by Du Gu Lakshman
ಚುನಾವಣೆಗಳು ಸಮೀಪಿಸಿದಾಗಲೆಲ್ಲ ಶತ್ರುಗಳು ಮಿತ್ರರಾಗುತ್ತಾರೆ. ಮಿತ್ರರು ಶತ್ರುಗಳಾಗುತ್ತಾರೆ. ಇದುವರೆಗೆ ಕೋಮುವಾದಿಗಳು ಎನಿಸಿಕೊಂಡವರು ಒಮ್ಮೆಲೆ ಸೆಕ್ಯುಲರ್ ಆಗುತ್ತಾರೆ. ಸೆಕ್ಯುಲರ್ ಎನಿಸಿಕೊಂಡವರು ಕೋಮುವಾದಿಗಳಾಗುವ ವಿದ್ಯಮಾನವೂ ನಡೆಯುತ್ತದೆ. ನಾವೆಲ್ಲ ಒಂದು, ಒಂದಾಗಿ ರಾಷ್ಟ್ರಹಿತ ಸಾಧಿಸಬೇಕು ಎಂದು ಅದುವರೆಗೆ ವೇದಿಕೆಗಳ ಮೇಲಿನಿಂದ ಪುಂಖಾನುಪುಂಖವಾಗಿ ಕರೆಕೊಟ್ಟ ನಾಯಕರೇ ಚುನಾವಣೆ ಎದುರಾದ ಕೂಡಲೇ ಜಾತಿ, ಮತ, ಪಂಥಗಳೆಂದು ಹರಿದು ಹಂಚಿಹೋಗುವ ವಿದ್ಯಮಾನವಂತೂ ಇನ್ನಷ್ಟು ಸೋಜಿಗ.
ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವಿದ್ದಾಗ ಅದರ ಪಾಲುದಾರ ಪಕ್ಷವಾಗಿದ್ದ ರಾಮ್‌ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಗೋಧ್ರೋತ್ತರ ಹಿಂಸಾಚಾರದ ಕಾರಣ ಮುಂದುಮಾಡಿಕೊಂಡು ಎನ್‌ಡಿಎ ಒಕ್ಕೂಟವನ್ನು ತೊರೆದಿತ್ತು. ಗೋಧ್ರೋತ್ತರ ಹಿಂಸಾಚಾರ ತಡೆಯುವಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿಫಲರಾಗಿದ್ದಾರೆಂದು ಆಗ ಪಾಸ್ವಾನ್ ಟೀಕಿಸಿದ್ದರು. ಆದರೆ ಇದೀಗ ಅವರು ಮತ್ತೊಮ್ಮೆ ಬಿಜೆಪಿಯೊಂದಿಗೆ ಕೈ ಕುಲುಕಿದ್ದಾರೆ. ಹೀಗೆ ಕೈಕುಲುಕಲು ನಿಜವಾದ ಕಾರಣ ಈ ಬಾರಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಅಧಿಕಾರಕ್ಕೆ ಬರಬಹುದೆಂಬ ನಿರೀಕ್ಷೆಯಿಂದ. ಈ ಅವಕಾಶವನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ಆಗ ಕೋಮುವಾದಿಯಾಗಿ ಕಂಡಿದ್ದ ನರೇಂದ್ರ ಮೋದಿ ಈಗ ಪಾಸ್ವಾನ್‌ಗೆ ಸೆಕ್ಯುಲರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಕೋಮುವಾದದ ಪರಿಭಾಷೆ ಕಾಲಘಟ್ಟಕ್ಕೆ ತಕ್ಕಂತೆ, ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತದೆ ಎಂಬುದಕ್ಕೆ ದೃಷ್ಟಾಂತ. ‘ಜಾತ್ಯತೀತತೆ ಮತ್ತು ಕೋಮುವಾದ ಎಂಬ ಪರಿಭಾಷೆಗಳು ಕೇವಲ ಚುನಾವಣಾ ತಂತ್ರಗಳಷ್ಟೇ’ ಎಂದು ಪಾಸ್ವಾನ್ ಈಗ ಸಮರ್ಥಿಸಿಕೊಂಡಿದ್ದಾರೆ. ಅವರ ಈ ಸಮರ್ಥನೆ ಅವಕಾಶವಾದಿ ರಾಜಕಾರಣದ ಪ್ರತಿಬಿಂಬದಂತೆ ಕಂಡರೂ, ಅದರ ಆಳದಲ್ಲಿ ಕಹಿ ವಾಸ್ತವ ಇರುವುದನ್ನು ತಳ್ಳಿ ಹಾಕುವಂತಿಲ್ಲ.
ಕಾಂಗ್ರೆಸ್ ಟಿಕೆಟ್‌ನಿಂದ ವಂಚಿತರಾಗಿರುವ ಜಾಫರ್ ಶರೀಫ್ ಕೂಡ ‘ಮೋದಿ ನನಗೆ ಅಸ್ಪೃಶ್ಯರಲ್ಲ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದೇ ಶರೀಫ್ ಬಿಜೆಪಿಯನ್ನು ಅದೆಷ್ಟು ಬಾರಿ ಕೋಮುವಾದಿಯೆಂದು ಹಿಗ್ಗಾಮುಗ್ಗ ಜರೆದಿದ್ದರು ಎಂಬ ಲೆಕ್ಕ ಶರೀಫರಿಗೇ ಗೊತ್ತಿರಲಿಕ್ಕಿಲ್ಲ! ಕಾಂಗ್ರೆಸ್ ಟಿಕೆಟ್ ಒಂದು ವೇಳೆ ಅವರಿಗೆ ದೊರಕಿದ್ದರೆ ಅವರ ಪಾಲಿಗೆ ಮೋದಿ ಅಸ್ಪೃಶ್ಯರಾಗಿಯೇ ಉಳಿದು ಕೋಮುವಾದಿ ಎಂಬ ಪಟ್ಟಕ್ಕೆ ಭಾಜನರಾಗಿರುತ್ತಿದ್ದರು!
ಸುಮಾರು ೩ ದಶಕಗಳ ಕಾಲ ಲಾಲೂ ಪ್ರಸಾದ್ ಆಪ್ತರಾಗಿದ್ದ , ಅವರ ಬಲಗೈ ಬಂಟರೆನಿಸಿದ್ದ ಬಿಹಾರದ ರಾಮ್‌ಕೃಪಾಲ್ ಯಾದವ್ ಮೊನ್ನೆ ಮೊನ್ನೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಲಾಲೂ ಪ್ರಸಾದರ ಆರ್‌ಜೆಡಿ ಪಕ್ಷದಿಂದ ಕೃಪಾಲ್‌ಗೆ ಈ ಬಾರಿ ಪಾಟಲೀಪುತ್ರದಿಂದ ಟಿಕೆಟ್ ಸಿಗಲಿಲ್ಲ. ಅದೇ ಕಾರಣಕ್ಕೆ ಅವರು ಬಿಜೆಪಿ ಸೇರಿರುವುದು. ಆರ್‌ಜೆಡಿ ಪಕ್ಷದಲ್ಲಿದ್ದಾಗ ಕೃಪಾಲ್ ಅದೆಷ್ಟು ಬಾರಿ ಬಿಜೆಪಿ ವಿರುದ್ಧ ಕೆಂಡ ಕಾರಿದ್ದರು ಎಂಬುದನ್ನು ಲೆಕ್ಕವಿಟ್ಟವರಿಲ್ಲ. ಆದರೀಗ ಕೃಪಾಲ್ ದೃಷ್ಟಿಯಲ್ಲಿ ಬಿಜೆಪಿ ಅತ್ಯುತ್ತಮ ಪಕ್ಷವೆನಿಸಿದೆ!
ಮೊನ್ನೆ ಮೊನ್ನೆ ಲೋಕಸಭೆ ವಿಸರ್ಜನೆಯಾಗುವ ತನಕವೂ ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಸಚಿವೆಯಾಗಿ ಎಲ್ಲ ಬಗೆಯ ಸುಖ ಸೌಕರ್ಯ ಅನುಭವಿಸಿದ ಆಂಧ್ರದ ದಗ್ಗುಬಾಟಿ ಪುರಂದರೇಶ್ವರಿ ಇದೀಗ ಬಿಜೆಪಿಗೆ ಸೇರಿ ಕಮಲಕ್ಕೆ ಜೈ ಎಂದಿದ್ದಾರೆ. ವಿಶಾಖಪಟ್ಟಣದಿಂದ ಬಿಜೆಪಿ ಟಿಕೆಟ್ ಪಡೆದು ಆಕೆ ಸ್ಪರ್ಧಿಸುವ ಸಂಭವ ಇದೆ.
ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ದೇವೇಗೌಡರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ತೇಜಸ್ವಿನಿ ರಮೇಶ್ ಕೂಡ ಈಗ ಬಿಜೆಪಿಗೆ ಸೇರಿದ್ದಾರೆ. ಟಿವಿ ಚರ್ಚೆಗಳಲ್ಲಿ, ಕಾಂಗ್ರೆಸ್ ವೇದಿಕೆಗಳಲ್ಲಿ ಅವರು ಅದೆಷ್ಟೋ ಬಾರಿ ಬಿಜೆಪಿಯನ್ನು ಹಿಗ್ಗಾಮುಗ್ಗ ಟೀಕಿಸಿದ್ದರು. ಒಂದು ವರ್ಷದ ಹಿಂದೆಯೇ ತಾನು ಬಿಜೆಪಿಗೆ ಸೇರಬೇಕಾಗಿತ್ತು ಎಂದೂ ಅಲವತ್ತುಕೊಂಡಿದ್ದಾರೆ. ಬಹುಶಃ ಆಗಲೇ ಬಿಜೆಪಿಗೆ ಸೇರಿದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಅಥವಾ ಇನ್ನಾವುದಾದರೂ ಕ್ಷೇತ್ರದ ಲೋಕಸಭೆಯ ಟಿಕೆಟ್ ಖಾತ್ರಿಯಾಗುತ್ತಿತ್ತೇನೋ!
ಮಂಗಳೂರು ಲೋಕಸಭಾ ಕ್ಷೇತ್ರದಿಂದ ೪ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಕೇಂದ್ರದಲ್ಲಿ ಸಚಿವರೂ ಆಗಿದ್ದ ಧನಂಜಯ ಕುಮಾರ್ ಅನಂತರ ಆಡ್ವಾಣಿಯಾದಿಯಾಗಿ ಹಿರಿಯ ಬಿಜೆಪಿ ನಾಯಕರನ್ನು ವಾಚಾಮಗೋಚರ ನಿಂದಿಸಿ ಕೆಜೆಪಿಗೆ ಹೋಗಿದ್ದರು. ಕೆಜೆಪಿಯನ್ನು ಯಡಿಯೂರಪ್ಪ ಇತ್ತೀಚೆಗೆ ಬಿಜೆಪಿಯಲ್ಲಿ ವಿಲೀನಗೊಳಿಸಿದ್ದರೂ ಧನಂಜಯ ಕುಮಾರ್ ಮತ್ತು ಕೆಲವರಿಗೆ ಬಿಜೆಪಿಗೆ ಪ್ರವೇಶ ಸಿಗಲಿಲ್ಲ. ಇದರಿಂದ ಕುಪಿತರಾದ ಧನಂಜಯ ಕುಮಾರ್ ಈಗ ಜೆಡಿಎಸ್‌ಗೆ ಹಾರುವ ಸನ್ನಾಹದಲ್ಲಿದ್ದಾರೆ. ಜೆಡಿಎಸ್ ಅವರೊಂದಿಗೆ ೩ ಸುತ್ತಿನ ಮಾತುಕತೆ ನಡೆಸಿದ್ದು , ಅವರ ‘ತಪ್ಪು’ಗಳೆಲ್ಲವನ್ನೂ ಮನ್ನಿಸಿ ಉಡುಪಿಯಿಂದ ಟಿಕೆಟ್ ಕೊಡುವ ಹವಣಿಕೆಯಲ್ಲಿದೆ. ಧನಂಜಯ ಕುಮಾರ್ ಬಿಜೆಪಿಯಲ್ಲಿದ್ದಾಗ ಕೋಮುವಾದಿಯಾಗಿದ್ದರು. ಬಿಜೆಪಿ ತೊರೆದ ಬಳಿಕ ಅವರೀಗ ದೇವೇಗೌಡರಿಗೆ ಸೆಕ್ಯುಲರ್‌ವಾದಿಯಾಗಿ ಕಾಣಿಸಿಕೊಳ್ಳುತ್ತಿರುವುದರ ಮರ್ಮ ಏನೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಲೋಕಸಭೆಗೆ ಹೆಚ್ಚು ಕಡಿಮೆ ತನ್ನೆಲ್ಲ ಅಭ್ಯರ್ಥಿಗಳನ್ನು ಘೋಷಿಸಿದ್ದರೂ ಜೆಡಿಎಸ್ ಮಾತ್ರ ಈಗಲೂ ಸುಮಾರು ೧೬ ಕ್ಷೇತ್ರಗಳ ಅಭ್ಯರ್ಥಿಗಳಿಗಾಗಿ ತಡಕಾಡುತ್ತಿದೆ. ಕಾಂಗ್ರೆಸ್, ಬಿಜೆಪಿ ತ್ಯಜಿಸುವ ಅತೃಪ್ತರಿಗಾಗಿ ಅದು ಹೊಂಚು ಹಾಕುತ್ತಿದೆ. ಪತ್ರಿಕೆಯೊಂದರಲ್ಲಿ ಈ ಕುರಿತು ಒಂದು ವ್ಯಂಗ್ಯಚಿತ್ರ ಕೂಡ ಪ್ರಕಟವಾಗಿತ್ತು. ‘ಯಾರು ಹೇಳಿದ್ದು ಜೆಡಿಎಸ್‌ನಲ್ಲಿ ಯೋಗ್ಯರಿಲ್ಲವೆಂದು? ಬಾ, ಕುಮಾರ ನೀನು ಬಿಜೆಪಿ ಕಡೆ ಹೋಗು. ನಾನು ಕಾಂಗ್ರೆಸ್ ಕಡೆ ಹುಡುಕ್ತೀನಿ’ ಎಂದು ದೇವೇಗೌಡರು ಪುತ್ರ ಕುಮಾರಸ್ವಾಮಿಗೆ ಅಪ್ಪಣೆ ಕೊಡಿಸುತ್ತಿರುವ ಆ ವ್ಯಂಗ್ಯಚಿತ್ರ ಜೆಡಿಎಸ್‌ನ ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿದಿದೆ. ಕಾಂಗ್ರೆಸ್ ಹಾಗೂ ಬಿಜೆಪಿಗಳಿಂದ ಸಮಾನ ಅಂತರ ಕಾಯ್ದುಕೊಳ್ಳುವುದೇ ತಮ್ಮ ಗುರಿ ಎಂದು ಪದೇಪದೇ ಹೇಳುವ ಗೌಡರು ಆ ಪಕ್ಷಗಳ ಅತೃಪ್ತರಿಗೆ ಮಣೆ ಹಾಕುವುದು ಅವರ ಹಾಗೂ ಅವರ ಪಕ್ಷದ ‘ಯೋಗ್ಯತೆ’ಯನ್ನು ಸಾದರಪಡಿಸಿದೆ.
ಇತ್ತೀಚೆಗೆ ಬಿಜೆಪಿಗೆ ಸೇರಿರುವ ಖ್ಯಾತ ದಲಿತ ನಾಯಕ ಡಾ.ಉದಿತ್‌ರಾಜ್ ಸಂದರ್ಶನವೊಂದರಲ್ಲಿ ಹೇಳಿದ್ದರು: ‘ಖ್ಞಿಠಿಜ್ಝಿ ಟ್ಞಛಿ ಜಿo ಡಿಜಿಠಿe ಆಒP eಛಿ ಜಿo ಟಞಞ್ಠ್ಞZಜಿoಠಿ Zb ಠಿeಛಿ ಞಟಞಛ್ಞಿಠಿ ಟ್ಞಛಿ ಛಿZqಛಿo, ಟ್ಞಛಿ ಚಿಛ್ಚಿಟಞಛಿo oಛ್ಚ್ಠ್ಝಿZ.’ ಆ ಮಾತು ಮೇಲಿನ ಎಲ್ಲ ನಿದರ್ಶನಗಳ ಸಂದರ್ಭದಲ್ಲೂ ನಿಜವೆನಿಸಿದೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ನಿತೀಶ್‌ಕುಮಾರ್ ಎನ್‌ಡಿಎ ಒಕ್ಕೂಟದಲ್ಲಿರುವವರೆಗೆ ಕೋಮುವಾದಿ ಎನಿಸಿಕೊಂಡಿದ್ದರು. ಆದರೆ ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದೊಗೆದ ಬಳಿಕ ಮುಸ್ಲಿಮರ ದೃಷ್ಟಿಯಲ್ಲಿ ಅವರು ಸೆಕ್ಯುಲರ್ ಎನಿಸಿಕೊಂಡಿರುವುದಕ್ಕೂ ಇದೇ ಹಿನ್ನೆಲೆ.
ಇನ್ಫೋಸಿಸ್‌ನ ಮಾಜಿ ಪ್ರಮುಖ ನಂದನ್ ನೀಲೇಕಣಿ ಈ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ. ಚುನಾವಣೆ ಘೋಷಣೆಯಾದ ಬಳಿಕವೂ ಅವರು ಮಾಧ್ಯಮಗಳಲ್ಲಿ ಆಧಾರ್‌ಕಾರ್ಡ್ ಹಂಚಿಕೆಯ ಸಾಧನೆ ಕುರಿತು ಜಾಹೀರಾತು ನೀಡುತ್ತಲೇ ಇದ್ದರು. ಇದು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಎಂಬ ಪ್ರಾಥಮಿಕ ಜ್ಞಾನವೂ ಅವರಿಗಿರಲಿಲ್ಲ. ‘೪ ವರ್ಷಗಳು ೬೦ ಕೋಟಿ ಆಧಾರ್‌ಕಾರ್ಡ್ ಹಂಚಿಕೆ. ಕೊಟ್ಟ ಮಾತಿಗೆ ತಪ್ಪಲಿಲ್ಲ’ ಎಂಬ ಜಾಹೀರಾತು ನೀಲೇಕಣಿಯವರಿಗೆ ಕಾಂಗ್ರೆಸ್ ಟಿಕೆಟ್ ಖಾತ್ರಿಯಾಗಿದ್ದನ್ನು ಸಾರಿ ಹೇಳುತ್ತಿತ್ತು. ಆದರೆ ಆಧಾರ್ ಕಾರ್ಡ್ ಗತಿ ಏನಾಗಿದೆ ಎಂಬುದು ಈಗ ರಹಸ್ಯವಾದ ವಿಚಾರವಲ್ಲ. ಸುಪ್ರೀಂಕೋರ್ಟೇ ಆಧಾರ್ ಕಾರ್ಡ್ ಮಾನ್ಯತೆಯನ್ನು ಅಂಗೀಕರಿಸಿಲ್ಲ. ಅನಿಲ ಸಿಲಿಂಡರ್, ಪಡಿತರ ಚೀಟಿ ಮತ್ತಿತರ ಅಗತ್ಯ ಸಂಗತಿಗಳಿಗೆ ಆಧಾರ್ ಅಗತ್ಯವಿಲ್ಲ ಎಂದು ಕೋರ್ಟು ಸಾರಿದೆ. ಇಷ್ಟಕ್ಕೂ ಆಧಾರ್ ಕಾರ್ಡ್ ಹಂಚಿಕೆಯಲ್ಲಿ ನೀಲೇಕಣಿಯವರ ಸಾಧನೆ ಏನೆಂಬುದೇ ಅರ್ಥವಾಗುತ್ತಿಲ್ಲ. ಆಧಾರ್ ಯೋಜನೆಗೆ ಕೇಂದ್ರ ಸರ್ಕಾರ ಸುಮಾರು ೧,೫೦,೦೦೦ ಕೋಟಿ ರೂ. ವೆಚ್ಚ ಮಾಡಿತ್ತು.ಅದೂ ಅಲ್ಲದೆ ಆಧಾರ್‌ಗೆ ಸಂಬಂಧಿಸಿದ ಬಹುತೇಕ ಮಾಹಿತಿಗಳನ್ನು ಸಂಗ್ರಹಿಸುವ ಜವಾಬ್ದಾರಿ ಹೊತ್ತಿದ್ದು ಅಮೆರಿಕ ಮೂಲದ ಒಂದು ಕಂಪೆನಿ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ವಾಣಿಜ್ಯ ಉzಶಗಳಿಗೆ ಬಹಿರಂಗಪಡಿಸುವಂತಿಲ್ಲ. ಆದರೆ ಸರ್ಕಾರದ ಏಜೆನ್ಸಿಗಳು ಈ ಮಾಹಿತಿಗಳನ್ನು ದುರುಪಯೋಗಪಡಿಸಿಕೊಂಡಿವೆ. ಬಾಂಗ್ಲಾದೇಶದ ಅಕ್ರಮ ನುಸುಳುಕೋರರಿಗೂ ಆಧಾರ್ ಕಾರ್ಡ್ ದೊರೆತಿದೆ. ಆಧಾರ್ ಕಾರ್ಡ್‌ಗೆ ಆಧಾರವೇ ಇಲ್ಲದಂತಾಗಿದೆ. ಇಷ್ಟಕ್ಕೂ ಈ ಯೋಜನೆ ನಿರ್ವಹಿಸಿದ್ದಕ್ಕೆ ನೀಲೇಕಣಿಯವರಿಗೆ ಸರ್ಕಾರ ಕೈತುಂಬಾ ಸಂಬಳವನ್ನೂ ಕೊಟ್ಟಿದೆ. ಅವರೇನೂ ಅದನ್ನು ಪುಕ್ಕಟೆಯಾಗಿ ನಿರ್ವಹಿಸಿಲ್ಲ. ಆದರೆ ಈಗ ದೇಶದಲ್ಲಿ ಆಧಾರ್ ಕಾರ್ಡ್ ಯಶಸ್ವಿಗೆ ತನ್ನ ಸೇವೆಯೇ ಕಾರಣ ಎಂದು ಪ್ರಚಾರ ಭಾಷಣದಲ್ಲಿ ನೀಲೇಕಣಿ ಕೊಚ್ಚಿಕೊಳ್ಳುತ್ತಿರುವುದು ಎಂತಹ ವಿಪರ್ಯಾಸ! ಮತದಾರರನ್ನು ಮುಠ್ಠಾಳರೆಂದು ಭಾವಿಸಿರುವ ಅವರನ್ನು ಲೋಕಸಭೆಗೆ ಕಳುಹಿಸಬೇಕೋ ಅಥವಾ ಮನೆಗೆ ಕಳುಹಿಸಬೇಕೋ ಎಂಬುದನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರು ನಿರ್ಧರಿಸಬೇಕಾಗಿದೆ.
ಪಕ್ಷದ ಹೆಸರಿನಲ್ಲೇ ಜಾತ್ಯತೀತತೆಯನ್ನು ಅಳವಡಿಸಿಕೊಂಡಿರುವ ಜಾತ್ಯತೀತ ಜನತಾ ಪಕ್ಷ (ಜೆಡಿಎಸ್) ಈ ಹಿಂದೆ ‘ಕೋಮುವಾದಿ’ ಬಿಜೆಪಿ ಜೊತೆ ಕೈಜೋಡಿಸಿ ಸಮ್ಮಿಶ್ರ ಸರ್ಕಾರ ರಚಿಸುವ ಸಂದರ್ಭ ಬಂದಾಗ, ‘ಶೇ. ೧೦೦ರಷ್ಟು ಜಾತ್ಯತೀತರು ಯಾರಿದ್ದಾರೆ ಹೇಳಿ?’ ಎಂದು ಆಗ ಮುಖ್ಯಮಂತ್ರಿ ಪಟ್ಟಕ್ಕೇರಿದ್ದ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಬಿಜೆಪಿ ಜತೆ ಕೈಜೋಡಿಸಿದ್ದಕ್ಕೆ ಸಮರ್ಥನೆ ಕೊಟ್ಟು ಕೊಂಡಿದ್ದರು. ಇದು ಕೂಡ ಜನರ ಮನಸ್ಸಿನಿಂದ ಮರೆತು ಹೋಗಿರಲಿಕ್ಕಿಲ್ಲ. ಜಾತ್ಯತೀತತೆಯ ಪರಿಭಾಷೆ ಮೇಲೆದ್ದಾಗಲೆಲ್ಲ ಉಳಿದೆಲ್ಲ ರಾಜಕೀಯ ಪಕ್ಷಗಳು ಅದರ ಹಕ್ಕುದಾರರಂತೆ ತಮ್ಮನ್ನು ಬಿಂಬಿಸಿಕೊಳ್ಳುವುದು ನಮ್ಮ ದೇಶದಲ್ಲಿ ವಾಡಿಕೆಯೇ ಆಗಿಬಿಟ್ಟಿದೆ. ಅದೇ ರೀತಿ ದೇಶದ ಯಾವ ರಾಜಕೀಯ ಪಕ್ಷವೂ ಜಾತಿಯನ್ನು ಮತ್ತು ಅದು ತಂದು ಕೊಡುವ ಪ್ರಯೋಜನಗಳನ್ನು ಬಿಟ್ಟು ಕೊಡಲು ಸಿದ್ಧವಿಲ್ಲ ಎಂಬುದೂ ಅಪ್ರಿಯ ಸತ್ಯ. ಜಾತ್ಯತೀತತೆ, ಅಸಮಾನತೆಯ ನಿವಾರಣೆ, ಅಭಿವೃದ್ಧಿ ಎಂಬಂಥ ತೂಕದ ಶಬ್ದಗಳು ಮೇಲ್ನೋಟಕ್ಕೆ ಮಾತಿನಲ್ಲಿ ಗೋಚರಿಸುತ್ತವೆಯೇ ಹೊರತು ಆಚರಣೆಯಲ್ಲಿಲ್ಲ. ಜಾತ್ಯತೀತತೆಯ ಕುರಿತು ಮಾರುದ್ದದ ಭಾಷಣ ಬಿಗಿಯುವವರು ಅಧಿಕಾರದಲ್ಲಿರುವಾಗ ಅದನ್ನು ಆಚರಣೆಗೆ ತರುವ ಗೋಜಿಗೇ ಹೋಗದಿರುವುದು ಅವರ ಮಾತಿನ ಪೊಳ್ಳುತನಕ್ಕೆ ಸಾಕ್ಷಿ. ಕೇವಲ ಬಾಯುಪಚಾರಕ್ಕೆ ಜಾತ್ಯತೀತತೆ, ಅಸಮಾನತೆಯ ನಿವಾರಣೆ ಎಂಬ ಪದಗಳನ್ನು ಉದುರಿಸಿಬಿಟ್ಟರೆ ಸಾಮಾಜಿಕ ಬದಲಾವಣೆ ಸಾಧ್ಯವೆ ಎನ್ನುವ ಪ್ರಶ್ನೆಯನ್ನು ಇಂತಹ ಮುಖಂಡರಿಗೆ ನಾವ್ಯಾರೂ ಕೇಳುವಂತಿಲ್ಲ. ಏಕೆಂದರೆ ಅವರು ಎಲ್ಲ ಕಾಲಕ್ಕೂ ಜಾತ್ಯತೀತರಾಗಿಯೇ ಇರುತ್ತಾರೆ ಎನ್ನುವಂತಿಲ್ಲವಲ್ಲ.
ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ನಾಯಕಮಣಿಗಳು ಅದಕ್ಕೆ ನೀಡುವ ಸಮರ್ಥನೆಗಳು ಏನೇ ಇರಲಿ, ಅದೆಷ್ಟೇ ತೂಕದ್ದಾಗಿರಲಿ ಅದರ ಹಿಂದಿರುವುದು ಅನುಕೂಲಸಿಂಧು ರಾಜಕಾರಣವೇ ಹೊರತು ಮತ್ತೇನೂ ಅಲ್ಲ. ಈ ಪಕ್ಷದ ತತ್ವಾದರ್ಶ, ಮೌಲ್ಯಗಳನ್ನು ಮೆಚ್ಚಿ ನಾನು ಸೇರಿಕೊಂಡೆ ಎನ್ನುವ ರಾಜಕಾರಣಿಗೆ ಅಸಲಿಗೆ ಆ ಪಕ್ಷದ ತತ್ವಾದರ್ಶ, ಮೌಲ್ಯಗಳೇನು ಎಂಬುದೇ ತಿಳಿದಿರುವುದಿಲ್ಲ. ಹಿಂದೆ ತಾನಿದ್ದ ಪಕ್ಷದ ತತ್ವಾದರ್ಶಗಳ ಅರಿವೂ ಇರುವುದಿಲ್ಲ. ಮುಖ್ಯವಾಗಿ ತತ್ವಾದರ್ಶ, ಮೌಲ್ಯಗಳನ್ನು ಕಟ್ಟಿಕೊಂಡು ಇಂಥವರಿಗೆ ಆಗಬೇಕಾದ್ದು ಏನೂ ಇರುವುದಿಲ್ಲ. ಹೇಗಾದರೂ ಅಧಿಕಾರದ ಗದ್ದುಗೆ ಹಿಡಿಯಬೇಕು, ಅದಕ್ಕಾಗಿ ತಮ್ಮ ತಮ್ಮ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಲು ಇಂಥವರು ಹೇಸುವುದಿಲ್ಲ. ಅಂಥವರನ್ನು ಕೈಹಿಡಿದು ಬರಮಾಡಿಕೊಳ್ಳುವವರಿಗೂ ಮುಜುಗರವೆನಿಸುವುದಿಲ್ಲ. ದೇಶದಲ್ಲಿ ಮೌಲ್ಯಾಧಾರಿತ ರಾಜಕೀಯ ಬದಲಾವಣೆ ಈ ಬಾರಿ ಆಗಲೇಬೇಕು ಎಂಬ ಕೂಗು ಎದ್ದಿರುವುದೇನೋ ಸರಿ. ಆದರೆ ಅನುಕೂಲಸಿಂಧು ರಾಜಕಾರಣಿಗಳಿಂದ ಇಂತಹ ಬದಲಾವಣೆ ಆಗುವುದಾದರೂ ಹೇಗೆ ಸಾಧ್ಯ?
: ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ನಾಯಕಮಣಿಗಳು ಅದಕ್ಕೆ ನೀಡುವ ಸಮರ್ಥನೆಗಳು ಏನೇ ಇರಲಿ, ಅದೆಷ್ಟೇ ತೂಕದ್ದಾಗಿರಲಿ ಅದರ ಹಿಂದಿರುವುದು ಅನುಕೂಲಸಿಂಧು ರಾಜಕಾರಣವೇ ಹೊರತು ಮತ್ತೇನೂ ಅಲ್ಲ.