-ದು ಗು ಲಕ್ಷ್ಮಣ
ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದು ಆಧ್ಯಾತ್ಮಿಕತೆ, ವಿಜ್ಞಾನ, ವೇದಾಂತ, ಹಿಂದೂಧರ್ಮದ ಶ್ರೇಷ್ಠತೆಗಳಾದರೂ ಅವರ ಪ್ರತಿಪಾದನೆಯಲ್ಲಿ ನಿಚ್ಚಳವಾಗಿ ಹೊಳೆಯುತ್ತಿದ್ದುದು ಪರಿಶುದ್ಧ ವೈಚಾರಿಕತೆ. ಹಿಂದೂಧರ್ಮದಲ್ಲಿದ್ದ ಕಂದಾಚಾರ, ಮೂಢನಂಬಿಕೆಗಳನ್ನು ಅವರು ಕಟುವಾಗಿ ಖಂಡಿಸಿದ್ದರು. ಧರ್ಮದ ಬತ್ತಳಿಕೆಯಲ್ಲಿದ್ದ ಸ್ವರ್ಗ, ನರಕಗಳೆಂಬ ಯಾವ ಬಾಣಕ್ಕೂ ಅವರ ವಿಚಾರ ಶಕ್ತಿಯ ವಜ್ರ ಕವಚವನ್ನು ಭೇದಿಸುವ ತೀಕ್ಷ್ಣತೆಯಿರಲಿಲ್ಲ. ಕುರುಡು ಧಾರ್ಮಿಕತೆ ಅವರದಾಗಿರಲಿಲ್ಲ. ಅಂತರಂಗದ ಅನುಭವ ಮಾತ್ರವೇ ಪರಮಪ್ರಮಾಣ ಎಂದು ಉಚ್ಚಕಂಠದಲ್ಲಿ ಅವರು ಸಾರಿಹೇಳಿದ್ದರು.
ಸ್ವಾಮಿ ವಿವೇಕಾನಂದರು ಎಡಪಂಥೀಯರಿಗೂ ಬಲಪಂಥೀಯರಿಗೂ ಸಲ್ಲುವ ಒಬ್ಬ ಮಹಾತ್ಮನೆನಿಸಿಕೊಂಡಿರುವುದಕ್ಕೆ ಅವರಲ್ಲಿದ್ದ ಅಸಾಮಾನ್ಯ ಮಾನವೀಯತೆಯೇ ಮುಖ್ಯ ಕಾರಣ ಎಂಬುದನ್ನು ನಾವು ಮರೆಯಬಾರದು. ಹಾಗೆ ನೋಡಿದರೆ ವಿವೇಕಾನಂದರು ಯಾವ ಪಂಥಕ್ಕೂ ಸೇರಿದವರಾಗಿರಲಿಲ್ಲ. ಅವರು ಎಡಪಂಥೀಯರೂ ಆಗಿರಲಿಲ್ಲ. ಬಲಪಂಥೀಯರೆಂದೂ ಗುರುತಿಸಿಕೊಂಡಿರಲಿಲ್ಲ. ಹೀಗಾಗಿ ಅವರನ್ನು ಎಡಪಂಥೀಯರಾಗಲಿ ಅಥವಾ ಬಲಪಂಥೀಯರಾಗಲಿ ಈತನೇ ನಮ್ಮ ನಾಯಕ ಎಂದು, ನಮ್ಮ ವಿಚಾರಗಳನ್ನು ಪೋಷಿಸಿದವನೆಂದು ವಾದಿಸಿದರೆ ಅದು ಹಾಸ್ಯಾಸ್ಪದವೆನಿಸೀತು, ಅಷ್ಟೆ. ವಿವೇಕಾನಂದರು ಪಂಥ, ಪಂಗಡ, ಪಕ್ಷ ಮೀರಿ ನಿಂತು ಮಾನವತೆಯ ಮೇರುತುದಿಗೆ ತಲಪಿದ್ದರು. ಅದೇ ಕಾರಣದಿಂದಲೇ ಅವರು ಜಗದ್ವಿಖ್ಯಾತರಾದರು. ಹುಟ್ಟಿದ 150 ವರ್ಷಗಳ ಬಳಿಕವೂ ಈಗಲೂ ಪ್ರಸ್ತುತರಾಗಿಯೇ ಉಳಿದಿರುವುದು ಇದೇ ಕಾರಣಕ್ಕೆ.
ವಿವೇಕಾನಂದರು ಹಿಂದೂ ಧರ್ಮದಲ್ಲಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ಕಟುವಾಗಿ ಖಂಡಿಸಿದ್ದರು. ಹೀಗೆ ಹೇಳಿದ ಕೂಡಲೇ ಎಡಪಂಥೀಯ ವಿಚಾರವಾದಿಗಳಿಗೆ ಒಳಗೊಳಗೇ ಖುಷಿಯಾಗಬಹುದು. ಆದರೆ ಮೂಢನಂಬಿಕೆಗಳನ್ನು ಖಂಡಿಸುವ ಕೆಲಸಕ್ಕಷ್ಟೇ ತಮ್ಮನ್ನು ವಿವೇಕಾನಂದರು ಸೀಮಿತಗೊಳಿಸಿಕೊಳ್ಳಲಿಲ್ಲ. ಹಿಂದೂ ಧರ್ಮಕ್ಕೆ ಅಂಟಿದ ಇಂತಹ ಕಂದಾಚಾರ, ಮಡಿವಂತಿಕೆ, ಮೂಢನಂಬಿಕೆಗಳ ಕೊಳೆ, ಕಶ್ಮಲಗಳನ್ನು ತೊಳೆದು ಅದನ್ನು ಮತ್ತೆ ಪ್ರಕಾಶಮಾನವಾಗಿ ಬೆಳಗುವ ಕೆಲಸವನ್ನೂ ಮಾಡಿದ್ದು ಅವರ ಹೆಗ್ಗಳಿಕೆ. ಎಡಪಂಥೀಯ ವಿಚಾರವಾದಿಗಳು ಹಿಂದೂ ಧರ್ಮವನ್ನು ಖಂಡಿಸಿದಷ್ಟೇ ಪರಿಣಾಮಕಾರಿಯಾಗಿ ಆ ಧರ್ಮದಲ್ಲಿರುವ ಉತ್ಕೃಷ್ಟ ಅಂಶಗಳತ್ತ ಬೆರಳು ತೋರುವುದಿಲ್ಲ. ಹಿಂದೂ ಧರ್ಮವೇ ನಿಕೃಷ್ಟ ಎಂಬ ಭಾವ ಅವರದು. ಎಡಪಂಥೀಯರು ಎಡವುತ್ತಿರುವುದು ಇಲ್ಲೇ. ಹಿಂದೂ ಧರ್ಮವನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಸೋತಿರುವುದರಿಂದಲೇ ಭಾರತದ ನೆಲದಲ್ಲಿ ಎಡಪಂಥೀಯರಿಗೆ ಉತ್ತಮ ಫಸಲು ತೆಗೆಯಲು ಸಾಧ್ಯವಾಗುತ್ತಿಲ್ಲ.
ವಿವೇಕಾನಂದರು ಒಬ್ಬ ಸಂನ್ಯಾಸಿಯಾಗಿದ್ದರೂ ಅವರು ಉಳಿದ ಸಂನ್ಯಾಸಿಗಳಂತೆ ಹಿಂದೂ ಧರ್ಮದ ಅಸಂಖ್ಯಾತ ದೇವರುಗಳ ಪೂಜೆಯ ಗೊಡವೆಗೆ ಹೋಗಲಿಲ್ಲ. ಕನ್ಯಾಕುಮಾರಿಯ ಕಡಲ ನಡುವಣ ಬಂಡೆಯ ಮೇಲೆ ವಿವೇಕಾನಂದರ ಮನಸ್ಸಿನಲ್ಲಿ ನಡೆದಿದ್ದ ಮಹಾಕ್ರಾಂತಿಯ ಪರಿಣಾಮವಾಗಿ ಅಸಂಖ್ಯಾತವಾದ ಹಳೆಯ ದೇವರುಗಳ ಸ್ಥಳದಲ್ಲಿ ಹೊಸದೊಂದು ದೇವರು ಸೃಷ್ಟಿಯಾಗಿದ್ದರು. ಆ ದೇವರೇ ಮನುಷ್ಯ. ಜಗತ್ತಿನ ಆಧ್ಯಾತ್ಮಿಕ ಇತಿಹಾಸದಲ್ಲಿ ನಡೆದ ಅತ್ಯಂತ ಮಹತ್ವಪೂರ್ಣವಾದ ಪವಾಡವೆಂದರೆ ಈ ನೂತನ ದೇವತೆಯ ಆವಿರ್ಭಾವ. ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಸಂನ್ಯಾಸವನ್ನು ಸ್ವೀಕರಿಸಿದ್ದ ಸರ್ವಸಂಗ ಪರಿತ್ಯಾಗಿಯೊಬ್ಬನು, ತನ್ನ ಹೃದಯದ ಸಿಂಹಾಸನದಲ್ಲಿ ನೆಲೆಗೊಂಡಿದ್ದ ದೈವೀಮೂರ್ತಿಯೊಂದನ್ನು ಅಥವಾ ಅನೇಕಾನೇಕ ಮೂರ್ತಿಗಳನ್ನೂ ಅಲ್ಲಿಂದ ಸರಿಸಿ ಅಲ್ಲಿ ಸಾಮಾನ್ಯ ಮಾನವನನ್ನು ಪ್ರತಿಷ್ಠಾಪನಗೊಳಿಸಿದ್ದು ಒಂದು ಅಸಾಧಾರಣವಾದ ಘಟನೆಯೇ ಸರಿ. ಶಂಖಚಕ್ರಗದಾಧಾರಿಯಲ್ಲದ, ಪೀತಾಂಬರವನ್ನುಡದ, ರುಂಡಮಾಲಾಲಂಕೃತ ಸ್ಮಶಾನವಾಸಿಯಲ್ಲದ, ಆದರೆ ಬೆನ್ನಿಗಂಟಿದ ಹೊಟ್ಟೆಯ, ನೂರಾರು ಕ್ಲೇಶ ಸಂಕಟಗಳಿಂದ ಜರ್ಝರಿತನಾದ, ನಿರಾಶೆಯ ಬಾವಿಗಳಂತೆ ಆಳವಾದ ಕಣ್ಣುಗಳನ್ನುಳ್ಳ ಸಾಮಾನ್ಯ ಮಾನವನೇ ವಿವೇಕಾನಂದರು ಕಂಡುಕೊಂಡ ಆ ದೇವರು. ವಿವೇಕಾನಂದರು ಹಳೆಯ ವೇದ ಶಾಸ್ತ್ರಾದಿಗಳಿಗೆ ಭಾಷ್ಯ ಬರೆದ, ತಮ್ಮ ಸಿದ್ಧಾಂತಗಳಿಗೆ ತಕ್ಕಂತೆ ವೇದೋಪನಿಷತ್ತಿನ ಮಂತ್ರಗಳನ್ನು ತಿರುಚಿದ ಭಾಷ್ಯಕಾರರಾಗಿರಲಿಲ್ಲ. ಅವರು ನೂತನ ಸತ್ಯಗಳನ್ನು ತಮ್ಮ ಒಳಗಣ್ಣಿನಿಂದ ಕಂಡ ಮಹರ್ಷಿಯಾಗಿದ್ದರು. ಆದ್ದರಿಂದಲೇ ತಾವು ಸಾಕ್ಷಾತ್ಕರಿಸಿಕೊಂಡ ದೈವಕ್ಕೆ ಅಗತ್ಯವಾದ ಹೊಸ ಮಂತ್ರಗಳನ್ನು ಸೃಷ್ಟಿಸಿದರು. ಶಾಸ್ತ್ರಗಳು ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿದೇವೋ ಭವ ಎಂದು ಹೇಳಿದ್ದರೆ, ವಿವೇಕಾನಂದರು ಹೇಳಿದ್ದು – ಮೂರ್ಖದೇವೋ ಭವ, ದರಿದ್ರದೇವೋ ಭವ, ದೀನದೇವೋ ಭವ ಎಂದು. ಮೂರ್ಖರು, ದರಿದ್ರರು,ದೀನರು ನಿಮ್ಮ ದೇವರಾಗಲಿ ಎಂಬ ವಿವೇಕಾನಂದರ ವಾಣಿಯಲ್ಲಿ ಮಾನವತೆಯ ಕಲ್ಯಾಣ ಅಡಗಿರುವುದು ಸುವ್ಯಕ್ತ. ದೇವರನ್ನು ಧೂಪ ದೀಪ ನೈವೇದ್ಯಾದಿಗಳಿಂದ ಅರ್ಚಿಸುವ ಕಾಯಕ ಬದಿಗಿಟ್ಟು ಈ ಹೊಸ ದೇವರಿಗೆ ಅನ್ನ ನೀಡಿ, ವಸ್ತ್ರ ನೀಡಿ, ಸೇವೆ ಸಲ್ಲಿಸಿ. ಅದೇ ನಿಮಗೆ ಸಾಕ್ಷಾತ್ಕಾರ, ಮುಕ್ತಿ ಎಲ್ಲವನ್ನೂ ದೊರಕಿಸಿಕೊಡುತ್ತದೆ ಎಂದು ಹೇಳಿದ್ದರು. ಭಾರತದಾದ್ಯಂತ ಸಂಚಾರ ಮಾಡಿದಾಗ ಅವರ ಕಣ್ಣಿಗೆ ಕಂಡಿದ್ದು ದೀನರು, ದರಿದ್ರರು, ದುಃಖಿಗಳು. ಸಿರಿವಂತ ಮಹಾರಾಜರು, ವ್ಯಾಪಾರಿಗಳು ಅವರ ಕಣ್ಣಿಗೆ ಬಿದ್ದಿದ್ದರೂ ಒಂದು ಹೊತ್ತಿನ ತುತ್ತಿಗೂ ಗತಿಯಿಲ್ಲದೆ ಪರದಾಡುತ್ತಿದ್ದ ದೀನದರಿದ್ರರನ್ನು ಕಂಡಾಗ ಅವರಿಗೆ ಇಂಥವರ ಸೇವೆಯೇ ನಿಜವಾದ ಭಗವಂತನ ಸೇವೆ ಎನಿಸಿದ್ದು ಸಹಜ. 1893ರ ಸೆ. 11ರಂದು ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಪುಟ್ಟ ಭಾಷಣ ಮಾಡಿ ಕೆಲವೇ ಘಂಟೆಗಳಲ್ಲಿ ಪ್ರಖ್ಯಾತರಾದ ರಾತ್ರಿ ಅವರಿಗೆ ದೊರಕಿದ್ದುದು ರಾಜಾತಿಥ್ಯ. ಮೆದುವಾದ ಹಾಸಿಗೆಯ ಮೇಲೆ ಮಲಗಿದ್ದ ಸ್ವಾಮೀಜಿಗೆ ಮಾತ್ರ ನಿದ್ದೆ ಬರಲಿಲ್ಲ. ಇದ್ದಕ್ಕಿದ್ದಂತೆ ಎದ್ದು ದುಃಖತಪ್ತರಾದರು. ಅಮೆರಿಕದ ವೈಭವದೊಡನೆ ಭಾರತದ ದಾರಿದ್ರ್ಯವನ್ನು ಹೋಲಿಸಿ ನೋಡಿ ಗಳಗಳನೆ ಅತ್ತರು. ನೆಲದ ಮೇಲೆ ಕುಳಿತು ರೋದಿಸಿದರು. ‘ಹೊಟ್ಟೆಗಿಲ್ಲದೆ ನರಳುತ್ತಿರುವ ಭಾರತೀಯರನ್ನು ಮೇಲೆತ್ತುವವರು ಯಾರು? ಹಸಿದವರಿಗೆ ಅನ್ನವಿಕ್ಕುವವರಾರು?’ ಹೀಗೆ ಚಿಂತಿಸುತ್ತ ಇಡೀ ರಾತ್ರಿಯನ್ನು ಕಳೆದಿದ್ದರು. 1893ರ ಡಿ. 28ರಂದು ಭಾರತದಲ್ಲಿನ ತಮ್ಮ ಗೆಳೆಯ ಹರಿಪದ ಮಿತ್ರ ಎನ್ನುವವರಿಗೆ ಬರೆದ ಕಾಗದದಲ್ಲಿ ‘ನನ್ನ ಕುತೂಹಲವನ್ನು ತಣಿಸುವುದಕ್ಕಾಗಿ, ಕೀರ್ತಿ ಗೌರವಗಳನ್ನು ಗಳಿಸುವುದಕ್ಕಾಗಿ ನಾನು ಈ ದೇಶಕ್ಕೆ ಬರಲಿಲ್ಲ. ಭಾರತದ ಬಡವರಿಗೆ ನೆರವಾಗಲು ಏನಾದರೂ ಹಣ ಸಂಪಾದನೆ ಸಾಧ್ಯವೇ ಎಂದು ನೋಡಲು ಬಂದೆ…’ ಎಂದು ತಾವು ಅಮೆರಿಕೆಗೆ ಹೋದ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.
ಸ್ವಾಮೀಜಿಯವರದು ಬರಿಯ ಆಧ್ಯಾತ್ಮಿಕ ಅಥವಾ ಮಾಂತ್ರಿಕ ಭ್ರಮೆಯ ವಾಣಿಯಲ್ಲ. ಅವರು ಇತಿಹಾಸದ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದರು. ಇಂಗ್ಲಿಷ್ ಭಾಷೆ ಚೆನ್ನಾಗಿ ಬಲ್ಲ ಸಂನ್ಯಾಸಿಯಾಗಿದ್ದರಿಂದ ಇಡೀ ಜಗತ್ತಿನ ಆಗುಹೋಗುಗಳ ಅರಿವು ಅವರಿಗೆ ಚೆನ್ನಾಗಿತ್ತು. ಮಾನವ ಸ್ವಭಾವವನ್ನು ಆಳವಾಗಿ ವಿಶ್ಲೇಷಿಸಿ, ಸಮೀಕ್ಷಿಸಿ, ನಿರ್ಧಾರಕ್ಕೆ ಬರಬಲ್ಲ ಸಾಮರ್ಥ್ಯವಿತ್ತು. ಭಾರತೀಯ ಜನಸಾಮಾನ್ಯರನ್ನು ಅವರು ಹೃದಯಾಂತರಾಳದಿಂದ ಪ್ರೀತಿಸಿದ್ದರು. ಆದ್ದರಿಂದಲೇ ಅವರಿಗೆ ಎಲ್ಲಕ್ಕಿಂತ ಮೊದಲು ಬೇಕಾದದ್ದು ಅನ್ನ ಎಂದೆನಿಸಿತ್ತು. ‘ಮನುಜ ಶರೀರವಿದೇನು ಸುಖ’, ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎಂದು ಗೋಳುಗರೆಯುವ ಹರಿಕಥಾದಾಸರ ಪಂಥಕ್ಕೆ ಅವರು ಸೇರಿದವರಾಗಿರಲಿಲ್ಲ. ಅವರೊಮ್ಮೆ ಗುಡುಗಿದ್ದರು : ‘‘ನನ್ನ ಗುರುವಾದ ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ್ದರು – ಹಸಿದ ಹೊಟ್ಟೆಗೆ ಅಧ್ಯಾತ್ಮವನ್ನು ಬೋಧಿಸುವುದಕ್ಕಿಂತ ಮಹತ್ತರವಾದ ಪಾಪ ಬೇರೊಂದಿಲ್ಲ.’’
ಶಕ್ತಿ ಸಂಪನ್ನವಾದ ನೂತನ ಭಾರತ ಸೃಷ್ಟಿಯಾಗಬೇಕಾದದ್ದು ಇಲ್ಲಿನ ಮೇಲ್ದರ್ಜೆಯ ಸುಖೋನ್ಮತ್ತ ಜನರಿಂದಲ್ಲ ಎಂಬುದು ಸ್ವಾಮೀಜಿ ಕಂಡುಕೊಂಡ ನಿಚ್ಚಳ ಸತ್ಯ. ಭವ್ಯ ಭಾರತದ ಭದ್ರ ಬುನಾದಿಯೆಂದರೆ ಇಲ್ಲಿನ ಜನಸಾಮಾನ್ಯರು. ನವಭಾರತ ನಿರ್ಮಾಣಕ್ಕೆ ರೈತರನ್ನು, ಬೆಸ್ತರನ್ನು, ಚಮ್ಮಾರರನ್ನು , ರಸ್ತೆಬದಿ ತಿಂಡಿ ತೀರ್ಥ ಮಾರುವ ಬಡ ವ್ಯಾಪಾರಿಗಳನ್ನು ಅವರು ಆಹ್ವಾನಿಸಿದ್ದು ಇದೇ ಹಿನ್ನೆಲೆಯಲ್ಲಿ. ಈ ಭಾರತ ರೂಪುಗೊಳ್ಳುವುದು ಕಾರ್ಖಾನೆಯ ಕಾರ್ಮಿಕರಿಂದ, ಹೊಲ ಉಳುವ ರೈತರಿಂದ ಎಂದು ಸಾರಿದ್ದು ಕೂಡ ಇದೇ ಕಾರಣಕ್ಕಾಗಿ. ಪತ್ರವೊಂದರಲ್ಲಿ ಸ್ವಾಮೀಜಿ ಉದ್ಧರಿಸಿರುವ ಈ ಮಾತುಗಳೇ ಅದಕ್ಕೆ ಸಾಕ್ಷಿ : ‘‘ಸಾಮಾನ್ಯ ಜನರು ಸಹಸ್ರಾರು ವರ್ಷಗಳ ಕಾಲ ಒಂದು ಚೂರೂ ಗೊಣಗದೆ ದಮನ ದಬ್ಬಾಳಿಕೆ ಅನುಭವಿಸಿದ್ದಾರೆ. ಹೀಗಾಗಿ ಎಂದೂ ಕುಂದದ ಪ್ರಾಣಧಾರಣ ಶಕ್ತಿ ಅವರದ್ದಾಗಿದೆ. ಒಂದೇ ಒಂದು ಮುಷ್ಠಿ ಅನ್ನ ತಿಂದು ಅವರು ಜಗತ್ತನ್ನು ತಲ್ಲಣಗೊಳಿಸಬಲ್ಲರು. ಅವರಿಗೆ ಒಂದೇ ಒಂದು ತುಣುಕು ರೊಟ್ಟಿ ಕೊಡಿ. ಅವರ ಶಕ್ತಿಯನ್ನು ಧಾರಣ ಮಾಡುವುದಕ್ಕೆ ಇಡೀ ಜಗತ್ತು ಸಾಕಾಗುವುದಿಲ್ಲ…’’
ಹಿಂದೂ ಧರ್ಮದ ಬಗ್ಗೆ ವಿವೇಕಾನಂದರಿಗೆ ಎಷ್ಟು ಅಪಾರ ಶ್ರದ್ಧೆಯಿತ್ತೋ ಆ ಧರ್ಮದಲ್ಲಿರುವ ಕಂದಾಚಾರ, ಗೊಡ್ಡು ನಂಬಿಕೆಗಳ ಬಗ್ಗೆ ಅಷ್ಟೇ ರೋಷವೂ ಇತ್ತು. ‘ಜಗತ್ತಿನ ಯಾವ ಧರ್ಮವೂ ಹಿಂದೂ ಧರ್ಮದಷ್ಟು ಉದಾತ್ತವಾದ ರೀತಿಯಲ್ಲಿ ಮಾನವತೆಯ ಮಹಿಮೆಯನ್ನು ಬೋಧಿಸುವುದಿಲ್ಲ ಹಾಗೂ ಜಗತ್ತಿನ ಯಾವ ಧರ್ಮವೂ ಹಿಂದೂ ಧರ್ಮದಂತೆ ಬಡವರ ಮತ್ತು ಹಿಂದುಳಿದವರ ಕೊರಳುಗಳನ್ನು ತುಳಿಯುವುದಿಲ್ಲ’. ಸ್ವಾಮೀಜಿ ಇಷ್ಟು ಹೇಳಿ ಸುಮ್ಮನಾಗಲಿಲ್ಲ. ದೋಷವಿರುವುದು ಧರ್ಮದಲ್ಲಲ್ಲ , ಆದರೆ ಅದನ್ನು ಬೋಧಿಸುತ್ತಿರುವ ಪುರೋಹಿತಶಾಹಿಯಲ್ಲಿ ಎಂದು ವಿಶ್ಲೇಷಿಸಿದರು. ಕೇರಳಕ್ಕೆ ಹೋಗಿದ್ದಾಗ ಕೆಳವರ್ಗದವರನ್ನು ಮೇಲ್ವರ್ಗದವರು ಶೋಷಿಸುತ್ತಿದ್ದ , ಹೀನಾಯವಾಗಿ ಕಾಣುತ್ತಿದ್ದ ಪರಿ ನೋಡಿ ಸ್ವಾಮೀಜಿ ರೋಷತಪ್ತರಾಗಿದ್ದರು. ‘ಇದೊಂದು ಹುಚ್ಚಾಸ್ಪತ್ರೆ’ ಎಂಬ ಭಾವಾವೇಷದ ಕಿಡಿನುಡಿ ಅವರಿಗರಿವಿಲ್ಲದೆ ಆಗ ಹೊರಗೆ ಸಿಡಿದಿತ್ತು. ಕೆಳವರ್ಗದವರೆನಿಸಿಕೊಂಡವರ ನೆರಳನ್ನು ತುಳಿಯುವುದಕ್ಕೂ ಅಸಹ್ಯಪಟ್ಟುಕೊಳ್ಳುತ್ತಿದ್ದ ಮೇಲ್ವರ್ಗದವರ ವೈಖರಿಯನ್ನು ಅವರು ಖಂಡತುಂಡವಾಗಿ ಖಂಡಿಸಿದ್ದರು.
ತಮ್ಮ ದೇಶ ಬಾಂಧವರ ಪರಮಶತ್ರುವೆಂದರೆ ಮೂಢನಂಬಿಕೆ ಹಾಗೂ ಕಂದಾಚಾರ ಎಂಬುದನ್ನು ವಿವೇಕಾನಂದರು ತಮ್ಮ ಭಾಷಣ, ಬರಹಗಳಲ್ಲಿ ಲೆಕ್ಕವಿಲ್ಲದಷ್ಟು ಸಲ ಒತ್ತಿ ಹೇಳಿದ್ದಾರೆ. ಅವು ಮೂಲೋತ್ಪಾಟನವಾಗುವವರೆಗೂ ಈ ದೇಶಕ್ಕೆ ಯಾವುದೇ ರೀತಿಯಲ್ಲಿ ಒಳ್ಳೆಯದಾಗುವುದಿಲ್ಲ ಎಂದು ಪದೇಪದೇ ಹೇಳಿದ್ದರು. ಪ್ರತಿಯೊಂದನ್ನೂ ದೇವರು ನಮಗೆ ಕೊಟ್ಟಿರುವ ವೈಚಾರಿಕ ಜಿಜ್ಞಾಸೆಯ ಮೂಸೆಯಲ್ಲಿ ಬೇಯಿಸಿ, ಪರೀಕ್ಷಿಸಿ ಅನಂತರವೇ ಅದನ್ನು ನಂಬತಕ್ಕದ್ದು ಎಂಬುದು ಸ್ವಾಮೀಜಿಯವರ ವಿಚಾರವಾಗಿತ್ತು. ‘ಭಗವಂತನು ನಮಗೆ ಕೊಟ್ಟಿರುವ ಅತ್ಯಂತ ದೊಡ್ಡ ವರವಾದ ವಿಚಾರಶಕ್ತಿಯನ್ನು ಬಳಸಿ, ದೇವರನ್ನು ಕುರಿತು ನಿನ್ನಲ್ಲಿ ನಂಬಿಕೆ ಇಲ್ಲ ಎಂದು ಹೇಳುವವನನ್ನು ಭಗವಂತನೂ ಖಂಡಿತ ಕ್ಷಮಿಸುತ್ತಾನೆ ಎಂಬುದು ನನ್ನ ನಂಬಿಕೆ. ತನ್ನ ವಿಚಾರ ಶಕ್ತಿಯನ್ನು ಬಳಸದೆ ಸುಮ್ಮನೆ ನಂಬುವವನನ್ನು ಬಹುಶಃ ಅವನು ಕ್ಷಮಿಸಲಾರ… ನಾವು ವಿಚಾರ ಮಾಡುತ್ತಲೇ ಹೋಗಬೇಕು. ಪ್ರತಿಯೊಂದು ದೇಶದ ಶಾಸ್ತ್ರಗಳೂ ಯಾವ ಮಹಾಪುರುಷರನ್ನು, ಸಂತರನ್ನು ಕುರಿತು ಹೇಳುತ್ತವೆಯೋ ಅಂಥವರ ವಿಷಯವಾಗಿ ವಿಚಾರ ಶಕ್ತಿಯನ್ನು ಬಳಸಿ. ಅವರು ಸತ್ಯ ಎಂದು ವಿಚಾರಶಕ್ತಿ ಹೇಳಿದರೆ ಆಗ ನಾವೂ ಅದನ್ನು ನಂಬೋಣ…’
ಭರತ ಖಂಡದ ಭೀಕರವಾದ ಅವನಿಗೆ ಪ್ರಾಪಂಚಿಕ ವಸ್ತುಗಳ ಕ್ಷಾಮ ಎಷ್ಟರಮಟ್ಟಿಗೆ ಕಾರಣವಾಗಿತ್ತೋ, ನಮ್ಮ ಜನರ ಬುದ್ಧಿ , ವಿಚಾರ ಶಕ್ತಿಗಳ ಕ್ಷಾಮವೂ ಅಷ್ಟೇ ಮಟ್ಟಿಗೆ ಕಾರಣ ಎಂಬುದನ್ನು ವಿವೇಕಾನಂದರು ತಮ್ಮ ತಾರುಣ್ಯದ ದಿನಗಳಲ್ಲೇ ಕಂಡುಕೊಂಡಿದ್ದರು. ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದಿದ್ದ ಕಾರಣಕ್ಕಾಗಿ ಧರ್ಮದ ಬತ್ತಳಿಕೆಯಲ್ಲಿದ್ದ ಸ್ವರ್ಗ, ನರಕಗಳೆಂಬ ಯಾವ ಬಾಣಕ್ಕೂ ಸ್ವಾಮೀಜಿಯವರ ವಿಚಾರಶಕ್ತಿಯ ವಜ್ರಕವಚವನ್ನು ಭೇದಿಸುವ ತೀಕ್ಷ್ಣತೆಯಿರಲಿಲ್ಲ. ಕುರುಡು ಧಾರ್ಮಿಕತೆ ಅವರದಾಗಿರಲಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಮಹತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದ ಸಂತರು ಅವರು. ಆದ್ದರಿಂದಲೇ ಅವರ ಪ್ರತಿ ಮಾತಿನಲ್ಲೂ ವೈಜ್ಞಾನಿಕ ಮನೋಭಾವ ನಿಚ್ಚಳವಾಗಿ ಎದ್ದುಕಾಣುತ್ತದೆ. ಪ್ರತಿಯೊಂದನ್ನೂ ಪ್ರಶ್ನಿಸುವ, ದೊರಕುವ ಅಂಕಿಅಂಶಗಳನ್ನು ವಿಶ್ಲೇಷಿಸುವ, ಭೌತ ಜಗತ್ತಿನಲ್ಲಿ ಈಗಾಗಲೇ ಸಿದ್ಧಾಂತಗೊಂಡಿರುವ ತತ್ತ್ವಗಳೊಂದಿಗೆ ಅವನ್ನು ಹೋಲಿಸಿ ನೋಡುವ, ಕೊನೆಗೆ ವಸ್ತುನಿಷ್ಠವಾದ ತೀರ್ಮಾನಕ್ಕೆ ಬರುವ ಬೌದ್ಧಿಕ ಪ್ರಕ್ರಿಯೆಯನ್ನು ಸ್ವಾಮೀಜಿ ಸದಾ ಅನ್ವಯಿಸುತ್ತಿದ್ದರೆಂಬುದು ಅವರ ವಿಚಾರಧಾರೆಯಿಂದ ಸ್ಪಷ್ಟ.
ವಿವೇಕಾನಂದರ 150ನೇ ಜನ್ಮವರ್ಷವನ್ನು ಸಡಗರದಿಂದ ಆಚರಿಸುತ್ತಿರುವ ಈ ಹೊತ್ತಿನಲ್ಲಿ ಕೇವಲ ಸಡಗರ ಸಂಭ್ರಮವಷ್ಟೇ ವ್ಯಕ್ತವಾದರೆ ಸಾಲದು. ವಿವೇಕಾನಂದರ ಕುರಿತ ಅಮೋಘ ಭಾಷಣ, ಮೆರವಣಿಗೆಗಳಿಗಷ್ಟೇ ಸೀಮಿತವಾಗದೆ ಅವರ ವೈಚಾರಿಕತೆ, ಪ್ರತಿಯೊಂದನ್ನೂ ಪ್ರಶ್ನಿಸಿ, ಅನಂತರವೇ ಒಪ್ಪಿಕೊಳ್ಳುವ, ಕಂದಾಚಾರ, ಗೊಡ್ಡುನಂಬಿಕೆಗಳಿಗೆ ಸಮಾಧಿ ಕಟ್ಟುವ ಕೃತಿರೂಪ ಎದ್ದು ಕಾಣುವಂತಾಗಬೇಕು. ವಿವೇಕಾನಂದರ ಕಾಲಘಟ್ಟದಲ್ಲಿದ್ದ ಕಂದಾಚಾರ, ಮೂಢನಂಬಿಕೆಗಳು ಈಗಲೂ ಕರಗಿಲ್ಲ. ಅಸ್ಪೃಶ್ಯತೆಯ ಕಳಂಕ ಈಗಲೂ ಅಳಿದಿಲ್ಲ. ವಿವೇಕಾನಂದರನ್ನು ಹಾಡಿಕೊಂಡಾಡುವ ಮನಸ್ಸುಗಳೇ ಅಜಿಲುಸೇವೆ, ಮಡೆಸ್ನಾನ, ಬಾಲ್ಯವಿವಾಹ, ಅಸ್ಪೃಶ್ಯತೆಯ ಆಚರಣೆ, ದೇವಾಲಯಗಳಲ್ಲಿ ಮಡಿವಂತಿಕೆ, ಭೋಜನದಲ್ಲಿ ಪಂಕ್ತಿಭೇದ ಮುಂತಾದ ಅಪಸವ್ಯಗಳಿಗೆ ಉತ್ತೇಜನ ನೀಡುತ್ತಿರುವ ವಿಪರ್ಯಾಸಗಳು ಮುಂದುವರಿದಿವೆ. ಮಡೆಸ್ನಾನವನ್ನು ವೈಚಾರಿಕತೆಯ ಹಿನ್ನೆಲೆಯಲ್ಲಿ ವಿರೋಧಿಸಿದಾಗ ಅಂಥವರನ್ನು ಎಡಪಂಥೀಯರೆಂದು ಬ್ರಾಂಡ್ ಮಾಡುವ ಸಂಕುಚಿತ ಮನಸ್ಸುಗಳೂ ನಮ್ಮ ನಡುವೆ ಕಂಡುಬರುತ್ತವೆ. ವಿವೇಕಾನಂದರ ಕಾಲದಲ್ಲಿ ಅಸ್ಪೃಶ್ಯತೆಯನ್ನು ವಿರೋಧಿಸುವವರನ್ನೂ ಹೀಗೆಯೇ ಬ್ರಾಂಡ್ ಮಾಡಿ ನೋಡಿದ್ದಿರಬಹುದು. ರಾಜಾರಾಂ ಮೋಹನರಾಯ್ ಬಾಲ್ಯವಿವಾಹ, ಸತಿಸಹಗಮನದಂತಹ ಅನಿಷ್ಠಗಳನ್ನು ಖಂಡಿಸಿದಾಗ ಅವರನ್ನೂ ಇಂಥದೇ ಬ್ರಾಂಡ್‌ಗೆ ಸೇರಿಸಿದ್ದಿರಬಹುದು! ಸಾಮಾಜಿಕ ಸುಧಾರಣೆ ಎಂಬುದು ಅಷ್ಟು ಸುಲಭವಾಗಿ ಆಗುವಂಥದ್ದಲ್ಲ. ಕಂದಾಚಾರ, ಮೂಢನಂಬಿಕೆಗಳು ಅಷ್ಟು ಸುಲಭವಾಗಿ ಹಿಂದೂ ಸಮಾಜದಲ್ಲಿ ನಿರ್ಮೂಲವಾಗುವಂಥದ್ದಲ್ಲ. ಅದು ಸಾಕಷ್ಟು ಪರಿಶ್ರಮ, ತ್ಯಾಗವನ್ನು ಬೇಡುತ್ತದೆ. ಮಡೆಸ್ನಾನ ಕೆಲವರ ನಂಬಿಕೆಗೆ ಸಂಬಂಧಿಸಿದ್ದು. ಅದನ್ನು ಪ್ರಶ್ನಿಸುವುದು ತರವಲ್ಲ ಎಂಬ ಪ್ರಬಲ ಪ್ರತಿಪಾದನೆಯೂ ವೈಚಾರಿಕರೆನಿಸಿಕೊಂಡ ಕೆಲವರಿಂದ ಕೇಳಿಬರುವುದುಂಟು. ಈ ಹಿಂದೆ ಹಿಂದೂ ಸಮಾಜವನ್ನು ಕಾಡಿದ್ದ ಬಾಲ್ಯವಿವಾಹ, ಸತಿಸಹಗಮನ, ಅಸ್ಪೃಶ್ಯತೆಯಂತಹ ಕಂದಾಚಾರಗಳ ಆಚರಣೆಯ ಹಿಂದೆಯೂ ಇಂತಹದೇ ನಂಬಿಕೆ ಹುದುಗಿತ್ತು. ಆದರೆ ಅದು ನಂಬಿಕೆಯಲ್ಲ , ಮೂಢನಂಬಿಕೆ ಎಂಬ ಅರಿವಾಗಲು ದೀರ್ಘಕಾಲವೇ ಬೇಕಾಯಿತು. ಈಗಲೂ ಹಿಂದೂ ಸಮಾಜವನ್ನು ಕೊರೆಯುತ್ತಿರುವ ಮೂಢನಂಬಿಕೆಗಳ ನಿವಾರಣೆಗೆ ಇನ್ನೆಷ್ಟು ದೀರ್ಘಕಾಲ ಬೇಕು ಎಂಬುದು ವರ್ತಮಾನದ ಪ್ರಶ್ನೆ. ವಿವೇಕಾನಂದ – 150 ವರ್ಷಾಚರಣೆ ಸಂದರ್ಭದಲ್ಲಿ ನಾವೆಲ್ಲರೂ ಈ ಪ್ರಶ್ನೆಗೆ ಸೂಕ್ತ ಹಾಗೂ ತಕ್ಷಣದ ಉತ್ತರ ಹುಡುಕಬೇಕಾಗಿದೆ. ವಿಜ್ಞಾನ, ತಂತ್ರಜ್ಞಾನ ಈಗ ವಿವೇಕಾನಂದರ ಕಾಲಕ್ಕಿಂತಲೂ ಹೆಚ್ಚು ಅಭಿವೃದ್ಧಿಯಾಗಿ, ತರುಣ ಪೀಳಿಗೆ ಅಂತಹ ವಾತಾವರಣದಲ್ಲೇ ಉಸಿರಾಡುತ್ತಿದೆ. ತಂತ್ರಜ್ಞಾನವಿಲ್ಲದೆ ಬದುಕು ನೀರಸ ಎಂಬ ಭಾವನೆ ಸರ್ವತ್ರವಾಗಿದೆ. ಹಾಗಾಗಿ ಈಗಲೂ ಹಿಂದೂ ಧರ್ಮ ಎಂಬ ಪಾತ್ರೆಗೆ ಅಂಟಿರುವ ಕೊಳೆ ಕಸಗಳನ್ನು ಸ್ವಚ್ಛಗೊಳಿಸದೆ ಹಾಗೆಯೇ ಇಟ್ಟುಕೊಂಡರೆ ಅದು ದುರ್ವಾಸನೆ ಬೀರಿ ಬಳಕೆಗೆ ನಿರುಪಯುಕ್ತವಾಗುವುದು ನಿಶ್ಚಿತ. ಹಾಗಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರದು.
***
ರಾಮಕೃಷ್ಣ ಪರಮಹಂಸರನ್ನು ಗುರುವೆಂದು ಯುವಕ ನರೇಂದ್ರ ಒಮ್ಮೆಲೇ ಒಪ್ಪಿಕೊಂಡಿರಲಿಲ್ಲ. ಅವರನ್ನು ಪ್ರಶ್ನಿಸಿ, ಪರೀಕ್ಷಿಸಿ ಅನಂತರವೇ ಸ್ವೀಕರಿಸಿದ್ದ. ಆದರೆ ಒಮ್ಮೆ ಅವರನ್ನು ಗುರುವಾಗಿ ಸ್ವೀಕರಿಸಿದ ಬಳಿಕ ಅವರ ಬಗ್ಗೆ ನಿತಾಂತ ಶ್ರದ್ಧೆ, ಭಕ್ತಿ ಕೊನೆತನಕವೂ ಆರಿ ಹೋಗಿರಲಿಲ್ಲ. ಒಂದು ಘಟನೆ ಇದಕ್ಕೆ ಸಾಕ್ಷಿ. ಪರಮಹಂಸರಿಗೆ ಕಾಯಿಲೆಯಾಗಿ ಅವರನ್ನು ಕಲ್ಕತ್ತೆಗೆ ಕರೆದುಕೊಂಡು ಹೋಗಿದ್ದ ದಿನಗಳು. ಅವರು ಕಾಶೀಪುರದ ತೋಟದ ಮನೆಯಲ್ಲಿ ಮಲಗಿದ್ದರು. ಹೇಗೋ ಸುದ್ದಿ ಹಬ್ಬಿತು, ಪರಮಹಂಸರ ರೋಗ ಸಾಂಕ್ರಾಮಿಕವೆಂದು. ಅವರ ಹತ್ತಿರದ ಶಿಷ್ಯರೂ ಅವರಿಗೆ ಸೇವೆಸಲ್ಲಿಸಲು ಹಿಂಜರಿದರು. ಅದನ್ನು ಕೇಳಿ ನರೇಂದ್ರ ಕಿಡಿಕಿಡಿಯಾದ. ಕೈಗೆ ಸಿಕ್ಕಿದ ಶಿಷ್ಯರನ್ನು ಎಳೆದುಕೊಂಡೇ ಪರಮಹಂಸರು ಮಲಗಿದ್ದ ಕೊಠಡಿಯೊಳಕ್ಕೆ ನುಗ್ಗಿದ. ಒಂದು ಮೂಲೆಯಲ್ಲಿ ಒಂದು ಬಟ್ಟಲು. ಅದರಲ್ಲಿ ಪರಮಹಂಸರ ಜೊಲ್ಲುಬೆರೆತ, ಅವರು ಕುಡಿಯಲಾರದೆ ಬಿಟ್ಟಿದ್ದ ಗಂಜಿ ಇತ್ತು. ನರೇಂದ್ರ ಅದನ್ನು ತೆಗೆದುಕೊಂಡವನೇ ಗಟಗಟನೆ ಕುಡಿದುಬಿಟ್ಟ! ಉಳಿದ ಶಿಷ್ಯರಿಗೆ ಆ ಕ್ಷಣ ಏನಾಯಿತು ಎಂಬುದು ನಿಮ್ಮ ಊಹೆಗೇ ಬಿಟ್ಟಿದ್ದು.
ಗುರುವಿನ ಮಾತಿನಲ್ಲಿ ನರೇಂದ್ರನಿಗೆ ಎಂತಹ ಶ್ರದ್ಧೆ , ಭಕ್ತಿ ಇತ್ತು, ಅದು ಆತನಿಗೆ ಎಂಥ ಶಕ್ತಿಯನ್ನು ತಂದಿತು ಎಂಬುದು ಈ ಘಟನೆಯಿಂದ ವೇದ್ಯ.ಇದರಿಂದಲೇ ನರೇಂದ್ರನಿಗೆ ಜಗತ್ತನ್ನು ಅಲ್ಲಾಡಿಸಲು ಸಾಧ್ಯವಾಗಿದ್ದು.
*****************