೧೪ ಜುಲೈ, ೨೦೧೮, ಬೆಂಗಳೂರು: “ಥಿಂಕರ್ಸ್ ಫೋರಂ” ವತಿಯಿಂದ RSS 360° ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಬೆಂಗಳೂರಿನ ಜಯನಗರದ ಜೈನ್ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ English ವರದಿ ಇಲ್ಲಿ ಓದಬಹುದು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕರಾದ ಶ್ರೀ ವಿ ನಾಗರಾಜ, ಪುಸ್ತಕದ ಲೇಖಕರಾದ ಶ್ರೀ ರತನ್ ಶಾರದ, ಹೊಸ ದಿಗಂತದ ಸಂಪಾದಕರಾದ ವಿನಾಯಕ ಭಟ್ಟ, ಸ್ವರಾಜ್ಯ ನಿಯತಕಾಲಿಕದ ಸಿಇಒ ಪ್ರಸನ್ನ ವಿಶ್ವನಾಥನ್ ಉಪಸ್ಥಿತರಿದ್ದರು.
ಶ್ರೀ ವಿ.ನಾಗರಾಜ್ರವರು ಭಾರತ ಸ್ವಾತಂತ್ರವಾದ ನಂತರ ಕಮ್ಯುನಿಸ್ಟರ ವಿಚಾರದಾರೆಗಳುಳ್ಳ ನಾಯಕರು ಅಂದಿನ ಯುವಕರ ಮೇಲೆ ತಮ್ಮ ವಿಚಾರಗಳ ಹೇರಿಕೆಯ ಬಗೆಗೆ ತಮ್ಮ ಅನುಭವಗಳನ್ನು ನೆನಪಿಸಿಕೊಂಡು, ತುರ್ತು ಪರಿಸ್ಥಿತಿಯ ಸಂದರ್ಬದಲ್ಲಿ ಆರ್ಗಾನೈಸರ್ ಪತ್ರಿಕೆಯ ಸಂಪಾದಕರಾದ ಮಲ್ಕಾನಿವರು ಇಂದಿರಾ ಗಾಂಧಿಯವರ ಬಗೆಗೆ ಬರೆದ ಸಂಪಾದಕೀಯ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಮಲ್ಕಾನಿಯವರನ್ನು ಬಂದಿಸುವ ಮೂಲಕ ಪತ್ರಕರ್ತರ ಸ್ವಾತಂತ್ರ ಹರಣ ಮಾಡಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಯವರ ಮನಸ್ಥಿತಿಯ ಬಗೆಗೆ ಬೇಸರ ವ್ಯಕ್ತಪಡಿಸಿದರು. ಆರೆಸ್ಸೆಸ್ ಅಥವಾ ಸಂಘ ಏನೂ ಮಾಡುವುದಿಲ್ಲ ಆದರೆ ಸ್ವಯಂಸೇವಕರು ಎಲ್ಲವನ್ನೂ ಮಾಡುತ್ತಾರೆ ಎಂದು ಹೇಳಿದ ನಾಗರಾಜರವರು ಕಾಲಕಾಲಕ್ಕೆ ಸಂಘದ ಬಗ್ಗೆ ಬಂದಿರುವ ಪುಸ್ತಕಗಳು ಇವಕ್ಕೆ ನಿದರ್ಶನ ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದ, ಸೋದರಿ ನಿವೇದಿತಾರ ಆಶಯದಂತೆ ಸಮಾಜವನ್ನು ಜಾಗೃತಗೊಳಿಸುವ, ಸಧೃಡ ಹಿಂದೂ ಸಮಾಜವನ್ನು ಕಟ್ಟುವ ಧ್ಯೇಯದಿಂದಲೇ ಆರೆಸ್ಸೆಸ್ ಅನ್ನು ಡಾಕ್ಟರ್ ಜಿ ಸ್ಥಾಪಿಸಿದರು ಎಂದು ನಾಗರಾಜರು ನುಡಿದರು.
ಆರ್.ಎಸ್.ಎಸ್ ಮಾಡುತ್ತಿರುವುದು ತಾಯ್ನಾಡಿನ ಸೇವೆ, ಇದಕ್ಕಾಗಿ ಪ್ರಚಾರ ಬಯಸುವುದು ತರವಲ್ಲ ಎಂದು ಹಿಂದೆ ಗುರೂಜಿ ಗೋಳ್ವಾಲ್ಕರ್ ಹೇಳಿದ್ದನ್ನು ಸಭಿಕರಿಗೆ ನೆನಪಿಸಿದ ಲೇಖಕರಾದ ರತನ್ ಶಾರದ, ಸ್ವಯಂಸೇವಕರು, ಪ್ರಚಾರಕರು ತೋರುತ್ತಿದ್ದ ಮೌಲ್ಯಗಳನ್ನು ಸಾಧಾರ ಬಿಡಿಸಿಟ್ಟರು. ಶಿಕ್ಷಣದಲ್ಲಿ ನಮ್ಮ ಭಾರತೀಯ ಸಂಸ್ಕಾರ, ಶಿಸ್ತು ಮತ್ತು ಮೌಲ್ಯಗಳು ಕಲಿಸುವಿಕೆ ಇಲ್ಲದಾಗಿದ್ದು, ಅದರ ಕೊರತೆಯನ್ನು ಬಾಹ್ಯ ಕಲಿಸುವಿಕೆಯನ್ನು ಸಂಘ ಮಾಡುತ್ತಿದ್ದು, ಜಾತಿ ತಾರತಮ್ಯರಹಿತ ಸಹೋದರತ್ವದ ಮೂಲಕ ನಮ್ಮ ಸಂಸ್ಕೃತಿ ಉಳಿವಿನಲ್ಲಿ ಸಂಘದ ಪಾತ್ರವನ್ನು ಶ್ಲಾಘಿಸಿದರಲ್ಲದೆ, ಇದೆಲ್ಲದರ ಹೊರತಾಗಿಯೂ ಆರ್.ಎಸ್.ಎಸ್ ಬಗೆಗಿನ ತಪ್ಪು ತಿಳುವಳಿಕೆ ದೂರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂಘದಲ್ಲಿ ಅನುಕರಣಿಯ ವ್ಯಕ್ತಿಯನ್ನು ಸಮಾಜದ ನಾಯಕರುಗಳಲ್ಲಿ ಹುಡುಕುವುದರ ಬದಲು, ಸಮಾಜದ ಅತಿ ಸಾಮನ್ಯನೊಬ್ಬನ ಅಸಾಮಾನ್ಯ ಕಾರ್ಯದಿಂದ ಸ್ಫೂರ್ತಿ ಪಡೆಯುವುದನ್ನು ಹೇಳಿಕೊಡಲಾಗುತ್ತದೆಂದು ನುಡಿದರು.
ಹೊಸದಿಗಂತದ ಸಂಪಾದಕರಾದ ಶ್ರೀ ವಿನಾಯಕ ಭಟ್ರವರು ಬಲಪಂಥೀಯರ ಬಗೆಗೆಗಿರುವ ಅಸ್ಪೃಶ್ಯತೆಯ ಬಗೆಗೆ ಖಾರವಾಗಿ ಮಾತನಾಡುತ್ತಾ, ಸಂಘವು ಹಳೆಯ ಮೌಲ್ಯಗಳ ಜೊತೆಗೆ ಹೊಸ ಸಂಗತಿಗಳನ್ನು ಒಗ್ಗೂಡಿಸಿಕೊಂಡು ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಅಳವಡಿಸಿಕೊಂಡು ಬಂದಿದೆ ಎಂದು ತಿಳಿಸಿದರು.
ಆರ್.ಎಸ್.ಎಸ್ ನ ಕಾರ್ಯಕ್ರಮಗಳನ್ನು ಮುಕ್ತ ಕಂಠದಿಂದ ಹೊಗಳಿದರಲ್ಲದೇ, ಎಡಪಂಥೀಯರಿಂದ ಸಂಘದ ನಿಂದನೆ, ನಕ್ಸಲಿಗರ, ಭಾರತ ವಿಭಜನೆಯ ತುಕಡೆ ಗ್ಯಾಂಗನ ಬಗೆಗೆ ಮುಖ್ಯವಾಹಿನಿ ಪತ್ರಿಕೆಗಳು ಸಹಾನೂಭೂತಿ ತೋರ್ಪಡಿಸುತ್ತಿರುವದು ದುರಾದೃಷ್ಟಕರ ಎಂದು ಪತ್ರಕರ್ತರ ಅಂತರಾತ್ಮವನ್ನು ಪ್ರಶ್ನಿಸಿದರು.
ಸ್ವರಾಜ್ಯ ಸಿಇಓ ಶ್ರೀ ಪ್ರಸನ್ನ ವಿಶ್ವನಾಥನ್ರವರು ಮಾತನಾಡಿ, ಶಿಕ್ಷಣ, ಆರೋಗ್ಯ, ಬುಡಕಟ್ಟು ಜನಾಂಗದ ಅಭಿವೃದ್ಧಿ ಕ್ಷೇತ್ರಗಳಲ್ಲಿ ಆರ್.ಎಸ್.ಎಸ್ ನ ಅನುಪಮ ಸೇವೆಯನ್ನು ಶ್ಲಾಘಿಸಿದರು ಮತ್ತು ಆರ್.ಎಸ್.ಎಸ್ ಬಗೆ ಕೇಳಿ ಬರುತ್ತಿರುವ ನಿಂದನೆ, ಟೀಕೆಗಳಿಗೆ ಯಾವುದೇ ಮೌಲ್ಯಗಳಿಲ್ಲ ಎಂದರು, ಸಮಾಜಸೇವೆಗಾಗಿ ಹುಟ್ಟಿಕೊಂಡ ಹಲವಾರು ಸಂಘಟನೆಗಳು ಅಷ್ಟೆ ಬೇಗ ಅಳಿದು ಹೋಗಿವೆ, ಆದರೆ ಅರ್.ಎಸ್.ಎಸ್ ಪ್ರತಿದಿನ ಬೆಳೆಯುತ್ತಲೆ ಇದೆ, ಭವಿಷ್ಯದಲ್ಲಿ ಇನ್ನೂ ಹೆಚ್ಚೆಚ್ಚು ಸಮಾಜಿಕ ಕಾರ್ಯಗಳ ಮೂಲಕ ಬೆಳೆಯಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದರು.
ಶ್ರೀ ಮಂಜುನಾಥರವರಿಂದ ಸಭೆಯ ಗಣ್ಯರ ಪರಿಚಯ, ಶ್ರೀ ರಘೋತ್ತಮ್ ರವರ ಕಾರ್ಯಕ್ರಮ ನಿರೂಪಣೆ, ಕು. ಸ್ನೇಹಾರ ಗಾಯನ ಕಾರ್ಯಕ್ರಮದ ಮೆರಗು ಹೆಚ್ಚಿಸಿತು.
ವರದಿ : ಪರಪ್ಪ ಶಾನವಾಡ