ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕೊಳ್ಳೆಗಾಲ ಕ್ಷೇತ್ರದ ಶಾಸಕರಾದ ಎನ್. ಮಹೇಶ್ ಅವರು ಅಸ್ಪೃಶ್ಯತೆಯ ಕುರಿತು ಮಾತನಾಡುತ್ತಾ,  ‘ಭಾರತದ ಐಕ್ಯಮತ್ಯವನ್ನು ಒಡೆಯುವ ನಮ್ಮೊಳಗಿನ ಕಟ್ಟುಕಟ್ಟಳೆಗಳನ್ನು ಮೆಟ್ಟಿ ನಿಂತಾಗ ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯರ ಸಾವರ್ಕರ್ ಅವರು ಕಂಡ ಕನಸಿನ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ’ ಎಂದಿದ್ದರು.


ಅವರ ಮಾತನ್ನು ಕೇಳುತ್ತಿದ್ದಾಗ ಅನಿಸಿದ್ದು, ಪರಂಪರೆಯ ಹೆಸರಿನಲ್ಲಿ ಆಚರಣೆಯಲ್ಲಿ ಇರುವ ಎಷ್ಟೋ ಪದ್ಧತಿಗಳು ಒಂದು ಕಾಲದ ನಂತರ ತನ್ನ ಔಚಿತ್ಯವನ್ನು ಕಳೆದುಕೊಳ್ಳುತ್ತವೆ ಎಂಬುದು. ಸಮಾಜದ ಯಾವುದೋ ಕಾಲಘಟ್ಟದಲ್ಲಿ, ಯಾವುದೋ ಕಾರಣಕ್ಕೆ ಹುಟ್ಟಿದ ಒಂದಷ್ಟು ಆಚರಣೆಗಳನ್ನು ಪರಂಪರೆಯ ಹೆಸರಿನಲ್ಲಿ ಅನಗತ್ಯವಾಗಿ ಚಾಲ್ತಿಯಲ್ಲಿಡುವುದು ಧರ್ಮ ಅಲ್ಲ. ಇಂಥವು ಕೊಳೆತ ಮಾವಿನ ಹಣ್ಣುಗಳಂತೆ! ಅಸ್ಪೃಶ್ಯತೆ ಯಾಕೆ ಹುಟ್ಟಿತು ಎಂಬುದರ ವಿಶ್ಲೇಷಣೆ ಮಾಡುವುದಕ್ಕಿಂಲೂ ಅದರ ಅನಿವಾರ್ಯತೆ ಸಮಾಜಕ್ಕಿದೆಯೇ ಎನ್ನುವುದು ನಾವೆಲ್ಲರೂ ಕೇಳಿಕೊಳ್ಳಬೇಕಾದ ಮೂಲಭೂತ ಪ್ರಶ್ನೆ. ಹಾಗಿದ್ದರೆ ಇಂತಹ ಕಾಲಬಾಹಿರ ಆಚರಣೆಗಳ ನಿರ್ಮೂಲನೆ ಹೇಗೆ?


ಇಂದಿಗೂ ಭಾರತೀಯ ಸಮಾಜ ನೆಲೆ ನಿಂತಿರುವುದು, ವ್ಯವಹರಿಸುತ್ತಿರುವುದು ನೈತಿಕತೆಯ ಆಧಾರದ ಮೇಲೆ. ನಾಗರಿಕತೆ ಇವತ್ತಿಗೂ ಜೀವಂತವಾಗಿರಲು ಕಾರಣ ಸಮಾಜ ಕಾಲಕಾಲಕ್ಕೆ ಬದಲಾದ ಸನ್ನಿವೇಶಗಳಿಗೆ, ಪರಿಸ್ಥಿತಿಗೆ ತನ್ನನ್ನು ತಾನು ಒಡ್ಡಿಕೊಂಡಿದ್ದರಿಂದ. ಸ್ವಾತಂತ್ರ್ಯಾನಂತರದ ಭಾರತದ ಸಂವಿಧಾನ ಇಂತಹ ಅಗತ್ಯ ಬದಲಾವಣೆಗಳಿಗೆ ವೇಗ ಕೊಡುವ ಪ್ರಯತ್ನವನ್ನು ಮಾಡಿತು. ಆದರೆ ಎಲ್ಲಿಯ ತನಕ ಸಮಾಜ ಸಂವಿಧಾನ ಹೇಳಿದ ಈ ಬದಲಾವಣೆಗಳನ್ನು ಒಪ್ಪಿಕೊಳ್ಳುವುದಿಲ್ಲವೋ, ಒಗ್ಗಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ಅದು ಅಸಾಧ್ಯ ಮತ್ತು ಸಮಾಜದ ಮೇಲೆ ಒತ್ತಾಯದ ಮುಖಾಂತರ ಹೇರುವ ಯಾವುದೇ ಬದಲಾವಣೆಗಳು ಸಮಾಜದೊಳಗೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಆದರೆ ಸಮಾಜವೇ ಒಪ್ಪಿ ಬದಲಾವಣೆಗೆ ಮುಂದಾದಾಗ ಅದಕ್ಕಿಂತ ಉತ್ತಮವಾದದ್ದು ಬೇರೆ ಇಲ್ಲ. ಅದಕ್ಕೆ ಆ ಮಾನಸಿಕತೆಯ ಜನರು ಸಮಾಜದಲ್ಲಿ ಇರಬೇಕು.  ಅಸ್ಪೃಶ್ಯತೆಯನ್ನು ತೊಡೆದುಹಾಕುವ ಪ್ರಯತ್ನವಾಗಬೇಕು. ಆ ಪ್ರಯತ್ನದಲ್ಲಿ ಸಮಾಜದೊಳಗೆ ಘರ್ಷಣೆಗಳು ಪ್ರಾರಂಭವಾಗುತ್ತವೆ. ಆದರೆ ಅದನ್ನು ಸಂಘರ್ಷವಿಲ್ಲದೆಯೂ ಪರಿಹರಿಸಬಹುದು. ಅದಕ್ಕೆ ಬೇಕಿರುವುದು ಬದಲಾವಣೆಗಳನ್ನು ಬಯಸುವ, ಸಮಾಜದ ಅಂತರಂಗವನ್ನು ಅರಿತ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಮಾನಸಿಕತೆ.ಅಂಥಾ ಹಲವು ಬದಲಾವಣೆಯ ಪ್ರಯತ್ನಗಳು ಸಮಾಜದಲ್ಲಿ ನಡೆದಿವೆ. ಕಾಲಕಾಲಕ್ಕೆ ಹಿಂದೂ ಸಮಾಜವೇ ಪಿಡುಗಾಗಿ ಬದಲಾಗುತ್ತಿದ್ದ ಅನೇಕ ಸಂಗತಿಗಳನ್ನು ಪರಿಹರಿಸಿಕೊಂಡಿದೆ. ಇದು ಅಂಥ ಪ್ರಯತ್ನಗಳಲ್ಲಿ ಒಂದು.


ಉಡುಪಿ ಜಿಲ್ಲೆಯ ಹೆರಂಜೆ ಎಂಬ ಗ್ರಾಮ. ಆ ಊರಲ್ಲಿ ಸುಮಾರು ನಾನೂರು ವರ್ಷಗಳಷ್ಟು ಪುರಾತನವಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ವಿಜಯನಗರದ ಕಾಲದಲ್ಲಿ ಬಾರ್ಕೂರಿನ ರಾಣಿಯ ಆಡಳಿತ ಆ ದೇವಸ್ಥಾನಕ್ಕೆ ಉಂಬಳಿ ಬಿಟ್ಟ ಶಿಲಾಶಾಸನಗಳು ಆ ದೇವಸ್ಥಾನದಲ್ಲಿವೆ. ದೇಶದ ಬಹುತೇಕ ಹಳ್ಳಿಗಳಲ್ಲಿದ್ದಂತೆ ಆ ಊರಲ್ಲೂ ಒಂದಷ್ಟು ಜಾತಿಯ ಜನರಿಗೆ ದೇಗುಲದ ಪ್ರವೇಶ ನಿಷಿದ್ಧವಾಗಿತ್ತು. ದಲಿತ ಸಮುದಾಯದ ಜೊತೆಗೆ ಬಿಲ್ಲವರರಿಗೂ ದೇಗುಲ ಪ್ರವೇಶ ನಿಷಿದ್ಧವಾಗಿತ್ತು. ಅಂದಿನ ಕರಾವಳಿಯ ಬಹುತೇಕ ದೇವಸ್ಥಾನಗಳಲ್ಲಿ ಅಂಥದ್ದೊಂದು ಅನಿಷ್ಟ ಪದ್ದತಿ ಇತ್ತು. ೧೯೯೭-೯೮ರಲ್ಲಿ ಆ ದೇವಸ್ಥಾನದ ಜೀರ್ಣೋದ್ದಾರ ನಡೆಯಿತು. ದೇವಸ್ಥಾನದ ಹಳೆಯ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣವಾಗುತ್ತಿತ್ತು. ಆಗ ಊರವರೆಲ್ಲರೂ ದೇವರ ಗರ್ಭಗುಡಿಯೊಳಗೆ ನುಗ್ಗಿ ಸಂಭ್ರಮಿಸಿದರು. ದಲಿತರು, ಬಿಲ್ಲವರೆಲ್ಲರೂ ಪ್ರವೇಶಿಸಿದರು. ಆದರೆ ಅವರಿಗೆ ಜೀರ್ಣೋದ್ಧಾರದ ನಂತರ ದೇವಸ್ಥಾನದ ಪ್ರಾಂಗಣಕ್ಕೂ ಪ್ರವೇಶವಿರುವುದಿಲ್ಲ ಎಂಬ ಬೇಸರವೂ ಕಾಡುತ್ತಿತ್ತು. ಜೊತೆಗೆ ಆ ಕಾಲಕ್ಕೆ ಆ ಸಮುದಾಯಗಳಿಗೆ ಸಹಜವಾಗಿ ಆ ವ್ಯವಸ್ಥೆಯ ಬಗ್ಗೆ ಅಸಹನೆಯೂ ಹುಟ್ಟುತ್ತಿತ್ತು. ಆ ಅಸಹನೆ ಯುವಕರಲ್ಲಿ ಅಸಮಧಾನ, ಆಕ್ರೋಶಗಳನ್ನೂ ಹುಟ್ಟುಹಾಕಿತ್ತು. ಅದು ಸಹಜ ಕೂಡ. ಆದರೆ ಬಿಲ್ಲವರ ಮನಸ್ಸಿನ ತುಮುಲಗಳನ್ನು, ನೋವನ್ನು, ಆಕ್ರೋಶವನ್ನು ದೂರದಲ್ಲಿ ನಿಂತಿದ್ದ ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಪರಿಗಣಿಸಿದ್ದರು. ಆ ಕಾಲಕ್ಕೆ ಆಗಲೇಬೇಕಿದ್ದ ಬದಲಾವಣೆಯನ್ನು ತಂದರೆ ಮುಂದಿನ ದಿನಗಳಲ್ಲಿ ಸಮಾಜ ಎದುರಿಸಬೇಕಿದ್ದ ಸಂಘರ್ಷಗಳನ್ನು ಅವರು ಊಹಿಸಿದ್ದರು.

ಹಾಗಾಗಿ ಆ ಊರು ಒಂದು ಪ್ರಬಲ ವರ್ಗದ ಆಶಯಕ್ಕೆ ವಿರುದ್ಧವಾಗಿ ಬಿಲ್ಲವರನ್ನು ಅವರ ಆಶಯದಂತೆ ದೇವಸ್ಥಾನದ ಒಳ ಬಿಡಲೇಬೇಕು ಎಂಬ ನಿರ್ಧಾರಕ್ಕೆ ಅವರಿಬ್ಬರು ಬಂದಿದ್ದರು. ಅವರಿಬ್ಬರು ಅದೇ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ದಿ.ಗೋವಿಂದ ಭಟ್ಟರು ಮತ್ತು ಆ ಊರಿನ ನಿವೃತ್ತ ಶಿಕ್ಷಕ ಹೆರಂಜೆ ದಿನಕರ ಶೆಟ್ಟರು. ಇವರಿಬ್ಬರ ನಿಲುವಿಗೆ ಬೆಂಬಲವಾಗಿ ನಿಂತವರು ಗೋವಿಂದ ಭಟ್ಟರ ತಮ್ಮ ಕೃಷ್ಣ ಭಟ್ಟರು. ಆದರೆ ಇವರ ನಿರ್ಧಾರ ಆ ಕಾಲಕ್ಕೆ ಖಂಡಿತಾ ಸುಲಭದ ಕೆಲಸವಾಗಿರಲಿಲ್ಲ. ಯಾವಾಗ ಇವರಲ್ಲಿ ಈ ಆಲೋಚನೆ ಹೊಕ್ಕಿತೋ ಆ ದಿನದಿಂದಲೇ ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಕೆಲಸಗಳೂ ಆರಂಭವಾದವು. ಈ ತೀರ್ಮಾನವನ್ನು ವಿರೋಧಿಸಲು ನಿಂತಿದ್ದ ಊರಿನ ಪ್ರಭಾವಿಗಳನ್ನು ಮೊದಲು ನಿಭಾಯಿಸಬೇಕಿತ್ತು. ಯಾವುದೇ ವರ್ಗ ಸಂಘರ್ಷಕ್ಕೆ ದಾರಿಮಾಡದೇ ಅತ್ಯಂತ ಶಾಂತಿಯುತವಾಗಿ  ಕಾರ್ಯವನ್ನು ಮಾಡಬೇಕಿತ್ತು. ಬಹಳಷ್ಟು ದಿನಗಳ ಯೋಚನೆ, ಯೋಜನೆ ನಂತರ ಇವರಿಗೆ ಒಂದಂತೂ ಸ್ಪಷ್ಟವಾಯಿತು. ನಾವಾಗಿ ಬಿಲ್ಲವರನ್ನು ದೇವಸ್ಥಾನದೊಳಗೆ ಸೇರಿಸಿಕೊಳ್ಳದೇ ಹೋದರೆ ಸಂಘರ್ಷಗಳು ಪ್ರಾರಂಭವಾಗುತ್ತದೆ. ಊರಿಗೆ ಇದು ಖಂಡಿತಾ ಒಳ್ಳೆಯದಲ್ಲ. ಹಾಗಾಗಿ ಬಿಲ್ಲವ ಸಮುದಾಯದ ಪ್ರವೇಶ ದೇವಸ್ಥಾನದೊಳಗೆ ಆಗಲೇಬೇಕು.

ಕ್ರಮೇಣ ಇದನ್ನು ವಿರೋಧಿಸುವ ಮಂದಿ, ಪರಿಸ್ಥಿತಿಯ ತೀವ್ರತೆಯನ್ನು ಅರಿತು ನೇರವಾಗಿ ವಿರೋಸುವ ನಿರ್ಧಾರದಿಂದ ಹಿಂದೆ ಸರಿದ್ದಿದ್ದರು! ಆದರೆ ಇಡೀ ಪ್ರಕ್ರಿಯೆಯ ಸೂತ್ರಧಾರಿಗಳಾದ ಗೋವಿಂದ ಭಟ್ಟರು ಮತ್ತು ದಿನಕರ ಶೆಟ್ಟರ ವಿರುದ್ಧ ಷಡ್ಯಂತ್ರ್ಯ ಮಾಡಲು ಮುಂದಾದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣ ಕೊಡುವ ಭರವಸೆ ಕೊಟ್ಟವರಲ್ಲಿ ಒಂದಷ್ಟು ಮಂದಿ ದೇವಸ್ಥಾನದೊಳಗೆ ಬಿಲ್ಲವ ಪ್ರವೇಶದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ್ದರು. ಬಿಲ್ಲವ ಪ್ರವೇಶವನ್ನು ಮುಂದಿಟ್ಟುಕೊಂಡ ಅವರು ತಾವು ಕೊಡಲೊಪ್ಪಿದ ಮೊತ್ತವನ್ನು ನೀಡದೆ ಸಬೂಬುಗಳನ್ನು ಹೇಳಲಾರಂಭಿಸಿದರು. ಜೊತೆಗೆ ಉಳಿದವರನ್ನೂ ತಡೆದರು. ಆದರೆ ಭಟ್ಟರು ಮತ್ತು ಶೆಟ್ಟರ ಜೋಡಿ ಊರೂರು ತಿರುಗಿ ಹಣ ಹೊಂದಿಸತೊಡಗಿದರು.  ಒಂದಷ್ಟು ಸಾಲವೂ ಆಯಿತು. ಯಾವಾಗ ವಿರೋಧಿಗಳಿಗೆ ಇವರನ್ನು ಬಗ್ಗು ಬಡಿಯಲು ಬೇರೆ ಯಾವ ಮಾರ್ಗವೂ ಉಳಿಲಿಲ್ಲವೋ ಆಗ ಅವರಿಗಿದ್ದ ರಾಜಕೀಯ ಪ್ರಭಾವ ಬಳಸಿ ಗೋವಿಂದ ಭಟ್ಟ ಮತ್ತು ಶೆಟ್ಟರ ಆರ್ಥಿಕ ವ್ಯವಹಾರವೇ ಸರಿಯಿಲ್ಲ ಎಂಬ ಅಪಪ್ರಚಾರವನ್ನೂ ಮಾಡತೊಡಗಿದರು.


ಆ ಕ್ಷಣಕ್ಕೆ ಸಮಸ್ಯೆ ಪರಿಹಾರವಾದರೂ ಇವರು ಒಂದು ಪ್ರಬಲ ವರ್ಗದ ವಿರೋಧ ಮತ್ತು ಷಡ್ಯಂತ್ರಗಳನ್ನು ಸಹಿಸಿಕೊಂಡು ಬದುಕಬೇಕಾದ ಅನಿವಾರ್ಯತೆ ಉಂಟಾಯಿತು. ಸಮಾಜದಲ್ಲಿ ಬದಲಾವಣೆ ಅಥವಾ ಕ್ರಾಂತಿಯನ್ನು ಬಯಸುವವರು ಸ್ವತಃ ತಾವೇ ಅದನ್ನು ಮಾಡಲು ಮುಂದಾದಾಗ ಮಾತ್ರ ಅದು ಸಾಧ್ಯ. ಅದಕ್ಕೆ ಬೇಕಿರುವುದು ಒಂದಷ್ಟು ಮಾನಸಿಕ ಸಿದ್ಧತೆ ಮತ್ತು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಒಂದಷ್ಟು ಸಮಾನ ಮನಸ್ಕರು. ಸಮಾಜದಲ್ಲಿ ಶೋಷಣೆ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಇನ್ನೊಂದು ನಿರ್ದಿಷ್ಟ ಸಮುದಾಯವೇ ಮಾಡುತ್ತದೆ ಎನ್ನುವುದು ಕಮ್ಯುನಿಸ್ಟರ ಸಿದ್ಧ ಸಿದ್ಧಾಂತ ಅಷ್ಟೆ. ಅಸ್ಪೃಶ್ಯತೆಗೆ ಮೂಲ ಕಾರಣವೇ ಬ್ರಾಹ್ಮಣರು ಅನ್ನುವ ಜನ ಹೆರಂಜೆಯ ಗೋವಿಂದ ಭಟ್ಟರನ್ನು ಹೇಗೆ ವಿಶ್ಲೇಷಿಸುತ್ತಾರೆ? ಅದು ಜಾತಿ-ಪಂಥಕ್ಕೆ ಮೀರಿದ್ದು. ಅಲ್ಲಿ ಎಲ್ಲಾ ವರ್ಗದ ಜನರಿರುತ್ತಾರೆ. ಅದನ್ನು ಹೋಗಲಾಡಿಸಲೂ ಅದೇ ಮಾನಸಿಕತೆಯ ಜನರೂ ಇರುತ್ತಾರೆ. ಅಲ್ಲಿ ಯಾವುದೇ ಜಾತಿ, ರಾಜಕೀಯ ಸಿದ್ದಾಂತಗಳು ಇರುವುದಿಲ್ಲ. ಅವರಿಗಿರಬೇಕಾದುದು ಪರಿಶುದ್ಧ ಮಾನವ ಅಂತಃಕರಣ ಮಾತ್ರ.


ಬುಹುಶಃ ಅಂದು ಸಮಾಜ ಬಿಲ್ಲವರನ್ನು ಸಮಾಧಾನದಿಂದಲೇ ದೇವಸ್ಥಾದೊಳಗೆ ಬಿಟ್ಟುಕೊಳ್ಳದೇ ಹೋಗಿದ್ದರೆ ಮುಂದಿನ ದಿನಗಳಲ್ಲಿ ಸಂಘರ್ಷದ ಮೂಲಕವಾದರೂ ಅದು ಆಗಿಯೇ ಆಗುತ್ತಿತ್ತು. ಕಾರಣ ಅದು ಕಾಲದ ನಿಯಮ. ನಮ್ಮ ದೇಶದಲ್ಲಿ ಹೀಗೆ ಸಾಮರಸ್ಯದ ಮೂಲಕ ಅನೇಕ ಬದಲಾವಣೆಗಳು ಆಗಿವೆ. ವಿಶೇಷವೆಂದರೆ ಇವರಾರೂ ಸಾವರ್ಕರ್ ಅವರನ್ನು, ಅಂಬೇಡ್ಕರ್ ಅವರನ್ನು ಪುಟಗಟ್ಟಲೆ ಓದಿದವರಲ್ಲ. ಕಮ್ಯೂನಿಸ್ಟ್ ಕಾಮ್ರೇಡುಗಳೂ ಅಲ್ಲ. ಸಂಘದ ಶಾಖೆಗೆ ಹೋದವರೂ ಅಲ್ಲ. ಆದರೆ ಸಮಾಜದಲ್ಲಿ ಇದ್ದ ತಾರತಮ್ಯದ ಅರಿವು ಅವರಿಗೆ ಸಹಜವಾಗಿಯೇ ಇತ್ತು. ಅದನ್ನು ಸರಿಮಾಡಬೇಕು ಎಂದು ಅಂತರಂಗದ ದನಿಗೆ ಸ್ಪಂದಿಸಿದರು. ಇದನ್ನೇ ಇತ್ತೀಚೆಗೆ ಎನ್. ಮಹೇಶ್ ಅವರು ಹೇಳಿದ್ದು, ಭಾರತದ ಐಕ್ಯಮತ್ಯವನ್ನು ಒಡೆಯುವ ನಮ್ಮ ನಮ್ಮೊಳಗಿನ ಕಟ್ಟುಕಟ್ಟಲೆಗಳನ್ನು ಮೆಟ್ಟಿ ನಿಂತಾಗ ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್-ಸ್ವಾತಂತ್ರ್ಯ ವೀರ ಸಾವರ್ಕರ ಅವರು ಕಂಡ ಕನಸಿನ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ”

Leave a Reply

Your email address will not be published.

This site uses Akismet to reduce spam. Learn how your comment data is processed.