Bangalore July 7: ರಾಷ್ಟ್ರನಿರ್ಮಾಣದಲ್ಲಿ ಮಹತ್ವದ ಪಾತ್ರಹೊಂದಿರುವ ಪತ್ರಿಕೆಗಳು ಸಮಾಜದಲ್ಲಿ ನೈತಿಕತೆಯನ್ನು ಎತ್ತಿಹಿಡಿಯುವ ಕಾರ್ಯಮಾಡಬೇಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ವ್ಯವಸ್ಥಾ ಪ್ರಮಖ್ ಶ್ರೀ ಮಂಗೇಶ್ ಭೆಂಡೇ ಅವರು ಹೇಳಿದ್ದಾರೆ.
ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಪತ್ರಿಕೆಗಳಿಗೆ ಜನರ ಮನೋಭಾವಗಳನ್ನು ಬದಲಿಸಬಲ್ಲ ಶಕ್ತಿ ಇದೆ. ಸ್ವಾತಂತ್ರ್ಯ ಹೋರಾಟದಲ್ಲೂ ಪತ್ರಿಕೆಯ ಪಾತ್ರ ಮಹತ್ವದ್ದು. ತಿಲಕರ ’ಕೇಸರಿ’ ಪತ್ರಿಕೆಯಲ್ಲಿ ಸಾವರ್ಕರ್ರನ್ನು ಅಂಡಮಾನ್ ಜೈಲಿನಲ್ಲಿ ಗಾಣಕ್ಕೆ ಕಟ್ಟಿ ಎಣ್ಣೆ ತೆಗೆಯುವ ಶಿಕ್ಷೆ ನೀಡಿದ್ದಾರೆ ಎಂಬ ಸುದ್ಧಿ ಓದಿದ ಭಯ್ಯಾಜಿ ಜೋಶಿಯವರ ತಾಯಿ ಜೀವನಪೂರ್ತಿ ತಲೆಗೆ ಎಣ್ಣೆಯನ್ನೇ ಹಾಕುವುದನ್ನೇ ಬಿಟ್ಟುಬಿಟ್ಟಿದ್ದರು. ಅಂದರೆ ಪತ್ರಿಕೆಗಳಲ್ಲಿ ಬರುವ ಸುದ್ಧಿ ಜನಸಾಮಾನ್ಯರ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ಆದರೆ ಇಂದು ಮಾದ್ಯಮಗಳು ತಮ್ಮ ಮೌಲ್ಯಗಳಿಂದ ದೂರವಾಗಿ, ದೇಶದಲ್ಲಿ ದುರ್ಜನರೇ ತುಂಬಿದ್ದಾರೆ. ಎಲ್ಲೇಡೆ ಅನೀತಿಗಳೇ ತುಂಬಿವೆ ಎಂಬಂತೆ ಸುದ್ಧಿಗಳನ್ನು ಪ್ರಸಾರಿಸುತ್ತಿವೆ. ಇದು ಸಾಮಾಜಿಕ ವ್ಯವಸ್ಥೆಯ ಮೇಲೆ ಬಲವಾದ ಆಘಾತವನ್ನು ನೀಡಿದೆ. ಆದರೆ ವಿಕ್ರಮ ಇಂದಿಗೂ ಮೌಲ್ಯಾಧಾರಿತ, ಸಮಾಜಹಿತದೃಷ್ಟಿಯ ಸುದ್ಧಿಗಳನ್ನು ಪ್ರಕಟಿಸುತ್ತಾ ರಾಷ್ಟ್ರಜಾಗೃತಿಯಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಸಂಘವನ್ನು ಬೆಳೆಸಿದ ಯಾದವರಾವ್ ಜೋಶಿ ಅವರು, ರಾಷ್ಟ್ರೀಯ ವಿಚಾರಧಾರೆಗಳ ಪ್ರಸಾರ ಮಾಡುವ ಪತ್ರಿಕೆ ಅಗತ್ಯನ್ನು ಬ್ಯಾಂಕ್ ನಲ್ಲಿ ಉದ್ಯೊಗಿಯಾಗಿದ್ದ ಬೆ.ಸು.ನಾ. ಮಲ್ಯರನ್ನು ಕರೆತಂದು ವಿಕ್ರಮ’ ಪತ್ರಿಕೆಯನ್ನು ಪ್ರಾರಂಭಿಸಿದರು. ಅಂದಿನಿಂದ ನಿರಂತರ ೪೮ ವರ್ಷಗಳ ಕಾಲ ಬೆ.ಸು.ನಾ. ಮಲ್ಯ ವಿಕ್ರಮದ ಸಂಪಾದಕರಾಗಿ ದುಡಿದರು. ಪತ್ರಿಕಾ ರಂಗದ ಇತಿಹಾಸದಲ್ಲಿ ಒಬ್ಬ ಪತ್ರಕರ್ತ ಒಂದು ಪತ್ರಿಎಯಲ್ಲಿ ಇಷ್ಟು ದೀರ್ಘಕಾಲ ಸಂಪಾದಕರಾಗಿ ಸೇವೆಸಲ್ಲಿಸಿರುವುದು ಇತಿಹಾಸ ಎಂದ ಬೆಂಢೇ, ಸಂಘದ ಸ್ಥಾಪಕರಾದ ಡಾ. ಕೇಶವ ಬಲಿರಾಮ ಹೆಗಡೆ ಅವರು ಕೂಡಾ ೧೯೨೩ರಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿದ್ದರು ಎಂಬುದನ್ನು ನೆನಪಿಸಿಕೊಂಡರು.
ನೂತನ ಕಟ್ಟಡದ ಉದ್ಘಾಟನೆಗೊಳಿಸಿ ಮಾತನಾಡಿದ ನ್ಯಾಯಮೂರ್ತಿ ರಾಮಾಜೋಯಿಸರು ತಂದೆ-ಅಣ್ಣರಂತೆ ಶಿಕ್ಷಕನಾಗುವ ಕನಸುಕಂಡ ತನ್ನನ್ನು ಯಾದವರಾವ್ ಜೋಶಿ ಅವರು ಬೆಂಗಳೂರಿಗೆ ಕರೆದುಕೊಂಡು ಬಂದು ವಿಕ್ರಮದ ಉಪಸಂಪಾದಕನಾಗಿ ಕೆಲಸ ಮಾಡಿ ವಕೀಲೀ ಶಿಕ್ಷಣ ಪೋರೈಸಿದ ಘಟನೆಯನ್ನು ಸ್ಮರಿಸಿಕೊಂಡ ಅವರು, ತಮ್ಮ ಜೀವನ ಮತ್ತು ವಿಕ್ರಮದ ಅವಿನಾಭಾವ ಸಂಬಂಧಗಳನ್ನು ಹಂಚಿಕೊಂಡರು. ಇನ್ನೊಬ್ಬ ಅತಿಥಿಗಳಾದ ಶ್ರೀ ಪ್ರಭಾಶಾಂಕರ್ ಅವರು ತಮ್ಮನ್ನು ಮಾಕ್ಸ್ ಪ್ರಭಾವದಿಂದ ರಾಷ್ಟ್ರೀಯ ಚಿಂತನೆಯೆಡೆಗೆ ಸೆಳೆದ ವಿಕ್ರಮದ ಪ್ರಭಾವದ ಬಗೆಗೆ ಮೆಚುಗೆ ವ್ಯಕ್ತಪಡಿಸಿದರು. ಹಾಗೂ ಇಂದಿಗೂ ಅದೇ ದಾರಿಯಲ್ಲಿ ಹೊರಬರುತ್ತಿರುವ ವಿಕ್ರಮ ರಾಜ್ಯಾದ್ಯಂತ ಪ್ರಸಾರ ಹೊಂದುವಂತಾಗಬೇಕೆಂದು ಆಶಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಸಂಶೋಧಕ ಚಿದಾನಂದಮೂರ್ತಿ, ಸಂಘದ ಹಿರಿಯರಾದ ಕೆ.ಸಿ.ಕಣ್ಣನ್, ಕ್ಷೇತ್ರೀಯ ಸಂಪರ್ಕ ಪ್ರಮುಖ್ ಪ್ರಭಾಕರ್ ಭಟ್, ಪ್ರಾಂತ ಪ್ರಚಾರಕ ಮುಕುಂದ ಮುಂತಾದ ಅನೇಕ ಹಿರಿಯ ಪತ್ರಕರ್ತರು, ಸಾಹಿತಿಗಳು ಉಪಸ್ಥಿತರಿದ್ದರು.