ಕಾರ್ಗಿಲ್ ಹೀರೋಗಳು: ಮಾತೃಭೂಮಿಯನ್ನುಳಿಸಿದ ವೀರಪುತ್ರರು
ಹಿಂದೂಸ್ಥಾನದ ಶೌರ್ಯ-ಸಾಹಸವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಸಾಬೀತುಪಡಿಸಿದ ಕಾರ್ಗಿಲ್ ಕದನದ ಶೌರ್ಯಗಾಥೆಗೆ 22ನೇ ಸಂವತ್ಸರ.
ಪಾಕಿಸ್ತಾನ ಎಷ್ಟೇ ಮೋಸ ಕಪಟಗಳಿಂದ ನಮ್ಮನ್ನು ಗೆಲ್ಲಲು ಪ್ರಯತ್ನಿಸಿದರೂ, ಅದರ ವಿರುದ್ಧ ವೀರೋಚಿತವಾದ ಹೋರಾಟಗೈದು, ಅವರನ್ನು ಪರಾಭವಗೊಳಿಸಿ ಮಾತೃಭೂಮಿಯ ರಕ್ಷಣೆ ಮಾಡುತ್ತಿರುವ ನಮ್ಮ ಭಾರತೀಯ ಸೈನ್ಯದ ವೀರಗಾಥೆ ಹಿಂದೂಸ್ಥಾನದ ಶೌರ್ಯದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ನಮ್ಮ-ನಿಮ್ಮ ನಡುವೆಯೇ ಹುಟ್ಟಿ ಬೆಳೆದ 20ರಿಂದ 30 ವರ್ಷದ ತರುಣರು ಹೇಗೆ ಅಷ್ಟು ಪರಾಕ್ರಮದಿಂದ ಯುದ್ಧ ಮಾಡಿ ವಿಜಯಶಾಲಿಗಳಾದರು, ಹೇಗೆ ಅವರಲ್ಲಿ ಅಷ್ಟೊಂದು ದೇಶಭಕ್ತಿ, ಶೌರ್ಯ, ಬಲಿದಾನದಂತಹ ಶ್ರೇಷ್ಠ ಗುಣಗಳು ಬೆಳೆದವು ಎಂಬುದನ್ನು ಇಂದಿನ ಪೀಳಿಗೆ ತಿಳಿಯಬೇಕು. ನಮ್ಮ ತ್ರಿವರ್ಣ ಧ್ವಜವನ್ನು ಕಾರ್ಗಿಲ್ ಗುಡ್ಡಗಳ ಮೇಲೆ ಹಾರಿಸಲು, ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಲು ಭಾರತೀಯ ಸೈನ್ಯವು ನೀಡಿದ ಮೌಲ್ಯ 527 ವೀರ ಸೈನಿಕರ ಬಲಿದಾನ ಎಂಬುದನ್ನು ನಾವು ಮರೆಯಬಾರದು. ಹುತಾತ್ಮರಾದ ಯೋದರಲ್ಲಿ ಕೆಲವರನ್ನು ನೆನಪಿಸುಕೊಳ್ಳುವ ಪ್ರಯತ್ನ ಇಲ್ಲಿ ಮಾಡಿದ್ದೇನೆ. ಅಲ್ಲದೆ ಯುದ್ಧದಲ್ಲಿ ವೀರಾವೇಶ ಮೆರೆದು ಜೀವಂತವಾಗಿ ದೇಶಕ್ಕೆ ಮರಳಿ ಪರಮ್ ವೀರ್ ಚಕ್ರ ಕ್ಕೆ ಭಾಜನರಾದ ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರ ಬಗ್ಗೆಯೂ ಬರೆದಿದ್ದೇನೆ.
ಕ್ಯಾಪ್ಟನ್ ಸೌರಭ್ ಕಾಲಿಯಾ
ಕಾರ್ಗಿಲ್ ಯುದ್ಧದ ಮೊದಲ ಹುತಾತ್ಮ ಕ್ಯಾಪ್ಟನ್ ಸೌರಭ್ ಕಾಲಿಯಾ. 22 ದಿನಗಳ ಕಾಲ ಕ್ಯಾಪ್ಟನ್ ಸೌರಭ್ ಅವರಿಗೆ ಪಾಕಿಸೇನೆಯು ಭಯಾನಕವಾದ ದೈಹಿಕ-ಮಾನಸಿಕ ಹಿಂಸೆಯನ್ನು ಕೊಟ್ಟು ಕ್ರೌರ್ಯ ಮೆರೆದರೂ, ಮಾತೃಭೂಮಿಯ ರಕ್ಷಣೆಯ ವಿಚಾರದಲ್ಲಿ ಅವರು ರಾಜಿಯಾಗಲಿಲ್ಲ. ಈ ಭವ್ಯಭೂಮಿಯ ರಕ್ಷಣೆಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದರು. ಪಾಕಿ ಸೇನೆ ಅವರ ಶವವನ್ನು ಭಾರತಕ್ಕೆ ಹಸ್ತಾಂತರಿಸಿದಾಗ, ಮರಣೋತ್ತರ ಪರೀಕ್ಷೆಯ ವರದಿ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪಾಕಿಸ್ತಾನದ ಕ್ರೌರ್ಯ ಜಗತ್ತಿನೆದುರು ಅನಾವರಣಗೊಂಡಿತ್ತು. ಜಿನೇವಾ ಯುದ್ಧ ನಿಯಮಗಳ ಉಲ್ಲಂಘನೆ ಮಾಡಿ ಒಬ್ಬ ಯುದ್ಧಕೈದಿಯನ್ನು ಈ ರೀತಿಯಲ್ಲಿ ನಿಕೃಷ್ಟವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ, ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದರೂ ಅವರ ತಂದೆಯ ಆರ್ತನಾದಕ್ಕೆ ನ್ಯಾಯದ ಪರಿಹಾರ ದೊರೆತಿಲ್ಲ. ಕೇವಲ ತಮ್ಮ ಪುತ್ರನ ಹತ್ಯೆಗಾಗಿ ಅಲ್ಲ, ಒಬ್ಬ ಭಾರತೀಯ ಯೋಧನ ಗೌರವಕ್ಕಾಗಿ ತಾವು ಹೋರಾಡುತ್ತಿರುವುದಾಗಿ ತಿಳಿಸಿ ಅವರ ಉನ್ನತ ಆದರ್ಶವನ್ನು ಒಂದು ಮಾದರಿಯನ್ನಾಗಿ ಮಾಡಿದ್ದಾರೆ.
ಕ್ಯಾಪ್ಟನ್ ವಿಕ್ರಮ್ ಬಾತ್ರಾ(ಪರಮ್ ವೀರ್ ಚಕ್ರ)
ಶೇರ್ ಷಾ ಎಂದೇ ಪ್ರಸಿದ್ಧಿಯಾಗಿರುವ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ‘ನಾವು ದೇಶಕ್ಕಾಗಿ ಪ್ರಾಣ ಕೊಡಲು ಅಲ್ಲ, ದೇಶದ ವೈರಿಗಳ ಪ್ರಾಣ ತೆಗೆಯಲು ಬಂದಿರುವುದು’ ಎಂದು ಹೇಳುವುದರ ಮೂಲಕ ತಮ್ಮ ಸೈನ್ಯಕ್ಕೆ ಸದಾ ಸ್ಫೂರ್ತಿಯನ್ನು ನೀಡುತ್ತಿದ್ದರು. ಕಾರ್ಗಿಲ್ ಯುದ್ಧದಲ್ಲಿ ಪಾಯಿಂಟ್ 5140ನ್ನು ಗೆದ್ದು, ಯೆ ದಿಲ್ ಮಾಂಗೆ ಮೋರ್ ಎಂದು ಮುನ್ನುಗ್ಗಿ, ಮತ್ತೊಂದು ಪಾಯಿಂಟ್ 4875ನ್ನು ವಶಪಡಿಸಿಕೊಳ್ಳುತ್ತಾ ವೀರ್ಗತಿಯನ್ನು ಹೊಂದಿದರು. “ಒಂದೋ ನಾನು ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ಹಿಂತಿರುಗುತ್ತೇನೆ ಅಥವಾ ಅದರಿಂದ ಆವೃತವಾಗಿ ಹಿಂತಿರುಗುತ್ತೇನೆ, ಆದರೆ ನಾನು ಖಂಡಿತವಾಗಿ ಹಿಂತಿರುಗುತ್ತೇನೆ” ಎಂಬ ಅವರ ದೇಶಪ್ರೇಮದ ಹೇಳಿಕೆಯು ಅಮರವಾಗಿದೆ. ಕಾರ್ಗಿಲ್ ನ ಸಿಂಹ ಎಂದೇ ಪ್ರಖ್ಯಾತರಾಗಿರುವ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ಯೋಧರ ಶೌರ್ಯ, ನಾಯಕತ್ವ, ಬಲಿದಾನಕ್ಕೆ ಭಾರತೀಯ ಸೇನೆಯು ನೀಡುವ ಅತ್ಯುನ್ನತ ಪ್ರಶಸ್ತಿಯಾದ ‘ಪರಮ್ ವೀರ್ ಚಕ್ರ’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಮೇಜರ್ ರಾಜೇಶ್ ಸಿಂಗ್ ಅಧಿಕಾರಿ( ಮಹಾ ವೀರ ಚಕ್ರ )
ಮೇಜರ್ ರಾಜೇಶ್ ಸಿಂಗ್ ಅಧಿಕಾರಿ ಅವರು 16000 ಅಡಿ ಎತ್ತರದಲ್ಲಿ ಎಮ್-ಐ 17 ಹೆಲಿಕಾಪ್ಟರುಗಳಿಂದ ಶತ್ರುಗಳ ಮೇಲೆ ವಾಯುದಾಳಿ ನಡೆಸಿದರು. ಅದರ ಮುಂದಿನ ದಿನ ಯುದ್ಧಕ್ಕೆ ಹೋಗುವಾಗ ಅವರಿಗೊಂದು ಪತ್ರ ಬಂದಿತು. 10 ತಿಂಗಳ ಹಿಂದೆಯಷ್ಟೆ ಕೈ ಹಿಡಿದ ಪತ್ನಿಯ ಪತ್ರ ಅದು. ಯುದ್ಧಕ್ಕೆ ಹೋಗುವಾಗ ತಾಯಿ ಭಾರತಿಯ ನೆನಪಾಗಬೇಕೇ ಹೊರತು ಪತ್ನಿಯದ್ದಲ್ಲ ಎಂದು ಅದನ್ನು ತಮ್ಮ ಜೇಬಿನಲ್ಲೇ ಇಟ್ಟು ಕೊಂಡು ಮುಂದೆ ಸಾಗಿದರು. ಆದರೆ ಆ ಯುದ್ಧದಲ್ಲಿ ಪರಾಕ್ರಮದಿಂದ ಹೋರಾಡುತ್ತಾ ವೀರ್ಗತಿಯನ್ನು ಹೊಂದಿದರು. ಅವರ ಶವ ಮನೆಗೆ ಬಂದಾಗಲೂ ಅವರ ಪತ್ನಿ ಕಣ್ಣೀರು ಹಾಕಲಿಲ್ಲ. ನನ್ನ ಪತಿ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆಂಬ ಹೆಮ್ಮೆ ಅವರಲ್ಲಿತ್ತು. ಆದರೆ, ತಾವು ಬರೆದಿದ್ದ ಪತ್ರವನ್ನು ತೆರೆಯದೆ ಹಾಗೆಯೇ ಜೇಬಿನಲ್ಲಿ ಇಟ್ಟುಕೊಂಡಿರುವುದನ್ನು ನೋಡಿ ಅವರಿಗೆ ದುಃಖ ತಡೆಯಲಾಗಲಿಲ್ಲ. ಏಕೆಂದರೆ ಆ ಪತ್ರದಲ್ಲಿ ಅವರು ನಿಮ್ಮ ಮಗುವನ್ನೂ ನಾನು ಸೈನ್ಯಕ್ಕೆ ಸೇರಿಸುತ್ತೇನೆ ಎಂದು ಹೆಮ್ಮೆಯಿಂದ ಬರೆದಿದ್ದರು.
ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ (ಪರಮ್ ವೀರ್ ಚಕ್ರ)
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ, ಪರಮ್ ವೀರ್ ಚಕ್ರ ಪ್ರಶಸ್ತಿ ಪಡೆದು ಇಂದಿಗೂ ಜೀವಂತವಾಗಿ ನಮ್ಮ ಮುಂದಿರುವ ಏಕೈಕ ಸೈನಿಕ ‘ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್’. 15 ಕ್ಕೂ ಹೆಚ್ಚು ಗುಂಡುಗಳನ್ನು ತಮ್ಮ ದೇಹದ ಮೇಲೆ ಹೊಕ್ಕಿಸಿಕೊಂಡ ನಂತರವೂ ಬದುಕಿ ಬಂದ ವೀರಯೋಧ ಇವರು. ತಮ್ಮ 7 ಜನರ ತಂಡದೊಂದಿಗೆ ಟೈಗರ್ ಹಿಲ್ ಎಂಬ ಅತಿ ಎತ್ತರದ ಗುಡ್ಡದ ಮೇಲೆ 100ಕ್ಕೂ ಹೆಚ್ಚು ಪಾಕಿ ಸೈನಿಕರೊಂದಿಗೆ ಹೋರಾಡುತ್ತಾ, 35ಕ್ಕೂ ಹೆಚ್ಚು ಪಾಕಿಗಳನ್ನು ಕೊಂದು ಬಿಸಾಡಿದರು. ಹೋರಾಡುತ್ತಾ ಹೋರಾಡುತ್ತಾ ತಮ್ಮ 6 ಜೊತೆಗಾರ ಸೈನಿಕರನ್ನು ಕಳೆದುಕೊಂಡು ಬಿಟ್ಟಿದ್ದರು. ಆಗ ಜಾಣ್ಮೆಯಿಂದ ಯೋಚಿಸಿ ಸಮಯಪ್ರಜ್ಞೆಯಿಂದ ತಾವೂ ಸತ್ತಂತೆ ಮಲಗಿಕೊಂಡರು. ಆದರೆ, ಪಾಕಿ ಸೈನಿಕರು ಸತ್ತ ಸೈನಿಕರ ಮೇಲೂ ಗುಂಡು ಹಾರಿಸಿ ಅವರ ಆಯುಧಗಳನ್ನೆಲ್ಲಾ ತೆಗೆದುಕೊಂಡು ಹೋಗುತ್ತಿದ್ದರು. ಆಗ ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದ ಗ್ರೆನೇಡ್ ನೆನಪಾಗಿ, ಹೊರಟು ಹೋಗುತ್ತಿದ್ದ ಪಾಕಿ ಸೈನಿಕರ ಮೇಲೆ ಅದನ್ನು ಎಸೆದರು. ಭಾರತೀಯ ಸೇನೆ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದೆ ಎಂದು ಹೆದರಿ ಹೇಡಿಗಳಾದ ಪಾಕಿಸ್ತಾನದ ಸೈನಿಕರೆಲ್ಲಾ ಓಡಿಹೋದರು. ಹೀಗೆ ಏಕಾಂಗಿಯಾಗಿ ಕೊನೆಯವರೆಗೂ ಹೋರಾಡಿ ಟೈಗರ್ ಹಿಲ್ ನ ಮೇಲೆ ತಿರಂಗವನ್ನು ಹಾರಿಸಿ ರಾಷ್ಟ್ರದ ಗೌರವವನ್ನು ಎತ್ತಿಹಿಡಿದರು.
ಯಶ್ ವೀರ್ ಸಿಂಗ್ ತೋಮರ್ (ವೀರ್ ಚಕ್ರ)
‘ನಾವು ಹನ್ನೊಂದು ಜನರು ಯುದ್ಧದಲ್ಲಿ ಹೋರಾಡಲು ಹೋಗುತ್ತಿದ್ದೇವೆ, ಹನ್ನೊಂದು ಜನರೂ ಗೆದ್ದೇ ಮರಳಿ ಬರುತ್ತೇವೆ’ ಎಂಬ ಉತ್ಸಾಹದ ನುಡಿಗಳಿಂದ ಸೈನ್ಯವನ್ನು ಹುರಿದುಂಬಿಸಿದ ಯಶ್ ವೀರ್ ಸಿಂಗ್ ತೋಮರ್ ಅವರು ಅಕ್ಷರಶಃ ಶತ್ರುಗಳೆದುರಿಗೆ ಯಮನಾಗಿ ನಿಂತರು. ಗುಡ್ಡದ ನಡುವಿನ ಗುಹೆಗಳಲ್ಲಿ ಅಡಗಿ ಪಾಕೀ ಪಡೆಯಿಂದ ಬರುತ್ತಿದ್ದ ಬೆಂಕಿಯುಂಡೆಗಳ ದಾಳಿಯನ್ನು ಎದುರಿಸಿದರು. ಹೋರಾಡುತ್ತಾ ಹೋರಾಡುತ್ತಾ ತಮ್ಮ ಬಳಿ ಗ್ರೆನೇಡುಗಳು ಖಾಲಿಯಾಗಿರುವುದನ್ನು ಗಮನಿಸಿ, ಸತ್ತ ಸೈನಿಕರ ಬಳಿ ಹೋಗಿ ಅವರ ಗ್ರೆನೇಡುಗಳನ್ನು ತುಂಬಿಕೊಂಡು ದಾಳಿ ಮಾಡುತ್ತಾ, ಪಾಕಿಗಳನ್ನು ಕಂಗಾಲಾಗಿಸಿದರು. ಆದರೆ, 19ನೇ ಗ್ರೆನೇಡನ್ನು ಎಸೆಯುತ್ತಿದ್ದಾಗ ಶತ್ರು ಪಡೆಯ ಗುಂಡುಗಳು ಯಶ್ ವೀರ್ ಅವರ ದೇಹವನ್ನು ಚೀರಿ ಬಿಟ್ಟವು. ಇವರ ಶವ ಮನೆಗೆ ಬಂದಾಗಲೂ ತಂದೆಯ ಕಣ್ಣಲ್ಲಿ ಒಂದು ಹನಿ ನೀರಿಲ್ಲ. ‘ಒಂದೋ ನಮ್ಮ ಪರಂಪರೆ ಯುದ್ಧದಲ್ಲಿ ಗೆಲ್ಲಬೇಕು ಅಥವಾ ವೀರಮರಣ ಹೊಂದಬೇಕು. ನೀನು ಗೆದ್ದೂ, ವೀರಮರಣ ಪಡೆದಿರುವೆ. ನಾನೇಕೆ ಅಳಲಿ’ ಎಂದು ಹೇಳುವುದರ ಮೂಲಕ ತಮ್ಮ ಪುತ್ರನ ಸಾಹಸಗಾಥೆಗೆ ಮುನ್ನುಡಿಯಾದರು. ಅಂದು ಯಶ್ ವೀರ್ ಅವರ ಮಕ್ಕಳಾದ ಉದಯ್ ಮತ್ತು ಪಂಕಜ್ ಇಬ್ಬರೂ ಅಪ್ಪನಂತೆ ನಾವೂ ಸೈನಿಕರಾಗುತ್ತೇವೆ ಎಂದು ಹೇಳಿ, ನೆರೆದಿದ್ದ ಜನರನ್ನೆಲ್ಲ ದುಃಖ ಸಾಗರದಲ್ಲಿ ಮುಳುಗಿಸಿದರು.
ಮೇಜರ್ ವಿವೇಕ್ ಗುಪ್ತಾ
‘ಡೂನ್ ಡೆವಿಲ್’ (ಡೆಹ್ರಾಡೂನಿನ ದೆವ್ವ) ಎಂದೇ ಕರೆಯಲ್ಪಡುತ್ತಿದ್ದ ಮೇಜರ್ ವಿವೇಕ್ ಗುಪ್ತಾ ಅವರು ತಮ್ಮ ಗುಂಪಿನ ಸೈನಿಕರನ್ನು ಒಂದು ನಿಮಿಷವೂ ಸುಮ್ಮನೆ ಕೂರಲು ಬಿಡುತ್ತಿರಲಿಲ್ಲ. ‘ಶಾಂತಿಯ ವೇಳೆ ಬೆವರು ಹೆಚ್ಚು ಹರಿಸಿದರೆ ಯುದ್ಧದಲ್ಲಿ ರಕ್ತ ಕಡಿಮೆ ಹರಿಯುತ್ತದೆ’ ಎಂದು ಹೇಳುತ್ತಿದ್ದರು. ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಗೆಳೆಯರೊಂದಿಗೆ ಆಟವಾಡಲು, ಈಜಲು ಹೋಗುತ್ತಿದ್ದ ಇವರು ಅಲ್ಲಿನ ಪರಿಸರದಿಂದ ಪ್ರಭಾವಿತರಾಗಿ ಸೈನ್ಯಕ್ಕೆ ಸೇರಲು ನಿಶ್ಚಯಿಸಿದರು. ಕಾರ್ಗಿಲ್ ಯುದ್ಧದಲ್ಲಿ ತೊಲೊಲಿಂಗ್ ಗುಡ್ಡದ ಪಾಯಿಂಟ್ 4590ನ್ನು ವಶಪಡಿಸಿ ಕೊಳ್ಳಲು ಹೋರಾಡುತ್ತಿದ್ದಾಗ ಅವರು ಯಾವಾಗಲೂ ನಾಯಕನಂತೆ ಮುಂದೆ ಸಾಗಿ ತನ್ನ ಗುಂಪಿನ ಸೈನಿಕರನ್ನು ರಕ್ಷಿಸುತ್ತಿದ್ದರು. ಪಾಕೀಗಳ ಎರಡೆರಡು ಬಂಕರ್ ಗಳನ್ನು ಧ್ವಂಸ ಮಾಡಿದರು. ಹೀಗೆ ವೇಗವಾಗಿ ಮುನ್ನುಗ್ಗುತ್ತಿರುವಾಗ ಎದುರಾಳಿಗಳಿಂದ ಮಳೆಯಾಗಿ ಸುರಿದ ಗುಂಡುಗಳಿಗೆ ಇವರ ಪ್ರಾಣಪಕ್ಷಿ ಹಾರಿ ಹೋಯಿತು. ಆದರೆ, ತಾವು ಸಾಯುವ ಮುನ್ನ 7 ಪಾಕೀ ಸೈನಿಕರ ಹತ್ಯೆಗೈದು ಭಾರತೀಯ ಸೈನಿಕನ ಶೌರ್ಯ ಏನೆಂಬುದನ್ನು ಸಾಬೀತುಪಡಿಸಿದ್ದರು.
ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ (ಪರಮ್ ವೀರ್ ಚಕ್ರ)
‘ಅಕಸ್ಮಾತ್ ನನ್ನ ರಕ್ತದ ತಾಕತ್ತನ್ನು ತೋರಿಸುವ ಮುನ್ನ ಮೃತ್ಯು ನನ್ನ ಹತ್ತಿರ ಬಂದರೆ, ಆ ಮೃತ್ಯುವನ್ನೇ ಕೊಂದು ನನ್ನ ತಾಕತ್ತನ್ನು ತೋರಿಸುತ್ತೇನೆ’ ಎಂಬ ಮಾತಿನ ಮೂಲಕ ಯಮನಿಗೂ ಚಾಲೆಂಜ್ ಹಾಕಿದ್ದ ವೀರ ಸೇನಾನಿ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ. ಇಂಜಿನಿಯರಿಂಗ್ ನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ಯುವಕ ಸಾಫ್ಟ್ ವೇರ್ ಉದ್ಯಮವಲಯಕ್ಕೆ ಹೋಗಿ ಕೋಟಿ-ಕೋಟಿ ಹಣವನ್ನು ಸಂಪಾದಿಸಬಹುದಿತ್ತು. ಆದರೆ, ಪರಮ್ ವೀರ್ ಚಕ್ರ ಎಂಬ ಅತ್ಯುನ್ನತ ಗೌರವವನ್ನು ಪಡೆಯಲು ಭಾರತೀಯ ಸೇನೆ ಸೇರಿ ದೇಶಸೇವೆ ಮಾಡುವುದೊಂದೇ ನನ್ನ ಗುರಿ ಎಂದು ದಿಟ್ಟ ನಿರ್ಧಾರ ತೆಗೆದುಕೊಂಡರು. ಕಾರ್ಗಿಲ್ ಯುದ್ಧದಲ್ಲಿ ಹೋರಾಡುವಾಗ ಶತ್ರುಸೇನೆಯಿಂದ ತೀವ್ರವಾಗಿ ದಾಳಿಯಾಗುತ್ತಿದ್ದ ಸಂದರ್ಭ ಅದು. ಇನ್ನು ಹೀಗೇ ನಿರೀಕ್ಷಿಸುತ್ತಾ ಇದ್ದರೆ ಪ್ರಯೋಜನವಿಲ್ಲವೆಂದು ಮನೋಜ್ ಅವರು ಸೈನಿಕರನ್ನೆಲ್ಲಾ ಹಿಂದೆಯೇ ಬಿಟ್ಟು ನಿರಂತರ ಗುಂಡಿನ ದಾಳಿ ಮಾಡುತ್ತಾ ಮುನ್ನುಗ್ಗಿದರು. ಎದುರಾಳಿಗಳಿಂದ ಬಂದ ಗುಂಡುಗಳು ಅವರ ತೋಳು ಮತ್ತು ಕಾಲುಗಳನ್ನು ಹೊಕ್ಕಿದವು. ಆದರೂ ಧೈರ್ಯಗೆಡಲಿಲ್ಲ. ಪೇನ್ ಕಿಲ್ಲರ್ ಚುಚ್ಚಿ ಕೊಂಡು ಅದೇ ಉತ್ಸಾಹದಿಂದ ಆಕ್ರಮಣ ಮುಂದುವರೆಸಿದರು. ಗ್ರೆನೇಡುಗಳನ್ನು ಎಸೆದು ದಾಳಿ ಮಾಡುತ್ತಿದ್ದಾಗ ಎದುರಾಳಿ ಸಿಡಿಸಿದ ಗುಂಡು ಮನೋಜ್ ರ ಹಣೆಗೆ ಬಿತ್ತು. ಗ್ರೆನೇಡ್ ಸಿಡಿದಾಗ ಪಾಕೀಗಳು ಭಯಭೀತರಾಗಿ ಓಡಿದರು. ಅದನ್ನು ನೋಡುತ್ತಾ ಮನೋಜ್ ಅವರ ಬಾಯಲ್ಲಿ ಬಂದ ಕೊನೆಯ ಮಾತು ಒಂದೇ ‘ನ ಛೋಡ್ನು'(ಬಿಡಬೇಡಿ ಅವರನ್ನ) ಎಂದು. ಇವರ ಸಾಹಸದಿಂದ ಸೇನೆಯು ಇಡಿಯ ಖಾಲುದಾರ್ ಬೆಟ್ಟವನ್ನೇ ಗೆದ್ದು, ತಿರಂಗವನ್ನು ಹಾರಿಸಿದರು. ‘ಕೆಲವೊಂದು ಗುರಿಗಳು ಎಷ್ಟು ಯೋಗ್ಯವಾಗಿವೆಯೆಂದರೆ ಅವುಗಳಲ್ಲಿ ವಿಫಲವಾಗುವುದೂ ಕೂಡ ಒಂದು ಅದ್ಭುತವೇ’, ಹೀಗೆ ಮನೋಜ್ ಅವರು ತಮ್ಮ ವೈಯಕ್ತಿಕ ದಿನಚರಿಯಲ್ಲಿ ಬರೆದುಕೊಂಡ ಅತ್ಯುನ್ನತ ಆದರ್ಶದ ಸಾಹಿತ್ಯಕ್ಕೆ ತಮ್ಮ ಬದುಕನ್ನು ಸಾಕ್ಷಿಯಾಗಿಸಿದರು.
~ಸಿಂಚನ. ಎಂ. ಕೆ, ಮಂಡ್ಯ