ಕೇದಾರನಾಥ್ ನೆರೆ ಸಂತ್ರಸ್ಥರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಿಧಿ ಸಂಗ್ರಹ
ಸಕಲೇಶಪುರ: ತಾಲ್ಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಕೇದಾರನಾಥ್ ಹಾಗೂ ಬದರಿನಾಥ್ನಲ್ಲಿ ಜಲಪ್ರವಾಹದಿಂದ ಉಂಟಾದ ನೆರೆ ಸಂತ್ರಸ್ಥರಿಗೆ ನೆರವು ನೀಡುವ ಸಲುವಾಗಿ ಪಟ್ಟಣದಲ್ಲಿ ನಿಧಿಯನ್ನು ಸಂಗ್ರಹಿಸಲಾಯಿತು.
ವ್ಯಾಪಕ ಮಳೆಯಿದ್ದರೂ ಸಹ ಕಾರ್ಯಕರ್ತರು ಮಳೆಯನ್ನು ಲೆಕ್ಕಿಸದೆ ಸಂತ್ರಸ್ಥರಿಗೆ ನಿಧಿಯನ್ನು ಸಂಗ್ರಹ ಮಾಡಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿ ನಿಧಿ ಸಂಗ್ರಹ ಮಾಡಿದರು. ಮಧ್ಯಾಹ್ನ ೧೨ ಗಂಟೆಗೆ ಆರಂಭವಾದ ಕಾರ್ಯಕ್ರಮ ಸಂಜೆ ೪ ಗಂಟೆಗೆ ಮುಕ್ತಾಯಗೊಳಿಸಲಾಯಿತು. ಕೇವಲ ೪ಗಂಟೆಗಳಲ್ಲಿ ಅವಧಿಯಲ್ಲಿ ಕಾರ್ಯಕರ್ತರು ಉತ್ತಮ ಹಣವನ್ನು ಸಂಗ್ರಹಿಸಿರುತ್ತಾರೆ. ಇಡೀ ರಾಜ್ಯದಲ್ಲಿಯೇ ಸಂಘ ಪರಿವಾರದ ಪರ ಮೊಟ್ಟಮೊದಲನೇದಾಗಿ ನಿಧಿ ಸಂಗ್ರಹ ಕಾರ್ಯವನ್ನು ಸಕಲೇಶಪುರದ ವಿಹೆಚ್ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಮಾಡಿರುತ್ತಾರೆ. ವಿಹೆಚ್ಪಿಯ ಗೌರವ ಅಧ್ಯಕ್ಷರಾದ ಬಾಬುಜೀ ನಗರ್ವಾಲ್ರವರ ಸಮ್ಮುಖದಲ್ಲಿ ಸಂಗ್ರಹಿಸಿದ ಹಣದ ಲೆಕ್ಕವನ್ನು ಮಾಡಲಾಯಿತು. ಒಟ್ಟು ೩೦,೬೦೮ ರೂ ಸಂಗ್ರಹವಾಗಿದ್ದು ಇದನ್ನು ಆರ್.ಎಸ್.ಎಸ್ನ ಪರಿಹಾರ ಸಂತ್ರಸ್ಥರ ನಿಧಿಗೆ ನೀಡಲು ಯೋಜಿಸಲಾಗಿರುತ್ತದೆ. ಹಲವಾರು ಮಾತೆಯರು, ಸಮಾಜದ ದುರ್ಬಲ ವರ್ಗದವರು ಸಹ ಸ್ವಯಂಪ್ರೇರಿತರಾಗಿ ಬಂದು ನಿಧಿಯನ್ನು ಅರ್ಪಿಸಿರುತ್ತಾರೆ. ಇದೇ ಸಂಧರ್ಭದಲ್ಲಿ ನಿಧಿಯನ್ನು ಸಮರ್ಪಿಸಿದ ತಾಲ್ಲೂಕಿನ ನಾಗರಿಕರಿಗೆ ವಿಹೆಚ್ಪಿ ವಂದನೆಗಳನ್ನು ಅರ್ಪಿಸಿರುತ್ತದೆ.
ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್, ವಿಹೆಚ್ಪಿ ತಾಲ್ಲೂಕು ಕಾರ್ಯದರ್ಶಿ ಸುಧೀರ್, ಬಜರಂಗದಳ ತಾಲ್ಲೂಕು ಸಂಚಾಲಕ ಧರ್ಮೇಶ್, ಬಜರಂಗದಳ ಜಿಲ್ಲಾ ಸಂಚಾಲಕ ವಿಜಯ್ ಕುಮಾರ್, ವಿಹೆಚ್ಪಿ ತಾಲ್ಲೂಕು ಪ್ರಮುಖ್ ರಮೇಶ್ ಟೈಲ್ಸ್, ನರೇಂದ್ರ ಮೋದಿ ಯುವಕ ಸಂಘದ ಗಿರೀಶ್, ಸಂದೇಶ್, ರಮೇಶ್, ರಾಜಣ್ಣ, ಪ್ರದೀಪ್, ಕಾರ್ತೀಕ್, ದೀಪಕ್ ಇನ್ನು ಮುಂತಾದವರು ಹಾಜರಿದ್ದರು.