by Du Gu Lakshman
2008ರ ಮಾಲೆಗಾಂವ್ ಬಾಂಬ್ಸ್ಫೋಟ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿ ಈಗಲೂ ಜೈಲಿನಲ್ಲಿರುವ ಸಾಧ್ವಿ ಪ್ರಜ್ಞಾಸಿಂಗ್ ಠಾಕುರ್ ಎಂಬ ಮಹಿಳೆಯ ಹೃದಯ ಕರಗುವ ಕಥೆ ನಿಮಗಿನ್ನೂ ನೆನಪಿರಬಹುದಲ್ಲವೆ?
ಮಾಲೆಗಾಂವ್ ಸ್ಫೋಟ ಪ್ರಕರಣ, ಅನಂತರ ಸುನೀಲ್ ಜೋಶಿ ಎಂಬ ಆರೆಸ್ಸೆಸ್ ಕಾರ್ಯಕರ್ತನ ಹತ್ಯಾಪ್ರಕರಣದ ಹಿನ್ನೆಲೆಯಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದರು. ಇವೆರಡೂ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ವೇ ವಹಿಸಿಕೊಂಡಿತ್ತು. ಈ ಪ್ರಕರಣಗಳಲ್ಲಿ ಆಕೆಯನ್ನು ಹೇಗಾದರೂ ಮಾಡಿ ಸಿಲುಕಿಸಬೇಕೆಂಬುದು ಕೇಂದ್ರ ಸರ್ಕಾರದ ಹುನ್ನಾರವಾಗಿತ್ತು. ಎನ್ಐಎ ಕೂಡ ಯುಪಿಎ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿದಿತ್ತು. ಕಳೆದ ೫ ವರ್ಷಗಳಲ್ಲಿ ಸಾಧ್ವಿಗೆ ಜೈಲಿನಲ್ಲಿ ನೀಡಿದ ಹಿಂಸೆ ಅಷ್ಟಿಷ್ಟಲ್ಲ. ಆಕೆ ಒಬ್ಬ ಮಹಿಳೆಯೆಂದು ಗೊತ್ತಿದ್ದರೂ ಮಹಿಳಾ ಆರೋಪಿಗೆ ತಕ್ಕಂತೆ ಆಕೆಯನ್ನು ಜೈಲು ಸಿಬ್ಬಂದಿ ಮಾನವೀಯವಾಗಿ ನಡೆಸಿಕೊಂಡಿರಲಿಲ್ಲ. ಪೊಲೀಸರ ತೀವ್ರ ಶಾರೀರಿಕ, ಮಾನಸಿಕ ಹಿಂಸಾಚಾರಗಳು ಸಾಧ್ವಿಯನ್ನು ಜರ್ಜರಿತಳನ್ನಾಗಿ ಮಾಡಿದೆ. ೨೦೦೮ರಲ್ಲಿ ಬಂಧನಕ್ಕೆ ಮುನ್ನ ಉತ್ಸಾಹದ ಬುಗ್ಗೆಯಂತಿದ್ದ , ಆರೋಗ್ಯವಂತ ಸಾಧ್ವಿ ಪ್ರಜ್ಞಾಸಿಂಗ್ ಈಗ ನಡೆಯಲಾರರು. ಗಾಲಿ ಕುರ್ಚಿಯಲ್ಲೇ ಓಡಾಟ. ಜೊತೆಗೆ ಕ್ಯಾನ್ಸರ್ ರೋಗ ಬೇರೆ ಕಾಡುತ್ತಿದೆ. ಸ್ತನ ಕ್ಯಾನ್ಸರ್ಗಾಗಿ ಚಿಕಿತ್ಸೆಯೂ ನಡೆದಿದೆ. ತನ್ನ ಪಾಡಿಗೆ ತಾನು ಕುಳಿತುಕೊಳ್ಳಲಾಗುತ್ತಿಲ್ಲ. ಇನ್ನು ನಿಂತು ಓಡಾಡುವ, ನಡೆಯುವ ಮಾತಂತೂ ದೂರವೇ. ನ್ಯಾಯಾಲಯ ಆಕೆಗೆ ಚಿಕಿತ್ಸೆ ನೀಡಬೇಕೆಂದು ಆದೇಶಿಸಿದ್ದರೂ ಎಟಿಎಸ್ ಸೂಕ್ತ ಚಿಕಿತ್ಸೆ ಕೊಡಿಸುತ್ತಿಲ್ಲ. ಚಿಕಿತ್ಸೆ ಕೊಡಿಸುವ ನಾಟಕವನ್ನು ಮಾತ್ರ ಯಶಸ್ವಿಯಾಗಿ ನಡೆಸಿ ನ್ಯಾಯಾಲಯದ ಕಣ್ಣಿಗೆ ಮಣ್ಣೆರಚುತ್ತಿದೆ. ಸಾಧ್ವಿಯನ್ನು ಬಂಧಿಸಿ ೫ ವರ್ಷಗಳ ನಂತರವೂ ಆಕೆಯ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲವೆಂದರೆ ಏನರ್ಥ? ಆಕೆಯನ್ನು ಉzಶಪೂರ್ವಕವಾಗಿಯೇ ಈ ಮೊಕದ್ದಮೆಯಲ್ಲಿ ಸಿಲುಕಿಸಲು, ‘ಕೇಸರಿ ಭಯೋತ್ಪಾದನೆ’ ದೇಶದಾದ್ಯಂತ ಹರಡುತ್ತಿದೆ ಎಂಬ ಭ್ರಮೆ ಸೃಷ್ಟಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದಲ್ಲವೆ?
ತಂದೆ ಸತ್ತರೂ ಜಾಮೀನಿಲ್ಲ
ಸಾಧ್ವಿ ಪ್ರಜ್ಞಾಸಿಂಗ್ ತಂದೆ ಚಂದ್ರಪಾಲ್ ಸಿಂಗ್ ಈ ನಡುವೆ ಕಾಲವಾದರು. ಆದರೂ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಿಲ್ಲ. ತಂದೆಯ ಅಂತಿಮ ಕ್ರಿಯೆಗಳನ್ನು ಪೂರೈಸಲು ತಾತ್ಕಾಲಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಕೋರಿ ಆಕೆ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಧೀಶರು ಮಾನ್ಯತೆಯನ್ನೇ ನೀಡಲಿಲ್ಲ. ಸಂಜಯ್ದತ್ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದರೂ ಆತನಿಗೆ ತನ್ನ ಪತ್ನಿ ಮಾನ್ಯತಾಳ ಅನಾರೋಗ್ಯ ಕಾರಣಕ್ಕಾಗಿ ಪೆರೋಲ್ ಸಿಗುತ್ತದೆ. ಆತ ಜೈಲಿನಿಂದ ಹೊರಬಂದು ಮನೆಗೆ ಹೋಗಬಹುದಾಗಿದೆ. ಪತ್ನಿ ಮಾನ್ಯತಾಳಿಗೆ ಹೇಳಿಕೊಳ್ಳುವಂತಹ ಅನಾರೋಗ್ಯವೇನೂ ಕಾಡಿಲ್ಲ. ಏಕೆಂದರೆ ಸಂಜಯ್ದತ್ ಪೆರೋಲ್ಗೆ ಅರ್ಜಿ ಹಾಕಿದ್ದ ಸಮಯದಲ್ಲೇ ಮಾನ್ಯತಾ ಮುಂಬೈನ ಕೆಲವು ಹೊಟೇಲ್ಗಳಲ್ಲಿ ನಡೆದ ಡ್ಯಾನ್ಸ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಳೆಂದು ಪತ್ರಿಕಾ ವರದಿ ಹೇಳುತ್ತದೆ. ತೀವ್ರ ಅನಾರೋಗ್ಯ ಕಾಡಿದ್ದರೆ ಡ್ಯಾನ್ಸ್ ಪಾರ್ಟಿಗೆ ಹೋಗಲು ಸಾಧ್ಯವಿತ್ತೆ?
ಇತ್ತ ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲು ಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್ಗೆ ಕೂಡ ಪೆರೋಲ್ ಮೇಲೆ ಬಿಡುಗಡೆಯ ಭಾಗ್ಯ ಲಭಿಸಿದೆ. ಇಂತಹ ಪೆರೋಲ್ಗೆ ಗಂಭೀರ ಕಾರಣಗಳಂತೂ ಕಂಡುಬರುತ್ತಿಲ್ಲ. ಎಲ್ಲವೂ ರಾಜಕೀಯ ಪ್ರಭಾವ, ಅಷ್ಟೆ. ಸಾಧ್ವಿ ಪ್ರಜ್ಞಾಸಿಂಗ್ ಮೇಲಿನ ಯಾವ ಆರೋಪ ಕೂಡ ಸಾಬೀತಾಗದಿದ್ದರೂ ಆಕೆಗೆ ತನ್ನ ತಂದೆ ತೀರಿಕೊಂಡಾಗ, ಮನೆಗೆ ಹೋಗಿ ಅಂತಿಮ ಕರ್ತವ್ಯ ನೆರವೇರಿಸಲು ಸರ್ಕಾರ ಅವಕಾಶ ಕೊಡಲಿಲ್ಲ. ಸಂಜಯ್ದತ್, ಲಾಲೂಪ್ರಸಾದ್ಗಳಿಗೆ ಸಿಕ್ಕ ‘ಬಿಡುಗಡೆಯ ಭಾಗ್ಯ’ ಸಾಧ್ವಿಗೆ ಲಭಿಸಲೇ ಇಲ್ಲ. ಕಾನೂನು, ನ್ಯಾಯ ಎಲ್ಲರಿಗೂ ಒಂದೇ ಎನ್ನುವ ಮಾತಿಗೆ ನಿಜವಾಗಿಯೂ ಅರ್ಥವಿದೆಯೆ?
ಜೈಲಿನಲ್ಲಿ ತೀವ್ರ ಹಿಂಸೆ
ಸಾಧ್ವಿ ಪ್ರಜ್ಞಾಸಿಂಗ್ ಬಾಲ್ಯದಿಂದಲೂ ರಾಷ್ಟ್ರೀಯ ವಿಚಾರಗಳಿಗೆ ಬದ್ಧತೆ ವ್ಯಕ್ತಪಡಿಸಿ ಬದುಕಿದ ಒಬ್ಬ ಶ್ರದ್ಧಾವಂತ ಸಾಮಾಜಿಕ ಕಾರ್ಯಕರ್ತೆ. ಜೊತೆಗೆ ಓರ್ವ ಸನ್ಯಾಸಿನಿ ಕೂಡ. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾದ ೯ ಮಂದಿಯನ್ನು ಅನಂತರ ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಹೇಳಿ ಬಿಡುಗಡೆ ಮಾಡಲಾಯಿತು. ಸಾಧ್ವಿಯನ್ನು ಮಾತ್ರ ಬಿಡುಗಡೆ ಮಾಡಲಿಲ್ಲ. ಏಕೆಂದರೆ ಕೇಂದ್ರ ಸರ್ಕಾರಕ್ಕೆ ಹೇಗಾದರೂ ಮಾಡಿ ‘ಹಿಂದು ಭಯೋತ್ಪಾದನೆ’ ಈ ದೇಶದಲ್ಲಿದೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡಿ, ಅವರನ್ನು ನಂಬಿಸುವ ಜರೂರತ್ತು ಇತ್ತು. ಹೆಚ್ಚುತ್ತಿರುವ ಮುಸ್ಲಿಂ ಭಯೋತ್ಪಾದನೆಯ ಕಾವನ್ನು ತಗ್ಗಿಸಲು ಇಂತಹದೊಂದು ಪರ್ಯಾಯ ನಾಟಕವನ್ನು ಅದು ಆಡಲೇಬೇಕಿತ್ತು. ಅದೇ ಉzಶದಿಂದ ಮಾಲೆಗಾಂವ್ ಸ್ಫೋಟ ಪ್ರಕರಣದ ಸಂಬಂಧವಾಗಿ ಸಾಧ್ವಿಯನ್ನು ಬಂಧಿಸಲಾಯಿತು. ಆ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದ ಒಬ್ಬ ವ್ಯಕ್ತಿಯ ಬೈಕ್ ಬಗ್ಗೆ ಮಾಹಿತಿ ನೀಡಲು ಬರಬೇಕೆಂದು ೨೦೦೮ರ ಆ. ೭ರಂದು ಸೂರತ್ಗೆ ತೆರಳಿದ ಸಾಧ್ವಿಗೆ ಕಾದಿತ್ತು ಬಂಧನದ ಉಡುಗೊರೆ! ಅನಂತರ ಆಕೆಯನ್ನು ಮುಂಬೈನ ಎಟಿಎಸ್ ಕಚೇರಿಗೆ ಕರೆತಂದು ಅಲ್ಲಿ ೧೩ ದಿನಗಳ ಕಾಲ ಕಾನೂನುಬಾಹಿರವಾಗಿ ಬಂಧಿಸಿಡಲಾಯಿತು. ಅಷ್ಟೇ ಅಲ್ಲ, ಮಾನಸಿಕವಾಗಿ, ಶಾರೀರಿಕವಾಗಿ ಅವಾಚ್ಯ ಶಬ್ದಗಳಿಂದ ಭಯಾನಕವಾದ ಹಿಂಸೆ ನೀಡಲಾಯಿತು. ಆಕೆ ಮಹಿಳೆ ಎಂದು ಗೊತ್ತಿದ್ದರೂ ನೆಲದ ಮೇಲೆ ಕೆಡವಿ ಬೆಲ್ಟ್ಗಳಿಂದ ಬಾರಿಸಿದರು. ಅಶ್ಲೀಲ ಸಿಡಿಯೊಂದನ್ನು ಆಲಿಸುವಂತೆ ಬಲವಂತಪಡಿಸಿದರು. ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ತಪ್ಪೊಪ್ಪಿಗೆ ಪಡೆಯುವ ಹುನ್ನಾರ ಪೊಲೀಸರ ಈ ಹಿಂಸಾಚಾರದ ಹಿಂದೆ ಇತ್ತು. ಪೊಲೀಸರ ನಿರಂತರ ಹಿಂಸಾಚಾರಕ್ಕೆ ಸಾಧ್ವಿ ಮಾತ್ರ ಬಗ್ಗಲಿಲ್ಲ. ಆಕೆಯ ಅಂಗಾಂಗ ಹಾಗೂ ಹೊಟ್ಟೆಗೆ ತೀವ್ರ ಗಾಸಿಯಾಗಿ, ಪ್ರಜ್ಞಾಹೀನಳಾಗಿ ಉಸಿರಾಡುವುದಕ್ಕೂ ಕಷ್ಟವಾದಾಗ ಮುಂಬೈನ ಸುಶ್ರೂಷಾ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆಕೆಯ ಮಿದುಳಿಗೆ ಹಾನಿಯಾಗಿರುವ ಮಾಹಿತಿ ಆಸ್ಪತ್ರೆಯ ಆ ವರದಿಯಲ್ಲಿದೆ. ಆ ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಸಾಧ್ವಿಯನ್ನು ವೆಂಟಿಲೇಟರ್ನಲ್ಲಿಡಲಾಗಿತ್ತು.
ಅದಾದ ಮೇಲೆ ಪಾಲಿಗ್ರಾಫ್, ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳ ಕಾಟ ಬೇರೆ. ಮತ್ತೆ ಶಾರೀರಿಕ, ಮಾನಸಿಕ ಹಿಂಸೆ. ಇಷ್ಟಾದರೂ ಎಟಿಎಸ್ ಬಯಸಿದ ಯಾವ ಸಾಕ್ಷ್ಯಾಧಾರಗಳೂ ಸಾಧ್ವಿಯಿಂದ ದೊರಕಲಿಲ್ಲ. ಆದರೆ ಸಾಧ್ವಿ ಮಾತ್ರ ಈ ಭಯಾನಕ ಹಿಂಸಾಚಾರಗಳಿಂದ ಹೈರಾಣವಾಗಿ ಹೋಗಿದ್ದಳು. ಪೊಲೀಸರ ಹಿಂಸೆಯನ್ನು ಸಹಿಸುವ ಶಕ್ತಿ ಕೂಡ ಕ್ರಮೇಣ ಕುಸಿದು ಹೋಗಿ ತುಂಬಾ ನಿತ್ರಾಣಳಾಗಿದ್ದಳು. ಸಾಧ್ವಿ ಹೇಳಿಕೇಳಿ ಒಬ್ಬ ಸನ್ಯಾಸಿನಿ. ಆಕೆಯ ಸಾತ್ವಿಕತೆಯನ್ನು ನಾಶಪಡಿಸಲು ಜೈಲಿನಲ್ಲಿ ಆಹಾರದಲ್ಲಿ ಮೊಟ್ಟೆ ಬೆರೆಸಿ ಕೊಡಲಾಯಿತು.
ಕೊನೆಗೊಮ್ಮೆ ಅನಾರೋಗ್ಯದಿಂದ ತೀವ್ರ ಕಂಗಾಲಾದ ಸಾಧ್ವಿ ಮುಂಬೈ ಹೈಕೋರ್ಟ್ನ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದು ತನಗೆ ಜಾಮೀನು ಮಂಜೂರು ಮಾಡಿ ಬಿಡುಗಡೆ ಮಾಡಬೇಕೆಂದು ಕೋರಿದ್ದರು. ತನ್ನ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕೆಂದು ಇನ್ನಿಲ್ಲದಂತೆ ಪ್ರಾರ್ಥಿಸಿದ್ದರು. ನನ್ನ ಮೇಲೆ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ. ಎಟಿಎಸ್ ಅನ್ಯಾಯವಾಗಿ ಹಾಗೂ ತಪ್ಪಾಗಿ ಈ ಮೊಕದ್ದಮೆಯಲ್ಲಿ ನನ್ನನ್ನು ಎಳೆದು ತಂದು ಹಾಕಿದೆ ಎಂದೂ ವಿವರವಾಗಿ ತಿಳಿಸಿದ್ದರು. ನ್ಯಾಯಾಧೀಶರ ಮನಸ್ಸು ಮಾತ್ರ ಕರಗಿರಲಿಲ್ಲ. ಹಾಗಾಗಿ ಜಾಮೀನಿನ ಮೇಲೆ ಆಕೆ ಬಿಡುಗಡೆಯಾಗಲೇ ಇಲ್ಲ.
ಅಲ್ಲಿ ರಾಜೋಪಚಾರ, ಇಲ್ಲಿ ಹಿಂಸಾಚಾರ
ಸಣ್ಣಪುಟ್ಟ ಆರೋಪ ಹೊತ್ತು ಜೈಲು ಸೇರಿದ ಆರೋಪಿಗಳನ್ನು ಕೂಡ ಯಾವುದೇ ಹಿಂಸೆ ನೀಡದೆ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಹೀಗಿರುವಾಗ ಸುಸಂಸ್ಕೃತ ಬದುಕು ನಡೆಸಿದ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡಿದ್ದು ಸಮಂಜಸವೇ? ಮುಂಬೈ ಮೇಲೆ ದಾಳಿ ಮಾಡಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ನೂರಾರು ಜನರನ್ನು ಸಾಯಿಸಿದ ಉಗ್ರ ಕಸಬ್ಗೆ, ಪಾರ್ಲಿಮೆಂಟ್ ಭವನದ ದಾಳಿ ಸಂಚು ರೂಪಿಸಿದ ಅಫ್ಜಲ್ ಗುರುವಿಗೆ, ಕೊಯಮತ್ತೂರು ಸ್ಫೋಟದ ಆರೋಪಿ ಸಯ್ಯದ್ ಮದನಿಗೆ ಜೈಲಿನಲ್ಲಿ ಬಿರಿಯಾನಿ, ಕಬಾಬ್ಗಳ ರಾಜೋಪಚಾರ! ಯಾವುದೇ ದೇಶದ್ರೋಹವೆಸಗದ, ಆದರೆ ಒಂದೆರಡು ಪ್ರಕರಣಗಳಲ್ಲಿ ಆರೋಪಿಯೆನಿಸಿರುವ ಸಾಧ್ವಿಗೆ ಮಾತ್ರ ಜೈಲಿನಲ್ಲಿ ತೀವ್ರ ಹಿಂಸಾಚಾರ, ಚಿಕಿತ್ಸೆಗೇ ತತ್ವಾರ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ. ಸಾಧ್ವಿ ನಿಜಕ್ಕೂ ಅಪರಾಧಿಯಾಗಿದ್ದರೆ ಖಂಡಿತ ಆಕೆಗೆ ಸೂಕ್ತ ಶಿಕ್ಷೆ ವಿಧಿಸಲು ಯಾರ ಅಡ್ಡಿಯೂ ಇರಲಿಲ್ಲ. ಒಬ್ಬ ಮುಸ್ಲಿಂ, ಹಿಂದು, ಕ್ರೈಸ್ತ, ಪಾರ್ಸಿ ಯಾರೇ ಆಗಲಿ ದೇಶದ್ರೋಹ ಎಸಗಿದರೆ ಅದು ಅಕ್ಷಮ್ಯ ಅಪರಾಧವೇ. ದೇಶದ್ರೋಹವೆಂದರೆ ದೇಶದ ಹಿತಕ್ಕೆ ಮಾರಕವಾಗಿ ನಡೆದುಕೊಳ್ಳುವುದು. ಆದರೆ ಸಾಧ್ವಿ ಪ್ರಕರಣದಲ್ಲಿ ಆಕೆ ದೇಶಕ್ಕೆ ಮಾರಕವಾಗಿ ನಡೆದುಕೊಂಡದ್ದಕ್ಕೆ ಇದುವರೆಗೆ ಯಾವ ಸಾಕ್ಷಿಯೂ ದೊರೆತಿಲ್ಲ. ಇಷ್ಟಕ್ಕೂ ಬಂಧಿಸಿ ೫ ವರ್ಷಗಳಾದರೂ ಸಾಧ್ವಿಯ ಮೇಲಿನ ಆರೋಪಗಳನ್ನು ಸಾಬೀತುಪಡಿಸುವ ಒಂದೇ ಒಂದು ಪುರಾವೆಯೂ ಎಟಿಎಸ್ ಬಳಿ ಇಲ್ಲವೆಂದರೆ ಅದಕ್ಕೇನರ್ಥ?
ಈಗ ಬಿಡುಗಡೆಯ ಭಾಗ್ಯ?
ಸಾಧ್ವಿ ಪ್ರಕರಣದ ಕುರಿತು ಹೀಗೆ ದೇಶಾದ್ಯಂತ ಸಾಕಷ್ಟು ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ ಇದೀಗ ಮಹತ್ವದ ಸುಳಿವೊಂದು ಎನ್ಐಎ ಕಡೆಯಿಂದ ದೊರೆತಿದೆ. ಅದೆಂದರೆ ಮಾಲೆಗಾಂವ್ ಸ್ಫೋಟ ಪ್ರಕರಣ ಹಾಗೂ ಸುನೀಲ್ ಜೋಶಿ ಹತ್ಯಾ ಪ್ರಕರಣಗಳಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಇತರ ಆರೋಪಿಗಳ ಜೊತೆ ಬಂಧಿಸಿ ತಪ್ಪು ಮಾಡಲಾಗಿತ್ತು ಎಂದು ಸ್ವತಃ ಎನ್ಐಎ ಒಪ್ಪಿಕೊಂಡಿದೆ. ಸುನೀಲ್ ಜೋಶಿ ಹತ್ಯಾಕಾಂಡದಲ್ಲಿ ಮಧ್ಯಪ್ರದೇಶ ಪೊಲೀಸರು ನಿರ್ದೋಷಿಗಳನ್ನು ಬಂಧಿಸಿದೆ ಎಂಬುದು ಎನ್ಐಎ ಹೇಳಿಕೆ. ಈ ಹಿನ್ನೆಲೆಯಲ್ಲಿ ಸಾಧ್ವಿ ಪ್ರಜ್ಞಾಸಿಂಗ್, ಹರ್ಷದ್ ಸೋಲಂಕಿ, ವಾಸುದೇವ್ ಪರಮಾರ್, ಆನಂದ್ರಾಜ್ ಕಟಾರಿಯ ಮತ್ತು ರಾಮಚಂದ್ರನ್ ಪಟೇಲ್ ಮೇಲಿರುವ ಹತ್ಯಾ ಆರೋಪವನ್ನು ಹಿಂದೆ ಪಡೆಯಲು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಲಿದೆಯಂತೆ. ಈ ಕೋರಿಕೆಯನ್ನೇನಾದರೂ ನ್ಯಾಯಾಲಯ ಮಾನ್ಯ ಮಾಡಿದಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಶೀಘ್ರವೇ ಜೈಲಿನಿಂದ ಬಿಡುಗಡೆಯಾಗಬಹುದು.
ಸುನೀಲ್ ಜೋಶಿ ಹತ್ಯಾಕಾಂಡ ಪ್ರಕರಣದಲ್ಲಿ ತನ್ನ ಪಾತ್ರ ಖಂಡಿತ ಇಲ್ಲ ಎಂದು ಸಾಧ್ವಿ ಪದೇಪದೇ ಪೊಲೀಸರಿಗೆ, ನ್ಯಾಯಾಲಯಕ್ಕೆ ಮನವರಿಕೆ ಮಾಡುತ್ತಲೇ ಇದ್ದರು. ಆಕೆಯ ಹೇಳಿಕೆ ನಿಜವೆಂಬುದು ಪೊಲೀಸರಿಗೆ ಹಾಗೂ ನ್ಯಾಯಾಲಯಕ್ಕೆ ಮನವರಿಕೆಯೂ ಆಗಿತ್ತು. ಆದರೆ ಕೇಂದ್ರ ಸರ್ಕಾರದ ಹಠಮಾರಿತನದಿಂದಾಗಿ ಆಕೆಗೆ ಬಿಡುಗಡೆಯ ಭಾಗ್ಯ ಇದುವರೆಗೂ ದೊರಕಲಿಲ್ಲ. ಜೈಲಿನಲ್ಲಿ ತೀವ್ರ ಹಿಂಸಾಚಾರದ ಪರಿಣಾಮವಾಗಿ ಕ್ಯಾನ್ಸರ್ನಂಥ ಗಂಭೀರ ಕಾಯಿಲೆಗೆ ತುತ್ತಾಗಿದ್ದರೂ ಮಾನವೀಯ ದೃಷ್ಟಿಯಿಂದ ಆಕೆಯನ್ನು ಬಿಡುಗಡೆ ಮಾಡಲೇ ಇಲ್ಲ. ಮಂಗಳೂರಿನ ಪಬ್ ಮೇಲೆ ದಾಳಿ ನಡೆಸಿದ ಬಜರಂಗದಳದವರು ಪಬ್ನಲ್ಲಿದ್ದ ಯುವತಿಯರನ್ನು ಹಿಡಿದೆಳೆದು ಅನ್ಯಾಯವೆಸಗಿದರೆಂದು ಬೊಬ್ಬೆ ಹೊಡೆಯುವ ಮಹಿಳಾವಾದಿಗಳಿಗೆ, ಪ್ರಜ್ಞಾಸಿಂಗ್ ವಿರುದ್ಧ ನಡೆದ ಅನ್ಯಾಯ ಕಾಣಿಸಲೇ ಇಲ್ಲ. ಆಕೆಯನ್ನು ಬಿಡುಗಡೆ ಮಾಡಬೇಕೆಂದು ಅವರ್ಯಾರೂ ಹೋರಾಟ ನಡೆಸಲೇ ಇಲ್ಲ. ಅದೇ ಆಕೆ ಮುಸ್ಲಿಂ ಮಹಿಳೆಯಾಗಿದ್ದರೆ ಬಹುಶಃ ಈ ಮಹಿಳಾವಾದಿಗಳು ಬೊಬ್ಬೆ ಹೊಡೆದು, ಹೋರಾಟ ನಡೆಸಿ ಬಿಡುಗಡೆಗೆ ಒತ್ತಾಯಿಸುತ್ತಿದ್ದರೇನೋ!
ಒಟ್ಟಾರೆ ಕಳೆದ 6 ವರ್ಷಗಳಲ್ಲಿ ಪ್ರಜ್ಞಾಸಿಂಗ್ ಎಂಬ ಸಾಧ್ವಿಯನ್ನು ಪೊಲೀಸರು, ಸರ್ಕಾರ ಜೀವಂತವಾಗಿ ಸಾಯಿಸಿಬಿಟ್ಟಿದೆ. ಪ್ರಜ್ಞಾಸಿಂಗ್ ಜೈಲಿನಲ್ಲಿ ಈಗ ಜೀವಂತವಾಗಿದ್ದರೂ ನೆಮ್ಮದಿಯಿಂದಿಲ್ಲ. ಶಾರೀರಿಕ ಸಮಸ್ಯೆಗಳು ಆಕೆಯನ್ನು ಪರಾವಲಂಬಿಯಾಗಿಸಿದೆ. ಒಂದೆರಡು ಹೆಜ್ಜೆಯನ್ನು ಕೂಡ ನಡೆಯಲಾರರು. 6 ವರ್ಷಗಳಷ್ಟು ದೀರ್ಘ ಕಾಲ ಆಕೆಯನ್ನು ಬಂಧಿಸಿಟ್ಟು ಎನ್ಐಎ ಸಾಧಿಸಿದ್ದಾದರೂ ಏನು? ಆಕೆಯ ಮೇಲಿನ ಯಾವುದೇ ಆರೋಪವನ್ನು ಸಾಬೀತುಪಡಿಸಲು ಅದಕ್ಕೆ ಸಾಧ್ಯವಾಗಿಲ್ಲವೆಂದರೆ ಸಾಧ್ವಿಯ ಬಂಧನ ದುರುzಶಪೂರ್ವಕವಲ್ಲದೆ ಮತ್ತೇನು? ಆಕೆಯನ್ನು ಬಂಧಿಸಿ, ಯಮಯಾತನೆ ನೀಡುವಂತೆ ಪೊಲೀಸರಿಗೆ ಆದೇಶ ಕೊಟ್ಟವರಾರು? ಅದು ಈಗ ಬೆಳಕಿಗೆ ಬರಬೇಕಾಗಿದೆ.
ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲವೆಂದು ಎನ್ಐಎ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಬಳಿಕ, ಮುಂದೊಂದು ದಿನ ಆಕೆಯ ಬಿಡುಗಡೆಯಾಗಬಹುದು. ಬಹುಶಃ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಚುನಾವಣೆಗೆ ಕೆಲವು ದಿನಗಳಿದ್ದಾಗ ಆಕೆಯ ಬಿಡುಗಡೆಯಾದರೆ ಆಶ್ಚರ್ಯವೇನಿಲ್ಲ. ಹೇಗಿದ್ದರೂ ಕಾಂಗ್ರೆಸ್ಗೆ ಹಿಂದುಗಳ ಓಟ್ ಬೇಕಲ್ಲವೆ? ಚುನಾವಣೆ ಪ್ರಚಾರದ ವೇಳೆ, ‘ನೋಡಿ, ನಾವು ಕಸಬ್, ಅಫ್ಜಲ್ ಗುರುವಿನಂತಹ ದೇಶದ್ರೋಹಿಗಳನ್ನು ಗಲ್ಲಿಗೇರಿಸಿzವೆ, ಸಾಧ್ವಿ ಪ್ರಜ್ಞಾಸಿಂಗ್ ನಿರ್ದೋಶಿಯೆಂದು ಸಾಬೀತಾದ ಬಳಿಕ ಬಿಡುಗಡೆ ಮಾಡಿzವೆ. ಎಲ್ಲವೂ ಕಾನೂನಿಗೆ ತಕ್ಕಂತೆಯೇ ನಡೆದಿದೆ’ ಎಂದು ಕಾಂಗ್ರೆಸ್ ಮುಖಂಡರು ಹಿಂದುಗಳನ್ನು ಓಲೈಸಿ, ತಿಪ್ಪೆ ಸಾರಿಸದೆ ಇರಲಾರರು.
ಆದರೆ ಕಾಂಗ್ರೆಸ್ ನಾಯಕರು ಹೇಳುವ ಇಂತಹ ಕಥೆಗಳನ್ನು ಕಿವಿಯಾರೆ ಕೇಳುತ್ತ, ತಲೆಯಾಡಿಸುವಷ್ಟು ಹಿಂದುಗಳು ಮೂರ್ಖರೆ? ಸಾಧ್ವಿಗೆ ಅನ್ಯಾಯವಾಗಿ ಜೈಲಿನಲ್ಲಿ ಚಿತ್ರಹಿಂಸೆ ಕೊಟ್ಟಿದ್ದನ್ನು ಮರೆಯುವಷ್ಟು ಅವರು ದಡ್ಡರೆ? ಮದನಿಯಂತಹ ಕುಖ್ಯಾತ ಸಮಾಜಘಾತುಕರಿಗೆ ರಾಜೋಪಚಾರ ನೀಡುವ ಕಾಂಗ್ರೆಸ್ ಸರ್ಕಾರ ಸಾಧ್ವಿಯಂತಹ ಅಮಾಯಕರಿಗೆ ಚಿತ್ರಹಿಂಸೆ ನೀಡಿದ್ದನ್ನು ಸಮರ್ಥಿಸುವರೆ? ಇಂತಹ ಎಲ್ಲ ಪ್ರಶ್ನೆಗಳಿಗೆ ಮುಂದಿನ ಲೋಕಸಭಾ ಚುನಾವಣೆಯ ವೇಳೆ ಸೂಕ್ತ ಉತ್ತರಗಳನ್ನು ಹಿಂದು ಸಮುದಾಯ ಕಂಡುಕೊಳ್ಳಬೇಕಾಗಿದೆ. ಸಾಧ್ವಿ ಪ್ರಜ್ಞಾ ಸಿಂಗ್ಗೆ ಆದ ಅನ್ಯಾಯ ಮುಂದೆ ಇನ್ಯಾವ ಮಹಿಳೆಗೂ ಆಗಬಾರದು ಎಂಬ ಕಾಳಜಿ ಹಿಂದುಗಳಿಗಿದ್ದರೆ ಅವರು ಈ ಎಲ್ಲ ವಿದ್ಯಮಾನದ ಕುರಿತು ಗಂಭೀರವಾಗಿ ಯೋಚಿಸಲೇಬೇಕು. ಮತದಾನದ ಅಸ್ತ್ರ ಬಳಸಿ, ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ನೀಡಲೇಬೇಕು.
ಫೋಟೋ ಕ್ಯಾಪ್ಶನ್: ೧. ಸಾಧ್ವಿ ಪ್ರಜ್ಞಾ ಸಿಂಗ್ ಮೊದಲು
೨. ಸಾಧ್ವಿ ಪ್ರಜ್ಞಾ ಸಿಂಗ್ ಸ್ಥಿತಿ ಈಗ