ಪರ್ಯಾಯ ಪೀಠವೇರಿ ಕಳೆದ 2 ವರ್ಷಗಳ ಕಾಲ ಉಡುಪಿ ಶ್ರೀಕೃಷ್ಣನ ಪೂಜಾ ಕೈಂಕರ್ಯದ ಜೊತೆ ಜೊತೆಗೆ ಸಮಾಜ ಜಾಗೃತಿ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಮಗ್ನರಾಗಿದ್ದ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ಈಶಪ್ರೀಯ ತೀರ್ಥರು ತಮ್ಮ ಯಾದಿ ಮುಗಿಸಿ,
ಜನವರಿ 18ರ ಮುಂಜಾನೆಯಲ್ಲಿ ಶ್ರೀಕೃಷ್ಣನ ಪೂಜೆಯ ಬಳಿಕ ಪರಂಪರೆಯಂತೆ ಕೃಷ್ಣಾಪುರ ಮಠದ ಯತಿಗಳಿಗೆ ಪೂಜಾದಿ ಮಠದ ಹೊಣೆಯನ್ನು ಹಸ್ತಾಂತರಿಸಿ ಸಮಾಜದ ಪ್ರತ್ಯಕ್ಷ ಕಾರ್ಯಕ್ಕೆ ಧಾವಿಸಿರುವುದು ವಿಶೇಷ.
ಮಧ್ಯಾಹ್ನ ಮಣಿಪಾಲದ ಸಮೀಪದ ನೇತಾಜಿ ನಗರದ ಉಪೇಕ್ಷಿತ ಕಾಲೋನಿಗೆ ಭೇಟಿ ನೀಡಿ ಮಾತಾ ಭಗಿನಿಯರು, ಸಜ್ಜನ ಬಂಧುಗಳು ಮತ್ತು ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಶ್ರೀಕೃಷ್ಣನ ನಾಮ ಜಪದ ಬೋಧನೆ ಮತ್ತು ಧಾರ್ಮಿಕ ಪ್ರವಚನ ನೀಡಿ, ಶ್ರೀಕೃಷ್ಣನ ಪ್ರಸಾದ ನೀಡಿದರು.
ಮನೆಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಈ ಮೂಲಕ ಉಡುಪಿ ಶ್ರೀ ಕೃಷ್ಣ ಮಠದ ಸಾಮಾಜಿಕ ಸ್ಪಂದನದ 500 ವರ್ಷಗಳ ಸಂಪ್ರದಾಯಕ್ಕೆ ಸಾಕ್ಷಿಯಾದರು.
ಅಲ್ಲಿನ ದಲಿತ ಕೇರಿಯಲ್ಲಿ ಮಾತನಾಡಿದ ಅವರು “ದೇವರು ಎಂದರೆ ನಿಮ್ಮ ಭಾವನೆ ಏನು ?
ಯಾರಿಗೂ ದೇವರ ಬಗ್ಗೆ ಪೂರ್ತಿ ತಿಳಿದಿಲ್ಲ.
ನಮ್ಮ ಜಗತ್ತಿನ ಅನೇಕ ಚಿಕ್ಕ ಸಂಗತಿಗಳೂ ನಮಗೆ ಪೂರ್ತಿ ತಿಳಿದಿಲ್ಲ. ಇಡಿ ಜಗತ್ತಿನ ಸೃಷ್ಠಿಕರ್ತ ಹೇಗೆ ಸಂಪೂರ್ಣ ತಿಳಿಯಲು ಸಾಧ್ಯ?
ದೇವರ ಬಗೆಗಿನ ಮೊದಲ ತಿಳುವಳಿಯೇ ಅವನು ಪೂರ್ಣ ತಿಳಿಯಲು ಸಾಧ್ಯವಾಗದವನು ಎಂಬುದು. ಸ್ವಲ್ಪ ಸ್ವಲ್ಪ ತಿಳಿಯುತ್ತಾ ದೇವರು ತಿಳಿಯುತ್ತಾ ಹೋಗುತ್ತಾನೆ. ಕೃಷ್ಣ ಎಂದರೆ ಕಷ್ಟದಿಂದ ಪರಿಶ್ರಮದಿಂದ ಲಭ್ಯವಾಗುವವನು,ನಮ್ಮ ಧಾರ್ಮಿಕ ಚಿಂತನೆಗಳನ್ನು ಮುಂದುವರೆಸೋಣ. ಹಿಂದು ಧರ್ಮದ ಜಾಗೃತಿ ಇಂದಿನ ಅತೀ ಅವಶ್ಯಕ ಸಂಗತಿ.” ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಂಘಚಾಲಕರಾದ ಡಾ. ನಾರಾಯಣ ಶೆಣೈ, ಜಿಲ್ಲಾ ಸಾಮರಸ್ಯ ಪ್ರಮುಖರಾದ ಶ್ರೀ ರವಿ ಅಲೆವೂರು, ಧರ್ಮ ಜಾಗರಣ ಪ್ರಮುಖರಾದ ಆಶೋಕ ಪರ್ಕಳ, ಸೇವಾ ಪ್ರಮುಖರಾದ ಭಾಸ್ಕರ್ ಮಣಿಪಾಲ ಉಪಸ್ಥಿತರಿದ್ದರು.