Aarushi

By Du Gu Lakshman

 

Aarushi
Aarushi

ನಿನ್ನೊಲುಮೆ ನಮಗಿರಲಿ ತಂದೆ

ಕೈ ಹಿಡಿದು ನಿ ನಡೆಸು ಮುಂದೆ

೭೦ರ ದಶಕದಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಒಂದರಲ್ಲಿ ಇಬ್ಬರು ಮಕ್ಕಳು ತಮ್ಮ ತಂದೆಯನ್ನು ಕುರಿತು ಕೈ ಮುಗಿದು ದೀನರಾಗಿ ಪ್ರಾರ್ಥಿಸುವ ಹಾಡಿದು. ಆ ಹಾಡು ಕೇಳುತ್ತಿದ್ದರೆ ಎಂತಹ ಒರಟು ಮಾನಸಿಕತೆಯ ವ್ಯಕ್ತಿಯೂ ಒಂದು ಕ್ಷಣ ಕರಗಿ ಹೋಗದೆ ಇರಲು ಸಾಧ್ಯವಿಲ್ಲ. ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಜನನಿಯೇ ಮೊದಲ ಗುರು ಎಂಬ ನಮ್ಮ ಪ್ರಾಚೀನ ನಂಬಿಕೆಯೂ ಪ್ರತಿಪಾದಿಸುವುದು ಇದೇ ಅಂಶವನ್ನು. ತಂದೆತಾಯಂದಿರ ಬೆಚ್ಚನೆಯ ಪ್ರೀತಿ, ವಿಶ್ವಾಸ, ಆತ್ಮೀಯತೆಯ ಭದ್ರ ಬುನಾದಿ ಪಡೆದ ಮಕ್ಕಳು ಮುಂದೆ ಬದುಕಿನಲ್ಲಿ ದಾರಿ ತಪ್ಪುವ ಸಂಭವ ತೀರಾ ವಿರಳ. ಆದರೆ ಅಂತಹ ಅದೃಷ್ಟ ಪಡೆಯದ ಮಕ್ಕಳು ಭವಿಷ್ಯದಲ್ಲಿ ಹಾದಿ ತಪ್ಪಿ, ಎಲ್ಲಿಂದೆಲ್ಲಿಗೋ ಹೋಗಿ, ಏನೇನೋ ಆಗಿ ತಮ್ಮ ಬದುಕನ್ನೇ ಹಾಳು ಮಾಡಿಕೊಂಡಿರುವ ನಿದರ್ಶಗಳು ನಮಗೆ ಪದೇ ಪದೇ ಸಿಗುತ್ತಲೇ ಇರುತ್ತವೆ. ಜಾಗತೀಕರಣದ ಬಿರುಗಾಳಿಗೆ ಸಿಲುಕಿ ಓಲಾಡುತ್ತಿರುವ ವರ್ತಮಾನದ ಸಾಮಾಜಿಕ ಸಂದರ್ಭದಲ್ಲಂತೂ ಪ್ರತಿನಿತ್ಯವೆಂಬಂತೆ ಇಂತಹ ನಿದರ್ಶನಗಳು ವರದಿಯಾಗುತ್ತಲೇ ಇರುತ್ತವೆ.

ವಿಶೇಷ ಸಿಬಿಐ ನ್ಯಾಯಾಲಯ ಈಚೇಗೆ ನೀಡಿದ ಆರುಶಿ-ಹೇಮರಾಜ್ ಕೊಲೆ ಪ್ರಕರಣದ ತೀರ್ಪು ಸಾಮಾಜಿಕ ಸ್ವಾಸ್ಥ್ಯದ ಕುರಿತು ಯೋಚಿಸುವ ಪ್ರತಿಯೊಬ್ಬ ಪ್ರಜ್ಞಾವಂತರ ಕಣ್ತೆರೆಸಿರುವ ವಿದ್ಯಮಾನ. ಅಮಾಯಕಳಾದ ಆರುಶಿ ಎಂಬ ಇನ್ನೂ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದ ಹದಿಹರೆಯದ ಬಾಲಕಿಯನ್ನು ಕೊಂದಿದ್ದು ಆಕೆಯ ತಂದೆತಾಯಿಯರಾದ ಡಾ.ರಾಜೇಶ್ ತಲ್ವಾರ್ ಹಾಗೂ ಡಾ.ನೂಪುರ್ ಎಂದು ನ್ಯಾಯಾಲಯ ತೀರ್ಪು ನೀಡಿದೆ. ೫ ವರ್ಷಗಳ ಹಿಂದೆ ಈ ಕೊಲೆ ಪ್ರಕರಣ ನಡೆದಾಗ ಇಡೀ ದೇಶ ಬೆಚ್ಚಿಬಿದ್ದಿತ್ತು. ಒಂದೇ ಮನೆಯಲ್ಲಿ ಎರಡು ಜೀವಗಳು ತಾವು ಮಾಡದ ಅಪರಾಧಕ್ಕಾಗಿ ಹೆಣಗಳಾಗಬೇಕಾಗಿ ಬಂದಿತ್ತು.  ಈ ಎರಡು ಕೊಲೆಗಳನ್ನು ಮಾಡಿದವರು ಯಾರು? ಹೊರಗಿನವರ ಕೈವಾಡ ಇದೆಯೇ? ಇದ್ದರೆ ಅವರಾರು? ಇತ್ಯಾದಿ ಸಂಶಯಗಳು ಸುತ್ತಮುತ್ತಲಿನ ಜನರಲ್ಲಿ ಸುಳಿದಿದ್ದವು. ಆದರೆ ಪೊಲೀಸರ ಸಂಶಯದ ಮೊನೆ ಕೊನೆಗೂ ನೆಟ್ಟಿದ್ದು ಸ್ವತಃ ಆರುಶಿಯ ತಂದೆತಾಯಿಗಳ ಮೇಲೆ. ಆದರೆ ತಂದೆತಾಯಿಯೇ ತಮ್ಮ ಮುದ್ದು ಮಗಳನ್ನು ಕೊಲೆ ಮಾಡಲು ಹೇಗೆ ಸಾಧ್ಯ? ಇನ್ನಾರದೋ ಕೈವಾಡ ಇರಲೇಬೇಕು ಎಂಬ ವಾದವೂ ಹುಟ್ಟಿಕೊಂಡಿತ್ತು. ಆರುಶಿ ಕೊಲೆಯಾಗಿದ್ದಾಳೆಂದು ಮೊದಲು ಪೊಲೀಸರಿಗೆ ದೂರು ನೀಡಿದ್ದು ಕೂಡ ಆಕೆಯ ತಂದೆ ಡಾ. ರಾಜೇಶ್ ತಲ್ವಾರ್.

ಆದರೆ ಪೊಲೀಸರು, ಸಿಬಿಐ ಮತ್ತಿತರ ಏಜೆನ್ಸಿಗಳು ಕಲೆಹಾಕಿದ ಪುರಾವೆ, ಸಾಕ್ಷ್ಯಾಧಾರ, ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶ-ಇತ್ಯಾದಿಗಳ ಮೂಲಕ ಆರುಶಿ ಕೊಲೆ ಮಾಡಿದವರು ಆಕೆಯ ತಂದೆತಾಯಿಗಳಾದ ರಾಜೇಶ್ ಹಾಗೂ ನೂಪುರ್ ಎಂಬುದು ಸಾಬೀತಾಗಿದೆ. ರಾಜೇಶ್ ಮತ್ತು ನೂಪುರ್ ಮಾತ್ರ ಇದನ್ನು ಸುತರಾಂ ಒಪ್ಪಿಕೊಂಡಿಲ್ಲ. ತಾವು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಸದ್ಯಕ್ಕಂತೂ ಅವರಿಬ್ಬರೂ ತಮ್ಮ ಅಪರಾಧ ಕೃತ್ಯಕ್ಕಾಗಿ ಜೈಲುಶಿಕ್ಷೆ ಅನುಭವಿಸಬೇಕಾಗಿದೆ.

ದೆಹಲಿ ಬಳಿ ನೋಯ್ಡಾದಲ್ಲಿ ವಾಸವಾಗಿದ್ದ ತಲ್ವಾರ್ ಕುಟುಂಬ ಉನ್ನತ ಮಧ್ಯಮವರ್ಗಕ್ಕೆ ಸೇರಿದ್ದು. ತಂದೆ ತಾಯಿ ಇಬ್ಬರೂ ಉನ್ನತ ವಿದ್ಯಾಭ್ಯಾಸ ಹೊಂದಿದ ವೈದ್ಯರು. ವೈದ್ಯರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಆರುಶಿ ಅವರ ಮುದ್ದಿನ ಏಕೈಕ ಪುತ್ರಿ. ಇರುವ ಒಬ್ಬಳೇ ಮಗಳಿಗೆ ಯಾವುದಕ್ಕೂ ಕೊರತೆ ಬಾರದಂತೆ ಅವರು ನೋಡಿಕೊಂಡಿದ್ದರು. ಪ್ರತಿಷ್ಠಿತ ಶಾಲೆಗೂ ಆಕೆಯನ್ನು ಸೇರಿಸಿದ್ದರು. ಶಾಲೆಗೆ ಹೋಗಿ ಬರಲು ಕಾರು, ಧರಿಸಲು ಬೆಳೆಬಾಳುವ ಉಡುಪುಗಳು, ಊಟಕ್ಕೆ ಸೊಗಸಾದ ಆಹಾರ, ಅದೂ ಇದೂ ಕೆಲಸಕ್ಕೆ ದಿನದ ೨೪ ಗಂಟೆಯೂ ಮನೆಯಲ್ಲೇ ಇರುವ ಒಬ್ಬ ಕೆಲಸದಾಳು. ಆತನೇ ಹೇಮರಾಜ್. ರಾಜೇಶ್ ದಂಪತಿ ತಮ್ಮ ಮಗಳ ಲಾಲನೆ-ಪಾಲನೆಗೆ ಇಷ್ಟೆಲ್ಲ ಮುತುವರ್ಜಿ ವಹಿಸಿ, ತಮ್ಮ ಕರ್ತವ್ಯ ಮುಗಿಯಿತೆಂದೇ ಭಾವಿಸಿದ್ದರು. ಆದರೇನು, ಆಕೆಗೆ ತನ್ನ ಬಾಲ್ಯಕಾಲದಲ್ಲಿ, ಬಾಲ್ಯದಿಂದ ಯೌವನಾವಸ್ಥೆಗೆ ಕಾಲಿಡುವ ಪ್ರಮುಖ ಘಟ್ಟದಲ್ಲಿ ಸಿಗಬೇಕಾದ ತಂದೆತಾಯಿಗಳ ಬೆಚ್ಚನೆಯ ಪ್ರೀತಿ, ವಿಶ್ವಾಸ, ನಂಬಿಕೆ, ಆಸರೆ ಯಾವುದೂ ದೊರಕಿರಲಿಲ್ಲ. ತನ್ನ ಭಾವನೆಗಳನ್ನು ಹಂಚಿಕೊಳ್ಳುವ ಅವಕಾಶವೇ ಅವಳಿಗೆ ಒದಗಿರಲಿಲ್ಲ. ಏಕೆಂದರೆ ತಲ್ವಾರ್ ದಂಪತಿ ತಮ್ಮ ವೃತ್ತಿಗೆಂದು ಬೆಳಿಗ್ಗೆ ಮನೆ ಬಿಟ್ಟು ಹೊರಟರೆ ಮತ್ತೆ ಅವರು ತಲುಪುತ್ತಿದ್ದುದು ರಾತ್ರಿ ವೇಳೆಗೆ. ಆ ವೇಳೆಗೆ ಶಾಲೆ ಮುಗಿಸಿ ಬಂದ ಆರುಶಿ ಮನೆಯಲ್ಲಿ ಒಂಟಿಯಾಗಿ ಕಾಲಕಳೆದು, ಯಾರದೇ ಪ್ರೀತಿ ವಿಶ್ವಾಸಗಳಿರದೆ, ತನ್ನ ಅನಿಸಿಕೆಗಳನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ಬೇಸತ್ತು ಕೊನೆಗೆ ನಿದ್ದೆಗೆ ಮೊರೆಹೋಗುತ್ತಿದ್ದಳು. ಮರುದಿನ ಬೆಳಿಗ್ಗೆಯಾದರೂ ತಂದೆತಾಯಿ ಜೊತೆ ಮಾತನಾಡೋಣವೆಂದರೆ ಆಗ ಸ್ಕೂಲ್ ಬ್ಯಾಗ್ ಹೊತ್ತು ಶಾಲೆಗೆ ಹೋಗುವ ಅವಸರ. ಇಂತಹ ಸ್ಥಿತಿಯಲ್ಲಿ ಆ ಪುಟ್ಟ ಬಾಲಕಿ ತನ್ನ ಭಾವನೆಗಳನ್ನು ಹಂಚಿಕೊಳ್ಳುವದಾದರೂ ಯಾರ ಬಳಿ? ತಂದೆ ತಾಯಿ ಬಿಟ್ಟರೆ ಮನೆಯಲ್ಲಿದ್ದದ್ದು ಸೇವಕ ಹೇಮರಾಜ್ ಮಾತ್ರ. ಆತನೇ ಆಕೆಗೆ ಅತ್ಯಂತ ಆಪ್ತನೆನಿಸಿದ್ದರಲ್ಲಿ ಆಶ್ಚರ್ಯವಾದರೂ ಏನಿದೆ?

ರಾಜೇಶ್ ದಂಪತಿ ಸದಾಕಾಲ ತಮ್ಮ ವೃತ್ತಿ ಮತ್ತಿತರ ಹೊರಗಿನ ಚಟುವಟಿಕೆಗಳಲ್ಲೇ ಮಗ್ನರಾಗಿರುತ್ತಿದ್ದರು. ಮನೆಯಲ್ಲಿ ಒಬ್ಬಳೇ ಇರುವ ತಮ್ಮ ಮಗಳು ಆರುಶಿ  ಕಡೆಗೂ ಗಮನ ಹರಿಸಬೇಕೆಂದು ಅವರಿಗೆ ಒಮ್ಮೆಯೂ ಅನಿಸದಿರುವ ಪರಿಣಾಮವಾಗಿಯೇ ಈ ದುರಂತ ಸಂಭವಿಸಿದೆ. ಮಗಳನ್ನು ಕಳೆದುಕೊಂಡು, ಜೊತೆಗೆ ಆಕೆಯ ಕೊಲೆಯ ಆರೋಪ ಹೊತ್ತು ಜೈಲಿಗೆ ತೆರಳಿರುವ ಈ ಹೊತ್ತಿನಲ್ಲಾದರೂ  ಅವರಿಗೆ ಈ ಸಂಗತಿ ವೇದ್ಯವಾಗಿರಲೇಬೇಕು. ತಮ್ಮ ಮಗಳು ತಮ್ಮ ಅನುಪಸ್ಥಿತಿಯಲ್ಲಿ ಮನೆಯಲ್ಲಿ ಹೇಗೆ ಕಾಲಕಳೆಯುತ್ತಿದ್ದಳು, ಅವಳಿಗೆ ಸಂತೋಷ ಅಥವಾ ದುಃಖವಾದಾಗ ಯಾರ ಬಳಿ ಹೇಳಿಕೊಳ್ಳುತ್ತಿದ್ದಳು… ಇತ್ಯಾದಿ ಅಂಶಗಳ ಬಗ್ಗೆ ಅವರೆಂದಾದರೂ  ಯೋಚಿಸಿದ್ದರೆ? ಮಗಳಿಗೆ ಮೌಲ್ಯಾಧಾರಿತ ಸಂಸ್ಕಾರಗಳ ಕುರಿತು ಅವರೆಂದಾದರೂ ತಿಳಿವಳಿಕೆ ನೀಡಿದ್ದರೆ? ಈ ಎಲ್ಲ ಪ್ರಶ್ನೆಗಳು ಈಗ ಜ್ವಲಂತವಾಗಿ ಎದ್ದು ನಿಂತಿವೆ. ಮಕ್ಕಳೊಂದಿಗೆ ಸಮಯ ಕಳೆಯುವುದೆಂದರೆ ಅವರ ಜೊತೆ ಟಿವಿ ನೋಡುವುದೆಂಬ ತಪ್ಪು ಕಲ್ಪನೆ ಬಹುತೇಕ ತಂದೆತಾಯಿಗಳಲ್ಲಿದೆ. ಮಕ್ಕಳ ಸೂಕ್ಮ ಭಾವನೆಗಳೊಂದಿಗೆ ಸ್ಪಂದಿಸಿ ಅವರೊಂದಿಗೆ ಬೆರೆಯಬೇಕೆಂಬ ಸಾಮಾನ್ಯ ತಿಳಿವಳಿಕೆಯೇ ಇಂದಿನ ಮಧ್ಯಮ ಹಾಗೂ ಸಿರಿವಂತರ ಕುಟುಂಬಗಳಲ್ಲಿ ಮರೆಯಾಗುತ್ತಿದೆ.

ಮಕ್ಕಳಲ್ಲಿ ಹತ್ತರಿಂದ ಹದಿನೈದು ವರ್ಷದೊಳಗಿನ ಬೆಳವಣಿಗೆ ಬಹು ಮಹತ್ವದ್ದು. ಆ ಅವಧಿಯಲ್ಲಿ ಶಾರೀರಿಕ ಬದಲಾವಣೆಯ ಜೊತೆಗೆ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಶರೀರ, ಮನಸ್ಸು ತೆರೆದುಕೊಳ್ಳುತ್ತದೆ. ರಾಜೇಶ್ ದಂಪತಿ ಸ್ವತಃ ವೈದ್ಯರಾಗಿದ್ದವರು. ಅವರಿಗೆ ಈ ಸಂಗತಿಗಳನ್ನು ಯಾರೂ ಕಲಿಸಬೇಕಾದ ಅಗತ್ಯವಿರಲಿಲ್ಲ. ಮಕ್ಕಳಿಗೆ ಅಗತ್ಯವಾಗಿರುವ ಆರ್ಥಿಕ ಸೌಲಭ್ಯ ಹಾಗೂ ಇನ್ನಿತರ ವಸ್ತುಗಳನ್ನು ಪೂರೈಸುವುದರಿಂದ ತಂದೆ ತಾಯಿಗಳ ಕರ್ತವ್ಯ ಪೂರ್ತಿಯಾಗುವುದಿಲ್ಲ. ಅನೇಕ ವಿದ್ಯಾವಂತ ಕುಟುಂಬಗಳಲ್ಲಿ ಮಕ್ಕಳು ಹಾದಿ ತಪ್ಪುತ್ತಿರುವುದು ತಂದೆತಾಯಿ ಇಂತಹ ತಪ್ಪು ನಿಲುವು ತಳೆದಿರುವುದರಿಂದಲೇ.

ಆರುಶಿ ಜೊತೆಗೆ ಕೊಲೆಯಾದ ಹೇಮರಾಜ್ ೪೫ರ ಹರೆಯದ ನೇಪಾಳಿ ಮೂಲದ ಕೆಲಸದಾಳು. ದಿನದ ೨೪ ಗಂಟೆಯೂ ಆತ ತಲ್ವಾರ್ ಮನೆಯಲ್ಲೇ ಇರುತ್ತಿದ್ದ. ಹೀಗೆ ಮನೆಯಲ್ಲೇ ಕೆಲಸದಾಳನ್ನು ಇಟ್ಟುಕೊಳ್ಳುವುದು ನಗರದ ಶ್ರೀಮಂತ ಕುಟುಂಬಗಳ ಇತ್ತೀಚಿನ ಫ್ಯಾಷನ್ ಆಗಿದೆ. ಶ್ರೀಮಂತ ಕುಟುಂಬಗಳಿಗೆ ಅದು ಅನಿವಾರ್ಯವೂ ಆಗಿರುತ್ತದೆ. ಶ್ರೀಮಂತ ಕುಟುಂಬಗಳಲ್ಲಿ ಹೀಗೆ ಕೆಲಸದಾಳಾಗಿ ದುಡಿಯುವ ಜನರಿಗೆ ಉತ್ತಮ ಸಂಬಳವೇನೂ ಸಿಗುವುದಿಲ್ಲ. ಆದರೆ ಬೇರೆಲ್ಲೂ ಉದ್ಯೋಗ ದೊರೆಯದಿರುವುದರಿಂದ ಅವರಿಗೆ ಇಂತಹ ಕೆಲಸ ಅನಿವಾರ್ಯ. ನಗರೀಕರಣ ಹೆಚ್ಚಾದಂತೆ ನಮ್ಮ ದೇಶದಲ್ಲಿ ಕೆಲಸದಾಳನ್ನು ಮನೆಯಲ್ಲೇ ಇಟ್ಟುಕೊಳ್ಳುವುದು ಒಂದು ಪ್ರತಿಷ್ಠೆಯ ಸಂಕೇತವೇ ಆಗಿದೆ. ಕೆಲಸದಾಳಿಗೆ ಮಾತ್ರ ತಮ್ಮ ಯಜಮಾನನ ಗಳಿಕೆಯ ಶೇ ೧೦ರಷ್ಟು ಸಂಬಳ ಕೂಡ ಸಿಗುವುದಿಲ್ಲ. ೨೪ ಗಂಟೆಯ ದುಡಿತವೊಂದೇ ಅವರ ಪಾಲಿನ ಭಾಗ್ಯ! ತಮ್ಮ ಯಜಮಾನ ಹಾಗೂ ಮನೆಯ ಸದಸ್ಯರ ಬದುಕಿನ ವೈಖರಿ, ಅವರ ಸುಖಭೋಗಗಳನ್ನು ಈ ಕೆಲಸದಾಳುಗಳು ಹತ್ತಿರದಿಂದ ಗಮನಿಸುತ್ತಲೇ ಇರುತ್ತಾರೆ. ಆಗ ಅವರ ಮನಸ್ಸು ಶಾಂತವಾಗಿರಲು ಸಾಧ್ಯವೇ? ಜೀವಮಾನ ಪೂರ್ತಿ ಗೆಯ್ದರೂ ತಮಗೆ ತಮ್ಮ ಯಜಮಾನ ಪಡುವ ಸುಖಸಂತಸದ ಒಂದಿನಿತು ಕೂಡ ಸಿಗದು ಎಂಬ ಹತಾಶ ಭಾವನೆ ಅವರಲ್ಲಿ ಮನೆ ಮಾಡದೆ ಇರಲು ಸಾದ್ಯವೆ?

ಆರುಶಿ ಹಾಗೂ ಆಕೆಯ ತಂದೆತಾಯಿ, ಬಂಧುಬಳಗದ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ವಿವರಗಳು ಪ್ರಕಟವಾಗಿವೆ. ಆದರೆ ಕೊಲೆಗೀಡಾದ ಸೇವಕ ಹೇಮರಾಜ್ ಬಗ್ಗೆ ಅಂತಹ ಯಾವ ವಿವರವೂ ಲಭ್ಯವಿಲ್ಲ. ಆತ ಯಾರು? ಆತನ ಕೌಟುಂಬಿಕ ಹಿನ್ನೆಲೆ ಏನು? ಆತನ ಸ್ನೇಹಿತರಾರು? ತಲ್ವಾರ್ ಮನೆಯಲ್ಲಿ ಆತನ ವರ್ತನೆ ಹೇಗಿತ್ತು? ಆ ಮನೆಗೆ ಸೇರುವ ಮುನ್ನ ಆತನ ವರ್ತನೆಗಳು ಹೇಗಿದ್ದವು? ತನ್ನ ಕುಟುಂಬದ ಸದಸ್ಯರನ್ನು ಆತ ಯಾವಾಗ ಭೇಟಿ ಮಾಡುತ್ತಿದ್ದ? ಇದಾವ ಮಾಹಿತಿಯೂ ಲಭ್ಯವಿಲ್ಲ. ಈ ಮಾಹಿತಿಗಳು ಲಭ್ಯವಾದರೆ ಮಾತ್ರ ಹೇಮರಾಜ್‌ನ ವ್ಯಕ್ತಿತ್ವ ಎಂತಹದೆಂದು ವಿಶ್ಲೇಷಿಸಬಹುದಷ್ಟೇ.

ಆರುಶಿ ಕೊಲೆ ಪ್ರಕರಣವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಗಮನಿಸಬಹುದಾದ ಸಂಗತಿ ಎಂದರೆ – ತಲ್ವಾರ್ ಹಾಗೂ ಹೇಮರಾಜ್ ಕುಟುಂಬಗಳೆರಡೂ ಕೊಲೆಯಾದ ದುರ್ದೈವಿಗಳನ್ನು ಸೂಕ್ತ ರೀತಿಯಲ್ಲಿ ಬೆಳೆಸುವಲ್ಲಿ ಹಾಗೂ ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದು. ತಲ್ವಾರ್ ದಂಪತಿ ತಮ್ಮ ದಿನನಿತ್ಯದ ಬಿಡುವಿಲ್ಲದ ಬದುಕಿನಲ್ಲೂ ಕನಿಷ್ಠ ಒಂದೆರಡು ಗಂಟೆಗಳ ಕಾಲ ಮಗಳು ಆರುಶಿಯೊಡನೆ ಆತ್ಮೀಯವಾಗಿ ಕಲೆತು, ಆಕೆಯ ಸುಖದುಃಖ, ಭಾವನೆ, ಆವೇಗ, ಉದ್ವೇಗಗಳನ್ನು ಹಂಚಿಕೊಂಡಿದ್ದರೆ, ಆತ್ಮೀಯತೆಯ ಸಿಂಚನ ಹರಿಸಿದ್ದರೆ ಆಕೆಯನ್ನು ಕೈಯಾರೆ ತಾವಾಗಿಯೇ ಕೊಲ್ಲುವ ಪ್ರಮೇಯ ಬರುತ್ತಿರಲಿಲ್ಲ. ಅದೇ ರೀತಿ ಹೇಮರಾಜ್ ಕುಟುಂಬ ವರ್ಗ ಆತನ ಇತಿಮಿತಿಯನ್ನು ನೆನಪಿಸಿದ್ದರೆ, ಮನೆಯ ಸೇವಕನಾಗಿ ಹೇಗಿರಬೇಕೆಂದು ಸೂಕ್ತ ತಿಳಿವಳಿಕೆ ನೀಡಿದ್ದರೆ ಆತನೂ ಕೊಲೆಗೀಡಾಗಬೇಕಾದ ಸಂದರ್ಭ ಬರುತ್ತಿರಲಿಲ್ಲ. ಹೇಮರಾಜ್ ತನ್ನ ಸೇವಕನ ಕಾಯಕ ನಿರ್ವಹಿಸುವಲ್ಲಿ ಎಡವಿದನೆ? ಆರುಶಿ ತಂದೆತಾಯಿಗಳ ಪ್ರೀತಿಯಿಂದ ವಂಚಿತಳಾಗಿ ಇನ್ನಾರಲ್ಲೋ ಆ ಪ್ರೀತಿಯನ್ನು ಕಂಡುಕೊಳ್ಳಲು ಬಯಸಿದಳೆ? ಈ ಎರಡೂ ಪ್ರಶ್ನೆಗಳಿಗೆ ಈಗ ಉತ್ತರ ಖಂಡಿತ ಸಿಗುವುದಿಲ್ಲ. ಏಕೆಂದರೆ ಉತ್ತರ ಹೇಳಬೇಕಾದ ಆರುಶಿ ಹಾಗೂ ಹೇಮರಾಜ್ ಇಬ್ಬರೂ ಈಗ ಜೀವಂತವಾಗಿಲ್ಲ.

ಕೌಟುಂಬಿಕ ವಿವಾದಕ್ಕೆ ಸಿಲುಕಿದ ಇನ್ನೊಂದು ಘಟನೆಯೂ ಹೃದಯ ಮಿಡಿಯುವಂತಹದು. ತನ್ನ ಗಂಡನನ್ನು ಕೊಂದ ಆರೋಪ ಹೊತ್ತು ಜೈಲು ಸೇರಿ, ೧೩ ವರ್ಷಗಳ ನಂತರ ಈಗ ಬಿಡುಗಡೆಯಾಗಿರುವ ಕೊಲ್ಕತ್ತಾದ ಅಪರಾಜಿತ ಬಸು ಅಕ ಮೂನ್‌ಮೂನ್ ಬದುಕಿನ ಘಟನೆ ಇನ್ನಷ್ಟು ದಾರುಣವಾದದ್ದು. ಕೊಲೆ ಆರೋಪ ಹೊತ್ತು ೨೦೦೦ನೇ ಇಸವಿಯಲ್ಲಿ ಆಕೆ ಜೈಲು ಸೇರಿದಾಗ ಅವಳ ಇಬ್ಬರು ಪುಟ್ಟ ಪುಟ್ಟ ಗಂಡು ಮಕ್ಕಳ ವಯಸ್ಸು ಕ್ರಮವಾಗಿ ಮೂರೂವರೆ ಹಾಗೂ ಐದು ವರ್ಷ. ಮಕ್ಕಳಿಗೆ ಲಾಲಿ ಹಾಡಿ, ಪ್ರೀತಿ ಮಾಡಿ ಬೆಳೆಸಬೇಕಾದ ಸಂದರ್ಭದಲ್ಲೇ ಆಕೆ ಜೈಲು ಸೇರಬೇಕಾಗಿತ್ತು. ಈಗಾದರೊ ಅವರು ದೊಡ್ಡವರಾಗಿದ್ದಾರೆ. ಅಪರಾಜಿತ ಬಸುಗೆ ತನ್ನ ಮಕ್ಕಳೊಂದಿಗೆ ಮತ್ತೆ ಒಟ್ಟಿಗೆ ಇರಬೇಕೆಂಬ ಬಯಕೆ ಕೆರಳಿದೆ. ಆದರೆ ಆ ಮಕ್ಕಳಿಗೆ ತಮ್ಮ ತಾಯಿಯ ಜೊತೆಗೆ ಇರಲು ಸುತರಾಂ ಇಷ್ಟವಿಲ್ಲ. ’ಶಾಲೆಗೆ ಹೋಗುವಾಗ ಸ್ಕೂಲ್ ಬಸ್ಸಿನ ಕಿಟಕಿಯಿಂದ ಬೇರೆ ತಾಯಂದಿರು ತಮ್ಮ ಮಕ್ಕಳನ್ನು ಬಸ್ಸಿನವರೆಗೆ ಬಂದು ಬೀಳ್ಕೊಡುವ ದೃಶ್ಯ ನಮ್ಮ ಕರುಳು ಹಿಂಡುತ್ತಿತ್ತು. ಏಕೆಂದರೆ ಅಂತಹ ಭಾಗ್ಯ ನಮಗೆ ಒಂದೂ ದಿನವೂ ದೊರಕಿಲ್ಲ. ಶಾಲೆಯಿಂದ ಬಂದ ಬಳಿಕ ನಮ್ಮನ್ನು ಪ್ರೀತಿಯಿಂದ ತಬ್ಬಿ ಮಾತನಾಡಿಸುವವರೇ ಇಲ್ಲ. ನಮ್ಮ ತಂದೆತಾಯಿ ನಮ್ಮಿಬ್ಬರನ್ನೂ ಅನಾಥರನ್ನಾಗಿಸಿ ದೂರ ಹೋಗಿದ್ದಾರೆ. ಬಾಲ್ಯದಲ್ಲೆ ನಮಗೆ ಸಾಥ್ ನೀಡಬೇಕಾಗಿದ್ದ ತಾಯಿ ಈಗ ಏಕೆ? ನಮ್ಮ ತಾಯಿ ಯಾರು ಎಂಬುದೂ ನಮಗೆ ಬೇಕಿಲ್ಲ’ ಎಂದು ಆಕೆಯ ೧೮ ವರ್ಷದ ಮಗ ಈಗ ಕಡ್ಡಿ ಮುರಿದಂತೆ ಹೇಳಿದಾಗ ಆ ತಾಯಿಗೆ ಅದೆಷ್ಟು ದುಃಖವಾಗಿದ್ದಿರಬಹುದು? ನೀವೇ ಊಹಿಸಿ.

ಅಪರಾಜಿತ ಬಸು ತನ್ನ ಗಂಡನ ಕೊಲೆಯಲ್ಲಿ ಶಾಮಿಲಾಗಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಈಗ ಅವಳು ಕಳಂಕಿತಳಲ್ಲ. ಆದರೇನು, ಆಕೆಯ ಇಬ್ಬರು ಮಕ್ಕಳಿಗೆ ಇದು ತಿಳಿಯುವುದಾದರೂ ಹೇಗೆ? ’ನನ್ನ ಅತ್ತೆ ನನ್ನ ಮಕ್ಕಳ ಮನದಲ್ಲಿ ನನ್ನ ವಿರುದ್ಧ ದ್ವೇಷದ ಬೀಜ ಬಿತ್ತಿದ್ದಾರೆ. ಮಕ್ಕಳನ್ನು ಮತ್ತೆ ನಾನು ಒಲಿಸಿಕೊಳ್ಳುವುದು ಕಡು ಕಷ್ಟ’ ಎಂದು ಅಪರಾಜಿತ ದುಃಖದಿಂದ ಹೇಳುತ್ತಾರೆ. ಇಂತಹ ಘಟನೆಗಳು ಇನ್ನೆಷ್ಟೋ…

ಅಮೆರಿಕ, ಇಂಗ್ಲೆಂಡ್ ಮೊದಲಾದ ಪಾಶ್ಚಾತ್ಯ ದೇಶಗಳಲ್ಲಿ ಕುಟುಂಬ ವ್ಯವಸ್ಥೆ ಛಿದ್ರವಾಗಿ ಹೋಗಿ ಅಲ್ಲಿನ ಸಾಮಾಜಿಕ ಸ್ವಾಸ್ಥ್ಯ ತೀರಾ ಹದಗೆಟ್ಟಿರುವುದನ್ನು ಆಗಾಗ ನಾವು ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಆದರೆ ಈ ಪಿಡುಗು ಈಗ ಭಾರತಕ್ಕೂ ಕಾಲಿಟ್ಟಿದೆ. ಭಾರತೀಯ ಕುಟುಂಬಗಳಲ್ಲೂ ಬಿರುಕು ಕಾಣಿಸತೊಡಗಿದೆ. ಗಂಡ ಹೆಂಡತಿಯನ್ನು ನಂಬುತ್ತಿಲ್ಲ. ಹೆಂಡತಿಗೆ ಹೊರಗೆ ದುಡಿಯುವ ಗಂಡನ ಮೇಲೆ ಸಂಶಯ. ಶಾಲೆಗೆ ಹೋಗುವ ಮಗಳನ್ನು ತಾಯಿ ನಂಬದ ಸ್ಥಿತಿ. ತನ್ನ ಮಗ ಊರ ಉಡಾಳರ ಜೊತೆ ಸೇರಿ ಎಲ್ಲಿ ಹಾಳಾಗಿ ಹೋಗುವನೋ ಎಂಬ ಆತಂಕ ತಂದೆತಾಯಿಗೆ. ತಂದೆತಾಯಿ ಪಾರ್ಟಿ, ಕ್ಲಬ್‌ಗಳೆಂದು ತಿರುಗುತ್ತಾ ತಮ್ಮನ್ನು ಕಡೆಗಣಿಸಿದ್ದಾರೆಂಬ ಹತಾಶೆ ಮಕ್ಕಳಿಗೆ. ಮನೆಯ ಹಿರಿಯರನ್ನು ಕಾಲಕಸಕ್ಕಿಂತ ಕೀಳಾಗಿ ಕಾಣುವ ವಿಪರೀತ ಸ್ಥಿತಿ… ಹೀಗೆ ಪರಸ್ಪರ ಪ್ರೀತಿ ವಿಶ್ವಾಸಗಳ ಹಂದರದ ಮೇಲೆ ನೆಮ್ಮದಿ ನೆಲೆಸಿರಬೇಕಾಗಿದ್ದ ಕುಟುಂಬಗಳಲ್ಲಿ ಸರಿಪಡಿಸಲಾಗದಷ್ಟು ವೈರುಧ್ಯ, ವಿಪರ್ಯಾಸಗಳು. ಇದಕ್ಕೆ ಪರಿಹಾರವೇನು? ಮೊದಲಿನಂತೆ ಕುಟುಂಬದಲ್ಲಿ ಸಹಜೀವನ, ನೆಮ್ಮದಿ, ಶಾಂತಿ ಸುವ್ಯವಸ್ಥೆಗಳನ್ನು ತರುವುದು ಹೇಗೆ? ಇವೆಲ್ಲ ಸಾಮಾಜಿಕ ಚಿಂತಕರು ಹಾಗೂ ಸಮಾಜ ಸುಧಾರಕರನ್ನು ತೀವ್ರ ಚಿಂತೆಗೀಡುಮಾಡಿರುವ ಪ್ರಶ್ನೆಗಳು.

ಆರುಶಿ ಕೊಲೆ ಪ್ರಕರಣ ಭಾರತೀಯ ಕುಟುಂಬ ವ್ಯವಸ್ಥೆಗೆ ಕೊಟ್ಟಿರುವ ಪೆಟ್ಟು ಸಾಮಾನ್ಯವಾದದ್ದೇನಲ್ಲ. ಅದೊಂದು, ಭಾರತೀಯ ಕುಟುಂಬ ಹೇಗಿರಬಾರದು ಎನ್ನುವುದಕ್ಕೆ ಕೆಟ್ಟ ನಿದರ್ಶನ. ಸಾಮಾಜಿಕ ಪ್ರತಿಷ್ಠೆಗೆ ಆರುಶಿ ಎಂಬ ಅಮಾಯಕ ಬಾಲಕಿ ಬಲಿಯಾಗಿರುವುದನ್ನು ಯಾರೂ ಮರೆಯುವಂತಿಲ್ಲ. ಭಾರತೀಯ ಸಮಾಜ ಆರೋಗ್ಯ ಪೂರ್ಣವಾಗಿರಬೇಕಾದರೆ ಇಲ್ಲಿನ ಕುಟುಂಬ ವ್ಯವಸ್ಥೆ ಕೂಡ ಅದೇ ರೀತಿ ಆರೋಗ್ಯಕರವಾಗಿರಬೇಕಾಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಿತಿಗೆ ಆರೋಗ್ಯಪೂರ್ಣ ಕುಟುಂಬಗಳೇ ಭದ್ರ ಆಧಾರ. ಆರೋಗ್ಯ ಪೂರ್ಣ ಕುಟುಂಬಗಳ ನಿರ್ಮಾಣಕ್ಕೆ ಸತ್ಸಂಸ್ಕಾರಗಳೇ ಮೂಲದ್ರವ್ಯ. ಇದನ್ನು ಮನಗಂಡೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಕುಟುಂಬಗಳಲ್ಲಿ ಪ್ರೀತಿ, ವಿಶ್ವಾಸ, ನೆಮ್ಮದಿ, ಪರಸ್ಪರ ನಂಬಿಕೆ ನೆಲೆಸುವಂತೆ ಮಾಡಲು ’ಕುಟುಂಬ ಪ್ರಬೋಧನ’ ಎಂಬ ನೂತನ ಪ್ರಕಲ್ಪವನ್ನು ಆರಂಭಿಸಿದೆ. ಸಂಘ ಆರಂಭಿಸಿರುವ ಈ ನೂತನ ಪ್ರಕಲ್ಪ ಭಾರತೀಯ ಕುಟುಂಬ ವ್ಯವಸ್ಥೆಯನ್ನು ಭದ್ರವಾಗಿ ಪೋಷಿಸುವಲ್ಲಿ ಒಂದು ಆಶಾಕಿರಣ.

Leave a Reply

Your email address will not be published.

This site uses Akismet to reduce spam. Learn how your comment data is processed.