ಡಾ. ಎಸ್ಪಿಬಿಗೆ ನುಡಿ ನಮನ ‘ರಸಸಿದ್ಧರಿಗೆ ಮರಣವಿಲ್ಲ’

ಲೇಖನ: ಪ್ರದೀಪ್ ಮೈಸೂರು, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್, ಆರೆಸ್ಸೆಸ್

“.. ಏ ದೇಖಕೆ ದಿಲ್ ಝೂಮಾ… ” ಇದು ನನ್ನನ್ನು ಬಹುವಾಗಿ ಸೆಳೆದ ಹಾಡು. ಇಂಜಿನಿಯರಿಂಗ್ ಕಲಿಯಲು ಕಾಲೇಜಿಗೆ ಸೈಕಲ್ ನಲ್ಲಿ ‌ಹೋಗುವಾಗ ದಾರಿ ಬದಿಯ ಅಂಗಡಿಯಲ್ಲಿ ಈ ಹಾಡು ಕೇಳಿದರೆ ಅಲ್ಲೇ ನಿಂತು ಪೂರ್ತಿಯಾಗಿ ಕೇಳಿ ನಂತರವೇ ಮುಂದೆ ಹೋಗುತ್ತಿದ್ದೆ. ಆ ಹಾಡಿನಲ್ಲಿ ‌ರಫಿಯವರು ಝೂಮಾ… ಪದದಲ್ಲಿ ಮಾ… ಅಕ್ಷರವನ್ನು ಮೃದುಗೊಳಿಸಿರುವ ರೀತಿ ಅನೂಹ್ಯವಾದದ್ದು ಎಂದು ಸೋನು ನಿಗಮ್ ನಡೆಸುತ್ತಿದ್ದ Zee ಸರಿಗಮಪ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬಂದಿದ್ದ ಬಾಲು – ನಿಮ್ಮನ್ನು ಪ್ರಭಾವಿಸಿದ ಗಾಯಕ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ. ಗಾಯಕನ ಪ್ರಭಾವಳಿಯಲ್ಲಿ ಕಳೆದು ಹೋಗುವುದು ಒಂದಾದರೆ, ಗಾಯನದ ಸೂಕ್ಷ್ಮಗಳನ್ನು ಗ್ರಹಿಸುವುದು ವಿದ್ಯಾರ್ಥಿಯ ಮತ್ತು ರಸಿಕನ ಗುಣ.

ಬಾಲು ಅದನ್ನೇ ಹೇಳಿದರು. ಸೂಕ್ಷ್ಮ ಗ್ರಹಿಕೆ. ಕೇಳಡಿ ಕಣ್ಮಣಿ ಸಿನಿಮಾದಲ್ಲಿ ‌ಅವರು ಹಾಡಿದ್ದ ಬ್ರೆತ್ಲೆಸ್ ಹಾಡು ಆಗ ಬಹಳ ಪ್ರಸಿದ್ಧವಾಗಿತ್ತು. ಆ ಹಾಡಿಗಾಗಿ ನೀವೇನು ತಯಾರಿ ಮಾಡಿದ್ದಿರಿ ಎಂಬ ಪ್ರಶ್ನೆಗೆ ಬಾಲು ಅತಿಮಾನುಷವಾದ, ಅವಾಸ್ತವವಾದ, ಅತಿರಂಜನೀಯವಾದ ಉತ್ತರವನ್ನು‌ ನೀಡದೆ – “ನನ್ನಂತಹ ಸ್ಥೂಲ ಕಾಯದ ಮನುಷ್ಯ ಉಸಿರುಗಟ್ಟಿ‌ ಹಾಡಲು ಸಾಧ್ಯವೇ? ಆ ಹಾಡನ್ನು ಎರಡು ಮೂರು ಟೇಕ್ ಗಳಲ್ಲಿ ಹಾಡಿದ್ದೇನೆ” ಎಂದುತ್ತರಿಸಿದರು.

Dr. S P Balasubramaniam, the doyen of Carnatic music passed away on Sep 25 2020

ಪ್ರಮಾಣಿಕತೆ, ನೈಜತೆ ಅವರ ವ್ಯಕ್ತಿತ್ವದ ಮೂಲ ಧಾತು.ಅವರೇ ನಡೆಸುತ್ತಿದ್ದ ಎದೆ‌ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ – ಅನಿಸುತಿದೆ ಯಾಕೋ ಇಂದು ಹಾಡನ್ನು ಹಾಡಿದ ಸ್ಪರ್ಧಿಗೆ ಅಭಿಪ್ರಾಯ ಮಂಡನೆಯ ಸಂದರ್ಭದಲ್ಲಿ ಬಾಲು ಕೇಳಿದ್ದು ನಿಮ್ಮ ಉಚ್ಚಾರಣೆ ಏಕೆ ಹೀಗಿದೆ? ಮೂಲ ಗಾಯಕರು ಹಾಡಿರುವ ಹಾಗೆಯೇ ನಾನೂ ಹಾಡಿದ್ದೇನೆ ಎಂದು ಸ್ಪರ್ಧಿ ಉತ್ತರ ಕೊಟ್ಟಾಗ – ‘ಕನ್ನಡವನ್ನು ಕನ್ನಡದ ರೀತಿ ಉಚ್ಚರಿಸಬೇಕು. ಹಿಂದಿಯವರಂತೆ ಕನ್ನಡವನ್ನು ಆಡಬಾರದು’ ಎಂದು ನವಿರಾಗಿ ಆದರೆ ದೃಢವಾಗಿ ಕನ್ನಡ ಪರ‌ ದನಿಯಾದರು‌ ಅಷ್ಟೇ ಅಲ್ಲ, ಕನ್ನಡವನ್ನು ಉಳಿಸಲು ಕನ್ನಡ ಮಾತಾಡುವವರು ಸ್ಪಷ್ಟವಾಗಿ ಮಾತಾಡಬೇಕು ಎಂಬುದು ಪ್ರಾಥಮಿಕ ಅಗತ್ಯ ಎಂಬುದನ್ನು ವಿಶದಪಡಿಸಿದರು.ಮಾದಕತೆಯಿಂದ ಕೂಡಿರುವ ಹಾಡುಗಳನ್ನು ಪುಟಾಣಿ ಸ್ಪರ್ಧಿಗಳು ಹಾಡಿದಾಗ – ಈ ಹಾಡನ್ನು ನಿನಗೆ ಆಯ್ಕೆ ಮಾಡಿಕೊಟ್ಟವರು ಯಾರು? ಎಂದು ಪ್ರಶ್ನಿಸದೇ ಬಿಡುತ್ತಿರಲಿಲ್ಲ.

ನನ್ನ ಮಮ್ಮಿ ಮತ್ತು ಡ್ಯಾಡಿ ಎಂದೇನಾದರೂ ಪುಟಾಣಿ ಉತ್ತರಿಸಿದರೆ ಅದೇ ಸಭೆಯಲ್ಲೇ ಮಮ್ಮಿ ಮತ್ತು ಡ್ಯಾಡಿಗೆ – ಈ ವಯಸ್ಸಿನಲ್ಲಿ ನಿಮ್ಮ ಕಂದಮ್ಮಗಳ ಬಾಯಲ್ಲಿ ಇಂತಹ ಹಾಡು ಹಾಡಿಸಬೇಡಿ ಎಂದು ಕೋಮಲವಾಗಿ‌ ತಾಕೀತು ಮಾಡಿದ ಉದಾಹರಣೆಗಳು ವಿಪುಲವಾಗಿ ಸಿಗುತ್ತವೆ. ಒಟ್ಟಾರೆ ಸಿನಿಮಾ ಹಾಡುಗಳು ಯಾವ ಯಾವ ರಾಗಗಳಲ್ಲಿ ಇದೆ ಎಂದೇನಾದರೂ ವರ್ಗೀಕರಿಸಿದರೆ ಒಂದಿಪ್ಪತ್ತು, ಇಪ್ಪತ್ತೈದು ರಾಗಗಳ ಒಳಗೆ ಬಂದು ಬಿಡುತ್ತವೆ. ಕಷ್ಟಕರ ‌ರಾಗಗಳಲ್ಲಿ ಸಂಯೋಜನೆ ಮಾಡುವವರು ವಿರಳವಾದರೆ ಅದನ್ನು ಹಾಡಿ ನಿಭಾಯಿಸಬಲ್ಲ ಗಾಯಕ/ಕಿಯರೂ ದುರ್ಲಭವೇ. ಶಾಸ್ತ್ರೀಯ ಸಂಗೀತಗಾರರೂ ನಿಬ್ಬೆರಗಾಗುವಷ್ಟರ ಮಟ್ಟಿಗೆ ಶಾಸ್ತ್ರೀಯ ಸಂಗೀತವನ್ನು ಅಷ್ಟಾಗಿ ಅಭ್ಯಸಿಸದ ಬಾಲು ಅವರು ಹಾಡಿದ್ದಾರೆ ಎಂಬುದು ಮಹತ್ವದ ವಿಷಯ. ಬಾಲು ಹಾಡುತ್ತಾರೆಂದರೆ ರಾಗ ಸಂಯೋಜನೆಯಲ್ಲಿ ‌ಸಾಹಸ ಮಾಡಲು ಸಂಗೀತ ನಿರ್ದೇಶಕರಿಗೆ ವಿಶ್ವಾಸ.

ಶಂಕರಾಭರಣಂ, ಮಲಯ ಮಾರುತ, ಸಾಗರ ಸಂಗಮಂ, ಸ್ವಾತಿ ಮುತ್ಯಂ ಸಿನಿಮಾದಲ್ಲಿರುವ ಮಧ್ಯಮಾವತಿ ರಾಗದ ಸುವ್ವಿ‌ ಸುವ್ವಿ ಹಾಡಿನಲ್ಲಿ ಬಾಲು ಅವರು ಅಳೆದಿರುವ ಧ್ವನಿಯ ಮಂದ್ರ ಮತ್ತು ತಾರಕಗಳು ಅವರ ಸಿದ್ಧಿಯ ದ್ಯೋತಕ. ‌ದೃಶ್ಯ ಮಾಧ್ಯಮ ಬೆಳೆದಂತೆ ಸಂಗೀತ ನಿರ್ದೇಶಕ ಮತ್ತು ಗಾಯಕರ ಮುಖ ಪರಿಚಯ ಜನತೆಗೆ ಆಗುವುದು ಹೆಚ್ಚಾಯಿತು. ಅಲ್ಲಿಯವರೆಗೆ ಸಂಗೀತ ನಿರ್ದೇಶಕ ತನ್ನ ಸಂಗೀತದಿಂದಲೂ ಗಾಯಕ ತನ್ನ ಧ್ವನಿಯಿಂದಲೂ ಜನರ ಭಾವಕೋಶವನ್ನು ಪ್ರವೇಶಿಸುತ್ತಿದ್ದರು. ಅವರ ಹೆಸರು ಉಲ್ಲೇಖ ಆಗುತ್ತಿದ್ದದ್ದು ಆಕಾಶವಾಣಿಯ “ಕೇಳುಗರ ಕೋರಿಕೆ, ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ” ಕಾರ್ಯಕ್ರಮದಲ್ಲಿ. “ಇದೇ ನಾಡು, ಇದೇ ಭಾಷೆ” ಹಾಡಿನಲ್ಲಿ ಬಾಲು ಅವರು ಕಾಣಿಸಿಕೊಳ್ಳುವವರೆಗೆ ಅವರ ಧ್ವನಿಯೇ‌ ಅವರ ಪಹಚಾನ್ ಆಗಿತ್ತು. ನಟರು ಪಾತ್ರ ಪ್ರವೇಶ ಮಾಡಬೇಕು ಎಂಬುದು ಅಗತ್ಯವೇ. ಆದರೆ ಗಾಯಕ ಪಾತ್ರ ಪ್ರವೇಶ ಮಾಡುವುದು ಅಸಾಧ್ಯದ ಸಂಗತಿ. ಇದನ್ನು ಮಾಡಿ ತೋರಿದವರು ಬಾಲು. ಪ್ರೇಮದ ಕಾದಂಬರಿ, ವೇದಂ‌ ಅಣು ಅಣುವುನ ನಾದಂ, ಸುಂದರಿ ಸುಂದರಿ ‌ಸುರ ಸುಂದರಿ ಸುಂದರಿ ಹಾಡುಗಳು ಅವರ ಸಾಮರ್ಥ್ಯಕ್ಕೆ ಕೆಲ ಉದಾಹರಣೆಗಳು ಅಷ್ಟೇ.

ಬಾಲು ಅವರನ್ನು ಪ್ರೇರೇಪಿಸಿದ ರಫಿ ಅವರಿಗೂ ಪಾತ್ರ ಪ್ರವೇಶದ ಶಕ್ತಿ ಇತ್ತು. ಬೈಜು ಬಾವರಾ ಚಿತ್ರದಲ್ಲಿ ಅವರು ಹಾಡಿರುವ – ಓ ದುನಿಯಾ ಕೇ ರಖವಾಲೇ ಹಾಡನ್ನು ರೆಕಾರ್ಡ್ ಮಾಡುವಾಗ ಅವರು ತಲ್ಲೀನರಾಗಿಬಿಟ್ಟಿದ್ದರು. ಆ ಗೀತೆಯ ಸ್ವರ ಸಂಚಾರವು ಮನುಷ್ಯನೊಬ್ಬ ಸಾಧಾರಣವಾಗಿ ತಲುಪಲಾಗದ ತಾರಕವಾಗಿತ್ತು.‌ ಕಂಠ ಬಿರಿದೇ ಹೋಯಿತು ಎಂಬಷ್ಟು ಎತ್ತರದ ಸ್ವರಗಳು. ಭಕ್ತಿ ರಸದಲ್ಲಿ ಮಿಂದ ಸಾಹಿತ್ಯ ಬೇರೆ. ರಫಿ ತಲ್ಲೀನರಾಗಿ ಹಾಡುವಾಗ – ಆ ಎತ್ತರದಲ್ಲಿ ಹಾಡಲು‌ ಆಗದು, ಅವನು ಸತ್ತೇ‌ ಹೋದಾನು ಅವನನ್ನು ತಡೆಯಿರಿ ಎಂದು ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಇದ್ದವರು ಹೇಳಿದ್ದನ್ನು ಹಿರಿಯ ಸಂಗೀತ ನಿರ್ದೇಶಕ ನೌಶಾದ್ ಕಾರ್ಯಕ್ರಮವೊಂದರಲ್ಲಿ ಸ್ಮರಿಸಿದ್ದರು.

ಡಿಜಿಟಲ್ ಲೋಕ ಸ್ಫೋಟಗೊಂಡ ನಂತರವಂತೂ ಸಿನಿಮಾ ಸಂಗೀತ, ಗಾಯಕನ ಧ್ವನಿ ಪರಿಚಯ ಇತ್ಯಾದಿಗಳ ವ್ಯಾಕರಣ ಬದಲಾಗಿ ಹೋಗಿದೆ. ಈಗ ಗಾಯಕ/ಕಿಯರು ತಮ್ಮ ಉಪಸ್ಥಿತಿಯನ್ನು ಪ್ರತ್ಯಕ್ಷವಾಗಿ ತೋರ್ಪಡಿಸಲು ಉತ್ಸುಕರಾಗಿದ್ದಾರೆ. ಇನ್ನೂ ಮುಂದುವರೆದು, ರಿಯಾಲಿಟಿ ಶೋಗಳಲ್ಲಿ ಗಾಯಕನಿಗೆ ತಕ್ಕ ಮಟ್ಟಿನ ಕುಣಿತವೂ ಬರಬೇಕೆಂಬ ಅಲಿಖಿತ ನಿಯಮವೂ ಚಾಲ್ತಿಯಲ್ಲಿದೆ. ಇಂತಹ ಯುಗದಲ್ಲಿ ಬಾಲು ಅವರು ಗಾಯಕನ ಗುರುತನ್ನು ಕಳೆದುಕೊಳ್ಳಲಿಲ್ಲ ಎಂಬುದು ಅವರ ಬದುಕಿನ ಮೂಲಕ ಮುಂಬರುವ ಪೀಳಿಗೆಗೆ ಮಾಡದೆಯೇ ಮಾಡಿರುವ ಪಾಠವಾಗಿದೆ – ಬಾಲು ಪಾಠ.ತಮ್ಮ ಧ್ವನಿಯ ಮೂಲಕ ಬಾಲು ನಲ್ಲ ನಲ್ಲೆಯರು, ಪಡ್ಡೆ‌ ಹುಡುಗರು, ಹೋರಾಟಗಾರರು, ವಿರಹಿಗಳು ಇನ್ನೂ ಅನೇಕರ ಹಾಡುಗಳಲ್ಲಿ ಜೀವಂತವಾಗಿರುತ್ತಾರೆ. ಅದು ನಿಜವಾಗಿ ಕಲಾವಿದನ ಜಾಗ.

ಭರ್ತೃಹರಿ ಹೇಳುವಂತೆ –

ಜಯಂತಿ ತೇ ಸುಕೃತಿನೋರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇಜರಾಮರಣಜಂ ಭಯಮ್ ||

(ರಸಸಿದ್ಧಿಯಾದವನಿಗೆ ಜರ ಮತ್ತು ಮರಣಗಳ ಭಯವಿರದು ಎಂಬುದು ಇದರ ತಾತ್ಪರ್ಯ)

ಈ ಸಾಲುಗಳನ್ನು ಸಾಗರ ಸಂಗಮಂ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ. ಹಂಸಾನಂದಿ ರಾಗದಲ್ಲಿ ಬಾಲು ಅವರೇ ಹಾಡಿದ್ದಾರೆ. ಪಾತ್ರ ಪ್ರವೇಶಿಸಿದ್ದಾರೆ) ಈ ಸಾಲುಗಳು ಅವರಿಗೇ ಮುಡಿಪು. ಏಕೆಂದರೆ ಅವರು ರಸಜ್ಞ, ರಸಸಿದ್ಧ. ಅಂತಹವರಿಗೆ ಮರಣವಿಲ್ಲ.

Sri Pradeep Mysuru, Pranth Prachar Pramukh – Karnataka Dakshina, RSS

Leave a Reply

Your email address will not be published.

This site uses Akismet to reduce spam. Learn how your comment data is processed.