RSS ಮಹಾಸಾಂಘಿಕ ಸಭೆಯಲ್ಲಿ ವಿಶೇಷ ಉಪನ್ಯಾಸ
ಬಿಜಾಪುರ: ದೇವರು ಹಾಗೂ ರಾಷ್ಟ್ರ ಎರಡೂ ಒಂದೇ ಎಂಬ ಅನುಸಂಧಾನ ನಮ್ಮದಾಗಬೇಕು. ಇಂದು ನಾವು ರಾಷ್ಟ್ರವನ್ನು ಒಂದು ಮಹಾನ್ ಶಕ್ತಿಯಾದ ದೇವರೆಂದೇ ಪರಿಗಣಿಸಬೇಕು. ಮಾತೃ ದೇವೋಭವದಂತೆ ರಾಷ್ಟ್ರ ದೇವೋಭವ ಎಂಬುದು ನಮ್ಮ ಧ್ಯೇಯ ವಾಕ್ಯವಾಗಬೇಕಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಅಭಿಪ್ರಾಯಪಟ್ಟರು.
ಬಿಜಾಪುರದ ಖೇಡ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಏರ್ಪಡಿಸಿದ್ದ ಮಹಾ ಸಾಂಘಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಪ್ರತಿ ಭಾನುವಾರ ನಡೆಯುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಂಘಿಕ ಕಾರ್ಯಕ್ರಮದಲ್ಲಿ ಈ ಬಾರಿ ವಿಶೇಷ ಆಮಂತ್ರಣದ ಮೇರೆಗೆ ಸುಮಾರು ೮೦೦ ಜನ ಸ್ವಯಂ ಸೇವಕರು ಪಾಲ್ಗೊಂಡಿದ್ದ ಮಹಾ ಸಾಂಘಿಕ ಕಾರ್ಯಕ್ರಮದಲ್ಲಿ ರಾಷ್ಟ್ರ ಜಾಗೃತಿ, ಪ್ರಸ್ತುತ ವಿದ್ಯಮಾನಗಳ ಕುರಿತು ಮಾತನಾಡಿದ ಶ್ರೀಗಳು, ಮುಂಬರುವ ಸವಾಲುಗಳನ್ನು ಎದುರಿಸುವಲ್ಲಿ ಈ ದೇಶದಲ್ಲಿ ಸಮರ್ಥವಾಗಿ ಮುನ್ನುಗ್ಗುತ್ತಿರುವ ಏಕೈಕ ಸ್ವಯಂ ಸೇವಕ ಸಂಘವೆಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘವಾಗಿದೆ. ಹಿಂದುತ್ವಕ್ಕಾಗಿ, ಹಿಂದು ಸಮಾಜದ ಜಾಗೃತಿಗಾಗಿ ನಾವು ಸದಾ ಕಂಕಣ ಬದಟಛಿರಾಗಿ ನಿಲ್ಲಬೇಕಿದೆ ಎಂದು ಹೇಳಿದರು.
ಅಯೋಧ್ಯೆಯ ರಾಮಮಂದಿರದ ಸುತ್ತ ಪಾದಯಾತ್ರೆಯಲ್ಲಿ ತೊಡಗಿಕೊಂಡಿರುವ ನಮ್ಮ ವೀರ ಸನ್ಯಾಸಿಗಳ ಪರಿಕ್ರಮ ಯಾತ್ರೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮ ಅತ್ಯಂತ ಖಂಡನಾರ್ಹವಾಗಿದೆ. ಉತ್ತರ ಪ್ರದೇಶ ಸರ್ಕಾರ ಓಟ್ ಬ್ಯಾಂಕ್ ದೃಷ್ಟಿಯಿಂದ ಇಂತಹ ಚುನಾವಣಾ ತಂತ್ರಗಳನ್ನು ಅನುಸರಿಸುತ್ತಿರುವುದು ಸರಿಯಲ್ಲ. ಈ ಕ್ರಮಕ್ಕಾಗಿ ರಾಷ್ಟ್ರ ವ್ಯಾಪಿ ಪ್ರತಿಭಟನೆಗಳಾಗಬೇಕಿದೆ. ಅಂಥ ಪ್ರತಿಭಟನೆಗಳನ್ನು ಬೆಂಬಲಿಸುವುದಾಗಿ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕ ನರೇಂದ್ರಜಿ, ಜಿಲ್ಲಾ ಸಂಘ ಚಾಲಕ ಸಿದ್ರಾಮಪ್ಪ ಉಪ್ಪಿನ, ವಿಭಾಗ ವ್ಯವಸ್ಥಾ ಪ್ರಮುಖ ರಾಮಸಿಂಗ್ ಹಜೇರಿ ಸೇರಿದಂತೆ ಸಂಘದ ಪ್ರಮುಖರು, ಗಣ್ಯರು, ಹಿತೈಷಿಗಳು, ಕಾರ್ಯಕರ್ತರು ಇದ್ದರು.