ಶಿವಮೊಗ್ಗ: ಅಲ್ಲಿ ಮಾತನಾಡಿದ ಪ್ರಮುಖರೆಲ್ಲರೂ ವ್ಯಕ್ತಪಡಿಸಿದ್ದು ಒಂದೇ ಕಾಳಜಿ. ಅದು ಆಧುನಿಕ ಮಕ್ಕಳ ಮಾನಸಿಕತೆಯ ಕುರಿತು. ಇಂದಿನ ಮಕ್ಕಳು ಬೆಳೆಯುತ್ತಿರುವ ವೈಖರಿ ಕುರಿತು ಮಾತನಾಡಿದ ಹಿರಿಯರ ಮಾತುಗಳಲ್ಲಿ ಕಳವಳ, ಕಾಳಜಿ ವ್ಯಕ್ತವಾಗಿತ್ತು. ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ತುಡಿತ ಆ ಮಾತುಗಳಲ್ಲಿತ್ತು.
ಸಂದರ್ಭ: ರಾಷ್ಟ್ರೋತ್ಥಾನ ಪರಿಷತ್ನ ಭಾರತ-ಭಾರತಿ ಯೋಜನೆಯ ೨ನೇ ಸರಣಿಯ ಪುಸ್ತಕಗಳ ಲೋಕಾರ್ಪಣೆ. ಇಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಜ.೨೮ರಂದು ಭಾರತ-ಭಾರತಿ ೨ನೇ ಸರಣಿಯ ೫೦ ಪುಸ್ತಕಗಳನ್ನು ಹಿರಿಯ ಸಾಹಿತಿ ಹಾಗೂ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ. ಡಿ’ಸೋಜ ಲೋಕಾರ್ಪಣಗೊಳಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹರಡಿರುವ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು, ಕ್ರೀಡಾಪಟುಗಳು, ಧಾರ್ಮಿಕ ಸಂತರಿಂದ ಹಿಡಿದು ಎಲ್ಲ ವರ್ಗದ ವ್ಯಕ್ತಿಗಳ ಬಗ್ಗೆ ರಾಷ್ಟ್ರೋತ್ಥಾನ ಪರಿಷತ್ ಭಾರತ-ಭಾರತಿ ಹೆಸರಿನಲ್ಲಿ ಪುಸ್ತಕಗಳನ್ನು ಹೊರತಂದಿದೆ. ಜಾತಿ, ಮತ, ಧರ್ಮ, ಬಣ್ಣ, ಭಾಷೆ, ಪ್ರದೇಶಗಳನ್ನು ಮೀರಿ ಭಾರತೀಯರಿಗೆ ಉಪಕಾರವಾಗುವಂತಹ ಪುಸ್ತಕಗಳನ್ನು ಇಲ್ಲಿ ಶ್ರಮವಹಿಸಿ ಹೊರತರಲಾಗಿದೆ. ಮೊದಲ ಸರಣಿಯ ಸಂಪಾದಕರಾಗಿದ್ದ ಎಲ್.ಎಸ್. ಶೇಷಗಿರಿ ರಾವ್ ಪಟ್ಟ ಶ್ರಮ ಅಪಾರ. ಮಕ್ಕಳ ಮನದಲ್ಲಿ ತಪ್ಪುಕಲ್ಪನೆ ಬಾರದ ಹಾಗೆ, ಯಾವ ಸಾಧಕರ ಬಗ್ಗೆಯೂ ಕೀಳರಿಮೆ ವ್ಯಕ್ತವಾಗದಂತೆ ಎಚ್ಚರಿಕೆಯಿಂದ ಪುಸ್ತಕಗಳನ್ನು ಸಂಪಾದಿಸಿ ಹೊರತಂದಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದು ಬಣ್ಣಿಸಿದವರು ಪುಸ್ತಕ ಲೋಕಾರ್ಪಣೆ ಮಾಡಿದ ಸಾಹಿತಿ ನಾ. ಡಿ’ಸೋಜ.
1972 ರಲ್ಲಿ ಪ್ರಕಟವಾದ ಮೊದಲ ಸರಣಿಯ 1 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಮಾರಾಟವಾಗಿರುವುದು ಹಾಗೂ ಅವು ಮತ್ತೆ ಮರುಮುದ್ರಣಗೊಂಡಿರುವುದು ಕನ್ನಡ ಸಾಹಿತ್ಯ ಲೋಕದಲ್ಲಿ ದಾಖಲೆಯ ಹಾಗೂ ಮಹತ್ವದ ಸಂಗತಿ ಎಂದವರು ಸಂತಸ ವ್ಯಕ್ತಪಡಿಸಿದರು.
ನಾವು ಶೃಂಗೇರಿ ಶಾರದೆಯ ಕೈಯಲ್ಲೇ ಪುಸ್ತಕವನ್ನು ಕೊಟ್ಟವರು. ಆದರೆ ಇಂದಿನ ಹಾಗೂ ಮುಂದಿನ ದಿನಗಳಲ್ಲಿ ಈ ಪುಸ್ತಕ ಏನಾಗಬಹುದು ಎಂಬ ಭೀತಿ ಕಾಡುತ್ತಿದೆ. ಇಂದಿನ ತಂದೆತಾಯಿಗಳು ಮಕ್ಕಳನ್ನು ಪುಸ್ತಕದಿಂದ ದೂರ ಮಾಡುತ್ತಾ ಇದ್ದಾರೆಯೆ ಎಂಬ ಚಿಂತೆ ಕಾಡುತ್ತಿದೆ. ಒಂದು ಕಾಲದಲ್ಲಿ ಜ್ಞಾನವೆನ್ನುವುದು ಕೇವಲ ಪುಸ್ತಕದಿಂದ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿತ್ತು. ಆದರೀಗ ಮಕ್ಕಳ ಕೈಯಲ್ಲಿ ಪುಸ್ತಕದ ಬದಲು ಮೊಬೈಲ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ಇಂಟರ್ನೆಟ್ಗಳು ರಾರಾಜಿಸುತ್ತಿವೆ. ಮಕ್ಕಳು ಓದುವುದರ ಬದಲು ನೋಡುವಿಕೆಯೇ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳು ಯಾವುದೇ ಪುಸ್ತಕವನ್ನಾಗಲಿ ಅಥವಾ ಪತ್ರಿಕೆಯನ್ನಾಗಲಿ ಓದುವುದಿಲ್ಲ. ಆದರೆ ನೋಡುವುದರಲ್ಲಿ ಮಾತ್ರ ಮುಂದೆ ಇದ್ದಾರೆ. ಓದು ನಮ್ಮ ಮನಸ್ಸನ್ನು ವಿಕಾಸಗೊಳಿಸುವ ಶ್ರೇಷ್ಠ ಪ್ರಕ್ರಿಯೆ. ಆದರೆ ನೋಡುವಿಕೆ ಎನ್ನುವುದು ನಮ್ಮನ್ನು ಹೆಚ್ಚು ಸೋಮಾರಿಗಳನ್ನಾಗಿ ಮಾಡುತ್ತದೆ. ಅವೈಚಾರಿಕತೆಯನ್ನು ಪ್ರತಿಪಾದಿಸುತ್ತದೆ. ದೃಶ್ಯ ಮಾಧ್ಯಮದಲ್ಲಿ ಬಂದಿರುವುದು ಮಾತ್ರವೇ ಸರಿ ಎನ್ನುವ ಏಕಮುಖ ಅಭಿಪ್ರಾಯವನ್ನು ಹೊಂದುವಂತೆ ಮಾಡಿಬಿಡುತ್ತದೆ ಎಂದು ಡಿ’ಸೋಜ ವಿಶ್ಲೇಷಿಸಿದರು.
ಆಧುನಿಕತೆ ಸೃಷ್ಟಿಸುತ್ತಿರುವ ಅಪಾಯಗಳ ಬಗ್ಗೆ ನಾವು ಈಗ ಎಚ್ಚರವಹಿಸಬೇಕಾಗಿದೆ. ೧೯೭೨ರಲ್ಲಿ ಭಾರತ-ಭಾರತಿ ಪುಸ್ತಕ ಪ್ರಕಟವಾದಾಗ ಮಕ್ಕಳ ಕೈಯಲ್ಲಿ ಕೇವಲ ಪುಸ್ತಕ ಮಾತ್ರ ಇತ್ತು. ಈಗ ಮೊಬೈಲ್, ಲ್ಯಾಪ್ಟಾಪ್ನಂತಹ ಇತರ ವಸ್ತುಗಳಿವೆ. ಪೋಷಕರು ಕೂಡ ಆಧುನಿಕತೆಯ ಭ್ರಮೆಯಲ್ಲಿ ಮಕ್ಕಳನ್ನು ಪುಸ್ತಕಗಳಿಂದ ದೂರ ಇಟ್ಟಿದ್ದಾರೆ. ಭಾರತ-ಭಾರತಿ ಪುಟ್ಟ ಪುಸ್ತಕಗಳಿಂದ ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಅತ್ಯಂತ ಸಹಕಾರಿ. ಹಾಗಾಗಿ ಈ ಪುಸ್ತಕಗಳನ್ನು ಅಂತರ್ಜಾಲದಲ್ಲೂ ಸಿಗುವ ವ್ಯವಸ್ಥೆಯನ್ನು ರಾಷ್ಟ್ರೋತ್ಥಾನ ಪರಿಷತ್ ಕಲ್ಪಿಸಲಿ ಎಂದು ಡಿ’ಸೋಜ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ಮಾತನಾಡಿ, ಭಾರತ-ಭಾರತಿ ಪುಸ್ತಕ ಮಕ್ಕಳ ಪಾಲಿಗೆ ಅಮೂಲ್ಯ ನಿಧಿ ಇದ್ದಂತೆ. ಇಲ್ಲಿನ ಪ್ರತಿಯೊಂದು ಪುಟ್ಟ ಪುಸ್ತಕ ಕೂಡ ಉಜ್ವಲ ಪ್ರಕಾಶ ಬೀರುವಂತಿದೆ ಎಂದು ಬಣ್ಣಿಸಿದರು.
ಎಳೆಯ ಮಕ್ಕಳ ಮನಸ್ಸು ಎರೆ ಮಣ್ಣಿನ ಹಸಿ ಗೋಡೆ ಇದ್ದಂತೆ. ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತಿದರೆ ಮುಂದೆ ಅವರು ಸತ್ಪ್ರಜೆಗಳಾಗಲು ಸಾಧ್ಯ. ಭಾರತ-ಭಾರತಿ ಆ ನಿಟ್ಟಿನಲ್ಲಿ ಮಕ್ಕಳಿಗೆ ಒಂದು ಅಮೂಲ್ಯ ಕೊಡುಗೆ. ಮಕ್ಕಳ ಪುಸ್ತಕ ಎಂದು ಅಲಕ್ಷ್ಯ ಮಾಡದೆ ತಂದೆತಾಯಿಗಳು ತಮ್ಮ ಮಕ್ಕಳಿಗೆ ಇದನ್ನು ಖರೀದಿಸಿ ಓದಿಸಬೇಕು ಎಂದು ಕಿವಿಮಾತು ಹೇಳಿದರು. ಭಾರತ-ಭಾರತಿ ಯೋಜನೆಯ ಹಿಂದೆ ನಂ.ಮಧ್ವರಾವ್, ಎಲ್.ಎಸ್.ಶೇಷಗಿರಿ ರಾವ್ ಮೊದಲಾದ ಮಹನೀಯರ ಪರಿಶ್ರಮ, ಚಿಂತನೆ ಇದೆ. ಭಾರತ-ಭಾರತಿ ಪುಸ್ತಕಗಳನ್ನು ಮಕ್ಕಳು ಓದುತ್ತಾ ಹೋದರೆ, ಅವರಿಗೆ ಗೊತ್ತಿಲ್ಲದಂತೆ ಕನ್ನಡದ ಜ್ಞಾನ ಬೆಳೆಯುತ್ತಾ ಹೋಗುತ್ತದೆ ಎಂದು ಪ್ರತಿಪಾದಿಸಿದರು.
ಭಾರತ-ಭಾರತಿ ಪುಸ್ತಕ ಸಂಪದ – ೨ರ ಪ್ರಧಾನ ಸಂಪಾದಕ ಚಿರಂಜೀವಿ ಸ್ವಾಗತಿಸಿದರು. ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಡಾ.ಎಸ್.ಆರ್.ರಾಮಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ-ಭಾರತಿ ಪುಸ್ತಕಗಳ ಯೋಜನೆ ಮೂಡಿದ ಬಗೆ, ಅದರ ಹಿಂದಿರುವ ಹಲವು ಮಹನೀಯರ ಪರಿಶ್ರಮ, ಯೋಜನೆ ಸಾಹಿತ್ಯ ಲೋಕದಲ್ಲಿ ಉಂಟು ಮಾಡಿದ ಸಂಚಲನ ಮೊದಲಾದ ವಿವರಗಳನ್ನು ಹೃದಯಸ್ಪರ್ಶಿಯಾಗಿ ತೆರೆದಿಟ್ಟರು. ಶಿವಮೊಗ್ಗ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಡಾ.ಸುಧೀಂದ್ರ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ೨೫ ಶಾಲೆಗಳ ೭೫ ಮಕ್ಕಳು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಭಾರತ-ಭಾರತಿ ೨ನೇ ಸರಣಿಗೆ ಪುಸ್ತಕಗಳನ್ನು ರಚಿಸಿಕೊಟ್ಟ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.
****
ಎರಡನೇ ಕಂತಿನ ಹೊತ್ತಗೆಗಳು, ಲೇಖಕರು
ಶಿವರಾಮ ಕಾರಂತ – ಎಲ್.ಎಸ್.ಶೇಷಗಿರಿರಾವ್
ಕೆರೆಮನೆ ಶಿವರಾಮ ಹೆಗಡೆ – ಡಾ.ಜಿ.ಎಸ್.ಭಟ್
ಕುಸುಮಾ ಸೊರಬ – ಶಾರದಾ ಗೋಪಾಲ
ಜೆ.ಆರ್.ಡಿ. ಟಾಟಾ – ಸುಧಾ ಮೂರ್ತಿ
ಫೀ.ಮಾ. ಕೆ.ಎಂ.ಕಾರ್ಯಪ್ಪ – ನಾ.ಡಿ’ಸೋಜ
ಭರ್ತೃಹರಿ – ಅ.ರಾ.ಮಿತ್ರ
ತೇನ್ಸಿಂಗ್ ನಾರ್ಗೆ – ಬೆ.ಗೋ.ರಮೇಶ್
ಆರ್.ಕೆ.ನಾರಾಯಣ್ – ಸಂಪಟೂರು ವಿಶ್ವನಾಥ್
ನವರತ್ನ ರಾಮರಾವ್ – ಈಶ್ವರಚಂದ್ರ
ಮಧುಕರ ದತ್ತಾತ್ರೇಯ ದೇವರಸ್ – ದು.ಗು.ಲಕ್ಷ್ಮಣ
ಹಾಸನದ ರಾಜಾರಾವ್ – ಡಾ.ಎಸ್.ರಾಮಸ್ವಾಮಿ
ಎಚ್.ನರಸಿಂಹಯ್ಯ – ಎಂ.ಕೆ. ಗೋಪಿನಾಥ್
ವಿನೋಬ ಭಾವೆ – ಚಿಂತಾಮಣಿ ಕೊಡ್ಲೆಕೆರೆ
ಕೆ.ಕೆ.ಹೆಬ್ಬಾರ್ – ಎನ್. ಮರಿಶಾಮಾಚಾರ್
ಓಶೋ – ಸಂಧ್ಯಾ ಪೈ
ಬಾಣ ಭಟ್ಟ – ಎಸ್.ಗೋಪಾಲಕೃಷ್ಣ ಉಡುಪ
ಹೆಳವನಕಟ್ಟೆ ಗಿರಿಯಮ್ಮ – ಜಯಸಿಂಹ
ಎಸ್.ಎಸ್.ವಾಸನ್ – ಬಿ.ನಾಗೇಶ್ ಬಾಬು
ಟಿ.ಎಂ.ಎ. ಪೈ – ಉದಯಾನಂದ ಭಂಡಾರಿ
ಏಕನಾಥ ರಾನಡೆ – ದು.ಗು. ಲಕ್ಷ್ಮಣ
ಸತ್ಯಸಾಯಿ ಬಾಬಾ – ಪ್ರೇಮಾ ಭಟ್
ಪತಂಜಲಿ – ಮಹೇಶ ಭಟ್ಟ ಆರ್. ಹಾರ್ಯಾಡಿ
ದಿವಾನ್ ಪೂರ್ಣಯ್ಯ – ಚಿರಂಜೀವಿ
ಜನಕ ಮಹಾರಾಜ – ಅನಂತ ಕಲ್ಲೋಳ
ಎಂ.ಜಿ.ರಾಮಚಂದ್ರನ್ – ಬಿ.ಆರ್.ಶಂಕರ್
ಸಿ.ಅಶ್ವತ್ಥ್ – ಬಿ.ಆರ್.ಲಕ್ಷ್ಮಣರಾವ್
ಫೀ.ಮಾ.ಮಾಣೆಕ್ಷಾ – ಡಾ. ನಾ.ಡಿ’ಸೋಜ
ಗೋಪಾಲಕೃಷ್ಣ ಅಡಿಗ – ಡಾ.ಸುಮತೀಂದ್ರ ನಾಡಿಗ
ಪದ್ಮಚರಣ್ – ಡಾ.ಎಚ್.ಆರ್.ಲೀಲಾವತಿ
ನಾ. ಕಸ್ತೂರಿ – ಕೃಷ್ಣ ಸುಬ್ಬರಾವ್
ಸಿದ್ಧಾರೂಢರು – ಡಾ.ಎಸ್.ವಿದ್ಯಾಶಂಕರ
ಎನ್.ಟಿ.ರಾಮರಾವ್ – ಯಂಡಮೂರಿ ವೀರೇಂದ್ರನಾಥ್
ಮಾರಿಯೋ ಮಿರಾಂಡ – ಡಾ.ಡಿ.ವಿ. ಗುರುಪ್ರಸಾದ್
ಕುವೆಂಪು – ಡಾ.ಸಿ.ಪಿ.ಕೃಷ್ಣಕುಮಾರ್
ಹರ್ಗೋಬಿಂದ್ ಖುರಾನಾ – ಕಾಕುಂಜೆ ಕೇಶವ ಭಟ್ಟ
ಮೈಸೂರು ಅನಂತಸ್ವಾಮಿ – ಡಿ.ಎಸ್.ಕೇಶವ ರಾವ್
ಪಾ.ವೆಂ.ಆಚಾರ್ಯ – ವೈ.ಎನ್.ಗುಂಡೂರಾವ್
ಗುಲ್ಜಾರಿಲಾಲ್ ನಂದಾ – ಟಿ.ಎಂ.ಸುಬ್ಬರಾಯ
ದತ್ತೋಪಂತ ಠೇಂಗಡಿ – ಚಂದ್ರಶೇಖರ ಭಂಡಾರಿ
ಗೋಂದಾವಲೆ ಬ್ರಹ್ಮಚೈತನ್ಯ – ಮಾಧವ ಕುಲಕರ್ಣಿ
ಅಮ್ಮೆಂಬಳ ಸುಬ್ಬರಾವ್ ಪೈ – ರಮಾತನಯ
ಗುರುದತ್ – ವಿ.ಕೆ.ಮೂರ್ತಿ
ಸಿದ್ಧಲಿಂಗಸ್ವಾಮಿ – ಡಾ.ಜಿ.ಜ್ಞಾನಾನಂದ
ಕಸ್ತೂರಿ ಶ್ರೀನಿವಾಸನ್ – ಶ್ರೀಕರ ಎಲ್. ಭಂಡಾರ್ಕರ್
ಬಾಬಾ ಆಮ್ಟೆ – ಮಲ್ಲಿಕಾರ್ಜುನ ಹುಲಗಬಾಳಿ
ದಿನಕರ ದೇಸಾಯಿ – ವಿಷ್ಣು ನಾಯ್ಕ
ಶಾಂತಾ ಹುಬ್ಳೀಕರ್ – ಅ.ನಾ.ಪ್ರಹ್ಲಾದ್ರಾವ್
ಡಾ.ಎಂ.ವಿ.ಗೋವಿಂದ ಸ್ವಾಮಿ – ಡಾ.ಸಿ.ಆರ್.ಚಂದ್ರಶೇಖರ್
ಡಾ.ಎಂ.ಶಿವರಾಂ – ಎಂ.ಎಸ್.ನರಸಿಂಹಮೂರ್ತಿ
ಮಾಸ್ತಿ – ಡಾ.ಜಿ.ಎಂ.ಹೆಗಡೆ