ಬೆಂಗಳೂರು ಫೆಬ್ರವರಿ 20 , 2017: ಕಡಮೆ ಮಾತು, ಕೃತಿಯಲ್ಲಿ ಬದ್ಧತೆ, ಕಠಿಣವಾದ ಸಂಕಲ್ಪಶಕ್ತಿ, ನೇರನಡವಳಿಕೆ ಇವು ಇಂದು ನಮ್ಮನ್ನಗಲಿದ ಮೈ.ಚ. ಜಯದೇವ್ ಅವರ ವಿಶೆಷ ಗುಣಗಳಾಗಿದ್ದವು ಎಂದು ಬೇಲಿಮಠಾಧೀಶ ಶ್ರೀ ಶಿವಾನುಭವಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಸ್ಮರಿಸಿದ್ದಾರೆ.
ಅವರು ಇಂದು (ಫೆ. 20) ಬೆಳಗ್ಗೆ ಅಗಲಿದ ಜಯದೇವ ಅವರಿಗೆ ಬೆಂಗಳೂರಿನ ಶಂಕರಪುರಂನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿ ’ಕೇಶವಕೃಪ’ದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಜಯದೇವ ಅವರಜೊತೆಗಿನ ತಮ್ಮ ಒಡನಾಟಗಳನ್ನು ಸ್ಮರಿಸಿಕೊಂಡು ಮಾತನಾಡಿದರು.
ಕಾಳಿದಾಸ ರಘುವಂಶದ ಮಹಾಕಾವ್ಯದಲ್ಲಿ ಹೇಳಿದಂತೆ ’ಸತ್ಯಾಯ ಮಿತಭಾಷಿಣಾಂ’ ಎನ್ನುವ ರೀತಿಯಲ್ಲಿ ಜಯದೇವ ಅವರು ಇದ್ದರು. ಮಿತವಾದ ಅವರ ಮಾತುಗಳು ಮಂತ್ರ ಆಗುವಂತಿದ್ದವು. ಇದೀಗ ’ಯೋಗೇನಾಂತೇ ತನುತ್ಯಜಾಮ್’ ಎಂಬಕಾಳಿದಾಸನ ನುಡಿಯಂತೆ ಭಗವಂತನಲ್ಲಿ ತಮ್ಮ ಜೀವನವನ್ನು ನಿವೇದಿಸಿಕೊಳ್ಳಲು ಹೋಗಿದ್ದಾರೆ. ಪರಿಪೂರ್ಣತೆಯನ್ನು ಸಾಧಿಸಿದ ಅಪೂರ್ವ ಯೋಗಿಯಾದ ಅವರು ನಮ್ಮ ಹೃದಯಗಳಲ್ಲಿ ಸ್ಫೂರ್ತಿಯಾಗಿ ನಿಲ್ಲುತ್ತಾರೆ. ತಪಸ್ವಿಯಂತಹ ಜೀವನ ಸಾಗಿಸಿದಅವರು ಎಲ್ಲರನ್ನೂ ತಿದ್ದಿದರು; ಬೆಳೆಸಿದರು. ನಮ್ಮೊಳಗೆ ಬೆಳಕಾಗಿ ಉಳಿದ ಅದ್ಭುತ ಚೇತನ ಅವರು ಎಂದವರು ನುಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶಭಕ್ತಿ ಮತ್ತು ಸಂಸ್ಕೃತಿಗಳ ದೊಡ್ಡ ಪ್ರವಾಹದಂತಿದ್ದು, ಜೊತೆಗೆ ಇದರಲ್ಲಿ ನಾವೀನ್ಯ ಕೂಡ ಇದೆ. ಸಂಘದ ಕರ್ನಾಟಕದ ಚಟುವಟಿಕೆಗಳಲ್ಲಿ ಜಯದೇವರ ಪಾತ್ರ ದೊಡ್ಡದು. ಅವರ ಅಗಲುವಿಕೆಯ ಕೊರತೆಯನ್ನುನಾವು ತುಂಬಬೇಕು. ಅವರ ಸಂಕಲ್ಪವು ಯಶಸ್ವಿ ಆಗುವಂತೆ ಶ್ರಮಿಸಭೇಕೆಂದು ಬೇಲಿಮಠಾಧೀಶರು ಸಲಹೆ ನೀಡಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಶ್ರದ್ಧಾಂಜಲಿ ಅರ್ಪಿಸುತ್ತಾ, ತಮ್ಮದು ಸುಮಾರು ೫೦ ವರ್ಷಗಳ ಸಂಬಂಧ-ಸಂಪರ್ಕವಾಗಿದ್ದು, ಅವರು ತಮಗೆ ತಂದೆಯಂತೆ ಮಾರ್ಗದರ್ಶನ ಮಾಡಿದ ಕರ್ಮಯೋಗಿ ಎಂದರು. ಬಹಳಹಿಂದೆ ಸಂಘದ ಶೇಷಾದ್ರಿಪುರಂ ಕಾರ್ಯಾಲಯದಲ್ಲಿ ವಾಸ್ತವ್ಯವಿದ್ದ ಅವರು ಮತ್ತು ತಾನು ಇಬ್ಬರೂ ಬೇರೆ ಉದ್ಯೋಗಕ್ಕೆ ಹೋಗುತ್ತಿದ್ದಾಗ ರಾತ್ರಿ ಇಬ್ಬರೂ ಸಂಘದ ಸ್ವಯಂಸೇವಕರ ಸಂಪರ್ಕಕ್ಕೆ ಮನೆಮನೆಗಳಿಗೆ ಹೋಗುತ್ತಿದ್ದೇವು. ಅದರಲ್ಲಿ ಅವರುಕಟ್ಟುನಿಟ್ಟಾಗಿದ್ದರು. ತಾನು ತಪ್ಪು ದಾರಿಯಲ್ಲಿ ಹೋದಾಗ ಅವರು ತಿದ್ದುತ್ತಿದ್ದರು. ಇಲ್ಲವಾದರೆ ನನಗೆ ಈ ಮಟ್ಟಕ್ಕೆ ಬರಲು ಸಾಧ್ಯಾಗುತ್ತಿರಲಿಲ್ಲ ಎಂದ ಅವರು, ಜಯದೇವರು ಯಾರ ಜೊತೆಗೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಮಧ್ಯದಲ್ಲಿ ತಡೆಯದೇಹೇಳಿದ್ದನ್ನು ತಾಳ್ಮೆಯಿಂದ ಕೇಳುತ್ತಿದ್ದರು. ತಾಳ್ಮೆ ಮತ್ತು ಆತ್ಮೀಯತೆಗಳೇ ಅದಕ್ಕೆ ಕಾರಣ ಎಂದು ತಿಳಿಸಿದರು.
ಏನು ಹೇಳಿದರೂ ನೋಟ್ಬುಕ್ನಲ್ಲಿ ಬರೆದುಕೊಳ್ಳುವುದು ಜಯದೇವರ ಒಂದು ಅಭ್ಯಾಸ. ಅವರ ಪ್ರೇರಣೆಯಿಂದ ತಾನು ಕೂಡ ಅದನ್ನು ಮಾಡುತ್ತಿದ್ದೇನೆ. ಮಿಥಿಕ್ ಸೋಸೈಟಿಯಂತಹ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಇಂದು ಗಟ್ಟಿಯಾಗಿ ನಿಂತಿರಲು ಜಯದೇವಅವರೇ ಕಾರಣ ಎಂದು ಹೇಳಿದ ಅವರು ಜಯದೇವಜೀ ಬಯಸಿದಂತೆ ನಡೆಯುವ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವೆ ಎಂದರು.
ಆರೆಸ್ಸೆಸ್ನ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಗಚಾಲಕರಾದ ವಿ. ನಾಗರಾಜ್ ಅವರು ಮಾತನಾಡಿ, ಸಂಘದ ಧ್ಯೇಯದಂತೆ ಜಯದೇವ ಅವರ ಎಲ್ಲ ಕೆಲಸಗಳಲ್ಲೂ ರಾಷ್ಟ್ರದ ವಿಚಾರವಿತ್ತು. ತಮ್ಮ ಜೀವನವನ್ನು ಅವರು ಮೇಲ್ಪಂಕ್ತಿಯಾಗಿ ತೋರಿಸಿದರು. 47 ವರ್ಷಗಳ ಕಾಲ ಅವರು ತನ್ನನ್ನು ತಿದ್ದಿದರು; ಮತ್ತು ಬೆಳೆಸಿದರು. ಹಲವು ಸಂಧರ್ಭಗಳಲ್ಲಿ ತಾನು ಅವರ ಜೊತೆಗೇ ಸಂಘದ ಜವಾಬ್ದಾರಿಗಳನ್ನು ನಿರ್ವಹಿಸಿದೆ ಎಂದರು.
ಅವರು ನಮ್ಮ ಮನೆಯವರಂತೆಯೇ ಇದ್ದರು. ತುರ್ತುಪರಿಸ್ಥಿತಿಯ ಕಾಲದಲ್ಲಿ ಅವರು ಸೆರೆಮನೆಯಲ್ಲಿದ್ದಾಗ ಅವರ ಭೇಟಿಯ ಸಲುವಾಗಿ ನನ್ನ ತಂಗಿ ಶಾಂತಕ್ಕಳನ್ನು (ಇಂದು ರಾಷ್ಟ್ರ ಸೇವಿಕಾ ಸಮಿತಿಯ ಸಂಚಾಲಿಕಾ) ತಂಗಿ ಎಂದು ದಾಖಲಿಸುವಸಂದರ್ಭವೂ ಬಂದಿತ್ತು. 1970ರ ದಶಕದ ಹೊತ್ತಿಗೆ ಅವರು ಮಹಾನಗರ ಕಾರ್ಯವಾಹ ಮತ್ತು ರಾಷ್ಟ್ರೋತ್ಥಾನ ಪರಿಷತ್ನ ಜವಾಬ್ದಾರಿ ಎರಡನ್ನೂ ಏಕಕಾಲಕ್ಕೆ ನಿರ್ವಹಿಸಿದ್ದರು; ಎರಡಕ್ಕೂ ನ್ಯಾಯ ಒದಗಿಸಿದ್ದರು. ನಮ್ಮ ಎಲ್ಲ ಜವಾಬ್ದಾರಿಗಳನ್ನು ಪಟ್ಟಿಮಾಡುವಂತೆ ಹೇಳುವ ಅವರು ಸಂಘದ ಜವಾಬ್ದಾರಿಯನ್ನು ಅದರ ಮೇಲ್ಭಾಗದಲ್ಲಿ ಬರೆಯುವಂತೆ ಹೇಳುತ್ತಿದ್ದರು. ಈ ಮೂಲಕ ಅವರು ಉಳಿದೆಲ್ಲ ಕಾರ್ಯದ ಜೊತೆಗೆ ಸಂಘ ಕಾರ್ಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂಬುದನ್ನು ನಮಗೆ ಕಲಿಸುತ್ತಿದ್ದರುಎಂದು ವಿ. ನಾಗರಾಜ್ ಅವರು ಹೇಳಿದರು.
ನಾವು ಹೇಳಿದ ಮಾತುಗಳನ್ನೆಲ್ಲ ಅವರು ಸುಮ್ಮನಿದ್ದು ಕೇಳುತ್ತಿದ್ದರು. ಆದರೆ ಕಲ್ಲುಬಂಡೆಯಂತಲ್ಲ. ತಮ್ಮೊಳಗೆ ಆ ಕುರಿತು ಯೋಚಿಸುತ್ತಿದ್ದರು. ಮುಂದೆ ಬೈಠಕ್ ತೆಗೆದುಕೊಂಡು ತಿದ್ದುತ್ತಿದ್ದರು. ಎಲ್ಲ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಅವರಕ್ರಮ. ಎಂಎಲ್ಎ ಸೀಟಿಗಾಗಿ ಅವರ ಬಳಿಬಂದ ಓರ್ವ ಮಹನೀಯರು ಆ ಸ್ಥಾನ ಅಲಂಕರಿಸಲು ತಾನು ಎಷ್ಟು ಅರ್ಹನೆಂದು ಬಗೆಬಗೆಯಾಗಿ ವಿವರಿಸಿದರು. ಬಳಿಕ ನಿಮ್ಮನ್ನು ಬಿಟ್ಟರೆ ಅದಕ್ಕೆ ಯಾರು ಅತ್ಯಂತ ಸೂಕ್ತರು ಎಂದು ಪ್ರಶ್ನಿಸಿದ್ದೂ ಇದೆ.ಬೇಸರದಲ್ಲಿರುವಾಗ ಸಮಾಧಾನ ಹೇಳುವುದೂ ಅವರಿಗೆ ಗೊತ್ತು. ಬಿಕ್ಕಟ್ಟು ನಿರ್ವಹಣೆ (Crisis Management) ಯಲ್ಲಿ ಅವರದ್ದು ಎತ್ತಿದ ಕೈ. ಸಮಸ್ಯೆಯ ಕೇಂದ್ರಕ್ಕೆ ಹೋಗಿ ಅವರು ಪರಿಹಾರ ಸೂಚಿಸುತ್ತಿದ್ದರು. ಸಮಾಜಮುಖಿಗಳಾಗಲುಅವರೇಮೇಲ್ಪಂಕ್ತಿಯಾಗಿದ್ದರು ಎಂದವರು ತಿಳಿಸಿದರು.
ಸ್ವಾಮಿಗಳಿಗೆ ತರಬೇತಿ ನೀಡುವ ಒಂದು ಸಂಸ್ಥೆಗೆ ಭೇಟಿ ನೀಡಿ ಕೆಲವು ದಿನ ಅಲ್ಲಿದ್ದು, ಸ್ವಾಮಿಗಳು ಆಗುವವರಿಗೆ ದೇಶದ ಬಗ್ಗೆ ತಿಳಿಸಬೇಕು; ಆ ಬಗೆಗಿನ ಶಿಕ್ಷಣ ನೀಡಬೇಕು ಎಂದು ಆ ಬಗ್ಗೆ ಸೂಚಿಸಿದ್ದರು. ಹಂಪಿಯಲ್ಲಿ ಪ್ರಾಚ್ಯವಸ್ತುಗಳ ನಾಶಾಗುತ್ತಿದೆಎಂದು ತಿಳಿದಾಗ ಸ್ವತಃ ಅಲ್ಲಿಗೆ ಭೇಟಿ ನೀಡಿ ತಡೆಯುವ ಬಗ್ಗೆ ಸಲಹೆ ನೀಡಿದರು. ಉಡುಪಿಯಲ್ಲಿ ಕನಕಗೋಪುರ ಎಂಬ ವಿವಾದವಾದಾಗ ಸತ್ಯಶೋಧನ ಸಮಿತಿ ರಚಿಸಿ ಅಧ್ಯಯನ ಮಾಡಿ ಪರಿಹಾರ ಸೂಚಿಸಲು ಕ್ರಮಕೈಗೊಂಡಿದ್ದರು. ಆನಸಂಖ್ಯಾಅಸಮತೋಲನದ ಬಗೆಗೂ ಚಿಂತಿತರಾಗಿ ಪರಿಹಾರೋಪಾಯ ಸೂಚಿಸಿದ್ದರು. ಅನಾರೋಗ್ಯಕ್ಕೆ ಗುರಿಯಾಗಿ ಈಚೆಗೆ ಆಸ್ಪತ್ರೆಗೆ ಸೇರುವವರೆಗೂ ಎಲ್ಲ ವಿಷಯಗಳ ಬಗ್ಗೆ ವರದಿ ತರಿಸಿಕೊಳ್ಳುತ್ತಿದ್ದರು. ಮಿಥಿಕ್ ಸೋಸೈಟಿಯ ಅವ್ಯವಸ್ಥೆ ವಿರುದ್ಧ ವರ್ಷಗಟ್ಟಲೆಹೋರಾಡಿ ಸರಿದಾರಿಗೆ ತಂದರು. ತಾನೀಗ ಅಲ್ಲಿ ಗೌರವ ಕಾರ್ಯದರ್ಶಿಯಾಗಿದ್ದೇನೆ. ಗೋಖಲೆ ಸಂಸ್ಥೆ, ಅಭಲಾಶ್ರಮ, ಅನಾಥಶಿಶುವಿಹಾರಗಳಿಗೂ ಅವರ ಸೇವೆ ಸಂದಿದೆ. ಆಯಾ ಸಂಸ್ಥೆಗಳು ಯಾವ ಉದ್ಧೇಶಕ್ಕೆ ಸ್ಥಾಪನೆಯಾಗಿವೆಯೋ ಅದಕ್ಕೆತೊಂದರೆ ಬರಬಾರದು ಎಂಬ ನಿಟ್ಟಿನಲ್ಲಿ ಅವರು ಶ್ರಮಿಸಿದ್ದಾರೆ; ತಮ್ಮ ಕೊಡುಗೆ ನೀಡಿದ್ದಾರೆ. ಒಂದು ಭಾಷಣ ಮಾಡುವುದಾದರೂ ಅಧ್ಯಯನ ಮಾಡಿ ಹೋಗುವುದು ಅವರ ಕ್ರಮ. ಯಾವುದೇ ಸಣ್ಣ ವಿಷಯವನ್ನೂ ಅವರು ಗಮನಿಸದೆ ಬಿಡುವವರಲ್ಲಎಂದು ವಿ. ನಾಗರಾಜ್ ತಮ್ಮ ಒಡನಾಟದ ಅನುಭವಗಳನ್ನು ಹಂಚಿಕೊಂಡರು.
ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಮಾತನಾಡಿ, 1986ರಲ್ಲಿ ತಾನು ಜಯದೇವರ ಸಂಪರ್ಕಕ್ಕೆ ಬಂದೆ. ತಾನು 15-20 ವರ್ಷಗಳಿಂದ ಪರಿಷತ್ನ ಜವಾಬ್ದಾರಿ ನೋಡುತ್ತಿದ್ದರೂ ಸಣ್ಣ ವಿಷಯಗಳಲ್ಲೂಮಾರ್ಗದರ್ಶನ ನೀಡಿ ಬೆಳೆಸಿದವರು ಅವರು ಎಂದರು. ಅವರು ಕೇವಲ ವ್ಯಕ್ತಿಯಲ್ಲ; ಸ್ವತಃ ಒಂದು ಸಂಸ್ಥೆಯಂತಿದ್ದರು. ಯಾರ ಬಗೆಗೂ ಅವರು ನಕಾರಾತ್ಮಕ ಮಾತನ್ನು ಆಡುತ್ತಿರಲಿಲ್ಲ. ಸಕಾರಾತ್ಮಕ ಮಾತು ಮತ್ತು ಒಳ್ಳೆಯ ಸಂಗತಿಗಳನ್ನೇಹೇಳುತ್ತಿದ್ದರು. ನಮ್ಮ ಕೊರತೆಗಳನ್ನು ತಿದ್ದುತ್ತಿದ್ದರು. ತಪ್ಪು ಮಾಡಿದರೆ ಕೂಡಲೇ ಹೇಳುತ್ತಿರಲಿಲ್ಲ; 2-3 ತಿಂಗಳ ಬಳಿಕ ಕರೆದು ಮಾತನಾಡಿ ತಪ್ಪುಗಳನ್ನು ಗಮನಕ್ಕೆ ತರುತ್ತಿದ್ದರು. ವಿವಿಧ ಸಂಸ್ಥೆಗಳು ಅವುಗಳ ಉದ್ದೇಶದಂತೆ ನಡೆಯಲು ಅವರುಶ್ರಮಿಸಿದರು. ಪುಸ್ತಕ ಲೋಕಾರ್ಪಣದಂತಹ ಸಣ್ಣ ಕಾರ್ಯಕ್ರಮವಾದರೂ ಅದರಲ್ಲಿ ಹೊಸತನ ತರುತ್ತಿದ್ದರು. ಭಾರತ-ಭಾರತಿ ಪುಸ್ತಕ ಯೋಜನೆ ಅವರಿಂದಲೇ ಆಯಿತೆಂದು ಸ್ವತಃ ಸಂಪಾದಕ ಎಲ್.ಎಸ್. ಶೆಷಗಿರಿರಾಯರೇ ಹೇಳಿದ್ದರು. ಸಂಸ್ಥೆಯಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದನೇ ದಿನಾಂಕದೊಳಗೆ ವೇತನ ನೀಡಬೇಕೆಂಬುದನ್ನವರು ಕಟ್ಟುನಿಟ್ಟಾಗಿ ಪಾಲಿಸಿ ಮೇಲ್ಪಂಕ್ತಿ ಹಾಕಿದ್ದರು; ಇಂದಿಗೂ ಅದೇ ಪದ್ಧತಿ ನಡೆಯುತ್ತಿದೆ. ಆರ್ಥಿಕ ಶುಚಿತ್ವಕ್ಕೆ ಆದ್ಯತೆ ನೀಡಿ ಸ್ವತಃ ಪಾಲಿಸುತ್ತಿದ್ದರು. ಅವರಜೊತೆಗಿನ ಮಾತುಕತೆ ಒನ್ವೇ ಟ್ರಾಫಿಕ್ ಎನಿಸುತ್ತಿತ್ತು. ನಾವು ಮಾತನಾಡುವಾಗ ಅವರು ಮಾತನಾಡದಿದ್ದರೂ ಆ ಬಗ್ಗೆ ಎಲ್ಲಿ, ಹೇಗೆ ಪ್ರಸ್ತಾಪಿಸಬೇಕು; ತಿದ್ದಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಬಡಿದು, ಗುದ್ದಿ, ಅಕ್ಕಿಮುಡಿ ಮಾಡುವಂತೆ ತಪ್ಪುತಿದ್ದಿ ಕಾರ್ಯಕರ್ತರನ್ನು ರೂಪಿಸುತ್ತಿದ್ದರು ಎಂದು ರಾಷ್ಟ್ರೋತ್ಥಾನ ಪರಿಷತ್ನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಸ್ಮರಿಸಿಕೊಂಡರು.
1965ರಿಂದ ಸುಮಾರು 30 ವರ್ಷಗಳ ಕಾಲ ಅವರು ರಾಷ್ಟ್ರೋತ್ಥಾನ ಪರಿಷತ್ನ್ನು ಮುನ್ನಡೆಸಿದರು. ಕೈಗೊಂಡ ನಿರ್ಣಯಗಳ ದಾಖಲಿಸುವುದು, ವಿವಿಧ ದಾಖಲೆಗಳನ್ನು ಸಂಗ್ರಹಿಸಿ ಇಡುವುದು – ಇದೆಲ್ಲ ಅವರದ್ದು ಅಚ್ಚುಕಟ್ಟಾಗಿತ್ತು. ರಾಷ್ಟ್ರೋತ್ಥಾನದಧ್ಯೇಯವಾಕ್ಯವಾದ ಜನಜಾಗೃತಿ, ಜನಸೇವೆ, ಜನಶಿಕ್ಷಣ – ಎಂಬ ಧ್ಯೇಯವಾಕ್ಯವನ್ನು ನೀಡಿದವರೂ ಅವರೇ. ಸಂಸ್ಥೆ ಈಗ ಅದೇ ದಿಕಕಿನಲ್ಲಿ ಸಾಗುತ್ತಿದೆ ಎಂದು ದಿನೇಶ್ ಹೆಗ್ಡೆ ತಿಳಿಸಿ ತಮ್ಮ ನುಡಿನಮನ ಸಲ್ಲಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ ತಿಪ್ಪೇಸ್ವಾಮಿ ಅವರು ಕಾರ್ಯಕ್ರಮ ನಿರೂಪಿಸಿದರು. ರಾಜ್ಯಪಾಲ ವಝುಬಾಯಿ ವಾಲಾ, ಕೇಂದ್ರ ಸಚಿವರಾದ ಅನಂತ್ಕುಮಾರ್, ಸದಾನಂದಗೌಡ, ಆರೆಸ್ಸೆಸ್ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ಮುಕುಂದ ಸಿ ಆರ್, ಆರೆಸ್ಸೆಸ್ ಹಿರಿಯ ಪ್ರಮುಖರಾದ ಸು ರಾಮಣ್ಣ, ಚಂದ್ರಶೇಖರ ಭಂಡಾರಿ, ಕಾ ಶ್ರೀ ನಾಗರಾಜ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ, ಕರ್ನಾಟಕದ ಮಾಜಿ ಸಚಿವರು, ಶಾಸಕರು, ಸಂಘದ ಹಿರಿಯರು ಸೇರಿದಂತೆ ಸಾವಿರಾರು ಮಂದಿ ಜಯದೇವರ ಅಂತಿಮ ದರ್ಶನ ಪಡೆದರು.