Proposed Ram Mandir, Ayodhya

ಸರಯೂ ತಟದಲ್ಲಿ ಭಾರತಕ್ಕೆ ಸಿಕ್ಕಿದ್ದು ಕಳೆದುಹೊಗಿದ್ದ ತನ್ನ ಆತ್ಮ !

ಲೇಖಕರು: ಪ್ರದೀಪ ಮೈಸೂರು
ಪ್ರಚಾರಕರು, ಪ್ರಾಂತ ಪ್ರಚಾರ ಪ್ರಮುಖ, ಕರ್ನಾಟಕ ದಕ್ಷಿಣ

ಅದು ಹಾಗೆಯೇ. ಇತಿಹಾಸದ ಕೆಲವು ಘಟ್ಟಗಳು, ದಿನಗಳು, ಇಸವಿಗಳು ಶಾಶ್ವತವಾಗಿ ನೆನಪುಳಿದುಬಿಡುತ್ತವೆ. ಅಷ್ಟು ಮಾತ್ರವಲ್ಲ, ಅವು ಚರಿತ್ರೆಯ ಓಟಕ್ಕೆ ಹೊಸ ತಿರುವನ್ನೂ ನೀಡುತ್ತವೆ. ನೀವೇ ನೋಡಿ – ಸಾಮ್ರಾಜ್ಯಗಳನ್ನು ಹುಟ್ಟುಹಾಕಿದ್ದು, ಅವುಗಳನ್ನು ಕೆಡವಿದ್ದು, ಅದೇ ಸಾಮ್ರಾಜ್ಯಗಳ ಅಸ್ಮಿತೆಯನ್ನೇ ಕೆಣಕಿ, ಕೆದಕಿ ಅವುಗಳ ಮೂಲವನ್ನೇ ಅಲುಗಾಡಿಸಿದ ಅವೆಷ್ಟೋ ಘಟನೆಗಳಿಗೆ ಇತಿಹಾಸ ಪುರುಷ ಸಾಕ್ಷಿಯಾಗಿದ್ದಾನೆ. ಈ ವಿದ್ಯಮಾನಗಳು ಘಟಿಸುವುದಕ್ಕೆ ಪೂರ್ವ ಪಶ್ಚಿಮದ ಮೇರೆಗಳ ಹಂಗಿಲ್ಲ. ಎಲ್ಲಿ, ಯಾವಾಗ ಬೇಕಾದರೂ ನಡೆದುಹೋಗಬಹುದು.

ಪೂರ್ವ ಪಶ್ಚಿಮಗಳ ಕೆಲವು ಉದಾಹರಣೆಗಳಿಲ್ಲಿವೆ. 1776ರಲ್ಲಿ ಅಮೆರಿಕದ ಸ್ವಾತಂತ್ರ್ಯ. ಫ್ರೆಂಚ್ ಕ್ರಾಂತಿ, 1815ರ ನೆಪೋಲಿಯನ್ ಸೋಲು ಕಂಡ ಬ್ಯಾಟಲ್ ಆಫ್ ವಾಟರ್‍ಲೂ, 1893, 1914, 1917, 1939, 1945, 1975, 1992 – ಇವುಗಳಲ್ಲಿ ಯಾವುದೇ ಒಂದು ವರ್ಷವನ್ನು ಆಯ್ಕೆ ಮಾಡಿಕೊಂಡರೂ ಅದು ಕೇವಲ ಒಂದು ದೇಶ ಅಥವಾ ಒಂದು ಸಮುದಾಯಕ್ಕೆ ಸೀಮಿತವಾದ ವಿದ್ಯಮಾನ ಆ ಕಾಲಘಟ್ಟದಲ್ಲಿ ನಡೆದದ್ದಲ್ಲ ಬದಲಾಗಿ ಆ ಹೊತ್ತಿನ ಆಗುಹೋಗುಗಳು ಜಾಗತಿಕವಾಗಿ ವೈಚಾರಿಕ, ರಾಜಕೀಯ ಹಾಗು ಸಾಮಾಜಿಕ ಪರಿಣಾಮವನ್ನು ಉಂಟುಮಾಡಿದೆ. ಮುಂದೆ ನಡೆಯಬಹುದಾದ ಮಹತ್ತಿಗೆ ಕಾಲವು ಗರ್ಭಧರಿಸುವುದೇ ಇಂತಹ ಸಂದರ್ಭಗಳಲ್ಲಿ.

Proposed Ram Mandir, Ayodhya

ಯಾರು ಈ ಜಗದ ಒಡೆಯ?

ಹಲವು ಶತಮಾನಗಳ ಕಾಲ ಪ್ರಪಂಚದ ಅಧಿಕಾಂಶ ನಿಯಂತ್ರಣವು ಥೇಮ್ಸ್ ನದಿಯ ದಡದಿಂದ ನಡೆಯುತ್ತಿತು. ಎರಡನೇ ಮಹಾಯುದ್ಧದ ನಂತರ ಯೂರೋಪ್‍ನ ಆಧಿಪತ್ಯವು ಅಂತ್ಯಗೊಂಡು ಸಿಂಹಾಸನವು ಅಮೆರಿಕದ ವಶವಾಯ್ತು. ಇರಲಿ. ಸಾಮ್ರಾಟ ಯಾರೇ ಆಗಿರಲಿ ವಿಶ್ವದ ಬೌದ್ಧಿಕ ಪಡೆಯು ಅವನ ವಿಚಾರ, ನೀತಿನಿರ್ಣಯ, ಅವನ ಆಪ್ತವಲಯ ಯಾವುದು ಇರಬೇಕು ಮತ್ತು ಯಾರಿರಬೇಕು ಎಂಬುದನ್ನು ನಿರ್ಧರಿಸುತ್ತಿತ್ತು. ತಮ್ಮನ್ನು ತಾವು ಜಾಗತಿಕ ಬೌದ್ಧಿಕ ರಂಗದ ಆಯಕಟ್ಟಿನ ಜಾಗದಲ್ಲಿ ಸ್ಥಾಪಿಸಿಕೊಂಡ ಬುದ್ದಿಜೀವಿಗಳಿಗೆ ಅನ್ನ, ಅರಿವೆ, ಅಶನ, ನಿವೇಶನ ಹಾಗೂ ಪಾರಿತೋಷಕಗಳನ್ನು ನೀಡಿ ಸಾಕಿದ್ದು ರಾಜಕೀಯ ನೇತೃತ್ವವೇ. ಜಗದ ಜನರ ಬುದ್ಧಿಯ ಒಡೆಯರು ನಾವು ಎಂಬ ಧೋರಣೆ ಮತ್ತು ಏಕಸ್ವಾಮ್ಯ ಒಂದು ವಿಚಾರಕ್ಕೆ ಬೆಸೆದುಕೊಂಡ ಬುದ್ದಿಜೀವಿಗಳದ್ದಾದರೆ, ಕಳೆದ ಶತಮಾನದ ನಡುವಿನಲ್ಲಿ ಲೋಕೋದ್ಧಾರದ ಗುತ್ತಿಗೆಯನ್ನು ಪಡೆದಿರುವಂತೆ ವರ್ತಿಸಲು ಆರಂಭಿಸಿದ್ದು ಅಮೆರಿಕ. ಸುಮಾರು 60 ವರ್ಷಗಳು ಅಮೆರಿಕದ್ದೇ ಕಾರುಬಾರು. ಈಗ ಆ ಸ್ಥಾನದಿಂದ ಅದು ಪಕ್ಕಕ್ಕೆ ಸರಿಸಲ್ಪಟ್ಟಿದೆ.

“ಬೌದ್ಧಿಕತೆಯ ಗುತ್ತಿಗೆದಾರರಿಗೆ” ಜಾಗತಿಕ ವಿದ್ಯಮಾನಗಳು ಆಗಿಂದಾಗ್ಗೆ ಆಘಾತಗಳನ್ನು ನೀಡಿದೆ. ಆಗೆಲ್ಲ ಇವರುಗಳು ಹೊಸ ತರ್ಕಗಳನ್ನು ಸೃಷ್ಟಿಸಿ ಹಾಗೂ ಹೀಗೂ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಾರೆ. ಬ್ರಿಟನ್ ರಾಜಸತ್ತೆಯು 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡುವುದರಿಂದ ಆರಂಭಿಸಿ 1997ರಲ್ಲಿ ಹಾಂಗ್‍ಕಾಂಗ್‍ನ್ನು ಚೀನಾಗೆ ಹಸ್ತಾಂತರಿಸುವುದರೊಂದಿಗೆ ಯೂರೋಪ್‍ನ ಬುದ್ಧಿಜೀವಿಗಳ ಹುಕುಮತ್ತು ಅಂತ್ಯಗೊಂಡು ಮಿಸಿಸಿಪ್ಪಿ ನದಿ ತೀರದ ಗಾಳಿಯು ಬೀಸಲಾರಂಭಿಸಿತ್ತು.

ಎರಡನೆ ವಿಶ್ವಯುದ್ಧದ ಪರಿಣಾಮದಿಂದಾಗಿ ರಾಷ್ಟ್ರೀಯತೆಯೆಂಬುದು ಅಸಹ್ಯವಾದ ವಿಚಾರವೆಂಬಂತೆ ಯೂರೋಪ್ ಖಂಡದಲ್ಲಿ ಚರ್ಚಿತವಾಯ್ತು. ಅಷ್ಟೇ ಅಲ್ಲ ಪ್ರಪಂಚದ ಉಳಿದ ದೇಶಗಳಲ್ಲೂ, ರಾಷ್ಟ್ರೀಯತೆಯೆಂಬುದು ಹಿಂಸೆಯನ್ನು ಪ್ರಚೋದಿಸುವಂತಹದ್ದು ಎಂಬಂತೆ ಬಿಂಬಿಸಲಾಯ್ತು. ಮಾಧ್ಯಮಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ರಾಜಕೀಯ ನಾಯಕತ್ವದಲ್ಲಿ ರಾಷ್ಟ್ರೀಯತೆಯ ಟೀಕಾಕಾರರಿಗೆ ಮನ್ನಣೆ, ಪ್ರಾತಿನಿಧ್ಯ ದೊರೆತು ವೈಶ್ವಿಕತೆ, ಜಾಗತಿಕರಣ, ಜಾತ್ಯತೀತತೆ ಎಂಬ ಎರವಲು ಪಡೆದ ಮತ್ತು ಅಸಹಜವಾದ ಚಿಂತನೆ ಹಾಗು ಚರ್ಚೆಯು 20ನೇ ಶತಮಾನದ ಅಂತ್ಯದವರೆಗೂ ನಡೆಯಿತು. ಆ ಮಹತ್ತರ ಘಟನೆ ನಡೆಯುವವರೆಗಷ್ಟೇ …

ಸರಯೂ ತೀರದಲ್ಲಿ …

ಹಿಂದೂ ಪುನರುತ್ಥಾನದ (Hindu Revivalism) ಪರ್ವಕಾಲವದು. ಒಂದು ಶತಮಾನದ ಅವಧಿಯೊಳಗಾಗಿ ಎರಡು ಬಾರಿ ಭಾರತದ ಅಸ್ಮಿತೆಯು ಜಾಗೃತಗೊಂಡು ತನ್ನನ್ನು ತಾನು ಅಭಿವ್ಯಕ್ತಗೊಳಿಸಿದೆ.  ಒಂದು – 1893ರಲ್ಲಿ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಬೌದ್ಧಿಕ ಜಗತ್ತನ್ನು ಭಾರತದ ಅಧ್ಯಾತ್ಮದ ಕಡೆಗೆ ಸೆಳೆದ ಸಂದರ್ಭ.  ಗುಲಾಮ ಭಾರತದ ಅಸ್ಮಿತೆಯ ಪರಿಚಯವು ಪ್ರಪಂಚಕ್ಕೆ ಆದದ್ದೇ ಅಲ್ಲಿ. ಇನ್ನೊಂದು – ಅದಾಗಿ 99 ವರ್ಷಗಳ ಬಳಿಕ ಸ್ವತಂತ್ರ ಭಾರತದಲ್ಲಿ 1992ರಲ್ಲಿ ಸರಯೂ ತೀರದಲ್ಲಿ ಹಿಂದೂ ಪುನರುತ್ಥಾನದ ರಾಷ್ಟ್ರೀಯ ರೂಪವು ಪ್ರಕಟಗೊಂಡ ಗಳಿಗೆ. ಅಲ್ಲಿಯವರೆಗೂ ಭಾರತದ ಚಿಂತನೆಯನ್ನು ಪ್ರಭಾವಿಸಿದ್ದ ಸಮಾಜವಾದಿಗಳು ಹಾಗೂ ಜಾತ್ಯತೀತರು ರಾಷ್ಟ್ರೀಯತೆಯ ಚರ್ಚೆಯನ್ನು ಮೂಲೆಗೆ ಸರಿಸಿಬಿಟ್ಟಿದ್ದರು, ಅಷ್ಟೇ ಅಲ್ಲ ಭಾರತದ ಅಸ್ಮಿತೆಯ ಬಗ್ಗೆ ಚರ್ಚಿಸುವವರನ್ನು ಮತ್ತು ಅದನ್ನು ಅನ್ಯಾನ್ಯ ರಂಗಗಳಲ್ಲಿ ಪ್ರತಿಪಾದಿಸುವವರನ್ನು ಕೋಮುವಾದಿಗಳು, ಪ್ರಗತಿ ವಿರೋಧಿಗಳು ಎಂದು ಜನಮಾನಸದಲ್ಲಿ ಮೂಡಿಸಿದ್ದರು. ಆದರೆ ಸತ್ಯವು ಅಸತ್ಯದ ಗರ್ಭ ಸೀಳಿಕೊಂಡು ಪ್ರಕಾಶಿಸಿದಾಗ ಅದನ್ನು ನೇರ ಕಣ್ಣುಗಳಿಂದ ನೋಡುವುದು ಅಷ್ಟು ಸುಲಭವಲ್ಲ. ಅದನ್ನು ಒಪ್ಪುವುದಂತೂ ಇನ್ನೂ ಕಷ್ಟದ ಕೆಲಸ.

ಮುರಿದು ಬಿದ್ದ ಮೀಸಲು

ಭಾರತದ ಬೌದ್ಧಿಕ ಚರ್ಚೆಯು ಜಾತ್ಯತೀತತೆಗೆ ಮೀಸಲುಗೊಂಡಿತ್ತು. ಅಯೋಧ್ಯೆಯಲ್ಲಿ ಕರಸೇವಕರು ಕೆಡವಿದ್ದು ಕೇವಲ ಬಾಬರಿ ಕಟ್ಟಡವನ್ನಲ್ಲ ದೇಶದ ಬೌದ್ಧಿಕ ಮೀಸಲಾತಿಯನ್ನೂ ಕೂಡ. ಅಂದು ಡಿಸೆಂಬರ್ 6 ರಂದು ಹಿಂದುವಿಗೆ ತನ್ನ ಅಸ್ಮಿತೆಯ ಪರಿಚಯವಾದಾಗ ರಾಜಕಾರಣದ ಹುಸಿಗೋಡೆಗಳನ್ನು ಆತ ಲೆಕ್ಕಿಸದೆ, ಜಾತಿಯ ಸಂಕೋಲೆಗಳನ್ನು ದಾಟಿ ರಾಷ್ಟ್ರೀಯ ಸ್ವಾಭಿಮಾನವನ್ನು ಪುನಃ ಸ್ಥಾಪಿಸುವ ಅಭಿಯಾನದಲ್ಲಿ ತನ್ನ ಕೈಜೋಡಿಸಿದ.

Historic Karseva

ಅಯೋಧ್ಯೆಯ ಆ ಘಟನೆಯು ಹಿಂದೂ ರಾಷ್ಟ್ರೀಯತೆಯ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾಯ್ತು. ಅಲ್ಲಿಯವರೆಗೆ ಬೇಲಿಯ ಮೇಲೆ ಕುಳಿತು ಗೆದ್ದ ಎತ್ತಿನ ಬಾಲ ಹಿಡಿಯೋಣ ಎಂದು ಕಾಯುತ್ತಿದ್ದ ಜಾಣರಿಗೆ – ಹೇಳಿ, ನೀವೀಗ ಎಲ್ಲಿ ನಿಲ್ಲುತ್ತೀರಿ ಹೇಳಿ? ಎಂದು ಅಣಕಿಸುವಂತೆ ಮತ್ತು ನಿರ್ಣಾಯಕ ಪ್ರಶ್ನೆಯನ್ನು ಕೇಳುವಂತೆ ಕರಸೇವೆ ನಡೆಯಿತು. ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲೂ ಇಲ್ಲದ ಎಲ್ಲ ತರಹದ ಜನರೂ ಯಾವುದಾದರೊಂದು ಕಡೆಯಲ್ಲಿ ಗುರುತಿಸಿಕೊಳ್ಳುವ ಸನ್ನಿವೇಶವು ನಿರ್ಮಾಣಗೊಂಡಿತು. ಧೃವೀಕರಣವು ಪೂರ್ಣಗೊಂಡಾಗ ರಾಷ್ಟ್ರೀಯತೆಯ ವಿಚಾರದ ಪಡೆಯು ಸಂಖ್ಯಾ”ಬಲ”ವನ್ನು ಹೆಚ್ಚಿಸಿಕೊಂಡಾಗಿತ್ತು.

 

ಜನಬಲವು ಜಾತ್ಯತೀತತೆಯ ಕಡೆಗೇ ವಾಲುತ್ತದೆ ಎಂಬ ಸ್ಥಾಪಿತ ಚಿಂತನೆಯು ಮುರಿದು ಬಿತ್ತು. ಗಾರ್ಡಿಯನ್, ವಾಲ್ ಸ್ಟ್ರೀಟ್ ಜರ್ನಲ್ ಆದಿಯಾಗಿ ಅನೇಕ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಈ ವಿದ್ಯಮಾನವು ಚರ್ಚೆಗೆ ಒಳಪಟ್ಟಿತು. ಟಿವಿ ಸ್ಟುಡಿಯೋಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಅಲ್ಲಿಯವರೆಗೂ ಒಂದು ಸಾಲಿನಷ್ಟೂ ಜಾಗವನ್ನು ಪಡೆಯದ ಹಿಂದೂ ರಾಷ್ಟ್ರೀಯತೆಯ ವಿಚಾರವು ಪಠ್ಯಗಳಲ್ಲಿ ಸೇರಿಕೊಂಡಿತು. ರಾಜಕೀಯ ಅಧಿಕಾರವೆಂದರೆ ಇಂಥವರದ್ದೇ ಸ್ವತ್ತು ಎಂಬ ಲೈಫ್ ಟೈಮ್ ವ್ಯಾಲಿಡಿಟಿಯು ಮುಗಿಯುವ ಹಂತಕ್ಕೆ ತಲುಪಿದ ಕಾಲವದು. ಅಡ್ಡದಾರಿಯೇ ಹೆದ್ದಾರಿ ಎಂದು ಸಾಗುತ್ತಿದ್ದ ಹಲವು ವಿಚಾರವಂತರು ಮುಖ್ಯಮಾರ್ಗ ಯಾವುದೆಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವಂತಾದ ಪರೀಕ್ಷಕ ಗಳಿಗೆ ಅದು. ನಡುವಿನಲ್ಲಿ ನಿಂತು ಸಂತುಲನ ಮಾಡಲು ಹೆಣಗುತ್ತಿದ್ದ ಬುದ್ಧಿವಂತರು ಎಡ ಅಥವಾ ಬಲಕ್ಕೆ ನಡೆಯಬೇಕೆಂಬ ನಿರ್ಣಯಕ್ಕೆ ಬಂದ ನಿರ್ಧಾರದ ಕಾಲವದು. ಹೀಗೆ ಬುದ್ಧಿಯ ಅನೇಕ ಮೀಸಲುಗಳನ್ನು ಮುರಿದು ಒಂದಾ ಇಲ್ಲಿ, ಇಲ್ಲವೇ ಅಲ್ಲಿ ಎಂಬ ಧೃವೀಕರಣಕ್ಕೆ ನಾಂದಿ ಹಾಡಿದ ರಾಷ್ಟ್ರೀಯ ಪರ್ವವದು.

ರಾಷ್ಟ್ರೀಯತೆಯ ಘಂಟಾನಾದದ ಅನುರಣನ

ಅಲ್ಲಿ ಅಯೋಧ್ಯೆಯಲ್ಲಿ ಇನ್ನೂ ಬಾಬರಿ ಕಟ್ಟಡವು ಉರುಳಿತ್ತಷ್ಟೇ, ಹೊಸ ರಾಮಮಂದಿರವಿನ್ನೂ ತಲೆಯೆತ್ತುವುದು ಬಾಕಿಯಿತ್ತು, ಮುಂದೇನಾಗಬಹುದು ಎಂದು ಅಂದಾಜಿಸಲು ಎಲ್ಲ ನಮೂನೆಯ ಲೆಕ್ಕ ಪಂಡಿತರೂ ಕುಳಿತಿದ್ದರು. ಒಂದು ಸಂಗತಿಯಂತೂ ನಿಶ್ಚಯವಾಗಿಯಾಗಿತ್ತು. ಅದೇನೆಂದರೆ, ಇನ್ನೊಮ್ಮೆ ಅಲ್ಲಿ ಮಸೀದಿಯು ತಲೆಯೆತ್ತುವುದಿಲ್ಲ, ಅಷ್ಟು ಮಾತ್ರವಲ್ಲ ರಾಜಕೀಯ ತಂತ್ರಗಳಿಂದ ಆ ಪ್ರಯತ್ನವನ್ನೇನಾದರು ಮಾಡಿದ್ದೇ ಆದಲ್ಲಿ ಅದನ್ನು ಜಾಗೃತ ಹಿಂದೂ ಸಮಾಜವು ಆಗಗೊಡುವುದಿಲ್ಲ.

ಇತ್ತ ಹಳ್ಳಿಗಾಡುಗಳಲ್ಲಿ, ನಗರಗಳಲ್ಲಿ, ಸುದೂರದ ಗುಡ್ಡಗಾಡುಗಳಲ್ಲಿ ಅವರವರ ಊರಿನ ಹಳತಾದ, ಅರೆಪಾಳುಬಿದ್ದ ದೇಗುಲಗಳ ಜೀರ್ಣೋದ್ಧಾರದ ಪ್ರಕ್ರಿಯೆಯು ವೇಗಪಡೆದುಕೊಂಡಿತು. ಆಗೊಮ್ಮೆ ಈಗೊಮ್ಮೆ ಹಣತೆಯ ಬೆಳಕು ಕಾಣುತ್ತಿದ್ದ ರಾಮ ಭಜನಾ ಮಂದಿರಗಳಲ್ಲಿ ನಿಯಮಿತ ಜನಕೂಡುಹ ಆರಂಭವಾಗಿಬಿಟ್ಟಿತು. ರಾಮನ ಮಂದಿರವನ್ನು ನೊಡುವೆವೋ ಇಲ್ಲವೋ ಎಂಬ ಅನುಮಾನದಲ್ಲಿದ್ದ ಹಿಂದುಗಳು ನವನಿರ್ಮಾಣ ಪೂರ್ಣಗೊಳ್ಳುವುದು ಯಾವಾಗ?  ಎಂಬ ಚರ್ಚೆ ಮಾಡಲು ಶುರುವಿಟ್ಟುಕೊಂಡರು. ಇದು ಅತಿದೊಡ್ಡದಾದ ಬದಲಾವಣೆ.

ಹಿಂದೂ ಪುನರುತ್ಥಾನದ ಘಂಟಾನಾದದ ಅನುರಣನವು ಹಲವು ರಂಗಗಳಲ್ಲಿ, ವಿಭಿನ್ನ ಮುಖಗಳಲ್ಲಿ ತೆರೆದುಕೊಂಡಿತು. ಜಾತ್ಯತೀತ ರಾಜಕಾರಣಿಗಳು ಹಿಂದೂ ವೋಟ್ ಬ್ಯಾಂಕ್‍ನ್ನು ಕಡೆಗಣಿಸಬಾರದು ಎಂಬ ಎಚ್ಚರವನ್ನು ವಹಿಸುತ್ತಿರುವಾಗಲೇ, ಹಿಂದುತ್ವದ ಆಧಾರದಲ್ಲೇ ಅಧಿಕಾರದ ಗದ್ದುಗೆಯೇರುವ ನಿಖರತೆಯು ಇನ್ನೊಂದು ವಲಯದಲ್ಲಿ ನಿಶ್ಚಿತವಾಗಿ ಕಾಣಲು ಆರಂಭವಾಯ್ತು. ಹಿಂದುತ್ವವೆಂದರೆ ಈ ನೆಲದಲ್ಲಿ ಅಪರಾಧದ ಭಾವವನ್ನು ತರುತ್ತಿದ್ದ ಕಾಲಖಂಡಕ್ಕೆ ಬೆನ್ನು ಮಾಡಿ ರಾಷ್ಟ್ರೀಯತೆಯ ನವಕಿರಣಗಳ ಕಡೆಗೆ ಮುಖಮಾಡಿ ಹೊಸಪೀಳಿಗೆಯ ಸಾಮಾಜಿಕ ಹಾಗೂ ರಾಜಕೀಯ ನಾಯಕರು ಉದಯಿಸಿದರು. ಅರ್ಧ ಶತಮಾನದ ಕಾಲ ಮುನ್ನೆಲೆಯಲ್ಲಿದ್ದ ಜಾತ್ಯತೀತತೆಯ ಚರ್ಚೆ ಹಾಗೂ ರಾಷ್ಟ್ರೀಯತೆಯ ಚಿಂತನೆಯು ಸಮಾನ ವೇದಿಕೆಯಲ್ಲಿ ಕಾಣಿಸಿಕೊಳ್ಳತೊಡಗಿತು. ಬಹುಕಾಲದ ಪೈಪೋಟಿಯ ನಂತರ ಜಾತ್ಯತೀತವಾದದ ಸದ್ದಡಗಿ ರಾಷ್ಟ್ರೀಯತೆಯು ಮುನ್ನೆಲೆಯನ್ನೂ, ಮಹತ್ವವನ್ನೂ ಪಡೆಯಿತು. ಎರವಲು ಪಡೆದ ವಿಚಾರದಿಂದ ಭಾರತವನ್ನು ಜಗತ್ತಿಗೆ ಪರಿಚಯಿಸುತ್ತಿದ್ದ ಕಾಲ ಹಿಂದೆ ಸರಿದು ಹಿಂದೂ ವಿಚಾರವೇ ಭಾರತದ ಗುರುತನ್ನು ಪ್ರಪಂಚಕ್ಕೆ ತೊರಿಸಲು ಸಿದ್ಧವಾಯಿತು.

ಕಾಲದ ತಿರುವಿನಲ್ಲಿ ಭಾರತಕ್ಕೆ ಸಿಕ್ಕಿದ್ದು ತನ್ನ ಅಸ್ಮಿತೆ. ತನ್ನ ಗುರುತು. ತನ್ನದೇ ಪರಿಚಯ. ಪ್ರಾಯಶಃ ಈ ಘಟನೆಯು ಜಾಗತಿಕ ಚಿಂತನೆಯನ್ನು ಬಹುಮಟ್ಟಿಗೆ ರೂಪಿಸಿದೆ ಎನ್ನಬಹುದು. ಈ ಘಟನೆ ನಡೆದ ಎರಡು ದಶಕಗಳ ತರುವಾಯ ಪ್ರಪಂಚದ ಹಲವು ದೇಶಗಳಲ್ಲಿ ತಮ್ಮ ಮೂಲದ ಹುಡುಕಾಟ ನಡೆದಿದೆ. ಹೌದು, ಇದೆಲ್ಲವೂ ನಿಧಾನವಾದ ಪ್ರಕ್ರಿಯೆಗಳು. ಫಟಕ್ಕನೆ ನಡೆಯುವಂಥದ್ದಲ್ಲ.  ಅದು ಸ್ಪೇನ್ ದೇಶವೇ ಅಗಿರಲಿ, ಅಮೆರಿಕವೇ ಆಗಿರಲಿ, ಐರೋಪ್ಯ ಒಕ್ಕೂಟದಲ್ಲಿ ನಾವು ಇರುವುದಿಲ್ಲ ಅದರಿಂದ ಹೊರಬರಬೇಕು ಎಂದು ಮತ ಚಲಾಯಿಸಿದ ಬ್ರಿಟನ್ ಇರಲಿ (Brexit) ಈ ಎಲ್ಲ ಘಟನೆಗಳೂ ಜಾಗತಿಕರಣೋತ್ತರ ಪ್ರಪಂಚದಲ್ಲಿ ರಾಷ್ಟ್ರೀಯತೆಯ ಮಹತ್ತನ್ನು ಮತ್ತೆ ಸ್ಥಾಪಿಸುವ ಕಡೆಗೆ ಸಾಗಿದೆ.

ಏಕೆಂದರೆ …

ಅಸ್ಮಿತೆಯು ಸತ್ಯ. ಅದುವೇ ನಿಜವಾದ ನೆಲೆ. ನಾಡು, ನುಡಿ, ನಮ್ಮ ಜನ, ನಮ್ಮ ನೆಲ, ನಮ್ಮತನವೇ  ಇರುವಿಕೆಯ ನಿಜವಾದ ಸಂಕೇತಗಳು. ಬೇರುಗಳು ಇರುವಿಕೆಯ ಸಾಕ್ಷಿ, ಉದುರುವ ಎಲೆಗಳಲ್ಲ. ಅವುಗಳು ಬುದ್ಧಿಯ ನಶೆ. ಅಷ್ಟೆ.

Sri Pradeep Mysuru, Pranth Prachar Pramukh – Karnataka Dakshina

 

 

Leave a Reply

Your email address will not be published.

This site uses Akismet to reduce spam. Learn how your comment data is processed.