ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಸಮ್ಮೇಳನ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನುಇಂದು ಬೆಳಗ್ಗೆ 8.30ಕ್ಕೆ ಸಂಘದ ಸರಸಂಘಚಾಲಕರಾದ ಮೋಹನ್ ಜಿ ಭಾಗವತ್ ಉದ್ಘಾಟಿಸಿದರು. ಭಾರತಮಾತೆಯ ಭಾವಚಿತ್ರದ ಮುಂದೆ ದೀಪ ಬೆಳಗಿಸಿ, ಪುಷ್ಪಾರ್ಚನೆ ನಂತರ ತೆಂಗಿನ ಸಿಂಗಾರ(ಹೂ)ವನ್ನು ಬಿಚ್ಚುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಸಂಘದ ಸರಕಾರ್ಯವಾಹ ಸುರೇಶ ಜೋಶಿ ಅವರು ಉದ್ಘಾಟನೆಯ ವೇಳೆ ಉಪಸ್ಥಿತರಿದ್ದರು.
ಉದ್ಘಾಟನೆಯ ಹಿನ್ನೆಲೆಯಲ್ಲಿ ವೇದ ವಿಜ್ಞಾನ ಗುರುಕುಲದ ವಿದ್ಯಾರ್ಥಿಗಳಿಂದ ವೇದ ಮಂತ್ರಗಳ ಉದ್ಘೋಷ ಇತ್ತು. ಪ್ರತಿನಿಧಿ ಸಭೆಗೆ ಸರಸಂಘಚಾಲಕರನ್ನು ಪೂರ್ಣಕುಂಭ, ಕೊಂಬು ನಗಾರಿ ಚೆಂಡೆಗಳನ್ನು ಒಳಗೊಂಡ ಪಂಚವಾದ್ಯ ವಾದನದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಅಲಂಕಾರದೊಂದಿಗೆ ಪ್ರತಿನಿಧಿ ಸಭೆಯು ಸಂಪೂರ್ಣವಾಗಿ ಅಲಂಕೃತಗೊಂಡಿದ್ದು ದೇಸೀ ಪರಂಪರೆಗೆ ಇಂಬು ಕೊಡುವಂತಿತ್ತು.
ದೇಶದ ಎಲ್ಲಾ ರಾಜ್ಯಗಳಿಂದ ಸುಮಾರು 12೦೦ ಪ್ರತಿನಿಧಿಗಳು ಈ ರಾಷ್ಟ್ರೀಯ ವಾರ್ಷಿಕ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಮುಖ್ಯವಾಗಿ ಸಂಘದ ಎಲ್ಲ ಪ್ರಮುಖರು, ಸಂಘದ ಪ್ರೇರಣೆಯಿಂದ ಪ್ರಾರಂಭಗೊಂಡು ಸಮಾಜದ ಬಹುತೇಕ ಎಲ್ಲ ವೃತ್ತಿ-ರಂಗಗಳನ್ನು ಆವರಿಸಿರುವ ಸುಮಾರು 34 ವಿವಿಧ ಕ್ಷೇತ್ರಗಳ ಮುಖ್ಯಸ್ಥರು ಈ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಸಭೆಯಲ್ಲಿ ಮೊದಲ ದಿನವಾದ ಇಂದು ಸಂಘದ ಸರಕಾರ್ಯವಾಹರು ವಾರ್ಷಿಕ ವರದಿಯನ್ನು ಪ್ರತಿನಿಧಿ ಸಭೆಯ ಮುಂದೆ ಮಂಡಿಸಿದರು.. ನಂತರ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತವಾಗಿರುವ ಸಂಘಟನೆಗಳ ಸಾಧನೆ, ಸಾಮಾಜಿಕ ಪರಿವರ್ತನೆಗಳ ಕುರಿತು ಆಯಾ ಸಂಘಟನೆಗಳ ಪ್ರಮುಖರು ವರದಿ ನೀಡಿದರು. ಒಟ್ಟಾರೆ ಸಂಘ ಮತ್ತು ಪರಿವಾರ ಸಂಘಟನೆಗಳ ಸಂಘಟನಾತ್ಮಕ ಬೆಳವಣಿಗೆ, ವಿಶೇಷ ಕಾರ್ಯಕ್ರಮ, ಉಲ್ಲೇಖನೀಯ ಘಟನಾವಳಿಗಳು ಈ ಸಭೆಯಲ್ಲಿ ವ್ಯಕ್ತವಾಗಲಿವೆ.
ವಿಶೇಷವಾಗಿ ದೇಶವನ್ನು ಕ್ಯಾನ್ಸರಿನಂತೆ ಕಾಡುತ್ತಿರುವ ಭ್ರಷ್ಟಾಚಾರ ಮತ್ತು ಚೈನಾದ ನಿರಂತರ ಉಪಟಳದ ಕುರಿತು ಸಭೆಯು ನಿರ್ಣಯ ಕೈಗೊಳ್ಳಲಿದೆ.