ಬಂಗಾಳೀ ಭಾಷೆಯನ್ನೇ ಮಾತನಾಡುತ್ತಿದ್ದ ಪೂರ್ವಪಾಕಿಸ್ತಾನಿಯರನ್ನು ಭಾರತದ ವಿಭಜನೆಯಾದಾಗಿನಿಂದಲೂ ತರಹೇವಾರಿಯಾಗಿ ಪಶ್ಚಿಮ ಪಾಕಿಸ್ತಾನದ ಜನ ಗೋಳು ಹೊಯ್ದುಕೊಳ್ಳುತ್ತಿದ್ದರು. ಕರಿಯರೆನ್ನುತ್ತಿದ್ದರು. ಪೆದ್ದರೆನ್ನುತ್ತಿದ್ದರು. ಪೂರ್ವ ಪಾಕಿಸ್ತಾನದಲ್ಲಿ ಈ ಅವಮಾನದ ಬಿಸಿಯು ತನ್ನ ಪರಾಕಾಷ್ಟೆಯನ್ನು ಮುಟ್ಠಿದ್ದು 1971ರಲ್ಲಿ.
ಆಗ ಅಲ್ಲಿ ಎಲೆಕ್ಷನ್ ಮುಗಿದಿತ್ತು. ಶೇಕ್ ಮುಜೀಬುಲ್ ರೆಹಮಾನ್ ಅವರು ಪ್ರಧಾನಿಯಾಗಿ ಆಯ್ಕೆಗೊಂಡಿದ್ದರು. ಅವರು ಪಶ್ಚಿಮ ಪಾಕಿಸ್ತಾನದ ದುಂಡಾವೃತ್ತಿಯನ್ನು ತಮ್ಮ 17.3.1971ರ ಭಾಷಣದಲ್ಲಿ ಬಹಿರಂಗವಾಗಿಯೇ ಖಂಡಿಸುತ್ತಾ.ತಮಗೊಂದು ಪ್ರತ್ಯೇಕ ದೇಶರಚನೆಯಾಗಬೇಕೆಂದೂ, ಅದಕ್ಕೆ ಬಾಂಗ್ಲಾ ಎಂದು ಹೆಸರಿಡಬೇಕೆಂದೂ ಕರೆನೀಡಿದರು. ಇದರಿಂದ ರೊಚ್ಚಿಗೆದ್ದ ಪಶ್ಚಿಮ ಪಾಕಿಸ್ತಾನವು 25.3.1970ರಂದು ಶೇಖ್ ಮುಜೀಬುರ್ ರೆಹಮಾನರನ್ನು ಬಂಧಿಸಿ, ಪೂರ್ವಪಾಕಿಸ್ತಾನದ ಜನತೆಯ ಮೇಲೆ ಒಮ್ಮೆಗೇ ಮುಗಿಬಿದ್ದಿತು. 30 ಲಕ್ಷ ಬಾಂಗ್ಲೀಯರನ್ನು ಕೊಂದು ಬಿಸಾಡಿತು, 4ಲಕ್ಷ ಮಹಿಳೆಯರ ಅತ್ಯಾಚಾರ ಮಾಡಿದರು. ಪೂರ್ವಪಾಕ್ ನಲ್ಲಿ ಮುಜೀಬುರ್ ರೆಹಮಾನರ ಬಂಧನವನ್ನು ವಿರೋಧಿಸಿ ಮುಕ್ತಿವಾಹಿನಿಯೆಂಬ ಜನತಾ ಸೇನೆಯೊಂದು ರಚನೆಯಾಯ್ತು. ಅವರು ಪಶ್ಚಿಮಪಾಕಿಸ್ತಾನದ ಮೇಲೆ ಮುಗಿಬಿದ್ದರು. ಆದರೆ ಈ ಮಧ್ಯೆ ಅಲ್ಲಿನ ಹಿಂದೂಗಳ ಸ್ಥಿತಿಯು ಅತ್ಯಂತ ಚಿಂತಾಜನಕವಾಯ್ತು. ತಂದೆಯೆದುರೇ ಅವರ ಹೆಣ್ಣುಮಕ್ಕಳನ್ನು ಮಾನಭಂಗಮಾಡಿದ ಜಿಹಾದಿಗಳು ಅಷ್ಟಕ್ಕೇ ಸುಮ್ಮನಾಗದೆ, ಆ ತಂದೆಯನ್ನೇ ಮತ್ತೆ ಮಗಳ ಮೇಲೆ ಮಾನಭಂಗವೆಸಗಲು ಪೀಡಿಸಿ ತಮ್ಮ ಪೈಶಾಚಿಕತೆ ಮೆರೆದರು.
ಬರೋಬ್ಬರಿ 10 ಲಕ್ಷ ಜನ ಬಾಂಗ್ಲೀಯರು ಭಾರತಕ್ಕೋಡಿ ಬಂದರು. ಕ್ರುದ್ಧರಾದ ಭಾರತದ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು, ಕ್ಯಾಪ್ಟನ್ ಮಾಣಿಕ್ ಷಾಗೆ ಕೂಡಲೇ ಬಾಂಗ್ಲಾದ ಮೇಲೆ ಯುದ್ಧಸಾರಲು ನಿರ್ದೇಶಿಸಿದರು. ಮಾಣಿಕ್ ಷಾ ಇಂದಿರಾಜಿಯೊಂದಿಗೆ ಮಾತನಾಡುತ್ತಾ, ಯುದ್ಧವನ್ನು ನವೆಂಬರ್ ವರೆಗೆ ಮುಂದೂಡುವಂತೆಯೂ ಅಲ್ಲಿಯವರೆಗೆ ಭಾರತೀಯ ಸೈನಿಕರು ಪೂರ್ವ ಪಾಕಿಸ್ತಾನದ ಭೂಮಿಯ ಬಗ್ಗೆ ತಿಳಿದುಕೊಳ್ಳುವುದು ಒಳಿತೆಂದೂ ಸಲಹೆ ನುಡಿದರು. ಜೊತೆಗೆ ಆ ಏಳು ತಿಂಗಳಲ್ಲಿ ಅಮೆರಿಕಾದ ಸಹಾನುಭೂತಿಯನ್ನೂ, ರಷ್ಯಾದ ನೆರವನ್ನೂ ಪಡೆಯಲು ಮೀಸಲಿರಿಸಬೇಕೆಂದು ತಿಳಿಸಿದರು. ಪಶ್ಚಿಮ ಪಾಕ್ ಗಡಿಯಲ್ಲಿ ಅಲ್ಪ ಸೇನೆಯನ್ನೂ ಪೂರ್ವಪಾಕಿಸ್ತಾನದ ಗಡಿಯಲ್ಲಿ ಭಯಾನಕ ಸೇನೆಯನ್ನೂ ನಿಯೋಜಿಸಿದ ಭಾರತವು ಪಾಕ್ ಮಾಡುವ ತಪ್ಪುನಡೆಯನ್ನು ಎದುರುನೋಡುತ್ತಿತ್ತು.
3.12.1971ರಂದು ಪಾಕಿಸ್ತಾನವು ಅಚಾನಕ್ಕಾಗಿ ಶ್ರೀನಗರದ ಪಠಾಣ್ ಕೋಟ್, ಚಂಡೀಗಢ ಹಾಗು ಆಗ್ರಾದ ವಾಯುನೆಲೆಗಳ ಮೇಲೆ ಮೊದಲ ದಾಳಿಯೆಸಗುವ ಮೂಲಕ ತನ್ನ ಎಂದಿನ ತಪ್ಪು ಹೆಜ್ಜೆಯಿಟ್ಟು ಬಿಟ್ಟಿತು. ಭಾರತೀಯರು ವಾಯುವ್ಯಭಾಗದಲ್ಲಿ ಕಡಿಮೆಸಂಖ್ಯೆಯಲ್ಲಿರುವ ಸುದ್ದಿಯೇ ಪಾಕ್ ನ ಈ ನಡೆಗೆ ಕಾರಣವಾಗಿತ್ತು. ಆದರೆ ಆ ದಾಳಿ ಸಂಪೂರ್ಣ ಹುಸಿಯಾಗಿ ಪಾಕ್ ನ ಮುಖ ಕಪ್ಪಿಟ್ಟಿತು. ಮತ್ತೆ ಪಾಕಿಸ್ತಾನವು ಜೈಸಲ್ಮೇರ್ ಬಳಿಯ ಲೋಂಗೇವಾಲಾದ ಮೇಲೆ ದಾಳಿಯಿಡಲು ಬ್ರಿಗೇಡಿಯರ್ ತಾರಿಕ್ ಮೀರ್ ನ ನೇತೃತ್ವದಲ್ಲಿ ಸೇನೆಯನ್ನು ಕಳಿಸಿತು. ಆಗ ಲೋಂಗೈವಾಲಾದಲ್ಲಿದ್ದ ಯೋಧ ಕುಲ್ದೀಪ್ ಸಿಂಗ್ ಚಾಂದ್ಪುರೀಜಿಯ ನೇತೃತ್ವದಲ್ಲಿದ್ಥ ಸೈನಿಕರ ಸಂಖ್ಯೆಯು ಕೇವಲ 120. ಆದರೆ ತಮಗಿಂತ 23 ಪಟ್ಟು ಅಧಿಕವಿದ್ದ ಪಾಕಿಸ್ತಾನದ ಸೈನಿಕರಿಗೆ ಇಡೀ ಯುದ್ಧದ ಇತಿಹಾಸವೇ ಸ್ಮರಿಸಿಕೊಳ್ಳಬೇಕಾದ ರೀತಿಯ ಪಾಠವನ್ನು ಯೋಧ ಕುಲದೀಪ್ ಸಿಂಗ್ ಚಾಂದ್ ಪುರೀಜಿ ಕಲಿಸಿದರು.
ಮೊದಲು ತಮ್ಮಲ್ಲಿದ್ದ ಮೈನಿಂಗ್ ಬಾಂಬುಗಳ ಮೂಲಕ ತಾರಿಕ್ ಮೀರ್ ಪಡೆಯ ಮೂರು ಟ್ಯಾಂಕುಗಳನ್ನು ಉಡಾಯಿಸಿದಾಗ ನಮ್ಮ ಭಾರತೀಯ ಸೈನಿಕರು ಅಲ್ಲಲ್ಲಿ ಚದುರಿ ಹೋಗಿದ್ದರು. ಜತೆಗೇ ಜೈಸಲ್ಮೇರಿನ ಮರುಭೂಮೀಯಲ್ಲಿ 3 ಕಿ ಮೀ ಉದ್ದಕ್ಕೆ ಅಲ್ಲಲ್ಲಿ ಟಿಫನ್ ಬಾಕ್ಸ್ ಗಳನ್ನು ಹುಗಿದಿಟ್ಟುಬಿಟ್ಟಿದ್ದರು. ತಾರಿಕ್ ಮೀರ್ ಸುಮಾರು ಆರು ಗಂಟೆಗಳ ಕಾಲ ಒದ್ದಾಡಿ ಆ ಟಿಫನ್ ಬಾಕ್ಸ್ ರೂಪೀ ಮೈನ್ಸ್ ಗಳನ್ನು ನಿಷ್ಕ್ರಿಯಗೊಳಿಸಲು ತಜ್ಞ ಪಡೆಯನ್ನು ಕರೆಸಿಕೊಂಡ. ಅವರು ಬಂದು ಅದನ್ನು ನಿಷ್ಕ್ರಿಯಗೊಳಿಸುತ್ತಿರುವಾಗ 120 ಭಾರತೀಯ ಸೈನಿಕರು ಬೇರೆಬೇರೇ ಮೂಲೆಗಳಿಂದ ಫಿರಂಗಿಗಳನ್ಞು ಸಿಡಿಸಿದರು ಪಾಕ್ ಸೈನಿಕರಲ್ಲಿ ಭಾರತೀಯ ಸೈನಿಕರು ಸಾವಿರಗಟ್ಟಲೇ ಸಂಖ್ಯೆಯಲ್ಲಿ ತಮ್ಮನ್ನು ಮುತ್ತಿಬಿಟ್ಟಿದ್ದಾರೆಂಬ ಭ್ರಮೆ ಮೂಡಿಬಿಟ್ಟಿತು.1971ರ ಭಾರತ ಪಾಕ್ ಯುದ್ಧದಲ್ಲಿ ಭಾರತೀಯ ಸೈನಿಕರು ಅಕ್ಷರಶಃ ಮನೋವೈಜ್ಞಾನಿಕ ತಂತ್ರದ ಮೂಲಕ ಪಾಕಿಸ್ತಾನವನ್ನು ಮಕಾಡೆ ಮಲಗಿಸಿಬಿಟ್ಟರು. ಬ್ರಿಗೇಡಿಯರ್ ತಾರಿಖ್ ಮೀರನು ತಜ್ಞರನ್ನು ಕರೆಸಿ ಭಾರತೀಯ ಸೈನಿಕರು ಹುಗಿದಿಟ್ಟಿದ್ಥ “ಹುಸಿ ಟಿಫನ್ ಬಾಕ್ಸ್ ಮೈನಿಂಗ್ ಬಾಂಬ್” ಗಳನ್ನು ಹುಡುಕೋದ್ರಲ್ಲಿ ಕಾಲ ಮಿಂಚಿಹೋಗಿತ್ತು. ಬೆಳಕು ಹರಿದಿತ್ತು.
ಭಾರತೀಯ ವಾಯುಪಡೆಯು ಪಾಕ್ ನ ಟ್ಯಾಂಕರ್ ಗಳ ಮೇಲೆ ಅದ್ಯಾವ ಪರಿ ಎರಗಿತೆಂದರೆ ಆ ನುಚ್ಚುನೂರಾದ ಟ್ಯಾಂಕರ್ ಗಳ ಅವಶೇಷಗಳ ಮೇಲೆ ನಮ್ಮ ಸೈನಿಕರು ನಿಂತು ಫೋಟೋ ತೆಗೆದುಕೊಂಡರು. “ನಿಮ್ಮ ಸತ್ತ ಸೈನಿಕರ ಹೆಣ ತಗೋಂಡ್ಹೋಗ್ರಯ್ಯ” ಅಂತ ಭಾರತೀಯ ಸೇನಾಕಮ್ಯಾಂಡರ್ ಗಳು ಸೂಚಿಸಿದರೂ ಸಹ ತಾರಿಕ್ ಮೀರ್ ನೊಂದಿಗೆ ಹೆದರಿ ಓಡಿ ಹೋದ ಪಾಕ್ ಸೈನಿಕರು ತಮ್ಮವರ ಆ ಹೆಣಗಳನ್ನೂ ಹೊತ್ತೊಯ್ಯದೇ ಅವನ್ನು ರಣಹದ್ದುಗಳಿಗೆ ಆಹಾರವಾಗಿಸಿದರು. ನಾಚಿಕೆಯೇ ಇಲ್ಲದೇ ತಾವೇ ಭಾರತದ ಮೇಲೆರಗಿದುದನ್ನು ಮರೆತ ಪಾಕಿಸ್ತಾನದ ನಾಯಕರು, ಸಾವಿನ ರುದ್ರನರ್ತನ ಮಾಡಿದರೆಂದು ಭಾರತೀಯ ಸೈನಿಕರನ್ನೇ ಬೈದಿದ್ದು ತಮಾಷೆಯಾಗಿತ್ತು.
ಈಗ ಭಾರತೀಯ ನೌಕಾಪಡೆಯು ತನ್ನ ತಾಕತ್ತನ್ನು ತೋರಿಸಲು ಸನ್ನದ್ಧವಾಗಿ ನಿಂತಿತ್ತು. 5.12.1971ರಂದು ಕರಾಚಿಯ ಬಂದರಿಗೆ ದಾಳಿಯಿಟ್ಟ ಭಾರತೀಯ ನೌಕಾಬಲವು ಆ ಬಂದರನ್ನು ಕ್ಷಿಪಣಿಯ ಮೂಲಕ ಉಡಾಯಿಸಿ ಅಲ್ಲಿನ ನೌಕಾ ಸಿಬ್ಬಂದಿಯೆಲ್ಲ ಜೀವಭಯದಿಂದ ಸಮೀಪದ ಗ್ವಾದಾರ್ ಬಂದರಿಗೆ ಪಲಾಯನಮಾಡುವಂತೆ ಪೆಟ್ಟುಕೊಟ್ಟಿತು. ಅಕ್ಷರಶಃ ಭಾರತೀಯ ಸೇನೆಯು ಪಶ್ಚಿಮ ಪಾಕ್ ನ ನಡುವನ್ನೇ ಮುರಿದಿಕ್ಕಿತ್ತು. ಇದೇ ಸಮಯದಲ್ಲಿ ಪಾಕಿಸ್ತಾನವು ತನ್ನ ವಕ್ರಬುದ್ಧಿಯನ್ನು ಬಿಡದೇ ಬಂಗಾಳಕೊಲ್ಲಿಯ ಸಮೀಪ ಬೀಡುಬಿಟ್ಟಿದ್ದ ಭಾರತೀಯ ನೌಕಾಬಲದ ಮೂಲಶಕ್ತಿಯಾಗಿದ್ದ ಐ ಎನ್ ಎಸ್ ವಿಕ್ರಾಂತನ್ನು ನಾಶಗೊಳಿಸಲು ಯೋಜನೆಮಾಡಿ ಆ ದಿಕ್ಕಿಗೆ ತನ್ನ ಪಿ.ಎನ್.ಎಸ್ ಘಾಜಿ ಕ್ಷಿಪಣಿಯನ್ನು ಕಳಿಸಿತು. ಬಂಗಾಳಕೊಲ್ಲಿಯ ಸಮೀಪ ಬೀಡುಬಿಟ್ಟಿದ್ದ ಅದರಿಂದ ಯುದ್ಧವಿಮಾನಗಳು ಪೂರ್ವಪಾಕಿಸ್ತಾನದಲ್ಲಿ ಹಾರಾಡುತ್ತಾ, ಅಲ್ಲಿನ ಮುಕ್ತಿವಾಹಿನಿಗೆ ಬೆಂಬಲನೀಡುತ್ತಿತ್ತು. ಇದನ್ನು ಹೊಡೆದು ನಾಶಗೊಳಿಸಲು, ಪಾಕಿಸ್ತಾನದ “ಪಿ ಎನ್ ಎಸ್ ಘಾಜಿ “ಯು ಕರಾಚಿ ನೌಕಾನೆಲೆಯಿಂದ ಕನ್ಯಾಕುಮಾರಿ ಭೂಶಿರವನ್ನು ಸುತ್ತಿಬಳಸಿ ಬಂಗಾಳಕೊಲ್ಲಿಯ ಕಡೆಗೆ ಪ್ರಯಾಣ ಬೆಳೆಸಿತು. ಆ ಸಂದರ್ಭದಲ್ಲಿ ತನ್ನ ಐ.ಎನ್.ಎಸ್ ವಿಕ್ರಾಂತ್ ನ್ನು ರಕ್ಷಿಸಿಕೊಳ್ಳುವ ಜೊತೆಜೊತೆಗೇ ಪಾಕಿಸ್ತಾನದ ಆ ಪಿ ಎನ್ ಎಸ್ ಯುದ್ಧನೌಕೆಯನ್ನೂ ಉಡಾಯಿಸುವ ಅದ್ಭುತ ತಂತ್ರವೊಂದನ್ನು ಭಾರತೀಯ ನೌಕಾಪಡೆಯು ನಡೆಸಿತು.
ಇದ್ದಕ್ಕಿದ್ದಂತೆಯೇ ಪಾಕ್ ನಲ್ಲಿ ಒಂದು ಸುದ್ದಿ ಹಬ್ಬಿಬಿಟ್ಟಿತು. ಐ ಎನ್ ಎಸ್ ವಿಕ್ರಾಂತ್ ಕೆಟ್ಟು ನಿಂತಿದೆಯೆಂದೂ, ಅದನ್ನು ವಿಶಾಖಪಟ್ಟಣದಲ್ಲಿ ರಿಪೇರಿಗೋಸ್ಕರ ಲಂಗರು ಹಾಕಿಸಿ ನಿಲ್ಲಿಸಲಾಗಿದೆಯೆಂದೂ ಸುದ್ದಿ ಹಬ್ಬಿತು. ಅದೇ ರೀತಿ ಐ.ಎನ್.ಎಸ್ ನೌಕಾಪಡೆಯ ಸೇನಾಧಿಕಾರಿಗಳೆಲ್ಲ ತಮ್ಮ ಕುಟುಂಬದವರಿಗೆ ತಾವು ರಜೆಯ ಮೇಲೆ ಮನೆಗೆ ಬರುತ್ತಿರುವುದಾಗಿ ತಿಳಿಸಿ ಫೋನ್ ಮಾಡಲಾರಂಭಿಸಿದರು. ಇನ್ನೊಂದೆಡೆ, ಕೆಟ್ಟು ಹೋದ ಐ.ಎನ್.ಎಸ್ ವಿಕ್ರಾಂತ್ ಗೆ ಸ್ಥಳಾವಕಾಶ ಮಾಡಿಕೊಡಲು ವಿಶಾಖಪಟ್ಟಣದ ಮೀನುಗಾರರನ್ನೂ ಸಣ್ಣ ಪುಟ್ಟ ಬೋಟ್ ಗಳನ್ನೂ ತೆರವುಗೊಳಿಸಲಾಯ್ತು. ಪಾಕ್ ಸಂಪರ್ಕಮಾಧ್ಯಮದಿಂದ ಪಿ.ಎನ್.ಎಸ್.ಘಾಜಿ ಯುದ್ಧನೌಕೆಗೆ ಈ ಸುದ್ದಿ ಸಿಕ್ಕಿದಾಗ ಅದರ ಒಳಗಿದ್ದವರಿಗೆ ಜನ್ನತ್ ಗೆ ಮೂರೇ ಗೇಣುಳಿದಿತ್ತು.
ಒಮ್ಮಿಂದೊಮ್ಮೆಲೇ ಘಾಜಿ ಯುದ್ಧನೌಕೆಯು ತನ್ನ ಪಯಣವನ್ನು ಮೊಟಕುಗಳಿಸಿ ಐ.ಎನ್.ಎಸ್ ವಿಕ್ರಾಂತನ್ನು ವಿನಾಶಗೊಳಿಸಲು ವಿಶಾಖಪಟ್ಟಣದ ಹತ್ತಿರ ತೆರಳತೊಡಗಿತು. ಆದರೆ ಆಗ ನಡೆದ ಒಂದು ಚಮತ್ಕಾರಿಕ ಘಟನೆಯಿಂದ ಪಾಕ್ ಸೇನೆಯು ಮೂಕವಿಸ್ಮಿತವಾಗಿಹೋಯ್ತು. ವಿಶಾಖಪಟ್ಟಣದ ಹತ್ತಿರ ನೀರಲ್ಲಿ ಮುಳುಗಿಕೊಂಡಿದ್ದ ಯುದ್ಧನೌಕೆಯೊಂದು ಘಾಜಿ ನೌಕೆಯು ಹತ್ತಿರ ಬರುತ್ತಿದ್ದಂತೆ ಒಮ್ಮೆಲೇ ಮೇಲೆದ್ದು ಕ್ಷಿಪಣಿ ಸಮೂಹವನ್ನೇ ಪ್ರಯೋಗಿಸಿ ಅದನ್ನು ಜಲಸಮಾಧಿ ಮಾಡಿಬಿಟ್ಟಿತು. ಹಾಗೆ ಮಾಡಿದ್ದು ಐ.ಎನ್.ಎಸ್ ವಿಕ್ರಾಂತ್ ಅಲ್ಲ. ಬದಲಿಗೆ ಆ ಮೊದಲೇ ಕೆಟ್ಟುಹೋಗಿ ರಿಪೇರಿಗಾಗಿ ವಿಶಾಖಪಟ್ಟಣದಲ್ಲಿ ಲಂಗರುಹಾಕಿದ್ದ ಐ.ಎನ್.ಎಸ್ ರಜಪೂತ್ ಎಂಬ ಇನ್ನೊಂದು ಭಾರತೀಯ ಯುದ್ಧನೌಕೆ. ಅದನ್ನೇ ಪಾಕಿಸ್ತಾನೀಯರು “ಐ ಎನ್ ಎಸ್ ವಿಕ್ರಾಂತ್” ಎಂದು ತಿಳಿದುಕೊಳ್ಳುವ ವಾತಾವರಣವನ್ನು ನಮ್ಮ ನೌಕಾಬಲವು ಸೃಷ್ಟಿಸಿತ್ತು. ಆದರೆ ಈ ಮಧ್ಯೆ ಪೂರ್ವಪಾಕಿಸ್ತಾನದ (ಬಾಂಗ್ಲಾ) ಚಡಗಾಂವ್ ಬಂದರನ್ನೂ ವಶಪಡಿಸಿಕೊಂಡ ಐ.ಎನ್.ಎಸ್.ವಿಕ್ರಾಂತ್ ಸುರಕ್ಷಿತವಾಗುಳಿದಿತ್ತು.
ಅವಮಾನದಿಂದ ಇಂಗು ತಿಂದ ಮಂಗನಂತಾದ ಪಾಕಿಸ್ತಾನವು ಅಷ್ಟಕ್ಕೇ ಸುಮ್ಮನಾಗಿದೇ, ಅಮೆರಿಕಾದ ಮುಂದೆ ಗೋಗರೆಯಿತು. ವಿಶ್ವಸಂಸ್ಥೆಯಲ್ಲಿ ಮೊಸಳೆ ಕಣ್ಣೀರಿಟ್ಟು ಭಾರತವನ್ನು ದೂರಿತು. ಆದರೆ ಅದೇ ಸಮಯಕ್ಕೆ ಭಾರತವು ಮಾಡಿದ್ದು ಸರಿಯಾದ ಕ್ರಮವೆಂದು ರಷ್ಯಾ ತನ್ನ ವೀಟೋ ಚಲಾಯಿಸಿದ್ದರಿಂದ ಪಾಕಿಸ್ತಾನದ ಬೇಳೆ ಬೇಯಲಿಲ್ಲ. ಆದರೆ ಈಗ ಪಾಕ್ ನ ಸಹಾಯಕ್ಕೆ ಅಮೆರಿಕಾವು ತನ್ನ ಪ್ರಸಿದ್ಧವಾದ ಏಳು ಯುದ್ಧ ನೌಕಾ ಸಮೂಹ ಬಲವನ್ನು ಕಳಿಸಿತು. ಇಂಗ್ಲೆಂಡ್ ತನ್ನ ‘ಈಗಲ್’ ಯುದ್ಧ ನೌಕೆಯನ್ನು ಕಳಿಸಿತು. ಈ ಎರಡೂ ದೈತ್ಯ ನೌಕಾಬಲವನ್ನೆದುರಿಸಲು ಭಾರತವು ರಷ್ಯಾದ ಮೊರೆಹೋದಾಗ, ರಷ್ಯಾವು ತನ್ನ 40 ನೌಕಾಸಮೂಹದ ಪಡೆಯನ್ನು ಕಳಿಸಿತು. ಜೊತೆಗೆ ಅದರ ಮಿತ್ರರಾಷ್ಟ್ರ ಯೆಮನ್ ಸಹ ತನ್ನ ವಾಯುಬಲವನ್ನು ಭಾರತದ ರಕ್ಷಣಾರ್ಥ ಯಾವಾಗ ಕಳಿಸಿತೋ ಹಿಂದೂ ಮಹಾಸಾಗರದ ವಲಯದಲ್ಲಿ ದೊಡ್ಡ ಯುದ್ಧದ ವಾತಾವರಣವೇ ಮೂಡಿಬಿಟ್ಟಿತು. ಆದರೆ ರಷ್ಯಾದ ಕೆಲವು ಸಬ್ಮೆರಿನ್ ಗಳು ಸಮುದ್ರಮಧ್ಯದಿಂದ ಹಲವಾರು ಸಂಖ್ಯೆಯಲ್ಲಿ ತಮ್ಮ ತಲೆಯನ್ನೆತ್ತಿ ಹಾಕಿ ಮುಳುಗತೊಡಗಿದಾಗ ಎಚ್ಚೆತ್ತಿದ್ದು ಈಗಲ್ ನೌಕಾಪಡೆ. “ಭಾರತದ ಸುದ್ದಿಗೆ ಬಂದರೆ ಅದು ನಮ್ಮ ಮೇಲೆರಗಿದಂತೆ ಸಾವಧಾನ್” ಎಂಬ ಸಂದೇಶವು ರಷ್ಯಾದಿಂದ ಬರುತ್ತಿದ್ದಂತೆಯೇ ಪಾಕ್ ನ ಈ ಎರಡೂ ಮಿತ್ರನೌಕಾಪಡೆಗಳು ಸುಮ್ಮನೇ ಕೂರಬೇಕಾಯ್ತು.
ರಷ್ಯಾದ ನೌಕಾಪಡೆಗಳು ಐ.ಎನ್.ಎಸ್ ವಿಕ್ರಾಂತ್ ನ ರಕ್ಷಣೆಗೆ ಸುತ್ತುಗಟ್ಟಿ ನಿಂತುಬಿಟ್ಟಿದ್ದವು. ಇದೇ ಸಮಯಸಾಧಿಸಿ ನಮ್ಮ ಲೆಫ್ಟಿನೆಂಟ್ ಜನರಲ್ ನಿರ್ಮಲ್ ಜೀತ್ ಸಿಂಗ್ ಅರೋಡಾರವರು ಬಾಂಗ್ಲಾದ ಮೇಲೆ ಐದುಸಾವಿರದಷ್ಟು ಶಸ್ತ್ರಸಜ್ಜಿತ ಭಾರತೀಯ ಸೈನಿಕರನ್ನು ಏರೊಡ್ರಾಪ್ ಮಾಡಿಸಿ ಇಳಿಸಿಬಿಟ್ಟಿದ್ದಾರೆಂಬ ಭಯಾನಕ ಸುದ್ದಿ ಪಾಕ್ ಗೆ ತಿಳಿಯಿತು. ಬಿಬಿಸಿ ಯ ಮೂಲಕ ಈ ಸುದ್ದಿಯು ಕೇವಲ ಪಾಕ್ ಗಷ್ಟೇ ಅಲ್ಲದೇ ಇಡೀ ಪ್ರಪಂಚಕ್ಕೇ ತೀಳಿಯಿತು. ವಾಸ್ತವವಾಗಿ ಕೆಲವು ನೂರು ನಿಜವಾದ ಸೈನಿಕರೊಂದಿಗೆ ಹಲವು ಸಾವಿರದಷ್ಟು ಸೈನಿಕರ ಬೊಂಬೆಗಳು ಏರ್ ಡ್ರಾಪ್ ಮೂಲಕ ಬಾಂಗ್ಲಾದ ನೆಲದಲ್ಲಿಳಿದಿದ್ದು, ಅಲ್ಲಿನ ಗೌರ್ನರ್ ಮಿಯಾ ಅಲಿಗೂ ಗೊತ್ತಾಗಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಮಾನಸಿಕ ಯುದ್ಧದ ಮೂಲಕ ಭಾರತವು ಪಾಕಿಸ್ತಾನದ ಹೆಡೆಮುರಿಕಟ್ಟಿ ಮಲಗಿಸಿಬಿಟ್ಟಿತ್ತು. ಇನ್ನು ಕೊನೆಯ ಅಂಕ. ನಿರ್ಮಲ್ ಜಿತ್ ಸಿಂಗ್ ಅರೋಡಾ ತತ್ಕ್ಷಣ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಏಕೆಂದರೆ ರಷ್ಯಾದ ನಡೆಯಿಂದ ಬೆಚ್ಚಿಬಿದ್ದು ಅವಮಾನಿತವಾದ ಅಮೆರಿಕಾ ಮತ್ತು ಇಂಗ್ಲೆಂಡ್ ನ ಈಗಲ್ ನೌಕಾಪಡೆಗಳು ಮುಂದಿನ ಹೆಜ್ಜೆಯಿಡುವುದರೊಳಗೆ ಭಾರತವು ಚುರುಕಾದ ನಿರ್ಧಾರ ತೆಗೆದುಕೊಳ್ಳಬೇಕಿತ್ತು.
ಈ ಮಧ್ಯೆ ಭಾರತೀಯ ನೌಕಾಪಡೆಯು ಈ ಸಂದರ್ಭದಲ್ಲಿ ಬಾಂಬರ್ ವಿಮಾನದ ಮೂಲಕ ಪೂರ್ವಪಾಕಿಸ್ತಾನದ ಗವರ್ನರ್ ಮನೆಯನ್ನು ಧ್ವಂಸಗೊಳಿಸಿಬಿಟ್ಟಿತು. ಹೆದರಿ ನಡುಗಿಹೋದ ಗವರ್ನರ್ ಜನರಲ್ ಎ.ಹೆಚ್.ಮಲ್ಲಿಕ್ ರು ತಮ್ಮ ಹುದ್ದೆಗೆ ರಾಜಿನಾಮೆಯಿತ್ತು ಅಡಗಿಬಿಟ್ಟರು. ಪಾಕಿಸ್ತಾನದ ಮಾನ ಘಂಟೆ ಘಂಟೆಗೂ ಮೂರಾಬಟ್ಟೆಯಾಗಲಾರಂಭವಾಯ್ತು. ಲೆ.ಜ.ಅರೋಡಾ ಕೂಡಲೇ ನಿರ್ಧಾರ ತೆಗೆದುಕೊಂಡು ಪಾಕಿಸ್ತಾನದ ಲೆ.ಜ.ಅಲಿ ಮಿಯಾಗೊಂದು ಸಂದೇಶ ಕಳಿಸಿದರು. “ಇನ್ನರ್ಧ ಗಂಟೆಯಲ್ಲಿ ನೀವು ನಿಮ್ಮ ಎಲ್ಲ ಸೈನಿಕರ ಸಮೇತ ಭಾರತದ ಸೇನೆಗೆ ಶರಣಾದರೆ ನಿಮ್ಮ ಸೈನಿಕರು ಕ್ಷೇಮವಾಗಿರುತ್ತಾರೆ. ಇಲ್ಲದಿದ್ದಲ್ಲಿ ಈಗಿನದಕ್ಕಿಂತಲೂ ಅಧಿಕ ಪಟ್ಟು ಹೆಚ್ಚಾದ ಮಿಲಿಟರಿ ಕಾರ್ಯಾಚರಣೆಯನ್ನು ನಿಮ್ಮ ಮೇಲೆ ಪ್ರಯೋಗಿಸಬೇಕಾಗುತ್ತದೆ.” ಎನ್ನುತ್ತಾರೆ. ಭಾರತದ ಲೆ ಜ ಅರೋಡಾರ ಈ ಸಂದೇಶ ವಾಕ್ಯದೆದುರು ಕೊನೆಗೂ ಮಂಡಿಯೂರಿದ ಪಾಕ್ ನ ಲೆ.ಜ.ಅಲಿಮಿಯಾ ಶರಣಾಗತಿಯ ಪತ್ರಕ್ಕೆ ಸಹಿಮಾಡಿದ.
93000 ಪಾಕಿಸ್ತಾನೀ ಸೈನಿಕರು ತಮ್ಮೆಲ್ಲ ಶಸ್ತ್ರಾಸ್ತ್ರ ಹಾಗೂಸೇನಾಲಾಂಛನಗಳನ್ನು ತ್ಯಾಗ ಮಾಡಿ ಭಾರತೀಯ ಸೇನೆಗೆ ಸಾಮೂಹಿಕವಾಗಿ ಶರಣಾದದ್ದು,ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿಹೋಯ್ತು, 3 ನೇ ತಾರೀಖು ಶುರುವಾದ ಪಾಕಿಸ್ತಾನದ ಕುತಂತ್ರೀ ಆಕ್ರಮಣಕ್ಕೆ ಕೇವಲ 13ದಿನಗಳಲ್ಲಿಯೇ ಉತ್ತರನೀಡಿದ ಭಾರತವು 16.12.1971 ರಂದು ಪಾಕಿಸ್ತಾನದ ಮೇಲೆ ಸಂಪೂರ್ಣವಾಗಿ ವಿಜಯಶಾಲಿಯಾಯ್ತು. ಈ ದಿನವನ್ನು ಪೂರ್ಣ ದೇಶದಲ್ಲಿ “ವಿಜಯ ದಿವಸ್” ಎಂದು ಆಚರಿಸುತ್ತಾರೆ
ಸಂಘದ ಶಾಖೆಗಳಲ್ಲಿ ಡಿಸೆಂಬರ್16ನೇ ತಾರೀಖಿನಂದು ಸ್ವಯಂಸೇವಕರು ನಡೆಸುವ “ಪ್ರಹಾರ್ ಮಹಾಯಜ್ಞ” ಈ ವಿಜಯದ ಸಂಕೇತವಾಗಿದೆ.