ರಾಜಕಾರಣದೊಳಗಿನ ದಾರ್ಶನಿಕ ವ್ಯಕ್ತಿತ್ವ ಪಂಡಿತ್ ದೀನ್‌ದಯಾಳ್
ರಾಷ್ಟ್ರವೆಂಬ ಚಿಂತನೆಯ ಬೆಳಕಿಂಡಿ ತೋರಿದವರು
(ಕೃಪೆ: ವಿಜಯ ಕರ್ನಾಟಕ)
ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರು ಏಕಾತ್ಮಮಾನವ ದರ್ಶನದ ಮೂಲಕ ಭಾರತವನ್ನು ನೋಡಬೇಕಾದ ಭಾರತೀಯ ದೃಷ್ಟಿಯನ್ನು ತೋರಿಸಿಕೊಟ್ಟವರು.ರಾಷ್ಟ್ರೀಯತೆಯನ್ನು ಕುರಿತಾದ ಅವರ ಚಿಂತನೆಗಳು ಭಾರತೀಯರು ಕಂಡುಕೊಂಡ ರಾಷ್ಟ್ರೀಯತೆಯ ಸ್ವರೂಪ ವೈಶಿಷ್ಟ್ಯವನ್ನು ಪ್ರತಿಪಾದಿಸಿದೆ. ಪಶ್ಚಿಮ ದೇಶಗಳ ಸಿದ್ಧಾಂತಗಳಿಗೆ ಹೋಲಿಸಿದರೆ ಇವೆರಡೂ ಸಂಘರ್ಷರಹಿತವಾದ, ಮನುಕುಲದ ಏಳ್ಗೆಯ ಹಾಗೂ ಲೋಕದ ಸೃಷ್ಟಿಯ ಸಮಸ್ತದೊಂದಿಗೆ ಸಮನ್ವಯವನ್ನು ಸಾಧಿಸುವ ಸಿದ್ದಾಂತವಾಗಿದೆ.
ದೀನ್‌ದಯಾಳ್ ಉಪಾಧ್ಯಾಯರು ಭಾರತ ಕಂಡ ಶ್ರೇಷ್ಟ ದಾರ್ಶನಿಕರಲ್ಲಿ ಒಬ್ಬರು. ಅವರು ರಾಜಕಾರಣದ ನಡುವೆ ಕಾಣಿಸಿದ ಓರ್ವ ಅಪರೂಪದ ತಪಸ್ವಿ. ಹೀಗಾಗಿ ಅವರ ಚಿಂತನೆಗಳು ವರ್ತಮಾನದ ರಾಜಕಾರಣಕ್ಕೆ ಬೇಕಾದ ಅಧಿಕಾರ ಗಳಿಸುವ ಸೂತ್ರಗಳಾಚೆಗೆ, ದೇಶ ಮಾತ್ರವಲ್ಲ ಜಗತ್ತೇ ಸಾಗಬೇಕಾದ ಪಥವನ್ನು ತೋರುವ ತಪಸ್ವಿಯೊಬ್ಬನ ಬೋಧನೆಯಂತೆ ಕಾಣುತ್ತದೆ.ಭಾರತೀಯ ವಿಚಾರ ಸರಣಿಯ ಅತ್ಯುನ್ನತ ಪ್ರತಿಪಾದನೆಯಾಗಿ ಉಪಾಧ್ಯಾಯರ ಚಿಂತನೆಗಳನ್ನು ಗಮನಿಸಬೇಕು.ಅವುಗಳು ಸಾಂದರ್ಭಿಕ ಭಾವೋನ್ಮತ್ತತೆಯ ಮಾತುಗಳಲ್ಲ, ಅವುಗಳ ಹಿಂದೆ ಅಪೂರ್ವವಾದ ಒಳನೋಟವಿದೆ. ಹೀಗಾಗಿ ಹಲವು ದಶಕಗಳ ಬಳಿಕವೂ ಅವರ ಚಿಂತನೆಗೆ ವೈಚಾರಿಕ ವಲಯದೊಳಗೆ ಸ್ವೀಕಾರಾರ್ಹತೆಯಿದೆ. ಆದರೆ ವೈಚಾರಿಕ ರಾಜಕಾರಣದ ಪೂರ್ವಾಗ್ರಹಕ್ಕೆ ಸಿಲುಕಿ ದೀನ್‌ದಯಾಳರ ಚಿಂತನೆಗಳು ಮೂಲೆಗುಂಪಾಯಿತು.
“ಭಾರತೀಯ ಸಂಸ್ಕೃತಿಯ ದೃಷ್ಟಿಕೋನವೇ ಅಖಂಡವಾದದ್ದು. ಸಮಗ್ರವಾದದ್ದು. ಅದು ಜೀವನದ ವಿವಿಧ ಅಸ್ತಿತ್ವಗಳು ಹಾಗೂ ವಿವಿಧ ದರ್ಶನಗಳು, ವಿವಿಧ ರೂಪಗಳಲ್ಲಿ ತೋರಿಕೆಯ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುತ್ತದೆ. ಇದೇ ಕಾಲಕ್ಕೆ ಅವುಗಳ ಮೂಲಾಧಾರವಾದ ಏಕತೆ – ಸಮಗ್ರತೆಗಳನ್ನು ಅನ್ವೇಷಿಸುತ್ತದೆ ಹಾಗೂ ಇಡೀ ದರ್ಶನವನ್ನು ಸಮಗ್ರವಾಗಿ ಪರಿಗಣಿಸುತ್ತದೆ.ಭಾರತೀಯ ಸಂಸ್ಖೃತಿ , ಪ್ರಪಂಚದ ಬಹುರೂಪಿ ಚಟುವಟಿಕೆಗಳಲ್ಲಿ ಪರಸ್ಪರ ಅವಲಂಬನೆ , ಸಹಕಾರ ಮತ್ತು ಸಮ್ಮತಿ – ಸಹಮತಗಳನ್ನು ಗುರುತಿಸಿದೆ. ಘರ್ಷಣೆ ವಿರೋಧಾಭಾಸಗಳು ಮತ್ತು ಅಸಮ್ಮತಿಗಳನ್ನು ಅದು ಲೆಕ್ಕಕ್ಕೆ ಹಿಡಿಯುವುದಿಲ್ಲ.ಭಾರತೀಯ ಸಂಸ್ಖೃತಿಯ ದೃಷ್ಟಿಕೋನ ಆಂಶಿಕವಾದುದಲ್ಲ, ಸರ್ವ ಸಮಗ್ರವಾದುದು, ಎಲ್ಲವನ್ನೂ ಗ್ರಹಿಸುವಂಥಾದ್ದು. ಅದು ಎಲ್ಲರ ಸುಖ ಸಂತೋಷಗಳನ್ನು ಬಯಸುತ್ತದೆ ಹಾಗೂ ಸರ್ವರ ಸುಖಸಂತೋಷಗಳಿಗಾಗಿ ಶ್ರಮಿಸುತ್ತದೆ” ( ಪುಟ : ೩-೪, ಸಂಪುಟ – ೩) ಎನ್ನುವ ಮಾತುಗಳಲ್ಲಿ ಉಪಾಧ್ಯಾಯರು ಭಾರತೀಯ ದರ್ಶನಗಳ ವೈಶಿಷ್ಟ್ಯವನ್ನು ಗುರುತಿಸುತ್ತಾರೆ. ಈ ಮಾತುಗಳೇ ಮುಂದಿನ ಅವರ ಸಮಗ್ರ ಚಿಂತನೆಯ ಸಾರವೂ ಆಗುತ್ತದೆ. ಈ ಮಾತುಗಳನ್ನೇ ಅವರ ಚಿಂತನೆಯ ಮೂಲಬೀಜ ಎನ್ನಬಹುದು. ಸಮಗ್ರವಾದುದನ್ನು ಅಥವಾ ಅಖಂಡವಾದುದನ್ನು ಕುರಿತ ಚಿಂತನೆಯೇ ದೀನ್ ದಯಾಳರ ಚಿಂತನೆಯ ಪ್ರಧಾನ ದಾರೆಯಾಗುತ್ತದೆ.
ಪಶ್ಚಿಮದ ‘ನೇಷನ್’ ಪರಿಕಲ್ಪನೆಯ ಪ್ರಭಾವದಿಂದಲೇ ರಾಷ್ಟ್ರೀಯತೆಯ ವ್ಯಾಖ್ಯಾನಕ್ಕಿಳಿದ ಭಾರತೀಯ ಚಿಂತಕರು ಭಾರತೀಯ ‘ರಾಷ್ಟ್ರ’ ಪರಿಕಲ್ಪನೆ ಪಶ್ಚಿಮಕ್ಕಿಂತ ಭಿನ್ನವಾದುದೆನ್ನುವ ತಿಳುವಳಿಕೆಯನ್ನು ಪಡೆಯುವಲ್ಲಿ ವಿಫಲರಾರು. ರಾಷ್ಟ್ರ ಪರಿಲ್ಪನೆಗೆ ಮಾತ್ರ ಎಂದಲ್ಲ, ಭಾರತೀಯ ಸಮಾಜದ ರಚನೆಯ ಗ್ರಹಿಕೆಯಲ್ಲೂ ಹೀಗೆ ಆಯಿತು. ಈ ದೋಷವನ್ನು ಗುರುತಿಸಿದ ದೀನ್‌ದಯಾಳ್ ಸಮಸ್ಯೆಯ ಮೂಲವನ್ನು ಕುರಿತು ಮಾತನಾಡುತ್ತಾರೆ. “ಬದುಕನ್ನು ಬಿಡಿಬಿಡಿಯಾಗಿ , ಅದರ ಭಾಗ – ವಿಭಾಗಗಳನ್ನು ನೋಡುವುದೇ ಪಶ್ಚಿಮದ ಎಲ್ಲ ಗೊಂದಲಗಳ ಮೂಲ, ಬಿಡಿಬಿಡಿಯಾಗಿ ವಿಭಾಗಿಸಿ ನೋಡಿ ನಂತರ ಅವುಗಳನ್ನೆಲ್ಲಾ ತೇಪೆಹಾಕಿ ಒಟ್ಟುಗೂಡಿಸುವ ಧೋರಣೆ ಪಶ್ಚಿಮದ್ದು. ಇದಕ್ಕೆ ಎದುರಾಗಿ ಬದುಕನ್ನು ಸಮಗ್ರವಾಗಿ ಕಾಣುವ ದೃಷ್ಟಿಕೋನವೇ ಭಾರತೀಯ ಸಂಸ್ಕೃತಿಯ ವಿಶೇಷ ಗುಣಲಕ್ಷಣ. ಅದು ಅಖಂಡತೆಯ ದೃಷ್ಟಿಕೋನ. ಬದುಕಿನ ವೈವಿಧ್ಯತೆಯನ್ನು, ಬಹುತ್ವವನ್ನು ಒಪ್ಪಿಕೊಳ್ಳುವ ಗುಣ ಭಾರತೀಯರದ್ದು. ಅಖಂಡತೆ ಸಮಗ್ರತೆಗಳು ನಮ್ಮ ಸಂಸ್ಕೃತಿಯ ಜೀವಸ್ವರವಾಗಿದೆ. ಏಕತೆ ನಮ್ಮ ಸತತ ಅನ್ವೇಷಣೆ. ವ್ಯಕ್ತಿ ಮತ್ತು ಸಮಾಜದ ನಡುವೆ ಸಂಘರ್ಷವಿದೆ ಎನ್ನುವ ಪಶ್ಚಿಮದ ಊಹೆಯೇ ಎಲ್ಲಾ ಸಮಸ್ಯೆಯ ಮೂಲ” (ಪುಟ : ೩೩-೩೪ , ಸಂಪುಟ : ೩) ಎನ್ನುವುದನ್ನು ಕಾಣಿಸಿಕೊಡುತ್ತಾರೆ.
ರಾಷ್ಟ್ರದ ಪರಿಕಲ್ಪನೆಯನ್ನು ಪಶ್ಚಿಮ ನೋಡಿದ್ದು ಭೌಗೋಳಿಕ ಸ್ವರೂಪದಲ್ಲಿ, ಭೂಪಟದ ಸ್ವರೂಪದಲ್ಲಿ. ಅದಕ್ಕೆ ಯಾವುದೇ ಜೀವಂತಿಕೆ ಇಲ್ಲ. ಭಾರತೀಯ ಹಿನ್ನೆಲೆಯಲ್ಲಿ ಉಪಾಧ್ಯಾಯರು ಗುರುತಿಸಿದ ರಾಷ್ಟ್ರದ ಸ್ವರೂಪ ಅದು ಜೀವಂತಿಕೆಯ ಮಾದರಿಯದ್ದು. ರಾಷ್ಟ್ರದ ಮೂಲ ತತ್ವವನ್ನು ಅಂದರೆ ರಾಷ್ಟ್ರದ ಪ್ರಕೃತಿಯನ್ನು ‘ಚಿತಿ’(ಚೈತನ್ಯ) ಎಂದು ಗುರುತಿಸುತ್ತಾರೆ. ಅವರು ನಿರೂಪಿಸುವಂತೆ “ ರಾಷ್ಟ್ರ ಒಂದು ಜೀವಂತ ಶಕ್ತಿಯಾಗಿದೆ. ಈ ಶಕ್ತಿ ಹಲವಾರು ಶತಮಾನಗಳ ಹಿಂದಿನ ಕಾಲಖಂಡದಲ್ಲಿ ವಿಕಸನಗೊಳ್ಳುತ್ತಾ ಬಂದಿರುವಂತದ್ದು. ಯಾವುದೋ ನಿಶ್ಚಿತ ಭೂ ಭಾಗದಲ್ಲಿ ವಾಸಿಸುತ್ತಿರುವ ಮಾನವ ಸಮುದಾಯ ಎಂದು ಆ ಭೂಮಿಯೊಡನೆ ತಾದಾತ್ಯ್ಮವನ್ನು ಅನುಭವಿಸುತ್ತದೆಯೋ ಆಗ ಜೀವನದ ವಿಶಿಷ್ಟ ಗುಣಗಳನ್ನು ಆಚರಿಸುತ್ತಾ ಸಮಾನ ಪರಂಪರೆ ಹಾಗೂ ಮಹತ್ವಾಕಾಂಕ್ಷೆಗಳಿಂದ ಕೂಡಿರುತ್ತದೆ. ಸುಖ ದುಃಖಗಳ ಸಮಾನ ನೆನಪುಗಳು ಹಾಗೂ ಶತ್ರು ಮಿತ್ರರ ಸಮಾನ ಅನುಭವಗಳನ್ನು ಹೊಂದುತ್ತಾ ಪರಸ್ಪರ ಹಿತ ಸಂಬಂಧಗಳಲ್ಲಿ ಒಂದಾಗುತ್ತದೆ. ಈ ಭಾವನಾತ್ಮಕ ಸ್ವರೂಪವೇ ರಾಷ್ಟ್ರ ಎಂದು ಗುರುತಿಸಲ್ಪಡುವುದು. ಎಲ್ಲಿಯ ತನಕ ಈ ರಾಷ್ಟ್ರೀಯತೆಯ ಅಸ್ಮಿತೆಯಿರುವುದೋ, ಅಲ್ಲಿಯ ತನಕ ರಾಷ್ಟ್ರ ಜೀವಂತವಾಗಿರುವುದು.ಇದು ಕ್ಷೀಣಿಸಿದಲ್ಲಿ ರಾಷ್ಟ್ರ ನಶಿಸುತ್ತದೆ” ( ಪುಟ ೧೯೦-೧೯೧, ಸಂಪುಟ -೨) ಎನ್ನುತ್ತಾರೆ.
ಇಂತಹ ರಾಷ್ಟ್ರದ ಸ್ವರೂಪ ಬಾಹ್ಯ ಸಂಗತಿಗಳಿಂದ ಬದಲಾಗುವುದಿಲ್ಲ.ಆಳುವವರು ಬದಲಾಗುವುದರಿಂದಲೂ ರಾಷ್ಟ್ರ ಬದಲಾಗುವುದಿಲ್ಲ.“ಪ್ರಜಾಪ್ರಭುತ್ವವು ರಾಜ್ಯವನ್ನು ಬದಲಾಯಿಸಬಲ್ಲುದು ಆದರೆ ರಾಷ್ಟ್ರವನ್ನು ಬದಲಾಯಿಸಲಾಗುವುದಿಲ್ಲ. ರಾಷ್ಟ್ರದ ಅಸ್ತಿತ್ವವು ಬಹುಮತ ಹಾಗೂ ಅಲ್ಪಮತವನ್ನು ಅವಲಂಭಿಸಿರುವುದಿಲ್ಲ.ರಾಷ್ಟ್ರಕ್ಕೆ ಒಂದು ಸ್ವಯಂಭೂ ಶಕ್ತಿ ಇದೆ” ( ಪುಟ ೧೯೨, ಸಂಪುಟ -೨) ಎನ್ನುವ ಮಾತು ಅರ್ಥಪೂರ್ಣವಾದುದು. ರಾಷ್ಟ್ರ ಮತ್ತು ದೇಶ ಎಂಬ ಪ್ರಯೋಗಗಳ ನಡುವಿನ ವ್ಯತ್ಯಾಸವನ್ನು ದೀನ್‌ದಯಾಳ್ ಅವರು ತನ್ನ ನಿರೂಪಣೆಯಲ್ಲಿ ಸ್ಪಷ್ಟ ಪಡಿಸುತ್ತಾರೆ. ದೇಶ ಮತ್ತು ರಾಷ್ಟ್ರದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಶರೀರ ಮತ್ತು ಆತ್ಮ ಎಂಬ ಪರಿಭಾಷೆಯಲ್ಲಿ ವಿವರಿಸುತ್ತಾ, ದೇಶ ಗೋಚರಿಸುವ ಶಕ್ತಿ, ರಾಷ್ಟ್ರ ಆಗೋಚರ ಶಕ್ತಿ ಎನ್ನುತ್ತಾರೆ . ಅಂದರೆ ದೇಶ ಕಾಣಿಸಿಕೊಳ್ಳುತ್ತದೆ. ರಾಷ್ಟ್ರ ಕಾಣಿಸಿಕೊಳ್ಳುವುದಿಲ್ಲ.ಹೀಗೆ ಅಗೋಚರ ಶಕ್ತಿ ಆಗಬಹುದಾದರ ಕಾರಣದಿಂದ ರಾಷ್ಟ್ರವು ಒಂದು ಅಧ್ಯಾತ್ಮಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಹೀಗಾಗಿ ಕೇವಲ ಒಂದು ಭೂಭಾಗವಾಗಿ ಮಾತ್ರ ಭಾರತ ರಾಷ್ಟ್ರವಲ್ಲ. ಭಾರತವೆನ್ನುವುದು ಪೃಥ್ವಿಯ ಒಂದು ಭೂಭಾಗದ ಹೆಸರಾದರೂ ಕೇವಲ ಈ ಭೂಭಾಗವನ್ನಷ್ಟೇ ನಾವು ರಾಷ್ಟ್ರ ಎಂದು ಭಾವಿಸಿಲ್ಲ. ನೆಲದ ಒಂದು ಅಂಶ ಮಾತ್ರ ರಾಷ್ಟ್ರವಾಗಲಾರದು. ಯಾಕೆಂದರೆ ಪ್ರಪಂಚದಲ್ಲಿ ಒಂದು ರಾಷ್ಟ್ರ ಎಂದು ಕರೆಯಲಾಗದಂತಹ ಎಷ್ಟೋ ಭೂಖಂಡಗಳಿವೆ. ಹಾಗಾಗಿ ಒಂದು ಭೂಮಿ ಇದೆ ಎನ್ನುವ ಒಂದೇ ಕಾರಣದಿಂದ ಅದು ರಾಷ್ಟ್ರ ಎಂದು ಕರೆಯಲ್ಪಡುವುದಿಲ್ಲ. ರಾಷ್ಟ್ರದ ಹಿರಿಮೆ ಭೂಖಂಡಕ್ಕಿಂತ ಹಿರಿದಾದುದು ಮತ್ತು ವ್ಯಾಪಕವಾದುದು. ಈ ಹಿರಿಮೆಯನ್ನು ಅರ್ಥಮಾಡಿಕೊಂಡಾಗ ಮಾತ್ರ ಭಾರತ ಎನ್ನುವುದು ಅರ್ಥವಾಗಲು ಸಾಧ್ಯವಿದೆ. “ನಿಶ್ಚಿತವಾದ ಒಂದು ಭೂ ಭಾಗ ಯಾವುದೇ ರಾಷ್ಟ್ರದ ಅನಿವಾರ್ಯತೆ ಹಾಗೂ ಪ್ರಥಮ ಅವಶ್ಯಕತೆಯಾಗಿದೆಯಾದರೂ , ಕೇವಲ ಭೂಭಾಗವೇ ರಾಷ್ಟ್ರವಾಗಲಾರದು”( ಪುಟ -೧೯೯, ಸಂಪುಟ-೨) ಎನ್ನುತ್ತಾರೆ. ರಾಷ್ಟ್ರದ ಸ್ವರೂಪ ಜನರಲ್ಲಿನ ರಾಷ್ಟ್ರಾಭಿಮಾನದಲ್ಲಿ ಅಡಗಿರುತ್ತದೆ. ಯಾವುದಾದರೂ ಒಂದು ನಿಶ್ಚಿತ ಭೂಭಾಗದಲ್ಲಿ ವಾಸಿಸಿದ ಜನರೆಲ್ಲರೂ ಒಂದು ರಾಷ್ಟ್ರವಾಗುವುದಿಲ್ಲ. ವ್ಯಕ್ತಿಗಳ ನಡುವೆ ಕೃತಕವಾಗಿ ಉಂಟಾಗುವ ಗುಂಪನ್ನು ರಾಷ್ಟ್ರ ಎಂದು ಕರೆಯಲಾಗುವುದಿಲ್ಲ. ನಿಶ್ಚಿತವಾದ ಉದ್ದೇಶಕ್ಕಾಗಿ ಮಾತ್ರ ಅಂತಹ ಸಮೂಹಗಳು ಸೀಮಿತವಿರುತ್ತದೆ. ಜನರನ್ನು ಕೃತಕವಾಗಿ ಸೇರಿಸಿ ಒಂದು ರಾಷ್ಟ್ರವನ್ನು ಮಾಡಲಾಗುವುದಿಲ್ಲ ಎನ್ನುತ್ತಾರೆ. ಧರ್ಮ ಎನ್ನುವುದು ಇಲ್ಲಿ ರಾಷ್ಟ್ರದ ಆತ್ಮದ ಉಸಿರು. ಒಂದು ವೇಳೆ ಧರ್ಮ ನಾಶವಾದರೆ ರಾಷ್ಟ್ರವೂ ನಾಶವಾಗುತ್ತದೆ ಎನ್ನುವುದು ಅವರ ನಿಲುವಾಗಿತ್ತು.
ಆದರೆ ಸ್ವಾತಂತ್ರ್ಯಾನಂತರ ನಾವು ಒಂದು ರಾಷ್ಟ್ರ ಎನ್ನುವ ಭಾವನೆ ಬೆಳೆಯುವ ಬದಲು ನಾವೊಂದು ರಾಷ್ಟ್ರವಾಗಿ ರೂಪುಗೊಳ್ಳಬೇಕಾಗಿದೆ, ರೂಪುಗೊಳ್ಳುತ್ತಿದ್ದೇವೆ ಎಂಬ ಹುಸಿ ಕಲ್ಪನೆಯನ್ನು ಬೆಳೆಸಲಾಯಿತು. ಮೊದಲು ಬ್ರಿಟಿಷರು ಬಂದ ಕಾರಣದಿಂದ ಭಾರತ ಒಂದು ರಾಷ್ಟ್ರವಾಯಿತು ಎನ್ನುತ್ತಿದ್ದ ಚಿಂತಕವಲಯ , ಬಳಿಕ ಇಲ್ಲಿನ ವೈವಿಧ್ಯತೆಗಳನ್ನು ಕಾರಣವಾಗಿಟ್ಟುಕೊಂಡು ಭಾರತ ಒಂದು ರಾಷ್ಟçವೇ ಅಲ್ಲ ಎನ್ನುವ ಅರಾಷ್ಟ್ರೀಯ ಚಿಂತನೆಗಳನ್ನು ಬಿತ್ತಲಾರಂಭಿಸಿದರು. ಭಾರತವನ್ನು ಒಂದು ಕೃತಕ ಒಕ್ಕೂಟ ಎನ್ನುತ್ತಾ, ಭಾವನೆಗಳನ್ನು ಒಡೆಯುವ ಪ್ರಯತ್ಮ ಮಾಡುತ್ತಿದ್ದವರಿಗೆ ಉಪಾಧ್ಯಾಯರು ಸ್ಪಷ್ಟವಾದ ಉತ್ತರವನ್ನು ನೀಡುತ್ತಾರೆ. ಭಾಷೆ,ಪೂಜಾ ಪದ್ಧತಿ, ವೇಷ ಭೂಷಣಗಳ ವೈವಿಧ್ಯತೆ ರಾಷ್ಟ್ರ ಜೀವನಕ್ಕೆ ತೊಡಕಲ್ಲ ಎನ್ನುತ್ತಾರೆ.
ಸಂಸ್ಕೃತಿಯನ್ನು ರಾಷ್ಟ್ರದ ಆತ್ಮ ಎಂದು ಹೇಳುತ್ತಾ “ ಮಾತೃಭೂಮಿ, ಪುತ್ರರೂಪಿ ಸಮಾಜ ಹಾಗೂ ರಾಷ್ಟ್ರದ ಆತ್ಮವಾದ ಸಂಸ್ಕೃತಿ – ಈ ಮೂರರ ಸಂಯೋಗವೇ ನೈಜ ರಾಷ್ಟ್ರೀಯತೆ ” (ಪುಟ-೨೩೨, ಸಂಪುಟ -೫) ಎನ್ನುತ್ತಾರೆ. ಭಾರತದ ಮತ್ತೊಂದು ಹಿರಿಮೆ ತಾನು ರೂಢಿಸಿಕೊಂಡ ಧರ್ಮರಾಜ್ಯ ಎನ್ನುವ ಪರಿಕಲ್ಪನೆಯಲ್ಲಿದೆ. ಪ್ರತಿಯೊಬ್ಬ ಪ್ರಜೆಯೂ ತನ್ನ ಆರಾಧನೆಯ ಸ್ವಾತಂತ್ರ್ಯವನ್ನು ಅನುಸರಿಸುತ್ತಾ, ಶಾಂತಿಯಿಂದ ಸಹಭಾಳ್ವೆ ಮಾಡಲು ಸಾಧ್ಯವಾಗಿರುವುದು ಧರ್ಮರಾಜ್ಯದಲ್ಲಿ ಮಾತ್ರ. ಹೀಗಾಗಿ ರಾಷ್ಟ್ರವೊಂದು ಧರ್ಮರಾಜ್ಯ ಆಗಿರಲು ಸಾಧ್ಯವೇ ಹೊರತು ಧರ್ಮರಹಿತವೂ, ಧರ್ಮನಿರಪೇಕ್ಷಿತವೂ ಆಗಿರಲು ಸಾಧ್ಯವಿಲ್ಲ. ಧರ್ಮರಹಿತವಾಗುವುದೆಂದರೆ ಅರಾಜಕವಾಗುವುದು ಎನ್ನುವ ಮೂಲಕ ಸೆಕ್ಯುಲರ್ ಕಲ್ಪನೆಯ ಹಿಂದಿನ ದೋಷವನ್ನು ತೋರಿಸಿಕೊಡುತ್ತಾರೆ. ಭಾರತೀಯರ ರಾಷ್ಟ್ರಜೀವನ ಹಿಂದೂ ಜೀವನಾದರ್ಶಗಳಿಗೆ ತಕ್ಕಂತೆ ರೂಪಿತವಾದುದು.ಅದು ಕೀಳಲ್ಲ. ವೈಶಿಷ್ಟ್ಯಪೂರ್ಣವಾದುದು. “ ಒಂದೊಂದು ರಾಷ್ಟ್ರಕ್ಕೂ ಒಂದೊಂದು ಆತ್ಮ ‘ಚಿತಿ’ ಇರುತ್ತದೆ. ಚಿತಿಯೇ ರಾಷ್ಟ್ರತ್ವದ ಲಕ್ಷಣ. ಚಿತಿಯು ಜನಸಮೂಹದಲ್ಲಿ ವ್ಯಾಪಿಸಿರುವುದರಿಂದಲೇ ಅದು ಸಂಸ್ಕೃತಿ, ಸಾಹಿತ್ಯ ಮತ್ತು ಧರ್ಮದ ಮೂಲಕ ವ್ಯಕ್ತಗೊಳ್ಳುತ್ತದೆ. ಚಿತಿಯೇ – ಆ ದೇಶದ ಆತ್ಮವೇ – ಸಮಾನ ಪರಂಪರೆ, ಇತಿಹಾಸ,ಸಭ್ಯತೆಗಳನ್ನು ರೂಪಿಸುತ್ತದೆ. ಯಾವುದೇ ರಾಷ್ಟ್ರದ ಐಕ್ಯಕ್ಕೆ ಅದರ ಸಂಸ್ಕೃತಿ ಸಭ್ಯತೆ, ಧರ್ಮ, ಭಾಷೆ ಇವುಗಳ ಒಕ್ಕೂಟವೇ ಮೂಲ ಕಾರಣವಲ್ಲ. ಒಂದೇ ಚಿತಿಯ ವ್ಯಕ್ತ ಪರಿಣಾಮ ಅದು. ಆದುದರಿಂದಲೇ ಭಿನ್ನ ಭಿನ್ನ ಚಿತಿಯ ಜನರ ನಡುವೆ ಮೇಲು ಕೀಳಿನ ಪ್ರಯತ್ನಗಳಿಂದ ಭಾಷೆ ,ಧರ್ಮ,ಸಭ್ಯತೆ ಮುಂತಾದವುಗಳಲ್ಲಿ ಒಕ್ಕೂಟ ನಿರ್ಮಿಸಿದರೂ ರಾಷ್ಟ್ರೀಯ ಏಕತೆ ನಿರ್ಮಾಣವಾಗಲಾರದು”(ಪುಟ -೨೫೪, ಸಂಪಟ -೫) ಎಂದು ರಾಷ್ಟ್ರದ ಸ್ವರೂಪವನ್ನು ವಿವರಿಸುತ್ತಾರೆ.
ರಾಷ್ಟ್ರದ ಏಳಿಗೆ ಮತ್ತು ಅದಃಪತನಗಳೆರಡೂ ಚಿತಿಯ ಜತೆಗೆ ಸಂಬಂಧ ಹೊಂದಿದ್ದು ಯಾವಾಗ ಚಿತಿಯ ಪ್ರಭೆ ಕಾಣುತ್ತದೋ ಆಗ ಏಳಿಗೆಯನ್ನೂ, ಚಿತಿಯ ಅಳಿವಿನಿಂದ ರಾಷ್ಟ್ರದ ಅದಃಪತನ ಎಂದು ಹೇಳುತ್ತಾರೆ. ಭಾರತೀಯ ರಾಷ್ಟ್ರೀಯತೆಯ ಸ್ವರೂಪಕ್ಕೂ ಪಶ್ಚಿಮ ದೇಶಗಳ ರಾಷ್ಟ್ರೀಯತೆಯ ಸ್ವರೂಪಕ್ಕೂ ಮೂಲದಲ್ಲೇ ವ್ಯತ್ಯಾಸವಿದೆ. ಭಾರತೀಯರ ಪಾಲಿಗೆ ರಾಷ್ಟ್ರದ ಆಧಾರಗಳೆಂದರೆ, ರಾಜನೈತಿಕ, ಸಾಂಸ್ಕೃತಿಕ, ಪ್ರಾದೇಶಿಕ ಸ್ವರೂಪವಿದ್ದು, ಪಾಶ್ಚಿಮಾತ್ಯರ ರಾಷ್ಟ್ರೀಯತೆ ರಾಜನೈತಿಕ ಆಧಾರದ್ದು, ಅದರಲ್ಲಿ ರಾಜಕೀಯಕ್ಕೆ ಪ್ರಮುಖ ಸ್ಥಾನ; ಭೂಮಿ , ಸಂಸ್ಕೃತಿಗಳು ಕೇವಲ ಪೋಷಕ. ನಮ್ಮ ರಾಷ್ಟ್ರೀಯತೆಯಾದರೋ ಸಂಸ್ಕೃತಿಯನ್ನು ಆಧರಿಸಿದ್ದು, ಇಲ್ಲಿ ಸಂಸ್ಕೃತಿಯೇ ಪ್ರಧಾನ. ಭೂಮಿ ಮತ್ತು ರಾಜಕೀಯ ಕೇವಲ ಪೋಷಕ. ಒಂದು ಪ್ರದೇಶದಲ್ಲಿ ವಾಸಿಸುವ ಜನರೆಲ್ಲರೂ ಅದೊಂದೇ ಕಾರಣದಿಂದ ರಾಷ್ಟ್ರೀಯರು ಎಂದು ಭಾವಿಸುವುದೇ ಪ್ರಾದೇಶಿಕ ರಾಷ್ಟ್ರೀಯತೆ . ಅದರಲ್ಲಿ ಭೂಮಿಗೆ ಪ್ರಾಧಾನ್ಯ” (ಪುಟ- ೨೬೪, ಸಂಪುಟ – ೫) ಎನ್ನುವ ಮಾತುಗಳಲ್ಲಿ ಭಾರತೀಯ ರಾಷ್ಟ್ರೀಯತೆಯ ಸ್ವರೂಪದಲ್ಲಿ ಸಂಸ್ಕೃತಿಗಿರುವ ಪ್ರಾಧಾನ್ಯತೆ ಮತ್ತು ಮಹತ್ವವನ್ನು ಹೇಳುತ್ತಾರೆ. ಒಂದು ವೇಳೆ ಪಶ್ಚಿಮದಂತೆ ರಾಜಕೀಯವೇ ಪ್ರಧಾನವಾಗಿ ಉಳಿದಿದ್ದರೆ ನಮ್ಮ ರಾಷ್ಟ್ರೀಯತೆಯು ಪರಕೀಯ ಆಳ್ವಿಕೆಯ ಸಂದರ್ಭದಲ್ಲಿ ಉಳಿಯುತ್ತಿರಲಿಲ್ಲ. ಪರಕೀಯ ಆಳ್ವಿಕೆಯ ಬಳಿಕವೂ ನಮ್ಮ ರಾಷ್ಟ್ರೀಯತೆ ಉಳಿದಿರುವುದಕ್ಕೆ ಮುಖ್ಯ ಕಾರಣ ನಮ್ಮದು ಸಂಸ್ಕೃತಿ ಆಧಾರಿತವಾದ ರಾಷ್ಟ್ರೀಯತೆ ಆಗಿರುವುದು. “ ನಮ್ಮ ದೇಶವು ಸ್ವತಂತ್ರವಾಗಿದ್ದು ಸುಖ ಸಮೃದ್ಧಿಗಳು ತುಂಬಿ ತುಳುಕಾಡುತ್ತಿದ್ಧಾಗ ಮಾತ್ರವಲ್ಲ ದೇಶವು ಪರಕೀಯರ ವಶವಾಗಿ ದುಃಖ ದಾರಿದ್ರ್ಯಗಳು ಮುತ್ತಿ ಕೊಂಡಾಗಲೂ ನಮ್ಮ ರಾಷ್ಟ್ರೀಯತೆ ಅಳಿಯಲಿಲ್ಲ.ನಮ್ಮ ಜೀವನಕ್ಕೆ ಸಂಸ್ಕೃತಿಯ ಆಧಾರವಿದ್ದುದೆ ಇದಕ್ಕೆ ಕಾರಣ “ (ಪುಟ ೨೬೪, ಸಂಪುಟ – ೫) ಎನ್ನುತ್ತಾರೆ.
ಪಶ್ಚಿಮದ ರಾಷ್ಟ್ರ ಪರಿಕಲ್ಪನೆಯ ಜತೆಗೆ ಕಾಣಿಸಿಕೊಳ್ಳುವ ಇನ್ನೊಂದು ಮುಖ್ಯ ಸಂಗತಿ ಎಂದರೆ ರಾಷ್ಟ್ರವು ವಿಸ್ತರಣಾವಾದಿಯಾಗಿರುವುದು. ಈ ಕಾರಣದಿಂದಲೇ ಜಗತ್ತಿನ ಬೇರೆ ಬೇರೆ ಭೂಭಾಗಗಳನ್ನು ತಮ್ಮ ವಸಾಹತುಗಳನ್ನಾಗಿಸಿಕೊಂಡ, ಅದಕ್ಕಾಗಿ ಸಂಘರ್ಷ ನಡೆಸಿದ ಇತಿಹಾಸವನ್ನು ನಾವು ಗಮನಿಸಬಹುದು. ಈ ವಿಸ್ತರಣಾವಾದವೇ ಜಗತ್ತಿನ ಸಂಘರ್ಷದ ಕೇಂದ್ರವಾಗಿತ್ತು. ಕೇವಲ ಸಂಪತ್ತನ್ನು ದೋಚುವುದಷ್ಟೇ ಇದರ ಉದ್ದೇಶವಾಗಿತ್ತು ಎನ್ನಲಾಗದು. ಭೂಮಿ ಮತ್ತು ರಾಜಕೀಯ ಆಧಾರಿತವಾದ ಈ ರಾಷ್ಟ್ರಗಳ ಈ ಮಾನಸಿಕತೆಯೇ ಯುದ್ಧ ಸಂಘರ್ಷಗಳಿಗೆ ಕಾರಣವಾಯಿತು. ಆದರೆ ಇದೇ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯತೆಯು ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿ ನಿಂತಿತು. “ಭಾರತವು ರಾಷ್ಟ್ರೀಯತೆಯನ್ನು ಸಂಪೂರ್ಣ ಜಗತ್ತಿನ ಹಾಗೂ ಜೀವನದ ವಿಶ್ಲೇಷಣೆಯ ಆಧಾರದ ಮೆಲೆ ಭಾವನಾತ್ಮಕ ರೀತಿಯಲ್ಲಿ ಕಂಡಿದೆ. ನಮ್ಮ ರಾಷ್ಟ್ರೀಯತೆಯು ಇನ್ನೊಬ್ಬರೊಂದಿಗೆ ಸಂಘರ್ಷ ಹಾಗೂ ಸ್ಪರ್ಧೆಯ ಆಧಾರದ ಮೇಲೆ ಬದುಕಿಲ್ಲ. ರಾಷ್ಟ್ರದ ಜೀವನ ಧ್ಯೇಯವು ಇನ್ನೊಬ್ಬರನ್ನು ನಾಶಗೊಳಿಸುವುದಲ್ಲ, ಸೃಷ್ಟಿಯ ಪರಿಪಾಲನೆಯಲ್ಲಿ ಸಹಕರಿಸುವುದು. ಈ ಕಾರ್ಯ ಪೂರ್ತಿಗಾಗಿ ತನ್ನ ಸಂಪೂರ್ಣ ಶಕ್ತಿ ಸುರಿಸುವುದೇ ಆ ರಾಷ್ಟ್ರ ವಿಕಾಸದ ಏಕಮೆವ ಸವೋತ್ತಮ ಹಾದಿ” ( ಪುಟ ೩೦೨-೩೦೪, ಸಂಪುಟ – ೫) ಎನ್ನುವ ಉಪಾಧ್ಯಾಯರು ಭಾರತೀಯ ರಾಷ್ಟ್ರೀಯತೆಯು ಹೇಗೆ ವಿಶ್ವದ ಕಲ್ಯಾಣಕ್ಕೆ ಕಾರಣವೂ, ಪೂರಕವೂ ಆಗಿದೆ ಎನ್ನುವುದನ್ನು ತೋರಿಸಿಕೊಡುತ್ತಾರೆ.