ಬೆಂಗಳೂರು, ಡಿಸೆಂಬರ್ 1, 2015: ಧಾರ್ಮಿಕ ಸೇವಾ ಸಂಸ್ಥೆಗಳು ನಡೆಸುತ್ತಿರುವ ರಚನಾತ್ಮಕ ಸಾಮಾಜಿಕ-ಸೇವಾ ಕಾರ್ಯಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಹಿಂದು ಸ್ಪಿರಿಚ್ಯುವಲ್ ಆಂಡ್ ಸರ್ವೀಸಸ್ ಫೌಂಡೇಷನ್ ಸಂಸ್ಥೆಯು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 9 ರಿಂದ 13 ರ ವರೆಗೆ ’ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳ’ವನ್ನು ಆಯೋಜಿಸಿದೆ.
ಐದು ದಿನಗಳ ಕಾಲ ನಡೆಯಲಿರುವ ಈ ಮೇಳವನ್ನು ಡಿ. 9 ರಂದು ಸಂಜೆ5.15 ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಉದ್ಘಾಟಿಸುವರು. ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸುವರು. ಖ್ಯಾತ ಚಿಂತಕ, ಲೇಖಕ ಎಸ್. ಗುರುಮೂರ್ತಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಅಂದು ಮಧ್ಯಾಹ್ನ 2 ರಿಂದ 3ರ ವರೆಗೆ ಮಾತೃವಂದನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಕನಕಗಿರಿ ಮಠದ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಕಲಬುರ್ಗಿಯ ಬೌದ್ಧವಿಹಾರದ ಶ್ರೀ ಸಂಗಾನಂದ ಬಂತೆ, ಇಸ್ಕಾನ್‌ನ ಅಧ್ಯಕ್ಯ ಶ್ರೀ ಮಧುಪಂಡಿತ ದಾಸ, ಗುರುದ್ವಾರದ ಮುಖ್ಯಗ್ರಂಥಿ ಶ್ರೀ ಜ್ಞಾನಿ ಬಲದೇವ ಸಿಂಗ್, ಕೆರೂರಿನ ಶಾರದಾ ನಿಕೇತನದ ಶ್ರೀ ಯತೀಶ್ವರಿ ನೀಲಕಂಠಪ್ರಿಯ ಅವರು ದಿವ್ಯ ಸಾನ್ನಿಧ್ಯ ವಹಿಸುವರು. ಸಂಜೆ ೭ ರಿಂದ ೯ರ ವರೆಗೆ ಸ್ನೇಹ ಕಪ್ಪಣ್ಣ ಮತ್ತು ತಂಡದವರಿಂದ ವಿಶೇಷ ಭರತನಾಟ್ಯ ಕಾರ್ಯಕ್ರಮ ಭರತೋತ್ಸವ ನಡೆಯಲಿದೆ.
ಡಿ. ೧೦ರಂದು ಬೆಳಗ್ಗೆ ೧೧ ರಿಂದ ೧೨.೩೦ರ ತನಕ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಭವತಾರಿಣೀ ವಿವೇಕಮಯೀ ಮಾತಾಜೀ, ಶಿಕ್ಷಣ ತಜ್ಞ ಡಾ. ಕೆ. ಸಮೀರ ಸಿಂಹ ಭಾಗವಹಿಸಲಿದ್ದಾರೆ. ಸಂಜೆ ೭ ರಿಂದ ೯ ರ ವರೆಗೆ ಧಾತು ತಂಡದಿಂದ ರಾಜಸೂಯ ಯಾಗ ಕುರಿತ ವಿಶೇಷ ಗೊಂಬೆಯಾಟ ಕಾರ್ಯಕ್ರಮ ನಡೆಯಲಿದೆ.
ಡಿ. ೧೧ರಂದು ಬೆಳಗ್ಗೆ ೧೧ ರಿಂದ ೧೨.೩೦ರ ತನಕ ಗೋ-ಗಂಗಾವಂದನಾ ಕಾರ್ಯಕ್ರಮ ನಡೆಯಲಿದ್ದು, ಚಿತ್ರದುರ್ಗದ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಎನ್‌ಡಿಆರ್‌ಐನ ಪ್ರಧಾನ ವಿಜ್ಞಾನಿ ಡಾ. ಕೆ.ಪಿ. ರಮೇಶ್ ಉಪಸ್ಥಿತರಿರುವರು. ಸಂಜೆ ೭ಕ್ಕೆ ಸಂಗೀತ ಕಟ್ಟಿ ಕುಕರ್ಣಿ ಮತ್ತು ತಂಡದವರಿಂದ ಪರಂಪರಾ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ. ೧೨ರಂದು ಬೆಳಗ್ಗೆ ೧೧ ರಿಂದ ೧೨.೩೦ರ ತನಕ ಪ್ರಕೃತಿವಂದನಾ ಕಾರ್ಯಕ್ರಮದಲ್ಲಿ ಆಯುರ್ ಆಶ್ರಮದ ಸಂತೋಷ್ ಗುರೂಜೀ, ಸಂಸ್ಕೃತ ವಿದ್ವಾಂಸ ಡಾ. ಟಿ.ಎಸ್. ಸತ್ಯವತಿ, ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಉಪಸ್ಥಿತರಿದ್ದರು. ಸಂಜೆ ೭ಕ್ಕೆ ನಿರುಪಮಾ-ರಾಜೇಂದ್ರ ಅವರಿಂದ ಓಜಸ್ ನೃತ್ಯರೂಪಕ ನಡೆಯಲಿದೆ.
ಡಿ. ೧೩ರಂದು ಬೆಳಗ್ಗೆ ೧೧ ರಿಂದ ೧೨.೩೦ರ ತನಕ ಪರಮವೀರ ವಂದನಾ ಕಾರ್ಯಕ್ರಮ ನಡೆಯಲಿದ್ದು, ಆರ್ಟ್ ಆಫ್ ಲಿವಿಂಗ್‌ನ ಶ್ರಿ ರವಿಶಂಕರ್ ಗುರೂಜಿ, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿರುವರು. ಸಂಜೆ ೪.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ, ಬೆಳಗಾವಿ ನಾಗನೂರಿನ ರುದ್ರಾಕ್ಷಿ ಮಠದ ಶ್ರೀ ಸಿದ್ಧರಾಮ ಸ್ವಾಮೀಜಿ, ರಾಮಕೃಷ್ಣ ಮಠದ ಶ್ರೀ ಮಂಗಳನಾಥಾನಂದ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸ್ಕೃತ ಭಾರತೀಯ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್ ಸಮಾರೋಪ ಭಾಷಣ ಮಾಡಲಿದ್ದಾರೆ. ಸಂಜೆ ೭ ರಿಂದ ೯ ರವರೆಗ ಮಂಗಳೂರಿನ ಸನಾತನ ನಾಟ್ಯಾಲಯದಿಂದ ರಾಷ್ಟ್ರ ದೇವೋ ಭವ ನೃತ್ಯ ರೂಪಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಪ್ರತಿದಿನ ಮಧ್ಯಾಹ್ನ ೩ರಿಂದ ೫ರ ವರೆಗೆ ವಿಚಾರ ಸಂಕಿರಣಗಳು ನಡೆಯಲಿದೆ. ಡಿಸೆಂಬರ್ ೯ ರಂದು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ. ನಾಗರಾಜ್ ಅವರು ಸಾಮಾಜಿಕ ಪರಿವರ್ತನಾ ಕೇಂದ್ರವಾಗಿ ದೇವಸ್ಥಾನಗಳು, ಡಿಸೆಂಬರ್ ೧೦ ರಂದು ಸಮರ್ಥನಮ್ ಟ್ರಸ್ಟ್‌ನ ಜಿ.ಕೆ. ಮಹಂತೇಶ ಹಾಗೂ ಸಿಸ್ಕೊ ಸಿಸ್ಟಮ್ ಐಟಿ ಕಂಪೆನಿಯ ನಿರ್ದೇಶಕ ಧರ್ಮೇಂದ್ರ ರಂಗ್ಯನ್ ಕಂಪೆನಿಗಳಿಂದ ಆರ್ಥಿಕ ನೆರವು ಪಡೆಯಲು ಸೇವಾ ಸಂಸ್ಥೆಗಳ ಸಿದ್ಧತೆ, ಡಿಸೆಂಬರ್ ೧೧ ರಂದು ಐಐಎಮ್‌ಬಿಯ ಪ್ರಾಧ್ಯಾಪಕ ಡಾ. ಬಿ. ಮಹದೇವನ್ ಭಗವದ್ಗೀತೆಯಲ್ಲಿ ಪ್ರೇರಣಾದಾಯಿ ನೇತೃತ್ವ, ಡಿಸೆಂಬರ್ ೧೨ ರಂದು ಖ್ಯಾತ ಚಿಂತಕ, ಲೇಖಕ ಎಸ್. ಗುರುಮೂರ್ತಿ ಹಾಗೂ ವಿಹಿಂಪನ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಗೋಪಾಲ ಅವರಿಂದ ಸೇವೆ ಮತ್ತು ಸಾಮರಸ್ಯ – ವಿಷಯಗಳ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ.
ಸೇವಾ ಮೇಳದ ಪ್ರಯುಕ್ತ ಡಿ. ೮ ರಂದು ಸೇವೆಗಾಗಿ ನಡಿಗೆ ಎಂಬ ಬೃಹತ್ ವಾಕಥಾನ್ ನಡೆಯಲಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ಮೂಲಕ ’ಧರ್ಮ ಕ್ವಿಜ್’, ಪೋಸ್ಟರ್ ತಯಾರಿಕೆ, ಪ್ರಬಂಧ-ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ೪ ರಿಂದ ೬ ರ ತನಕ ವಿದ್ಯಾರ್ಥಿಗಳಿಂದ ಯಕ್ಷಗಾನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಸೇವಾ-ಸಂಸ್ಕೃತಿ ಪ್ರದರ್ಶಿನಿ, ಪುಸ್ತಕ ಮಳಿಗೆಗಳು, ಫುಡ್ ಕೋರ್ಟ್, ಸನಾತನ ಧರ್ಮವೃಕ್ಷ ಮುಂತಾದವುಗಳು ಮೇಳದ ವಿಶೇಷ ಆಕರ್ಷಣೆಗಳಾಗಲಿವೆ. ೨೦೦ ಸಂಘಸಂಸ್ಥೆಗಳು ಹಾಗೂ ೨೫೦ಕ್ಕೂ ಅಧಿಕ ಶಾಲೆಗಳು ಈ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿದ್ದಾರೆ.