29 ಡಿಸೆಂಬರ್ 2019, ಉಡುಪಿ: ಉಡುಪಿಯ ಪರಮಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಇಂದು ದೈವಾಧೀನರಾಗಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ್ ಅವರು ಪೂಜ್ಯರ ಪಾದಗಳಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಆಧ್ಯಾತ್ಮಿಕ ಸಾಧಕರು ಮತ್ತು ಸಾಮಾಜಿಕ ಜಾಗೃತಿಯ ಹರಿಕಾರರಾಗಿದ್ದ ಉಡುಪಿಯ ಪರಮಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ನಮ್ಮ ದೇಶ ಕಂಡ ಓರ್ವ ಅಪರೂಪದ ಯತಿಶ್ರೇಷ್ಠರು. ಅಸ್ಪೃಶ್ಯತೆ, ಅಸಮಾನತೆಯನ್ನು ಹೋಗಲಾಡಿಸಲು ನಿರಂತರ ಶ್ರಮಿಸಿದ ಸಂತರು ಶ್ರೀಗಳು.
ರಾಮಜನ್ಮಭೂಮಿ ಆಂದೋಲನದಿಂದ ಪರಿಸರ ಕಾಳಜಿಯವರೆಗೆ ರಾಷ್ಟ್ರದ,
ಸಮಾಜದ ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮನ್ನು ತೊಡಗಿಸಿಕೊಂಡ ದೈವೀಪುರುಷರು ಇಂದು ನಮ್ಮನ್ನು ಅಗಲಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಆರು ದಶಕಗಳಿಗೂ ಮೀರಿದ ನಿಕಟ ಒಡನಾಟ ಹೊಂದಿದ್ದ ಪೂಜ್ಯ ಶ್ರೀಗಳು ಸಾಮಾಜಿಕ ಸಾಮರಸ್ಯ, ರಾಮ ಜನ್ಮಭೂಮಿ ಹೋರಾಟ ಮೊದಲಾದ ಅನೇಕ ವಿಷಯಗಳಲ್ಲಿ ಸದಾ ನಮಗೆ ಬೆನ್ನೆಲುಬಾಗಿ ನಿಂತವರು, ಮಾರ್ಗದರ್ಶನ ಮಾಡಿದವರು. ಸಂಘದ ಚಟುವಟಿಕೆಗಳಿಗೆ ಶ್ರೀಗಳಿಂದ ಸದಾಕಾಲದ ಬೆಂಬಲ, ಆಶೀರ್ವಾದ ದೊರೆಯುತ್ತಿತ್ತು.
ಸಂಘದ ಎರಡನೆಯ ಸರಸಂಘಚಾಲಕರಾದ ಗುರೂಜಿಗೆ ಗೋಲ್ವಾಳ್ಕರ್ ಅವರ ಜೊತೆಗೂ ನಿಕಟ ಸಂಪರ್ಕ ಹೊಂದಿದ್ದವರು ಪೇಜಾವರ ಶ್ರೀಗಳು. ಅಲ್ಲದೆ, 1964ರಲ್ಲಿ ಸಾಂದೀಪನಿ ಆಶ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಆರಂಭದ ದಿನಗಳಿಂದಲೂ ಬಹುವಾಗಿ ತೊಡಗಿಕೊಂಡವರಾಗಿದ್ದರು.
ಪೂಜ್ಯರ ಪಾದಗಳಿಗೆ ಅಂತಿಮ ನಮನಗಳನ್ನು ಸಲ್ಲಿಸುತ್ತೇನೆ.
ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಅವರನ್ನು ಕಳೆದುಕೊಂಡ ಅವರ ಅಭಿಮಾನಿಗಳು ಮತ್ತು ಶಿಷ್ಯವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಆರೆಸ್ಸೆಸ್ ಪರವಾಗಿ ಪ್ರಾರ್ಥಿಸುತ್ತೇನೆ.
_
ವಿ ನಾಗರಾಜ್
ಕ್ಷೇತ್ರೀಯ ಸಂಘಚಾಲಕರು, ದಕ್ಷಿಣ ಮಧ್ಯ ಕ್ಷೇತ್ರ, ಆರೆಸ್ಸೆಸ್.