50ಕ್ಕೂ ಹೆಚ್ಚು ಸ್ವಯಂಸೇವಕಿಯರು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದಾರೆ.
ಇಂದು ನಡೆದ ಔಪಚಾರಿಕ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರಕರಾದ ಗೋಪಾಲಜೀ, ನಗರ ಸಂಘಚಾಲಕರಾದ ಡಾ.ಗೋ.ಹ.ನರೇಗಲ್, ಕೆಪಿಎಸ್‌ಸಿ ಸದಸ್ಯ ಡಾ. ಎಂ.ನಾಗರಾಜ್, ಡಾ.ಆನಂದ ಪಾಂಡುರಂಗಿ, ವಿಕ್ರಮ ಶಿರೂರ್, ಹುಡಾ ಅಧ್ಯಕ್ಷ ಲಿಂಗರಾಜ್ ಪಾಟೀಲ್, ಶಿಲ್ಪಾ ಶೆಟ್ಟರ್ ಮುಂತಾದವರು ಭಾಗವಹಿಸಿದ್ದರು.
ವೈವಿದ್ಯಮಯ ಕಾರ್ಯಕ್ರಮಗಳು:
15 ದಿನಗಳ ಕಾಲ ನಡೆಯಲಿರುವ ಈ ವರ್ಗದಲ್ಲಿ ಶಿಬಿರಾರ್ಥಿಗಳ ಸರ್ವಾಂಗೀಣ ವಿಕಾಸಕ್ಕಾಗಿ ಹಲವು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾರೀರಿಕ ಹಾಗೂ ಬೌದ್ಧಿಕ ಕಾರ್ಯಕ್ರಮಗಳ ಹೊರತಾಗಿ ಶಿಕ್ಷಕರು, ವೈದ್ಯರು, ಮಹಿಳಾ ಉದ್ಯಮಿಗಳೊಂದಿಗೆ ಸಂವಾದ, ಹುಬ್ಬಳ್ಳಿಯಲ್ಲಿನ ವಿವಿಧ ಸೇವಾ ಪ್ರಕಲ್ಪಗಳ ಭೇಟಿ, ಮಾತೃ ಭೋಜನ, ರಕ್ಷಾಬಂಧನ, ಪಥ ಸಂಚಲನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.
ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಅನೇಕ ಹಿರಿಯ ಸಾಮಾಜಿಕ ಕಾರ್ಯಕರ್ತರು ಆಗಮಿಸಲಿದ್ದಾರೆ. ಇವರಲ್ಲಿ ಆರೆಸ್ಸೆಸ್ಸ್‌ನ ಹಿರಿಯ ಪ್ರಚಾರಕರಾದ ಕೃ.ಸೂರ್ಯನಾರಾಯಣರಾವ್, ರಂಗಾ ಹರಿ, ವಿಶ್ವ ವಿಭಾಗದ ಶ್ಯಾಮ್ ಪರಾಂಡೆ, ಸದಾನಂದ ಸಪ್ರೆ, ಹಿಂದು ಸ್ವಯಂಸೇವಕ ಸಂಘದ ರವಿ ಅಯ್ಯರ್, ಯುಥ ಫಾರ್ ಸೇವಾದ ವೆಂಕಟೇಶ ಮೂರ್ತಿ ಅಲ್ಲದೇ ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ಪ್ರೆಮಿಳಾ ತಾಯಿ ಮೇಢೆ, ಸಹ ಕಾರ್ಯವಾಹಿಕಾ ರೇಖಾ ರಾಜೇ, ಆಶಾ ಶರ್ಮಾ, ಸುಲಭಾ ದೇಶಪಾಂಡೆ ಪ್ರಮುಖರು.
ಶಿಬಿರಾರ್ಥಿಗಳನ್ನು ಆಕರ್ಷಿಸುತ್ತಿರುವ ಪ್ರದರ್ಶನಿ
ಹುಬ್ಬಳ್ಳಿ: ವಿಶ್ವ ಸಮಿತಿ ಶಿಕ್ಷಾ ವರ್ಗದ ವರ್ಗಸ್ಥಾನದಲ್ಲಿ ಏರ್ಪಡಿಸಲಾಗಿರುವ ಪ್ರದರ್ಶಿನಿ ಜಗತ್ತಿನ ಬೇರೆ ಬೇರೆ ಭಾಗಗಳಿಂದ ಆಗಮಿಸಿರುವ ಶಿಕ್ಷಾರ್ಥಿಗಳಿಗೆ ಬಹುವಾಗಿ ಆಕರ್ಷಿಸುತ್ತಿದೆ. ಪ್ರಾಚೀನ ಹಾಗೂ ಆಧುನಿಕ ಭಾರತದ ಸಾಧನೆ, ಸಾಂಸ್ಕೃತಿಕ ವೈಭವವನ್ನು ಸಾರುವ ಇಲ್ಲಿನ ಫಲಕಗಳು ಶಿಕ್ಷಾರ್ಥಿಗಳಿಗೆ eನದ ಜೊತೆಯಲ್ಲಿ ತಮ್ಮ ಪೂರ್ವಜರ ದೇಶದ ಸಾಧನೆಯ ಬಗ್ಗೆ ಹೆಮ್ಮೆಯನ್ನು ಮೂಡಿಸುತ್ತದೆ.
ಕೈಯಲ್ಲಿ ನೋಟ್ ಪ್ಯಾಡ್ ಹಿಡಿದ ಶಿಕ್ಷಾರ್ಥಿಗಳು ಫಲಕದಲ್ಲಿರುವ ಮಾಹಿತಿಗಳನ್ನು ಬರೆದುಕೊಳ್ಳುತ್ತ, ಸಹ ಶಿಕ್ಷಾರ್ಥಿಗಳೊಂದಿಗೆ ಚರ್ಚಿಸುವ ದೃಶ್ಯ ಸಾಮಾನ್ಯವಾಗಿತ್ತು.
ಸಂಭ್ರಮದ ನಾಗರ ಚೌತಿ
ಶಿಬಿರದ ಪ್ರಾರಂಭದ ದಿನ ನಾಗರ ಚೌತಿಯ ಹಬ್ಬದ ದಿನ ಕೂಡ ಅದುದರಿಂದ ಶಿಬಿರಸ್ಥಾನದಲ್ಲಿ ಉಪಸ್ಥಿತರಿದ್ದ ಎಲ್ಲ ಭಗಿನಿಯರು ಗೋಧಿ ಕಾಳು ಹಚ್ಚಿದ ಮಣ್ಣಿನ ನಾಗರಹಾವಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಇದು ಬಹುತೇಕ ಶಿಬಿರಾರ್ಥಿಗಳಿಗೆ ಹೊಸ ಅನುಭವವಾಗಿತ್ತು.
ಇದಲ್ಲದೇ ಈ ಭಾಗದಲ್ಲಿ ಆಚರಿಸಲ್ಪಡುವ ಮಣ್ಣೆತ್ತಿನ ಅಮವಾಸ್ಯ, ಶಿರಾಳ ಸಷ್ಠಿ, ಗುಳ್ಳವ್ವ, ಕೃಷ್ಣಾಷ್ಟಮಿಯನ್ನು ಆಚರಿಸುವಾಗ ಮಾಡಲ್ಪಡುವ ಮಣ್ಣಿನ ಮೂರ್ತಿಗಳನ್ನು ಇಟ್ಟು ಅವುಗಳ ಬಗ್ಗೆ ಮಾಹಿತಿಯನ್ನು ಬರೆಯಲಾಗಿತ್ತು. ಭಾರತೀಯ ಮನೆ, ಅದರ ವ್ಯವಸ್ಥೆ, ಅಡುಗೆ ಪಾತ್ರೆಗಳು ಮುಂತಾದವುಗಳನ್ನು ಪ್ರದರ್ಶನದಲ್ಲಿಟ್ಟು ಶಿಬಿರಾರ್ಥಿಗಳಿಗೆ ಭಾರತದ ಮನೆ ಹಾಗೂ ಹಬ್ಬ ಹರಿದಿನಗಳ ಪರಿಚಯ ನೀಡಲಾಯಿತು.
ಅದ್ದೂರಿ ಸ್ವಾಗತ ಪ್ರೀತಿಯ ಆತಿಥ್ಯ
ಹುಬ್ಬಳ್ಳಿ: ವಿಶ್ವ ಸಮಿತಿ ಶಿಕ್ಷಾವರ್ಗಕ್ಕೆ ಬೇರೆ ಬೇರೆ ದೇಶಗಳಿಂದ ಆಗಮಿಸಿದ ಶಿಕ್ಷಾರ್ಥಿಗಳಿಗೆ ಹುಬ್ಬಳ್ಳಿಯ ಬಂಧುಗಳಿಂದ ಅದ್ದೂರಿಯ ಸ್ವಾಗತ ನೀಡಲಾಯಿತು.
ಶನಿವಾರ ಬೆಳ್ಳಿಗ್ಗೆಯಿಂದ ರಸ್ತೆ, ರೈಲು, ವಾಯು ಮಾರ್ಗಗಳಿಂದ ಹುಬ್ಬಳ್ಳಿಗೆ ಆಗಮಿಸಿದ ಶಿಕ್ಷಾರ್ಥಿಗಳನ್ನು ಅವರಿಗೆ ಆತಿಥ್ಯ ನೀಡಬೇಕಾದ ಕುಟುಂಬಗಳ ಸದಸ್ಯರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ಆ ದಿನದ ಪ್ರೀತಿಯ ಆತಿಥ್ಯವನ್ನು ನೀಡಿದರು.
ನಂತರ ಸಂಜೆ ನಾಲ್ಕು ಗಂಟೆಗೆ ಆತಿಥ್ಯ ನೀಡಿದ ಕುಟುಂಬದ ಸದಸ್ಯರೊಂದಿಗೆ ಶಿಬಿರಸ್ಥಾನಕ್ಕೆ ಆಗಮಿಸಿದ ಶಿಕ್ಷಾರ್ಥಿಗಳನ್ನು ಶೆಹನಾಯಿಯ ಮಂಗಲ ವಾದನ, ಪುಷ್ಪವೃಷ್ಠಿ, ಹಣೆಗೆ ಅರಿಶಿನ ಕುಂಕುಮ ಹಚ್ಚಿ, ಆರತಿ ಎತ್ತಿ ಅಲ್ಲಿ ನೆರೆದಿದ್ದ ಭಗನಿಯರಿಂದ ಅದ್ದೂರಿ ಸ್ವಾಗತ ನೀಡಲಾಯಿತು.
ಭಾರತೀಯ ಮೌಲ್ಯಗಳಿಂದ ಜಗತ್ತು ಬೆಳಗಲಿ
ಹುಬ್ಬಳ್ಳಿ: ಭಾರತದ ಸರ್ವಕಾಲಿಕ ಮೌಲ್ಯಗಳಿಂದ ಜಗತ್ತು ಬೆಳಗಲಿ. ಭಾರತೀಯ ಚಿಂತನೆಗಳಿಂದ ಜಗತ್ತು ಶಾಂತಿಯ ಧಾಮವಾಗಲಿ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಪ್ರಮುಖ ಕಾರ್ಯವಾಹಿಕಾ ಮಾನ್ಯನೀಯ ಶಾಂತಕ್ಕಾ ಹೇಳಿದರು. ನಗರದ ಶ್ರೀನಿವಾಸ ಗಾರ್ಡನ್‌ನಲ್ಲಿ ಭಾನುವಾರ ಪ್ರಾರಂಭವಾದ ವಿಶ್ವ ಸಮಿತಿ ಶಿಕ್ಷಾ ವರ್ಗ 2012ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡುತ್ತಿದ್ದರು.
ಭಯೋತ್ಪಾದನೆ, ಮತಾಂತರ, ಭೋಗವಾದ ಮುಂತಾದ ಸಮಸ್ಯೆಗಳಿಂದ ಜಗತ್ತು ತೊಳಲಾಡುತ್ತಿದೆ. ಅರ್ಥ ಮತ್ತು ಕಾಮದ ಬಾಹ್ಯ ಸುಖಕ್ಕಾಗಿ ಆತುರರಾಗಿರುವ ಮಾನವ ಸಮಾಜ ಇಂದು ನೈತಿಕ ಅಧಃಪತನದತ್ತ ಸಾಗಿದೆ. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಭಾರತದ ಸರ್ವಕಾಲಿಕ ಮೌಲ್ಯಗಳು ಹಾಗೂ ಭಾರತದ ಚಿಂತನೆ ವಿಶ್ವದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಇದರಿಂದ ಜಗತ್ತಿನಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ ಎಂದು ನುಡಿದರು.
ಭಾರತೀಯ ಚಿಂತನೆಯಲ್ಲಿ ವಯಕ್ತಿಕ ಉನ್ನತಿಯ ಜೊತೆಯಲ್ಲಿಯೇ ಸಮಾಜದ , ರಾಷ್ಟ್ರದ ಹಾಗೂ ವಿಶ್ವದ ಕಲ್ಯಾಣದ ವಿಚಾರ ಅಡಗಿದೆ. ವಸುದೈವ ಕುಟುಂಬಕಂ ಎಂಬ ಘೋಷ ವಾಕ್ಯ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಉದಾತ್ತ ಭಾರತೀಯ ಚಿಂತನೆಗೆ ಸಾಕ್ಷಿ.ಪ್ರತಿಯೊಬ್ಬ ವ್ಯಕ್ತಿ ಸ್ವಾರ್ಥ ಚಿಂತನೆ ಬದಿಗೊತ್ತಿ ಸಮಾಜಮುಖಿ ಚಿಂತನೆ ನಡೆಸಿದಾಗ ಮಾತ್ರ ಆತನ ಮತ್ತು ಸಮಾಜದ ವಿಕಾಸ ಸಾಧ್ಯ. ಪ್ರತಿಯೊಬ್ಬ ಮನುಷ್ಯನನ್ನು ಭಗವಂತನ ಸ್ವರೂಪ ಎಂದು ಗುರುತಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೇದ ವಿeನ ಶೋಧ ಸಂಸ್ಥಾನದ ನಿರ್ದೇಶಕ ಡಾ. ರಾಮಚಂದ್ರ ಭಟ್ ಕೋಟೆಮನೆ ಮಾತನಾಡಿ, ಜಗತ್ತು ಇಂದು ಭವಿಷ್ಯದ ಕುರಿತು ಅಂಧಕಾರದಲ್ಲಿ ಮುಳುಗಿದೆ. ಇದಕ್ಕೆ ಕಾರಣ ಜೀವನದ ಕುರಿತು ಬೆಳಕು ನೀಡಬೇಕಾದ ಕುಟುಂಬ ವ್ಯವಸ್ಥೆ ಇಂದು ಕಾಣೆಯಾಗುತ್ತಿದೆ. ಇದು ಸಮಾಜದಲ್ಲಿ ಕಾಣುತ್ತಿರುವ ಅನೇಕ ಮನೋವ್ಯಾಕುಲಕ್ಕೆ ನೇರ ಕಾರಣವಾಗಿದೆ. ಕುಟುಂಬದ ಮೂಲ ಘಟಕ ತಾಯಿ. ಒಬ್ಬ ಮಹಿಳೆ ಮಾತೃತ್ವದ ಸ್ಥಾನಕ್ಕೇರಿದಾಗ ಮಾತ್ರ ಆಕೆ ಪರಿಪೂರ್ಣಳು. ಆಕೆ ಕೇವಲ ತನ್ನ ಮಕ್ಕಳಿಗೆ ತಾಯಿ ಆಗಬೇಕೆಂದಲ್ಲ. ಮಾತೃ ಹೃದಯದ ವಾತ್ಸಲ್ಯ ಬಯಸುವ ಎಲ್ಲರಿಗೂ ಆಕೆ ತಾಯಿಯಾಗಬಹುದು. ಇಂತಹ ಮಾತೆಯರನ್ನು ನಿರ್ಮಾಣ ಮಾಡುವ ಸ್ತುತ್ಯಕಾರ್ಯ ಇಂದು ಇಲ್ಲಿ ನಡೆಯುತ್ತಿರುವುದು ಮನಸ್ಸಿಗೆ ನೆಮ್ಮದಿ ತರುವ ವಿಚಾರವಾಗಿದೆ. ಈ ವರ್ಗದಲ್ಲಿ ಪಡೆದ ಶಿಕ್ಷಣದ ಜ್ಯೋತಿಯೊಂದಿಗೆ ತೆರಳಿ ನಿಮ್ಮ ನಿಮ್ಮ ದೇಶಗಳಲ್ಲಿ ಭಾರತೀಯ ಚಿಂತನೆಯ ಬೆಳಕನ್ನು ಹರಡಿ ಎಂದು ಹೇಳಿದರು.
ವರ್ಗ ಸರ್ವಾಧಿಕಾರಿ ಅಲಕಾತಾಯಿ ಇನಾಂದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೆಸ್ಸೆಸ್‌ನ ದಕ್ಷಿಣ ಮಧ್ಯ ಕ್ಷೇತ್ರ ಪ್ರಚಾರಕರಾದ ಮಂಗೇಶ ಭೇಂಡೆ, ನಿರ್ಮಲಾತಾಯಿ ಗೋಖಲೆ, ಸ್ವಾಗತ ಸಮಿತಿಯ ಅಧ್ಯಕ್ಷೆ ನಯನಾ ದೇಸಾಯಿ ವೇದಿಕೆಯಲ್ಲಿದ್ದರು.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಭಾರತದಲ್ಲಿ ನಡೆಯುವ ರಾಷ್ಟ್ರ ಸೇವಿಕಾ ಸಮಿತಿಯ ವಿಶ್ವ ಸಮಿತಿ ಶಿಕ್ಷಾ ವರ್ಗ ಈ ಬಾರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಇಂದಿನಿಂದ ಪ್ರಾರಂಭವಾದ ಈ ವರ್ಗ ಆಗಸ್ಟ 5 ರವರೆಗೆ ನಡೆಯಲಿದೆ. ಈ ಪ್ರಶಿಕ್ಷಣ ವರ್ಗದಲ್ಲಿ 7 ದೇಶಗಳ 52ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
೧೯೩೬ರಲ್ಲಿ ವಿಜಯದಶಮಿಯಂದು ನಾಗಪುರದಲ್ಲಿ ಮಾನನೀಯ ಲಕ್ಷ್ಮೀಬಾಯಿ ಕೇಳ್ಕರ್ ಅವರಿಂದ ಪ್ರಾರಂಭವಾದ ರಾಷ್ಟ್ರ ಸೇವಿಕಾ ಸಮಿತಿ ಇಂದು ದೇಶದಲ್ಲಿ ೫೦೦೦ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ ಹಾಗೂ ೭೫೦ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಅಲ್ಲದೇ ಜಗತ್ತಿನ ೨೬ ದೇಶಗಳಲ್ಲಿ ೩೫೦ ಕ್ಕೂ ಹೆಚ್ಚು ಶಾಖೆಗಳನ್ನು ಕೂಡ ಹೊಂದಿದೆ.