ಪ್ರಶ್ನೆಗಳಿಗೆ ಹೆದರಿ ಆರ್ ಎಸ್ ಎಸ್ ಮಾಧ್ಯಮ ಮುಖ್ಯಸ್ಥರನ್ನು ಟ್ವಿಟರ್ನಲ್ಲಿ ಬ್ಲಾಕ್ ಮಾಡಿದ ಜಯನಗರ ಶಾಸಕಿ
ಆರೆಸ್ಸೆಸ್ಸಿನ ಪ್ರಚಾರಕರು ಹಾಗೂ ಕರ್ನಾಟಕ ದಕ್ಷಿಣ ಪ್ರಾಂತದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮುಖ್ಯಸ್ಥರು ಆದ ಶ್ರೀ ಪ್ರದೀಪ್ ಮೈಸೂರು ಅವರ ಒಂದು ಪ್ರಶ್ನೆಗೆ ಉತ್ತರಿಸಲಾಗದೆ ಅವರನ್ನು ಟ್ವಿಟರ್ನಲ್ಲಿ ಬ್ಲಾಕ್ ಮಾಡುವ ಮೂಲಕ ಬೆಂಗಳೂರಿನ ಜಯನಗರ ಶಾಸಕಿಯಾದ, ಕಾಂಗ್ರೆಸ್ ಪಕ್ಷದ ಸೌಮ್ಯ ರೆಡ್ಡಿ ಅವರು ಅಸಹಿಷ್ಣುತೆಯನ್ನು ಪ್ರದರ್ಶಿಸಿದ್ದಾರೆ.
ನಡೆದ ಘಟನಾವಳಿಗಳು ಈ ರೀತಿ ಇವೆ. ಕನ್ನಡದ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಆದ ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಒಂದು ಸುಪ್ರಸಿದ್ಧ ಪದ್ಯ ಹಾಗೂ ಕನ್ನಡಿಗರ ಹೃದಯಸ್ಪರ್ಶಿ ಸಾಲುಗಳಾದ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ..“ ಇದನ್ನು ಕೇಳಿದ ಕೂಡಲೇ ಕನ್ನಡಿಗರ ಮನಸು ಪುಳಕಿತಗೊಳ್ಳುತ್ತದೆ. ಇದು ಕೇವಲ ಅಕ್ಷರಗಳ ಸಾಲಲ್ಲ ಇದು ಕನ್ನಡಿಗರ ನಾಡಿಮಿಡಿತ.
ನವೆಂಬರ್ ತಿಂಗಳು ಪೂರ್ತಿ ಈ ಹಾಡನ್ನು ಎಲ್ಲೆಲ್ಲೂ ಮೊಳಗಿಸುತ್ತಾ ಇಡೀ ಕರ್ನಾಟಕ ರಾಜ್ಯವೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಜಯನಗರ ಮೂಲದ ‘ಓಂ ಕನ್ನಡ ಮರಿಯಮ್ಮನ ಕರುನಾಡ ಸಂಘ’ ಈ ಪ್ರಸಿದ್ಧ ಸಾಲುಗಳನ್ನು ಅಪಬ್ರಂಶ ಮಾಡಿ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಯೇಸು” ಎಂದು ತಮ್ಮ ರಾಜ್ಯೋತ್ಸವದ ಆಹ್ವಾನ ಪತ್ರಿಕೆಯ ಪೋಸ್ಟರ್ನಲ್ಲಿ ಹಾಕಿಕೊಂಡಿದ್ದಾರೆ. ಆ ಪೋಸ್ಟರ್ ನ ಮಧ್ಯಭಾಗದಲ್ಲಿ ಸೌಮ್ಯ ರೆಡ್ಡಿಯವರ ಚಿತ್ರವೂ ಇತ್ತು. ಸೌಮ್ಯ ರೆಡ್ಡಿ ಆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳಾದ ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಸೆಕ್ಯುಲರಿಸಂ ಮುಖವಾಡವನ್ನು ತೋರಿಸುವುದಕ್ಕಾಗಿ ನವರಾತ್ರಿ ಸಮಯದಲ್ಲಿ ಗಣೇಶ, ಏಸುಕ್ರಿಸ್ತ ಮತ್ತು ಮಸೀದಿಯ ಭಾವಚಿತ್ರಕ್ಕೆ ಆರತಿಯನ್ನು ಮಾಡುತ್ತಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಕವಿತೆಯನ್ನು ವಿರೂಪಗೊಳಿಸಿ ಪೋಸ್ಟರ್‌ನಲ್ಲಿ ಯೇಸುವನ್ನು ತರುವ ಮೂಲಕ ಕವಿಯ ಚಿತ್ರಣವನ್ನು ಮತ್ತು ಅದಕ್ಕೆ ಸಂಬಂಧಿಸಿದ ಭಾವನೆಯನ್ನು ಕೆಡಿಸುವ ಪ್ರಯತ್ನ ಇದಾಗಿದೆ. ಇದನ್ನು ಪ್ರಶ್ನಿಸಿ ಬಹಳಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಸೌಮ್ಯ ರೆಡ್ಡಿ ರವರ ಮುಖಕ್ಕೆ ಛೀಮಾರಿ ಹಾಕಿ ಪ್ರಶ್ನಿಸಿದಾಗ, ಸ್ಪಷ್ಟೀಕರಣ ನೀಡಲು ಪ್ರಾರಂಭಿಸಿದರು. ಆರ್‌ಎಸ್‌ಎಸ್ ನ ಪೂರ್ಣಾವಧಿ ಕಾರ್ಯಕರ್ತರಾದ (ಪ್ರಚಾರಕ್) ಮತ್ತು ಆರ್‌ಎಸ್‌ಎಸ್‌ನಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ ಮಾಧ್ಯಮದ ಜವಾಬ್ದಾರಿಯನ್ನು ಹೊಂದಿರುವ ಶ್ರೀ ಪ್ರದೀಪ್ ಮೈಸೂರು ಸಹ ಸೌಮ್ಯ ಅವರನ್ನು ಟ್ವಿಟರ್‌ನಲ್ಲಿ ಪ್ರಶ್ನಿಸಿದರು. “ನಮಸ್ಕಾರ ಬೆಳಗ್ಗಿನಿಂದ ಜನ ನಿಮ್ಮನ್ನು ಕೇಳುತ್ತಿರುವುದೇ ಬೇರೆಯ ಪ್ರಶ್ನೆ. ನೀವದಕ್ಕೆ ಉತ್ತರಿಸಿಲ್ಲ. ಹಸುವಿನ ಬಗ್ಗೆ ಪ್ರಬಂಧ ಬರೆಯಲು ಕೇಳಿದರೆ ನೀವು ಹಸುವನ್ನು ಕಟ್ಟಿದ ಕಂಬದ ಬಗ್ಗೆ ಬರೆದಿದ್ದೀರಿ.“ ಎಂದು ಪ್ರದೀಪ್ ಮೈಸೂರ್ ಅವರು ಬರೆದಿದ್ದರು. ಆದರೆ ಸೌಮ್ಯ ರೆಡ್ಡಿ ಅವರು ಕೊಟ್ಟ ಉತ್ತರವೇ ಬೇರೆ. ಅದು ಅಸಹಿಷ್ಣುತೆಯ ಉತ್ತರ. ಪ್ರದೀಪ್ ಮೈಸೂರು ಅವರನ್ನು ಬ್ಲಾಕ್ ಮಾಡಿಬಿಟ್ಟರು.
ಜನಪ್ರತಿನಿಧಿಯ ಸ್ಥಾನದಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಯಮ ತೋರಿಸುತ್ತಾ, ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾದದ್ದು ಕರ್ತವ್ಯವೇ ಹೊರತು ಪಲಾಯನ ಮಾಡುವುದು ಸ್ವಾಗತಾರ್ಹವಲ್ಲ. ಪ್ರಶ್ನೆಗಳನ್ನು ಕೇಳುವವರನ್ನು ಬ್ಲಾಕ್ ಮಾಡುವುದು ಬಾಯಿ ಮುಚ್ಚಿಸುವುದು ಕಾಂಗ್ರೆಸ್ಸಿಗೆ ಹೊಸದೇನಲ್ಲ. ತಮ್ಮನ್ನು ಪ್ರಶ್ನಿಸುವ ಧ್ವನಿಗಳನ್ನು ನಿಗ್ರಹಿಸುವಲ್ಲಿ ಕಾಂಗ್ರೆಸ್ ಕುಖ್ಯಾತಿ ಪಡೆದಿದೆ (1975 ರ ತುರ್ತು ಪರಿಸ್ಥಿತಿ ಮಾತ್ರವಲ್ಲದೆ ಮೊದಲಿನಿಂದಲೂ). ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಎಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು ಈ ಧ್ವನಿಗಳನ್ನು ತಡೆಹಿಡಿದಿದೆ.
ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಬ್ಲಾಕ್ ಮಾಡುವುದು, ಕಠಿಣ ಪ್ರಶ್ನೆಗಳನ್ನು ಎದುರಿಸುವ ಧೈರ್ಯವನ್ನು ಹೊಂದದೆ ಚರ್ಚೆಯಿಂದ ಪಲಾಯನ ಮಾಡುವುದು, ಇದು ಅವರ ಆಲೋಚನಾ ಪ್ರಕ್ರಿಯೆಗೆ ಹಾಗೂ ಅಭಿಪ್ರಾಯಗಳನ್ನು ನಿಯಂತ್ರಿಸುವ ಸ್ವಭಾವಕ್ಕೆ ಹಿಡಿದ ಕನ್ನಡಿಯಾಗಿದೆ.
ಪ್ರದೀಪ್ ಮೈಸೂರು ಪ್ರೊಫೈಲ್ನಲ್ಲಿ ಆರೆಸ್ಸೆಸ್ ಅಂತ ಇದ್ದದ್ದೆ ಅಸಹಿಷ್ಣುತೆಯ ಕಾರಣವಾಯಿತೇ? ಬ್ಲಾಕ್ ಮಾಡಿದ ನಂತರ ಪ್ರದೀಪ್ ಈ ರೀತಿ ಟ್ವೀಟ್ ಮಾಡಿದ್ದಾರೆ
“ ಅಭಿಪ್ರಾಯಗಳನ್ನು ಆಲಿಸುವುದು, ಪ್ರಶ್ನೆಗಳು ಎದುರಾದಾಗ ಪಲಾಯನ ಮಾಡದೆ, ಬ್ಲಾಕ್ ಮಾಡದೆ ಉತ್ತರಿಸುವುದು, @INCKarnataka @Sowmyareddyr ಯ ಸಾಮರ್ಥ್ಯಕ್ಕೆ ಮೀರಿದ್ದು ಎಂಬುದು ಸಾಬೀತಾಗಿದೆ. ಕನ್ನಡ ವಿರೋಧಿ ಟಿಪ್ಪು ಜಯಂತಿಯನ್ನು ಕನ್ನಡಿಗರ ಮೇಲೆ ಹೇರಿದ @siddaramaiah ಅವರ ಪಕ್ಷದಿಂದ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಲಾಗದು.”
ಪ್ರದೀಪ್ ಅವರನ್ನು ಅನ್-ಬ್ಲಾಕ್ ಮಾಡಬೇಕೆಂಬುದು ಬೇಡಿಕೆಯಲ್ಲ, ಆದರೆ ಶಾಸಕಿ ಸೌಮ್ಯಾ ರೆಡ್ಡಿ ಮತ್ತು ಅವರಂತಹ ಅನೇಕರು ಬೌದ್ಧಿಕ ಪ್ರಭುತ್ವವನ್ನು ಪಡೆದುಕೊಳ್ಳಬೇಕು ಮತ್ತು ಚರ್ಚೆಗಳಲ್ಲಿ ಹೆಚ್ಚು ಮುಕ್ತವಾಗಿ ಭಾಗವಹಿಸಬೇಕು.
ವಿಶ್ವ ಸಂವಾದ ಕೇಂದ್ರ ಈ ಬೆಳವಣಿಗೆಗಳನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಹಠಾತ್ತನೆ ಪ್ರದೀಪ್ ಮೈಸೂರು ಅವರನ್ನು ಟ್ವಿಟ್ಟರ್ ನಲ್ಲಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಕೆಲವೇ ಗಂಟೆಗಳ ಮೊದಲು ಅನ್-ಬ್ಲಾಕ್ ಮಾಡಿದ್ದಾರೆ.
ವಿ ಎಸ್ ಕೆ ತನ್ನ ವರದಿಯಲ್ಲಿ ಪ್ರದೀಪ್ ಮೈಸೂರು ಅವರನ್ನು ಅನ್-ಬ್ಲಾಕ್ ಮಾಡಬೇಕೆಂಬ ಬೇಡಿಕೆಯನ್ನು ಇಡಲಿಲ್ಲ, ಬದಲಿಗೆ ಜನಪ್ರತಿನಿಧಿಗಳು ಚರ್ಚೆಗೆ ಮುಕ್ತರಾಗಬೇಕೆಂದು ಮಾತ್ರ ಒತ್ತಾಯಿಸಿತ್ತು. ಶಾಸಕಿ ಸೌಮ್ಯ ರೆಡ್ಡಿ ಅವರು ಪ್ರದೀಪ ರನ್ನು ಬ್ಲಾಕ್ ಮಾಡಿದ ನಡೆಯನ್ನು ಅನೇಕ ಜನ ಪ್ರಶ್ನಿಸಿದ ಕಾರಣ, ಅದಕ್ಕೆ ಉತ್ತರವೆಂಬಂತೆ ಪ್ರದೀಪ್ ರನ್ನು ಅನ್-ಬ್ಲಾಕ್ ಮಾಡಲಾಗಿದೆ. ಅನ್ ಬ್ಲಾಕ್ ನಂತರ ವಿ ಎಸ್ ಕೆ ತಂಡ ಪ್ರದೀಪ್ ರನ್ನು ಮಾತನಾಡಿಸಿದಾಗ, ಈ ಕೆಳಕಂಡ ಪ್ರಶ್ನೆಗಳಿಗೆ ಸೌಮ್ಯ ರೆಡ್ಡಿ ಇನ್ನೂ ಉತ್ತರ ಕೊಟ್ಟಿಲ್ಲ ಎಂದು ಹೇಳಿದರು.
1. ಕನ್ನಡ ರಾಜ್ಯೋತ್ಸವವು ಸಾಂಸ್ಕೃತಿಕ ಕಾರ್ಯಕ್ರಮವಾಗಿರುವುದರಿಂದ ತಾಯಿ ಭುವನೇಶ್ವರಿ ಫೋಟೋ ಇರಬೇಕಿತ್ತು ಆದರೆ ಕ್ರಿಶ್ಚಿಯನ್ ಧರ್ಮ, ಮೇರಿ ಮತ್ತು ಶಿಶು ಜೀಸಸ್ ಇರಿಸಿ, ಭುವನೇಶ್ವರಿಯನ್ನು ಕಡೆಗಣಿಸಲಾಗಿದೆ.
2. ಕನ್ನಡ ರಾಜ್ಯೋತ್ಸವವನ್ನು ಇದುವರೆಗೆ ಧಾರ್ಮಿಕ ಕಾರ್ಯಕ್ರಮವಾಗಿ ಆಚರಿಸಲಾಗಿಲ್ಲ ಆದರೆ ಕ್ರಿಶ್ಚಿಯನ್ ಮತಾಂತರಗಳನ್ನು ತೀವ್ರವಾಗಿ ಪ್ರೋತ್ಸಾಹಿಸುವ ಕಡೆಗೆ ಸಂಘಟನೆಯ ಪ್ರಯತ್ನ ಸ್ಪಷ್ಟವಾಗಿದೆ.
3. ರಾವ್ ಬಹದ್ದೂರ್ ದೇಶಪಾಂಡೆ ಕೊಟ್ಟ “ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ “ ಘೋಷವಾಕ್ಯವನ್ನು ವಿಕೃತಗೊಳಿಸಿ ಜೈ ಏಸು ಜೈ ಕ್ರಿಸ್ತ ಸೇರಿಸಿರುವುದು ಎಷ್ಟು ಸರಿ ?
4. ಕೊನೆಯದಾಗಿ “ಬಾರಿಸು ಕನ್ನಡ ಡಿಂಡಿಮವಾ ಓ ಕರ್ನಾಟಕ ಹೃದಯ ಶಿವ” ಅನ್ನು “ಹೃದಯ ಯೇಸು” ಎಂದು ವಿರೂಪಗೊಳಿಸಲಾಗಿದೆ. ಮತಾಂತರ ಮತ್ತು ಕವಿ ಡಾ. ಕೆ ವಿ ಪುಟ್ಟಪ್ಪ ಅವರನ್ನು ಅಗೌರವಗೊಳಿಸುವ ಪ್ರಯತ್ನವನ್ನೂ ಸೂಚಿಸುತ್ತದೆ. ಇದಕ್ಕೆ ಸೌಮ್ಯ ರೆಡ್ಡಿ ಅವರ ಒಪ್ಪಿಗೆ ಇತ್ತೇ ?
5. ಕಾರ್ಯಕ್ರಮದ ಆಯೋಜಕರನ್ನು ಪೋಸ್ಟರ್ ತಿದ್ದುಪಡಿ ಮಾಡಲು ಸೌಮ್ಯ ರೆಡ್ಡಿ ಹೇಳಿದ್ದರೆ? ಪರಿಷ್ಕೃತ ಪೋಸ್ಟರ್ ಹೊರಗೆ ಏಕೆ ಬಂದಿಲ್ಲ? ಸೌಮ್ಯಾ ರೆಡ್ಡಿ ಈ ಎಲ್ಲ ಅಗ್ಗದ ತಂತ್ರಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ?
ಕ್ರಿಶ್ಚಿಯನ್ ಧರ್ಮವನ್ನು ಜನಪ್ರಿಯಗೊಳಿಸಲು ಮಿಷನರಿಗಳ ಒಗ್ಗಟ್ಟಿನ ಪ್ರಯತ್ನ ನಡೆದಿದೆ. ಕಾಲಕಾಲಕ್ಕೆ ವಿ ಎಸ್ ಕೆ ಮತಾಂತರದ ಕುತಂತ್ರಗಳನ್ನು ಬಹಿರಂಗಪಡಿಸುತ್ತ ಬಂದಿದೆ. ಕ್ರಿಸ್ಮಸ್ ಸಮಯಕ್ಕೆ ಹೆಚ್ಚಾಗುತ್ತಿದ್ದ ಮಿಷನರಿಗಳ ಚಟುವಟಿಕೆಗಳು ಈಗ ವರ್ಷಪೂರ್ತಿ ನಿರರ್ಗಳವಾಗಿ ನಡೆಯುತ್ತಿವೆ. ಈ ರೀತಿಯ ಸಾಂಸ್ಕೃತಿಕ ಆಕ್ರಮಣಗಳು ಜನರನ್ನು ಸೆಳೆಯಲು ಮತ್ತು ಅಂತಿಮವಾಗಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಅಗ್ಗದ ತಂತ್ರಗಳಾಗಿವೆ.
ಪ್ರದೀಪ್ ಗಮನಿಸಿದಂತೆ ಸೌಮ್ಯಾ ರೆಡ್ಡಿ ಅವರು “ಕ್ರಿಶ್ಚಿಯನ್” ರಾಜ್ಯೋತ್ಸವಕ್ಕೆ ಹಾಜರಾಗಿದ್ದಾರೆಯೇ ಮತ್ತು ಅವರು ಕೋರಿರುವ ಪರಿಷ್ಕೃತ ಪೋಸ್ಟರ್ ಇನ್ನೂ ಸಾರ್ವಜನಿಕವಾಗಿ ಲಭ್ಯವಿಲ್ಲ ಮತ್ತು ಅಂತಹ ನೀತಿಬಾಹಿರ ಅಭ್ಯಾಸಗಳನ್ನು ಸೌಮ್ಯಾ ರೆಡ್ಡಿ ಅವರು ಬೆಂಬಲಿಸುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಬೇಕು.