ರಾಜಕೀಯ ಅಸ್ಪೃಶ್ಯತೆಯನ್ನು ಮೀರಿದ ಒಳಗೊಳ್ಳುವಿಕೆಯನ್ನು ಅನುಸರಿಸಲು ಅಸಾಧ್ಯವೇ?
ಲೇಖಕರು: ಡಾ.ಮನಮೋಹನ್ ವೈದ್ಯ, ಸಹಸರಕಾರ್ಯವಾಹ, ಆರೆಸ್ಸೆಸ್.
ಅಕ್ಟೊಬರ್ ೪ ರ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಿತ
ಭಾರತದ ರಾಜಕೀಯ ಭೂಪಟದಿಂದ ಪ್ರಖರವಾದ ತಾರೆಯೊಂದು ಕಣ್ಮರೆಯಾಗಿದೆ. ಮಾಜಿ ರಾಷ್ಟ್ರಪತಿ ಡಾ.ಪ್ರಣಬ್ ಮುಖರ್ಜಿ ಅವರನ್ನು ಕಳೆದುಕೊಂಡಿರುವ ಭಾರತೀಯ ರಾಜಕೀಯ ರಂಗ ತುಂಬ ಬಡವಾಗಿದೆ. ತಮ್ಮ ಸೈದ್ಧಾಂತಿಕ ನಿಲುವಿಗೆ ಬದ್ಧರಾಗಿದ್ದು ಬಹಿರಂಗವಾಗಿ ವಿರೋಧಿ ತತ್ವ ಸಿದ್ಧಾಂತ ಪ್ರತಿಪಾದಿಸುವವರ ಜೊತೆ ಮುಕ್ತವಾದ ಒಡನಾಟ ಇಟ್ಟುಕೊಳ್ಳುವುದು ಈಗೆಲ್ಲಾ ನಶಿಸಿಹೋಗಿರುವ ಪದ್ಧತಿಯಾಗಿದೆ. ಹಿಂದೆಲ್ಲಾ ವಿವಿಧ ವಿಚಾರಗಳನ್ನು ಚರ್ಚಿಸುವುದು, ಪರಿಶೀಲಿಸುವುದು ಮತ್ತು ವಿಮರ್ಶಿಸಿವುದು ಭಾರತೀಯ ಸಮಾಜದ ಸಾಂಪ್ರದಾಯಿಕ ವೈಶಿಷ್ಟ್ಯವಾಗಿತ್ತು. ಸ್ವಾತಂತ್ರ್ಯ ಪೂರ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಗೆ ಹೊಸ ಚೈತನ್ಯವನ್ನು ನವೀಕರಿಸಲು ಸಂಯೋಜಿಸಲ್ಪಟ್ಟ ವೈವಿಧ್ಯಮಯ ರಾಜಕೀಯ ವರ್ಣಫಲಕವಾಗಿತ್ತು. ಇತ್ತಿಚಿನ ದಿನಗಳಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಬೆಳೆಸಿದ ರಾಜಕೀಯ ಅಸಹಿಷ್ಣುತೆ ಮತ್ತು ಸೈದ್ಧಾಂತಿಕ ಅಸ್ಪೃಶ್ಯತೆಯು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಪಕ್ಕಕ್ಕಿರಲಿ, ಕಮ್ಯುನಿಸ್ಟ್ ತತ್ವಶಾಸ್ತ್ರ ಮತ್ತು ಭಯೋತ್ಪಾದನೆಯ ವಿನಾಶಕ ಸಂಯೋಜನೆ ಪ್ರಪಂಚದಾದ್ಯಂತ ತಮ್ಮ ಅಭಿಪ್ರಾಯಗಳೊಂದಿಗೆ ಭಿನ್ನವಾಗಿರುವವರ ಅಸ್ತಿತ್ವದ ಹಕ್ಕನ್ನು ಸಹ ನಿರಾಕರಿಸುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ.
ದಿವಂಗತ ಪ್ರಣಬ್ ದಾ ಆರೆಸ್ಸೆಸ್ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಒಪ್ಪಿಗೆ ನೀಡಿದ್ದು ಭಾರಿ ವಿವಾದಕ್ಕೆ ಗ್ರಾಸವಾಗಿತ್ತು. ಸಂಘದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡದಂತೆ ತಡೆಯಲು ಪ್ರಬಲ ಪಡೆಗಳು ಹಾತೋರೆದು ಯೋಜಿಸಿದವು. ಸಾರ್ವಜನಿಕ ವಿರೋಧದ ಮೂಲಕ ಸ್ವಂತ ಮಗಳನ್ನೆ ತಂದೆಯ ವಿರುದ್ಧ ಎತ್ತಿಕಟ್ಟಿ ಸಣ್ಣತನದ ರಾಜಕೀಯ ಷಡ್ಯಂತ್ರವನ್ನು ಆ ಪಡೆಗಳು ಸೃಷ್ಟಿಸಿದ್ದವು. ಪ್ರಣಬ್ ದಾ ಒಬ್ಬ ಪ್ರಾಮಾಣಿಕ ಮತ್ತು ಅನುಭವಿ ರಾಜಕೀಯ ಮುತ್ಸದ್ಧಿ. ರಾಜಕೀಯ ಜೀವನದ ಆ ಹಂತದಲ್ಲಿದ್ದ ಅವರಿಗೆ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುವುದನ್ನು ಬಿಟ್ಟು ಆರೆಸ್ಸೆಸ್ ಸೇರ್ಪಡೆಗೊಳ್ಳವ ಇರಾದೆಯಿರಲಿಲ್ಲ. ವಾಸ್ತವದಲ್ಲಿ ತಮ್ಮಲ್ಲಿದ್ದ ಅಗಾಧ ರಾಜಕೀಯ ತತ್ವಶಾಸ್ತ್ರವನ್ನು ಸ್ವಯಂಸೇವಕರು ಮತ್ತು ಇತರ ದೇಶವಾಸಿಗಳೊಂದಿಗೆ ಹಂಚಿಕೊಳ್ಳಲು ಅಲ್ಲಿದ್ದರು. ಪ್ರಣಬ್ ದಾ ಅವರ ಆಪ್ತರು ಮತ್ತು ಹಿತೈಷಿಗಳು, ತಮ್ಮಲ್ಲಿದ್ದ ಕಾಂಗ್ರೆಸ್ ಸಿದ್ಧಾಂತವನ್ನು ಹೊಸ ಪ್ರೇಕ್ಷಕರ ಮುಂದೆ ಪ್ರತಿಪಾದಿಸಲು ಅಲ್ಲಿದ್ದರು ಎಂಬುದನ್ನು ತಿಳಿಯಲಿಲ್ಲವೆನ್ನುವುದೇ ದುರದೃಷ್ಟಕರ ಸಂಗತಿ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಿಂದ ಬಂದ ಸಂಘದ ಮೂರನೆಯ ಸರಸಂಘಚಾಲಕರಾದ ಶ್ರೀ ರಜ್ಜು ಭಯ್ಯಾ ಜೀ ಯವರು ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರೊಂದಿಗೆ ದೀರ್ಘಕಾಲದ, ನಿಕಟ ಸಂಬಂಧವನ್ನು ಹಂಚಿಕೊಂಡಿದ್ದರು. ಉತ್ತರಪ್ರದೇಶ ರಾಜಕೀಯದಲ್ಲಿ ಶಾಸ್ತ್ರೀ ಜೀ ಸಕ್ರಿಯರಾಗಿದ್ದ ವರ್ಷಗಳಲ್ಲಿ, ಅಂದಿನ ಸರಸಂಘಚಾಲಕರಾದ ಶ್ರೀ ಗುರೂಜಿಯ ಸಮ್ಮುಖದಲ್ಲಿ ಕೆಲವು ಗಣ್ಯರಿಗೆ ಚಹಾ ಕೂಟವನ್ನು ಆಯೋಜಿಸಲಾಗಿತ್ತು. ರಜ್ಜು ಭೈಯಾ ಜೀ ಅವರು ಶಾಸ್ತ್ರಿ ಜೀ ಅವರನ್ನು ಆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು, ಆದರೆ ಆ ಕೂಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಗುರುತಿಸಲ್ಪಟ್ಟರೆ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ವಿನಾಕಾರಣ ಊಹಾಪೋಹಗಳನ್ನು ಎದುರಿಸುವ ಭಯದಿಂದ ಕೂಟದಲ್ಲಿ ಭಾಗವಹಿಸುವುದಕ್ಕೆ ಶಾಸ್ತ್ರೀ ಜೀ ನಿರಾಕರಿಸಿದರು. ಶಾಸ್ತ್ರೀ ಜೀಯವರ ಈ ಪ್ರತಿಕ್ರಿಯೆಯಿಂದ ನಿರಾಶೆಗೊಂಡ ರಜ್ಜು ಭಯ್ಯಾ ಜೀ, “ಶಾಸ್ತ್ರೀ ಜೀ ನಿಮ್ಮ ಸ್ಥಾನಮಾನದ ನಾಯಕನನ್ನು ಯಾರು ಅನುಮಾನಿಸುತ್ತಾರೆ?” ಎಂದು ಕೇಳಿದರು. “ಓಹ್, ನಿಮಗೆ ರಾಜಕೀಯ ಅರ್ಥವಾಗುತ್ತಿಲ್ಲ” ಎಂದು ಶಾಸ್ತ್ರೀ ಜೀ ಉತ್ತರಿಸಿದ್ದರಂತೆ. ಶ್ರೀ ರಜ್ಜು ಭಯ್ಯಾ ಜೀಯವರು “ಆರ್.ಎಸ್.ಎಸ್ ನ ವಿಷಯ ಹಾಗಲ್ಲ, ಒಬ್ಬ ಸ್ವಯಂಸೇವಕ ನಾನು ನಿಮ್ಮೊಂದಿಗೆ (ಕಾಂಗ್ರೆಸ್ ಮುಖಂಡ) ಮಾತನಾಡುತ್ತಿರುವುದನ್ನು ನೋಡಿದರೆ ರಜ್ಜು ಭೈಯಾ ಅವರು ಸಂಘದ ಬಗ್ಗೆ ಶಾಸ್ತ್ರೀ ಜೀಯವರಿಗೆ ವಿವರಿಸುತ್ತಿರಬೇಕು ಎಂದು ಭಾವಿಸುತ್ತಾರೆ. ” ಎಂದು ಹೇಳಿದ್ದರಂತೆ.
ಇದು ಸಹಜ. ಸಂಸ್ಥೆಯ ನಾಯಕರು ವಿಶ್ವಾಸಕ್ಕೆ ಅರ್ಹರು. ಪ್ರಜಾಪ್ರಭುತ್ವಕ್ಕೆ ಅನುಕೂಲಕರವಾದ ಸಾಮಾಜಿಕ ವಾತಾವರಣವನ್ನು ಸೃಷ್ಟಿಸಲು, ಒಬ್ಬರ ಸ್ವಂತ ನಂಬಿಕೆ ವ್ಯವಸ್ಥೆಗೆ ಬದ್ಧರಾಗಿರುವಾಗ ಇತರರ ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ಗ್ರಹಿಸುವ ಪ್ರಾಮಾಣಿಕ ಪ್ರಯತ್ನಗಳು ಅತ್ಯಗತ್ಯ.
ಭಾರತದ ರಾಜಕೀಯ ರಂಗವು ಪ್ರತಿದಿನ ಹೊಸ ರಾಜಕಾರಣಿಗಳೊಂದಿಗೆ ಹಂತಹಂತವಾಗಿ ಬೆಳೆಯುತ್ತಿದೆ, ಆದರೆ ಪ್ರಾಮಾಣಿಕ ರಾಷ್ಟ್ರ ನಿರ್ಮಾಣದ ರಾಜಕೀಯದಲ್ಲಿ ತೊಡಗಿರುವ ರಾಜಕಾರಣಿಗಳ ಸಂಖ್ಯೆಮಾತ್ರ ಕಡಿಮೆಯಾಗುತ್ತಿವೆ. ರಾಷ್ಟ್ರೀಯ ಹಿತಾಸಕ್ತಿ ಪರಮೋಚ್ಛ ಎಂದು ಪರಿಗಣಿಸದೆ ರಾಜಕೀಯವನ್ನು, ಪಕ್ಷಗಳು ಒಂದು ಸಮುದಾಯ ಅಥವಾ ಜಾತಿ, ಪ್ರದೇಶ ಮತ್ತು ಭಾಷೆಯ ಆಧಾರದಲ್ಲಿ ಬಳಸಿಕೊಳ್ಳುತ್ತಿವೆ; ಒಂದು ಕುಟುಂಬವು ರಾಜಕೀಯ ಕೇಂದ್ರ ಬಿಂದುವಾಗಿರುವುದು ಉಂಟು. ರಾಷ್ಟ್ರ ಮುನ್ನಡೆಸುವ ನಾಯಕತ್ವದ ಒಂದು ಕುಟುಂಬಕ್ಕೆ ಸೀಮಿತ, ತಾವು ಸ್ವೀಕಾರಾರ್ಹರು, ಆದ್ದರಿಂದ ಒಂದರ ನಂತರ ಮತ್ತೊಂದು ತಮ್ಮದೇ ಆದ ಪೀಳಿಗೆಯ ಸದಸ್ಯರು ನಾಯಕ್ವಕ್ಕೆ ಸಮರ್ಥರು ಎಂದು ಭಾವಿಸಿರುವುದು ಧೀರ್ಘಕಾಲದಿಂದ ನನ್ನನ್ನು ಬಾಧಿಸಿದೆ. ಮತ್ತೊಂದೆಡೆ ಈ ಸದಸ್ಯರು ತಮ್ಮನ್ನು ತಾವೇ ‘ಪ್ರಜಾಪ್ರಭುತ್ವದ ರಕ್ಷಕರು’ ಎಂದು ಗುರುತಿಸಿಕೊಂಡಿದ್ದಾರೆ. ಆದರೆ ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ಸದಸ್ಯರು ತಮ್ಮ ಸಂಘಟನೆಯನ್ನು ಮುನ್ನಡೆಸಲು ಅನುಭವಹೀನ ವ್ಯಕ್ತಿಯ ನಾಯಕತ್ವದ ಪರಿಣಿತಿಯಲ್ಲಿ ನಂಬಿಕೆ ಇಟ್ಟಂತಿದೆ.
ಪ್ರಣಬ್ ದಾ ದೇಶದ ಕಲ್ಯಾಣಕ್ಕೆ ಆದ್ಯತೆ ನೀಡುವ ರಾಜಕಾರಣಿಗಳ ತಂಡದ ಮುಂಚೂಣಿಯಲ್ಲಿದ್ದರು. ಆದರೆ ಈ ತಂಡ ವೇಗವಾಗಿ ಇಂದು ಕ್ಷೀಣಿಸುತ್ತಿದೆ. ಈ ಸಮಯದಲ್ಲಿ ಅವರ ಅನುಪಸ್ಥಿತಿ ದುಪ್ಪಟ್ಟು ನೋವಿಗೆ ಎಲ್ಲರನ್ನು ನೂಕಿದೆ. ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ನೆರೆಯ ರಾಷ್ಟ್ರಗಳ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸುವ ಉದ್ದೇಶದಿಂದ ವಿವಿಧ ರಾಜಕೀಯ ಸಿದ್ಧಾಂತಗಳ ಅನುಯಾಯಿಗಳ ಸಲಹೆಯನ್ನು ಕೋರಿದರು. ಈ ನಿಲುವು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ ಮತ್ತು ಬಲವಾದ ಸಮಾಜ ವ್ಯವಸ್ಥೆಗೆ ಪೂರಕ. ಆದ್ದರಿಂದ, ಪ್ರಣಬ್ ದಾ ಸಂಘದ ಕಾರ್ಯಕ್ರಮಕ್ಕೆ ಹಾಜರಾಗಲು ಒಪ್ಪಿಗೆ ನೀಡಿದ್ದು – ಸಂಘವು ಸ್ವಾತಂತ್ರ್ಯಪೂರ್ವದಿಂದಲೂ ಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಮೌಲ್ಯಗಳನ್ನು ಸಾಕಾರಗೊಳಿಸುತ್ತಿದೆ, ಮತ್ತಷ್ಟೂ ಬೆಳೆಯುತ್ತಿದೆ ಮತ್ತು ಬಹುಮುಖಿಯಾಗಿದೆ ಎಂಬ ಕಾರಣಗಳಿಂದಲೇ. ಇಂತಹ ಉದ್ದೇಶಗಳನ್ನು ಗ್ರಹಿಸಲು ಒಂದು ನಿರ್ದಿಷ್ಟ ಮಟ್ಟದ ಮುಕ್ತ ಮನಸ್ಸು ಮತ್ತು ಗಟ್ಟಿ ಸ್ವಭಾವ ಅಗತ್ಯ. ಈ ವಿಷಯ ನನ್ನ ಅಭಿಪ್ರಾಯದಲ್ಲಿ ಅನೇಕ ಜನರ ಸಾಮರ್ಥ್ಯಕ್ಕೆ ಮೀರಿದ್ದು ಎನ್ನುವುದು.
ನೆಹರೂ ನೇತೃತ್ವದ ಸರ್ಕಾರದ ಸಂಪುಟ ಸಚಿವರಾಗಿದ್ದ ಶ್ರೀ ಕೆ. ಎಂ. ಮುನ್ಷಿಯವರು ಸಂಘದ ಕಾರ್ಯವೈಖರಿಯ ಸರಿಯಾದ ಚಿತ್ರಣವನ್ನೇ ಬಿಡಿಸಿದ್ದರು, ಆದರೆ ರಾಜಕೀಯದ ಹೆಸರಿನಲ್ಲಿ ವ್ಯಾಪಾರ ಮಾಡುವ ಮಂದಿಗೆ ಇದನ್ನು ಊಹಿಸಲು ಅಸಾಧ್ಯ ಮತ್ತು ಸಹಿಸಲು ಆಗದು. ಈ ಸೂಕ್ಷ್ಮದೃಷ್ಟಿ ರಾಷ್ಟ್ರಸೇವೆ ಮತ್ತು ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತೊಡಗಿರುವವರಿಗೆ ಮಾತ್ರ ಅನುಭವಕ್ಕೆ ಬರಲು ಸಾಧ್ಯ. ಮುಖ್ಯವಾಹಿನಿಯ ರಾಜಕಾರಣದಿಂದ ಸಂಘ ದೂರುವಿರುವುದು ಮತ್ತು ಸಾಮಾಜಿಕ ಕಲ್ಯಾಣ ವಿಷಯಗಳಲ್ಲಿ ಸಂಘದ ತೊಡಗಿಸಿಕೊಂಡಿರುವುದನ್ನು ತಮ್ಮ ಸಕ್ರಿಯ ರಾಜಕೀಯ ಜೀವನದ ಮಧ್ಯೆ ಅರಿತಿದ್ದುದು ಅವರ ವ್ಯಕ್ತಿತ್ವ ಮತ್ತು ಸಾಮರ್ಥ್ಯವನ್ನು ಸೂಚಿಸುತ್ತದೆ. ಇದರ ಬಗೆಗಿನ ತಮ್ಮ ವ್ಯಾಖ್ಯಾನಗಳನ್ನು ‘Pilgrimage to Freedom’ ಪುಸ್ತಕದಲ್ಲಿ ದಾಖಲಿಸಿದ್ದಾರೆ:
“ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೂಟವೊಂದರಲಿ ಭಾಗವಹಿಸಿದ್ದೆ, ಕಾಂಗ್ರೆಸ್ಸಿಗರಾದ ನಾವು ಇದನ್ನು ನೋಡಲೇ ಬಾರದ ಬಹಿಷ್ಕೃತ ಕೂಟವೆಂದು ಭಾವಿಸಿದ್ದೆವು. ಸಂಘದ ಸದಸ್ಯರ ಶಿಸ್ತು, ದೃಢತೆ ಮತ್ತು ನಿಸ್ವಾರ್ಥತೆಯನ್ನು ಕಂಡು ಅವಕ್ಕಾಗಿ ಹೋಗಿದ್ದೆ. ಸಂಘದ ಹಿಂದೆ ಯಾವುದೇ ಆರ್ಥಿಕ ಬೆಂಬಲವಿರಲಿಲ್ಲ ಮತ್ತು ಅದಕ್ಕೆ ಸ್ಥಾನಮಾನ ನೀಡಲು ಅಖಿಲ ಭಾರತ ಖ್ಯಾತಿಯ ನಾಯಕರು ಇರಲಿಲ್ಲ, ಆದರೆ ಅದು ಭಾವನಾತ್ಮಕ ಬಂಧದ ಮೇಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿತ್ತು.”
“ಆರೆಸ್ಸೆಸ್ ನ ಗುರೂಜಿ (ಎರಡನೇ ಸರಸಂಘಚಾಲಕರು) ಎಂ.ಎಸ್. ಗೋಳ್ವಾಲ್ಕರ್ ಅವರನ್ನು ಭೇಟಿಯಾದೆ. ರಾಜಕೀಯ ಉದ್ದೇಶಗಳು ಮತ್ತು ವಿಧಾನಗಳಲ್ಲಿನ ನಮ್ಮ ವ್ಯತ್ಯಾಸಗಳು ಏನೇ ಇರಲಿ, ಅವರು ಬದುಕಿದ್ದ ಸಮರ್ಪಿತ ಜೀವನ, ಅವರ ಸಂಘಟನೆಯ ದೊಡ್ಡ ಶಕ್ತಿ ಮತ್ತು ಆರೆಸ್ಸೆಸ್ ಅನ್ನು ನಿರ್ಮಿಸುವಲ್ಲಿ ಅವರ ಕೌಶಲ್ಯವನ್ನು ಬಹಳವಾಗಿ ಮೆಚ್ಚಿದ್ದೆ. ಸಂಘವನ್ನು ರಾಜಕೀಯದ ಸುಳಿಯಲ್ಲಿ ಎಸೆಯುವ ಆಮಿಷಕ್ಕೆ ನನ್ನ ವಿರೋಧವಿತ್ತು. ” (Pilgrimage to Freedom, ಕೆ.ಎಂ. ಮುನ್ಷಿ ಪುಟ.86)
ಡಾ. ಮುಖರ್ಜಿ ಅವರ ಸ್ಮರಣಾರ್ಥ ಮರಾಠಿ ಲೇಖನವೊಂದರಲ್ಲಿ ಪ್ರಣಬ್ ದಾ ಅವರು ಕಾಂಗ್ರೆಸ್ ಪಕ್ಷಕ್ಕೆ ಅವರ ಅಗತ್ಯವಿದ್ದಾಗ ಅದರಿಂದ ದೂರವಾಗಿದ್ದರು ಮತ್ತು ಆರೆಸ್ಸೆಸ್ ಜೊತೆಗೆ ಹಸ್ತಲಾಘವ ಮಾಡಿದರು ಎಂದು ಬರೆದಿದ್ದರು. ಪ್ರಣಬ್ ದಾ ಮತ್ತು ಕಾಂಗ್ರೆಸ್ ಬೇರ್ಪಡಿಸಲಾಗದ ಸಂಬಂಧವೆಂದು ಅರಿಯದ ಬರಹಗಾರನ ಬಗ್ಗೆ ನನ್ನಲ್ಲಿ ಕನಿಕರವಿದೆ. ಅವರಂತಹ ಉದಾತ್ತ ರಾಜಕಾರಣಿಯನ್ನು ಒಂದು ಸಣ್ಣ ಭಿನ್ನಾಭಿಪ್ರಾಯಕ್ಕಾಗಿ ಮೂಲೆಗುಂಪಾಗಿಸುವ ಮೂಲಕ ಪಕ್ಷ ಖಂಡಿಸಿದ್ದುದು ವಂಚನೆಯಲ್ಲದೆ ಮತ್ತೇನು? ಕಾಂಗ್ರೆಸ್ಸಿನ ಈ ಅಪಕ್ವ ರಾಜಕಾರಣವೇ ಅದನ್ನು ದುರ್ಬಲಗೊಳಿಸಿದೆ ಮತ್ತು ಮುಂದುವರಿದರೆ ಅದು ಪಕ್ಷದ ಅವನತಿಗೆ ಕಾರಣವಾಗುತ್ತದೆ.
ಪ್ರಣಬ್ ದಾ ಅವರ ಅವಿರತ ಟೀಕಾಕಾರರು ಅವರ ಕಾರ್ಯಗಳನ್ನು ತಪ್ಪಾಗಿ ಎಣಿಸಿದ್ದಾರೆ ಮತ್ತು ಅವರ ಆಯ್ಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಏಕೆಂದರೆ ಅವರ ಟೀಕಾಕಾರರು ಪಾರಂಪರ್ಯವಾಗಿ ಪಡೆದ ಸೈದ್ಧಾಂತಿಕ ನೀತಿ ಮತ್ತು ತತ್ವಗಳು ಒಬ್ಬರ ವಿರೋಧಿಗಳೊಂದಿಗೆ ಯೋಗ್ಯವಾದ, ಸ್ಪಷ್ಟವಾದ ಚರ್ಚೆಗಳನ್ನು ಕಂಡು ಕೇಳಿಲ್ಲ ಮತ್ತು ಮಾಡಿಯೂ ಇಲ್ಲ. ಆನೆಗಳನ್ನು ಬೇಟೆಯಾಡುವುದು ಸಿಂಹ ಗುಂಪಿಗೆ ಸಾಮಾನ್ಯವಾದ ಸಂಗತಿ ಆದರೆ ನರಿಯ ಕುಲವು ಅದನ್ನು ಮಾಡುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
ಈ ನೀತಿಕಥೆಯ ಮೂಲಕ ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು:
ಬೇಟೆಯಾಡಲು ಹೋದ ಸಿಂಹವೊಂದು ಆ ದಿನ ತನ್ನ ಗುಹೆಗೆ ನರಿಯೊಂದರ ಮರಿಯನ್ನು ಹಿಡಿದು ತರುತ್ತದೆ. ಮಾತೃಪ್ರವೃತ್ತಿಯಿಂದ ಹೊರಬರದೆ ಸಿಂಹಿಣಿಯು ನರಿಮರಿಯನ್ನು ಕೊಂದು ತಿನ್ನಲು ನಿರಾಕರಿಸುತ್ತದೆ. ಸಿಂಹ ಮತ್ತು ಸಿಂಹಿಣಿ ಇಬ್ಬರೂ ಮುಂದೆ ತಮಗೆ ಹೊಸದಾಗಿ ಹುಟ್ಟಿದ ಸಿಂಹದ ಮರಿಗಳ ಜೊತೆಗೆ ನರಿಮರಿಯನ್ನು ಬೆಳೆಸಲು ನಿರ್ಧರಿಸುತ್ತವೆ. ಹೀಗಿರಲು, ಒಂದು ದಿನ, ಸಿಂಹದ ಮರಿಗಳು ಮತ್ತು ನರಿಮರಿ ಕಾಡಿನಲ್ಲಿ ಆಡುತ್ತಿರುವಾಗ, ಆನೆಯ ಗುಂಪಿನೊಳಗೆ ಓಡುತ್ತವೆ. ಸಿಂಹಗಳ ಸಹಜ ಪ್ರವೃತ್ತಿಯಂತೆ ಆನೆಯನ್ನು ನಿಶ್ಕ್ರಿಯಗೊಳಿಸಲು ಜಿಗಿಯುತ್ತವೆ. ಆದರೆ ಆನೆಯ ಗಾತ್ರದಿಂದ ಭಯಭೀತವಾದ ನರಿಮರಿ, ಸಿಂಹಗಳು ಹಾಗೆ ಮಾಡುವುದನ್ನು ತಡೆಯುತ್ತದೆ ಮತ್ತು ಗುಹೆಗೆ ವಾಪಸ್ಸಾಗುತ್ತವೆ. ಈ ಘಟನೆಯನ್ನು ಸಿಂಹಿಣಿಗೆ ಸಿಂಹದ ಮರಿಗಳು ವಿವರಿಸಿ ನರಿಮರಿಯ ಬಗ್ಗೆ ಹಾಸ್ಯಮಾಡುತ್ತವೆ. ಕಡೆಗೆ ಸಿಂಹಿಣಿ ತನ್ನ ಮತ್ತು ಸಿಂಹದ ಮರಿಗಳ ನಿಜವಾದ ಗುರುತನ್ನು ನರಿಮರಿಗೆ ತಿಳಿಸುತ್ತದೆ ಮತ್ತು ತಮ್ಮ ಗುಹೆಯನ್ನು ತೊರೆಯುವಂತೆ ನರಿಮರಿಗೆ ಸಲಹೆ ನೀಡುತ್ತದೆ, ಏಕೆಂದರೆ ಮುಂದೊಮ್ಮೆ ಸಿಂಹದ ಮರಿಗಳು ಬೆಳೆದು ನರಿಮರಿಯ ಜೀವಕ್ಕೆ ಅಪಾಯ ಒದಗಬಹುದು ಎಂದು. ಸಿಂಹಿಣಿ ಕೆಳಗಿನ ಸಂಸ್ಕೃತ ಉಕ್ತಿಯೊಂದನ್ನು ಹೇಳಿ ನರಿಮರಿಯನ್ನು ಸಮಾಧಾನಪಡಿಸುತ್ತದೆ:
ಶೂರೋಸಿ ಕೃತವಿದ್ಯೋಸಿ ದರ್ಶನೀಯೋಶಿ ಪುತ್ರಕಃ ।
ಯಸ್ಮಿನ್ ಕುಲೆ ತ್ವಮುತ್ಪನ್ನೋ ಗಜಸ್ತತ್ರ ನ ಹನ್ಯತೆ ।।
ಅರ್ಥ: ನೀನೇನೋ ಧೈರ್ಯಶಾಲಿ, ಬುದ್ಧಿವಂತ ಮತ್ತು ಸುಂದರವಾದ, ನನ್ನ ಮಗು! ಆದರೆ ನೀನು ಸೇರಿದ ಕುಟುಂಬದಿಂದ ಆನೆಯನ್ನು ಕೊಲ್ಲಲು ಸಾಧ್ಯವಿಲ್ಲ.
ಎಷ್ಟೇ ಬದಲಾವಣೆಗಳನ್ನು ಮಾಡಿಕೊಂಡರೂ, ನೈಸರ್ಗಿಕ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ಹೊರಬರಲು ಸಮಯ ತೆಗೆದುಕೊಳ್ಳುತ್ತದೆ! ಕಾಂಗ್ರೆಸ್ ತನ್ನ ಮೌಲ್ಯಗಳನ್ನು ಗಂಭೀರವಾಗಿ ಪುನರ್ವಿಮರ್ಶಿಸುವ ಸಮಯ ಬಂದಿದೆ, ಪ್ರಣಬ್ ದಾ ಮತ್ತು ಮುನ್ಷಿ ಜಿ ಅವರು ಕಂಡುಕೊಂಡ ಒಳಗೊಳ್ಳುವಿಕೆಯನ್ನು ಸ್ವೀಕರಿಸಬೇಕೆ ಅಥವಾ ರಾಜಕೀಯ ಅಸ್ಪೃಶ್ಯತೆಯನ್ನು ಉತ್ತೇಜಿಸುವ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ಮುಚ್ಚಿಹೋಗಬೇಕೇ
ಎಂಬುದನ್ನು ಅರಿತುಕೊಳ್ಳಬೇಕಿದೆ.
ಡಾ.ರಾಜೇಂದ್ರ ಪ್ರಸಾದ್, ಕೆ.ಎಂ. ಮುನ್ಷಿ, ಡಾ. ರಾಧಾಕೃಷ್ಣನ್, ಶ್ರೀ ಪುರುಷೋತ್ತಮ್ ದಾಸ್ ಟಂಡನ್ ಮತ್ತು ಪ್ರಣಬ್ ದಾ ಅವರು ಅನುಸರಿಸುತ್ತಿದ್ದ ರಾಜಕೀಯ ನೀತಿ ಸಮಗ್ರವಾಗಿತ್ತು. ಅವರ ಕಾರ್ಯಗಳ ಸರಿಯಾದ ವ್ಯಾಖ್ಯಾನವು ಅಸಾಧಾರಣ ಕುತೂಹಲ ಮತ್ತು ನೈತಿಕ ಧೈರ್ಯವನ್ನು ತಂದುಕೊಡುತ್ತದೆ, ಇದು ಸ್ವ-ಹಿತಾಸಕ್ತಿ ಚಾಲಿತ ಸಣ್ಣ ಪಕ್ಷ-ರಾಜಕೀಯ, ಕೋಮು ರಾಜಕೀಯ, ಜಾತಿ ಆಧಾರಿತ ರಾಜಕೀಯ ಮತ್ತು ರಾಜವಂಶದ ರಾಜಕೀಯದಲ್ಲಿ ತೊಡಗಿಸಿಕೊಳ್ಳುವವರಿಗೆ ತಲುಪಲು ಸಾಧ್ಯವಿಲ್ಲ. ಹೊಸ ತಲೆಮಾರಿನ ರಾಜಕಾರಣಿಗಳಲ್ಲಿ ಪ್ರಣಬ್ ದಾ ರವರ ಮೂರ್ತಿವೆತ್ತ ಮೌಲ್ಯಗಳನ್ನು ಹುಟ್ಟುಹಾಕುವುದು ಮತ್ತು ಅನುಕರಿಸುವುದು ಸರಿಸಾಟಿಯಿಲ್ಲದ ಅವರ ಪರಂಪರೆಗೆ ನಿಜವಾದ ಗೌರವ ಸಂದಿದೆ. ಪ್ರಣಬ್ ದಾ ಈಗಿಲ್ಲ ಆದರೆ ದೀರ್ಘಕಾಲ ಬೆಳೆಯಬೇಕು ಮತ್ತು ಬದುಕಬೇಕು ಪ್ರಣಬ್ ದಾ ರವರ ಪರಂಪರೆ.