ಜಮ್ಮು ಕಾಶ್ಮೀರಕ್ಕಾಗಿ ಜೀವನವನ್ನೇ ತೇಯ್ದ ಮಹನೀಯರನ್ನು ಮರೆಯಲಾದೀತೆ?
31 ಆಕ್ಟೊಬರ್ 2019ರಿಂದ ಜಮ್ಮು ಕಾಶ್ಮೀರ ಮರು ವಿಂಗದನಾ ಮಸೂದೆ ಜಾರಿಗೆ ಬರುವ ದಿನವಾಗಿದೆ. ತನ್ನಿಮಿತ್ತದ ವಿಶೇಷ ಲೇಖನ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ, ಕರ್ನಾಟಕದ ಶ್ರೀ ಸತ್ಯನಾರಾಯಣ ಶಾನಭಾಗ ಅವರಿಂದ.
ಕಳೆದ ಏಳು ದಶಕಗಳಿಂದ ಭಾರತದ ಕಿರೀಟ ಜಮ್ಮು ಕಾಶ್ಮೀರವನ್ನು ಕುರಿತಂತೆ ಆ ನೆಲದಲ್ಲಿ ಮತ್ತು ದೇಶದೆಲ್ಲೆಡೆ ನಡೆದ ಸಂಘರ್ಷ ಇಂದು ಒಂದು ಪ್ರಮುಖ ಮತ್ತು ನಿರ್ಣಾಯಕ ತಿರುವಿನಲ್ಲಿ ಬಂದು ನಿಂತಿದೆ. 2019ರ ಆಗಸ್ಟ್ 5ರಂದು ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಂವಿಧಾನದ ಆರ್ಟಿಕಲ್ 370 ನೀಡುವ ಅಧಿಕಾರದ ಅಡಿಯಲ್ಲಿ ಹೊರಡಿಸಿದ ಸಾಂವಿಧಾನಿಕ ಆದೇಶ 272ರ ಅನ್ವಯ ಭಾರತದ ಸಂವಿಧಾನದ ಎಲ್ಲ ಆರ್ಟಿಕಲ್‍ಗಳು ಯಾವುದೇ ನಿರ್ಬಂಧಗಳಿಲ್ಲದೇ ಜಮ್ಮು ಕಾಶ್ಮೀರದಲ್ಲಿ ಜಾರಿಯಾದವು. ನಂತರ ಭಾರತದ ಸಂಸತ್ತಿನ ಎರಡೂ ಸದನಗಳಲ್ಲಿ ಗೃಹ ಮಂತ್ರಿ ಅಮಿತ್ ಶಾ ಮಂಡಿಸಿದ ಸಂಕಲ್ಪವು ಅಂಗೀಕಾರವಾದ ನಂತರ ಅದರ ಅನ್ವಯ ಆರ್ಟಿಕಲ್ 370(1)(ಡಿ) ಅಡಿಯಲ್ಲಿ ಸಾಂವಿಧಾನಿಕ ಆದೇಶ 273ನ್ನು ಹೊರಡಿಸಿದ ರಾಷ್ಟ್ರಪತಿಗಳು ಸಂವಿಧಾನದ ಆರ್ಟಿಕಲ್ 370ನೇ ವಿಧಿಯ ಅಂಶಗಳು ಜಾರಿಯಲ್ಲಿ ಇರುವುದಿಲ್ಲ ಎಂದು ಆದೇಶಿಸಿದರು. ಕಳೆದ 72 ವರ್ಷಗಳಿಂದ ದುರುಪಯೋಗಕ್ಕೊಳಗಾಗುತ್ತಿದ್ದ “ತಾತ್ಕಾಲಿಕ” ಎಂದು ಸಂವಿಧಾನಕ್ಕೆ ಸೇರಿದ್ದ 370ನೇ ವಿಧಿಯ ಕಂಟಕ ಕೊನೆಯಾಯಿತು. ಆರ್ಟಿಕಲ್ 35ಎ ಅಡಿಯಲ್ಲಿ ನಡೆಯುತ್ತಿದ್ದ ಅನ್ಯಾಯ ಕೊನೆಯಾಯಿತು. ಜೊತೆಗೆ ಸಂಸತ್ತಿನ ಎರಡೂ ಸದನಗಳಲ್ಲಿ ಗೃಹ ಮಂತ್ರಿಗಳು ಮಂಡಿಸಿದ ಜಮ್ಮು ಕಾಶ್ಮೀರ ರಾಜ್ಯ ಪುನರ್ ವಿಂಗಡನಾ ಮಸೂದೆ ಅಂಗೀಕಾರವಾಗುವುದರೊಂದಿಗೆ ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಢಾಕ್ ಈ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮರುವಿಂಗಡನೆ ಮಾಡುವುದರಿಂದ ಆಡಳಿತಾತ್ಮಕ ಹಿತ ಮತ್ತು ಪ್ರದೇಶದ ಪ್ರಗತಿಗೆ ಮುನ್ನುಡಿ ಬರೆಯಲಾಯಿತು. ಇಂತಹ ಮಹತ್ವಪೂರ್ಣ ಸನ್ನಿವೇಶದಲ್ಲಿ ಜಮ್ಮು ಕಾಶ್ಮೀರ ಭಾರತ ಗಣತಂತ್ರದಲ್ಲಿ ಸಂಪೂರ್ಣ ಏಕೀಕರಣಗೊಳ್ಳುವ ಸಲುವಾಗಿ ತ್ಯಾಗ ಬಲಿದಾನಗೈದ, ಪಾಕಿಸ್ತಾನದೊಂದಿಗಿನ ನೇರಯುದ್ಧ, ಭಯೋತ್ಪಾದನೆ, ಜಿಹಾದ್‍ಗಳ ಬರ್ಬರತೆಯನ್ನು ಎದುರಿಸಿದ, ಒಳಗಿನ ಪ್ರತ್ಯೇಕತಾವಾದಿ ಶಕ್ತಿಗಳು ಸ್ವಾರ್ಥಿ ರಾಜಕೀಯ ಪರಿವಾರಗಳು ಮೊದಲಾದ ರಾಷ್ಟ್ರವಿರೋಧಿ ಶಕ್ತಿಗಳ ಸವಾಲನ್ನು ಎದುರಿಸಿ ದಿಟ್ಟವಾಗಿ ನಿಂತು ಜಮ್ಮು ಕಾಶ್ಮೀರ ಮತ್ತು ಲಢಾಕ್ ಭಾರತದ ಅವಿಭಾಜ್ಯ ಅಂಗವೆಂದು ಜಗತ್ತಿಗೆ ಸಾರಿದ ಆ ಎಲ್ಲ ಮಹನೀಯರನ್ನು ನೆನಪಿಸಕೊಳ್ಳಬೇಕಾದುದು ದೇಶವಾಸಿಗಳ ಆದ್ಯ ಕರ್ತವ್ಯವಾಗಿದೆ.
ಮಹಾರಾಜ ಹರಿಸಿಂಗ್
ಇಂದು ಜಮ್ಮು ಕಾಶ್ಮೀರ ಭಾರತ ಗಣತಂತ್ರದ ಭಾಗವಾಗಿ ಉಳಿದಿದ್ದರೆ ಅದರ ಸರ್ವಪ್ರಥಮ ಶ್ರೇಯ ಸಲ್ಲಬೇಕಾದದ್ದು ಮತ್ತು ಮೊದಲು ಸ್ಮರಿಸಿಕೊಳ್ಳಬೇಕಾದದ್ದು ಕಾಶ್ಮೀರವನ್ನು ಆಳಿದ ಡೋಗ್ರಾ ವಂಶದ ಕೊನೆಯ ಮಹಾರಾಜ ಹರಿಸಿಂಗ್‍ರವರನ್ನು. ಆದರೆ ಸ್ವತಂತ್ರ ಭಾರತದಲ್ಲಿ ಅವರನ್ನು ಅತ್ಯಂತ ಅನ್ಯಾಯದಿಂದ ನಡೆಸಿಕೊಳ್ಳಲಾಯಿತು. ಇಂದಿಗೂ ಕಾಶ್ಮೀರದ ಸಮಸ್ಯೆಗೆ ಮಹಾರಾಜ ಹರಿಸಿಂಗ್ ಅವರೇ ಕಾರಣ ಎಂದು ಗೂಬೆ ಕೂರಿಸುವವರಿದ್ದಾರೆ. ಮಹಾರಾಜ ಹರಿಸಿಂಗ್ ಸ್ವತಂತ್ರವಾಗಿ ಇರಲು ಬಯಸಿದ್ದರು ಎನ್ನುವ ಸುಳ್ಳು ಇನ್ನೂ ಚಾಲ್ತಿಯಲ್ಲಿದೆ.
ಬ್ರಿಟಿಷರು ಭಾರತ ಬಿಟ್ಟು ಹೋಗುತ್ತಿದ್ದಾರೆ ದೇಶದ ವಿಭಜನೆ ಆಗುತ್ತದೆ ಎನ್ನುವಾಗ ದೇಶದಲ್ಲಿ ವಿಲಯನದ ಕುರಿತು ಮೊದಲು ಮಾತನಾಡಿದ್ದು ಮಹಾರಾಜ ಹರಿಸಿಂಗ್. ಅಯಕಟ್ಟಿನ ಸ್ಥಾನವಾಗಿದ್ದ ಜಮ್ಮು ಕಾಶ್ಮೀರದ ಮಹತ್ವವನ್ನು ಅರಿತಿದ್ದ ಹರಿಸಿಂಗ್ ಏಕೆ ಜಮ್ಮು ಕಾಶ್ಮೀರ ಭಾರತದಲ್ಲಿ ಸೇರಬೇಕು ಎನ್ನುವುದರ ಅಗತ್ಯವನ್ನು ಸ್ಪಷ್ಟವಾಗಿ ಅರಿತಿದ್ದರು. ಎರಡನೇ ವಿಶ್ವಯುದ್ಧದ ನಂತರದ ಸನ್ನಿವೇಶದಲ್ಲಿ ಬ್ರಿಟಿಷ್-ಯುಎಸ್ ಅಲಯನ್ಸ್ ಜಮ್ಮು ಕಾಶ್ಮೀರ ಪಾಕಿಸ್ತಾನದ ಭಾಗವಾದರೆ ರಷ್ಯಾ ಮತ್ತು ಚೀನಾಗಳನ್ನು ನಿಯಂತ್ರಿಸಬಹುದು ಎನ್ನುವ ಬ್ಯಾಟನ್ ಲೆಕ್ಕಾಚಾರಗಳಲ್ಲಿ ತೊಡಗಿದ್ದಾಗ ಅಂತಾರಾಷ್ಟ್ರೀಯ ಒತ್ತಡಗಳು, ಅಂದಿನ ಭಾರತದ ಗವರ್ನರ್ ಜನರಲ್ ಆಗಿದ್ದ ಮೌಂಟ್ ಬ್ಯಾಟನ್ ಕುಟಿಲ ತಂತ್ರ, ಪ್ರಜೆಗಳನ್ನು ಎತ್ತುಕಟ್ಟುತ್ತಿದ್ದ ಅವಕಾಶವಾದಿ ಶೇಖ್ ಅಬ್ದುಲ್ಲ ಅಧಿಕಾರವನ್ನು ಕಸಿದುಕೊಳ್ಳಲು ಹವಣಿಸುತ್ತಿದ್ದುದು ಈ ಎಲ್ಲ ಒತ್ತಡಗಳನ್ನು ಸಮರ್ಥವಾಗಿ ಎದುರಿಸಿದರು ಮಹಾರಾಜ ಹರಿಸಿಂಗ್.
25 ಜುಲೈ 1947ರಂದು ಎಲ್ಲ ರಾಜರು ಅಥವಾ ಅಥವಾ ಪ್ರಧಾನ ಮಂತ್ರಿಗಳನ್ನು ವಿಲೀನದ ಕುರಿತು ಮಾತನಾಡಲು ಸಭೆ ಕರೆಯಲಾಗಿತ್ತು. ಜಮ್ಮು ಕಾಶ್ಮೀರದಿಂದ ಮಹಾರಾಜರ ಪ್ರತಿನಿಧಿಯಾಗಿ ಪ್ರಧಾನಮಂತ್ರಿ ರಾಮಚಂದ್ರ ಕಾಕ್ ಹೋಗಿದ್ದರು, ಆದರೆ ಅವರಿಗೆ ಸಭೆಯಲ್ಲಿ ಭಾಗವಹಿಸಲು ಅವಕಾಶವನ್ನೇ ನೀಡಲಾಗಲಿಲ್ಲ. ಕಾರಣ ಪ್ರಧಾನಿ ನೆಹರು ಅವರಿಗೆ ಜಮ್ಮು ಕಾಶ್ಮೀರದ ವಿಲೀನಕ್ಕಿಂತ ತನ್ನ ಮಿತ್ರ ಶೇಖ್ ಅಬ್ದುಲ್ಲನಿಗೆ ಅಧಿಕಾರ ಹಸ್ತಾಂತರವಾಗಬೇಕೆನ್ನುವುದು ಮಹತ್ವ ಎನಿಸಿತ್ತು. ಸರಿಯಾಗಿ ನಡೆದಿದ್ದರೆ ಜಮ್ಮು ಕಾಶ್ಮೀರ ಭಾರತದಲ್ಲಿ ವಿಲೀನಗೊಂಡ ಮೊದಲ ರಾಜ್ಯವಾಗುತ್ತಿತ್ತು. ಈ ಎಲ್ಲ ಘಟನೆಗಳ ನಡುವೆ ಮತ್ತು ಪಾಕಿಸ್ತಾನದ ಆಕ್ರಮಣ ನಡೆದು ಉಂಟಾದ ಪ್ರತಿಕೂಲ ಸನ್ನಿವೇಶದಲ್ಲಿ ಮಹಾರಾಜ ಹರಿಸಿಂಗ್ 26 ಅಕ್ಟೋಬರ್ 1947ರಂದು ಜಮ್ಮು ಕಾಶ್ಮಿರವನ್ನು ಭಾರತದಲ್ಲಿ ವಿಲೀನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ನೆಹರು ಆಣತಿಯಂತೆ ಶೇಖ್‍ಗೆ ಅಧಿಕಾರ ಬಿಟ್ಟುಕೊಟ್ಟರು. ನಂತರ ಅವರನ್ನು ಕುಟಿಲತನದಿಂದ ರಾಜ್ಯದಿಂದಲೇ ಹೊರಹಾಕಲಾಯಿತು. ಮುಂದಿನ 12 ವರ್ಷಗಳ ಕಾಲ ಮುಂಬೈನ ಯಾವುದೋ ಫ್ಲಾಟಿನಲ್ಲಿ ಅನಾಮಧೇಯರಾಗಿ ಮಹಾರಾಜ ಹರಿಸಿಂಗ್ ಬದುಕಬೇಕಾಯಿತು. ಅಂತಿಮವಾಗಿ ಮರಣಾನಂತರ ಅವರ ಅವಶೇಷಗಳಷ್ಟೇ ಜಮ್ಮು ಕಾಶ್ಮೀರಕ್ಕೆ ವಾಪಸ್ಸು ಹೋದವು.
ಬ್ರಿಗೇಡಿಯರ್ ರಾಜಿಂದರ್ ಸಿಂಗ್
ಅಕ್ಟೋಬರ್ 22 1947ರಂದು ಕಬಾಲಿಗಳ ಹೆಸರಿನಲ್ಲಿ ಸುಮಾರು ಐದು ಸಾವಿರ ಸೈನಿಕರ ಪಾಕಿಸ್ತಾನಿ ಪಡೆ ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ಮಾಡಿತ್ತು. ರಾಜ್ಯ, ಭಾರತದ ವಿಲೀನವಾಗುವ ಪ್ರಕ್ರಿಯೆಯಲ್ಲಿ ದೆಹಲಿಯ ನಾಯಕರು, ವಿಶೇಷವಾಗಿ ನೆಹರು ತೋರಿಸಿದ ನಿಷ್ಕಾಳಜಿಯ ಪರಿಣಾಮ ಜಮ್ಮು ಕಾಶ್ಮೀರವನ್ನು ಉಳಿಸಿಕೊಳ್ಳಲು ಬೇಕಾದ ಸೈನ್ಯ ರಾಜ್ಯದಲ್ಲಿರಲಿಲ್ಲ. ಅಂತಹ ಸಂದರ್ಭದಲ್ಲಿ ತುರ್ತು ಸಭೆ ನಡೆಸಿದ ಮಹಾರಾಜ ಹರಿಸಿಂಗ್ ರಾಜ್ಯದ ಸೇನಾ ಮುಖ್ಯಸ್ಥ ಬ್ರಿಗೇಡಿಯರ್ ರಾಜಿಂದರ್ ಸಿಂಗ್‍ರವರಿಗೆ ಕೊಟ್ಟ ಆದೇಶ ‘ಕೊನೆಯ ಸೈನಿಕ ಮತ್ತು ಕೊನೆಯ ಗುಂಡು ಇರುವ ವರೆಗೆ ರಾಜ್ಯವನ್ನು ರಕ್ಷಿಸು’ (save the state till the last man and the last bullet) ಎನ್ನುವುದಾಗಿತ್ತು.
ಮಹಾರಾಜರಿಗೆ ಸೆಲ್ಯೂಟ್ ಮಾಡಿ ಕಬಾಲಿಗಳನ್ನು ನಿಯಂತ್ರಿಸಲು ತನ್ನ ಸೈನಿಕರೊಂದಿಗೆ ಮುಝಾಫರಾಬಾದಿನತ್ತ ತೆರಳಿದ ಬ್ರಿಗೇಡಿಯರ್ ರಾಜಿಂದರ್ ಸಿಂಗ್ ನಾಲ್ಕು ದಿನಗಳ ಕಾಲ ಶತ್ರುಗಳನ್ನು ನಿಯಂತ್ರಿಸಲು ವೀರಾವೇಶದಿಂದ ಹೋರಾಡಿದರು. ಈ ನಡುವೆ ಜಮ್ಮು ಕಾಶ್ಮೀರದ 4ನೇ ಬಟಾಲಿಯನ್‍ನಲ್ಲಿ ವಿದ್ರೋಹ ಉಂಟಾಗಿ ಮುಸ್ಲಿಂ ಸೈನಿಕರ ಡೋಗ್ರಾ ಸೈನಿಕರ ವಿರುದ್ಧವೇ ಬಂಡಾಯವೆದ್ದಿದ್ದರು. ಭಾರತದ ಸೈನ್ಯ ರಾಜ್ಯವನ್ನು ತಲುಪುವುದರವರೆಗೆ ಕೇವಲ ನೂರು ಸೈನಿಕರೊಂದಿಗೆ ಹೋರಾಡಿ ಶತ್ರುಗಳು ಶ್ರೀನಗರ ತಲುಪುವುದನ್ನು ತಡೆದ ಬ್ರಿಗೇಡಿಯರ್ ಜಮ್ಮು ಕಾಶ್ಮೀರಕ್ಕಾಗಿ ಹುತಾತ್ಮರಾದರು. ಸ್ವತಂತ್ರ ಭಾರತದಲ್ಲಿ ಮಹಾವೀರ ಚಕ್ರ ಗೌರವಕ್ಕೆ ಪಾತ್ರರಾದ ಮೊದಲ ವೀರಯೋಧ ಬ್ರಿಗೇಡಿಯರ್ ರಾಜಿಂದರ್ ಸಿಂಗ್.
ಮಕಬೂಲ್ ಶೇರವಾನಿ
1947ರಲ್ಲಿ ಕಬಾಲಿಗಳ ವೇಷದಲ್ಲಿ ಪಾಕಿಸ್ತಾನಿ ಸೈನಿಕರು ಜಮ್ಮು ಕಾಶ್ಮೀರದ ಬಾರಾಮುಲ್ಲಾವನು ಆಕ್ರಮಿಸಿಕೊಂಡಾಗ ಮಕಬೂಲ್ ಶೇರವಾನಿಗೆ ಕೇವಲ 19 ವರ್ಷ ವಯಸ್ಸು. ಅಷ್ಟರಲ್ಲೇ ನ್ಯಾಶನಲ್ ಕಾನ್ಫರೆನ್ಸ್ ಸೇರಿದ್ದ ಆತನಿಗೆ ಭಾರತದಲ್ಲಿ ಜಮ್ಮು ಕಾಶ್ಮೀರ ಸೇರಬೇಕು ಎನ್ನುವುದು ಈಗಾಗಲೇ ಸ್ಪಷ್ಟವಾಗಿತ್ತು. ಬಾರಾಮುಲ್ಲಾದಿಂದ ಶ್ರೀನಗರಕ್ಕೆ ತಲುಪಿ ಅದನ್ನು ವಶಪಡಿಸಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿದ್ದ ಕಬಾಲಿಗಳು ಹವಣಿಸುತ್ತಿದ್ದರು. ಬಾರಾಮುಲ್ಲಾದಿಂದ ಶ್ರೀನಗರ ರಸ್ತೆಯಲ್ಲಿ ಸಾಗಿದರೆ 2 ತಾಸಿನ ದಾರಿ. ಅಂದು ನಡೆದು ಸಾಗಿದರೆ ಒಂದು ದಿನದಲ್ಲಿ ತಲುಪಬಹುದಿತ್ತು. ಆದರೆ ಅವರಲ್ಲಿ ನಕ್ಷೆ ಇರಲಿಲ್ಲ, ದಾರಿ ಗೊತ್ತಿರಲಿಲ್ಲ. ಇದನ್ನು ಉಪಯೋಗಿಸಿಕೊಂಡ ಮಕಬೂಲ್ ಶೇರವಾನಿ ನೀವೂ ಮುಸಲ್ಮಾನರು ನಾನೂ ಮುಸಲ್ಮಾನ. ನಿಮಗೆ ದಾರಿ ತೋರಿಸುತ್ತೇನೆ ಎಂದು ಅವರ ಕಮಾಂಡರ್‍ನನ್ನು ಒಪ್ಪಿಸಿ, ಸಾವಿರಾರು ಸೈನಿಕರ ತುಕಡಿಯನ್ನು ಮೂರು ದಿವಸ ಅಲ್ಲಿ ಇಲ್ಲಿ ಸುತ್ತಾಡಿಸಿ ಕೊನೆಗೆ ಶ್ರೀನಗರ ತಲುಪಲೇ ಬಾರದು ಅಂತಹ ಸ್ಥಳಕ್ಕೆ ಮುಟ್ಟಿಸಿಬಿಟ್ಟ. ಆತನಿಂದಾಗಿ ಭಾರತೀಯ ಸೈನ್ಯ ಶತ್ರುಗಳ ಕೈವಶವಾಗುವ ಮೊದಲು ಶ್ರೀನಗರವನ್ನು ತಲುಪುವುದು ಸಾಧ್ಯವಾಯಿತು. ಏಕಾಂಗಿಯಾಗಿ ಮಕಬೂಲ್ ಶೇರವಾನಿ ಸಾವಿರಾರು ಸೈನಿಕರ ತುಕಡಿಯನ್ನು ದಾರಿ ತಪ್ಪಿಸಿದ್ದ.
7 ನವೆಂಬರ್ 1947ರಂದು ಕೊನೆಗೆ ಶತ್ರುಗಳು ಅವನನ್ನು ಹಿಡಿದರು. ‘ನಿನಗೆ ಕ್ಷಮೆ ನೀಡುತ್ತೇವೆ, ಕಾಶ್ಮೀರದ ಸೈನಿಕ ನೆಲೆ ಇರುವ ಜಾಗ ತೋರಿಸಿಬಿಡು, ಹೇಗಿದ್ದರೂ ನೀನೂ ಮುಸಲ್ಮಾನ’ ಎಂದ ಕಬಾಲಿಗಳ ಕಮಾಂಡರ್. ಮಕಬೂಲ್ ಖಡಾಖಂಡಿತ ನಿರಾಕರಿಸಿದ. ಆತನನ್ನು ದ್ರೋಹಿ ಎಂದು ಜರಿದರು. ಮರದ ಹಲಗೆಗೆ ಮೊಳೆಹೊಡೆದು ನೇತುಹಾಕಿದರು. ಗುಂಡು ಹೊಡೆದು ಆತನನ್ನು ಸಾಯಿಸಿದರು. ಮುಂದೆ ಭಾರತೀಯ ಸೈನ್ಯ ಬಾರಾಮುಲ್ಲಾವನ್ನು ವಶಪಡಿಸಿಕೊಳ್ಳುವ ವರೆಗೆ ಆತನ ಹೆಣ ನೇತಾಡುತ್ತಲಿತ್ತು. ಅದಾದ ಮೇಲೆಯೇ ಆತನ ಪಾರ್ಥಿವ ಶರೀರವನ್ನು ಕೆಳಗಿಳಿಸಿ ಸಕಲ ಮಿಲಿಟರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು. ಭಾರತೀಯ ಸೈನ್ಯ ಆತನಿಗೆ ಬಾರಾಮುಲ್ಲಾದಲ್ಲಿ ಸ್ಮಾರಕವೊಂದನ್ನು ನಿರ್ಮಿಸಿದೆ. ಆದರೆ ನ್ಯಾಶನಲ್ ಕಾನ್ಫರೆನ್ಸ್ ಆತನ ಹಾಗೂ ಆತನ ಕುಟುಂಬದ ಬಗ್ಗೆ ಒಮ್ಮೆಯೂ ಕಾಳಜಿ ತೋರಲಿಲ್ಲ.
ಮಾಸ್ಟರ್ ಅಬ್ದುಲ್ ಅಜೀಜ್
ಮಕಬೂಲ್ ಶೇರವಾನಿಯಂತೆಯೇ ಪಾಕಿಸ್ತಾನಿ ಆಕ್ರಮಣದ ವಿರುದ್ಧ ಪ್ರತಿರೋಧ ಒಡ್ಡಿ ಪ್ರಾಣಾರ್ಪಣೆಗೈದವರಲ್ಲಿ ಮಾಸ್ಟರ್ ಅಬ್ದುಲ್ ಅಜೀಜ್ ಕೂಡ ಒಬ್ಬರು. ಮುಝಾಫರಾಬಾದನ್ನು ಆಕ್ರಮಿಸಿಕೊಂಡ ಶತ್ರುಗಳು ಮುಸ್ಲಿಮೇತರರನ್ನು ಕೊಲ್ಲುತ್ತ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅನೇಕರ ಪ್ರಾಣ ಕಾಪಾಡಿದವರು ಮಾಸ್ಟರ್ ಅಜೀಜ್. ವೃತ್ತಿಯಲ್ಲಿ ಓರ್ವ ಟೇಲರ್ ಆಗಿದ್ದ ಮಾಸ್ಟರ್ ಅಬ್ದುಲ್ ಅಜೀಜ್ ಕೈಯಲ್ಲಿ ಕುರಾನ್ ಹಿಡಿದು ‘ಮುಸ್ಲಿಮೇತರರ ಮೇಲೆ ಕೈ ಹಾಕುವ ಮೊದಲು ನನ್ನ ಶವದ ಮೇಲೆ ಮತ್ತು ಕುರಾನ್ ದಾಟಿ ಹೋಗಿ’ ಎಂದು ಆಕ್ರಮಣಕಾರಿ ಮುಸ್ಲಿಮರ ವಿರುದ್ಧ ತಿರುಗಿ ನಿಂತರು. ಆದರೂ ಆ ಕ್ರೂರಿಗಳು ಇವರನ್ನು ಬಿಡಲಿಲ್ಲ, ಬರ್ಬರವಾಗಿ ಹತ್ಯೆಗೈದರು.
ಕರ್ನಲ್ ಚೆವಾಂಗ್ ರಿಂಚೆನ್
1948ರಲ್ಲಿ ಪಾಕಿಸ್ತಾನಿಗಳು ಕಾರ್ಗಿಲ್ ವಶಪಡಿಸಿಕೊಂಡು ಲೇಹ್ ಮತ್ತು ಲಢಾಕ್‍ನ ಮೇಲೆ ಕಣ್ಣಿಟ್ಟಾಗ ಅದನ್ನು ಉಳಿಸಿಕೊಳ್ಳಲು ಹೋರಾಡಿದ್ದು ಜಮ್ಮು ಕಾಶ್ಮೀರ ಸೈನ್ಯದ ಕೇವಲ 33 ಸೈನಿಕರ ತುಕಡಿ ಮತ್ತು 20 ಸ್ವಯಂಸೇವಕರು. ಅದರ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಕರ್ನಲ್ ಪ್ರೀತಿ ಸಿಂಗ್ ಪಾಕಿಸ್ತಾನಿ ಆಕ್ರಮಣಕಾರರಿಂದ ಲಢಾಕ್‍ನ್ನು ಉಳಿಸಿಕೊಳ್ಳಲು ಸ್ವಯಂಸೇವಕರು ಮುಂದೆ ಬನ್ನಿ ಎಂದು ಕರೆ ಕೊಟ್ಟಾಗ ಮೊದಲು ಮುಂದೆ ಬಂದಿದ್ದು 17 ವರ್ಷದ ಚೆವಾಂಗ್ ರಿಂಚೆನ್. ತತ್‍ಕ್ಷಣದಲ್ಲಿ ಸೈನ್ಯ ತರಬೇತಿ ಪಡೆದದ್ದಲ್ಲದೇ ನುಬ್ರಾ ಕಣಿವೆಯ ತನ್ನ 28 ಸ್ನೇಹಿತರನ್ನು ಸೇರಿಸಿ ನುಬ್ರಾ ಸ್ವಯಂಸೇವಕರ ಪಡೆಯನ್ನು ರಚಿಸಿದ ರಿಂಚೆನ್ ಪಾಕಿಸ್ತಾನಿಗಳ ವಿರುದ್ಧ ಹೋರಾಡಲು ನಿಂತ. ಇದೇ ಮುಂದೆ ಲಢಾಕ್ ಸ್ಕೌಟ್ಸ್ ಹೆಸರಿನ ಪ್ರಮುಖ ತುಕಡಿಯಾಯಿತು. ಆತನ ಶೌರ್ಯ ನಾಯಕತ್ವಕ್ಕಾಗಿ 1952ರಲ್ಲಿ ಮಹಾವೀರ ಚಕ್ರದಿಂದ ಸನ್ಮಾನಿಸಲಾಯಿತು. ಕರ್ನಲ್ ರಿಂಚೆನ್ ಈ ಗೌರವ ಪಡೆದ ಅತ್ಯಂತ ಕಿರಿಯ ವಯಸ್ಸಿನ ಯೋಧ. ಮುಂದೆ 1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿಯೂ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಕರ್ನಲ್ ಚೆವಾಂಗ್ ರಿಂಚೆನ್ ಲಢಾಕ್ ಸೆಕ್ಟರಿನ 9 ಪ್ರದೇಶಗಳನ್ನು ಶತ್ರುಗಳಿಂದ ಮುಕ್ತಗೊಳಿಸಿದರು. ಈ ಶೌರ್ಯಕ್ಕಾಗಿ ಎರಡನೇ ಬಾರಿಗೆ ಮಹಾವೀರ ಚಕ್ರ ಪಡೆದ ಗೌರವಕ್ಕೆ ಪಾತ್ರರಾದರು. ಆವರನ್ನು “ಲಢಾಕಿನ ಸಿಂಹ” ಎಂದೇ ಕರೆಯಲಾಗುತ್ತದೆ.
ಮೇಜರ್ ಸೋಮನಾಥ್ ಶರ್ಮಾ
1947ರ ನವೆಂಬರ್ ನ ಬಡಗಾಮ್ ಸಂಘರ್ಷ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ಒಂದು ಮಹತ್ವಪೂರ್ಣ ಹೋರಾಟ. ಸುಮಾರು 500ಕ್ಕೂ ಹೆಚ್ಚು ಸೈನಿಕರು ಬಡಗಾಮ್ ಹಳ್ಳಿಯನ್ನು ಸುತ್ತುವರಿದಿದ್ದಾಗ ಅವರನ್ನು ಎದುರಿಸಿದ್ದು ಕೆಲವೇ ಸೈನಿಕರ ಮೇಜರ್ ಸೋಮನಾಥ ಶರ್ಮಾ ನೇತೃತ್ವದ ತುಕಡಿ. ಶತ್ರುಗಳಿಗೂ ಮತ್ತು ಮೇಜರ್ ನೇತೃತ್ವದ ತುಕಡಿಗೂ ಅನುಪಾತ ಏಳಕ್ಕೆ ಒಂದರಷ್ಟಿತ್ತು. ಅತೀವ ಶೌರ್ಯ ಸಾಹಸದಿಂದ ಹೋರಾಡಿದ ಭಾರತದ ಸೈನ್ಯ ಸುಮಾರು ಇನ್ನೂರಕ್ಕಿಂತ ಹೆಚ್ಚು ಶತ್ರುಗಳನ್ನು ಹೊಡೆದುರುಳಿಸಿ, ಪಾಕಿಸ್ತಾನಿಗಳು ಮುಂದುವರಿಯವುದನ್ನು ತಡೆಯಿತು. ಬಡಗಾಮ್ ಅತ್ಯಂತ ಆಯಕಟ್ಟಿನ ಪ್ರದೇಶ ಅದರನ್ನು ಕಳೆದುಕೊಂಡರೆ ಶ್ರೀನಗರ ವಿಮಾನ ನಿಲ್ದಾಣ ಕೈತಪ್ಪುತ್ತದೆ ಮತ್ತು ಭಾರತೀಯ ಸೈನ್ಯ ಶ್ರೀನಗರ ತಲುಪುವುದು ಸಾಧ್ಯವಾಗುವುದಿಲ್ಲ ಎನ್ನುವುದನ್ನು ತಿಳಿದಿದ್ದ ಮೇಜರ್ ಸೋಮನಾಥ ಶರ್ಮಾ ಪ್ರಾಣವನ್ನು ಪಣವಿಟ್ಟು ಹೋರಾಡಿದ್ದರು. ಕೇವಲ 25ನೇ ವರ್ಷಕ್ಕೆ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಮೇಜರ್ ಸೋಮನಾಥ ಶರ್ಮಾ ದೇಶದ ಪ್ರಥಮ ಪರಮ ವೀರ ಚಕ್ರ ಪುರಸ್ಕಾರದಿಂದ ಪುರಸ್ಕೃತರು.
ಲೆಫ್ಟಿನೆಂಟ್ ದಿವಾನ್ ರಂಜಿತ್ ರಾಯ್
ಸಿಖ್ ರೆಜಿಮೆಂಟಿನ ಲೆಫ್ಟಿನೆಂಟ್ ದಿವಾನ್ ರಂಜಿತ್ ರಾಯ್, ಪಾಕಿಸ್ತಾನ ಕಾಶ್ಮೀರದ ಮೇಲೆ ಆಕ್ರಮಣ ಮಾಡಿದಾಗ ನಿರಾಶ್ರಿತರಿಗೆ ಅಗತ್ಯ ವ್ಯವಸ್ಥೆಗಳನ್ನು ನಿರ್ವಹಿಸುವುದರಲ್ಲಿ ನಿರತರಾಗಿದ್ದರು. ನಂತರ ಕಾಶ್ಮೀರಕ್ಕೆ ಅವರನ್ನು ಕಳುಹಿಸಿ ಎರಡು ತುಕಡಿಗಳ ಕಮಾಂಡ್ ನೀಡಿ ಆಯಕಟ್ಟಿನ ಬಾರಾಮುಲ್ಲ-ಶ್ರೀನಗರ ಹೆದ್ದಾರಿಯನ್ನು ಶತ್ರುಗಳ ಆಕ್ರಮಣದಿಂದ ತಡೆಯುವ ಜವಾಬ್ದಾರಿ ವಹಿಸಲಾಯಿತು. ಪಾಕಿಸ್ತಾನಿ ಕಬಾಲಿ ಸೈನ್ಯ ಈ ಹೆದ್ದಾರಿಯಲ್ಲಿ ಶ್ರೀನಗರದತ್ತ ದೌಡಾಯಿಸಿತ್ತಿದ್ದ ಸಮಯದಲ್ಲಿ ಅವರನ್ನು ತಡೆದ ರಂಜಿತ್ ರಾಯ್ ಭಾರತೀಯ ಸೈನಿಕರು ಶ್ರೀನಗರ ಏರ್‍ಪೋರ್ಟಿನಲ್ಲಿ ಇಳಿಯಲು ಅನುವು ಮಾಡಿಕೊಟ್ಟರು. ಆತ ಸ್ವತಂತ್ರ ಭಾರತದಲ್ಲಿ ಹೋರಾಡಿದ ಮೊದಲ ಭಾರತೀಯ ಸೈನ್ಯಾಧಿಕಾರಿ. ಶತ್ರುಗಳೊಂದಿಗಿನ ಹೋರಾಟದಲ್ಲಿ ಅಕ್ಟೋಬರ್ 27ರಂದು ಅವರು ಪ್ರಾಣಾರ್ಪಣೆಗೈದರು.
ಬ್ರಿಗೇಡಿಯರ್ ಮಹಮ್ಮದ್ ಉಸ್ಮಾನ್
ಮೂಲತಃ ಉತ್ತರ ಪ್ರದೇಶದವರಾದ ಮಹಮ್ಮದ್ ಉಸ್ಮಾನ್ ತನ್ನ 20ನೇ ವಯಸ್ಸಿಗೆ ಇಂಗ್ಲೆಂಡಿನ ಪ್ರತಿಷ್ಠಿತ ರಾಯಲ್ ಮಿಲಿಟರಿ ಅಕಾಡೆಮಿಗೆ ಪ್ರವೇಶ ಪಡೆದರು. ತರಬೇತಿ ಪಡೆದ ನಂತರ ಬಲೂಚ್ ರೆಜಿಮೆಂಟಿಗೆ ನಿಯುಕ್ತರಾದರು, ಮೇಜರ್ ರ್ಯಾಂಕ್‍ಗೆ ಏರಿದರು. ದೇಶ ವಿಭಜನೆಯ ನಂತರ ಪಾಕಿಸ್ತಾನಿ ಸೈನ್ಯದ ಮುಖ್ಯಸ್ಥರಾಗುವಂತೆ ಬಂದ ಆಹ್ವಾನವನ್ನು ತಿರಸ್ಕರಿಸಿ ಭಾರತ ಸೈನ್ಯ ಸೇವೆಯಲ್ಲಿಯೇ ಮುಂದುವರಿದರು. ಬಲೂಚ್ ರೆಜಿಮೆಂಟ್ ಪಾಕಿಸ್ತಾನ ಸೇರಿದ ನಂತರ ಅವರನ್ನು ಜಮ್ಮು ಕಾಶ್ಮೀರದ ಡೋಗ್ರಾ ರೆಜಿಮೆಂಟಿಗೆ ವರ್ಗಾವಣೆ ಮಾಡಲಾಯಿತು. ನೌಶೇರಾ ಸೆಕ್ಟರ್‍ನಲ್ಲಿ ನಿಯುಕ್ತರಾದರು. 1948ರ ಜನವರಿಯಲ್ಲಿ ಪಾಕಿಸ್ತಾನಿ ಸೈನ್ಯ ನೌಶೇರಾದ ಮೇಲೆ ಆಕ್ರಮಣ ಮಾಡಿದಾಗ ಅವರ ವಿರುದ್ಧ ಸೆಣಸಿದ ಬ್ರಿಗೇಡಿಯರ್ ಉಸ್ಮಾನ್ ನೇತೃತ್ವದ ತುಕಡಿ 900ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿ ಆಕ್ರಮಣವನ್ನು ವಿಫಲಗೊಳಿಸಿತ್ತು. ಅದಕ್ಕಾಗಿ ಅವರಿಗೆ “ನೌಶೇರಾದ ಸಿಂಹ” ಎನ್ನುವ ಬಿರುದು ದೊರಕಿತ್ತು. ಪಾಕಿಸ್ತಾನ ಎಷ್ಟು ಕಂಗಾಲಾಗಿತ್ತೆಂದರೆ ಬ್ರಿಗೇಡಿಯರ್ ಉಸ್ಮಾನ್ ತಲೆಯ ಮೇಲೆ ಆ ಕಾಲದಲ್ಲಿ 50 ಸಾವಿರ ರೂಪಾಯಿ ಇನಾಮು ಘೋಷಿಸಿತ್ತು. ನಂತರ ನೌಶೇರಾದ ವಿಫಲ ಪ್ರಯತ್ನದ ನಂತರ ಪಾಕಿಸ್ತಾನ ಝಂಗಾರ್ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಮದ್ದುಗುಂಡುಗಳು ಶೆಲ್‍ಗಳನ್ನು ಬಳಸಿಕೊಂಡು ದಾಳಿ ಮಾಡಿತು. ಅಲ್ಲಿ ಒಂದು ಪ್ರಬಲ ಶೆಲ್ ಸ್ಫೋಟದಲ್ಲಿ ಬ್ರಿಗೇಡಿಯರ್ ಮಹಮ್ಮದ್ ಉಸ್ಮಾನ್ ಹುತಾತ್ಮರಾದರು. “ನಾನು ಸಾಯುತ್ತಿದ್ದೇನೆ ಆದರೆ ನಾವು ಹೋರಾಡುತ್ತಿರುವ ಭೂಭಾಗ ಶತ್ರುವಿನ ಕೈವಶವಾದಿರಲಿ” ಇದು ಆತ ಸಾಯುವ ಮೊದಲು ಹೇಳಿದ ಕೊನೆಯ ಮಾತು. ಯುದ್ಧಭೂಮಿಯಲ್ಲಿ ಪ್ರಾಣಬಿಟ್ಟ ಅತಿ ಉನ್ನತ ರ್ಯಾಂಕ್‍ನ ಯೋಧ ಬ್ರಿಗೇಡಿಯರ್ ಉಸ್ಮಾನ್. ಆ ಸಮಯದಲ್ಲಿದ್ದ ಕೇವಲ 18 ಬ್ರಿಗೇಡಿಯರ್ ಗಳ ಪೈಕಿ ಒಬ್ಬರಾಗಿದ್ದರು ಉಸ್ಮಾನ್. ಜಮ್ಮು ಕಾಶ್ಮೀರದ ಝಂಗಾರ್ ಮತ್ತು ಉತ್ತರ ಪ್ರದೇಶದ ಜಾಮಿಯ ಮಿಲಿಯ ಈ ಎರಡು ಕಡೆ ಅವರ ನೆನಪಿನ ಸ್ಮಾರಕಗಳಿವೆ.
ಕುಶಕ್ ಬಕುಲಾ ರಿನ್‍ಪೋಚೆ
ಆಧುನಿಕ ಲಢಾಕಿನ ನಿರ್ಮಾತೃ ಎಂದೇ ಕರೆಯಲಾಗುವ ಲಢಾಕಿನ ಬೌದ್ಧ ಧರ್ಮಗುರು, ಮುತ್ಸದ್ದಿ ಕುಶಕ್ ಬಕುಲಾ ಜಮ್ಮು ಕಾಶ್ಮೀರ ಅದರಲ್ಲೂ ಲಢಾಕ್ ಪ್ರಾಂತ ಭಾರತದೊಂದಿಗೆ ಏಕೀಕರಣವಾಗುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದರು. 1948ರಲ್ಲಿ ಪಾಕಿಸ್ತಾನದ ಆಕ್ರಮಣ ನಡೆದಾಗ ಲಢಾಕ್ ಶತ್ರುಗಳ ಪಾಲಾಗುವುದನ್ನು ತಪ್ಪಿಸಲು ನಡೆದ ಎಲ್ಲ ರೀತಿಯ ಪ್ರಯತ್ನಗಳ ಮುಂಚೂಣಿಯಲ್ಲಿದ್ದವರು ಕುಶಕ್ ಬಕುಲಾ ರಿನ್‍ಪೋಚೆ. ಲಢಾಕ್ ಭಾರತದಲ್ಲಿಯೇ ಇರಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸಿದ ಕುಶಕ್ ಬಕುಲಾ ಜನಮತಗಣನೆಯನ್ನು ಸಂಪೂರ್ಣ ವಿರೋಧಿಸಿದರು. ಪಾಕಿಸ್ತಾನದ ಕಬಾಲಿ ಆಕ್ರಮಣ ಮತ್ತು ಲಢಾಕ್ ಭಾರತದ ಅವಿಭಾಜ್ಯ ಅಂಗ ಎನ್ನುವ ವಿಷಯದ ಕುರಿತು ವಿಶ್ವಸಂಸ್ಥೆಯಲ್ಲಿ ಪ್ರಬಲವಾಗಿ ಪ್ರತಿಪಾದನೆ ಮಾಡಿದರು. ಲಢಾಕ್‍ನಿಂದ ಬೌದ್ಧ ಸಮುದಾಯದ ಒಂದು ನಿಯೋಗದೊಂದಿಗೆ ಪ್ರಧಾನಿ ನೆಹರು ಅವರನ್ನು ಭೇಟಿಯಾಗಿ ಲಢಾಕ್‍ನ ವಿಲೀನದ ಕುರಿತು ಒತ್ತಾಯ ಮಾಡಿದ್ದರು. ಆರ್ಟಿಕಲ್ 370ನ್ನು ಕಟುವಾಗಿ ವಿರೋಧಿಸಿದರು. ಕಾಶ್ಮೀರದ ಕೆಲವು ಪರಿವಾರಗಳ ಹಿಡಿತದಲ್ಲಿದ್ದ ರಾಜ್ಯದ ಆಡಳಿತದಿಂದ ಉಂಟಾಗುತ್ತಿದ್ದ ಪ್ರಾದೇಶಿಕ ಅಸಮತೋಲನವನ್ನು ಎತ್ತಿ ತೋರಿಸಿದ್ದರು. ನಂತರ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಲಢಾಖ್ ಹಿಲ್ ಕೌನ್ಸಿಲ್ ರಚನೆ ಮತ್ತು ಇಂದು ಲಢಾಕ್ ಕೇಂದ್ರಾಡಳಿತ ಪ್ರದೇಶ ರಚನೆಯ ಹಿಂದೆ ಕುಶಕ್ ಬಕುಲ ಅವರ ಚಿಂತನೆ ಮತ್ತು ಹೋರಾಟದ ಶ್ರಮವಿದೆ.
ಪಂಡಿತ್ ಪ್ರೇಮನಾಥ ಡೋಗ್ರಾ, ಬಲರಾಜ್ ಮುಢೋಕ್ ಮತ್ತು ಪ್ರಜಾಪರಿಷತ್ ಆಂದೋಲನ
ಜಮ್ಮು ಕಾಶ್ಮೀರದ ವಿಲೀನ.
ಪಾಕಿಸ್ತಾನದ ಆಕ್ರಮಣ ಇವೆಲ್ಲದರ ನಂತರ ಭಾರತದ ಸಂವಿಧಾನವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಶೇಖ್ ಅಬುಲ್ಲನ ಅಧಿಕಾರ, 370ನೇ ವಿಧಿಯ ಮತ್ತು ಅದರ ದುರುಪಯೋಗ ಆರಂಭವಾದದ್ದನ್ನು ವಿರೋಧಿಸುವವರಲ್ಲಿ ಪ್ರಮುಖರಾದವರು ಪಂಡಿತ ಪ್ರೇಮನಾಥ ಡೋಗ್ರಾ. ಆರ್ಟಿಕಲ್ 370, ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ ರಾಜ್ಯ ಸರ್ಕಾರದ ಪ್ರಮುಖನನ್ನು ಪ್ರಧಾನ ಮಂತ್ರಿಯೆಂದು ಕರೆಯುವ ಪದ್ಧತಿ ಇವುಗಳನ್ನು ಕಠಿಣವಾಗಿ ವಿರೋಧಿಸಿ ಜನಾಂದೋಲನ ರೂಪಿಸಿದವರು ಪಂಡಿತ ಪ್ರೇಮನಾಥ ಡೋಗ್ರಾ. ಭಾರತ ಗಣತಂತ್ರದಲ್ಲಿ ಜಮ್ಮು ಕಾಶ್ಮೀರ ರಾಜ್ಯದ ಸಂಪೂರ್ಣ ವಿಲೀನವನ್ನು ಆಗ್ರಹಿಸಿ ಅಖಿಲ ಜಮ್ಮು ಕಾಶ್ಮಿರ ಪ್ರಜಾಪರಿಷತ್ ಆಂದೋಲನ ಆರಂಭವಾಯಿತು. ಶೇಖ್ ಅಬ್ದುಲ್ಲನ ಕೈಗೆ ಅಧಿಕಾರ ಸಿಕ್ಕಿದ ನಂತರ ಆತನ ವರಸೆಯೇ ಬದಲಾಗಿತ್ತು. 370ನೇ ವಿಧಿಯನ್ನು ಬಳಸಿಕೊಂಡು ತನ್ನ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಆತ ಮುಂದಾದ. ರಾಜ್ಯದ ಸಂವಿಧಾನ ರಚನಾ ಶಾಸನ ಸಭೆಗೆ ನಾಮಕೆ ವಾಸ್ತೆ ಚುನಾವಣೆ ನಡೆಸಿ ಪ್ರಜಾ ಪರಿಷತ್‍ನ ಎಲ್ಲ ಅಬ್ಯರ್ಥಿಗಳ ನಾಮಪತ್ರವನ್ನೇ ಅಸಿಂಧುಗೊಳಿಸಿ, ತನ್ನ ಪಕ್ಷ ನ್ಯಾಶನಲ್ ಕಾನ್ಫರೆನ್ಸ್‍ನ ಸದಸ್ಯರೇ ಎಲ್ಲ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡ. ದೌರ್ಭಾಗ್ಯವೆಂದರೆ ದೆಹಲಿಯಲ್ಲಿ ನೆಹರು ಮೊದಲಾದ ಮಿತ್ರರು ಆತನ ಪರವಾಗಿ ಇದ್ದರು. ಇವೆಲ್ಲದರ ವಿರುದ್ಧ ಆಂದೋಲವನ್ನು ರೂಪಿಸಿದ್ದು ಪ್ರಜಾಪರಿಷತ್. “ಏಕ್ ದೇಶ ಮೆ ದೋ ನಿಶಾನ್ ದೋ ವಿಧಾನ್, ದೋ ಪ್ರಧಾನ್ ನಹೀ ಚಲೇಂಗೆ ನಹೀ ಚಲೇಂಗೆ” ಎನ್ನುವು ಘರ್ಜನೆ ಮೊಳಗಿತು. ನಂತರ ಡಾ ಶ್ಯಾಮಾ ಪ್ರಸಾದ ಮುಖರ್ಜಿ ನೇತೃತ್ವದಲ್ಲಿ ಈ ಆಂದೋಲನ ದೇಶದ ಎಲ್ಲ ಭಾಗಗಳಿಗೆ ಹರಡಿತು. ಪಂಡಿತ ಪ್ರೇಮನಾಥ ಡೋಗ್ರಾ ಸೇರಿದಂತೆ ಸಾವಿರಾರು ಪ್ರಜಾಪರಿಷತ್‍ನ ಕಾರ್ಯಕರ್ತರನ್ನು ಜೈಲಿಗೆ ಅಟ್ಟಲಾಯಿತು. ಅವರ ಮೇಲೆ ಗೋಲಿಬಾರ್ ನಡೆಯಿತು. 18 ಜನ ಪ್ರಜಾಪರಿಷತ್‍ನ ಕಾರ್ಯಕರ್ತರು ಪ್ರಾಣಾರ್ಪಣೆಗೈದರು. ಸ್ವಯಂ ಶ್ಯಾಮಾ ಪ್ರಸಾದ ಮುಖರ್ಜಿಯವರು ಸಂಶಯಾಸ್ಪದ ರೀತಿಯಲ್ಲಿ ಶ್ರೀನಗರದಲ್ಲಿ ಮೃತರಾದರು. ಶೇಖ್ ಅಬ್ದುಲ್ ಪ್ರಜಾ ಪರಿಷತ್‍ಅನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ಮುಂದುವರಿಸಿದ. ಅಂತಿಮವಾಗಿ ಆಗಸ್ಟ್ 1953ರಲ್ಲಿ ಅನೇಕ ಪ್ರತ್ಯೇಕತಾವಾದಿ ಭಾಷಣ ಮಾಡಿದ ನಂತರ ಶೇಖ್ ಅಬ್ದುಲ್ಲನನ್ನು ಕೆಳಗಿಳಿಸಿ ಬಂಧಿಸಲಾಯಿತು.
ಪ್ರಜಾಪರಿಷತ್ ಆಂದೋಲನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇನ್ನೋರ್ವ ಮಹನೀಯರು ಬಲರಾಜ್ ಮೂಢೋಕ್. ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಅವರು ಶ್ಯಾಮಾ ಪ್ರಸಾದ್ ಮುಖರ್ಜಿಯವರ ಜನಸಂಘವನ್ನು ಸೇರಿದ್ದರು. ಜಮ್ಮು ಕಾಶ್ಮೀರದ ಓರ್ವ ಪ್ರಮುಖ ರಾಷ್ಟ್ರವಾದಿ ನಾಯಕರಾಗಿದ್ದ ಬಲರಾಜ್ ಮುಢೋಕ್ ರಾಜ್ಯದ ಸಂಪೂರ್ಣ ವಿಲೀನವನ್ನು ಒತ್ತಾಯಿಸಿ ಆಂದೋಲನ ನಡೆಸಿದರು. ಅವರ ರಾಜಕೀಯ ನಿಲುವಿನಿಂದಾಗಿ ಶೇಖ್ ಅಬ್ದುಲ್ಲ ಅವರನ್ನು ರಾಜ್ಯದಿಂದ ಗಡಿಪಾರು ಮಾಡಿದ್ದ.
ಬಕ್ಷಿ ಗುಲಾಮ್ ಮೊಹಮ್ಮದ್
ಪ್ರತ್ಯೇಕಾತವಾದಿ ನಿಲುವಿನಿಂದಾಗಿ 1953ರಲ್ಲಿ ಶೇಖ್ ಅಬ್ದುಲ್ಲ ಬಂಧನಕ್ಕೊಳಗಾದಾಗ ಜಮ್ಮು ಕಾಶ್ಮೀರ ರಾಜ್ಯ ಸರ್ಕಾರದ ಪ್ರಧಾನ ಮಂತ್ರಿಯಾಗಿ ನಿಯುಕ್ತರಾದವರು ಬಕ್ಷಿ ಗುಲಾಮ್ ಮಹಮ್ಮದ್. ನಂತರದ 11 ವರ್ಷಗಳ ದೀರ್ಘ ಕಾಲ 1964ರ ವರೆಗೆ ಅವರು ಪ್ರಧಾನ ಮಂತ್ರಿಯಾಗಿ ಮುಂದುವರೆದರು. ಬಕ್ಷಿ ಗುಲಾಮ್ ಮೊಹಮ್ಮದ್ ಕಾಲದಲ್ಲಿ ಭಾರತ ಸಂವಿಧಾನದ ಬಹುತೇಕ ಪ್ರಮುಖ ವಿಧಿಗಳು ಮತ್ತು ದೇಶದ ಕಾನೂನುಗಳು ಜಮ್ಮು ಕಾಶ್ಮೀರದಲ್ಲಿ ಜಾರಿಗೆ ಬಂದವು. ಭಾರತ ಪರ ನಿಲುವು ಹೊಂದಿದ್ದ ಬಕ್ಷಿ ಗುಲಾಮ್ ಮೊಹಮ್ಮದ್ ಆಡಳಿತಾವಧಿಯಲ್ಲಿ ಜಮ್ಮು ಕಾಶ್ಮೀರ ಸರ್ವಾಂಗೀಣ ಪ್ರಗತಿಯತ್ತ ಸಾಗಿತು. ಅವರನ್ನು ಆಧುನಿಕ ಕಾಶ್ಮೀರದ ಶಿಲ್ಪಿ ಎಂದೇ ಕರೆಯಲಾಗುತ್ತದೆ. ಇದುವರೆಗೆ 370ನೇ ವಿಧಿಯ ದುರುಪಯೋಗದಿಂದ ಆದ ಅನ್ಯಾಯಗಳನ್ನು ಒಂದು ಮಟ್ಟಿಗೆ ಸರಿಪಡಿಸುವ ಕಾರ್ಯ ನಡೆದದ್ದು ಈ ಅವಧಿಯಲ್ಲಿ. ಆದರೂ ಪ್ಲೆಬಿಸೈಟ್ ಫ್ರ0ಟ್, ಪ್ರತ್ಯೇಕತಾವಾದಿಗಳು ಮತ್ತು ಮುಸಲ್ಮಾನ ಮೂಲಭೂತವಾದಿಗಳ ಪ್ರಬಲ ಪ್ರತಿರೋಧವನ್ನು ಅವರು ಎದುರಿಸಿಬೇಕಾಯಿತು. ಶೇಖ್ ಅಬ್ದುಲ್ಲನ ಪ್ರತ್ಯೇಕತಾವಾದಿ ಮನಸ್ಥಿತಿ ಹೊರಬರತ್ತಿರುವಾಗ ಆತನ ವಿರುದ್ಧ ತಿರುಗಿ ಬಿದ್ದು ಜಮ್ಮು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳ್ಳುವುದರಿಂದ ಉಳಿಸುವಲ್ಲಿ ಬಕ್ಷಿ ಗುಲಾಮ್ ಮೊಹಮ್ಮದ್ ಪಾತ್ರ ಹಿರಿದು.
ಗುಲಾಮ್ ಮೊಹಮ್ಮದ್ ಸಾದಿಕ್
ಬಕ್ಷಿ ಗುಲಾಮ್ ಮೊಹಮ್ಮದ್ ನಂತರ ಅಧಿಕಾರದ ಚುಕ್ಕಾಣಿ ಹಿಡಿದವರು ಗುಲಾಮ್ ಮೊಹಮ್ಮದ್ ಸಾದಿಕ್. ಇವರ ಅವಧಿಯಲ್ಲಿಯೇ ರಾಜ್ಯ ಸರ್ಕಾರದ ಮುಖ್ಯಸ್ಥನನ್ನು ಪ್ರಧಾನ ಮಂತ್ರಿ ಬದಲಾಗಿ ಮುಖ್ಯಮಂತ್ರಿ ಎಂದು ನಾಮ ಪರಿವರ್ತನೆ ನಡೆಯಿತು. ಹಿಂದುಗಳಿಗೆ ಶಿಕ್ಷಣ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವ ಪ್ರಯತ್ನಗಳು ನಡೆದವಾದರೂ ಯಶಸ್ವಿಯಾಗಲಿಲ್ಲ. ಆದರೆ ಪ್ರತ್ಯೇಕತೆಯ ಶಕ್ತಿಗಳ ಬಲ ತಗ್ಗಿತು. ಪ್ರಾಮಾಣಿಕ ಮತ್ತು ಸದುದ್ಧೇಶ ಉಳ್ಳ ನಾಯಕ ಎಂದು ಹೆಸರಾಗಿದ್ದರು ಪ್ಲೆಬಿಸೈಟ್ ಫ್ರಂಟ್ ಮತ್ತು ಪ್ರತ್ಯೇಕತಾವಾದಿಗಳ ಪ್ರತಿರೋಧವನ್ನು ಸಮರ್ಥವಾಗಿ ನಿಭಾಯಿಸಿದರು.
ಜಮ್ಮು ಕಾಶ್ಮೀರಕ್ಕಾಗಿ ಪ್ರಾಣ ಕೊಟ್ಟ ಸಹಸ್ರ ಸಹಸ್ರ ಯೋಧರು, ಜಮ್ಮು ಕಾಶ್ಮೀರ್ ಪೊಲೀಸ್
1947ರ ಮೊದಲ ಪಾಕಿಸ್ತಾನಿ ಯುದ್ಧದಿಂದ ಮೊದಲ್ಗೊಂಡು 1999ರ ಕಾರ್ಗಿಲ್ ಕದನವೂ ಸೇರಿದಂತೆ ನಡೆದ ಯುದ್ಧಗಳಲ್ಲಿ ಜಮ್ಮು ಕಾಶ್ಮೀರದ ನೆಲದ ರಕ್ಷಣೆಗಾಗಿ ಪ್ರಾಣಾರ್ಪಣೆಗೈದವರು ಸಹಸ್ರಾರು ಮಂದಿ ವೀರಯೋಧರು. ಪ್ರತಿವರ್ಷ ಜಮ್ಮು ಕಾಶ್ಮೀರದ ಗಡಿ, ಸಿಯಾಚಿನ್‍ನಂತಹ ದುರ್ಗಮ ಪ್ರದೇಶದಲ್ಲಿ ನೂರಾರು ಸೈನಿಕರು ಹುತಾತ್ಮರಾಗುತ್ತಾರೆ. ಹಾಗೆಯೇ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ, ಮುಸ್ಲಿಂ ಮೂಲಭೂತವಾದಿಗಳ ಜಿಹಾದ್, ಪ್ರತ್ಯೇಕತಾವಾದಿ ಭಯೋತ್ಪಾದನೆಗೆ ಕಾಶ್ಮಿರದಲ್ಲಿ ಸಾವಿರಾರು ವೀರಯೋಧರು ಪ್ರಾಣ ಕೊಟ್ಟಿದ್ದಾರೆ. ಭಾರತದಲ್ಲಿ ಪರಮವೀರ್ ಚಕ್ರ, ವೀರ ಚಕ್ರ ಮೊದಲಾದ ಗೌರವಕ್ಕೆ ಪಾತ್ರರಾದ ಸೈನಿಕರಲ್ಲಿ ಶೇಕಡ 75ರಷ್ಟು ಜಮ್ಮು ಕಾಶ್ಮೀರದಲ್ಲಿಯೇ ಹೋರಾಡಿ ಹುತಾತ್ಮರಾದವರು. 2 ವರ್ಷಗಳ ಹಿಂದೆ ಭಯೋತ್ಪಾದಕರಿಗೆ ಬಲಿಯಾದ 22 ವರ್ಷದ ಲೆಫ್ಟಿನೆಂಟ್ ಉಮರ್ ಫಯಾಜ್, ಕಳೆದ ವರ್ಷ ಹುತಾತ್ಮನಾದ ರೈಫಲ್‍ಮನ್ ಔರಂಗಜೇಬ್, 2019 ಪೆಬುವರಿ 14ರಂದು ಪುಲ್ವಾಮಾದಲ್ಲಿ ಹುತಾತ್ಮರಾದ 40 ಮಂದಿ ಯೋಧರು ಇವರೆಲ್ಲ ಜಮ್ಮು ಕಾಶ್ಮೀರಕ್ಕಾಗಿ ತಮ್ಮ ಪ್ರಾಣವನ್ನು ಆಹುತಿ ನೀಡಿದ್ದಾರೆ.
ಇಷ್ಟೇ ಅಲ್ಲ ಇದುವರೆಗೆ ಜಮ್ಮು ಕಾಶ್ಮೀರ್ ಪೊಲೀಸ್ ಪಡೆಯ 4000ಕ್ಕೂ ಹೆಚ್ಚು ಜನರು ಕಾಶ್ಮೀರಕ್ಕಾಗಿ ಪ್ರಾಣ ನೀಡಿದ್ದಾರೆ.
ಬಲಿದಾನಗೈದ ನಾಗರಿಕರು
ಇಷ್ಟಕ್ಕೇ ಮುಗಿದಿಲ್ಲ. ಕಾಶ್ಮೀರದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನಾಗರಿಕರು ದೇಶದ ಏಕೀಕರಣಕ್ಕಾಗಿ ಹೋರಾಡುತ್ತ, 370ನೇ ವಿಧಿ, ಸ್ವಾರ್ಥ ರಾಜಕಾರಣ ಮತ್ತು ಪ್ರತ್ಯೇಕತಾವಾದದ ವಿರುದ್ಧದ ಹೋರಾಟದಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ಜನಪರ ವಕೀಲ, ಪತ್ರಕರ್ತ ಜನಾನುರಾಗಿಯಾಗಿ ರಾಷ್ಟ್ರವಾದಿ, ಹಿಂದುತ್ವದ ಪ್ರತಿಪಾದಕನಾಗಿದ್ದರೂ ಮುಸ್ಲಿಮರಿಗೂ ಆತ್ಮೀಯನಾಗಿ ಎಲ್ಲರಿಗೂ ಬೇಕಾಗಿದ್ದ ವ್ಯಕ್ತಿಯಾಗಿದ್ದರು ಅನಂತನಾಗ್ ನಿವಾಸಿ ಪಂಡಿತ ಪ್ರೇಮನಾಥ ಭಟ್. ಅವರನ್ನು 1989 ಡಿಸೆಂಬರ್ 12ರ ಮಧ್ಯಾಹ್ನ ಅನಂತನಾಗ್‍ನ ಅವರ ಹಿರಿಯರ ಮನೆಯಬಳಿ ಗುಂಡಿಕ್ಕಿ ಸಾಯಿಸಲಾಯಿತು. ಇನ್ನೋರ್ವರು ಆರೆಸ್ಸೆಸ್ ಕಾರ್ಯಕರ್ತರೂ ಆಗಿದ್ದ ಟೀಕಾ ಲಾಲ್ ಟಪ್ಲೂ, ವಕೀಲರಾಗಿದ್ದವರು ಶ್ರೀನಗರದ ನಿವಾಸಿ. ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದರು. ಹಿಂದೂಗಳಿಗಿಂತ ಅವರಿಗೆ ಮುಸ್ಲಿಮ ಸ್ನೇಹಿತರೇ ಹೆಚ್ಚಿದ್ದರು. 12ನೇ ಸೆಪ್ಟೆಂಬರ್ 1989ರಂದು ಅವರ ಮನೆಯ ಮೇಲೆ ಮೂಲಭೂತವಾದಿಗಳು ದಾಳಿ ಮಾಡಿದರು. ಟಪ್ಲೂ ಧೈರ್ಯವಾಗಿ ಹೊರಬಂದು ಅವರನ್ನು ಎದುರಿಸಿದರು. 14 ಸೆಪ್ಟೆಂಬರ್ 1989ರಂದು ಹಾಡಹಗಲೇ ಮನೆಯ ಎದುರು ಗುಂಡಿಟ್ಟು ಅವರನ್ನು ಹತ್ಯೆಗೈಯ್ಯಲಾಯಿತು. ಇಂತಹ ಹುತಾತ್ಮರಾದ ಸಜ್ಜನರ ಪಟ್ಟಿ ತುಂಬಾ ದೀರ್ಘವಾದುದು – ಸತೀಷ್ ಭಂಡಾರಿ, ರುಚಿರ್ ಕೌಲ್, ಸಂತೋಷ್ ಠಾಕುರ್, ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್, ಎಬಿವಿಪಿ, ಬಿಜೆಪಿಯ ನೂರಾರು ಕಾರ್ಯಕರ್ತರು ಕಾಶ್ಮೀರದ ಮುಕ್ತಿಗಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟಿದ್ದಾರೆ. ಎಷ್ಟೋ ಸಾವಿರ ಮಂದಿ ತಮ್ಮ ಜೀವನವನ್ನೇ ತೇಯ್ದಿದ್ದಾರೆ ಇಂದಿಗೂ ತೇಯುತ್ತಲಿದ್ದಾರೆ.
ಆದರೆ ದುರದೃಷ್ಟವೆಂದರೆ ನಮ್ಮ ಮುಂದೆ ಮಾಧ್ಯಮಗಳಲ್ಲಿ ಸಾರ್ವಜನಿಕ ಚರ್ಚೆಗಳಲ್ಲಿ ಅಬ್ದುಲ್ಲ, ಮುಫ್ತಿ ಪರಿವಾರ, ಹುರಿಯತ್, ಮಿರ್‍ಜ್ವಾ, ಗಿಲಾನಿ ಇಂತವರೇ ಬರುತ್ತಾರೆ. ಜಮ್ಮು ಕಾಶ್ಮೀರ ತನ್ನೆಲ್ಲ ಸಂಕೋಲೆಗಳನ್ನು ಕಳಚಿಕೊಂಡು ಭಾರತದ ಮುಕುಟ ಮಣಿಯಾಗಿ ಮತ್ತೆ ಪ್ರಕಾಶಿಸುವುದನ್ನು ಕಾದು ನೋಡುತ್ತಿರುವ ಹೊತ್ತಿನಲ್ಲಿ ಈ ನೆಲಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡ ಮಹನೀಯರುಗಳನ್ನು ಮರೆಯಲಾದೀತೆ?
Premnath Bhat
Tiku Lal
–
ಸತ್ಯನಾರಾಯಣ ಶಾನಭಾಗ
ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ ಕರ್ನಾಟಕ