Hubballi April 8: RSS Sahsarakaryavah Dattatreya Hosabale, Karnataka Governor Vajubhai R Vala along with other prominent functionaries attended the inaugural ceremony of SAMUTKARSH, a new project for training IAS, launched at Hubballi on April 07, Thursday.
ರಾಜ್ಯಪಾಲ ವಾಜುಭಾಯಿ ವಾಲಾ ಸಲಹೆ
ದೇಶದ ಅಭಿವೃದ್ಧಿಗೆ ಪ್ರಾಮಾಣಿಕ-ದಕ್ಷ ಅಧಿಕಾರಿಗಳು ಅವಶ್ಯ
ಹುಬ್ಬಳ್ಳಿ: ದೇಶವನ್ನು ಸಮರ್ಥವಾಗಿ ನಿರ್ಮಾಣ ಮಾಡಲು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ಅವಶ್ಯಕತೆಯಿದೆ ಎಂದು ರಾಜ್ಯಪಾಲ ವಾಜುಭಾಯಿ ವಾಲಾ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ನಾಗರಿಕ ಸೇವೆಗಳಲ್ಲಿ ಉದ್ಯೋಗಾವಕಾಶ ಕುರಿತು ನಾಗರಿಕ ಸೇವಾ ಪರೀಕ್ಷೆ ಪ್ರಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ದೃಷ್ಟಿಯಿಂದ ಆರಂಭವಾದ ಸಮುತ್ಕರ್ಷ ಹೆಸರಿನ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಶಕ್ತಿ ಐಎಎಸ್ ಅಧಿಕಾರಿಗಳಿಂದ ಮಾತ್ರ ಸಾಧ್ಯ. ಯಾವುದೇ ಸರ್ಕಾರ ಉತ್ತಮ ಕಾರ್ಯ ನಿರ್ವಹಿಸಬೇಕಾದರೂ ಅವರ ಮಾರ್ಗದರ್ಶನ ಅವಶ್ಯ. ಹೀಗಾಗಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ರೂಪಿಸುವ ಕೆಲಸವಾಗಬೇಕು. ಅಂತಹ ಸಾಕಷ್ಟು ಅಧಿಕಾರಿಗಳು ನಮ್ಮಲ್ಲಿದ್ದಾರೆ. ಅವರನ್ನು ಜಗೃತಗೊಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಪ್ರಾಮಾಣಿಕತೆ, ಏಕತೆ ಇಲ್ಲದಿರುವುದರಿಂದ ಹಲವರು ನಮ್ಮನ್ನು ಆಳಿದರು. ಮತ್ತೆ ಇದು ಮರುಕಳಿಸಬಾರದು ಎಂದರೆ ಏಕತೆ ಹಾಗೂ ಪ್ರಾಮಾಣಿಕತೆಯ ಅವಶ್ಯಕತೆಯಿದೆ. ಚರಿತ್ರೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ದೇಶದಲ್ಲಿ ಶೇ.೬೫ರಷ್ಟು ಯುವ ಸಮೂಹ ಇದ್ದು, ಯಾರಿಂದಲೂ ದೇಶದ ಶಕ್ತಿ ಕುಗ್ಗಿಸಲು ಸಾಧ್ಯವಿಲ್ಲ. ಅವರಲ್ಲಿ ಚಾರಿತ್ರ್ಯ, ರಾಷ್ಟ್ರೀಯ ಭಾವನೆ ಮೂಡಿಸಬೇಕಾಗಿದೆ. ಪೂರ್ವಜರ ಅನುಕರಣೆ ಅವಶ್ಯ. ಚಾಣಕ್ಯನ ರಾಜ್ಯ ನೀತಿ, ಆರ್ಥಿಕ, ವಾಣಿಜ್ಯ, ವ್ಯವಹಾರ ನೀತಿಗಳ ಮಾರ್ಗದರ್ಶನ ಅಗತ್ಯ. ಬ್ರಿಟಿಷರು ಹಾಕಿಕೊಟ್ಟ ಆಡಳಿತದ ನೀತಿಯನ್ನೇ ಮುಂದುವರೆಸಿಕೊಂಡು ಹೋಗುವ ಅಗತ್ಯತೆ ಇಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಆಡಳಿತ ಬದಲಾಯಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿ, ದೇಶದಲ್ಲಿ ಬೋಲೋ ಭಾರತ ಮಾತಾಕೀ ಜೈ ಎಂದರೆ ದೇಶದ್ರೋಹ ಎಂಬಂತಾಗಿದೆ. ಇದು ಹೀಗೇ ಮುಂದುವರೆದರೆ ದೇಶಕ್ಕೆ ದೊಡ್ಡ ಗಂಡಾಂತರ ತಂದೊಡ್ಡುತ್ತದೆ. ಹೀಗಾಗಿ ಈಗಲೇ ಅದನ್ನು ಕಿತ್ತು ಹಾಕಲು ಮುಂದಾಗಬೇಕು. ಅಂದರೆ ಮಾತ್ರ ದೇಶದಲ್ಲಿ ಹಿಂದೂಗಳು ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ದಕ್ಷತೆ, ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ರಾಷ್ಟ್ರಾಭಿಮಾನವುಳ್ಳವರು ಐಎಸ್‌ನಂತಹ ಉನ್ನತ ಹುದ್ದೆಯಲ್ಲಿರಬೇಕು. ದೇಶದ ಮಣ್ಣಿನ ಗುಣಧರ್ಮ ಅರಿತವರಿಗೆ ಆಡಳಿತ ಚುಕ್ಕಾಣಿ ದೊರೆಯುವಂತಾಗಬೇಕು ಎಂದರು.
ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನಸೌಧ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳ ಮುಂದೆ ಬರೆಯಲಾಗುತ್ತದೆ. ಅದು ಹೃದಯದಲ್ಲಿಯೂ ಇರಬೇಕು. ಭಗವಂತನ ಆರಾಧನೆ ಮಾಡುವ ಸಂದರ್ಭದಲ್ಲಿ ಇರುವ ಮನಸ್ಸು ಸರ್ಕಾರದ ಕೆಲಸ ಮಾಡುವಾಗ ಇರಬೇಕು. ಆದರೆ ಇಂದಿನ ವ್ಯವಸ್ಥೆ ನೋಡಿದರೆ ಅಂತಹ ಮನಃಸ್ಥಿತಿ ಕಂಡು ಬರುತ್ತಿಲ್ಲ. ಎಲ್ಲೆಡೆ ಭ್ರಷ್ಟಾಚಾರ ತಾಂಡವಾಡುತ್ತಿದೆ. ವ್ಯವಸ್ಥೆ ಬದಲಾವಣೆಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಜಗತ್ತಿನಲ್ಲಿ ಭಾರತದ ವೈದ್ಯರು, ವಿಜನಿಗಳು ಹಾಗೂ ಎಂಜನಿಯರ್‌ಗಳಿಗೆ ತುಂಬಾ ಗೌರವ ಸೀಗುತ್ತಿದೆ. ಆದರೆ ಅಧಿಕಾರಿಗಳಿಗೆ ಸಿಗುತ್ತಿಲ್ಲ. ಅದು ಬದಲಾಗಬೇಕು. ಮುಂಬರುವ ದಿನಗಳಲ್ಲಿ ಅದಿಕಾರಿಗಳ ಮಹತ್ವ ತಿಳಿಯುತ್ತದೆ. ಐಎಎಸ್ ಎನ್ನುವುದು ಐಸಿಎಸ್‌ನ ಪಳೆಯುಳಿಕೆ ಆಗಿದೆ. ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕೆ ತಕ್ಕಂತೆ ತರಬೇತಿ ನೀಡುವ ಸಂಸ್ಥೆ ಐಸಿಸ್ ಆಗಿತ್ತು. ಹೀಗಾಗಿ ನಮ್ಮ ಆಡಳಿತಕ್ಕೆ ತಕ್ಕಂತೆ ಬದಲಾಗಬೇಕು ಎಂದರು.
ಈ ಸಂದರ್ಭದಲ್ಲಿ ದೆಹಲಿಯ ಸಂಕಲ್ಪ ಸಂಸ್ಥೆಯ ಸಂಸ್ಥಾಪಕ ಸಂತೋಷ ತನೇಜ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸಂಘಚಾಲಕ ಅರವಿಂದರಾವ್ ದೇಶಪಾಂಡೆ, ಆರೆಸ್ಸೆಸ್‌ನ ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ ಶಂಕರಾನಂದಜೀ, ಬಿಜೆಪಿ ರಾಜಧ್ಯಕ್ಷ ಹಾಗೂ ಸಾಂಸದ ಪ್ರಹ್ಲಾದ ಜೋಶಿ, ಸಾಂಸದ ಸುರೇಶ ಅಂಗಡಿ, ಶಾಸಕ ಅರವಿಂದ ಬೆಲ್ಲದ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಲಕ್ಷ್ಮಣ ಸವದಿ ಸೇರಿದಂತೆ ಇತರರು ಇದ್ದರು.
ಸಮುತ್ಕರ್ಷ ಟ್ರಸ್ಟ್‌ನ ಕಾರ್ಯದರ್ಶಿ ಜಿತೇಂದ್ರ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ವಿನೋದ ದೇಶಪಾಂಡೆ ಸ್ವಾಗತಿಸಿದರು. ಕ.ವಿ.ವಿ ಸಿಂಡಿಕೇಟ್ ಸದಸ್ಯ ಹರ್ಷವರ್ಧನ ಶೀಲವಂತ ನಿರೂಪಿಸಿದರು. ಸಮುತ್ಕರ್ಷ ಟ್ರಸ್ಟ್‌ನ ಅಧ್ಯಕ್ಷ ಡಾ.ಕ್ರಾಂತಿಕಿರಣ ವಂದಿಸಿದರು.