ಚಾಮರಾಜನಗರ: ‘ಹತ್ತಾರು ಜಾತಿ ಪದ್ಧತಿಗಳು ನಮ್ಮ ದೇಶದ ಸಾಮಾಜಿಕ ವೈವಿಧ್ಯವೇನೋ ಸರಿ, ಆದರೆ ಈ ಮೂಲಕ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಮೇಲು-ಕೀಳು, ಸ್ಪೃಶ್ಯ- ಅಸ್ಪೃಶ್ಯ ಇತ್ಯಾದಿ ವಿಘಟನಕಾರಿ ಮನೋಭಾವವನ್ನು ತೊಡೆದು ಹಾಕಿ ಸಾಮರಸ್ಯ ಭರಿತ, ಸಬಲ ಹಿಂದೂ ಸಮಾಜವನ್ನು ಕಟ್ಟುವುದೇ ಸಂಘದ ಅದ್ಯತೆಗಳಲ್ಲೊಂದು. ಕಳೆದ 90 ವರ್ಷಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಆರೆಸ್ಸೆಸ್ ಕೊಡುಗೆ ಅನನ್ಯ ‘ ಎಂದು ಆರೆಸ್ಸೆಸ್ ರಾಜ್ಯ ಮಾಧ್ಯಮ ವಿಭಾಗ ‘ವಿಶ್ವ ಸಂವಾದ ಕೇಂದ್ರ’ದ ರಾಜೇಶ್ ಪದ್ಮಾರ್ ಹೇಳಿದ್ದಾರೆ.
ಚಾಮರಾಜನಗರದ ಸಂತೇಮರಹಳ್ಳಿಯ ಜೆ.ಎಸ್.ಎಸ್ ಕಾಲೇಜಿನ ಆವರಣದಲ್ಲಿ ಅಕ್ಟೋಬರ್ 12 ರಂದು ಜರಗಿದ ಜಿಲ್ಲಾ ಆರೆಸ್ಸೆಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಜಾತಿ ಮೀರಿ ಹಿಂದೂ ಆಗಿ:
‘ಸಂಘಟಿತ ಸಮಾಜವೇ ಆ ದೇಶದ ಸುರಕ್ಷೆಯನ್ನು ನಿರ್ಧರಿಸುವುದು. ನಮ್ಮೊಳಗಿನ ಬಿರುಕಿನ ಲಾಭವನ್ನು ಅನ್ಯಮತೀಯರು ಬಳಸಿದ್ದರ ಪರಿಣಾಮವಾಗಿ ದೇಶದಲ್ಲಿ ವ್ಯಾಪಕ ಮತಾಂತರ ಚಟುವಟಿಕೆಗಳು ನಡೆಯಿತು. ಕೇರಳ, ನಾಗಲ್ಯಾಂಡ್ ಮುಂತಾದ ರಾಜ್ಯಗಳಲ್ಲಿ ಹಿಂದೂ ಜನಸಂಖ್ಯೆಯಲ್ಲಿ ಅಲ್ಪಸಂಖ್ಯೆಯಲ್ಲಿದೆ. ಇಂದು ಸಂಘದ ಸ್ವಯಂಸೇವಕರು ದೇಶದುದ್ದಗಲ ಜಾತೀಯ ವಿಷಮತೆಯನ್ನು ನಿವಾರಿಸಿ ಏಕತೆ, ಸಾಮರಸ್ಯ ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ. ಜಾತಿ ಮೀರಿ ಹಿಂದೂ ಆಗಿ ಯೋಚಿಸುವ ಮಾನಸಿಕತೆಯನ್ನು ಸಂಘದ ವಾತಾವರಣ ಕಲಿಸಿ ಕೊಡುತ್ತದೆ’ ಎಂದು ಸಾಮಾಜಿಕ ಸಾಮರಸ್ಯದ ಅಗತ್ಯ, ಈ ನಿಟ್ಟಿನಲ್ಲಿ ಸಂಘದ ಪ್ರಯತ್ನಗಳನ್ನು ಉಲ್ಲೇಖಿಸಿದರು.
ಚಾಮರಾಜನಗರದ ಪ್ರಸಿದ್ಧ ವೈದ್ಯ ಡಾ. ಎ ಆರ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ಮೈಸೂರು ವಿಭಾಗ ಸಂಘಚಾಲಕ್ ಡಾ. ವಾಮನ ರಾವ್ ಬಾಪಟ್, ವರ್ಗದ ಶಿಬಿರಾಧಿಕಾರಿ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
139 ಶಿಬಿರಾರ್ಥಿಗಳು ಪ್ರಾಥಮಿಕ ಶಿಕ್ಷಾ ವರ್ಗದಲ್ಲಿ ಭಾಗವಹಿಸಿದ್ದರು. ಸಂತೇಮರಹಳ್ಳಿಯ ರಸ್ತೆಗಳಲ್ಲಿ ಸ್ವಯಂಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು.