ಉತ್ತರ ಕನ್ನಡ ಜಿಲ್ಲೆಯ ಬಿಜೆಪಿಯ ಹಿರಿಯ ಧುರೀಣರು, ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ ಅಕ್ಟೊಬರ್ ೧೮ರಂದು ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಡಾ. ಕರ್ಕಿ ಅವರನ್ನು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು.
ಡಾ. ಕರ್ಕಿಯವರು 1968 ರಿಂದ ಜನಸಂಘದ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. 1983ರಲ್ಲಿ ಮತ್ತು 1994ರಲ್ಲಿ ಕುಮಟಾ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಡಾ.ಎಂ.ಪಿ.ಕರ್ಕಿ ನಿಧನಕ್ಕೆ ಆರೆಸ್ಸೆಸ್ ತೀವ್ರ ಸಂತಾಪ
ನಮ್ಮನ್ನು ಅಗಲಿರುವ ದಿವಂಗತ ಡಾ.ಎಂ.ಪಿ.ಕರ್ಕಿ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವನ್ನು ಕಟ್ಟಿ ಬೆಳಸಿದ ಧೀಮಂತರು. ಸಮಾಜೋನ್ಮುಖಿ ವೈದ್ಯರಾಗಿದ್ದ ಅವರು ನೂರಾರು ತರುಣರಿಗೆ ರಾಷ್ಟ್ರಭಕ್ತಿಯ,ಸೇವೆಯ ಪ್ರೇರಣೆ ನೀಡಿದವರು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿ ೧೮ ತಿಂಗಳು ಮೀಸಾ ಬಂಧಿಯಾಗಿದ್ದವರು. ಜನಸಂಘ ಮತ್ತು ಭಾರತೀಯ ಜನತಾ ಪಕ್ಷಗಳ ಬೆಳವಣಿಗೆಗೆ ತಮ್ಮ ಯೋಗದಾನ ನೀಡಿದವರು. ಕುಮಟ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ ಜನಾನುರಾಗಿ ಶಾಸಕರು. ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತದೆ, ಎಂದು ಕ್ಷೇತ್ರೀಯ ಸಂಘಚಾಲಕರಾದ ಶ್ರೀ ನಾಗರಾಜ್.ವಿ. ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.