ಮಂಗಳೂರು: ಮಹಿಳಾ ಸುರಕ್ಷತೆಯ ಕತ್ತಲು, ಭ್ರಷ್ಟಾಚಾರಯುಕ್ತ ಆರ್ಥಿಕ ಅಸಮಾನತೆ, ಆಂತರಿಕ ಹಾಗೂ ಬಾಹ್ಯ ಗಡಿಸಮಸ್ಯೆ ದೇಶದ ಮುಂದಿರುವ ಸವಾಲುಗಳಾಗಿವೆ. ಈ ನಿಟ್ಟಿನಲ್ಲಿ ದೇಶದ ಭವಿಷ್ಯಕ್ಕಾಗಿ ಯುವಸಮೂಹ ವಿವೇಕಾನಂದರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದು ಎಬಿವಿಪಿಯ ರಾಜ್ಯಾಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಕರೆ ನೀಡಿದ್ದಾರೆ.
ಅವರು ಮಂಗಳವಾರ Jan 07, ನಗರದ ಪುರಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವತಿಯಿಂದ ಸ್ವಾಮೀ ವಿವೇಕಾನಂದರ 150ನೇ ವರ್ಷಾಚರಣೆಯ ಸಮಾರೋಪದ ನಿಮಿತ್ತ ಆಯೋಜಿಸಿದ್ದ ವಿವೇಕೋತ್ಸವ-2014 ರಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಬಡತನ, ಅಜ್ಞಾನದ ವಿಸ್ಮೃತಿ, ದೌರ್ಜನ್ಯದಿಂದ ತತ್ತರಿಸುತ್ತಿದ್ದ ದೇಶದಲ್ಲಿ ಉಪನಿಷತ್ತುಗಳ ಪ್ರಭಾವ ಮನಗಂಡು ನಮ್ಮನ್ನೆಲ್ಲಾ ಬಡಿದೆಬ್ಬಿಸಿದ ವಿವೇಕಾನಂದರಿಂದ ನಾವು ಧೈರ್ಯವಾಗಿ ಕುಳಿತಿದ್ದೇವೆ. ಅಭಾವಿಪ ವಿವೇಕಾನಂದರ ಆದರ್ಶಗಳನ್ನು ಪಾಲಿಸುತ್ತಾ, ಯುವ ಸಮೂಹಕ್ಕೆ ನೂತನ ರೂಪ ನೀಡಲು ವಿವೇಕೋತ್ಸವ ಆಯೋಜಿಸಿದ್ದರೂ, ಸ್ವಾರ್ಥಪರವಾದ ವರ್ತಮಾನದ ಕತ್ತಲಲ್ಲಿ ಆಚರಿಸುತ್ತಿದ್ದೇವೆಯೋ? ಎನ್ನುವ ಭಾವನೆ ಮೂಡುತ್ತಿದೆ ಎಂದು ವಿಷಾದಿಸಿದರು.
ಮಂಗಳಾಂಬಿಕೆಯ ತವರಿನಲ್ಲಿ ಇತ್ತೀಚಿಗೆ ದೇರಳಕಟ್ಟೆಯ ಘಟನೆಯಿಂದ ಮಹಿಳೆಯರು ಸುರಕ್ಷಿತವಾಗಿಲ್ಲ. ಮಾತೃಸ್ಥಾನದಲ್ಲಿರುವ ಹೆಣ್ಣಿಗೆ ಸ್ಥಾನಮಾನ ಸಿಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಮಹಿಳೆಯರು, ಜನಸಾಮಾನ್ಯರ ಕಡೆಗಣನೆಯಿಂದ ದೇಶ ಪತನವಾಗುತ್ತದೆ ಎನ್ನುವುದನ್ನು ಬಲವಾಗಿ ನಂಬಿದ್ದ ವಿವೇಕಾನಂದರು ದೇಶದ ಉನ್ನತಿಗೆ ಶ್ರಮಿಸಿದ್ದರು. ಸ್ವಾಭಿಮಾನದಿಂದ ಹೆಣ್ಣಿನಲ್ಲಿ ಜಗನ್ಮಾತೆಯನ್ನು ಕಾಣುವ ಪುರುಷರು ಜನಿಸಿದಾಗ ದೇಶದಲ್ಲಿ ಮಹಿಳೆಗೆ ಸ್ಥಾನಮಾನ ದೊರೆಯುತ್ತದೆ. ಹೆಣ್ಣನ್ನು ಬೋಗದ ವಸ್ತುವಾಗಿ, ಜಾಹೀರಾತು ಸರಕಾಗಿ ಉಪಯೋಗಿಸುವುದನ್ನು ನೋಡಿಯೂ, ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಯ ಕುರಿತು ಆವೇಶ ಬರದಿದ್ದರೆ ಹೆಣ್ಣು ಮಕ್ಕಳ ಸ್ಥಿತಿ ಬಿಗಡಾಯಿಸುತ್ತದೆ ಎಂದ ಅವರು ದೇಶ, ಮನೆಯಲ್ಲಿ ಬದಲಾವಣೆ ತರುವ ಸಂಕಲ್ಪ ತೊಡಬೇಕು. ಮಹಿಳೆಯರ ಸುರಕ್ಷತೆಯೇ ದೇಶದ, ಪರಿಸರದ ಸಂರಕ್ಷಣೆಯಾಗಿದೆ ಎಂದರು.
ಗುಡಿಸಲುಗಳ ಉದ್ಧಾರವಾಗದೆ ದೇಶ ಉದ್ದಾರ ಸಾಧ್ಯವಿಲ್ಲ ಎಂದ ನಾಡಿನಲ್ಲಿ ಕಮ್ಯೂನಿಸ್ಟರು, ವಿಚಾರವಾದಿಗಳು ವರ್ಗ ಸಂಘರ್ಷವನ್ನು ಹುಟ್ಟು ಹಾಕುತ್ತಿದ್ದಾರೆ. ಜಗತ್ತಿನ ಜನರಿಗೆ ಶಾಂತಿ, ಸಮೃದ್ಧಿ, ಶ್ರೇಯಸ್ಸು, ಸಂಸ್ಕೃತಿಯ ಸಂರಕ್ಷಣೆಯನ್ನು ಸಾರಿದ ದೇಶದಲ್ಲಿ ಸ್ವಾರ್ಥತೆಯ ಅನಾಚಾರಗಳು ಹೆಚ್ಚುತ್ತಿವೆ ಎಂದ ಅವರು ಜಗತ್ತಿನಲ್ಲಿಯೇ ಹಣದ ಒಳಹರಿವಿನಲ್ಲಿ ಭಾರತ ಪ್ರಥಮ ಸ್ಥಾನ ಅಲಂಕರಿಸಿದ್ದರೂ, ಯಾರ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ ಎನ್ನುವ ಸಂಶಯ ಕಾಡುತ್ತಿದೆ. ಗುಡಿಸಲು ಮುಕ್ತ ಭಾರತ ಕಾಣಬೇಕೆಂದು ಬಯಸಿದ ವಿವೇಕಾನಂದರ ತತ್ವಗಳು, ಭ್ರಷ್ಟಾಚಾರದ ಸೋಗಿನಲ್ಲಿ ಮಸುಕಾಗುತ್ತಿವೆ ಎಂದರು. ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ವ್ಯಕ್ತಪಡಿಸಿ, ಸಾಧನೆಗೈದಿದ್ದರೂ, ಹಣದ ಮೋಹದಿಂದ ಕುಟುಂಬದ ಬಂಧುಗಳಲ್ಲಿ ಪ್ರೀತಿ ನಾಶವಾಗುತ್ತಿದೆ ಎಂದ ಅವರು ಆರ್ಥಿಕ ಶಕ್ತಿ ಸಾಂಸ್ಕೃತಿಕ ಶಕ್ತಿಯ ದೀಪವಾಗಬೇಕೆ ಹೊರತು ಮೃತ್ಯುವಾಗಬಾರದು. ಆರ್ಥಿಕತೆಯ ಸುರಕ್ಷೆಯಿಲ್ಲದೇ, ಭ್ರಷ್ಟಾಚಾರದ ಕತ್ತಲಿನಲ್ಲಿ ವಿವೇಕಾನಂದರ ತತ್ವಗಳು ಮಸುಕಾಗಿ ಗೋಚರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಸುಪ್ರೀಂ ಕೋರ್ಟ್ ಬಾಂಗ್ಲಾ ವಲಸಿಗರು ದೇಶ ಪ್ರವೇಶಿಸಿರುವುದು ದೇಶದ ಸಾಂಸ್ಕೃತಿಕತೆಯ ಮೇಲಾದ ಆಕ್ರಮಣವೆಂದು ಸಾರಿತ್ತು. ಅಂತಹ ನುಸುಳುಕೋರರು ದೇಶದ ಸಂಸ್ಕೃತಿಯನ್ನು ಬುಡಮೇಲು ಮಾಡುವುದರೊಂದಿಗೆ ದೇಶದ ಸುರಕ್ಷತೆಗೆ ಮಾರಕವಾಗುತ್ತಿದ್ದಾರೆ. ರಕ್ತಕ್ರಾಂತಿಯನ್ನು ಬಯಸುವ ನಕ್ಸಲ್‌ರು ಪಶ್ಚಿಮ ಘಟ್ಟದಲ್ಲಿ ರೆಡ್ ಕಾರ್ಪೆಟ್ ಮೂಲಕ ಕಾರ್ಯಾಚರಣೆ ಗೈಯುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ರಕ್ತಕ್ರಾಂತಿ ಬಯಸದೆ, ಉತ್ಥಾನದ ಕ್ರಾಂತಿ ಬಯಸಿದ್ದರು. ಪ್ರಸಕ್ತ ಮಂಗಳೂರಿನ ಸ್ಥಿತಿ ಬದಲಾಗಿದ್ದು, ಪ್ರತಿಯೊಂದು ಸ್ಥಳದಲ್ಲಿಯೂ ಬಾಂಬ್ ನಿಯಂತ್ರಕಗಳನ್ನಿಡುವ ಪರಿಸ್ಥಿತಿಯಿದೆ. ದೇಶದ ಪರಿಸ್ಥಿತಿಯನ್ನು ನಿಭಾಯಿಸಲು ಯುವ ಸಮೂಹ ವಿವೇಕಾನಂದರ ತತ್ವ-ಆದರ್ಶಗಳನ್ನು ಪಾಲಿಸುವುದರೊಂದಿಗೆ ಉತ್ತಮ ದೇಶಭಕ್ತರಾಗಬೇಕು.
ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಗಣೇಶ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆತ್ಮವಿಶ್ವಾಸ, ಸ್ವಾಭಿಮಾನ, ತಿಳುವಳಿಕೆಯಿಂದ ದೇಶದ ಕುರಿತಾಗಿ ಪ್ರೀತಿಯನ್ನು ಬೆಳೆಸಿಕೊಂಡು, ನಮ್ಮ ಕರ್ತವ್ಯ-ಹಕ್ಕನ್ನು ಪಡೆಯಲು ಹೋರಾಟ ನಡೆಸಬೇಕು. ಜಾಗತೀಕರಣದ ಓಡಾಟದಲ್ಲಿ ಸ್ವಾರ್ಥ ಮನೋಭಾವನೆ ಹೆಚ್ಚಾಗುತ್ತಿದ್ದು, ಒಂದೆಡೆ ಹಿರಿಯರು ಎಡವಿದ್ದೇವೆ ಎನ್ನುವ ಸಂಶಯ ಮೂಡುತ್ತಿದೆ ಎಂದ ಅವರು ದೇಶದ ಭವಿಷ್ಯಕ್ಕೆ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಂಡ ವಾಜಪೇಯಿ, ಅಬ್ದುಲ್ ಕಲಾಂರಂತಹ ರಾಷ್ಟ್ರಭಕ್ತರ ನಾಯಕತ್ವದ ಅಗತ್ಯವಿದೆ. ಈ ನಿಟ್ಟಿನಲ್ಲಿ ಉತ್ತಮ ದೇಶಭಕ್ತರನ್ನು ಆರಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ಉದ್ದೇಶ ಪೂರೈಸುವ ಆತ್ಮಶಕ್ತಿ, ಆದರ್ಶಗಳ ಪಾಲನೆಯಿಂದ ಸಮಾಜದಲ್ಲಿ ಉನ್ನತ ಸ್ಥಾನ ತಲುಪಬಹುದು. ವಿವೇಕಾನಂದರು ತತ್ವ-ಬದ್ಧತೆ, ಭೋದನೆಗಳಿಂದ ದೇಶಕ್ಕೆ ಕೀರ್ತಿ ತಂದಿದ್ದು, ಅವರ ಭೋದನೆಯನ್ನು ಸರ್ವಾಂಗೀಣ ಬೆಳವಣಿಗೆಗೆ ಬಳಸಿಕೊಂಡು ಸ್ವಾಭಿಮಾನಿ ಬದುಕು ನಿರ್ವಹಣೆ ಮಾಡಬೇಕು ಎಂದರು.
ಸಾವಿರಾರು ವಿದ್ಯಾರ್ಥಿಗಳು ಜ್ಯೋತಿವೃತ್ತದಿಂದ ವಿವಿಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಬಂದು ಪುರಭವನದ ಕಾರ್ಯಕ್ರಮದಲ್ಲಿ ಭಾಗಿಯಾದರು.
ಎಬಿವಿಪಿಯ ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಪ್ರಸ್ತಾವಿಸಿದರು. ನಗರ ಅಧ್ಯಕ್ಷ ಬಾಲಕೃಷ್ಣ ಸ್ವಾಗತಿಸಿದರು. ವಿಶಾಲಾಕ್ಷಿ ನಿರ್ವಹಿಸಿ, ನಗರ ಕಾರ್ಯದರ್ಶಿ ಚೇತನ್ ಪಡೀಲ್ ವಂದಿಸಿದರು.