ಸಂಸ್ಕೃತವನ್ನು ಕಾಪಾಡಿಕೊಂಡು ಬರುವುದು ಈ ದೇಶದ ವಿದ್ಯಾವಂತರ ಕರ್ತವ್ಯ
(ಶ್ರಾವಣಪೂರ್ಣಿಮೆ ರಕ್ಷಾಬಂಧನ, ಉಪಾಕರ್ಮ ಹಬ್ಬಗಳಿಗೆ ಪ್ರಸಿದ್ಧವಾಗಿರುವಂತೆ ‘ಸಂಸ್ಕೃತ ದಿನ’ವಾಗಿಯೂ ಪ್ರಸಿದ್ಧಿ ಹೊಂದಿದೆ. ಭಾರತೀಯ ಸಭ್ಯತೆಯ ಮೂರ್ತರೂಪವಾದ ಸಂಸ್ಕೃತವು ಈ ದೇಶದ ವಿಭಿನ್ನ ಜನರನ್ನು ಏಕಸೂತ್ರದಲ್ಲಿ ಕಟ್ಟುವ ಶಕ್ತಿ ಹೊಂದಿದೆ. ಇಂತಹ ಸಂಸ್ಕೃತ ಭಾಷೆ ಹಾಗೂ ಇದನ್ನು ಪ್ರಚುರಪಡಿಸಿದ ‘ಸಂಸ್ಕೃತ ಭಾರತೀ’ಕುರಿತು ಈ ಲೇಖನ.)\
ಲೇಖಕರು: ಶ್ರೀ ಲಕ್ಷ್ಮೀನಾರಾಯಣ, ಶೃಂಗೇರಿ, ಸಂಸ್ಕೃತ ಭಾರತೀ ಪ್ರಾಂತ ಸಂಘಟನಾ ಮಂತ್ರಿ, ಉತ್ತರ ಕರ್ನಾಟಕ.
“ಗ್ರೀಕ್ ಭಾಷೆಗಿಂತಲೂ ಹೆಚ್ಚು ಪರಿಪೂರ್ಣವಾದ, ಲ್ಯಾಟಿನ್‍ಗಿಂತಲೂ ಹೆಚ್ಚು ವ್ಯಾಪಕವಾದ, ಇವೆರಡು ಭಾಷೆಗಳಿಗಿಂತಲೂ ಹೆಚ್ಚು ಪರಿಷ್ಕೃತವಾದ ಸಂಸ್ಕೃತ ಭಾಷೆಯ ಸಂರಚನೆ ಬೆರಗುಗೊಳಿಸುವಂತದ್ದು. ಸಂಸ್ಕೃತ ಸಾಹಿತ್ಯದ ಸಮಗ್ರಭಾಗದ ಪರಿಚಯ ಪಡೆಯಲು ಒಂದು ಜೀವನ ಏತಕ್ಕೂ ಸಾಲದು” ಎಂದು ಪ್ರಸಿದ್ಧ ಆಂಗ್ಲಭಾಷಾವಿದ್ವಾಂಸ, ಆಂಗ್ಲಭಾಷಾಶಾಸ್ತ್ರಿ, ಸರ್. ವಿಲಿಯಂ ಜೋನ್ಸ್ ಭಾರತಕ್ಕೆ ಬಂದು ಸಂಸ್ಕೃತ ಅಧ್ಯಯನ ಕೈಗೊಂಡು ಯುರೋಪಕ್ಕೆ ತೆರಳಿ ಅಲ್ಲಿಯ ವಿದ್ವಾಂಸರ ಎದುರು ಸಂಸ್ಕೃತ ಭಾಷೆಯ ಹಿರಿಮೆ-ಗರಿಮೆಯನ್ನು ವರ್ಣಿಸುತ್ತಾ ಉದ್ಘರಿಸಿದ ಮಾತಿದು.
ಹೌದು, ವೇದ-ರಾಮಾಯಣ-ಮಹಾಭಾರತ-ಹದಿನೆಂಟುಪುರಾಣ-ಉಪಪುರಾಣಗಳು ಕಾಳಿದಾಸ-ಭಾಸ-ಬಾಣ-ಭಾರವಿ-ಭರ್ತೃಹರಿ ಮುಂತಾದ ಶ್ರೇಷ್ಠ ಕವಿಗಳ ಗದ್ಯ-ಪದ್ಯ-ಚಂಪೂ-ನಾಟಕ-ಸುಭಾಷಿತ-ಸ್ತೋತ್ರ ಮುಂತಾದ ಸಾಹಿತ್ಯಗಳು ಆನಂದವರ್ಧನ-ದಂಡಿ-ಕುಂತಕ-ಭಾಮಹ-ವಿಶ್ವನಾಥ-ಅಭಿನವಗುಪ್ತ-ರಾಜಶೇಖರ ಮುಂತಾದ ಕಾವ್ಯ ವಿಮಾಂಸಕರು ತಮ್ಮ ಗ್ರಂಥಗಳಲ್ಲಿ ನಡೆಸಿದ ಸೂಕ್ಷ್ಮಕಾವ್ಯಚರ್ಚೆ, ಗಣಿತಶಾಸ್ತ್ರ-ಖಗೋಳಶಾಸ್ತ್ರ-ರಾಜ್ಯಶಾಸ್ತ್ರ-ಅರ್ಥಶಾಸ್ತ್ರ-ಧರ್ಮಶಾಸ್ತ್ರ-ಶಿಲ್ಪಶಾಸ್ತ್ರ-ನಾಟ್ಯಶಾಸ್ತ್ರ-ಸಂಗೀತಶಾಸ್ತ್ರ-ವೈದ್ಯವಿಜ್ಞಾನ-ಪ್ರಾಣಿಶಾಸ್ತ್ರ-ವಾಸ್ತುಶಾಸ್ತ್ರ-ತತ್ವಶಾಸ್ತ್ರ ಮುಂತಾದ ಶಾಸ್ತ್ರಗ್ರಂಥಗಳು, ಯೋಗ-ಆಯುರ್ವೇದ ಗ್ರಂಥಗಳು ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲಿದ್ದು, ಒಬ್ಬ ತನ್ನ ಜೀವಿತಾವಧಿಯಲ್ಲಿ ಸಮಗ್ರ ಅಧ್ಯಯನ ಕೈಗೊಳ್ಳುವುದು ಸಾಧ್ಯವಿಲ್ಲ ಎಂದರೆ ಅತಿಶಯೋಕ್ತಿ ಮಾತಲ್ಲ.
ಸಂಸ್ಕೃತ ಎಂದರೆ ಗುಣವಾಚಕಪದ. ಸಮ್ಯಕ್+ಕೃತ (ಚೆನ್ನಾಗಿಸಲ್ಪಟ್ಟದ್ದು) ಸಂಸ್ಕೃತ ವಾಗುತ್ತದೆ. ಭಾಷೆಯ ಆರು ಗುಣಗಳಾದ ವರ್ಣ, ಸ್ವರ, ಮಾತ್ರೆಗಳು, ಬಲ (ಉಚ್ಚಾರಣೆಯಲ್ಲಿ ಬಳಸುವ ಪ್ರಾಣಶಕ್ತಿ) ಸಾಮ (ಗೇಯತೆ), ಸಂತಾನ (ಸಂಯುಕ್ತಾಕ್ಷರಗಳ ಉಚ್ಚಾರಣೆ)ಗಳಲ್ಲಿ ಅತ್ಯುಚ್ಚಸಂಸ್ಕಾರದಿಂದ ಅಪರಂಜಿಯಂತೆ, ಹೊರಹೊಮ್ಮಿದಾಗ ಸಂಸ್ಕೃತವು ಸಂಸ್ಕೃತವಾಯಿತು.
ಸಂಸ್ಕೃತ ಭಾಷೆ ಇಂದು ವಾಕ್ಯರೂಪದಲ್ಲಿ ಎಲ್ಲಾ ಕಡೆ ಬಳಕೆಯಲ್ಲಿ ಇಲ್ಲದಿರಬಹುದು. ಸಂಸ್ಕೃತ ಭಾಷೆಯ ಪದಗಳು ಭಾರತದ ಎಲ್ಲಾ ಭಾಷೆಯಲ್ಲಿಯೂ ಹಾಸುಹೊಕ್ಕಾಗಿದೆ, ವ್ಯವಹಾರದಲ್ಲಿದೆ. ನಮ್ಮ ಕನ್ನಡಭಾಷೆಯನ್ನೇ ತೆಗೆದುಕೊಂಡರೆ, ಕನ್ನಡಭಾಷೆಯಲ್ಲಿರುವ ನೂರಕ್ಕೆ ಅರವತ್ತಾರಷ್ಟು ಪದಗಳು ಸಂಸ್ಕೃತ ದಿಂದ ನೇರವಾಗಿ ಬಂದವುಗಳು ಅಥವಾ ನಿಷ್ಪನ್ನಗಳಾಗಿವೆ. ಸ್ನಾನ-ವಸ್ತ್ರ-ಅನ್ನ-ಆಹಾರ-ಶಾಲೆ-ವಿದ್ಯೆ-ವಿದ್ಯಾರ್ಥಿ-ಪುಸ್ತಕ-ಪ್ರಶ್ನೆ-ಉತ್ತರ-ಭೂಮಿ-ಸೂರ್ಯ-ದಕ್ಷಿಣ-ಉತ್ತರ-ಪೂರ್ವ-ಪಶ್ಚಿಮ ಹೀಗೆ ಸಂಸ್ಕೃತ ದ ಸಾವಿರಾರು ಪದಗಳು ಕನ್ನಡಭಾಷೆಯಲ್ಲಿ ಕನ್ನಡದೇ ಎಂಬಂತೆ ಬೆರೆತುಹೋಗಿವೆ. ಅರಸ-ಏಣಿ-ಅಜ್ಜ-ಕಂಬ ಮುಂತಾದ ಶಬ್ದಗಳು. ದೇಶಿ ಕನ್ನಡಪದಗಳೆಂಬಂತೆ ತೋರಿದರೂ ಅವು ಸಂಸ್ಕೃತ ಮೂಲವಾಗಿದ್ದು, ರೂಪ ಮಾರ್ಪಡಿಸಿಕೊಂಡು ಬಂದ ಪದಗಳಾಗಿವೆ. ನಡುಗನ್ನಡವೂ ಸೇರಿದಂತೆ, ಪ್ರಾಚೀನ ಕನ್ನಡ ಸಾಹಿತ್ಯವು, ಸಂಸ್ಕೃತ ಪರಿಚಯವಿಲ್ಲದಿದ್ದರೆ ಅವು ತಮ್ಮ ಅತಿಶಯ ಅರ್ಥವನ್ನು ಬಿಟ್ಟುಕೊಡಲಾರವು. ಕನ್ನಡದ ಶಬ್ದಕೋಶ-ವ್ಯಾಕರಣ ಎರಡಕ್ಕೂ ಸಂಸ್ಕೃತ ಬೇಕೆಬೇಕು. ಸಂಸ್ಕೃತ ಅಧ್ಯಯನ ಲುಪ್ತವಾಗಿರುವುದರಿಂದಲೇ ಕೆಲವು ಪತ್ರಿಕೆಯಲ್ಲಿ, ಜಾಹಿರಾತು ಫಲಕಗಳಲ್ಲಿ, ಕಚೇರಿಯ ಕಡತಗಳಲ್ಲಿ ಕನ್ನಡಭಾಷೆ, ತನ್ನ ಸೌಂದರ್ಯ-ಸೌಷ್ಠವಗಳನ್ನು ಕಳೆದುಕೊಂಡು ವಿರೂಪ-ಕುರೂಪಗಳಲ್ಲಿ ವಿಜೃಂಭಿಸುತ್ತಿದೆ. ಕನ್ನಡ ಹಾಗೂ ಸಂಸ್ಕೃತ ಎರಡೂ ಪರಸ್ಪರ ವಿರುದ್ಧವಾದ ಧ್ರುವಗಳಲ್ಲ. ಅವು ಪೂರಕವಾದ ಭಾಷೆಯಾಗಿದೆ ಎಂಬುದನ್ನು ನಾವು ಮರೆಯಬಾರದು.
‘ಸಂಸ್ಕೃತ ಭಾರತೀ’ ಎಂಬ ಸಂಸ್ಕೃತದ ಕಟ್ಟಾಳು:
ವಿಭಿನ್ನರಾಜ್ಯ-ಭಾಷೆ-ಜಾತಿ-ಸಂಸ್ಕೃತಿ ಹೊಂದಿದ ಭಾರತೀಯರನ್ನು ಸಂಸ್ಕೃತ ಎಂಬ ಎಕಸೂತ್ರದಲ್ಲಿ ಇಂದು ಕಟ್ಟಿದ್ದರೆ ಅದು ‘ಸಂಸ್ಕೃತ ಭಾರತೀ’ ಎಂಬ ಸಂಸ್ಥೆ. ಸಂಸ್ಕೃತ ಭಾರತೀ ಬೆಳೆದುಬಂದ ಬಗೆಯೇ ರೋಚಕವಾದುದು. 1981ರಲ್ಲಿ ಶ್ರೀಜನಾರ್ದನ ಹೆಗಡೆ ಹಾಗೂ ಶ್ರೀ ಚ.ಮೂ. ಕೃಷ್ಣಶಾಸ್ತ್ರಿ ಎಂಬ ಇಬ್ಬರು ಸಂಸ್ಕೃತ ಪ್ರಚಾರಕರಿಂದ ಆರಂಭಗೊಂಡ ‘ಸಂಸ್ಕೃತ ಭಾರತೀ’ ಎಂಬ ಸಂಸ್ಥೆಯು ಇಂದು ಲಕ್ಷಾಂತರ ಸಂಸ್ಕೃತ ಪ್ರಚಾರ ಕಾರ್ಯಕರ್ತರನ್ನು ಹೊಂದಿದೆ. ಭಾರತವೂ ಸೇರಿದಂತೆ ವಿಶ್ವದ 38 ದೇಶಗಳಲ್ಲಿ ಸಂಸ್ಕೃತ ಪ್ರಚಾರ-ಪ್ರಸಾರಕಾರ್ಯ ನಡೆಯುತ್ತಿದೆ. ಭಾರತದ 4885 ಪ್ರದೇಶಗಳಲ್ಲಿ ‘ಸಂಸ್ಕೃತ ಭಾರತೀ’ಯ ಕಾರ್ಯಚಟುವಟಿಕೆಗಳು ಸಾಗಿವೆ. ಸರಳಸಂಸ್ಕೃತ ಸಂಭಾಷಣೆಯನ್ನು ಕಲಿಸುವ ಹತ್ತುದಿನಗಳ ಸಂಸ್ಕೃತ ಸಂಭಾಷಣಾ ಶಿಬಿರಗಳು ಇದುವರೆಗೆ ಹತ್ತಿರಹತ್ತಿರ ಎರಡು ಲಕ್ಷ ಶಿಬಿರಗಳನ್ನು ಸಂಸ್ಕೃತ ಭಾರತೀ ಕೈಗೊಂಡಿದ್ದು 96 ಲಕ್ಷ ಜನರು ಸಂಸ್ಕೃತದ ಪ್ರಾಥಮಿಕ ಸಂಭಾಷಣೆ ನೆಡೆಸುವಷ್ಟು ಕೌಶಲವನ್ನು ಈ ಮೂಲಕ ಪಡೆದಿದ್ದಾರೆ. ಎಲ್ಲಾ ಜಾತಿ-ಮತ ಭೇದವಿಲ್ಲದೆ ಎಲ್ಲಾ ವಯೋಮಾನದವರೂ ಇದರಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದೆ.
‘ಸಂಸ್ಕೃತ ಭಾರತೀ’ ಸಂಸ್ಥೆಯು ಅಂಚೆಯ ಮೂಲಕ ಭಾರತದ 13 ಭಾಷೆಗಳಲ್ಲಿ ಸಂಸ್ಕೃತ ಕಲಿಕೆಗೆ ಅವಕಾಶ ಕಲ್ಪಿಸಿದೆ. ಚಿಕ್ಕಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಉದ್ದೇಶದಿಂದ ಅದೆಷ್ಟೊ ‘ಬಾಲಕೇಂದ್ರ’ಗಳನ್ನು ತೆರೆದಿದೆ. ‘ಸಂಭಾಷಣಾ ಸಂದೇಶಃ’ ಎಂಬ ಸಂಸ್ಕೃತ ಮಾಸಪತ್ರಿಕೆ ಇದ್ದು, ಎರಡು ಲಕ್ಷ ಸಂಸ್ಕೃತ ಒದುಗ ಗ್ರಾಹಕರಿದ್ದಾರೆ. 350ಕ್ಕೂ ಮಿಕ್ಕಿ ಪುಸ್ತಕಗಳನ್ನು ಪ್ರಕಟಿಸಿ ನಿಯತ ಸಂಸ್ಕೃತ ಸಾಹಿತ್ಯ ಒದುಗರನ್ನು ಸೃಷ್ಟಿಸಿದೆ. ‘ಸಂಸ್ಕೃತ ಭಾರತೀ’ಯ ಈ ಅವಿರತ ಪರಿಶ್ರಮದ ಫಲವಾಗಿಯೇ ಇಂದು ಆರು ಸಾವಿರ ಸಂಸ್ಕೃತ ಕುಟುಂಬಗಳು ಬೇರೆ ಬೇರೆ ಭಾಷೆಯೊಂದಿಗೆ ತಮ್ಮ ಮನೆಯಲ್ಲಿ ಸಂಸ್ಕೃತವನ್ನೆ ಮನೆಯಭಾಷೆಯಾಗಿ ಮಾತನಾಡುವವರಿದ್ದಾರೆ. ಇದನ್ನೇ ‘ಸಂಸ್ಕೃತ ಗೃಹಮ್’ ಎಂದು ಪ್ರಸಿದ್ಧಿಯಾಗಿದೆ. ಭಾರತದ ಆರೇಳು ಗ್ರಾಮಗಳು ಸಂಸ್ಕೃತ ಗ್ರಾಮಗಳಾಗಿವೆ. ಕರ್ನಾಟಕದ ಮತ್ತೂರು, ಮಧ್ಯಪ್ರದೇಶದ ‘ಜೀವಿಗ್ರಾಮ’ ಮುಂತಾದ ಗ್ರಾಮಗಳಲ್ಲಿ ವಾಸಿಸುವ ಎಲ್ಲಾ ವರ್ಗದವರು ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಸುಮಾರು ಒಂದುವರೆ ಲಕ್ಷದ್ಟು ಸಂಸ್ಕೃತ ಶಿಕ್ಷಕರನ್ನು ‘ಸಂಸ್ಕೃತ ಭಾರತೀ’ ತರಬೇತಿಗೊಳಿಸಿದೆ. ಇವರೆಲ್ಲಾ ಸಂಸ್ಕೃತವನ್ನು ಸಂಸ್ಕೃತದಲ್ಲೇ ಬೋಧಿಸುವ ಸಾಮಥ್ರ್ಯಪಡೆದವರಾಗಿದ್ದು ಇಂದು ವಿವಿಧ ಭಾಗಗಳಲ್ಲಿ ಸಂಸ್ಕೃತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೆಷ್ಟೋ ಸಂಸ್ಕೃತ ಸಮ್ಮೇಳನಗಳನ್ನು ಸಂಸ್ಕೃತ ಭಾರತೀ ಹಮ್ಮಿಕೊಂಡಿದ್ದು, ಕಳೆದವರ್ಷ ದೆಹಲಿಯಲ್ಲಿ ಮೂರು ದಿನಗಳ ‘ವಿಶ್ವಸಂಸ್ಕೃತ ಸಮ್ಮೇಳನ’ ಅದರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿದೆ. ಐದು ಸಾವಿರಕ್ಕೂ ಮಿಕ್ಕಿ ಆಯ್ದ ಸಂಸ್ಕೃತ ಪ್ರತಿನಿಧಿಗಳು ಅದರಲ್ಲಿ ಭಾಗವಹಿಸಿ, ಅದರ ಸಫಲತೆಗೆ ಕಾರಣರಾಗಿದ್ದಾರೆ. ಅದೆಷ್ಟೋ ಸಂಸ್ಕೃತ ಪ್ರಚಾರಕರು ತಮ್ಮ ಇಡೀ ಜೀವನವನ್ನು ಸಂಸ್ಕೃತ ಪ್ರಸಾರಕ್ಕೊಸ್ಕಾರವಾಗಿಯೇ ಮುಡಿಪಾಗಿಟ್ಟು ಕರ್ಮಯೋಗಿಯಂತೆ ನಿತ್ಯ ಕಾರ್ಯನಿರ್ವಹಿಸುತ್ತಾ ಬಂದಿರುವುದರಿಂದ ಒಂದು ಕಾಲಕ್ಕೆ ಮೃತಭಾಷೆಯ ಹಂತಕ್ಕೆ ತಲುಪಿದ್ದ ಸಂಸ್ಕೃತವಿಂದು ಜನಭಾಷೆಯಾಗುವತ್ತ ದಾಪುಗಾಲುಹಾಕುತ್ತಿದೆ. ‘ಸಂಸ್ಕೃತ ಭಾರತೀ’ಯ ನೇತೃತ್ವದಲ್ಲಿ ಶ್ರಾವಣ ಶುದ್ಧದ್ವಾದಶಿಯಿಂದ ಒಂದುವಾರ ‘ಸಂಸ್ಕೃತ ಸಪ್ತಾಹ’ ಕಾರ್ಯಕ್ರಮ ಹಿಂದೆಲ್ಲಾ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಯಶಸ್ವಿಯಾಗಿ ಜರುಗಿದ್ದು, ಈ ವರ್ಷ ಒನ್-ಲೈನ್ ಮೂಲಕ ವಿಶಿಷ್ಟವಾಗಿ ಹಮ್ಮಿಕೊಂಡಿದೆ.
ಕರ್ನಾಟಕದಲ್ಲಿ ಸಂಸ್ಕೃತ :
ವಿಶ್ವದ ಶ್ರೇಷ್ಠಸಂಸ್ಕೃತ ವಿದ್ವಾಂಸರಿರುವುದು ಕರ್ನಾಟಕದಲ್ಲಿ. ಇಲ್ಲಿ ಮೊದಲಿನಿಂದಲೂ ಪ್ರಾಚೀನ-ಆಧುನಿಕ ಪದ್ಧತಿಯಿಂದ ಸಂಸ್ಕೃತ ಅಧ್ಯಯನಕ್ಕೆ ಗಟ್ಟಿಯಾದ ನೆಲೆಯಿದೆ. ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಅಧ್ಯಯನಕ್ಕೆ ಅವಕಾಶವಿದೆ. ಅಷ್ಟೇ ಅಲ್ಲದೇ ಕರ್ನಾಟಕ ಸಂಸ್ಕೃತ ವಿದ್ಯಾವಿದ್ಯಾಲಯ, ಕೇಂದ್ರಸರ್ಕಾರದ ಅಧೀನದ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಶೃಂಗೇರಿಯಲ್ಲಿ ಸಂಸ್ಕೃತದ ಪ್ರಬುದ್ಧ ಶಾಸ್ತ್ರಾಧ್ಯಯನ ಸಂಶೋಧನೆಗೆ ಅವಕಾಶಕಲ್ಪಿಸಿದೆ. ರಾಜ್ಯದಲ್ಲಿ ಸುಮಾರು 230 ಸಂಸ್ಕೃತ ಪಾಠಶಾಲೆಗಳು, 16 ಸಂಸ್ಕೃತ ಕಾಲೇಜುಗಳಲ್ಲಿ 30 ಸಾವಿರಕ್ಕೂ ಅಧಿಕ ಸಂಸ್ಕೃತ ವೇದ-ವೇದಾಂಗಗಳ ಅಧ್ಯಯನ ಸಾಗಿದೆ. ಅಷ್ಟೇ ಅಲ್ಲದೇ ಪ್ರಾಥಮಿಕ ತರಗತಿಯಿಂದ-ಪದವಿಯವರೆಗೆ ಮೂರುಲಕ್ಷ ಸಂಸ್ಕೃತ ವಿದ್ಯಾರ್ಥಿಗಳಿದ್ದಾರೆ. ಬೆಳೆಯುವ ಮಕ್ಕಳ ತಲೆಯಲ್ಲಿ ಸಂಸ್ಕೃತ ವನ್ನು ಯಾಕೆ ಹೇರಬೇಕು? ಎಂದು ಯಾರಾದರೂ ಪ್ರಶ್ನಿಸಬಹುದು, ಜ್ಞಾಪಕಶಕ್ತಿ ಚುರುಕಾಗಿರುವ ಈ ವಯಸ್ಸಿನಲ್ಲಿ ಸಂಸ್ಕೃತ ಭಾಷೆಯ ಕೆಲವುಗದ್ಯಪದ್ಯ-ಸುಭಾಷಿತಗಳು, ಕೆಲವು ಸುಲಭಗ್ರಾಹ್ಯಪದಗಳು, ಕ್ರಿಯಾಪದ-ವಿಭಕ್ತಿ- ಕಾರಕ-ಸಂಧಿ-ಸಮಾಸಗಳನ್ನು ಯಾವುದೇ ಮಾಧ್ಯಮದಲ್ಲಿ ಕಲಿಸಿದರೂ ಸಾಕು, ನಮ್ಮ ಮಾತೃಭಾಷೆಯ ಹೆಚ್ಚಿನಪದಗಳು ಸಂಸ್ಕೃತವೇ ಆಗಿವೆ ಎಂಬ ಭಾವನೆ ಬರುವುದಲ್ಲದೇ, ವಿದ್ಯಾರ್ಥಿಗಳ ಭಾಷಾಶುದ್ಧತೆಗೆ ಸಹಾಯಕಾರಿಯಾಗುವುದು.
ಎಂದೆಂದಿಗೂ ಸಂಸ್ಕೃತ ಭಾಷೆ ವಿಶ್ವ ಮರ್ಯಾದಿತ ಭಾಷೆ. ಅದರ ಮೂಲಕ ಸೃಷ್ಟಿಯಾದ ಜ್ಞಾನ ನಮ್ಮದೇಶದ ಅಮೂಲ್ಯ ಆಸ್ತಿ. ಅದನ್ನು ಅಧ್ಯಯನದ ಮೂಲಕ ಕಾಪಾಡಿಕೊಂಡು ಬರುವುದು, ತನ್ಮೂಲಕ ಉಳಿಸಿಕೊಳ್ಳುವುದು ಎಲ್ಲಾ ಕಾಲಕ್ಕೂ ಈ ರಾಷ್ಟ್ರದ ವಿದ್ಯಾವಂತರ-ಪ್ರಜ್ಞಾವಂತರ ಕರ್ತವ್ಯವಾಗಿದೆ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಂಡು ಕಾರ್ಯಗತಗೊಳಿಸಬೇಕು.