Mai Cha Jayadev ji

 

ವೀರಶೈವ ಸಮುದಾಯ ಹೊರಟಿದ್ದೆಲ್ಲಿಗೆ, ತಲುಪಿದ್ದೆಲ್ಲಿಗೆ?

ಶ್ರೀ ಮೈ ಚ ಜಯದೇವ್ , ಆರೆಸ್ಸೆಸ್ಸಿನ ಹಿರಿಯ ಪ್ರಚಾರಕರು (ಇಂದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

(ಇದೇ ಏಪ್ರಿಲ್ ೧೯ ರಂದು ಮೈಸೂರು  ಸಮೀಪದ ಸುತ್ತೂರಿನಲ್ಲಿ ನಡೆದ ವೀರಶೈವ ಮಹಾಸಭಾದ ಬೃಹತ್ ಅಧಿವೇಶನದಲ್ಲಿ  ವೀರಶೈವ ಸಮುದಾಯ-ಸಾಮಾಜಿಕ  ಸಾಮರಸ್ಯ ವಿಷಯ ಕುರಿತು ಮಾಡಿದ ಭಾಷಣದ ಆಯ್ದ ಭಾಗವಿದು.)

-ಇಂದು ಸಾವಿರಾರು ಗ್ರಾಮಗಳಲ್ಲಿ ವೀರಶೈವ ಸಮುದಾಯದ ಹಿರಿತನದ ಹಿಡಿತ ಕಾಣಬಹುದು. ಈ ಪ್ರಭಾವ ಕೇವಲ ಅಧಿಕಾರ ಹಿಡಿಯುವ ಮೆಟ್ಟಿಲಾಗಿ ಬಳಕೆಯಾಗುತ್ತಿದೆ.

ಲಿಂಗಾಯತ ಎಂದು ಕರೆಯಲಾಗುವ ವೀರಶೈವ ಸಮುದಾಯದ ವಿಶಿಷ್ಟತೆ ಇರುವುದು ಅದರಲ್ಲಿನ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವಿಕೆಯಲ್ಲಿ. ಅದು ಮೂಲದಲ್ಲಿ ಕೇವಲ ಒಂದು ಜಾತಿಯಾಗಿರದೇ ಒಂದು ಸುಧಾರಣಾವಾದಿ ವಿಚಾರಯಾತ್ರೆಯಾಗಿದೆ. ಅಂತಹ ಸಮಾಜದಲ್ಲಿ ನಾನು ಹುಟ್ಟಿದೆನಾದರೂ ಬಾಲ್ಯದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದು ಅದೇ ಜಾಡಿನಲ್ಲೇ ೬೫ ವರ್ಷಗಳಿಂದ ಮುಂದುವರಿದಿದ್ದೇನೆ. ಹೀಗಾಗಿ ವೀರಶೈವ ಸಿದ್ಧಾಂತದ ಕುರಿತಾಗಿ ಆಳವಾದ ಚಿಂತನೆಗೆ ಅವಕಾಶವಾಗಿಲ್ಲವಾದರೂ ಸಂಘದ ಒಡನಾಟದಲ್ಲಿರುವಾಗಲೇ ಹಲವು ಪ್ರಮುಖರ, ಸ್ವಾಮೀಜಿಗಳ ನಿಕಟತೆಗೆ ಬಂದು ಹಲವು ಸಂಗತಿಗಳನ್ನು ಅರ್ಥೈಸಿಕೊಂಡವನು. ಹಿಂದು ಎಂದು ಕರೆಯಲಾಗುವ ಭಾರತೀಯ ಸಮಾಜವನ್ನು ದೇಶವ್ಯಾಪಿಯಾಗಿ ಸಂಘಟಿಸುವ ಉದ್ದೇಶದಿಂದ ಹೊರಟಿರುವ ಸಂಘ, ವೀರಶೈವ ತತ್ವ-ಸಿದ್ಧಾಂತಗಳು ಪ್ರಚುರ ಪಡಿಸುವ ಅಸ್ಪೃಶ್ಯತಾ ನಿವಾರಣೆಯಂತಹ ಅನೇಕ ಅಂಶಗಳನ್ನು ತನ್ನದಾಗಿಸಿಕೊಂಡಿದೆ.

ಹಿಂದು ಧರ್ಮದ ಅನೇಕ ಉದಾರವಾದಿ ವಿಚಾರಗಳು ಕಾಲದ ಓಟದಲ್ಲಿ ಜಡ್ಡುಗಟ್ಟಿ ನಿಂತಿದ್ದ ಸಂದರ್ಭದಲ್ಲಿ ಹುಟ್ಟಿದ ವೀರಶೈವ ಸಿದ್ಧಾಂತ ತನ್ನ ನೇರವಂತಿಕೆಯಿಂದ ಕ್ರಾಂತಿಕಾರಕವೆನಿಸಿತು. ೧೨ನೇ ಶತಮಾನದಲ್ಲಿ ವೀರಶೈವ ತತ್ವ-ವಿಚಾರಗಳೊಂದಿಗೆ ಮೂಡಿಬಂದ ವಚನಸಾಹಿತ್ಯ ತನ್ನ ಸರಳ, ಪ್ರಖರ ಭಾಷೆಯಿಂದ ಹೊಸ ದೃಷ್ಟಿಯನ್ನು

ತೆರೆದಿಟ್ಟಿತು.

ನಿರಂತರ ಸತ್ಯ ಶೋಧನೆಯೇ ಹಿಂದು ಧರ್ಮ ಎಂದರು ಮಹಾತ್ಮ ಗಾಂಧಿ. ಧಾರಣಾತ್ ಧರ್ಮ ಮಿತ್ಯಾಹು- ಎಲ್ಲರನ್ನು ಜೋಡಿಸುವುದೇ ಧರ್ಮ. ಪ್ರತಿಯೊಬ್ಬರ ಕರ್ತವ್ಯಭಾವವನ್ನೂ ಧರ್ಮ ಬಿಂಬಿಸುತ್ತದೆ. ಈ ಧರ್ಮದ ೧೦ ಲಕ್ಷಣಗಳನ್ನು ಗುರುತಿಸಲಾಗಿದೆ. ಧೃತಿ, ಕ್ಷಮಾ, ದಮ, ಆಸ್ತೇಯ, ಶೌಚ, ಇಂದ್ರಿಯನಿಗ್ರಹ, ಧೀ, ವಿದ್ಯೆ, ಸತ್ಯ, ಅಕ್ರೋಧ ಇವೆಲ್ಲವೂ ಶಾಶ್ವತ ಮೌಲ್ಯಗಳು. ಇದೇ ನೆಲಗಟ್ಟಿನಲ್ಲಿ ವಿಚಾರವನ್ನು ಸರಳಗೊಳಿಸಿ ಎಲ್ಲರಿಗೂ ನಾಟುವಂತೆ ಪ್ರಖರಗೊಳಿಸಿ ಹೇಳಿದ್ದು ವೀರಶೈವ ಸಿದ್ಧಾಂತ. ಭಾರತದಾದ್ಯಂತ ಶೈವ ಪರಂಪರೆ ವ್ಯಾಪಕವಾಗಿ ಹರಡಿಕೊಂಡಿದೆ. ಆದರೆ ಶೈವರೆಲ್ಲ ವೀರಶೈವರಲ್ಲ ಎಂಬುದನ್ನು ಗಮನಿಸಬೇಕು. ಹಾಗಾದರೆ ವೀರಶೈವರು ಯಾರು ವೀರಶೈವರಾಗಬೇಕಾದರೆ ಶಿವದೀಕ್ಷೆ, ಲಿಂಗಧಾರಣೆಯಾಗಬೇಕು.

ಯಾವ ವೀರಶೈವನೂ ಅಭಿಮಾನ ಪಡಬಹುದಾದ ಸಾಧನೆಯನ್ನು ಈ ಸಮಾಜದಲ್ಲಿ ಹುಟ್ಟಿದ ಅನೇಕರು ಮಾಡಿದ್ದಾರೆ. ಜಡವಾಗಿ ಬಿದ್ದಿದ್ದ ಸಮಾಜಕ್ಕೆ ಆಘಾತ ಚಿಕಿತ್ಸೆ (ಝ್ಟ್ಛ

ವೀರಶೈವರ ೬ ಮುಖ್ಯ ವಿಚಾರಗಳೆಂದರೆ:

-೧. ಸ್ತ್ರೀ ಸಮಾನತೆ: ಮಹಿಳೆಯರಿಗೂ ಲಿಂಗಧಾರಣೆ, ಪೂಜಾವಿಧಾನಗಳ ಆಚರಣೆಯ ಸ್ವಾತಂತ್ರ್ಯ ಕೊಟ್ಟದ್ದು. ಅನುಭವ ಮಂಟಪದ ಚರ್ಚೆಯಲ್ಲಿ ಶರಣೆ ಮುಕ್ತಾಯಕ್ಕನ ವಿಚಾರಧಾಟಿಗೆ ಮಹಾಮೇಧಾವಿಯೆನಿಸಿದ ಅಲ್ಲಮಪ್ರಭುಗಳೇ ಅಲುಗಾಡಿದರು. ಜೊತೆಗೆ ಅಕ್ಕಮಹಾದೇವಿಯ ವೈಚಾರಿಕ ಸಾಧನೆಗಳು ಆ ದಿನಗಳ ಮಹಿಳೆಯರ ಸಹಭಾಗಿತ್ವವನ್ನು ಬಿಂಬಿಸುತ್ತದೆ.

-೨. ಜಾತಿ ಸಮಾನತೆ: ಸ್ಪೃಶ್ಯ-ಅಸ್ಪೃಶ್ಯ ಭಾವನೆಗೆ ಬಲವಾದ ಹೊಡೆತ ಕೊಟ್ಟು ಜಾತಿ ಭೇದ ಇಲ್ಲದ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರ. ಆಭಿಪ್ರಾಯ ಸ್ವಾತಂತ್ರ್ಯ, ಕಾಯಕ ಪ್ರಜ್ಞೆ ಇಂತಹ ಮೌಲಿಕ ವಿಚಾರಗಳ ಚರ್ಚೆಗೆ ಎಲ್ಲರಿಗೆ ಅವಕಾಶ ನೀಡಿದಂತಹ ಅನುಭವ ಮಂಟಪದ ಪ್ರಯೋಗಗಳು ಐತಿಹಾಸಿಕ ಮಹತ್ವ ಪಡೆದಿವೆ. ಸ್ವತಃ ಬಸವಣ್ಣನವರೇ ನಿಂತು ಜಾತೀಯ ಆಚರಣೆಗಳಿಗೆ ಮಂಗಳ ಹಾಡಿದರು. ಮಾದಾರ ಚೆನ್ನಯ್ಯನವರ ಮನೆಯಲ್ಲಿ ಊಟ ಮಾಡಿದ ಬಸವಣ್ಣ ಡೋಹರ ಕಕ್ಕಯ್ಯ, ಮಾದಾರ ಡಡಚೆನ್ನಯ್ಯನವರ ಮನೆಯ ದಾಸ-ದಾಸಿಯರ ಪುತ್ರ ತಾನೆಂದು ಹೇಳಿದರು.

-೩. ಕಾಯಕ: ನಿಷ್ಕಾಮ ಕರ್ಮದ ವಿಚಾರವನ್ನೂ ಮೀರಿದ ಕಾಯಕ ಪ್ರಜ್ಞೆ ವೀರಶೈವರ ಅದ್ಭುತ ಕೊಡುಗೆ. ಗಳಿಸಿದ್ದನ್ನು ಅವಶ್ಯವಿದ್ದಷ್ಟು ಬಳಸಿ ಉಳಿದಿದ್ದನ್ನು ಸಮಾಜಕ್ಕೆ ಕೊಡುವ ಸೂತ್ರ ಮಾತ್ರವಲ್ಲ, ಗಳಿಸುವ ಮಾರ್ಗದ ಶುದ್ಧತೆಯನ್ನೂ ಪ್ರತಿಪಾದಿಸಿದ್ದು ಇದರ ಅನನ್ಯತೆ ಎನಿಸಿದೆ. ತಾನು ಹೊಸೆದ ಹಗ್ಗಕ್ಕೆ ರಾಜಾಶ್ರಯದಿಂದ ಹೆಚ್ಚುವರಿಯಾಗಿ ಸಿಕ್ಕ ಹೊನ್ನನ್ನು ನಿರಾಕರಿಸುವ ನೂಲಿಯ ಚಂದಯ್ಯ ಇದಕ್ಕೊಂದು ಉದಾಹರಣೆ. ಕಾಯಕದಲ್ಲಿ ನಿರತನಾದಾಗ ಗುರುದರ್ಶನವಾಗಲಿ, ಜಂಗಮನೇ ಎದುರು ಬರಲಿ ಹಂಗು ಹರಿಯಬೇಕೆಂದಿದ್ದಾರೆ ಶರಣರು.

-೪. ದಾಸೋಹ: ದಾನ-ದೇಣಿಗೆ ಎರಡನ್ನೂ ಮೀರಿ ನಿಂತ ಚಿಂತನೆಯೇ ದಾಸೋಹ. ಬಡವ-ಬಲ್ಲಿದ, ಉಚ್ಚ- ನೀಚ, ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಒಂದಾಗಿ  ಪ್ರಾಸಾದ  ಸ್ವೀಕರಿಸುವುದೇ ದಾಸೋಹದ ಹಿರಿಮೆ. ದಾಸೋಹ ಮಾಡುವವರಿಗೆ ತಾನಿದನ್ನು ಮಾಡುತ್ತಿದ್ದೇನೆ ಎಂಬ ಭಾವ ಸುಳಿಯಬಾರದೆನ್ನುತ್ತಾರೆ ಬಸವಣ್ಣನವರು.

-೫. ಇಷ್ಟಲಿಂಗ ಪೂಜೆ: ಇದೊಂದು ದೇವರನ್ನು ಸಮೀಪಿಸುವ ಸರಳ ವಿಧಾನ. ಇಡೀ ಬ್ರಹ್ಮಾಂಡವನ್ನೇ ಲಿಂಗ ಸ್ವರೂಪಿಯಾಗಿ ಕಾಣುವ ವಿಶ್ವವಿಶಾಲತೆಯ ಕಲ್ಪನೆಇದರಲ್ಲಿ ಅಡಗಿದೆ.

-೬. ಷಟ್‌ಸ್ಥಳ ಸಾಧನೆ: ಭಕ್ತ, ಮಹೇಶ, ಪ್ರಾಸಾದಿ, ಪ್ರಾಣಲಿಂಗಿ, ಶರಣ ಹೀಗೆ ಹಂತ, ಹಂತವಾಗಿ ಸಾಧನೆ ಮಾಡುತ್ತಾ ಅಂತಿಮವಾಗಿ ಮುಕ್ತಿ ಮಾರ್ಗವೆನಿಸಿದ ಲಿಂಗೈಕ್ಯನಾಗಬೇಕೆಂಬುದೇ ಜೀವನ ಸಾರ್ಥಕತೆಗೆ ಬೇಕಾದ ೬ ಹಂತಗಳು. ಈ ೬ನೇ ಸ್ಥಿತಿ ಲಿಂಗೈಕ್ಯ ಎನ್ನುವುದನ್ನು ಇತರರು ಮುಕ್ತಿ ಎಂದು ಗ್ರಹಿಸಿರುತ್ತಾರೆ.

ವಿಭಿನ್ನ ಜಾತಿ-ಉಪಜಾತಿಗಳು ಎಷ್ಟೇ ಇರಲಿ ಅವುಗಳ ನಡುವಿನ ಸಾಮರಸ್ಯವನ್ನೇ ಮೂಲ ನೆಲಗಟ್ಟನ್ನಾಗಿ ಸ್ವೀಕರಿಸಿ ಉದಯಿಸಿದ ವೀರಶೈವ ಸಿದ್ಧಾಂತ ‘ಇವನಾರವ, ಇವನಾರವ ಎಂದೆಣಿಸದಿರು’ ಎಂದು ಹೇಳುತ್ತದೆ. ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ’ ಎಂದು ಪ್ರಶ್ನಿಸಿದ ವಚನಕಾರರು ‘ಜಾತಿ-ವಿಜಾತಿ ಎನಬೇಡ ದೇವನೊಲಿದಾತನೇ ಜಾತ ಸರ್ವಜ್ಞ’ ಎಂದಿದ್ದಾರೆ.

೩೫೦೦ಕ್ಕೂ ಹೆಚ್ಚು ಜಾತಿ-ಉಪಜಾತಿಗಳಿರುವ ಈ ನಮ್ಮ ದೇಶಲ್ಲಿ ಈಗ ಒಡೆದು ಹೋದ ಸಮಾಜಗಳೆದುರು, ಮುಸಲ್ಮಾನರೇ ಬಹುಸಂಖ್ಯಾತರೇನೋ ಎಂಬಂತಾಗಿದೆ.

೧೨ನೇ ಶತಮಾನದಲ್ಲಿ ಮೇಲು-ಕೀಳಿನ ಭಾವನೆಯನ್ನು ಕಿತ್ತು ಹಾಕಿ ಎದ್ದು ನಿಂತ ವೀರಶೈವ ಸಮುದಾಯವೇ ಇಂದು ನೊಣಬ, ಬಣಜಿಗ, ಪಂಚಮಸಾಲಿ ಇತ್ಯಾದಿ ಪ್ರಭೇದಗಳಲ್ಲಿ ಸಿಲುಕಿ ಮೂಲ ವಿಚಾರಗಳನ್ನೇ ಬದಿಗಿಟ್ಟಿದೆ. ಚುನಾವಣೆ, ರಾಜಕೀಯ, ಆಧಿಕಾರಸ್ಥಾನದ ಗಳಿಕೆಗಾಗಿ ಜಾತೀಯತೆಯನ್ನು ಬಳಸುವ, ಮಠಾಧೀಶರ ಬೆಂಬಲ ಗಿಟ್ಟಿಸುವ ತಂತ್ರ-ಕುತಂತ್ರಗಳಲ್ಲಿ ತೊಡಗುವವರ ಸಂಖ್ಯೆ ಆಧಿಕವಾಗಿದೆ. ಭವಿಷ್ಯದಲ್ಲಿ ಇದೊಂದು ಅಪಾಯಕಾರಿ ಸಂಗತಿಯಾಗಲಿದೆ.

ಗ್ರಾಮೀಣ ಭಾಗದಲ್ಲಿ ದುರ್ಬಲ ಜಾತಿಗಳನ್ನು ದೂರವಿಡುವ, ಸಂಘರ್ಷ, ಘರ್ಷಣೆ, ಬಹಿಷ್ಕಾರದಂತಹ ಬೆಳವಣಿಗೆಗಳು ಈಗಲೂ ನಡೆದಿವೆ. ನಮ್ಮ ನಂಬಿಕೆಗಳೇ ಬೇರೆ, ನಮ್ಮ ನಡವಳಿಕೆಯೇ ಬೇರೆ ಎಂಬ ಸ್ಥಿತಿ ನಮ್ಮ ಸಮಾಜದಲ್ಲಿದೆ. ಸಿದ್ಧಗಂಗಾ ಮಠ, ಸುತ್ತೂರು ಮಠಗಳಲ್ಲಿ ಎಲ್ಲ ಜಾತಿ, ಸಮುದಾಯದ ಮಕ್ಕಳು ಒಟ್ಟಾಗಿದ್ದು ಶಿಕ್ಷಣದ ಆಶ್ರಯ ಪಡೆಯುತ್ತಾರೆ. ಮಠಗಳ ಈ ವಿಶಿಷ್ಟ ದಾಸೋಹ ಶೈಲಿಯನ್ನು ಸಮಾಜವೂ ಸ್ವೀಕರಿಸಬೇಕು, ಆದರೆ ಈ ಕೆಲಸವನ್ನು ಎಲ್ಲರೂ ಬೆಂಬಲಿಸುತ್ತಾರೆ, ಹೆಮ್ಮೆ ಪಡುತ್ತಾರೆ. ಇಂತಹ ಕೆಲಸಗಳು ಸಣ್ಣ ಮಟ್ಟಿಗಾದರೂ ನಮ್ಮ ಮನೆಯಲ್ಲೂ ಆಗಬೇಕೆಂದು ಬಯಸುವವರು, ಪ್ರಯತ್ನ ಪಡುವವರು ಎಷ್ಟು ಜನ?

ಅಸ್ಪೃಶ್ಯತೆಯ ಆಚರಣೆಗಳನ್ನು ನಮ್ಮ ಯಾವ ಧರ್ಮಶಾಸ್ತ್ರ ಗ್ರಂಥವೂ ಸಮರ್ಥಿಸಿಲ್ಲ. ನಮ್ಮ ಯಾವ ಮಹಾಪುರುಷರೂ ಇದನ್ನು ಬೆಂಬಲಿಸಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ೩ನೇ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ ದೇವರಸರವರು ‘ಅಸ್ಪೃಶ್ಯತೆ ಪಾಪವಲ್ಲವಾದರೆ ಜಗತ್ತಿನಲ್ಲಿ ಇನ್ನಾವುದೂ ಪಾಪವೇ ಅಲ್ಲ. ಕೊಲೆ, ದರೋಡೆ, ಹಿಂಸಾಚಾರದಂತಹ ಪಾಪಗಳಿಗಿಂತ ಅಸ್ಪೃಶ್ಯತೆಯ ಆಚರಣೆ ಮಹಾಪಾಪ’ ಎಂದವರು ಹೇಳಿದ್ದಾರೆ.

ದೇಶದಲ್ಲಿ ಜಾತಿ ಆಧಾರಿತ ದೌರ್ಜನ್ಯ, ದಬ್ಬಾಳಿಕೆಯ ವಿಷಯ ಇವತ್ತು ನಿತ್ಯಸುದ್ದಿಯಾಗಿದೆ. ವಾರದಲ್ಲೊಂದಾದರೂ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇಂತಹ ಘಟನೆಗಳು ಸಂಭವಿಸದಂತೆ ಸಾಮಾಜಿಕ ಹೊಣೆಗಾರಿಕೆಗೆ ಹೆಗಲು ಕೊಡುವವರು ಯಾರು ಹಿಂದಿನವರ ಕೆಲಸ ಕಾರ್ಯಗಳನ್ನು  ಪರಿವರ್ತನೆಯ ಹರಿಕಾರರೆಂದು ನಾವು ಅಭಿಮಾನ ಪೂರ್ವಕವಾಗಿ ಸ್ಮರಿಸಿಕೊಳ್ಳುತೇವೆ. ಆದರೆ ಮುಂದಿನ ಪೀಳಿಗೆಯವರು ನಮ್ಮ ಇವತ್ತಿನ ನಡವಳಿಕೆಯನ್ನು ಯಾವ ರೀತಿ ಸ್ಮರಿಸಬೇಕು ಎಂಬ ಪ್ರಶ್ನೆ ನಮ್ಮ ಮನಸ್ಸಿಗೆ ಬರಬೇಕಲ್ಲವೇ?  ಹಿಂದೊಂದು ಕಾಲದಲ್ಲಿ ಅನೇಕ ಜಾತಿ-ಉಪಜಾತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಎಲ್ಲರಲ್ಲಿ ಸಮರಸತೆಯ ಭಾವ ಬೆಳೆಸಿದ್ದರ ಪರಿಣಾಮವಾಗಿ ವೀರಶೈವ ಸಮುದಾಯ ಸಂಖ್ಯಾಬಾಹುಳ್ಯ ಹೊಂದಿರುವ ಸಮುದಾಯವಾಗಿದೆ. ಹಾಗಾಗಿಯೇ ಇಂದು ಸಾವಿರಾರು ಗ್ರಾಮಗಳಲ್ಲಿ ವೀರಶೈವ ಸಮುದಾಯದ ಹಿರಿತನದ ಹಿಡಿತ ಕಾಣಬಹುದು. ಈ ಪ್ರಭಾವ ಕೇವಲ ಅಧಿಕಾರ ಹಿಡಿಯುವ ಮೆಟ್ಟಿಲಾಗಿ ಬಳಕೆಯಾಗುತ್ತಿದೆ. ಜಾತಿ-ಉಪಜಾತಿಗಳ ನಡುವೆ ಸಾಮರಸ್ಯ ಬೆಳೆಸುವ, ಭಯ ಭೀತಿ ಇಲ್ಲದ ಸಹಜ ದೇವಸ್ಥಾನ ಪ್ರವೇಶಕ್ಕೆ ಬೇಕಾಗುವ ವಾತಾವರಣ ನಿರ್ಮಿಸಲು ಕಾರಣವಾಗಬೇಕು. ಪರಸ್ಪರ ಗೌರವ ಭಾವದಿಂದ ಬಾಳಲು ಕಾರಣವಾಗಬೇಕು. ಈ ಕೆಲಸ ಮಾಡಬೇಕಾದ್ದು ಕೇವಲ ವೀರಶೈವರ ಉದ್ಧಾರಕ್ಕಾಗಿ ಅಲ್ಲ, ನಾಡಿನ ಎಲ್ಲರ ಕಲ್ಯಾಣಕ್ಕಾಗಿ. ಸಾಮರಸ್ಯ ಸಮಾಜ ನಿರ್ಮಾಣದ ಪ್ರಯತ್ನದಲ್ಲಿ ವೀರಶೈವ ಸಮುದಾಯ ಉಳಿದ ಸಮುದಾಯಗಳಿಗೆ ಮಾದರಿಯಾಗಬೇಕು.

ಅಸಮಾನತೆಯನ್ನು ಉಳಿಸಿಕೊಂಡು ಬಂದ ಸಮಾಜದಲ್ಲಿ ಮತಾಂತರದ ಪಿಡುಗು ನುಸುಳುತ್ತದೆ. ಅನ್ಯಮತೀಯರ ಬಲೆಗೆ ಸಿಲುಕಿ ಲಕ್ಷಾಂತರ ನಮ್ಮ ಬಂಧುಗಳು ಹೊರಹೋಗಿದ್ದಾರೆ. ಈ ಪಿಡುಗಿನಿಂದ ವೀರಶೈವ ಸಮುದಾಯವೂ ಹೊರತಾಗಿಲ್ಲ. ದಾವಣಗೆರೆ ಸುತ್ತಮುತ್ತ ಮತಾಂತರ ಪ್ರಕರಣಗಳನ್ನು ಖುದ್ದಾಗಿ ಪರಿಶೀಲಿಸಲು ಬಂದಿದ್ದ ವೀರಶೈವ ಮಹಾಸಭಾದ ನಿಯೋಗ, ಲಿಂಗಾಯತ ಬಂಧುಗಳೇ ದೊಡ್ಡ ಸಂಖ್ಯೆಯಲ್ಲಿ ಕ್ರೈಸ್ತರಾಗಿ ಹೋಗಿರುವುದನ್ನು ಗುರುತಿಸಿದ್ದಾರೆ. ಈ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಬೇಕಾಗಿದೆ.

ಈ ಎಲ್ಲ ಸವಾಲು-ಸಂಕಟಗಳನ್ನು ಎದುರಿಸಲು ನಾವು ಮೊದಲು ನಮ್ಮ ಮನೆ-ಮನಸ್ಸುಗಳನ್ನು ಎಲ್ಲರಿಗೂ ತೆರೆಯೋಣ. ಸಮರಸ ಸಮಾಜವನ್ನು ಕಟ್ಟೋಣ. ಶರಣರ ಆಶೋತ್ತರಗಳನ್ನು ಈಡೇರಿಸೋಣ. ಮೊದಲ ಹೆಜ್ಜೆಗಳನ್ನು ನಾವಿಟ್ಟು ಉಳಿದೆಲ್ಲ ಭಾರತದ ಬಂಧುಗಳಿಗೆ ಮಾದರಿ-ಮೇಲ್ಪಂಕ್ತಿ ಆಗೋಣ. ಇದೇ ನಮ್ಮ ಜೀವನ ನಿಷ್ಠೆ ಆಗಲಿ. ಇಂತಹ ಪವಿತ್ರ ಜೀವನ ನಿಷ್ಠೆ ಇಲ್ಲಿ ಭಾಗವಹಿಸುತ್ತಿರುವ, ಭಾಗವಹಿಸದಿರುವ ಎಲ್ಲರಲ್ಲೂ ಸಾಕ್ಷಾತ್ಕಾರಗೊಳ್ಳಬೇಕು. ಬಸವಣ್ಣನವರು ಮತ್ತವರ ಕಾಲಖಂಡದ ಎಲ್ಲ ವಚನಕಾರರ ಆವಾಹನೆ ನಮ್ಮೆಲ್ಲರಲ್ಲಿ ಆಗಬೇಕು.

ಇದು ನನ್ನೊಬ್ಬನ ಆಶಯವಲ್ಲ. ಈ ಅಧಿವೇಶನದಲ್ಲಿ ಪಾಲ್ಗೊಂಡಿರುವ ಎಲ್ಲ ನಿಜಶರಣರ ಆಶಯವಾಗಲಿ.

(ಇದೇ ಏಪ್ರಿಲ್ ೧೯ ರಂದು ಮೈಸೂರು  ಸಮೀಪದ ಸುತ್ತೂರಿನಲ್ಲಿ ನಡೆದ ವೀರಶೈವ ಮಹಾಸಭಾದ ಬೃಹತ್ ಅಧಿವೇಶನದಲ್ಲಿ  ವೀರಶೈವ ಸಮುದಾಯ-ಸಾಮಾಜಿಕ  ಸಾಮರಸ್ಯ ವಿಷಯ ಕುರಿತು ಮಾಡಿದ ಭಾಷಣದ ಆಯ್ದ ಭಾಗವಿದು.)

Mai Cha Jayadev ji

 

2 thoughts on “ವೀರಶೈವ ಸಮುದಾಯ ಹೊರಟಿದ್ದೆಲ್ಲಿಗೆ, ತಲುಪಿದ್ದೆಲ್ಲಿಗೆ? : ಮೈ ಚ ಜಯದೇವ್

  1. The challenge is bringing people of one culture and philosophy together and not create new philosophies/clans or start new sects. Most sects that have emerged in this soil have roots in the sanatana dharma i.e., Hindu. The ‘ills’ that have been removed and hence creating a ‘cleaner’ sect is at best a social reform. For that matter, the values if adopted the Hindu remains ‘clean’. The detected ‘ills’ occurred as a result of failure to follow the values rather than an admitted practice of the Hindu tenets. Seen in this line, each new sect and/or religious leader has reminded the Hindus to follow the value. This should not be seen as a new/different group that fragments the Hindus. The article is timely.

  2. Basavanna started preching against division, untouchability and grouping of inferiors and superiors. But over the time the followers are claiming that they are a seperate sect. This pattern is is seen in most other sects also. They develop a superior and seperate mentality. Only good thing is they do not kill others; like Abrahamic religious sub sects are doing.

Leave a Reply

Your email address will not be published.

This site uses Akismet to reduce spam. Learn how your comment data is processed.