by Du Gu Lakshman
೫೫ ವರ್ಷಕ್ಕಿಂತಲೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ ಮರೆತೇ ಬಿಟ್ಟಿದ್ದ ಧೀಮಂತ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಡುವ ಪ್ರಯತ್ನ ಈಚೆಗೆ ಸಾಗಿದೆ. ಪ್ರಧಾನಿ ಅಭ್ಯರ್ಥಿ ಎಂದು ಘೋಷಿತವಾಗಿರುವ ನರೇಂದ್ರ ಮೋದಿ ಈಚೆಗೆ ಸಭೆಯೊಂದರಲ್ಲಿ ಮಾತನಾಡುತ್ತಾ, ‘ನೆಹರು ಅವರ ಬದಲಿಗೆ ಪಟೇಲರು ಮೊದಲ ಪ್ರಧಾನಿಯಾಗಿ ನೇಮಕಗೊಂಡಿದ್ದರೆ ದೇಶದ ಈಗಿನ ಪರಿಸ್ಥಿತಿಯೇ ಬದಲಾಗುತ್ತಿತ್ತು’ ಎಂದಿದ್ದು ದೇಶಾದ್ಯಂತ ಭಾರೀ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. ಕಾಂಗ್ರೆಸ್ ಮುಖಂಡರಂತೂ ಮೋದಿ ಅವರ ಈ ಹೇಳಿಕೆ ವಿರುದ್ಧ ಕೆಂಡ ತುಳಿದವರಂತೆ ಎಗರಾಡಿದ್ದರು.
ಆದರೆ ಅಸಲಿಗೆ ಇಂತಹದೊಂದು ಹೇಳಿಕೆಯನ್ನು ನರೇಂದ್ರ ಮೋದಿಯವರೇ ಮೊದಲು ನೀಡಿದ್ದಲ್ಲ. ನೆಹರು ಪ್ರಧಾನಿಯಾಗಿ ಕಾಲು ಶತಮಾನ ಕಳೆದ ಬಳಿಕ ಭಾರತದ ಮೊದಲ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಚಾರಿಯವರೇ ಇಂತಹದೊಂದು ಹೇಳಿಕೆಯನ್ನು ನೀಡಿದ್ದರು. ‘Undoubtedly it would have been better if Nehru had been asked to be Foriegn Minister and Patel made the Prime Minister’ – ಇದು ರಾಜಗೋಪಾಲಾಚಾರಿ ಅವರz ಹೇಳಿಕೆ. ಯಾರೋ ಸಾಮಾನ್ಯರು ಇಂತಹದೊಂದು ಮಾತು ಹೇಳಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿರಲಿಲ್ಲ. ಆದರೆ ರಾಜಗೋಪಾಲಾಚಾರಿ ಅವರು ದೇಶ ಕಂಡ ಒಬ್ಬ ಶ್ರೇಷ್ಠ ರಾಜಕೀಯ ಮುತ್ಸದ್ದಿ. ಅವರ ಮಾತುಗಳಿಗೆ ಆ ಕಾಲದಲ್ಲಿ ಬಹಳ ಮಹತ್ವ ಇರುತ್ತಿತ್ತು. ಗಾಂಧೀಜಿಯಂಥವರೇ ರಾಜಾಜಿಯವರ ಮಾತುಗಳಿಗೆ ತುಂಬಾ ಬೆಲೆ ಕೊಡುತ್ತಿದ್ದರು. ಖಂಡಿತವಾದಿಯಾಗಿದ್ದ ರಾಜಾಜಿ ಅಷ್ಟೇ ಸತ್ಯನಿಷ್ಠುರರೂ ಆಗಿದ್ದರು. ಆದರೆ ರಾಜಾಜಿಯವರ ಅಭಿಪ್ರಾಯಗಳು ಏನೇ ಇರಲಿ, ಅವು ಯಾವಾಗಲೂ ದೇಶಹಿತಕ್ಕೆ ಪೂರಕವಾಗಿಯೇ ಇರುತ್ತಿದ್ದವು. ವ್ಯಕ್ತಿನಿಷ್ಠೆಗಿಂತ ಅವರದು ತತ್ತ್ವನಿಷ್ಠೆ ಹಾಗೂ ದೇಶನಿಷ್ಠೆಗೇ ಹೆಚ್ಚಿನ ಆದ್ಯತೆ. ಇದೇ ಹಿನ್ನೆಲೆಯಲ್ಲಿ ಅವರು ಸ್ವಾತಂತ್ರ್ಯ ಬಂದ ಬಳಿಕ ನೆಹರು ವಿದೇಶಾಂಗ ಮಂತ್ರಿಯಾಗಿ, ಪಟೇಲ್ ಪ್ರಧಾನಮಂತ್ರಿಯಾಗಿ ನೇಮಕಗೊಂಡಿದ್ದರೆ ನಿಸ್ಸಂಶಯವಾಗಿಯೂ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದು. ಅದೇ ಅರ್ಥದಲ್ಲಿ , ಅದನ್ನೇ ಈಗ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ನರೇಂದ್ರ ಮೋದಿ ಇಂತಹ ಹೇಳಿಕೆ ನೀಡಿದ್ದಕ್ಕೆ ಆಕ್ಷೇಪಿಸುವ ಕಾಂಗ್ರೆಸ್ ಮುಖಂಡರು ತಮ್ಮದೇ ಪಕ್ಷದ ಹಿಂದಿನ ಹಿರಿಯ ಮುಖಂಡ ರಾಜಾಜಿ ಕೂಡ ಇದೇ ರೀತಿ ಹೇಳಿದ್ದರೆಂಬುದನ್ನು ಮರೆತಿರಬಹುದು ಅಥವಾ ಸ್ವಾತಂತ್ರ್ಯ ಪ್ರಾಪ್ತಿಯಾದ ತಕ್ಷಣದ ಕಾಲಾವಧಿಯಲ್ಲಿ ಯಾರು ಏನು ಹೇಳಿದರು ಎಂಬ ಬಗ್ಗೆ ಅಜ್ಞಾನ ಅವರಲ್ಲಿ ತುಂಬಿಕೊಂಡಿರಬಹುದು!
ಸರ್ದಾರರು ದೇಶದ ಮೊದಲ ಪ್ರಧಾನಿಯಾಗಬೇಕಿತ್ತು ಎಂಬ ನರೇಂದ್ರ ಮೋದಿಯವರ ಹೇಳಿಕೆ ಕಾಂಗ್ರೆಸ್ಸಿಗರನ್ನು ಸಿಟ್ಟಿಗೆಬ್ಬಿಸಿರುವುದೇನೋ ನಿಜ. ಆದರೆ ಮೋದಿಯ ಮೇಲೆ ಇದಕ್ಕಿಂತಲೂ ಹೆಚ್ಚು ಕೆಂಡಾಮಂಡಲ ಕೋಪ ಉಂಟಾಗಲು ಇನ್ನೊಂದು ಕಾರಣವೂ ಇದೆ. ಸರ್ದಾರ್ ಪಟೇಲರ ಭವ್ಯ ಪ್ರತಿಮೆಯೊಂದನ್ನು ಗುಜರಾತ್ನ ನರ್ಮದಾ ಸರೋವರದ ಮಧ್ಯೆ ಸ್ಥಾಪಿಸುವುದಾಗಿ ಮೋದಿ ಈಚೆಗೆ ಘೋಷಿಸಿದ್ದು ಹಾಗೂ ಆ ಪ್ರತಿಮೆ ಸ್ಥಾಪನೆಗೆ ಕಳೆದ ಸೆ.೨೫ರಂದು ಶಂಕುಸ್ಥಾಪನೆ ನೆರವೇರಿಸಿದ್ದು ಕಾಂಗ್ರೆಸ್ ಮುಖಂಡರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಇದು ಅಂತಿಂಥ ಪ್ರತಿಮೆಯಲ್ಲ. ೬೦೦ ಅಡಿ (೧೮೨ ಮೀ.) ಎತ್ತರದ ಅಮೆರಿಕದ ಲಿಬರ್ಟಿ ಪ್ರತಿಮೆಗಿಂತಲೂ ಗಾತ್ರದಲ್ಲಿ ಎರಡಷ್ಟಿರುವ ಬೃಹತ್ ಪ್ರತಿಮೆ. ಪ್ರತಿಮೆ ನಿರ್ಮಾಣಕ್ಕೆ ತಗಲುವ ಅಂದಾಜು ವೆಚ್ಚ ೨,೫೦೦ ಕೋಟಿ ರೂ. (೩೦೦ ದಶಲಕ್ಷ ಡಾಲರ್). ಈ ಪ್ರತಿಮೆ ನಿರ್ಮಾಣಕ್ಕೆ ದೇಶದ ೭ ಲಕ್ಷ ಗ್ರಾಮಗಳ ರೈತರಿಂದ ಕಬ್ಬಿಣದ ಉಪಕರಣಗಳನ್ನು ಸಂಗ್ರಹಿಸಲಾಗುವುದು ಎಂದು ಮೋದಿ ಹೇಳಿದ್ದಾರೆ. ಅವೆಲ್ಲವನ್ನೂ ಕರಗಿಸಿ ಕಬ್ಬಿಣದ ಪ್ರತಿಮೆ ನಿರ್ಮಿಸುವುದು ಇದರ ಹಿಂದಿನ ಆಶಯ. ಪಟೇಲರ ಪ್ರತಿಮೆ ಸ್ಥಾಪನೆಗೆ ಹೀಗೆ ಇಡೀ ದೇಶದ ಎಲ್ಲ ರೈತರೂ ತಮ್ಮ ಯೋಗದಾನ ನೀಡಬೇಕು. ಆ ಪ್ರತಿಮೆ ದೇಶದ ಎಲ್ಲ ಜನರ ಕೊಡುಗೆಯ ಪ್ರೀತಿಯ ಪುತ್ಥಳಿಯಾಗಬೇಕು. ಯಾವುದೋ ಒಂದು ಸರ್ಕಾರ ನಿರ್ಮಿಸಿದ ಪ್ರತಿಮೆ ಅದಾಗಬಾರದು ಎಂಬ ಎಚ್ಚರ ಕೂಡ ಇದರ ಹಿಂದಿನ ಇನ್ನೊಂದು ಆಶಯ. ಸರ್ದಾರ್ ಪಟೇಲರನ್ನು ‘ಉಕ್ಕಿನ ಮನುಷ್ಯ’ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಅವರಿಗೆ ಉಕ್ಕಿನ ಪ್ರತಿಮೆಯ ನಿರ್ಮಾಣ. ‘ಜನರು ತಾಜ್ಮಹಲ್ ನೋಡಲು ಭಾರತಕ್ಕೆ ಬರುತ್ತಾರೆ. ಲಿಬರ್ಟಿ ಪ್ರತಿಮೆ ನೋಡಲು ಅಮೆರಿಕೆಗೆ ದೌಡಾಯಿಸುತ್ತಾರೆ. ಐಫೆಲ್ ಗೋಪುರ ನೋಡಲು ಫ್ರಾನ್ಸ್ಗೆ ಹೋಗುತ್ತಾರೆ. ಆದರೀಗ ಸರ್ದಾರ್ ಪಟೇಲರ ಭವ್ಯ ಪ್ರತಿಮೆ ನೋಡಲು ಜನರು ಗುಜರಾತಿಗೂ ಬರುವ ದಿನಗಳು ದೂರವಿಲ್ಲ’ ಎಂಬ ಮೋದಿ ಹೇಳಿಕೆಯಲ್ಲಿ ಉತ್ಪ್ರೇಕ್ಷೆಯಂತೂ ಇಲ್ಲ. ಏಕೆಂದರೆ ಸರ್ದಾರ್ ಪಟೇಲರ ಉzಶಿತ ಭವ್ಯ ಪ್ರತಿಮೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ದುಬೈಯಲ್ಲಿ ಜಗತ್ತಿನ ಅತೀ ಎತ್ತರದ ಬುರ್ಜ್ ಖಲೀಫಾ ಎಂಬ ದೈತ್ಯ ಕಟ್ಟಡ ನಿರ್ಮಿಸಿದ ಟರ್ನರ್ ಕನ್ಸ್ಟ್ರಕ್ಷನ್ ಎಂಬ ಕಂಪೆನಿ ಪ್ರತಿಮೆ ನಿರ್ಮಾಣಕ್ಕೆ ಸಜ್ಜಾಗಿದೆ. ಅದೂ ಅಲ್ಲದೆ ಇನ್ನು ೪ ವರ್ಷ ಮೋದಿ ಹೇಗೂ ಗುಜರಾತಿನ ಮುಖ್ಯಮಂತ್ರಿ ಆಗಿರುವುದರಿಂದ ಅಥವಾ ಒಂದು ವೇಳೆ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾದರೂ ಕೂಡ ಈ ಪ್ರತಿಮೆ ಸ್ಥಾಪನೆಗೆ ಯಾವುದೇ ಅಡ್ಡಿ ಉಂಟಾಗದು. ಒಂದು ವೇಳೆ ಮೋದಿ ಪ್ರಧಾನಿಯಾಗದಿದ್ದರೂ ಪಟೇಲರ ಪ್ರತಿಮೆ ಸ್ಥಾಪನೆಗೆ ಯಾವುದೇ ವಿಘ್ನ ಬಾರದು.
ಸರ್ದಾರ್ ಪಟೇಲರ ಭವ್ಯ ಪ್ರತಿಮೆ ನಿರ್ಮಾಣ ಸಂಗತಿ ನಿಜಕ್ಕೂ ಕಾಂಗ್ರೆಸ್ ಮುಖಂಡರಿಗೆ ಸಂತೋಷ ತರಬೇಕಿತ್ತು. ಏಕೆಂದರೆ ಇಡೀ ದೇಶದಲ್ಲಿ ಇರುವ ಪ್ರತಿಮೆಗಳು, ಮೈದಾನಗಳು, ವಿಮಾನ ನಿಲ್ದಾಣಗಳು, ಕಾಲೇಜುಗಳು, ವಿಶ್ವ ವಿದ್ಯಾಲಯಗಳು, ಕಟ್ಟಡಗಳು, ವಸ್ತು ಸಂಗ್ರಹಾಲಯಗಳು, ಕ್ರೀಡಾಂಗಣಗಳು… ಬಹುತೇಕ ಜವಾಹರ್ಲಾಲ್ ನೆಹರು ಅಥವಾ ಇಂದಿರಾ ಗಾಂಧಿ ಅಥವಾ ರಾಜೀವ್ ಗಾಂಧಿಯ ಹೆಸರುಗಳನ್ನೇ ಹೊತ್ತಿವೆ. ಮುಂದೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯ ಹೆಸರುಗಳಲ್ಲೂ ಇವೆಲ್ಲ ಸ್ಥಾಪನೆಯಾಗಬಹುದು! ಆದರೆ ಪಟೇಲ್ ಹೆಸರಿನಲ್ಲಿರುವ ಕ್ರೀಡಾಂಗಣಗಳಾಗಲಿ, ಕಟ್ಟಡ, ಕಾಲೇಜುಗಳಾಗಲಿ ತೀರಾ ವಿರಳ. ಗುಜರಾತನ್ನು ಹೊರತುಪಡಿಸಿದರೆ ಉಳಿದೆಡೆ ಸರ್ದಾರ್ ಪಟೇಲರ ಹೆಸರು ಇತಿಹಾಸದ ಪಠ್ಯಪುಸ್ತಕಗಳಿಗಷ್ಟೇ ಸೀಮಿತ. ಕಾಂಗ್ರೆಸ್ ಸಭೆ ಸಮಾರಂಭಗಳು ನಡೆದಾಗ ರಾರಾಜಿಸುವ ಫ್ಲೆಕ್ಸ್, ಬ್ಯಾನರ್ಗಳಲ್ಲಿ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗಳ ಭಾವಚಿತ್ರ ಗೋಚರಿಸುತ್ತವೆಯೇ ಹೊರತು ಪಟೇಲರ ಚಿತ್ರ ಅಪ್ಪಿತಪ್ಪಿಯೂ ಅಲ್ಲಿರುವುದಿಲ್ಲ. ಪಟೇಲರದ್ದು ಹಾಗಿರಲಿ, ದೇಶದ ೨ನೇ ಪ್ರಧಾನಿಯಾಗಿದ್ದ, ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕರೆನಿಸಿದ್ದ ಲಾಲ್ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರವೂ ಕಂಡುಬರುವುದಿಲ್ಲ. ಅಂತಹ ಮಹಾತ್ಮರಿಗೆಲ್ಲ ಕಾಂಗ್ರೆಸ್ ಮುಖಂಡರು ಎಂದೋ ತಿಲತರ್ಪಣ ಬಿಟ್ಟು ಮೂಲೆಗೆ ಸೇರಿಸಿದ್ದಾರೆ. ಮಹಾತ್ಮ ಗಾಂಧಿಯೊಬ್ಬರಿಗೆ ಮಾತ್ರ ಅನಿವಾರ್ಯವಾಗಿ ವರ್ಷಕ್ಕೊಮ್ಮೆ ಅಕ್ಟೋಬರ್ ೨ರಂದು ಕಾಟಾಚಾರಕ್ಕೆ ಗೌರವ ಸಲ್ಲಿಸಿ ಗುಣಗಾನ ಮಾಡಲಾಗುತ್ತದೆ. ಸಂಜೆಯಾದ ಬಳಿಕ ಅದೇ ದಿನ ಗಾಂಧೀಜಿ ಪ್ರತಿಪಾದಿಸಿದ ಸತ್ಯ, ಅಹಿಂಸೆ, ಮದ್ಯಪಾನ ನಿಷೇಧ ಮೊದಲಾದ ತತ್ತ್ವಗಳನ್ನು ಗಾಳಿಗೆ ತೂರಿ ಮೋಜು ಮಸ್ತಿ ನಡೆಸಲಾಗುತ್ತಿರುವ ವಿದ್ಯಮಾನಗಳು ಹೊಸತಲ್ಲ.
ಸರ್ದಾರ್ ಪಟೇಲರಂತಹ ದಿಟ್ಟ ಆಡಳಿತಗಾರನನ್ನು ಕಾಂಗ್ರೆಸ್ ಏಕೆ ಸ್ಮರಿಸಿಕೊಳ್ಳುವುದಿಲ್ಲವೋ ಕಾಂಗ್ರೆಸ್ ನಾಯಕರೇ ಹೇಳಬೇಕು. ಸದಾಕಾಲ ಸ್ಮರಿಸುವಂತಹ ಉಜ್ವಲ ವ್ಯಕ್ತಿತ್ವ ಅವರದಲ್ಲವೆ? ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅನೇಕ ಸ್ವತಂತ್ರ ದೇಶೀಯ ಸಂಸ್ಥಾನಗಳನ್ನು ಭಾರತ ಸರ್ಕಾರದಲ್ಲಿ ವಿಲೀನಗೊಳಿಸಿದ್ದು ಆಗ ಗೃಹಮಂತ್ರಿಯಾಗಿದ್ದ ಪಟೇಲರು ಎಂಬುದು ಕಾಂಗ್ರೆಸ್ನವರಿಗೆ ನೆನಪಿಲ್ಲವೆ? ೫೦೦ಕ್ಕೂ ಹೆಚ್ಚು ಸ್ವತಂತ್ರ ಸಂಸ್ಥಾನಗಳನ್ನು ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ವಿಲೀನಗೊಳಿಸುವ ಸವಾಲು ಸುಲಭzನೂ ಆಗಿರಲಿಲ್ಲ. ಆದರೆ ಗೃಹಮಂತ್ರಿಯಾಗಿ ಪಟೇಲರು ಈ ಗಂಭೀರ ಸವಾಲನ್ನು ಸ್ವೀಕರಿಸಿ ಬಗೆಹರಿಸಿದ ಪರಿ ಮಾತ್ರ ಅದ್ಭುತ ಹಾಗೂ ಅನನ್ಯ. ಉಳಿದೆಲ್ಲ ದೇಶೀಯ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿದ್ದರೂ ಪಟೇಲರಿಗೆ ತಲೆನೋವಾಗಿ ಕಂಡಿದ್ದು ಹೈದರಾಬಾದ್, ಕಾಶ್ಮೀರ ಹಾಗೂ ಜುನಾಗಢ. ಸ್ವತಂತ್ರ ಸಂಸ್ಥಾನವಾಗಿದ್ದ ಹೈದರಾಬಾದಿನ ನಿಜಾಮ ಪಾಕಿಸ್ಥಾನದ ಪರವಾಗಿದ್ದ. ಭಾರತದೊಳಗೆ ತನ್ನ ಸಂಸ್ಥಾನವನ್ನು ವಿಲೀನಗೊಳಿಸಲು ಆತನಿಗೆ ಸುತರಾಂ ಮನಸ್ಸಿರಲಿಲ್ಲ. ಪಟೇಲರ ಬುದ್ಧಿ ಮಾತುಗಳಿಗೆ ಆತ ಕ್ಯಾರೇ ಎನ್ನಲಿಲ್ಲ. ಸಂಘರ್ಷವಿಲ್ಲದೆ ಈ ವಿಲೀನ ಸಾಧ್ಯವಾಗದೆಂದು ಪಟೇಲರಿಗೆ ಅನಿಸಿದ್ದೂ ಆವಾಗಲೇ. ಪಟೇಲರು ಅನಿವಾರ್ಯವಾಗಿ ದಂಡ ಕೈಗೆತ್ತಿಕೊಳ್ಳಲೇಬೇಕಾಯಿತು. ಪೊಲೀಸ್ ಕಾರ್ಯಾಚರಣೆಯ ಮೂಲಕ ಹೈದರಾಬಾದನ್ನು ಭಾರತದ ಒಕ್ಕೂಟದೊಳಗೆ ವಿಲೀನಗೊಳಿಸಿದ್ದು ಪಟೇಲರ ದಿಟ್ಟತನಕ್ಕೆ ಒಂದು ನಿದರ್ಶನ. ದೇಶದೊಳಗೊಂದು ದೇಶ ಇರಕೂಡದು, ಬಲಿಷ್ಠ ಭಾರತಕ್ಕೆ ಇದು ಅಡ್ಡಿ ಎಂಬ ಕಹಿಸತ್ಯ ಪಟೇಲರಿಗೆ ಗೊತ್ತಿತ್ತು.
ಪಟೇಲರಿಗೆ ನಿಜಕ್ಕೂ ಬಹುದೊಡ್ಡ ಸವಾಲಾಗಿ ಕಾಡಿದ್ದು ಕಾಶ್ಮೀರ. ಕಾಶ್ಮೀರದ ಪರಿಸ್ಥಿತಿ ಹೈದರಾಬಾದ್ಗಿಂತ ಭಿನ್ನವಾಗಿತ್ತು. ಹೈದರಾಬಾದ್ನಲ್ಲಿ ರಾಜನಾಗಿದ್ದವನು ಮುಸ್ಲಿಂ (ನಿಜಾಮ). ಆದರೆ ಅಲ್ಲಿದ್ದ ಪ್ರಜೆಗಳೆಲ್ಲ ಬಹುತೇಕ ಹಿಂದುಗಳು. ಕಾಶ್ಮೀರದ ರಾಜನಾದರೋ ಹಿಂದುವಾಗಿದ್ದ ರಾಜಾ ಹರಿಸಿಂಗ್. ಆದರೆ ಶೇ.೭೭ ಮಂದಿ ಅಲ್ಲಿನ ಪ್ರಜೆಗಳು ಮಾತ್ರ ಮುಸ್ಲಿಮರಾಗಿದ್ದರು. ಇದೇ ಕಾರಣಕ್ಕೆ ಕಾಶ್ಮೀರವನ್ನು ಕಬಳಿಸಲು ಪಾಕಿಸ್ಥಾನ ಸಜ್ಜಾಗಿ ನಿಂತಿತ್ತು. ೧೯೪೭ರ ಅಕ್ಟೋಬರ್ನಲ್ಲಿ ಪಾಕಿಸ್ಥಾನ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ಮಾಡಿತು. ಕಾಶ್ಮೀರದ ರಾಜ ನಿರ್ವಾಹವಿಲ್ಲದೆ ಭಾರತದ ಒಕ್ಕೂಟಕ್ಕೆ ಸೇರಿದ. ಆಗ ಕಾಶ್ಮೀರದ ರಕ್ಷಣೆಯ ಜವಾಬ್ದಾರಿ ಭಾರತೀಯ ಸೇನೆಯದಾಗಿತ್ತು. ಜನರಲ್ ತಿಮ್ಮಯ್ಯನವರ ನೇತೃತ್ವದಲ್ಲಿ ನಮ್ಮ ಸೇನೆ ಕಾಶ್ಮೀರದ ರಕ್ಷಣೆಗೆ ಧಾವಿಸಿ ಪಾಕಿಸ್ಥಾನೀಯರನ್ನು ಹಿಂದಕ್ಕಟ್ಟಿತ್ತು. ಪಾಕಿಸ್ಥಾನ ವಶಪಡಿಸಿಕೊಂಡ ಸಂಪೂರ್ಣ ಪ್ರದೇಶವನ್ನು ಮತ್ತೆ ನಮ್ಮದನ್ನಾಗಿಸಿಕೊಳ್ಳಲು ಭಾರತೀಯ ಸೈನ್ಯಕ್ಕೆ ಖಂಡಿತ ಸಾಮರ್ಥ್ಯವಿತ್ತು. ತಿಮ್ಮಯ್ಯ ಅದೇ ಕಾರ್ಯಕ್ಕೆ ಸಜ್ಜಾಗಿ ನಿಂತಿದ್ದರು. ಆದರೆ ತಿಮ್ಮಯ್ಯನವರ ಈ ಸಾಹಸಕ್ಕೆ ಅಡ್ಡಬಂದವರು ಪ್ರಧಾನಿ ನೆಹರು! ಇದ್ದಕ್ಕಿದ್ದಂತೆ ನೆಹರು ‘ಯುದ್ಧ ವಿರಾಮ’ ಘೋಷಿಸಿದರು. ಯುದ್ಧ ವಿರಾಮದ ಘೋಷಣೆಯನ್ನು ಮಾಡುವುದು – ಸಾಮಾನ್ಯವಾಗಿ ಸೈನ್ಯ ಹೋರಾಡಲು ಅಸಮರ್ಥವಾಗಿದ್ದಾಗ ಅಥವಾ ಇನ್ನೇನಾದರೂ ಕೊರತೆ ಎದುರಿಸುತ್ತಿದ್ದಾಗ. ಆದರೆ ಅಂತಹ ಯಾವುದೇ ವಿಷಮ ಸ್ಥಿತಿ ಭಾರತದ ಪಾಲಿಗಿರಲಿಲ್ಲ. ನೆಹರು ಅವರಿಗೆ ಕಾಶ್ಮೀರದ ರಕ್ಷಣೆಗಿಂತ ಕಾಶ್ಮೀರದ ತಮ್ಮ ‘ಪರಮಾಪ್ತ ಬಂಧು’ ಶೇಖ್ ಅಬ್ದುಲ್ಲಾ ಅವರ ರಕ್ಷಣೆಯೇ ಮುಖ್ಯವಾಗಿತ್ತು. ಆ ಹೋರಾಟದಲ್ಲಿ ಅನ್ಯಾಯವಾಗಿ ಬಲಿಯಾದದ್ದು ಮಾತ್ರ ಸುಮಾರು ೧೫೦೦ ಭಾರತೀಯ ಯೋಧರು. ಜೊತೆಗೆ ಕಾಶ್ಮೀರದ ಐದನೇ ಎರಡು ಭಾಗ ಪಾಕಿಸ್ಥಾನದ ವಶವಾಗಿ ‘ಪಾಕ್ ಆಕ್ರಮಿತ ಕಾಶ್ಮೀರ’ (Pಔಏ) ಎಂಬ ಹೊಸ ಹೆಸರು ಪಡೆಯಿತು. ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸುವುದರ ಬದಲಿಗೆ ಅದನ್ನು ವಿಶ್ವಸಂಸ್ಥೆಗೆ ಒಯ್ದು , ಅದನ್ನೊಂದು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಪರಿವರ್ತಿಸಿದವರು ನೆಹರು ಅವರೇ! ಸರ್ದಾರ್ ಪಟೇಲ್ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವರಷ್ಟಕ್ಕೇ ಬಿಟ್ಟಿದ್ದರೆ, ನೆಹರು ಹಸ್ತಕ್ಷೇಪ ಮಾಡಿರದಿದ್ದರೆ ಇವತ್ತು ಕಾಶ್ಮೀರ ಸಮಸ್ಯೆ ಎಂಬುದೇ ಇರುತ್ತಿರಲಿಲ್ಲ. ಶಾರದಾದೇವಿಯ ಆವಾಸಸ್ಥಾನವಾಗಿದ್ದ ಕಾಶ್ಮೀರ ಮದ್ರಸಾ, ಮಸೀದಿಗಳ, ಮತಾಂಧರ, ಭಯೋತ್ಪಾದಕರ ತಾಣವಾಗುತ್ತಿರಲಿಲ್ಲ.
ಪಟೇಲರನ್ನು ಸ್ಮರಣೆ ಮಾಡಲೇಬೇಕಾದ ಸಂದರ್ಭದಲ್ಲೂ ಕಾಂಗ್ರೆಸ್ಸಿಗರು ಅವರನ್ನು ಸ್ಮರಿಸಲಿಲ್ಲ. ೧೯೮೯ರಲ್ಲಿ ಜವಾಹರ್ಲಾಲ್ ನೆಹರು ಅವರ ಜನ್ಮ ಶತಮಾನೋತ್ಸವವನ್ನು ದೇಶಾದ್ಯಂತ ಕಾಂಗ್ರೆಸ್ಸಿಗರು ಅದ್ಧೂರಿಯಾಗಿ ಆಚರಿಸಿದ್ದರು. ಜನ್ಮ ಶತಮಾನೋತ್ಸವದ ಅಂಗವಾಗಿ ದೂರದರ್ಶನದಲ್ಲಿ ಸರಣಿ ಧಾರಾವಾಹಿಗಳು ಪ್ರಸಾರವಾಗಿದ್ದವು. ಅಷ್ಟೊಂದು ಅದ್ಧೂರಿಯಾಗಿ ರಾಜಕೀಯ ಮುಖಂಡನೊಬ್ಬನ ಜನ್ಮ ಶತಮಾನೋತ್ಸವ ಈ ದೇಶದಲ್ಲಿ ನಡೆದ ನಿದರ್ಶನ ಬಹುಶಃ ಯಾವುದೂ ಇಲ್ಲ. ಆದರೆ ೧೯೭೫ ಅಕ್ಟೋಬರ್ ೩೧ರಂದು ಸರ್ದಾರ್ ಪಟೇಲರ ಜನ್ಮ ಶತಮಾನೋತ್ಸವ ಹೇಗೆ ನಡೆಯಿತು ಗೊತ್ತೆ? ಆಗ ದೇಶದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಸಾರಿ ಕೇವಲ ೪ ತಿಂಗಳಾಗಿತ್ತು. ಎಲ್ಲೆಲ್ಲೂ ಇಂದಿರಾ ಸರ್ವಾಧಿಕಾರಿ ವಿರೋಧಿಸಿದವರ ಬಂಧನ, ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ದಿನಗಳು ಅವು. ಅದೇನೇ ಇರಲಿ, ದೇಶದ ಏಕತೆಯನ್ನು ಬೆಸೆದು, ಅಖಂಡತೆಗೆ ಮುನ್ನುಡಿ ಬರೆದ ಸರ್ದಾರ್ ಪಟೇಲರ ಶತಮಾನೋತ್ಸವ ಆಚರಿಸಬೇಕೆಂದು ಮಾತ್ರ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅನಿಸಲೇ ಇಲ್ಲ. ಅಧಿಕೃತವಾಗಿ ಒಂದೇ ಒಂದು ಸಮಾರಂಭವೂ ನಡೆಯಲಿಲ್ಲ. ನಡೆಯುವುದಾದರೂ ಹೇಗೆ? ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಿ.ಕೆ.ಬರುವಾ ಅವರೇ ಹೇಳಿದಂತೆ ‘`India is Indira and Indira is India’ ’ ಎಂಬ ಉಧೋಉಧೋ ಮಾತೇ ಅಧಿಕಾರಸ್ಥರ ಮಂತ್ರವಾಗಿತ್ತು! ಹೀಗಿರುವಾಗ ಪಟೇಲರ ಜನ್ಮ ಶತಮಾನೋತ್ಸವ ಸಡಗರದಿಂದ ನಡೆಯಲು ಸಾಧ್ಯವೆ? ಅದಾದ ಬಳಿಕ ಆಧುನಿಕ ಭಾರತವನ್ನು ಕಟ್ಟಿದ, ‘ಭಾರತದ ಉಕ್ಕಿನ ಮನುಷ್ಯ’, ‘ಭಾರತದ ಬಿಸ್ಮಾರ್ಕ್’ ಎಂದೆಲ್ಲ ಕೀರ್ತಿಗೆ ಭಾಜನರಾಗಿದ್ದ ಸರ್ದಾರ್ ಪಟೇಲರನ್ನು ಕ್ರಮೇಣ ಸಂಪೂರ್ಣವಾಗಿ ಮರೆತು, ಅವರ ಮೇಲೊಂದು ಶಾಶ್ವತ ಕಪ್ಪು ಪರದೆ ಎಳೆಯಲಾಯಿತು.
ಆ ಕಪ್ಪು ಪರದೆಯನ್ನು ಶಾಶ್ವತವಾಗಿ ಸರಿಸಿ, ಪಟೇಲರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವ ಭವ್ಯವಾದ ಕಾರ್ಯವೊಂದನ್ನು ನರೇಂದ್ರ ಮೋದಿ ಕೈಗೆತ್ತಿಕೊಂಡಿದ್ದಾರೆ. ಜಗತ್ತಿನಲ್ಲೇ ಅತೀ ಎತ್ತರದ ಭವ್ಯವಾದ ಪಟೇಲರ ಉಕ್ಕಿನ ಪ್ರತಿಮೆಯನ್ನು ನಿರ್ಮಿಸುವ ಯೋಜನೆ ಖಂಡಿತ ಅಪರಾಧವಲ್ಲ. ಅದೊಂದು ಪಟೇಲರಿಗೆ ಈ ದೇಶದ ಜನತೆ ಸಲ್ಲಿಸಬಹುದಾದ ಬಹುದೊಡ್ಡ ಗೌರವ. ಆದರೆ ಇದಕ್ಕೇ ತಕರಾರು ತೆಗೆದಿರುವ ಕಾಂಗ್ರೆಸ್ ಮುಖಂಡರ ವೈಖರಿಗೆ ಏನೆನ್ನಬೇಕು? ನರ್ಮದಾ ಸರೋವರದ ಬಳಿ ಅಷ್ಟೊಂದು ದೊಡ್ಡ ಪ್ರತಿಮೆ ನಿರ್ಮಿಸಿದರೆ ಪರಿಸರಕ್ಕೆ ಹಾನಿಯಾಗುತ್ತದೆಂಬ ಕ್ಯಾತೆಯನ್ನು ಬೇರೆ ಕಾಂಗ್ರೆಸ್ ಬಾಲಬಡುಕ ಪರಿಸರವಾದಿಗಳು ಹುಟ್ಟು ಹಾಕಿದ್ದಾರೆ. ಮೋದಿಯವರು ಪಟೇಲರ ಪ್ರತಿಮೆ ನಿರ್ಮಿಸುವ ಮೂಲಕ ಪಟೇಲರನ್ನು ಹೈಜಾಕ್ ಮಾಡಿದ್ದಾರೆಂದು ಕೆಲವು ಕಾಂಗ್ರೆಸ್ ಮುಖಂಡರು ಅಲವತ್ತುಕೊಂಡಿದ್ದಾರೆ. ಪಟೇಲರ ಪ್ರತಿಮೆಯನ್ನು ಹಾಗಿದ್ದರೆ ಕಾಂಗ್ರೆಸ್ನವರೇ ಸ್ಥಾಪಿಸಬೇಕೆ? ಬಿಜೆಪಿಯವರು ಸ್ಥಾಪಿಸಿದರೆ ಮೈಲಿಗೆಯಾಗುತ್ತದೆಯೆ? ಅಥವಾ ಪಟೇಲರ ವ್ಯಕ್ತಿತ್ವಕ್ಕೆ ಧಕ್ಕೆಯುಂಟಾಗುತ್ತದೆಯೆ?
ಸ್ವಾಮಿ ವಿವೇಕಾನಂದರ ೧೫೦ನೇ ವರ್ಷದ ಆಚರಣೆಯನ್ನು ಸಂಘ ಪರಿವಾರ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ವ್ಯಾಪಕವಾಗಿ ಹಮ್ಮಿಕೊಂಡಿರುವುದಕ್ಕೂ ಎಡಪಂಥೀಯ ಬುದ್ಧಿಜೀವಿಗಳದ್ದು ಇದೇ ಬಗೆಯ ತಕರಾರು. ಸ್ವಾಮಿ ವಿವೇಕಾನಂದರನ್ನು ಕೇಸರಿ ಪಡೆಯಿಂದ ಬಚಾವ್ ಮಾಡಬೇಕಾಗಿದೆ ಎಂಬರ್ಥದ ಹೇಳಿಕೆಗಳನ್ನು ಅವರು ನೀಡಿದ್ದಾರೆ. ವಿವೇಕಾನಂದರು ಯಾರ ಸೊತ್ತೂ ಅಲ್ಲ. ಅವರು ದೇಶದ, ಈ ಸಮಾಜದ ಸೊತ್ತು. ಅವರ ೧೫೦ನೇ ವರ್ಷಾಚರಣೆಗೆ ಯಾವ ದೊಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಅದೇ ರೀತಿ ದೇಶದ ಏಕತೆಗೆ ಮುನ್ನುಡಿ ಬರೆದ ಸರ್ದಾರ್ ಪಟೇಲರ ಭವ್ಯ ಪ್ರತಿಮೆ ನಿರ್ಮಾಣಕ್ಕೂ ಯಾರದೇ ಅನುಮತಿಯ ಅಗತ್ಯವಿಲ್ಲ. ಪಟೇಲರ ಭವ್ಯ ಪ್ರತಿಮೆ ನಿರ್ಮಾಣವಾದರೆ ಅದರಿಂದ ದೇಶಕ್ಕೆ ಯಾವ ಹಾನಿಯೂ ಆಗದು. ಬದಲಿಗೆ ಮರೆತೇ ಬಿಟ್ಟಿದ್ದ ಮಹಾನ್ ವ್ಯಕ್ತಿಯೊಬ್ಬರನ್ನು ಇಡೀ ದೇಶ ಭವಿಷ್ಯದಲ್ಲಿ ಸದಾ ಕಾಲ ತಂಪು ಹೊತ್ತಿನಲ್ಲಿ ನೆನೆಯುವಂತೆ ಮಾಡಲು ಈ ಪ್ರತಿಮೆ ನಿರ್ಮಾಣ ಕಾರ್ಯ ಮೈಲುಗಲ್ಲಾಗಬಹುದು.
ಪಟೇಲರ ಬಗ್ಗೆ ಹಿಂದೆ ರಾಷ್ಟ್ರಪತಿಯಾಗಿದ್ದ ಡಾ.ರಾಜೇಂದ್ರ ಪ್ರಸಾದ್ ನುಡಿದ ಮಾತುಗಳನ್ನು ಖಂಡಿತ ಮರೆಯಲು ಸಾಧ್ಯವಿಲ್ಲ. ೧೯೫೯ ಮೇ ೧೩ರಂದು ರಾಜೇಂದ್ರ ಪ್ರಸಾದ್ ತಮ್ಮ ಡೈರಿಯಲ್ಲಿ ಬರೆದಿಟ್ಟ ಮಾತುಗಳಿವು: ‘`That there is today in India to think and talk about is very largely due to Sardar Patel’s statemanship and firm administration. Yet, we are apt to ignore him.’.’ ರಾಜೇಂದ್ರ ಪ್ರಸಾದ್ ಅವರೂ ಕೂಡ ಕಾಂಗ್ರೆಸ್ಸಿಗರೇ! ಇದನ್ನೆಲ್ಲ ಈಗಿನ ತರಕಲಾಂಡಿ ಕಾಂಗ್ರೆಸ್ ಮುಖಂಡರು ತಿಳಿದುಕೊಳ್ಳುವುದು ಯಾವಾಗ?
ದೇಶದ ಏಕತೆ ಬೆಸೆದು, ಅಖಂಡತೆಗೆ ಮುನ್ನುಡಿ ಬರೆದ ಸರ್ದಾರ್ ಪಟೇಲರಿಗೆ ಭವ್ಯ ಪ್ರತಿಮೆಯೊಂದನ್ನು ನಿರ್ಮಿಸಿದರೆ ಕಾಂಗ್ರೆಸ್ಸಿಗರಿಗೇಕೆ ಮೈ ಉರಿ? ಪಟೇಲರ ಪ್ರತಿಮೆ ನಿರ್ಮಿಸಲು ಯಾವ ದೊಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಏಕೆಂದರೆ ಸರ್ದಾರ್ ಪಟೇಲರು ಈ ದೇಶ ಕಂಡ ‘ಉಕ್ಕಿನ ಮನುಷ್ಯ’. ಅವರು ಈ ದೇಶದ ಆಸ್ತಿಯೇ ಹೊರತು ಕಾಂಗ್ರೆಸ್ ಪಕ್ಷದ ಆಸ್ತಿಯಲ್ಲ. ಪಟೇಲರ ಪ್ರತಿಮೆಯನ್ನು ಕಾಂಗ್ರೆಸ್ನವರೇ ನಿರ್ಮಿಸಬೇಕೆಂದೇನೂ ಇಲ್ಲ. ಅಷ್ಟಕ್ಕೂ ಕಾಂಗ್ರೆಸ್ಸಿಗರು ಇಷ್ಟು ವರ್ಷಗಳ ಬಳಿಕವೂ ಆ ಮಹಾಪುರುಷನಿಗೊಂದು ಭವ್ಯ ಪ್ರತಿಮೆ ಏಕೆ ನಿರ್ಮಿಸಲಿಲ್ಲ?