ಸಂಘದ ಪ್ರತ್ಯಕ್ಷ ಆರ್ಥಿಕ ನಿರ್ವಹಣೆಗೆ ಯಾವ ರಾಜಕಾರಣಿಯ ಕೃಪಾಶೀರ್ವಾದದ ಅವಶ್ಯಕತೆ ಇಲ್ಲ. ಪ್ರಾರಂಭದಿಂದಲೂ ಸ್ವಯಂಸೇವಕರು ತಮ್ಮ ಸಮರ್ಪಣೆಯ ಭಾಗವಾಗಿ ಅರ್ಪಿಸುವ ಗುರುದಕ್ಷಿಣೆಯ ಆಧಾರದಲ್ಲೇ ಈವರೆಗೂ ಸಂಘವು ಸ್ವಾಭಿಮಾನಿಯಾಗಿ ಬೆಳೆದಿದೆ. ಮುಂದೆಯೂ ಬೆಳೆಯಲಿದೆ. ಸ್ವಯಂಸೇವಕರು ನಿರ್ವಹಿಸುವ ಸಂಸ್ಥೆಗಳಿಗೆ ಆರ್ಥಿಕ ಸಹಕಾರ ಮಾಡಿದ್ದಾರೆಂಬ ಕಾರಣಕ್ಕೆ ಅವರ ಅನೈತಿಕ ವ್ಯವಹಾರಗಳನ್ನು ಮನ್ನಿಸುವಷ್ಟು ದುರ್ಬಲ ಮನಃಸ್ಥಿತಿ ಸಂಘದ ನೇತೃತ್ವದ್ದಲ್ಲ.
ಇಂದಿನ ರಾಜಕೀಯ ಸನ್ನಿವೇಶದಲ್ಲಿ ಮೇಲೆದ್ದಿರುವ ಭ್ರಷ್ಟಾಚಾರ, ಜಾತಿವಾದ – ಸ್ವಜನ ಪಕ್ಷಪಾತ-ಸ್ವಾರ್ಥ ಇತ್ಯಾದಿ ಭೂತಗಳ ಕಾಟಕ್ಕೆ ಪ್ರಮುಖ ನಾಯಕರೆಲ್ಲರೂ ಒಳಗಾಗಿರುವುದು ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಎಲ್ಲರಲ್ಲೂ ಆತಂಕ ನಿರ್ಮಾಣ ಮಾಡಿದೆ. ಬಲಿಷ್ಠ ರಾಷ್ಟ್ರನಿರ್ಮಾಣದ ಕನಸು ಹೊತ್ತು ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಗಂತೂ ಇದು ತೀವ್ರವಾದ ಆಘಾತ.
’ಸೃಷ್ಟಿ-ನಾಶ-ಮರುಸೃಷ್ಟಿ ಮಾಡುವ ಎಲ್ಲ ಶಕ್ತಿಯೂ ಸಂಘಕ್ಕಿದೆ’ ಎಂದು ಜನಸಂಘದ ಅಧ್ಯಕ್ಷರಾಗಿದ್ದ ಆರೆಸ್ಸೆಸ್ಸಿನ ಮೂಲದವರಾದ ಪಂಡಿತ ದೀನದಯಾಳ್ ಉಪಾಧ್ಯಾಯರು ಅವರ ಕಾಲದ ರಾಜಕೀಯ ಸನ್ನಿವೇಶದಲ್ಲಿ ಸಂಘ-ಜನಸಂಘದ ಸಂಬಂಧದ ಕುರಿತಾಗಿ ಹೇಳಿದ್ದರು.
ಬಿಜೆಪಿಯ ರಾಜಕೀಯ ನಿರ್ವಹಣೆ-ಅಸ್ಪಷ್ಟತೆ-ಪತನದ ಲಕ್ಷಣಗಳನ್ನು ಹತ್ತಿರದಿಂದ ಗಮನಿಸುವ ಅನೇಕ ಹಿತೈಷಿಗಳ-ಸ್ವಯಂಸೇವಕರ ಮನದಲ್ಲಿ ದೀನದಯಾಳ ಉಪಾಧ್ಯಾಯರು ಹೇಳಿರುವ ಇಂತಹದೊಂದು ಪ್ರಕ್ರಿಯೆಯಲ್ಲಿ ಸಂಘವು ತೊಡಗಬಾರದೇಕೆ? ಎಂಬ ಪ್ರಶ್ನೆ ಎದ್ದಿದೆ. ಭ್ರಷ್ಟಾಚಾರ-ಜಾತೀಯತೆ-ಜಗಳಗಳ ಹಣೆಪಟ್ಟಿ ಹಚ್ಚಿಕೊಂಡಿರುವ ಬಿಜೆಪಿ ಮುಖಂಡರ ಬಗ್ಗೆ ಅದರಲ್ಲೂ ಸಂಘದೊಂದಿಗೆ ಗುರುತಿಸಿಕೊಂಡಿರುವವರ ಬಗ್ಗೆ ಸ್ವಯಂಸೇವಕ ಹಾಗೂ ಹಿತೈಷಿಗಳಲ್ಲಿ ಮಾತ್ರವಲ್ಲ; ದೇಶ-ಸಮಾಜದ ಒಳಿತು ಬಯಸುವ ಎಲ್ಲರಲ್ಲಿ ಆಕ್ರೋಶ-ನಿರಾಸೆ-ಅಸಮಾಧಾನಗಳು ಮೂಡಿರುವುದರಿಂದಲೇ ’ಇಂತಹದೊಂದು ಕಾಲ ಬಂದಿದೆಯೆ?’ ಎಂಬ ಪ್ರಶ್ನೆ.
ಇತ್ತೀಚೆಗೆ ಸಂಘದ ಅತ್ಯಂತ ಮುಖ್ಯ ಸ್ಥಾನದಲ್ಲಿರುವವರೊಬ್ಬರು ಮಾತನಾಡುತ್ತಾ, ಇಂದಿನ ಬಿ.ಜೆ.ಪಿ.ಯ ಗೊಂದಲಗಳಿಗೆ ಪ್ರಮುಖ ಹೊಣೆ ಸಂಘದ್ದು ಎಂಬ ಕೆಲವರ ಟೀಕೆಯ ಬಗ್ಗೆ ತಮ್ಮ ನಿಲುಮೆಯನ್ನು ಹೇಳಿದರು. ಸಂಘದ ಸ್ವಯಂಸೇವಕರು ಸಮಾಜದ ವಿವಿಧ ರಂಗಗಳಲ್ಲಿ ರಾಷ್ಟ್ರೀಯತೆ ಹಾಗೂ ಸುಸಂಸ್ಕೃತಿಯನ್ನು ಮೂಡಿಸುವ ಸಲುವಾಗಿ ಹಲವಾರು ಸಂಘ ಸಂಸ್ಥೆಗಳ ಮೂಲಕ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ರಾಜಕೀಯ ಕ್ಷೇತ್ರವೂ ಒಂದು. ಪ್ರತಿಯೊಂದು ಈ ರೀತಿಯ ಸಂಸ್ಥೆಗೂ ತನ್ನದೇ ಆದ ಕಾರ್ಯಕಾರಿಣಿ – ನಿರ್ವಹಣೆಯ ಗುಂಪು – ಸಂವಿಧಾನಗಳಿವೆ. ಸ್ವಯಂಸೇವಕರಲ್ಲದ, ಅಪಾರ ಪ್ರಮಾಣದ ಸಮಾಜ ಬಂಧುಗಳೂ ಈ ಸಂಸ್ಥೆ-ಪಕ್ಷ-ಆಂದೋಲನಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ’ರಿಮೋಟ್ ಕಂಟ್ರೋಲ್’ ಮಾಡುವ ಸಂದರ್ಭ ಸಂಘಕ್ಕೆಂದೂ ಬರುವುದಿಲ್ಲ. ಬದಲಾಗಿ ಅಲ್ಲಿರುವ ಸ್ವಯಂಸೇವಕರಿಗೆ ನೀತಿ (Poಟiಛಿಥಿ) ಗಳ ಕುರಿತಾಗಿ ಅಭಿಪ್ರಾಯ-ಸಲಹೆ-ಅಪೇಕ್ಷೆಗಳನ್ನು ವ್ಯಕ್ತಪಡಿಸುವುದಷ್ಟೇ ಸಂಘದ ಪಾತ್ರ. ಅದಕ್ಕೆ ತಕ್ಕಂತೆ ಆಯಾ ಸಂಘಟನೆಗಳಲ್ಲಿ ಪ್ರಯತ್ನಿಸುವುದು ಅಲ್ಲಿರುವ ಸ್ವಯಂಸೇವಕರ ಶಕ್ತಿ-ಸಾಮರ್ಥ್ಯಗಳಿಗೆ ಸಂಬಂಧಿಸಿದ ವಿಷಯ. ಕಳೆದ ಕೆಲವು ದಶಕಗಳಲ್ಲಿ ಇಂತಹ ಅನೇಕ ಪ್ರಯತ್ನಗಳು ಸಫಲವಾಗಿವೆ. ಕೆಲವು ಸಫಲವಾಗಿಲ್ಲ. ರಾಜಕೀಯ ಕ್ಷೇತ್ರವೆಂಬ ಜಾರುಬಂಡೆಯ ಮೇಲೆ ನಿಂತಿರುವ ಸ್ವಯಂಸೇವಕರಲ್ಲಿ ಅನೇಕರು ’ಸಫಲರಾಗಿಲ್ಲದ’ ಪಟ್ಟಿಯಲ್ಲಿ ಇರುವುದು ನಿಜವೆ! ಇಂತಹ ಸಂದರ್ಭದಲ್ಲಿ ಸಂಘದ ಪಾತ್ರವೇನು? ಹಿಂದಿನ ಒಂದೆರಡು ಬಾರಿ ಹಳಿತಪ್ಪಿದ ಸಂದರ್ಭದಲ್ಲಿ ಸ್ವಯಂಸೇವಕರನ್ನು ತೀವ್ರವಾಗಿ ಎಚ್ಚರಿಸುವ ಪ್ರಯತ್ನ ನಡೆದಿದ್ದಿದೆ. ಆದರೆ ಗೊಂದಲ ಬಗೆಹರಿದಿಲ್ಲ. ಸಾಕಷ್ಟು Long R (ಸಮಯಾವಕಾಶ) ನೀಡಿ ಅಗತ್ಯವೆನಿಸಿದರೆ ಅಲ್ಲಿರುವ ಸ್ವಯಂಸೇವಕರ ಕುರಿತಾಗಿ ಸಂಪೂರ್ಣವಾಗಿ ಪುನರ್ ಯೋಚಿಸುವ ಬಗ್ಗೆ ಸಂಘದ ನೇತೃತ್ವಕ್ಕೆ ಯಾವ ಗೊಂದಲವೂ ಇಲ್ಲ. ಹಾಗಾಗಿ ಸ್ವಯಂಸೇವಕ ಹಾಗೂ ಹಿತೈಷಿಗಳಿಗೆ ಈ ಬಗ್ಗೆ ಪೂರ್ಣ ನಂಬಿಕೆ ಇರಲಿ. ಇದಿಷ್ಟನ್ನೂ ಅವರು ಹೇಳಿದ್ದು ರಾಷ್ಟ್ರಮಟ್ಟದಲ್ಲಿ ಬಿ.ಜೆ.ಪಿ.ಯಲ್ಲಿ ಇತ್ತೀಚೆಗೆ ನಡೆದಿರುವ ಗೊಂದಲಗಳ ಸಂದರ್ಭದಲ್ಲಿ. ಇದನ್ನೇ ಕರ್ನಾಟಕದ ಮಟ್ಟಿಗೂ ಸ್ವೀಕರಿಸಬಹುದು.
ಹಾಗಾದರೆ, ಈಗಿರುವ ’ಬಿಜೆಪಿ’ ಎಂಬ ಸಾಂಸ್ಥಿಕ ರೂಪವನ್ನು ಇಲ್ಲವಾಗಿಸಿ ಹೊಸದನ್ನು ಸೃಷ್ಟಿಮಾಡುವ ಸಮಯ ಇನ್ನೂ ಬಂದಿಲ್ಲವೆ? ಅಸಹ್ಯ ಹುಟ್ಟಿಸುವ ಪರಿಸ್ಥಿತಿಯನ್ನು ಸಹಿಸದವರಿಗೆ, ’ಬಂದಿದೆ’ ಎನ್ನಿಸಬಹುದು. ಈ ಎಲ್ಲ ಮಲಿನತೆಯ ನಡುವೆಯೂ ಶುದ್ಧತೆಯನ್ನು ಕಾಪಾಡಿಕೊಂಡು ತಾವಿರುವ ಕ್ಷೇತ್ರದಲ್ಲಿ ಬದಲಾವಣೆ ತರುವ ಸಲುವಾಗಿ ಪರಿಶ್ರಮಿಸುತ್ತಿರುವ ಅನೇಕ ಸ್ವಯಂಸೇವಕರ ಬಗ್ಗೆ ಇನ್ನೂ ನಂಬಿಕೆ ಇರಿಸಿಕೊಂಡಿರುವ ಸಂಘದ ನೇತೃತ್ವಕ್ಕೆ ’ಇಂತಹ ಸಂದರ್ಭ ಇನ್ನೂ ಬಂದಿಲ್ಲ’ ಎಂಬುದು ವಿಶ್ವಾಸದ ವಿಷಯವಾಗಿರಬಹುದು. ಈ ಎರಡು ರೀತಿಯ ಉತ್ತರಗಳೂ ಯೋಚಿಸುವವರಿಗಿರುವ ಮನಃಸ್ಥಿತಿ-ದೂರದೃಷ್ಟಿಗೆ ಸಂಬಂಧಿಸಿದ ವಿಷಯ. Long Rope (ಸಮಯಾವಕಾಶ) ಎಂಬುದುದರ ಉದ್ದ ಎಷ್ಟೆಂಬುದು ಪ್ರತ್ಯಕ್ಷ ನಿರ್ವಹಿಸುತ್ತಿರುವವರಿಗೇ ಗೊತ್ತಿರುವ ಅನುಭವದ ಅಂಶವಲ್ಲವೆ?
ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ವಿಶ್ಲೇಷಣೆಕಾರರು ಬಿ.ಜೆ.ಪಿ.ಯಲ್ಲಿ ನಿರ್ಮಾಣವಾಗಿರುವ ಕೊರತೆಗಳನ್ನು ಸರಿಪಡಿಸಲು ಸಂಘಕ್ಕೆ ಸಾಧ್ಯವಾಗದಿರುವುದಕ್ಕೆ ಕಾರಣ – ಸಂಘದ ಪ್ರಮುಖರೂ ಹಣ-ಸೌಲಭ್ಯ-ಜಾತಿಗಳ ಸುಳಿಯಲ್ಲಿ ಸಿಲುಕಿರುವುದೇ ಎಂದು ರಾಜ್ಯಮಟ್ಟದಲ್ಲೂ, ರಾಷ್ಟ್ರಮಟ್ಟದಲ್ಲೂ ಟೀಕಿಸಿದ್ದಿದೆ. ಸಂಘದ ಕೆಲವು ಪ್ರಮುಖರ ಹೆಸರುಗಳನ್ನು ಉಲ್ಲೇಖಿಸಿದ್ದೂ ಇದೆ. ಇದರಲ್ಲಿ ಸತ್ಯಾಂಶ ಎಷ್ಟು? ಸಂಘದ ಪ್ರತ್ಯಕ್ಷ ಆರ್ಥಿಕ ನಿರ್ವಹಣೆಗೆ ಯಾವ ರಾಜಕಾರಣಿಯ ಕೃಪಾಶೀರ್ವಾದದ ಅವಶ್ಯಕತೆ ಇಲ್ಲ. ಪ್ರಾರಂಭದಿಂದಲೂ ಸ್ವಯಂಸೇವಕರು ತಮ್ಮ ಸಮರ್ಪಣೆಯ ಭಾಗವಾಗಿ ಅರ್ಪಿಸುವ ಗುರುದಕ್ಷಿಣೆಯ ಆಧಾರದಲ್ಲೇ ಈವರೆಗೂ ಸಂಘವು ಸ್ವಾಭಿಮಾನಿಯಾಗಿ ಬೆಳೆದಿದೆ. ಮುಂದೆಯೂ ಬೆಳೆಯಲಿದೆ. ಬಿ.ಜೆ.ಪಿ. ಸರ್ಕಾರ ಬಂದಿರುವುದು ಇತ್ತೀಚಿಗಷ್ಟೆ! ಇನ್ನು, ಸ್ವಯಂಸೇವಕರು ಸಾಮಾಜಿಕ ಪರಿವರ್ತನೆಗಾಗಿ ಕಾರ‍್ಯ ಮಾಡುತ್ತಿರುವ ಸೇವಾ ಸಂಸ್ಥೆಗಳು – ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ವಂತಿಗೆ ಸಂಗ್ರಹಿಸಲಾಗುತ್ತದೆ. ಅನೇಕ ವರ್ಷಗಳಿಂದ ಸರ್ಕಾರಗಳು ಅನೇಕ ಬಾರಿ ಸಹಾಯ ಮಾಡಿದೆ. ಕಾಂಗ್ರೆಸ್-ಜನತಾದಳ ಸರ್ಕಾರಗಳೂ ಹೊರತಾಗಿಲ್ಲ. ಸ್ವಯಂಸೇವಕರು ನಿರ್ವಹಿಸುವ ಸಂಸ್ಥೆಗಳಿಗೆ ಆರ್ಥಿಕ ಸಹಕಾರ ಮಾಡಿದ್ದಾರೆಂಬ ಕಾರಣಕ್ಕೆ ಅವರ ಅನೈತಿಕ ವ್ಯವಹಾರಗಳನ್ನು ಮನ್ನಿಸುವಷ್ಟು ದುರ್ಬಲ ಮನಃಸ್ಥಿತಿ ಸಂಘದ ನೇತೃತ್ವದ್ದಲ್ಲ.
ಇನ್ನು ’ಜಾತಿ’ ಪ್ರಶ್ನೆ. ಹಿಂದು ಸಮಾಜದ ಏಕತೆಯ ಗುರಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವ ಸಂಘವು ಬಿಜೆಪಿಯ ಜಾತೀಯ-ತಂತ್ರಗಾರಿಕೆಯನ್ನು ಒಪ್ಪಿಕೊಂಡು ಬಿಟ್ಟಿದೆಯೆ? ಕರ್ನಾಟಕದ ಸಂದರ್ಭದಲ್ಲಿ ಹೇಳುವುದಾದರೆ, ’ವೀರಶೈವ-ಒಕ್ಕಲಿಗ-ಕುರುಬ’ ವಿಶ್ಲೇಷಣೆಗಳನ್ನು ಸಂಘದ ಅಭಿಪ್ರಾಯಗಳೆಂಬಂತೆ ತಳುಕು ಹಾಕುವ ವಿಕೃತ ಪ್ರಯತ್ನವೂ ನಡೆದಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾಯಿಸುವ ಬಿಜೆಪಿಯ ಅನಿವಾರ್ಯತೆಗಳು ಏನೇ ಇರಬಹುದು! ಆದರೆ, ಸಂಘವು ಸರಕಾರ-ಪಕ್ಷದಲ್ಲಿ ಯಾರು ಯಾವ ಸ್ಥಾನದಲ್ಲಿರಬೇಕೆಂಬುದನ್ನು ’ಜಾತಿ’ಯ ಹಿನ್ನೆಲೆಯಲ್ಲಿ ಸಲಹೆ ನೀಡುವ ಕ್ರಮಕ್ಕೆ ಎಂದೂ ಕೈ ಹಾಕಿಲ್ಲ. ಆ ರೀತಿ ಮಾಡುವುದು ಸಂಘದ ಪದ್ಧತಿಯೂ ಅಲ್ಲ. ಇತ್ತೀಚಿನ ಇಡೀ ಪ್ರಕರಣದಲ್ಲಿ ಎಲ್ಲ ನಿರ್ಣಯಗಳನ್ನೂ ಕೇಂದ್ರದ ಬಿಜೆಪಿಯೇ ತೆಗೆದುಕೊಂಡಿದೆ. ಹಲವಾರು ವರ್ಷ ಸಂಘದ ಹಿಂದುತ್ವದ ವಿಚಾರ ಅರಿತಿರುವ ಕೆಲವು ಬಿಜೆಪಿ ಮುಖಂಡರು ’ಜಾತಿ’ ಕಾರ್ಡ್‌ಗಳನ್ನು ಉಪಯೋಗಿಸಿರುವುದಕ್ಕೆ ಸಂಘದ ಪ್ರಮುಖರೆಲ್ಲರ ಮನಸ್ಸಿನಲ್ಲಿ ಅತೀವ ನೋವು-ಆಕ್ರೋಶ ಇದೆ. ಇದು ಅಂತಹ ವ್ಯಕ್ತಿಗಳ ’ಸ್ವಯಂಸೇವಕತ್ವದಲ್ಲಿ ಉಂಟಾಗಿರುವ ಪತನವೆಂದೇ’ ಸಂಘವು ಭಾವಿಸಿದೆ. ಇಂತಹ ಕೀಳು ಪ್ರಯತ್ನಗಳಿಂದ ಅವರೆಲ್ಲರೂ ಮೇಲೆಳಬೇಕೆಂಬುದೇ ಸಂಘದ ಅಪೇಕ್ಷೆ. ’ಈವರೆಗೂ ಪಕ್ಷದ ಕಾರ್ಯಕರ್ತರಾಗಿದ್ದ ನೀವು ಏಕ್‌ದಂ, ‘xyz’ ಜಾತಿಯವರಾಗಿಬಿಟ್ಟಿದ್ದು, ಆ ಜಾತಿ ಸಮ್ಮೇಳನಗಳಲ್ಲಿ ಭಾವಪೂರ್ಣವಾಗಿ ಮಾತನಾಡಿದ್ದು ಹಾಗೂ ಜಾತಿಯ ಪ್ರಜ್ಞೆ ಪೋಷಿಸುವ ಜಾಹಿರಾತುಗಳನ್ನು ಹಾಕಿದ್ದು, ಹೇಗೆಂದು’ ಒಬ್ಬರು ಮುಖಂಡರಿಗೆ ನೇರವಾಗಿ ಸಂಘದ ಪ್ರಮುಖರೊಬ್ಬರು ಪ್ರಶ್ನಿಸಿದ್ದು ನಾನು ಪ್ರತ್ಯಕ್ಷ ಬಲ್ಲ ವಿಚಾರ.
ಅನೇಕ ಬಾರಿ ತಮ್ಮ ಸ್ವಾರ್ಥಸಾಧನೆಗಾಗಿ ಸಂಘದ ಹೆಸರನ್ನು ದುರುಪಯೋಗಪಡಿಸಿ ಕೊಂಡಿರುವ ರಾಜಕೀಯ ವ್ಯಕ್ತಿಗಳ ಉದಾಹರಣೆಗಳೂ ಸಂಘದ ಗಮನದಲ್ಲಿದೆ.
ಹಾಗಾದರೆ ಜಾತಿ-ಭ್ರಷ್ಟಾಚಾರದ ವಿಚಾರಗಳಲ್ಲಿ ಅಸಮಧಾನ-ನೋವು ವ್ಯಕ್ತಪಡಿಸುವುದನ್ನು ಬಿಟ್ಟು ಸಂಘಕ್ಕೆ ಇನ್ನಾವ ಮಾರ್ಗವೂ ಇಲ್ಲವೆ? ಇದು ಅಸಹಾಯಕತೆಯ ಲಕ್ಷಣವಲ್ಲವೆ? ಎಂಬುದು ಹಿತೈಷಿಗಳಲ್ಲಿ- ಟೀಕಾಕಾರರಲ್ಲಿ ಇಬ್ಬರಲ್ಲೂ ಮೂಡುವ ಪ್ರಶ್ನೆ. ಸಂಘವು ಸ್ವಯಂಸೇವಕರು ಆರಂಭಿಸಿರುವ ಸಂಘ-ಸಂಸ್ಥೆಗಳನ್ನು ನೇರವಾಗಿ ನಿರ್ವಹಿಸುತ್ತಿಲ್ಲ. ಬದಲಾಗಿ ಅಲ್ಲಿರುವ ವ್ಯಕ್ತಿಗಳ ಸ್ವಯಂಸೇವಕತ್ವದ ಬಗ್ಗೆ ಚಿಂತನೆ ಮಾಡುತ್ತದೆ. ಅದು ಸರಿಹಾದಿಯಲ್ಲಿದ್ದರೆ ಅವರೇ ಅಲ್ಲಿರುವ ಸಮಸ್ಯೆಗಳನ್ನು ಸರಿಪಡಿಸುತ್ತಾರೆ; ನಿರ್ವಹಿಸುತ್ತಾರೆ. ಬಿಜೆಪಿಯಲ್ಲಿರುವ ಸ್ವಯಂಸೇವಕರಲ್ಲಿ ದೋಷ ನಿರ್ಮಾಣವಾಗಿರುವುದು ಸ್ವಯಂಸೇವಕತ್ವದಲ್ಲಿ. ’ಸ್ವಯಂಸೇವಕತ್ವ’ ಎಂಬುದು ಮನಃಸ್ಥಿತಿಯ ವಿಷಯ. ಅವನ್ನು ಸರಿಪಡಿಸುವುದೆಂಬುದು ಒಬ್ಬೊಬ್ಬ ವ್ಯಕ್ತಿಯ ವಿಷಯ; ಒಂದೊಂದು ಮನಸ್ಸಿನ ವಿಷಯ. ತೋಟವನ್ನು ಪೋಷಿಸಬೇಕೆಂಬುದರ ಅರ್ಥ ಒಂದೊಂದು ಗಿಡಕ್ಕೆ ನೀರುಣಿಸುವುದು, ಒಂದೊಂದು ಗಿಡದ ಬದಿಯಲ್ಲಿರುವ ಕಳೆ ಕೀಳುವುದು ಎಂದಲ್ಲವೆ?
ಸಂಘದಲ್ಲಿ ಸಂಸ್ಕಾರ ಪಡೆದು ಸ್ವಯಂಸೇವಕರಾದವರು ತಮ್ಮ ಅನುಕೂಲಕ್ಕಾಗಿ ಜಾತಿ-ಭ್ರಷ್ಟಾಚಾರಗಳಲ್ಲಿ ಏಕೆ ಜಾರುತ್ತಾರೆ? ಹಾಗಾದರೆ ಸಂಸ್ಕಾರದ ಫಲವೇನು? ’ಸ್ವಯಂಸೇವಕ’ ಎಂಬುದು ಒಂದು ಬಾರಿಗೆ ಸಿಕ್ಕಿದ (one time) ಸರ್ಟಿಫಿಕೇಟ್ ಅಲ್ಲ. ವಾಹನ ಓಡಿಸಲು ’ಲೈಸನ್ಸ್’ ಸಿಕ್ಕಿದವನು ಜೇಬಿನಲ್ಲಿ ಲೈಸನ್ಸ್ ಇದೆ ಎಂಬ ಕಾರಣಕ್ಕೆ ಅಡ್ಡಾದಿಡ್ಡಿ ಗಾಡಿ ಓಡಿಸಲು ಸಾಧ್ಯವಿಲ್ಲ. ಪ್ರತಿಕ್ಷಣವೂ ಎಚ್ಚರವಿರಬೇಕು. ವಾಹನ ಚಾಲಕನಿಗೆ ರಸ್ತೆಯ ಮೇಲೆ ಗಮನವಿದ್ದಂತೆ, ಸಾರ್ವಜನಿಕ ಕ್ಷೇತ್ರದಲ್ಲಿರುವ ಸ್ವಯಂಸೇವಕರು ತಮ್ಮ ’ಸ್ವಯಂಸೇವಕತ್ವ’ವನ್ನು ಕಾಪಾಡಿಕೊಳ್ಳಬೇಕು. ’ಸ್ವಯಂಸೇವಕತ್ವದಲ್ಲಿ’ ಕೊರತೆ ಉಂಟಾದಾಗ ಶಕ್ತಿ ನೀಡುವ ಕೆಲಸ ಸಂಘ ಮಾತುಕತೆಯ ಮೂಲಕ ಮಾಡಬಹುದಷ್ಟೇ. ಇನ್ನು ವಾಹನ ಚಾಲನೆ ಸುಗಮವಾಗಿ ನಡೆಯಲು ಬೇಕಾದ ಟ್ರಾಫಿಕ್ ಸಿಗ್ನಲ್, ರೋಡ್‌ಹಂಪ್‌ಗಳ ಸಂಕೇತಾರ್ಥ ಸಂಘದ ಪ್ರಮುಖರು ಆಗಬಹುದು. ಪಾಲಿಸುವ ವಿವೇಚನೆ, ಬ್ರೇಕ್-ಆಕ್ಸಿಲೇಟರ್ ಉಪಯೋಗಿಸುವ ಪ್ರಯತ್ನವೆಲ್ಲವೂ ವ್ಯಕ್ತಿಗತವಾಗಿ ಒಬ್ಬೊಬ್ಬ ವಾಹನ ಚಾಲಕರೆಂಬ ಸ್ವಯಂಸೇವಕನದ್ದೇ ಆಗಿರುತ್ತದೆ.
ಹಾಗಾದರೆ, ಒಂದು ಸಂಸ್ಥೆಯಾಗಿ ಸಂಘದ್ದೇನೂ ಹೊಣೆ ಇಲ್ಲವೆ? ಸಮಾಜದಲ್ಲಿ ಒಂದು ಅತ್ಯಾವಶ್ಯಕ ರಂಗವಾದ ರಾಜಕೀಯ ಎಂಬುದು ’ಸಡಿಲವಾದ’ ಕ್ಷೇತ್ರ. ಅಲ್ಲಿ ಪರಿವರ್ತನೆ ತರಬೇಕಾದವರು ಸ್ವಯಂಸೇವಕರೆಂಬ ಸಮಾಜಪ್ರೇಮಿಗಳು. ಅದರಲ್ಲಿ ಶಿಥಿಲತೆ ಉಂಟಾದಾಗ ಮಾತುಕತೆ-ಸತ್ಪ್ರಭಾವ-ಮೇಲ್ಪಂಕ್ತಿಗಳೆಂಬ ’ಉಪಕರಣದ’ ಮೂಲಕ ಸರಿಪಡಿಸುವಂತಹ ಒಂದು ’ಪ್ರಯೋಗ’ವನ್ನು ಈವರೆಗೆ ಸಂಘ ಮಾಡುತ್ತಿದೆ. ಇಂತಹ ಹಲವಾರು ಪ್ರಯೋಗಗಳನ್ನು ಸೇವಾ-ವನವಾಸಿ-ಧಾರ್ಮಿಕ-ಶಿಕ್ಷಣ ಮುಂತಾದ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಂಘವು ಅನೇಕ ದಶಕಗಳಿಂದ ಮಾಡುತ್ತಿದೆ. ಬಹುತೇಕ ಯಶಸ್ವಿಯಾಗಿವೆ. ಕೆಲವು ಆಗಿಲ್ಲ. ಯಶಸ್ವಿ ಆಗದ ಸಂದರ್ಭಗಳಲ್ಲಿ ಹೊಸರೀತಿಯ ’ಪ್ರಯೋಗ’ಗಳಿಗೆ ಸಂಘ ಪ್ರಯತ್ನಿಸಿ ಸರಿದಾರಿ ಹುಡುಕಿಕೊಂಡಿದೆ. ಪ್ರಯೋಗಗಳು ಬದಲಾಗಬಹುದು. ಸರಿಯಾದದ್ದು ಸಿಗುವವರೆಗೂ ಪ್ರಯತ್ನ ನಿಲ್ಲುವುದಿಲ್ಲ; ಕಣ್ಣಮುಂದಿರುವ ಗುರಿ ಬದಲಾಗುವುದಿಲ್ಲ. ಈ ಪ್ರಯೋಗ ಸೂಕ್ತವಾಗದಿದ್ದರೆ ಮತ್ತೊಂದು, ಮಗದೊಂದನ್ನು ಪ್ರಯತ್ನಿಸುವ ಸಹನೆ ಸಂಘಕ್ಕಿದೆ.
ದೇಶದ ಭವಿಷ್ಯ ನಿರ್ಧರಿಸುವಲ್ಲಿ ಪ್ರಯೋಗಗಳನ್ನು ಮಾಡಿಕೊಂಡಿರುವುದು ಸೂಕ್ತವೇ? ಎಂಬ ಸವಾಲೇಳಬಹುದು. ಇತ್ತೀಚಿನ ಶತಮಾನ ಕಂಡ ಅತ್ಯಂತ ಶ್ರೇಷ್ಠ ಪ್ರಯೋಗ – ಪ್ರಜಾಪ್ರಭುತ್ವವೆಂಬ ಆಡಳಿತ ವ್ಯವಸ್ಥೆ. ಅದರಲ್ಲಿ ನೇತೃತ್ವ ವಹಿಸುವವರ ಅಭಿಮತ ರೂಪಿಸುವುದು, ಸಮಾಜನಿಷ್ಠೆ ಬೆಳೆಸುವುದು, ತಪ್ಪಾದಾಗ ಎಚ್ಚರಿಸುವುದು – ಇದಕ್ಕಿಂತ ಶ್ರೇಷ್ಠ ವಿಧಾನ ಇನ್ನಾವುದಿದೆ?
ನೇಪಥ್ಯದಲ್ಲಿದ್ದು, ಜವಾಬ್ದಾರಿ ರಹಿತರಾಗಿ ಒಂದು ರಾಜಕೀಯ ಪಕ್ಷದ ಆಗುಹೋಗುಗಳಲ್ಲಿ ತಲೆ ಹಾಕುವುದು ಸರಿಯೆ? ಎಂಬುದು ಅನೇಕರ ಅಂಬೋಣ. ಪ್ರಜಾಪ್ರಭುತ್ವದ ಪದ್ಧತಿಯಲ್ಲಿ ಒಂದು ರಾಜಕೀಯ ಪಕ್ಷ ’ಒಂದು ಕುಟುಂಬ-ಓರ್ವ ವ್ಯಕ್ತಿ-ಸ್ಥಾನಮಾನ-ಹಣ-ಜಾತಿ’ ಗಳಿಗೆ ನಿಷ್ಠವಾಗಿರುವುದಕ್ಕಿಂತ ರಾಷ್ಟ್ರೀಯ ವಿಚಾರಗಳನ್ನು ಹೊಂದಿರುವ ಒಂದು ಸಮೂಹದ ಪ್ರಭಾವದಲ್ಲಿರುವುದೇ ಹೆಚ್ಚು ಅಪೇಕ್ಷಣೀಯ ಆಗಬಹುದೇನೋ ಎಂಬ ಅಭಿಪ್ರಾಯವೂ ಇದೆ.
ಹಾಗಾದರೆ, ನಿಶ್ಚಿತ ಅಭಿಪ್ರಾಯಗಳನ್ನು ಹೊಂದಿರುವ ಸಂಘದಲ್ಲಿರುವ ನಿರ್ಣಾಯಕ ವ್ಯಕ್ತಿಗಳೆಲ್ಲರೂ ಪರಿಪೂರ್ಣರೇ? ಅವರು ಮಾಡುವ ಪ್ರಯೋಗ – ವ್ಯಕ್ತಪಡಿಸುವ ಸಲಹೆ ಅಭಿಪ್ರಾಯಗಳೆಲ್ಲವೂ ಪರಿಪೂರ್ಣವೆ? ಎಂದೂ ತಪ್ಪಾಗುವುದಿಲ್ಲವೆ? ಎಂಬ ಪ್ರಶ್ನೆ ಏಳಬಹುದು. ಸಂಘದ ವಿಚಾರ-ಸಂಘಟನೆ-ಸ್ವಯಂಸೇವಕತ್ವಗಳು ಪರಿಪೂರ್ಣ. ವ್ಯಕ್ತಿಗಳು ಅಪೂರ್ಣರಾದರೂ ಅವರೆಲ್ಲರೂ ಸೇರಿದಾಗ ನಿರ್ಮಾಣವಾಗುವ ಸಮೂಹ (ಣeಚಿm)ವು ಪೂರ್ಣಾಂಕವಾಗಿರುತ್ತದೆ, ಪರಿಪೂರ್ಣವಾಗಿರುತ್ತದೆ. ಕೆಲವು ದಶಕಗಳ ಸಂಘದ ಅನುಭವವೆಂದರೆ ಸಂಘವೆಂಬ ಸಾಮೂಹಿಕ ನಿರ್ಣಯದ (ಖಿeಚಿm ಆeಛಿisioಟಿ) ಪ್ರಕ್ರಿಯೆಯಲ್ಲಿ ಅದನ್ನು ಮಾಡುವ ಸಮೂಹದಲ್ಲಿರುವ ಪ್ರಖರವಾದ ಸಮಾಜನಿಷ್ಠ ’ಧ್ಯೇಯದ ಕುದಿತದಲ್ಲಿ’ (Boiling Point) ಆಕಸ್ಮಿಕವಾಗಿ ನಿರ್ಣಾಯಕರೇ ಎಡವಿದವರಾಗಿದ್ದರೆ, ಅಂತಹವರೂ ಕುದಿದು ಆವಿಯಾಗಿ ಹೋಗಿದ್ದಾರೆ. ಇಂದಿನ ಸ್ಥಿತಿಯಲ್ಲೂ ಅದು ಸತ್ಯವೆಂದೇ ಸ್ವಯಂಸೇವಕರೆಲ್ಲರ ಅನಿಸಿಕೆ.
ವ್ಯಕ್ತಿ ನಿರ್ಮಾಣದಿಂದ – ರಾಷ್ಟ್ರ ನಿರ್ಮಾಣವೆಂಬ ಸಂಘದ ನಂಬಿಕೆಯ ದೀರ್ಘ ಪ್ರಯಾಣದಲ್ಲಿ ಅಡೆ-ತಡೆಗಳು, ಏಳು-ಬೀಳುಗಳು ಇರಬಹುದು. ಪ್ರಯೋಗಗಳ ಸಫಲತೆ-ವಿಫಲತೆಗಳೂ ಇರಬಹುದು. ಆದರೆ, ಗುರಿಸೇರುವ ನಿಶ್ಚಿತಮತಿ ಕಣ್ಣಮುಂದಿದ್ದಾಗ ನಡಿಗೆಯೆಂದೂ ನಿಲ್ಲುವುದಿಲ್ಲ.
-ವಿ ನಾಗರಾಜ್,
ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್, (ಕರ್ನಾಟಕ ಮತ್ತು ಆಂಧ್ರ ಪ್ರದೇಶ)
ಆರೆಸ್ಸೆಸ್
ಕೇಶವಕೃಪಾ ನಂ. 74, ರಂಗರಾವ್ ರಸ್ತೆಶಂಕರಪುರಂ
ಬೆಂಗಳೂರು-560004
Apt article at the right time.
This message should reach every swayamsevak.