ವರದಿ: ರಾಧಾಕೃಷ್ಣ ಹೊಳ್ಳ
ರಾಜ್ಯದಲ್ಲಿ ಇತ್ತೀಚೆಗೆ ಜಾರಿಗೆ ತಂದ ಭೂಸುಧಾರಣೆ ಕಾಯ್ದೆಯಿಂದ ಕಪ್ಪುಹಣವನ್ನು ಸಕ್ರಮಗೊಳಿಸಿಕೊಳ್ಳಲು ಭ್ರಷ್ಟರಿಗೆ ಸುಲಭವಾಗಲಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಿ ಹಿಂಚಗೇರಿ ಅವರು ಅಭಿಪ್ರಾಯಪಟ್ಟರು. ‘ಇತ್ತೀಚಿನ ಕೃಷಿ ಕಾನೂನುಗಳ ಸಾಧಕ-ಬಾಧಕಗಳು’ ಎಂಬ ವಿಷಯದ ಬಗ್ಗೆ ಭಾರತೀಯ ಕಿಸಾನ್ ಸಂಘ – ಕರ್ನಾಟಕ ಪ್ರದೇಶ ಮತ್ತು ಭಾರತೀಯ ಕೃಷಿ ಆರ್ಥಿಕ ಸಂಶೋಧನಾ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭ್ರಷ್ಟರು ಕಪ್ಪುಹಣದಲ್ಲಿ ಕೃಷಿ ಭೂಮಿ ಖರೀದಿಸಿ ಕೃಷಿ ಆದಾಯ ತೋರಿಸಿ ತೆರಿಗೆ ವಂಚಿಸುವ ಸಾಧ್ಯತೆಯಿದೆ. ಈ ಬಗ್ಗೆ ಸರ್ಕಾರ ಎಚ್ಚರವಹಿಸಬೇಕು ಎಂದರು. ಎಲ್ಲ ಉದ್ಯಮಗಳಿಗೆ ತಾವು ಬೆಳೆದ ಉತ್ಪನ್ನದ ಬೆಲೆ ನಿರ್ಧರಿಸುವ ಹಕ್ಕಿದೆ. ರೈತರಿಗೆ ಮಾತ್ರ ಅಂತಹ ಹಕ್ಕಿಲ್ಲ. ಬಂದ ಬೆಲೆಗೆ ಮಾರುವ ಅನಿವಾರ್ಯ ಪರಿಸ್ಥಿತಿಯಿದೆ. ಇದು ಬದಲಾಗಬೇಕು ಎಂದರು. ಹಾಗೆಯೇ, ಬ್ರಿಟಿಷರ ಕಾಲದ ಭೂಕಂದಾಯ ವಸೂಲಿ ಮಾಡುವ ಕ್ರಮ ಇಂದು ಅಗತ್ಯವಿದೆಯೇ ಎಂದೂ ಕೂಡ ವಿಮರ್ಶೆ ಮಾಡಬೇಕು. ಇದರಿಂದ ಸರ್ಕಾರಕ್ಕೆ ಅದಾಯಕ್ಕಿಂತ ಖರ್ಚು ಹೆಚ್ಚು ಇರಬಹುದು ಎಂದು ಹೇಳಿದ ಅವರು, ಕೃಷಿ ಕಾನೂನುಗಳ ಬಗ್ಗೆ ಸಮಗ್ರ ಚಿಂತನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ನಗರ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಆರ್ಥಿಕತಜ್ಞ ಡಾ. ಸಮೀರ್ ಕಾಗಲ್ಕರ್, ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಟಿ ಎನ್ ವೆಂಕಟ ರೆಡ್ಡಿ, ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ ಎನ್ ಪ್ರಕಾಶ್ ಕಮ್ಮರಡಿ, ಕೃಷಿ ನೀತಿ ತಜ್ಞರಾದ ಪ್ರದೀಪ್ ಪೂವಯ್ಯ, ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ, ರಾಷ್ಟ್ರೀಯ ಕಾನೂನು ವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಂ ಕೆ ರಮೇಶ್, ಬೆಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಎನ್ ಸತೀಶ್ ಗೌಡ, ಸುಪ್ರೀಂ ಕೋರ್ಟಿನ ವಕೀಲ ರಾಘವೇಂದ್ರ ಶ್ರೀವತ್ಸ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಕಾಡೆಮಿಯ ಅಧ್ಯಕ್ಷರಾದ ಎಸ್ ಎಫ್ ಗೌತಮ್ ಚಂದ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ಸಮೀರ್ ಕಾಗಲ್ಕರ್ ಅವರು ಮಾತನಾಡುತ್ತಾ, ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿದ್ದ ಜನಸಂಖ್ಯೆಗಿಂತ ಈಗ 3.5 ರಷ್ಟು ಹೆಚ್ಚಿದೆ. ಈಗಿನ ಆಹಾರ ಉತ್ಪಾದನೆ ಆಗಿನದಕ್ಕಿಂತ 6 ಪಟ್ಟು ಹೆಚ್ಚಿದೆ. ಆಹಾರದ ಕೊರತೆ ಇಂದು ಇಲ್ಲ. ಹಾಗಾಗಿ ಅಂದು ಇದ್ದ ಅಗತ್ಯ ವಸ್ತುಗಳ ಕಾಯ್ದೆ ಈಗ ಅಗತ್ಯವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಕಾನೂನಿನಲ್ಲಿ ಬದಲಾವಣೆ ಮಾಡಿದ್ದು ಸೂಕ್ತವಾಗಿದೆ ಎಂದರು. ಎಲ್ಲ ಕ್ಷೇತ್ರಗಳಿಗೂ ಬಂದ 1991ರ ಉದಾರೀಕರಣ ಕೃಷಿ ಕ್ಷೇತ್ರಕ್ಕೆ ಮಾತ್ರ ಬರಲಿಲ್ಲ. ತನ್ನ ವಸ್ತುವಿನ ಬೆಲೆ ನಿಗದಿ ಮಾಡುವ ಅಧಿಕಾರ ಮಾತ್ರ ಕೃಷಿಕನಿಗೆ ಬರಲಿಲ್ಲ. ಹೊಸ ಎಪಿಎಂಸಿ ಕಾಯ್ದೆಯು ಮಾರುವವರು ಮತ್ತು ಕೊಳ್ಳುವವರಿಗೆ ಈಗ ಸ್ವಾತಂತ್ರ್ಯ ಕೊಟ್ಟಿರುವುದರಿಂದ ಎಪಿಎಂಸಿ ವ್ಯವಸ್ಥೆಯ ಏಕಸ್ವಾಮ್ಯ ಇನ್ನು ಮುಂದೆ ಇರುವುದಿಲ್ಲ. ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗಿಯವರಿಗೆ, ವಿದೇಶಿ ಹೂಡಿಕೆಗೆ ಮುಕ್ತಗೊಳಿಸಿದಾಗಲೂ ನಮ್ಮ ಬ್ಯಾಂಕುಗಳು ಮುಳುಗುತ್ತವೆ ಅನ್ನಿಸಿತ್ತು. ಆದರೂ ಇಂದು ಸರ್ಕಾರಿ ಬ್ಯಾಂಕುಗಳು ಎಲ್ಲರೊಂದಿಗೆ ಸ್ಪರ್ಧೆ ಮಾಡುತ್ತಿವೆ. ಅದೇ ರೀತಿ ಕೃಷಿ ಉತ್ಪನ್ನಗಳ ವ್ಯಾಪಾರದಲ್ಲೂ ಸ್ಪರ್ಧೆ ಪ್ರಾರಂಭವಾದರೆ ರೈತರಿಗೆ ಅನುಕೂಲವೇ ಆಗಲಿವೆ ಎಂದರು.
ಕನಿಷ್ಠ ಬೆಂಬಲ ಬೆಲೆ ಮೊದಲಿಗಿಂತ ಸ್ವಲ್ಪ ಹೆಚ್ಚೇ ಆಗಿದೆ. ಅದೇನೂ ವ್ಯತ್ಯಾಸವಾಗಿಲ್ಲ. ಆ ವ್ಯವಸ್ಥೆಯನ್ನೂ ರೈತರು ಉಪಯೋಗಿಸಿಕೊಳ್ಳಬಹುದು. ಎಪಿಎಂಸಿ ಇದ್ದೇ ಇರುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಅಲ್ಲೂ ಮಾರಬಹುದು ಎಂದು ವಿವರಿಸಿದರು. ಕಾಂಟ್ರಾಕ್ಟ್ ಫಾರ್ಮಿಂಗ್ ನಲ್ಲಿ ತನ್ನ ಖರ್ಚು ಮತ್ತು ಲಾಭ ಸೇರಿಸಿ ರೈತ ಬೆಲೆ ನಿಗದಿ ಮಾಡಬಹುದು. ಬೆಲೆ ಅನಿಶ್ಚಿತತೆ ಇರುವುದಿಲ್ಲ. ಕೃಷಿಕ vs ವ್ಯಾಪಾರಿ ಅಲ್ಲ. ಇಬ್ಬರ ಸಹಕಾರದೊಂದಿಗೆ ಕೃಷಿ ನಡೆಯುತ್ತದೆ. ತಂತ್ರಜ್ಞಾನದ ಸಹಾಯವನ್ನು ಕಂಪೆನಿಗಳು ಕೊಡಬಹುದು. ಇದರಿಂದ ಉತ್ಪತ್ತಿ ಜಾಸ್ತಿಯಾಗುತ್ತದೆ. ಕಾಂಟ್ರಾಕ್ಟ್ ನಲ್ಲಿ ನಿಗದಿಯಾದ ಬೆಲೆಗಿಂತ ಹೆಚ್ಚಿನ ಬೆಲೆ ಮಾರುಕಟ್ಟೆಯಲ್ಲಿದ್ದರೆ ರೈತರಿಗೂ ಅದರ ಪಾಲು ಸಿಗುತ್ತದೆ. ಆದ್ದರಿಂದ ರೈತರು ಹೆದರುವ ಅಗತ್ಯವಿಲ್ಲ ಎಂದರು.
ತಮ್ಮ ಅಭಿಪ್ರಾಯ ಮಂಡಿಸಿದ ನಿವೃತ್ತ ಪ್ರಾಧ್ಯಾಪಕ ವೆಂಕಟ ರೆಡ್ಡಿಯವರು ಹಳೆ ಕಾನೂನು ಮತ್ತು ಹೊಸ ಕಾನೂನಿನಲ್ಲಿ ಏನೂ ಬಹಳ ವ್ಯತ್ಯಾಸವಿಲ್ಲ ಈ ಕಾನೂನು ರೈತರಿಗೆ ಒಳ್ಳೆಯದನ್ನೇ ಮಾಡಲಿದೆ ಎಂದರು. ವ್ಯಾಜ್ಯ ತೀರ್ಮಾನ ಮಂಡಳಿಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇರಬೇಕು. ಈ ಬದಲಾವಣೆಯನ್ನು ಸರ್ಕಾರ ಮಾಡಲಿ ಎಂದು ಆಶಿಸಿದರು.
ಒಪ್ಪಂದ ಕೃಷಿ ಮೂಲಕ ಬೀಜೋತ್ಪಾದನೆ ಈಗ ಬರಲಿದೆ. ಇದು ಒಳ್ಳೆಯದು. ⅔ ಹಣ ಕೊಟ್ಟು ರೈತರಿಂದ ಬೀಜ ತೆಗೆಸುಕೊಂಡು ಹೋಗಬೇಕು ಎಂಬ ಅಂಶ ಕಾನೂನಿನಲ್ಲಿದೆ. 30 ದಿನದಲ್ಲಿ ಉಳಿಕೆ ಹಣ ಕೊಡಬೇಕು. ಮೊದಲೆಲ್ಲ ಆರು ತಿಂಗಳಾದರೂ ಬೀಜ ಉತ್ಪಾದನೆ ಮಾಡುವ ರೈತನಿಗೆ ಕಂಪೆನಿಗಳು ಹಣ ಕೊಡುತ್ತಿರಲಿಲ್ಲ ಎಂದರು. ಒಪ್ಪಂದ ಕೃಷಿಯಲ್ಲಿ ಯಾವುದು ಅಗತ್ಯ ಇದೆಯೋ ಅದನ್ನು ಮಾತ್ರ ಕಂಪೆನಿಗಳು ಒಪ್ಪಂದ ಮಾಡಿಕೊಳ್ಳುತ್ತವೆ. ಹಾಗಾಗಿ ಅವೈಜ್ಞಾನಿಕ ಯವುದೋ ಬೆಳೆ ಬೆಳೆದು ರಸ್ತೆಗೆ ಸುರಿಯುವ ಪ್ರಮೇಯ ಇಲ್ಲ ಅಭಿಪ್ರಾಯಪಟ್ಟರು.
ಸರ್ಕಾರಕ್ಕೆ ಕೊಡಬೇಕಾದ ಸೆಸ್ ಒಂದು ರೀತಿ ಹಫ್ತಾ ಇದ್ದ ಹಾಗೆ. ಇದರಿಂದ ಸರ್ಕಾರಕ್ಕೆ ಬರುವ ಆದಾಯ 600 ರಿಂದ 700 ಕೋಟಿ ಮಾತ್ರ. ಅದಕ್ಕಿಂತ ಹೆಚ್ಚು ಸರ್ಕಾರ ಎಪಿಎಂಸಿ ನೌಕರರ ಸಂಬಳಕ್ಕೆ ಖರ್ಚು ಮಾಡುತ್ತೆ. ಈ ಸೆಸ್ ಅನ್ನು ತೆಗೆದರೆ ಅಲ್ಲಿನ ವ್ಯಾಪಾರಿಗಳಿಗೂ ಎಲ್ಲರೊಂದಿಗೆ ಸ್ಪರ್ಧೆ ಮಾಡಲು ಸಾಧ್ಯ ಎಂದರು.
ಆಫ್ ಲೈನ್ ಟ್ರೇಡಿಂಗ್ ನ ವ್ಯವಹಾರಕ್ಕೆ ಏನೂ ದಾಖಲೆಯಿರುವುದಿಲ್ಲ. ಅಂತಹ ಒಂದು ರೆಕಾರ್ಡಿಂಗ್ ವ್ಯವಸ್ಥೆ ತರುವುದು ಒಳ್ಳೆಯದು. ಇದರಿಂದ ಪ್ರೈಸ್ ಡಿಸ್ಕವರಿ ಪ್ರೊಸೆಸ್ ಗೆ ಅನುಕೂಲವಾಗುತ್ತದೆ. ಈ ತಿದ್ದುಪಡಿ ಮಾಡಬೇಕು: ನಿವೃತ್ತ ಪ್ರಾಧ್ಯಾಪಕ ವೆಂಕಟ ರೆಡ್ಡಿ
ಆಗಬೇಕಾದ ತಿದ್ದುಪಡಿ
ಈಗ ಹಲವು ಸ್ತರದ ಮಧ್ಯವರ್ತಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಇದರಿಂದ ಕೃಷಿಕರಿಗೆ ಹೆಚ್ಚು ಹಣ ಬರುತ್ತದೆ. ವ್ಯಾಪಾರಿಗಳು ದಾಸ್ತಾನು ಮಾಡಲು ಈಗ ನಿರ್ಬಂಧ ಇಲ್ಲದ್ದರಿಂದ ರಫ್ತು, ಪ್ರೊಸೆಸ್ಡ್ ಉತ್ಪನ್ನಗಳು ಈಗ ಸಾಧ್ಯ. ಉತ್ಪಾದನೆ ಚೆನ್ನಾಗಿದ್ದರೂ ರಫ್ತಿನಲ್ಲಿ ಭಾರತಕ್ಕೆ 80 ನೇ ಸ್ಥಾನ. ಹೊಸ ಕಾನೂನಿನಿಂದ ಉಗ್ರಾಣ, ಸಾಗಾಣಿಕೆ, ಕೋಲ್ಡ್ ಸ್ಟೋರೇಜ್ ಬೆಳೆಯಲಿದೆ, ರಫ್ತು ಹೆಚ್ಚಲು ಇದು ಅನುಕೂಲ. ಪ್ರಸ್ತುತ, ಒಂದು ಲಕ್ಷ ಕೋಟಿ ಆಹಾರ ಧಾನ್ಯ ಪ್ರತಿ ವರ್ಷ ಹಾಳಾಗುತ್ತಿದೆ. ಇಲಿ, ಹೆಗ್ಗಣ, ತೇವಾಂಶ ಇತ್ಯಾದಿ ಕಾರಣದಿಂದ. ಮುಂದೆ ಇವೆಲ್ಲ ತಪ್ಪಲಿದೆ ಎಂದರು.
ಬೆಲೆ ಕುಸಿದ ತಕ್ಷಣ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು. ಈಗ ಸರ್ಕಾರ ನಿಧಾನಗತಿಯಲ್ಲಿ ಖರೀದಿ ಕೇಂದ್ರ ತೆರೆಯುತ್ತಿದೆ. ರೈತರು ಅಷ್ಟರಲ್ಲಿ ತಮ್ಮ ಬೆಳೆಯನ್ನು ಮಾರಿರುತ್ತಾರೆ. ಹಾಗಾಗಿ ಮಧ್ಯವರ್ತಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು.
ಆಂಧ್ರದಲ್ಲಿ ಮೂರು ಹಳ್ಳಿಗೊಂದರಂತೆ ಖರೀದಿ ಕೇಂದ್ರ ಇದೆ. ಒದ್ದೆ ಭತ್ತವಾದರೂ ಖರೀದಿ ಮಾಡಿ ಆಮೇಲೆ ಒಣಗಿಸಿಕೊಂಡಿವೆ ಸರ್ಕಾರಿ ಸಂಸ್ಥೆಗಳು. ಅಂತಹ ರೈತಪರ ನಿಲುವು ಅಗತ್ಯ ಎಂದು ಅವರು ಹೇಳಿದರು. ಇನ್ನೂ ಕೆಲವು ಪ್ರಮುಖ ಅಂಶಗಳು.
- ಬೆಳೆ ವೈವಿಧ್ಯ ಕರ್ನಾಟಕದಲ್ಲಿದೆ, ಇಲ್ಲಿ 92 ಬೆಳೆಗಳಿವೆ. ಉಪ್ರ, ಪಂಜಾಬ್, ಹರಿಯಾಣದಲ್ಲಿ 10 ಬೆಳೆಗಳಿರಬಹುದು ಅಷ್ಟೇ.
- ಪಿ ಡಿ ಎಸ್ ವ್ಯವಸ್ಥೆಯಲ್ಲಿ ಬದಲಾವಣೆ ಆಗುವುದಿಲ್ಲ. ಅದಕ್ಕೆ ಹೊಸ ಕಾನೂನಿನಿಂದ ಏನೂ ತೊಂದರೆಯಿಲ್ಲ.
- ಮೂಲಭೂತ ಸೌಕರ್ಯಗಳನ್ನು ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಬ್ಯಾಡಗಿಯಲ್ಲಿ 100 ಕೋಲ್ಡ್ ಸ್ಟೋರೇಜ್ ಬೇಕು. ಕೇವಲ 25 ಇವೆ. ಖಾಸಗಿಯವರಿಗೆ ಪಿಪಿಪಿ ಮಾಡೆಲ್ ನಲ್ಲಿ ಇದನ್ನು ನಿರ್ಮಿಸಲು ಹೇಳಿದರೆ ಉತ್ತಮ
- ಎಪಿಎಂಸಿ ಎಂಬುದು ಬರಿಯ ಸಹಕಾರಿ ವ್ಯವಸ್ಥೆಯಾಗಿ ಉಳಿಯದೇ ಇಂದು ರಾಜಕೀಯ ವ್ಯವಸ್ಥೆಯಾಗಿದೆ. ಜಿಲ್ಲೆಗೆ ಎರಡೇ ಎಪಿಎಂಸಿ ಸಾಕು. ಅವುಗಳನ್ನು ಉತ್ತಮವಾಗಿ ನಿರ್ವಹಿಸಿದರೆ ಸ್ಪರ್ಧೆ ಮಾಡಲು ಸಾಧ್ಯ.
- ಬೆಲೆ ಸ್ಥಿರೀಕರಣ ನಿಧಿ ಅಗತ್ಯ. ಆಂಧ್ರಪ್ರದೇಶ ಸರ್ಕಾರ ಬಜೆಟ್ ನಿಂದ ಇದನ್ನು ಕೊಡುತ್ತಿದೆ. ನಮ್ಮಲ್ಲೂ ಅಂತಹ ವ್ಯವಸ್ಥೆ ಬರಲಿ.
- ಎ ಬಿ ಸಿ ಡಿ ಹೀಗೆ ಎಲ್ಲ ಗುಣಮಟ್ಟದ್ದನ್ನು ಖರೀದಿ ಮಾಡಬೇಕು ಎಂದು ಕಾಂಟ್ರಾಕ್ಟ್ ಫಾರ್ಮಿಂಗ್ ಕಾನೂನಿನಲ್ಲಿ ಸೇರಿಸಬೇಕು. ಆಗ ರೈತರು ಎಲ್ಲವನ್ನೂ ಒಂದೇ ಕಂಪೆನಿಗೆ ಮಾರಬಹುದು. ಇಲ್ಲವಾದರೆ, ಸಿ ಮತ್ತು ಡಿ ದರ್ಜೆಯ ಉತ್ಪನ್ನ ಮಾರಲು ಬೇರೆಡೆಗೆ ಹೋಗಬೇಕಾಗುತ್ತದೆ.
ಸಫಲ್ ಒಂದು ಯಶಸ್ವಿ ಮಾದರಿ. ಸ್ಥಾಪಿತ ಹಿತಾಸಕ್ತಿಯ ಕೆಲವು ವ್ಯಾಪಾರಿಗಳು ಇದನ್ನು ಬಹಿಷ್ಕರಿಸಿದರು. ಸಫಲ್ ಅನ್ನು ಬಲಪಡಿಸಬೇಕು: ಪ್ರದೀಪ್ ಪೂವಯ್ಯ
ಪ್ರದೀಪ್ ಪೂವಯ್ಯ ಅವರ ಭಾಷಣದ ಪ್ರಮುಖ ಅಂಶಗಳು:
- ನಮಲ್ಲಿ ಕೃಷಿ ಸಾಲದ ಬಡ್ಡಿ ಹೆಚ್ಚು. MSME, ಅಥವಾ ಬ್ಯುಸಿನೆಸ್ ಗೆ ಕಡಿಮೆ ದರದಲ್ಲಿ ಸಾಲ ಕೊಡ್ತಾರೆ. ಕೃಷಿಗೆ ಮಾತ್ರ ಅಷ್ಟು ಸುಲಭವಾಗಿ ಸಾಲ ಸಿಗುವುದಿಲ್ಲ.
- ಆಂಧ್ರದಲ್ಲಿ ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿದರೆ ಬಡ್ಡಿ ಸರ್ಕಾರ ಕಟ್ಟುತ್ತೆ.
- ಬ್ರೆಜಿಲ್ ನಲ್ಲಿ ಕೃಷಿಯಿಂದ ಬರುವ ಜಿಡಿಪಿ 40%. ಅಲ್ಲಿ 4% ಬಡ್ಡಿಯಲ್ಲಿ ಕೃಷಿ ಸಾಲ ಸಿಗುತ್ತೆ. ಹಾಗಾಗಿ ಉತ್ಪಾದನೆ ಜಾಸ್ತಿಯಿದೆ.
- ಸಬ್ಸಿಡಿ ಕೊಡದಿದ್ದರೂ ಪರ್ವಾಗಿಲ್ಲ. ಕಡಿಮೆ ಬಡ್ಡಿಯಲ್ಲಿ ಕೃಷಿಸಾಲ ಕೊಡಬೇಕು.
- ಎಫ್ ಪಿ ಒ ಗಳನ್ನು ಬಲಪಡಿಸಬೇಕು. ಎಫ್ ಪಿ ಒ ಗೆ ಒಂದು ಬ್ರಾಂಡ್ ಇರುತ್ತೆ. ಅವರು ನೇರವಾಗಿ ಯಾವುದೇ ಕಂಪೆನಿಗೆ ಮಾರಬಹುದು.
- ಎ ಪಿ ಎಂ ಸಿ ಗೆ ಚುನಾವಣೆ ಬೇಡ. ರಾಜಕೀಯ, ಲಂಚ ಇಂದು ಹೆಚ್ಚಿದೆ.
ಭೂ ಸುಧಾರಣಾ ಕಾಯ್ದೆ ಬಗ್ಗೆ ಮಾತನಾಡಿದ ವಕೀಲ ರಾಘವೇಂದ್ರ ಶ್ರೀವತ್ಸ ಅವರು ಈ ಮೊದಲೂ ಕಾನೂನಿನ ಲೋಪಗಳನ್ನು ಬಳಸಿಕೊಂಡು ರಾಜಕಾರಣಿಗಳು, ಉದ್ಯಮಿಗಳು ಕೃಷಿ ಜಮೀನನ್ನು ಖರೀದಿಸಿ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಈಗ ನಿರ್ಬಂಧಗಳನ್ನು ತೆಗೆದಿದ್ದರಿಂದ ಭ್ರಷ್ಟಾಚಾರ ಕಡಿಮೆಯಾಗಲಿದೆ ಎಂದರು.
ತಮ್ಮ ಅಭಿಪ್ರಾಯ ಹಂಚಿಕೊಂಡ ಡಾ. ಪ್ರಕಾಶ್ ಕಮ್ಮರಡಿ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ಅಗತ್ಯ, ತಮ್ಮ ಪಡಿತರ ವಿತರಣೆಗಾಗಿ ರಾಜ್ಯ ಸರ್ಕಾರಗಳು ಕಡ್ಡಾಯವಾಗಿ ರೈತರಿಂದ ಧಾನ್ಯಗಳನ್ನು ಖರೀದಿಸುವಂತೆ ಕಾನೂನಿನಲ್ಲಿ ತಿದ್ದುಪಡಿ ಅಗತ್ಯ ಎಂದರು. ಮುಂದುವರಿದು, ಚುನಾಯಿತ ಸಂಸ್ಥೆಯಾದ ಎಪಿಎಂಸಿಯ ಪಾತ್ರ ಈ ಕಾನೂನಿನಿಂದಾಗಿ ದುರ್ಬಲವಾಗಲಿದೆ ಎಂದರು. ಅಷ್ಟಕ್ಕೂ, ರಾಜ್ಯಪಟ್ಟಿಯ ವಿಷಯವಾದ ಕೃಷಿ ಮತ್ತು ಮಾರುಕಟ್ಟೆ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕಾನೂನು ಜಾರಿ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಮಾತನಾಡಿದ ಹರಿಪ್ರಕಾಶ್ ಕೋಣೆಮನೆ ಅವರು, ಸರ್ಕಾರದ ಪ್ರಮುಖರಿಗೆ ರೈತರ ಹಿತಾಸಕ್ತಿ ಕಾಪಾಡುವ ಇರಾದೆಯಿದ್ದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಅಧಿಕಾರಿಗಳು ಮಂತ್ರಿಗಳ ದಾರಿ ತಪ್ಪಿಸುವುದರಿಂದ ಕಾನೂನುಗಳು ರೈತರಿಗೆ ಮಾರಕವಾಗುವ ಸಾಧ್ಯತೆಗಳಿರುತ್ತವೆ. ಆರ್ ಸಿ ಇ ಪಿ ಒಪ್ಪಂದಕ್ಕೆ ಇನ್ನೇನು ಸಹಿ ಹಾಕುವುದರಲ್ಲಿದ್ದ ಕೇಂದ್ರ ಸರ್ಕಾರ ಸೂಕ್ತ ಸಂದರ್ಭದಲ್ಲಿ ಮಾಧ್ಯಮಗಳ ಮಧ್ಯಪ್ರವೇಶದಿಂದ ಎಚ್ಚರಗೊಂಡಿತು ಎಂದರು. ಈಗ ಬಂದಿರುವ ಕಾನೂನುಗಳು ಮೊದಲ ಹೆಜ್ಜೆ, ಎಚ್ಚರ ವಹಿಸದಿದ್ದರೆ, ಕ್ರಮೇಣ ಕೃಷಿಯಲ್ಲಿ ಕಾರ್ಪೊರೇಟ್ ಕಂಪೆನಿಗಳ ಹಿಡಿತ ಮೇಲಾಗುತ್ತದೆ ಎಂದು ಎಚ್ಚರಿಸಿದರು.
ಸತೀಶ್ ಗೌಡ ಮಾತನಾಡಿ, ಕೃಷಿಕರಿಗೆ ಇನ್ನೂ ಸೌಲಭ್ಯಗಳನ್ನು ಕೊಡುವ ಬದಲು ಶ್ರೀಮಂತರಿಗೆ ಅನುಕೂಲ ಮಾಡುವ ಕಾನೂನನ್ನು ಸರ್ಕಾರ ತಂದಿದೆ. ಉದಾಹರಣೆಗೆ ಹತ್ತು ವರ್ಷ ಕೃಷಿ ಮಾಡುವುದು ಕಡ್ಡಾಯ, ಆಮೇಲೆ ಮಾತ್ರ ಭೂ ಪರಿವರ್ತನೆ ಅಂತ ನಿಯಮ ಹಾಕಬಹುದಿತ್ತು. ಅಥವಾ ಬಂಜರು ಭೂಮಿಗೆ ಮಾತ್ರ ಈ ನಿಯಮ ಸಡಿಲ ಮಾಡಬಹುದಿತ್ತು. ಈಗ ಮಾಡಿರುವುದನ್ನು ನೋಡಿದರೆ, ಈಗಾಗಲೇ ಜಮೀನು ಖರೀದಿಸಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಕೆಲವರಿಗೆ ಸಹಾಯ ಮಾಡಲು ಕಾನೂನು ತಂದ ಹಾಗಿದೆ ಎಂದರು.
ಸಮಾರೋಪ ಭಾಷಣ ಮಾಡಿದ ಗೌತಮ್ ಚಂದ್ ಅವರು, ಕೃಷಿಕರ ಜೊತೆ ವಕೀಲರ ಸಮೂಹ ಇದೆ. ಇದು ವೈಯಕ್ತಿಕ ಹಿತಾಸಕ್ತಿಯ ವಿಚಾರವಲ್ಲ. ಜನರ ಜೀವನದ ವಿಚಾರ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಕೃಷಿಕರಿಗೆ ಅಭಯ ಕೊಟ್ಟರು.