RSS Sarasanghachalak Mohan Bhagwat's speech from NAGPUR-2013

ಸ್ವಸ್ಥ ಪ್ರಜಾತಂತ್ರಕ್ಕಾಗಿ ನೂರು ಶೇಕಡಾ ಮತದಾನ ಅವಶ್ಯಕ

ಸರಸಂಘಚಾಲಕ ಭಾಗವತ್‌ಜೀ ಅಭಿಮತ

ನಾಗಪುರ: ಚುನಾವಣಾ ರಾಜಕೀಯವು ಸಾಮಾನ್ಯ ಜನರಿಗಲ್ಲ, ಆದರೆ ಅದು ಅನಿವಾರ್ಯವಾದ ಪ್ರಜಾತಾಂತ್ರಿಕ ಕರ್ತವ್ಯವನ್ನು ಪಾಲಿಸುವ ಅವಕಾಶವಾಗಿದೆ. ಆದ್ದರಿಂದ ಮತದಾನ ಮಾಡುವಾಗ ಜನರು ಮತದಾರರಾಗಿ ಪಕ್ಷಗಳ ಧೋರಣೆ ಮತ್ತು ಉಮೇದ್ವಾರರ ಚಾರಿತ್ರ್ಯವನ್ನು ಯೋಗ್ಯ ಸಮದೃಷ್ಟಿಯಿಂದ ಮೌಲ್ಯಾಂಕನ ಮಾಡಬೇಕು. ಜನತೆಯ ದೃಷ್ಟಿಯಿಂದ ಚುನಾವಣೆಯು ಮಹತ್ವಪೂರ್ಣವಾದುದು. ಸಾಮಾನ್ಯ ಜನರು ಯಾವುದೇ ವಂಚನೆ, ಕಪಟ ಅಥವಾ ಭಾವೋದ್ವಕ್ಕೆ ಸಿಲುಕದೆ, ರಾಷ್ಟ್ರಹಿತದ ಧೋರಣೆಯಿಂದ ಕೆಲಸ ಮಾಡುವ ಪಕ್ಷ ಹಾಗೂ ಯೋಗ್ಯ ಸಮರ್ಥ ಉಮೇದ್ವಾರರನ್ನು ಗುರುತಿಸಿ ಮತದಾನ ಮಾಡಬೇಕು. ಶೇ.೧೦೦ರಷ್ಟು ಮತದಾನವು ಪ್ರಜಾತಂತ್ರದ ಸ್ವಾಸ್ಥ್ಯವನ್ನು ಪೋಷಿಸುತ್ತದೆ  ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ ಭಾಗ್ವತ್ ಪ್ರತಿಪಾದಿಸಿದರು.

RSS Sarasanghachalak Mohan Bhagwat's speech from NAGPUR-2013
RSS Sarasanghachalak Mohan Bhagwat’s speech from NAGPUR-2013

 ಡಾ. ಭಾಗ್ವತ್ ಸಂಘದ ವಿಜಯದಶಮಿ ಉತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದರು. ಮೋಹನ್‌ಜಿ ಭಾಗ್ವತ್ ಅವರ ಭಾಷಣದ ಸಾರಾಂಶ ಹೀಗಿದೆ:

ಚುನಾವಣಾ ಸಮಯದಲ್ಲಿ ಜನತೆಯ ಕರ್ತವ್ಯವನ್ನು ಒತ್ತಿ ಹೇಳುತ್ತ ಸರಸಂಘಚಾಲಕರು ಹೇಳಿದರು – ನಿರ್ಲಕ್ಷ್ಯ ತ್ಯಜಿಸಿ ಈ ನಿಟ್ಟಿನಲ್ಲಿ ನಡೆಯುವ ಎಲ್ಲ ಪ್ರಯತ್ನಗಳಲ್ಲಿ ಚುನಾವಣೆ ನಡೆಸುವ ವ್ಯವಸ್ಥೆಗಳು ಹಾಗೂ ಸಿಬ್ಬಂದಿಗಳಿಗೆ ನಮ್ಮ ಸಹಕಾರವಿರಬೇಕು. ಆದರೆ ಚುನಾವಣೆಯಲ್ಲಿ ಮತದಾನ ಮಾಡುವುದರಿಂದಷ್ಟೇ ಹಾಗೂ ಚುನಾಯಿತರಾದ ವ್ಯಕ್ತಿಗಳ ಮೇಲೆಯೇ ಎಲ್ಲ ಭಾರ ಹೊರಿಸುವುದರಿಂದ ನಮ್ಮ ಕರ್ತವ್ಯ ಮುಗಿಯದು. ಚುನಾವಣೆಯ ಬಳಿಕ ಉಮೇದ್ವಾರನ ಕಾರ್ಯಗಳ ಕಡೆ ಕಣ್ಣಿಟ್ಟು , ಆತನನ್ನು ನೇರವಾಗಿ ಹಳಿಗಳ ಮೇಲೆ ಉಳಿಸಿಕೊಳ್ಳುವ ಹೊಣೆಯೂ ಜನತೆಯದ್ದಾಗಿದೆ.

ಮತದಾನದ ಮೂಲಕ ನಮ್ಮ ಪ್ರತಿನಿಧಿಗಳನ್ನು ಚುನಾಯಿಸುವ ಕಾಲ ಸಮೀಪಿಸಿದೆ ಎಂದು ಅವರು ನುಡಿದರು. ಅನೇಕ ನೂತನ ಮತ್ತು ಯುವ ಮತದಾತರಿರಬಹುದು. ನಾವು ನಮ್ಮ ಕರ್ತವ್ಯ ನಿರ್ವಹಿಸುವಂತಾಗಲು, ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಸಮರ್ಪಕವಾಗಿ ಸೇರಿಕೊಂಡಿದೆಯೇ, ಇಲ್ಲವೇ ಎಂದು ಮೊಟ್ಟಮೊದಲು ಕಾಳಜಿವಹಿಸಬೇಕು.

ದೇಶದ ಆರ್ಥಿಕ ಪರಿಸ್ಥಿತಿಯು ಸಾಮಾನ್ಯ ಜನರ ಜೀವನವು ತ್ವರಿತವಾಗಿ ಪ್ರಭಾವಿಸುವಂತಹದ್ದು. ಅಲ್ಲದೆ ನಮ್ಮ ದೇಶದ ಸಾಮಾನ್ಯ ಜನರು ನಿತ್ಯದ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ನಮ್ಮ ದೇಶವು ಆರ್ಥಿಕ ಮಹಾಶಕ್ತಿಯಾಗುವ ಬಗ್ಗೆ ತೀವ್ರ ಚರ್ಚಿಸಲಾಗುತ್ತಿತ್ತು, ಆದರೆ ಈಗ ರೂಪಾಯಿ ಅಪಮೌಲ್ಯಗೊಳ್ಳುತ್ತಿದೆ. ಆರ್ಥಿಕ ನಷ್ಟ , ಚಾಲೂ ಖಾತೆಯ ನಷ್ಟ ಹಾಗೂ ವಿದೇಶಿ ವಿನಿಮಯ ಕೋಷದಲ್ಲಿ ನಿರಂತರ ಕಡಿಮೆಯಾಗುತ್ತಿರುವ ಬಗ್ಗೆ ಚರ್ಚಿಸಲಾಗುತ್ತಿದೆ, ಆರ್ಥಿಕ ಅಭಿವೃದ್ಧಿ ದರದಲ್ಲಿ ತೀವ್ರ ಕುಸಿತವಾಗುತ್ತಿರುವುದನ್ನು ನೋಡಿದರೆ, ಅರ್ಥತಂತ್ರದ ಸಂಚಾಲನೆಯು ತಪ್ಪು ದಿಶೆಯಲ್ಲಾಗುತ್ತಿರುವುದು ನಿಚ್ಚಳವಾಗುತ್ತದೆ. ಇದೆಲ್ಲ ಪರಿಸ್ಥಿತಿಯಲ್ಲಿಯೂ ಸರ್ಕಾರದ ಹಠಮಾರಿ ಧೋರಣೆಗಳು ದಿಶೆ ಬದಲಾಯಿಸಲು ಎಳ್ಳಷ್ಟೂ ಸಿದ್ಧವಿಲ್ಲದಿರುವುದು ಅಚ್ಚರಿಯ ಸಂಗತಿಯೇ.

ಸರ್ಕಾರದ ತಪ್ಪು ಧೋರಣೆಗಳು

ಒಂದರ ಬಳಿಕ ಇನ್ನೊಂದರಂತೆ ದೇಶದ ಉತ್ಪಾದನೆಯ ಕ್ಷೇತ್ರಗಳ ಸ್ವಾಮಿತ್ವವನ್ನು ನಮ್ಮ ದೇಶದ ಜನರನ್ನು ತಿರಸ್ಕಾರದಿಂದ ಉಪೇಕ್ಷಿಸಿ ವಿದೇಶಿಯರಿಂದ ಹಸ್ತಾಂತರಿಸುವ ಧೋರಣೆಗಳನ್ನು ಅನುಸರಿಸಲಾಗುತ್ತಿದೆ. ದೇಶದ ಆದಾಯದ ದೊಡ್ಡ ಭಾಗವನ್ನು ನಿರ್ಮಿಸುತ್ತಿರುವ ಲಘು ಉದ್ಯಮಿಗಳು, ಸಣ್ಣ ಉದ್ಯಮಿಗಳು, ಸ್ವಯಂಉದ್ಯೋಗವನ್ನು ಅವಲಂಬಿಸಿದ ಚಿಲ್ಲರೆ ವ್ಯಾಪಾರಿಗಳು ಇಂತಹ ಎಲ್ಲರನ್ನೂ, ವಿದೇಶಿ ಹೂಡಿಕೆದಾರರೊಂದಿಗೆ ವಿಷಮ ಸ್ಪರ್ಧೆಯ ವಿಪತ್ತಿಗೆ ನಮ್ಮ ಸರ್ಕಾರವೇ ತಳ್ಳುತ್ತಿದೆ. ಅವರ ನಿರ್ವಹಣೆ, ದೇಶದ ಸ್ವಾವಲಂಬನೆ ಮತ್ತು ದೇಶವಾಸಿಗಳ ದುಡಿಯುವ ಪ್ರವೃತ್ತಿಯ ಭವಿಷ್ಯವನ್ನೇ ಶಂಕಿಸುವಂತಾಗಿದೆ. ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಗ್ರಾಮಗಳಿಂದ ಉದ್ಯೋಗಕ್ಕಾಗಿ ನಗರಗಳ ಕಡೆ ಹೋಗುವವರ ಸಂಖ್ಯೆ ಹೆಚ್ಚಾಗಿರುವುದರಿಂದ ನಗರ ಮತ್ತು ಗ್ರಾಮವೆರಡರಲ್ಲೂ ಹಲವು ರೀತಿಯ ಸಮಸ್ಯೆಗಳೆದ್ದಿವೆ. ತಥಾಕಥಿತ ಅಭಿವೃದ್ಧಿಯ ತೋರಿಕೆಯ ಹೊಳೆಪೆಷ್ಟೇ ಇರಲಿ, ಆರ್ಥಿಕ ದೃಷ್ಟಿಯಿಂದ ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳಿಗೆ ಅದರ ಲಾಭವಾಗುವುದು ದೂರವೇ, ಜೀವನ ನಡೆಸುವುದಕ್ಕೂ ಅಡಚಣೆಯೊಡ್ಡುವ ಪರಿಸ್ಥಿತಿಗಳನ್ನು ಎದುರಿಸುವ ಸಂದರ್ಭ ಬಂದೊದಗಿದೆ.

ದೇಶದ ರಕ್ಷಣೆ

ದೇಶದ ರಕ್ಷಣೆಗೆ ಕವಿದಿರುವ ವಿಪತ್ತುಗಳ ಮೋಡಗಳು ಹಾಗೆಯೇ ಮುಂದುವರಿದಿವೆ. ಭಾರತದ ಗಡಿಭಾಗಗಳಲ್ಲಿ ಅಕ್ರಮಪ್ರವೇಶ, ಭಾರತದ ನಾಲ್ಕೂ ಕಡೆಗಳ ದೇಶಗಳಲ್ಲಿ ತನ್ನ ಪ್ರಭಾವ ಬೆಳೆಸಿ ಭಾರತವನ್ನು ಸುತ್ತುವರಿಯುವುದು, ನಮ್ಮ ಪೇಟೆಗಳಿಗೆ ತನ್ನ ವಸ್ತುಗಳನ್ನು ಹರಿಸುವುದು ಇತ್ಯಾದಿ ವಿಧಾನಗಳನ್ನು ಚೀನವು ಮುಂಚಿನಂತೆಯೇ ನಡೆಸುತ್ತಿದೆ. ನಾವು ಪೂರ್ಣ ಇಚ್ಛಾಶಕ್ತಿಯಿಂದ, ದೃಢತೆ ಮತ್ತು ಸಾಮರ್ಥ್ಯದಿಂದ ಇದಕ್ಕೆ ಉತ್ತರ ನೀಡಬೇಕು, ಆದರೆ ಇಂತಹ ಗಂಭೀರವಾದ ಘಟನೆಗಳನ್ನು ಮುಚ್ಚಿಡಲಾಗುತ್ತದೆ. ಇತ್ತ ಪಾಕಿಸ್ಥಾನದ ಧೋರಣೆಗಳಲ್ಲಿ ಭಾರತದ ಬಗ್ಗೆ ಅದರ ದ್ವೇಷ ಎದ್ದು ಕಾಣುತ್ತಿದ್ದರೂ, ಪಾಕಿಸ್ಥಾನದ ದುಸ್ಸಾಹಸವನ್ನು ಹೆಚ್ಚಿಸುವ ಧೋರಣೆಯ ಅದೇ ಶಿಥಿಲ, ಭೋಳೆ ನಿಲುವು ನಮ್ಮ ಸರ್ಕಾರದ್ದು.

ಉತ್ತರ ಪೂರ್ವಾಂಚಲದ ಸಮಸ್ಯೆಯನ್ನು ಉಲ್ಲೇಖಿಸಿ ಸರಸಂಘಚಾಲಕರು ಹೇಳಿದರು – ಅಲ್ಲಿಯ ದೇಶಭಕ್ತ ಜನತೆಯನ್ನು ಉಪೇಕ್ಷಿಸಿ ವೋಟ್‌ಬ್ಯಾಂಕ್ ರಾಜಕೀಯದಂತೆ ಪ್ರತ್ಯೇಕತಾವಾದಿ ಮೂಲಭೂತವಾದಿ ಮತ್ತು ಅಕ್ರಮಪ್ರವೇಶ ಮೂಡಿ ಬಂದ ವಿದೇಶಿ ಶಕ್ತಿಗಳ ಅಸಭ್ಯ ತುಷ್ಟೀಕರಣ ತೋರುತ್ತಿದೆ. ಅಲ್ಲಿಯ ಅಭಿವೃದ್ಧಿಯನ್ನು ಹಿಂದಿನಂತೆಯೇ ಉಪೇಕ್ಷಿಸಲಾಗುತ್ತಿದೆ.

ದೇಶದ ರಕ್ಷಣೆಯ ದೃಷ್ಟಿಯಿಂದ ಈ ವಿಪತ್ತಿನ ಪರಿಸ್ಥಿತಿಯನ್ನು ಕಂಡು ನೇಪಾಳ, ಟಿಬೆಟ್, ಶ್ರೀಲಂಕಾ, ಬಾಂಗ್ಲಾದೇಶ, ಅಫಘಾನಿಸ್ಥಾನ, ಮ್ಯಾನ್ಮಾರ್ ಮತ್ತು ಆಗ್ನೇಯ ಏಶ್ಯಾ ದೇಶಗಳಲ್ಲಿನ ಭಾರತೀಯ ಮೂಲದ ಜನರ ಹಿತಗಳನ್ನು ಸಾಧಿಸಿ ಆ ದೇಶಗಳೊಂದಿಗೆ ಆತ್ಮೀಯ ಸಂಬಂಧಗಳಲ್ಲಿ ದೃಢತೆ ಬೆಳೆಸಬೇಕು. ಆದರೆ ಈ ನಿಟ್ಟಿನಲ್ಲಿ ಸರ್ಕಾರದ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿದೆ.

ಆಂತರಿಕ ಸುರಕ್ಷೆ

ದೇಶದ ಆಂತರಿಕ ಸುರಕ್ಷೆಯ ಕುರಿತು ಸರಸಂಘಚಾಲಕರು ಉಲ್ಲೇಖಿಸಿ, ಅದು ತೀರ ಗಂಭೀರವಾಗಿದೆ ಎಂದರು. ವಿದೇಶಿ ವಿಚಾರಗಳಿಂದ ಪ್ರೇರಿತರಾಗಿ, ಅಲ್ಲಿಂದ  ವಿವಿಧ ನೆರವು ಪಡೆದು ದೇಶದ ಸಂವಿಧಾನ, ಕಾನೂನು ಮತ್ತು ವ್ಯವಸ್ಥೆ  ಇತ್ಯಾದಿಗಳನ್ನು ಹಿಂಸಾತ್ಮಕವಾಗಿ ಅಪಮಾನಿಸುವ ಎಲ್ಲ ಶಕ್ತಿಗಳೂ ಇಂದು ಒಗ್ಗೂಡಿದಂತಿವೆ. ಸಾಮಾನ್ಯ ಜನರ ಶೋಷಣೆ, ಅವಹೇಳನ ಮತ್ತು ಅಭಾವದ ಪರಿಸ್ಥಿತಿಯನ್ನು ನಿವಾರಿಸಬೇಕು, ಆಡಳಿತ ವ್ಯವಹಾರವನ್ನು ಹೆಚ್ಚು ಹೊಣೆಗಾರಿಕೆ ಮತ್ತು ಪಾರದರ್ಶಕವಾಗಿ ವೂಡಬೇಕು ಹಾಗೂ ಹಿಂಸಾತ್ಮಕ ಚಟುವಟಿಕೆಗಳನ್ನು ದೃಢತೆಯಿಂದ ಮಟ್ಟ ಹಾಕಬೇಕು. ಇದರಲ್ಲಿ ಸರ್ಕಾರದ ಅವಶ್ಯಕ ಇಚ್ಛಾಶಕ್ತಿಯ ಅಭಾವವು ಇಂದಿಗೂ ಹಾಗೆಯೇ ಉಳಿದಿದೆ. ಸಾಮಾನ್ಯ ಪ್ರಜೆಗಳು ಇವೆಲ್ಲ ಪರಿಸ್ಥಿತಿಯಿಂದ ಬೇಸತ್ತಿದ್ದಾರೆ, ರೊಚ್ಚಿಗೆದ್ದಿದ್ದಾರೆ ಮತ್ತು ಪರಿವರ್ತನೆಯನ್ನು ಬಯಸುತ್ತಾರೆ. ಆದರೆ ದೇಶದ ರಾಜಕಾರಣವು ಮತಗಳ ಸ್ವಾರ್ಥದ ಚಕ್ರವ್ಯೂಹದಲ್ಲೇ ಧನ್ಯತೆ ಕಾಣುತ್ತಿದೆ. ಈ ಪರಿಸ್ಥಿತಿಯಿಂದ ಎಲ್ಲಕ್ಕೂ ಹಾನಿಗೀಡಾಗಿರುವವರು, ಭಾರತದ ಪ್ರಜೆಗಳಲ್ಲಿ ಬಹುಸಂಖ್ಯಾತರಾದ ಹಿಂದೂ ಸಮಾಜವೇ.

ಜಮ್ಮೂವಿನ ಕಿಶ್ತವಾರ್‌ನಲ್ಲಿ ನೆಲೆಸಿರುವ ಹಿಂದೂ ವ್ಯಾಪಾರಿಗಳ ಸಂಖ್ಯೆಯು  ಕಿಶ್ತವಾರ್ ನಗರದಲ್ಲಿ ಅತ್ಯಲ್ಪವಾಗಿದೆ (ಶೇ.೧೫). ಅಲ್ಲಿಯ ಅಂಗಡಿಗಳ ಮೇಲೆ ಜಾತೀಯ ವಿದ್ವೇಷದ ಗುಂಪು ಹಲ್ಲೆ ಮಾಡಿತು. ರಾಜ್ಯ ಸರ್ಕಾರದ ಗೃಹಮಂತ್ರಿ ಮತ್ತು ಅಲ್ಲಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಅವರ ಪ್ರಚೋದನೆಯಿಂದ ಲೂಟಿ – ಸುಲಿಗೆ ಮತ್ತು ವಿಧ್ವಂಸದ ಷಡ್ಯಂತ್ರವನ್ನು ಯೋಜನಾಬದ್ಧವಾಗಿ ನಡೆಸಲಾಯಿತು. ಉಳಿದ ಜಮ್ಮೂ ಪ್ರದೇಶದ ದೇಶಭಕ್ತ ಜನತೆಯ ತ್ವರಿತ ಮತ್ತು ಪ್ರಭಾವೀ ವಿರೋಧದಿಂದಾಗಿ ಹಿಂದುಗಳ ಪ್ರಾಣದ ರಕ್ಷಣೆಯಾಯಿತು. ಹಲವು ಕೋಟಿಗಳ ಅವರ ನಷ್ಟದ ಬದಲು ಈಗ ರಾಜ್ಯ ಸರ್ಕಾರವು ಹಿಂದುಗಳಿಗೆ ಕೆಲವು ಲಕ್ಷದ ಪರಿಹಾರ ನೀಡಿ ತನ್ನ ಕರ್ತವ್ಯದ ಇತಿಶ್ರೀ ಮಾಡಿದೆ. ದಂಗೆಕೋರರು ಮತ್ತು ಅವರ ಪಕ್ಷಪಾತಿ ರೂವಾರಿಗಳ ಬಗ್ಗೆ ಕಾನೂನು ಕ್ರಮದ ಯಾವ ವಿಚಾರವೂ ಇಲ್ಲ. ಇದು ಅದೇ ಜಮ್ಮೂ-ಕಾಶ್ಮೀರ ರಾಜ್ಯವು ಭಾರತದಲ್ಲಿ ವಿಲೀನಗೊಂಡಿಲ್ಲ, ಸಷರತ್ತಾಗಿ ಸೇರಿಕೊಂಡಿದೆ.

ಕೇವಲ ಅಧಿಕಾರ ಸ್ವಾರ್ಥದಿಂದ ಪ್ರೇರಿತರಾಗಿ, ಅಂಧರಾಗಿ ದೇಶ ಮತ್ತು ದೇಶಭಕ್ತರ ಶಕ್ತಿಯನ್ನು ತುಳಿದು ಹಾಕುವ ಈ ಕುಟಿಲ ದೇಶಘಾತಕ ರಾಜಕಾರಣದ ಇನ್ನೊಂದು ಸ್ಪಷ್ಟ ಉದಾಹರಣೆಯಿದೆ. ಇತ್ತೀಚೆಗೆ ನಡೆದ ಉತ್ತರಪ್ರದೇಶದ ಮುಜಫ್ಫರ್ ನಗರದ ಘಟನೆಗಳನ್ನು ನೋಡಿ. ಒಂದೇ ಕೋಮಿನವರಿಂದ ನಿರಂತರ ನಡೆಯುತ್ತ ಬಂದಿದ್ದ ಗೂಂಡಾಗಿರಿಯ ಘಟನೆಗಳನ್ನು, ಅಧಿಕಾರದ ಸಮೀಕರಣದಿಂದ ಕೇವಲ ನಿರ್ಲಕ್ಷಿಸಿದ್ದಷ್ಟೇ ಅಲ್ಲ, ಅವುಗಳನ್ನು ಪ್ರೋತ್ಸಾಹಿಸಲಾಯಿತು, ಸಂರಕ್ಷಣೆಯನ್ನೂ ನೀಡಲಾಯಿತು. ರಾಜ್ಯದ ಚುನಾವಣೆಗಳು ಹಿಂದಿನಿಂದಲೂ ಕಾನೂನು – ಸಂವಿಧಾನಗಳನ್ನು ನಿರ್ಲಕ್ಷಿಸಿ, ಅಲ್ಪಸಂಖ್ಯಾತ ಮತಗಳ ತುಷ್ಟೀಕರಣವೇ ನಡೆಯುತ್ತಿತ್ತು. ಅಧಿಕಾರ ಗಳಿಕೆಯ ಬಳಿಕ ಅಧಿಕಾರಾರೂಢ ಪಕ್ಷದ ಸೂಚನೆಯಂತೆ ಸರ್ಕಾರವು ತನ್ನ ಅಧಿಕಾರಗಳ ಮಿತಿಯಲ್ಲಿ ಕಾನೂನು – ನಿರ್ದೇಶಿತ ಕಾರ್ಯ ಮಾಡುತ್ತಿದ್ದರೆ ಆ ‘ಅಪರಾಧ’ಕ್ಕಾಗಿ ಒಬ್ಬ ಆಡಳಿತದ ಅಧಿಕಾರಿಯನ್ನು ಅಮಾನತುಗೊಳಿಸಲಾಯಿತು. ದೇಶದೆಲ್ಲೆಡೆಯ ಸಾಧುಸಂತರು ಪೂರ್ಣವಾಗಿ ಕಾನೂನುಬದ್ಧ, ಶಾಂತಿಯುತವಾದ ಅಯೋಧ್ಯಾ ಪರಿಕ್ರಮಕ್ಕೆ ತೊಡಗಿದಾಗ ಅದನ್ನು ತಡೆಗಟ್ಟಿ, ವಿವಾದವಾಗಿಸಿ, ನಕಲಿ ಜಾತ್ಯತೀತತೆಯ ಮರೆಯಲ್ಲಿ ಜಾತೀಯ ಭಾವನೆಗಳನ್ನು ಉದ್ರೇಕಿಸುವ ಆಟವನ್ನು ಆಡಲಾಯಿತು.

ದೇಶದ ಪ್ರಜೆಗಳನ್ನು ಸಮದೃಷ್ಟಿಯಿಂದ ಕಂಡು ಆಡಳಿತ ನಡೆಸುವ ಹೊಣೆ ಹೊತ್ತಿರುವವರು, ಮನಸ್ಸು – ಮಾತು – ಕೃತಿಗಳಿಂದ ಹಿಂದೂ ಸಮಾಜದ ವಿರುದ್ಧ ಅಥವಾ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಇದೆಲ್ಲ ನಡೆಸುತ್ತಿರುವುದು ದುರ್ಭಾಗ್ಯಕರ. ಅಲ್ಪಸಂಖ್ಯಾತ ಯುವಕರ ಬಗ್ಗೆ ಮೃದುವಾಗಿ ವರ್ತಿಸುವಂತೆ ದೇಶದ ಗೃಹಮಂತ್ರಿಯು ರಾಜ್ಯಗಳ ರಾಜ್ಯಕರ್ತರಿಗೆ ಸೂಚನೆ ಕಳುಹಿಸಿದರು, ಅಲ್ಲದೆ ತಮಿಳುನಾಡಿನಲ್ಲಿ ಇತ್ತೀಚೆಗೆ ಹಿಂದೂ ನಾಯಕರನ್ನು ಮೂಲಭೂತವಾದಿಗಳು ಹತ್ಯೆಗೈದುದನ್ನು ಮೊದಲು ಉಪೇಕ್ಷಿಸಲಾಯಿತು, ಅನಂತರ ತನಿಖೆಯಲ್ಲಿ ಶಿಥಿಲತೆ ತೋರಲಾಯಿತು.

ಶೈಕ್ಷಣಿಕ ಧೋರಣೆಯಲ್ಲಿ

ಪರಿವರ್ತನೆ ಅಗತ್ಯ

ಸರಸಂಘಚಾಲಕ ಡಾ.ಭಾಗ್ವತ್ ಅವರು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಉಲ್ಲೇಖಿಸಿದರು. ಕೇವಲ ವ್ಯಾಪಾರಿ ದೃಷ್ಟಿಯಿಂದ ನಡೆಯುತ್ತಿರುವ ಇಂದಿನ ಶಿಕ್ಷಣ ಧೋರಣೆಯಲ್ಲಿ ಮೂಲಭೂತ ಪರಿವರ್ತನೆ ಮಾಡುವುದು ಅವಶ್ಯಕವೆಂದರು. ಈ ಧೋರಣೆಯಿಂದಾಗಿ ಇಂದಿನ ಶಿಕ್ಷಣವು ಸಾಮಾನ್ಯ ಜನತೆಯ ಕೈಗೆಟುಕದಾಗಿದೆ, ಅದರಲ್ಲಿ ಗುಣವಂತಿಕೆ ಮತ್ತು ಸಂಸ್ಕಾರ ಮೂಡಿಸುವುದೂ ನಿಂತು ಹೋಗಿರುವುದು ಇದಕ್ಕೆ ಕಾರಣ. ಶಿಕ್ಷಣ ಕ್ಷೇತ್ರದಲ್ಲಿ ದೇಶೀಯ ಜನರ ಉದ್ಯಮವನ್ನು ಕಡೆಗಣಿಸಿ, ವಿದೇಶಿ ಶಿಕ್ಷಣ ಸಂಸ್ಥೆಗಳ ಅನಿಯಂತ್ರಿತ ಪ್ರವೇಶವನ್ನು ಆಹ್ವಾನಿಸಿ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ವಿದೇಶಿಯರಿಗೆ ಹಸ್ತಾಂತರಿಸಲು ಸಿದ್ಧತೆ ನಡೆಯುತ್ತಿರುವಂತೆ ತೋರುತ್ತದೆ. ವೈಭವಶಾಲಿ ರಾಷ್ಟ್ರ ನಿರ್ಮಾಣಕ್ಕಾಗಿ ನೂತನ ಪೀಳಿಗೆಯನ್ನು ಸರ್ವರೀತಿಯಿಂದ ಸುಸಜ್ಜಿತಗೊಳಿಸುವ ಬದಲು, ಶಿಕ್ಷಣವನ್ನು ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಹಣ ಸಂಪಾದನೆಯ ಅವಕಾಶಗಳಿಂದ ತುಂಬಿದ ಒಂದು ನೂತನ ಮಾರುಕಟ್ಟೆಯೆಂದು ಭಾವಿಸಿ, ಆ ರೀತಿ ಯೋಚಿಸುವುದರಿಂದ ದೇಶದ ಭವಿಷ್ಯ ಕರಾಳವಾದೀತು. ಇಂದು ಶಿಕ್ಷಣದ ಕ್ಷೇತ್ರಕ್ಕೆ ನೀಡುತ್ತಿರುವ ದಿಶೆಯಲ್ಲಿ ಈ ಬಗ್ಗೆ ಎಳ್ಳಷ್ಟೂ ವಿವೇಕ ಕಾಣುತ್ತಿಲ್ಲ.

ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳ ಪ್ರಮಾಣದಲ್ಲಿ ಏರಿಕೆಗೆ ಮುಖ್ಯ ಕಾರಣಗಳಲ್ಲಿ ಸಂಸ್ಕಾರಗಳ ಅಭಾವವೂ ಒಂದು. ನೂತನ ಪೀಳಿಗೆಗೆ ಉತ್ತಮ ಸಂಸ್ಕಾರ ಸಿಗುವಂತಹ ವ್ಯವಸ್ಥೆಯು ನಮ್ಮ ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲೂ ಇದೆ. ಆದ್ದರಿಂದ ಈ ನಿಟ್ಟಿನಲ್ಲಿ ನಮ್ಮ ಕೌಟುಂಬಿಕ ವ್ಯವಸ್ಥೆಯನ್ನು ಅಧ್ಯಯನ ಮಾಡುವ, ಅನುಸರಿಸುವ ಇಚ್ಛೆಯು ಇಂದು ಜಗತ್ತಿನೆಲ್ಲೆಡೆ ತೋರುತ್ತಿದೆ.

ಹಿಂದೂ ಸಮಾಜದ ಅವಹೇಳನ

ಹಿಂದೂ ಸಮಾಜದ ಅವಹೇಳನವು ನಿರ್ಲಜ್ಜೆಯಿಂದ ನಡೆಯುತ್ತಿದೆ. ಈ ಮಾನಸಿಕತೆಯ ಆಧಾರದ ಮೇಲೆ ಜಾತೀಯ ಕೃತ್ಯಗಳ ನಿರೋಧಕ ಕಾನೂನು – ೨೦೧೧ರ ಹೆಸರಿನಲ್ಲಿ ಎಲ್ಲ ರೀತಿಯ ಕಾನೂನು ವಿರೋಧಿ ಕ್ರಮಗಳನ್ನು ಜಾರಿಗೊಳಿಸಲು ಪ್ರಯತ್ನಿಸಲಾಗಿತ್ತು. ಸಂವಿಧಾನದ ನಿರ್ದೇಶನವನ್ನು ನಿರ್ಲಕ್ಷಿಸಿ ಜಾತೀಯ ಆಧಾರದ ಮೇಲೆ ಮೀಸಲಾತಿ ಕೊಡಿಸುವ ಕ್ರಮ ಅನುಸರಿಸಲಾಗಿತ್ತು. ತೆರಿಗೆದಾರರ ಹಣವನ್ನು ತಮ್ಮ ಇಂತಹ ಪಕ್ಷಪಾತಿ ಯೋಜನೆಗಳು ಮತ್ತು ಭ್ರಷ್ಟಾಚಾರಗಳಿಂದ ಪೋಲು ಮಾಡುವ ಮಂದಿ ದೇಶದ ಖಾಲಿ ಖಜಾನೆಗಳನ್ನು ತುಂಬಲು ಹಿಂದೂ ದೇವಾಲಯಗಳಿಂದ ಚಿನ್ನವನ್ನು ಅಪೇಕ್ಷಿಸುತ್ತಾರೆ. ಈಗ ಸಮಗ್ರ ಪ್ರಜೆಗಳ ಶ್ರದ್ಧೆ, ಪರ್ಯಾವರಣ ಸಂರಕ್ಷಣೆ, ಸಮುದ್ರಗಳ ಗಡಿ ಭದ್ರತೆ, ಥೋರಿಯಂನಂತಹ ಅಮೂಲ್ಯ ಮತ್ತು ದುರ್ಲಭ ಧಾತುಗಳ ಪ್ರಾಕೃತಿಕ ಭಂಡಾರಗಳ ಸಂರಕ್ಷಣೆ, ಕರಾವಳಿ ನಿವಾಸಿ ಜನರ ಕಸಬು ಇತ್ಯಾದಿ ಎಲ್ಲವನ್ನೂ ಅಪಮಾನಿಸುತ್ತಾರೆ. ಅಲ್ಲದೆ ಸ್ವತಃ ನಿಯುಕ್ತಿಗೊಳಿಸಿದ ಸಮಿತಿಯ ಶಿಫಾರಸನ್ನು ಕಡೆಗಣಿಸಿ ಕೇಂದ್ರ ಆಡಳಿತದಲ್ಲಿ ಕೂತಿರುವ ಮಂದಿ ಅಧಿಕಾರ ಸ್ವಾರ್ಥಕ್ಕಾಗಿ ರಾಮಸೇತುವನ್ನು ಧ್ವಂಸಗೊಳಿಸಿ ಸೇತುಸಮುದ್ರಮ್ ಪ್ರಕಲ್ಪವನ್ನು ಪೂರ್ಣಗೊಳಿಸಲು ಯತ್ನಿಸುತ್ತಿದ್ದಾರೆ.

ಸಮರ್ಥ ಕೌಟುಂಬಿಕ ವ್ಯವಸ್ಥೆ

ನಮ್ಮ ದೇಶದ ಸಾಮಾಜಿಕ ಸಂರಚನೆಯ ಎಲ್ಲಕ್ಕೂ ಸಣ್ಣ ಅಂತಿಮ ಘಟಕವಾದ ಕುಟುಂಬವು ಸಮಾಜದ ಸಂಪೂರ್ಣ ಸ್ವರೂಪವೆಂದು ಭಾವಿಸಲ್ಪಟ್ಟಿದೆ. ಸಮಾಜದಲ್ಲಿ ನಾವು ಅಪೇಕ್ಷಿಸುವ ಪರಿವರ್ತನೆಯನ್ನು ಸ್ವಂತ ಕುಟುಂಬದ ಆಚರಣೆ ಮತ್ತು ವಾತಾವರಣದ ಸುಧಾರಣೆಯಿಂದ ಪ್ರಾರಂಭಿಸೋಣ. ಸರಳತೆ, ಸ್ವಚ್ಛತೆ, ಪಾವಿತ್ರ್ಯ, ಆತ್ಮೀಯತೆ ಇತ್ಯಾದಿಗಳು ಸ್ವಂತದ ಕೌಟುಂಬಿಕ ಜೀವನದಿಂದ ವ್ಯಕ್ತವಾಗಬೇಕು. ನಮ್ಮ ಕುಟುಂಬದವರಲ್ಲಿ ಮಹಿಳಾ ವರ್ಗವನ್ನು ನಾವು ಸಾಮಾಜಿಕ ದೃಷ್ಟಿಯಿಂದ ಪ್ರಬುದ್ಧ ಮತ್ತು ಸಕ್ರಿಯವಾಗಿ ಮಾಡಬೇಕು. ಇಂಧನ – ಜಲ ಇತ್ಯಾದಿಗಳ ಉಳಿತಾಯ, ಪರ್ಯಾವರಣ ಸಂರಕ್ಷಣೆ, ಸ್ವದೇಶಿಯ ವ್ಯವಹಾರ, ವಿವಿಧ ಕಾರಣಗಳಿಂದ ಕುಟುಂಬದ ಸಂಪರ್ಕಕ್ಕೆ ಬರುವ ಎಲ್ಲರೊಂದಿಗೆ ಆತ್ಮೀಯ, ಗೌರವದ ಮತ್ತು ನ್ಯಾಯಯುತ ವರ್ತನೆಗೆ ನಮ್ಮ ಕುಟುಂಬವು ಮೇಲ್ಪಂಕ್ತಿಯಾಗಬೇಕು. ಅಕ್ಕಪಕ್ಕದ ಮನೆಯವರ ಸುಖ-ದುಃಖಗಳಲ್ಲಿ ಸ್ಪಂದಿಸಿ, ಸಕ್ರಿಯವಾಗಿ ನಮ್ಮ ಕುಟುಂಬವನ್ನು ಅನುಸರಣೀಯ ಸಾಮಾಜಿಕ ಆಚರಣೆಯ ಪ್ರೇರಣೆ ಮತ್ತು ಮೇಲ್ಪಂಕ್ತಿಯಾಗಿ ಮಾಡುವುದು ನಮ್ಮ ಕರ್ತವ್ಯ.

ಪುರುಷಾರ್ಥದ ಸಂಕಲ್ಪ

ಸರಸಂಘಚಾಲಕರು ಪುರುಷಾರ್ಥವು ಮಹತ್ವಪೂರ್ಣವೆಂದರು. ಬಹು ಜಟಿಲ ಮತ್ತು ಕರಾಳ ಸವಾಲುಗಳು ದೇಶಕ್ಕೆ ಎದುರಾಗಿವೆ. ಅವುಗಳ ಮೇಲೆ ವಿಜಯ ಸಾಧಿಸಲು ನಾವು ನಮ್ಮ ಶಕ್ತಿಯನ್ನು ಜಾಗೃತಗೊಳಿಸಿ ಪುರುಷಾರ್ಥದ ಪರಾಕಾಷ್ಠೆ ಸಾಧಿಸಬೇಕು. ಏಕೆಂದರೆ, ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ರಾಷ್ಟ್ರ ರಕ್ಷಣೆ ಮತ್ತು ಪೋಷಣೆಯ ಹೊಣೆ ಹೊತ್ತಿರುವವರ ಸಾಮರ್ಥ್ಯದ ಮಾತು ದೂರವುಳಿಯಿತು, ಅವರ ಉzಶಗಳೇ ಶಂಕಾಸ್ಪದವಾಗಿವೆ. ಆದ್ದರಿಂದ ನಾವು ನಮ್ಮ ವ್ಯಕ್ತಿಗತ ಜೀವನದಲ್ಲಿ ಶಕ್ತಿ ಸಂವರ್ಧನೆ ಮತ್ತು ಜೀವನ ಸುಧಾರಣೆಯನ್ನು ಆರಂಭಿಸಬೇಕು. ನಾವು ಭಾರತ ದೇಶದ ಭೂತಕಾಲದ ನೈಜ ಇತಿಹಾಸ, ಗೌರವ, ಇಂದಿನ ವಿದ್ಯಮಾನಗಳನ್ನು ಪ್ರಾಮಾಣಿಕ ನಿಷ್ಪಕ್ಷ ಮೂಲಗಳಿಂದ ತಿಳಿದುಕೊಳ್ಳಬೇಕು. ನಮ್ಮ ದಿನಚರಿಯಲ್ಲಿ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಬಲವನ್ನು ಬೆಳೆಸಿಕೊಳ್ಳಲು ನಿತ್ಯವೂ ಅಭ್ಯಾಸಮಾಡಬೇಕು. ದೇಶದ ಭವಿಷ್ಯದ ಕುರಿತಾಗಿ ತ್ಯಾಗಿ ಮತ್ತು ನಿಸ್ವಾರ್ಥಿ ಮಹಾಪುರುಷರ ಚಿಂತನ ಹಾಗೂ ನಮ್ಮ ಕರ್ತವ್ಯಗಳ ಬಗ್ಗೆ ಅವರ ಬೋಧನೆಗಳನ್ನು ಅನುಸರಿಸಬೇಕು. ನಾವು ನಮ್ಮ ಜೀವನದ ಸಾಮರ್ಥ್ಯಗಳನ್ನು ಪರಿಶ್ರಮದಿಂದ ಹೆಚ್ಚಿಸಿಕೊಂಡು, ಜೀವನದಲ್ಲಿ ಎಲ್ಲ ರೀತಿಯ ಯಶಸ್ಸು ಮತ್ತು ವಿಜಯ ಗಳಿಸಿ ಅವುಗಳನ್ನು ಸಮಾಜದ ಹಿತಕ್ಕಾಗಿ ಪರೋಪಕಾರ ಮತ್ತು ಸೇವೆಗಾಗಿ ವಿನಿಯೋಗಿಸುವ ಸಂಕಲ್ಪ ಮಾಡೋಣ.

ಸರಸಂಘಚಾಲಕರು ಸ್ವಾಮಿ ವಿವೇಕಾನಂದ ಸಾರ್ಧಶತಿಯನ್ನು ಸ್ಮರಿಸಿ ಹೇಳಿದರು – ಸ್ವಾಮಿ ವಿವೇಕಾನಂದರು ರಾಷ್ಟ್ರದ ಪುನರ್ಜಾಗೃತಿಯ ಕಲ್ಪನೆ ನೀಡಿದ್ದರು. ಶುದ್ಧ ಚಾರಿತ್ರ್ಯ, ಸ್ವಾರ್ಥ ಮತ್ತು ಭೇದರಹಿತ ಅಂತಃಕರಣ, ಶರೀರದಲ್ಲಿ ವಜ್ರದ ಶಕ್ತಿ ಹಾಗೂ ಹೃದಯದಲ್ಲಿ ಅದಮ್ಯ ಉತ್ಸಾಹ ಮತ್ತು ಪ್ರೇಮದಿಂದ ಸ್ವತಃ ಮೇಲ್ಪಂಕ್ತಿಯಾಗಬೇಕು. ಹೀಗೆ ರಾಷ್ಟ್ರದ ಸೇವೆಯಲ್ಲಿ ಸರ್ವಸ್ವವನ್ನೂ ಮುಡಿಪಾಗಿಡುವ ಯುವಕರಿಂದಲೇ ನಮ್ಮ ಪವಿತ್ರ ಭಾರತ ಮಾತೆಯನ್ನು ವಿಶ್ವ ಗುರುವಿನ ಸ್ಥಾನಕ್ಕೇರಿಸಲು ಅವರು ಸಮಾಜಕ್ಕೆ ನಿರ್ದೇಶನ ನೀಡಿದ್ದರು.

ವಿಜಯದಶಮಿಯ ಸಂದರ್ಭದಲ್ಲಿ ನಮ್ಮ ವ್ಯಕ್ತಿತ್ವದ ಎಲ್ಲ ಸಂಕುಚಿತ ಸೀಮೆಗಳನ್ನೂ ದಾಟಿ, ಅಂತಃಕರಣದಲ್ಲಿ ರಾಷ್ಟ್ರ ಪುರುಷನ ಭವ್ಯ ಸ್ವರೂಪದ ಆರಾಧನೆಯಲ್ಲಿ ಸರ್ವಸ್ವವನ್ನೂ ಮುಡಿಪಾಗಿಡಲು ನಾವು ಸಂಕಲ್ಪ ಮಾಡೋಣ ಹಾಗೂ ಸಮಾಜಹಿತಕ್ಕಾಗಿ ನಡೆಯುವ ಎಲ್ಲ ಕಾರ್ಯಗಳಲ್ಲಿ ವಿವೇಕವಂತರಾಗಿ, ನಿಸ್ವಾರ್ಥಬುದ್ಧಿಯಿಂದ ನಾವು ಸಾಮೂಹಿಕವಾಗಿ ಸಕ್ರಿಯರಾಗೋಣ, ಎಂದೂ ಸರಸಂಘಚಾಲಕರು ಕರೆ ನೀಡಿದರು.

ಈ ವಿಜಯದಶಮಿ ಉತ್ಸವವು ನಾಗಪುರದ ರೇಶಿಂಬಾಗ್ ಪರಿಸರದಲ್ಲಿ ನಡೆದಿದ್ದುದು ಉಲ್ಲೇಖನೀಯ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಲೇಖಕ ಲೋಕೇಶಚಂದ್ರರು ಉಪಸ್ಥಿತರಿದ್ದರು. ಅಲ್ಲದೆ ಸರಕಾರ್ಯವಾಹ ಭೈಯಾಜಿ ಜೋಶಿ, ನಾಗಪುರ ಮಹಾನಗರ ಸಂಘಚಾಲಕ ಡಾ.ದಿಲೀಪ ಗುಪ್ತಾ, ಸಹ ಸಂಘಚಾಲಕ್ ಲಕ್ಷ್ಮಣ ಪಾರ್ಡಿಕರ್ ಮತ್ತು ವಿದರ್ಭ ಪ್ರಾಂತದ ಸಹ ಸಂಘಚಾಲಕ ರಾಮ ಹರಕರೆ ಅವರೂ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಧ್ವಜಾರೋಹಣದ ನಂತರ ಗಣ್ಯವ್ಯಕ್ತಿಗಳು ಶಸ್ತ್ರ ಪೂಜೆ ಮಾಡಿದರು ಹಾಗೂ ಸ್ವಯಂಸೇವಕರು ದಂಡ, ವ್ಯಾಯಾಮಯೋಗ ಇತ್ಯಾದಿಗಳನ್ನು ಪ್ರದರ್ಶಿಸಿದರು. ಅನಂತರ ಪ್ರಮುಖ ಅತಿಥಿ ಡಾ.ಲೋಕೇಶಚಂದ್ರರು ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ಭಾರತದ ಇತಿಹಾಸವನ್ನು ವಿವರಿಸಿ, ಶಕ್ತಿಯೊಂದಿಗೆ ಭಕ್ತಿಯ ಸಮನ್ವಯಕಾದಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿ ವಿಜಯ ಸಾಧಿಸಬಲ್ಲೆವು, ಎಂದರು.

ನಾಗಪುರ ಮಹಾನಗರ ಸಂಘಚಾಲಕ ಡಾ.ದಿಲೀಪ್ ಗುಪ್ತಾ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಕೊನೆಯಲ್ಲಿ ವಂದಿಸಿದರು. ಈ ಸಂದರ್ಭದಲ್ಲಿ ಸಹಸ್ರಾರು ಸ್ವಯಂಸೇವಕರಲ್ಲಿದೆ ಭಾರೀ ಸಂಖ್ಯೆಯಲ್ಲಿ ಜನರೂ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.