ರಣರಣ ಸುಡುವ ದೊಡ್ಡದಾದ ಮರಳುಗಾಡಿನ ಮದ್ಯೆ ನದಿಯೊಂದು ಹರಿದುಬಿಟ್ಟರೆ ಹೇಗಿರುತ್ತೋ ಹಾಗಿದೆ ಈಜಿಪ್ಟು.
ನಾಗರೀಕತೆಯ ತೊಟ್ಟಿಲು ಹಾಗೂ ಪುರಾತತ್ವ ಉತ್ಖನನಗಳ ನಾಡು ಈಜಿಪ್ಟಿಗೆ ಹೋಗಬೇಕೆಂಬ ಹಪಹಪಿ ಇದ್ದದ್ದಕ್ಕೆ ಹತ್ತು ಹಲವು ಕಾರಣಗಳು.
ಅಲ್ಲಿನ ಪಿರಮಿಡ್ಡುಗಳು,
ಕಾಲೇಜಿನ ದಿನಗಳಲ್ಲಿ ಗುಂಗು ಹಿಡಿಸಿದ್ದ “THE MUMMY,
THE MUMMY RETURNS ಹಾಗೂ SCORPION KING” ಸಿನೆಮಾಗಳು,
ಜಗತ್ತಿನ ಉದ್ದನೆಯ ನದಿ ನೈಲ್,
ಅಲೆಕ್ಸಾಂಡರ್ ಕಟ್ಟಿಸಿದ ಅಲೆಕ್ಸಾಂಡ್ರಿಯ,
ಸುಂದರಿ ಕ್ಲಿಯೋಪಾತ್ರ ಮತ್ತವಳ ಆ್ಯಂಟನಿ,
ಸುಯೇಝ್ ಕಾಲುವೆ,
ಟುಟ್-ಆಂಖ್-ಅಮುನ್ ನ ಮಮ್ಮಿ ಮತ್ತದರಲ್ಲಿ ಸಿಕ್ಕ ಅವನ ವಸ್ತುಗಳು
ಹೀಗೆ ಈಜಿಪ್ಟು, ಪ್ರಪಂಚದ ಮ್ಯಾಪು ನೋಡಿದಾಗಲೆಲ್ಲ ನನ್ನ ಕೈ ಬೀಸಿ ಕರೆಯುತ್ತಲೇ ಇತ್ತು.
ದೆಹಲಿಯ ಈಜಿಪ್ಟಿನ ಎಂಬಸ್ಸಿಯಿಂದ ನಮ್ಮ ಪಾಸುಪೋರ್ಟಿಗೆ ವೀಸಾದ ಸ್ಟಾಂಪು ಗುದ್ದಿಸಿಕೊಂಡು,ಅಕ್ಟೋಬರ್ ಹದಿನಾಲ್ಕರ ರಾತ್ರಿ ನಮ್ಮನ್ನೊತ್ತ ಏರ್ ಅರೇಬಿಯಾ ಗ್ರೀನ್ವಿಚ್ ಮೀನ್ ಟೈಮಿಗೆ ಹಿಮ್ಮುಖವಾಗಿ ಚಲಿಸುತ್ತ ಮಾರ್ಗ ಮಧ್ಯೆ ಶಾರ್ಜಾದಲ್ಲೊಂದಷ್ಟು ಹೊತ್ತು ಇಳಿಸಿ ಟ್ರಾನ್ಸಿಟ್ನಿಂದ ಮತ್ತೆ ಪಿರಮಿಡ್ಡುಗಳ ನಾಡಿನ ರಾಜಧಾನಿ ಕೈರೋಗೆ ಇಳಿಸಿದಾಗ ಸಂಜೆ ನಾಲ್ಕು ಗಂಟೆ.
ಭಾರತದಲ್ಲಾಗ ಸಂಜೆ ಏಳುವರೆ.
ಮೂರುವರೆ ಗಂಟೆಗಳ ಟೈಮ್ ಡಿಫರೆನ್ಸ್.
ಕೈರೋದ ಅದ್ಯಾವುದೋ ಕೆಟ್ಟ ಟರ್ಮಿನಲ್ನಲ್ಲಿ ಇಳಿದು,ಇಲ್ಲಿಂದ ಕೊಂಡೊಯ್ದಿದ್ದ ನಮ್ಮ RTPCRಗೆ ಕವಡೇ ಕಾಸಿನ ಬೆಲೆಯೂ ಸಿಗದೇ ಅಲ್ಲಿ ರೂಪಾಯಿ 5600(1100EGP)ಕೊಟ್ಟು, ಬರೋಬ್ಬರಿ ಮೂರು ಗಂಟೆ ಕಾದು, ರಿಪೋರ್ಟೂ ಇಲ್ಲದೇ,ಹಣ ಕಟ್ಟಿದ ಸ್ಲಿಪ್ಪೂ ಇಲ್ಲದೆ ಕೋವಿಡ್ ನೆಗೆಟಿವ್ ಎಂದು ಅಲ್ಲಿನ ಏರ್ಪೋರ್ಟು ಸಿಬ್ಬಂದಿಗಳು ನಮ್ಮನ್ನ ದೇಶದೊಳಗೆ ಬಿಟ್ಟುಕೊಳ್ಳುವಾಗ ಸಂಜೆ ಏಳುವರೆಯೇ ಆಗಿತ್ತು.
ನಮ್ಮ ಏರ್ಪೋರ್ಟ್ ಟೂರ್ ಗೈಡ್ ಸಮೀರ್ ಒಳ್ಳೆ ಸೂಟು ಬೂಟಿನಲ್ಲಿ ಬಂದು,
ನೈಟ್ ಪ್ಯಾಂಟು ಟೀ ಶರ್ಟು ತೊಟ್ಟಿದ್ದ ಹಿಂದಿನ ರಾತ್ರಿಯಿಂದ ಜರ್ನಿ ಮಾಡಿ ಹರಳೆಣ್ಣೆ ಕುಡಿದಂತಾಗಿದ್ದ ನಮ್ಮ ಮುಖಕ್ಕೆ ಸಲ್ಯೂಟ್ ಹೊಡೆದು ಮಾತನಾಡಿಸಲು ಶುರು ಮಾಡಿದಾಗ ನಮಗನ್ನಿಸಿದ್ದು ಆತ ಮಾತಾಡ್ತಿರೋದು ಯಾವ ಭಾಷೆ ಅಂತ.!
ನಿಮಿಷಗಳ ನಂತರ ಸುಧಾರಿಸಿಕೊಂಡು ನಾನು ಮತ್ತು ನನ್ನ ಟ್ರಾವೆಲಿಂಗ್ ಪಾರ್ಟ್ನರ್ ಸಂಕೇತ್ ಕಂಡುಕೊಂಡ ಸತ್ಯವೇನೆಂದರೆ ಅವನು ಮಾತನಾಡಿದ್ದು ಇಂಗ್ಲೀಷೇ ಅಂತ.
ಅವ ಇಂಗ್ಲೀಷನ್ನೇ ಕಂಪ್ಲೀಟು ಅರೇಬಿಕ್ ಸ್ಲಾಂಗ್(Slang) ನಲ್ಲಿ ಮಾತನಾಡ್ತಿದ್ದ.
ಏರ್ಪೋರ್ಟಿಂದ ಹೊರಬಂದು ಟ್ಯಾಕ್ಸಿಯಲ್ಲಿ ಕೂರುವವರೆಗೆ ಅಣ್ಣ ನೀವ್ ಮಾತಾಡಿ,ನೀವ್ ಮಾತಾಡಿ ಅಂತ ನಾವಿಬ್ರು ಪರಸ್ಪರ ಕನ್ನಡದಲ್ಲೇ ಮಾತಾಕ್ಕೊಂಡ್ವಿ.
ಹೀಗಿತ್ತು “ಅರೇಬಿಯನ್ ರಿಪಬ್ಲಿಕ್ ಆಫ್ ಈಜಿಪ್ಟಿ”ಗೆ ನಮ್ಮ ಎಂಟ್ರಿ.
ನಮ್ಮನ್ನೊತ್ತ ಟ್ಯಾಕ್ಸಿ ಕೈರೋದ ಸಿರಿವಂತ ಏರಿಯಾ “ಝಮಾಲಿಕ್” ಗೆ ಸಾಗುವಾಗ ಕತ್ತಲಿನಲ್ಲಿ ಇಡೀ ನಗರ ಪ್ರಕಾಶಮಾನವಾಗಿ ಕಂಗೊಳಿಸುತ್ತಿತ್ತು.
ಆ ಕ್ಷಣಕ್ಕೆ ಏರ್ಪೋರ್ಟಿನ ಪ್ರಹಸನಗಳೆಲ್ಲ ಮರೆತು ಹೋದವು.
ಅಲ್ಲಿನ ಕಟ್ಟಡಗಳ ವಿನ್ಯಾಸಗಳು ಅದಕ್ಕಿಂತ ಹೆಚ್ಚಾಗಿ ಲೈಟುಗಳನ್ನು ಬಳಸಿ ಸ್ಟ್ರಕ್ಟರುಗಳನ್ನು ಎಷ್ಟು ಸಿರಿವಂತಿಕೆಯಿಂದ ತೋರಿಸಬಹುದೆಂಬುದಕ್ಕೆ ಕೈರೋ ನಗರ ರಾತ್ರಿಯಲ್ಲಿ ಕಂಗೊಳಿಸುವ ಬಗೆಯೇ ಸಾಕ್ಷಿ.
ಮೊದಲು ಹೋಗಿದ್ದು ಹೊಟೇಲ್ “Steigenberger El Tahrir” ಗೆ.
ಚೆಕಿನ್ನು ಪ್ರೋಸೆಸ್ಸು ಮುಗಿಸಿ ಹಸಿದು ಹೋಗಿದ್ದ ಹೊಟ್ಟೆಗೆ KFC ಯ ಫುಡ್ಡು ಹಾಕಿ ರಾತ್ರಿ ಹನ್ನೆರಡು ಗಂಟೆಯವರೆಗೆ ಸುತ್ತಾಡಿದ್ವಿ.
ಎಲ್ ತಹ್ರೀರ್ ಸ್ವೇರ್ ಸುತ್ತ ಮುತ್ತಲಿನ ಬಿಲ್ಡಿಂಗುಗಳು ರಾತ್ರಿ ನೋಡೋಕೆ ಸೂಪರ್.
ಕೈರೋದ ರಾತ್ರಿ ಲೈಫು ನಮ್ಮ ಕೋರಮಂಗಲದ ನೈಟ್ ಲೈಫ್ ಹಾಗೇ ಅನ್ನಿಸ್ತು.
ಎಲ್ಲೆಡೆ ಮೈ ಕೈ ತುಂಬಿಕೊಂಡಿದ್ದ ಪರ್ಸನಾಲಿಟಿಗಳೇ.
ವುಮೆನ್ಸ ಆರ್ ವೆರಿ Pretty.
ಕಲರ್ರು ಅಸ್ಟೆ ವೈಟು.
ಅಲ್ಲೊಂದು ಇಲ್ಲೊಂದು ಬ್ಲಾಕ್ಸು.
ಅಲ್ಲಲ್ಲಿ ಫಾರೀನರ್ಸುಗಳು,
ಹೂ ಮಾರೋರೂ,ಬೆಗ್ಗರ್ಸು,
ಟಾಂಗಾ ಗಾಡಿಗಳು,
ಟೋಟಲೀ ಎ ಮಿಕ್ಸೆಡ್ ಸೊಸೈಟಿ.
ಮೂಲತಃ ಈಜಿಪ್ಟು 90% ಮುಸ್ಲೀಮರನ್ನೂ ಏಳೆಂಟು ಪರ್ಸೆಂಟು ಕ್ರಿಶ್ಚಿಯನ್ನರನ್ನೂ ಒಳಗೊಂಡಿರುವ,
ಇಸ್ರೇಲು,ಸೂಡಾನು,ಲಿಬಿಯಾದೊಂದಿಗೆ ಗಡಿ ಹಂಚಿಕೊಂಡಿರುವ,
ಪ್ರಸ್ತುತ ಮಿಲಿಟರಿ ಆಡಳಿತದಲ್ಲಿರುವ,
ಆಪ್ರಿಕಾ ಖಂಡದಲ್ಲಿದ್ದರೂ ಅರೇಬಿಯನ್ ಕಲ್ಚರನ್ನೇ ಅಳವಡಿಸಿಕೊಂಡಿರುವ ದೇಶ.
ಟೂರಿಸಂ,
ಕ್ರೂಡ್ ಆಯಿಲ್,
ಮೈನಿಂಗ್
ಸುಯೇಝ್ ಕ್ಯನಾಲ್ ಟ್ಯಾಕ್ಸು ಮತ್ತು ನೈಲ್ ದಂಡೆಯ ಅಗ್ರಿಕಲ್ಚರ್ ಮೇಲೆ ಡಿಪೆಂಡೆಂಟ್ ಆಗಿರುವ ಸಹಾರ ಮರುಭೂಮಿಯ ಒಂದು ಭಾಗ ಈಜಿಪ್ಟು.
ಹತ್ತು ಕೋಟಿ ಜನಸಂಖ್ಯೆಯ ಈಜಿಪ್ಟಿನ 95% ಜನರು ಬದುಕುತ್ತಿರೋದು ಜೀವನದಿ ನೈಲ್ ನ ಎರಡೂ ಬದಿಗಳಲ್ಲಿಯೇ.
ಈಜಿಪ್ಟಿನಲ್ಲಿ ನನ್ನ ಮೊದಲನೇ ಸೂರ್ಯೋದಯವನ್ನು ಸವಿಯಲು ಬೆಳಗ್ಗೆ ಐದುವರೆಗೆ ಎದ್ದು ಕೂತಿದ್ದೆ.
ಈಜಿಪ್ಟಿನ Mythologyಗಳ ಪ್ರಕಾರ ಶಕ್ತಿಶಾಲಿ ದೇವರು ಅಂದರೆ ಸೂರ್ಯ.
ಪ್ರಾಚೀನ ಈಜಿಪ್ಟಿಯನ್ನರು ಸೂರ್ಯನನ್ನು ಕರೆಯುತ್ತಿದ್ದದ್ದು “ರಾ” ಎಂದು.
ಹೊಟೇಲಿನಿಂದ ಏಳುನೂರು ಮೀಟರು ದೂರವಿದ್ದ Qasar El Nile Bridge ಬ್ರಿಡ್ಜಿನ ಮೇಲಿಂದ ಸೂರ್ಯೋದಯದೊಂದಿಗೆ ಮೊದಲ ಬಾರಿ ನೈಲ್ ನ ದರುಶನವಾಯಿತು.
Its All Trash ಅಂತಾರಲ ಹಾಗೆ ಒಂದಷ್ಟು ಕೊಳಚೆಯನ್ನೇ ಹೊದ್ದು ಮಲಗಿದ್ದ ನೈಲನ್ನೊಮ್ಮೆ ನೋಡಿ ಇದೇನ ನೈಲು….!? ಅಂದುಕೊಂಡು ಬೇಸರಮಾಡಿಕೊಂಡೆ.
ರಾತ್ರಿ ಲೈಟು ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಕೈರೋ ನಗರ ಬೆಳಗಾದಂತೆ ಸಪ್ಪೆಯೆನಿಸತೊಡಗಿತು.
ಬಹುತೇಕ ಹಳೆಯ ಬಿಲ್ಡಿಂಗುಗಳು ರಾತ್ರಿ ವೇಳೆಯಲ್ಲಿ ಬೆಳಕಿನ ಮೇಕಪ್ಪು ಮಾಡಿಕೊಂಡು ಹಗಲು ಒರಿಜಿನಲ್ಲು ಬಣ್ಣ ಬಯಲಾದಂತೆನಿಸಿತು.
ಸೇಮ್ ಕೆಟಗೆರಿಯ ನನ್ನ ಎಷ್ಟೋ ಫೇಸ್ಬುಕ್, ಇನ್ಸ್ಟಾಗ್ರಾಮು ಗೆಳೆಯ ಗೆಳತಿಯರೆಲ್ಲ ಒಮ್ಮೆ ನೆನಪಾಗಿ ಹೋದರು.
ವಾಪಾಸು ಹೊಟೇಲಿಗೆ ಬ್ರೇಕ್ ಫಾಸ್ಟಿಗೆ ಬಂದವನಿಗೆ ಬ್ರೇಕ್ ಫಾಸ್ಟಿನ ಅದ್ಭುತ ಲೋಕವೊಂದವನ್ನು ತೆರೆದಿಟ್ಟಿತ್ತು ಸ್ಟೀಜಿನ್ ಬರ್ಗರ್ ಎಲ್ ತಹ್ರೀರ್ ಹೊಟೇಲ್ಲು.
ಅರೇಬಿಯನ್ ಕಮ್ ಯುರೋಪಿಯನ್ ಮಿಕ್ಸ್ ಡಿಸೈನಿದ್ದಂತಿತ್ತು ಬೆಳಗ್ಗಿನ ಉಪಹಾರ.
ಬಹುತೇಕ ನಾವು ಉಳಿದ ಕೈರೋದ Ramses Hilton,
ಅಲೆಕ್ಸಾಂಡ್ರಿಯಾದ Sun Rise Alex,
ಆಸ್ವಾನಿನ Hotel Movenpick Hotel ಗಳಲ್ಲಿ ನಾನು ಗಮನಿಸಿದಂತೆ
ಅಲ್ಲಿನ ಬ್ರೆಡ್ಡುಗಳ ಡಿಸೈನ್ ಅಂತೂ ವಂಡರ್ ಫುಲ್.
ಕೆಲವುಗಳಿಗೆ ಎಳ್ಳನ್ನು(Sesame) ಮೇಲೆ ಉದುರಿಸಲಾಗಿತ್ತು.
ಬೀಫ್ ಈಸ್ ವೆರಿ ಕಾಮನ್ ಇನ್ ಈಜಿಪ್ಟ್.
ನಾವು ಅವರ ಅರೇಬಿಕ್ ಸ್ಲಾಂಗ್ ನ ಇಂಗ್ಲೀಷ್ನೊಂದಿಗೆ ಹೊಡೆದಾಡೋದೇ ಬೇಡ ಎಂದು ಶಸ್ತ್ರ ತ್ಯಜಿಸಿ ನಿಂತಿದ್ದರಿಂದ KEY ವರ್ಡ್ಸ್ ಮಾತ್ರ ಬಳಸೋ ಸ್ರಾಟರ್ಜಿ ಮಾಡಿಕೊಂಡಿದ್ವಿ.
ಮೊದಲೇ “ನೋ ಬೀಫ್” ಎಂದು ಹೇಳುತ್ತಾ, ಬೇಕಾದ ಐಟಮ್ಮುಗಳನ್ನೆಲ್ಲ ಹಾಕಿಸಿಕೊಂಡು ಚೆನ್ನಾಗಿ ಬ್ಯಾಟಿಂಗ್ ಮಾಡ್ತಿದ್ವಿ.
ವಿವಿಧ ಆಕಾರ ಮತ್ತು ಮೂಲದ ಬ್ರೆಡ್ಡುಗಳು,
ತರಕಾರಿ,ಸಲಾಡ್,ಹಣ್ಣುಗಳು,
ರಿಚ್ ಡೆಸರ್ಟುಗಳು,ಆಲಿವ್,
ಬೆರ್ರಿಗಳು ಎಲ್ಲ ಸೂಪರ್ರೆ.
ಜೇನಿನ ಅರಿಯನ್ನೇ(Raw Honey Comb)ಕೆಲವೆಡೆ ಇಟ್ಟಿದ್ದರು.
ಆದರೆ ನೀರು ಕೊಡೋಕೆ ಮಾತ್ರ ಹಿಂದೆ ಮುಂದೆ ನೋಡುತ್ತಿದ್ದರು.
ನಾವು ಫರ್ಸ್ಟು ಹೋಗಿ ಕೇಳ್ತಾ ಇದ್ದಿದ್ದೆ ಹಾಟ್ ವಾಟರ್ ವಿತ್ ಲೆಮನ್.
ಈಜಿಪ್ಟಿನಲ್ಲಿ ಪೆಟ್ರೋಲು ಮತ್ತು ನೀರಿನ ಬೆಲೆ ಆಲ್ಮೋಸ್ಟು ಸೇಮ್.
ಒಂದು ಲೀಟರ್ ಪೆಟ್ರೋಲಿಗೆ 8.5 EGP(Egyptian Pound).
ಲೀಟರ್ ನೀರಿಗೆ ಆರರಿಂದ ಏಳು EGP.
ಒಂದು EGP ಎಂದರೆ ಭಾರತೀಯ ಲೆಕ್ಕದಲ್ಲಿ ಸುಮಾರು ಐದು ರೂಪಾಯಿ.
ಕೆಲವು ಕಡೆ EGP ಬದಲು LE ಎಂದು ಬರೆದಿರುತ್ತಾರೆ.
ಅದು ಫ್ರೆಂಚ್ ನಲ್ಲಿ Livre Egyptienne ಎಂದು.
ಫ್ರಾನ್ಸ್ ನ ನೆಪೋಲಿಯನ್ ಸೇರಿದಂತೆ,ಗ್ರೀಕರು,ಬ್ರಿಟೀಷರು ಒಂದೊಮ್ಮೆ ಈಜಿಪ್ಟನ್ನು ಆಳಿದವರೆ.
ಇವೆಲ್ಲ ಅವುಗಳ ಇಂಪ್ಯಾಕ್ಟು.
ಬ್ರೆಕ್ ಫಾಸ್ಟ್ ಮಾಡುತ್ತಿದ್ದಾಗಲೇ ಒಂದಷ್ಟು ನಮ್ಮ ಪುಣೆಯ ಮುಸ್ಲಿಂ ಹುಡುಗ್ರು ಸಿಕ್ಕಿದ್ರು.
ಭಯ್ಯಾ ಶರಮ್-ಅಲ್-ಶೇಖ್(A Coastal City of Red sea in Egypt) ಮಿಸ್ ನಹೀ ಕರ್ನೇ ಕಾ.
ರಷ್ಯನ್ ಬೇಬ್ಸ್ ಸೇ ಭರಾ ಹುವಾ ಹೇ.
ಬೀಚ್ ಸೈಡ್ ಹೊಟೇಲ್ ಮೇ ಸಬ್ ವೋಹೀ ಹೆ ಅಂತೇಳಿ ತಲೆಗ್ ಹುಳಾ ಬಿಟ್ಟೋದ್ರು.
ಅಯ್ಯೋ ದೇವ್ರೆ ಹುಡ್ಗೀರ್ನುಡ್ಕೊಂಡು ಈ ಅಸಾಮಿಗಳು ಪೂನಾದಿಂದ ಈಜಿಪ್ಟ್ ಅಂತಾ ದೇಶಕ್ಕೂ ಬಂದಾವ್ರಲ ಅನ್ಕೊಂಡೆ.
ಮೊದಲ್ನೇ ದಿನ ಬರೀ ಕೈರೋ ನಗರ ಸುತ್ತಿದ್ದು.
ಊಬರ್ ಇರೋದ್ರಿಂದ ಸುತ್ತೋದು ಈಸಿ.
ಊಬರ್ ಬುಕ್ ಮಾಡಿದ್ಕೂಡ್ಲೆ ಗಾಡಿ ನಂಬರ್ ತೋರ್ಸೋದು.
ಆದ್ರೆ ಅದು ಅರೇಬಿಕ್ ಅಂಕಿಗಳಾದ್ದರಿಂದ ಟ್ಯಾಕ್ಸಿ ಬಂದಾಗ ಅರೇಬಿಕ್ ಅಂಕಿಗಳನ್ನ ನಮ್ ಮೊಬೈಲ್ ಆ್ಯಪ್ ನಲ್ಲಿ ನೋಡ್ಕೊಂಡು ಶೇಪ್ ಹಂಗೇ ಇದಾವ ಅಂತ ಹುಡ್ಕೋದೇ ಒಂದ್ ಮಜಾ ಆಗ್ತಿತ್ತು.
ಮಾಲು,ಬೀದಿಗಳನ್ನೆಲ್ಲ ಸುತ್ತಿದ ಮೇಲೆ ಅನಿಸಿದ್ದು ಮತ್ತದೇ ಮಿಕ್ಸೆಡ್ ಸೊಸೈಟಿ ಅಂತ.
ಒಂದಷ್ಟು ಹೈ ಎಂಡ್ ಜನ,ಮಿಡ್ಲು ಕ್ಲಾಸು,ಪೂರ್ಸ್,ಬೆಗ್ಗರ್ಸ್ ವರೆಗೆ ಎಲ್ಲವೂ ಆಧುನಿಕ ಈಜಿಪ್ಟಿನ ಭಾಗ.
ಅಲ್ಲಲ್ಲಿ ಕಸ,ಚರಂಡಿ,ನೊಣಗಳು.
ಇತಿಹಾಸಕಾರರು ಹೇಳಿರುವ ಪ್ರಾಚೀನ ಈಜಿಪ್ಟಿನ ವೈಭವ ಎಲ್ಲಿ ಆಧುನಿಕ ಈಜಿಪ್ಟ್ ಎಲ್ಲಿ?
ಅಗತ್ಯಕ್ಕಿಂತ ಹೆಚ್ಚಿನ ಶೂ,ಚಪ್ಪಲಿ ಅಂಗಡಿಗಳು ಕೈರೋದ ಎಲ್ಲೆಡೆ ಇದ್ದಂಗಿತ್ತು.
ರಸ್ತೆ ಬದಿಯಲ್ಲಿನ ಪರೋಟ ಮಾರುವವನು,
ಅದ್ಯಾವುದೋ ಬೇಕರಿಗೆ ಮುಗಿಬಿದ್ದಿದ್ದ ಜನ,
ಬೀಫ್ ಮತ್ತು ಚಿಕನ್ ರೋಲ್ ಅಂಗಡಿಗಳು ಕೈರೋದ ಏರಿಯಾವೊಂದರ ಅನುಭವಗಳು.
ಕೈರೋ ಟವರ್ ನಗರದ ಮತ್ತೊಂದು ಅಟ್ರಾಕ್ಷನ್ನು.
ಅದು ಈಜಿಪ್ಟಿನ ಅತೀ ಎತ್ತರದ(614 ಅಡಿ)
ಸ್ಟ್ರಕ್ಚರ್ರು.
ಸನ್ ಸೆಟ್ ವರೆಗೆ ಅಲ್ಲೇ ಇದ್ದು ಸಂಪೂರ್ಣ ಕೈರೋ ವನ್ನು ಈ ಹೈಟಿಂದ ನೋಡೋ ಅನುಭವ ಮಸ್ತು.
ಅದುನೂ ಕತ್ತಲಾಗಿ ಲೈಟ್ ಆನಾದ್ರೆ ಸಾಕು ಕೈರೋ ನಳನಳಿಸಿ ಬಿಡುತ್ತೆ.
ಗ್ರಾಂಡ್ ನೈಲ್ ಟವರ್ ಅಂತ ಮತ್ತೊಂದು ಟವರ್ರು ಕೈರೋದಲ್ಲಿದೆ.
ಅಲ್ಲೊಂದು Revolving ರೆಸ್ಟೋರೆಂಟ್ ಕೂಡ ಇದೆ.
ಕೂತಲ್ಲಿಯೇ ನಿಮಗದು ಸಿಟಿಯ 360 ಡಿಗ್ರಿಯನ್ನೂ ನಿಧಾನಕ್ಕೆ ತಿರುಗುತ್ತ ತೋರಿಸುತ್ತೆ.
ಜೆಟ್ ಲ್ಯಾಗನ್ನೊಂದಷ್ಟು ಕೈರೋದಲ್ಲಿ ಸರಿಮಾಡಿಕೊಂಡು ಮರುದಿನ ನಾವು ಸಾಗಿದ್ದು ಅಲೆಕ್ಸಾಂಡ್ರಿಯ ಕಡೆಗೆ.
ನಮಗೆ ಸಿಕ್ಕ ಅಂದಿನ ಡ್ರೈವರ್ ಇಬ್ರಾಹಿಂ ಅಂತ.
ನೇರ ನುಡಿಯ ಗುಡ್ ಹಾರ್ಟೆಡ್ ಮನುಷ್ಯ.
ಎಲ್ಲೂ ಯಾಮಾರಿಸೋದಾಗಲಿ,ಸುಳ್ಳು ಹೇಳೋದಾಗಲಿ ಇರಲಿಲ್ಲ.
ಆದರೆ ಅವನ ಜೊತೆಗೊಬ್ಬ ಗೈಡ್ ಬಂದಿದ್ದ.
ಮೊಕತ್ತರ್ ಅಂತ ಪಕ್ಕಾ 420.
ಇವ್ರಿಗೆ ಎಲ್ಲೆಲ್ ಯಾಮಾರಿಸ್ಬೋದು ಅಂತಾನೆ ಇದ್ದಂಗಿತ್ತು ಅವ್ನ ಲೆಕ್ಕಾಚಾರ.
ಪರಿಚಯದವರ ಅಂಗಡಿಗೇ ಮೊದಲೇ ಬುಕ್ ಮಾಡಿಕೊಂಡು ಹೋಗಿ ಅದು ತಗೊಳಿ ಇದು ತಗೊಳಿ ಅಂತ ಪುಸಲಾಯಿಸುತ್ತಿದ್ದ.
ಅದ್ಯಾವ್ದೋ ಪರ್ಫ್ಯೂಮ್ ಅಂಗಡಿಗೆ ಕರ್ಕೊಂಡೋಗಿ Perfume Museum ಅಂತ ಬುರುಡೆ ಬಿಡ್ತಿದ್ದ.
ನಾನು ಸಂಕೇತ್ ಒಂದೈವತ್ ತರದ್ ಟ್ರೈ ಮಾಡಿ Its Not Good ಅಂತೇಳಿ ಅವ್ರು ಕೊಟ್ಟ ಪುಗ್ಸಟ್ಟೆ ಟೀನೂ ಕುಡ್ದು ಎದ್ ಬಂದ್ಬಿಟ್ವಿ.
ಮೊಕತ್ತರ್ ಮುಖ ಒಳ್ಳೆ ಮೂತಿಚಿಕ್ಕನ್ ತರ ಆಗಿತ್ತು.
ನಾವು ಒಳಗೊಳಗೆ ಗೊಳ್ ಅಂತ ನಕ್ಕೊತಾ ಇದ್ವಿ.
ಅಲೆಕ್ಸಾಂಡ್ರಿಯ ಅಂದೊಡನೆ ಮೊದಲಿಗೆ ನೆನಪಾಗೋದು ಅವನು.
ಕೇವಲ ಇಪ್ಪತ್ತೊಂದಕ್ಕೆ ಜಗತ್ತನ್ನೇ ಗೆಲ್ಲಬೇಕೆಂಬ ಹುಚ್ಚು ಆಸೆಯನ್ನಿಟ್ಟುಕೊಂಡು ಹೊರಟ ಹುಂಬ ದೊರೆ ಮ್ಯಾಸಿಡೋನಿಯಾದ ಅಲೆಕ್ಸಾಂಡರ್ ದಿ ಗ್ರೇಟ್.
ಯಾರು ಒಪ್ಪಲಿ ಬಿಡಲಿ ಇತಿಹಾಸಕಾರರು ಬರೆದಿರುವ ಇತಿಹಾಸ ನಿಜವೇ ಆಗಿದ್ದಲ್ಲಿ ಆತ ನಿಜಕ್ಕೂ ಗ್ರೇಟೆ.
ಆತ ಅಂದು ಜಗತ್ತಿಗೆ ತಿಳಿದಿದ್ದ ಪ್ರಪಂಚದ(Known World to Them) ಬಹುತೇಕ ಭಾಗವನ್ನು ಗೆದ್ದಿದ್ದ.
ಆತ ಮೊದಲು ಮಟ್ಟ ಹಾಕಿದ್ದು ತನಗಿಂತ ಸೈನ್ಯದಲ್ಲಿ ನಾಲ್ಕು ಪಟ್ಟು ದೊಡ್ಡದಿದ್ದ ಹಾಗೂ ಭೂಭಾಗದಲ್ಲಿ ಹತ್ತಾರು ಪಟ್ಟ ದೊಡ್ಡದಿದ್ದ ಪರ್ಶಿಯಾದ ದೊರೆ ಮೂರನೇ ಡೇರಿಯಸ್ ನನ್ನು.
ಎರಡು ಯುದ್ಧಗಳಲ್ಲೂ ಸೋತ ಡೇರಿಯಸ್ ಯುಧ್ದ ಭೂಮಿಯಿಂದ ಓಡಿಹೋಗುವ ಹಾಗೆ ಮಾಡಿದ್ದು 23 ರ ಅಲೆಕ್ಸಾಂಡರ್.
ಪರ್ಷಿಯಾದ ಒಂದು ಭಾಗ(ಈಗಿನ ಟರ್ಕಿ) ಗೆದ್ದ ಅಲೆಕ್ಸಾಂಡರ್ ದಕ್ಷಿಣಕ್ಕೆ ಚಲಿಸುತ್ತಾ ಇಂದಿನ ಜೋರ್ಡಾನ್,ಸಿರಿಯಾ,ಇಸ್ರೆಲನ್ನು ದಾಟಿ ಬರುವುದೇ ಈಜಿಪ್ಟ್ ನ ಸಮುದ್ರ ತಟಕ್ಕೆ.
ಹಾಗೆ ಬಂದವನು ಈಜಿಪ್ಟಿನ ವಿಸ್ಮಯಗಳಿಗೆ ಹಾಗೂ ಭೌಗೋಳಿಕ ಅವಶ್ಯಕತೆಗಳಿಗಾಗಿ(To Command over Entire Mediterranean) ಮನಸೋತು ಅಲ್ಲೇ ಒಂದಷ್ಟು ತಿಂಗಳು ಕಳೆಯುತ್ತಾನೆ.
ಆಗ ಆತ ಕಟ್ಟಿಸಿದ ನೂತನ ನಗರವೇ ಅಲೆಕ್ಸಾಂಡ್ರಿಯ.
ಮೆಡಿಟರೇನಿಯನ್ ಸಮುದ್ರದ ತಟದಲ್ಲಿರುವ ಈ ನಗರ ಕೈರೋಗಿಂತ ತಂಪಾಗಿಯೂ,POSH ಆಗಿಯೂ,ಕ್ಲೀನಾಗಿಯೂ ಇದೆ.
ಜಗತ್ತಿನ ಅತೀ ದೊಡ್ಡ ಲೈಬ್ರರಿ ಅಲೆಕ್ಸಾಂಡ್ರಿಯಾ ಬಿಬ್ಲಿಯೋಥಿಕ ಅದರ ಹಿಸ್ಟರಿ,
ಅಂದು ಅಲೆಕ್ಸಾಂಡರ್ ಕಟ್ಟಿಸಿದ್ದ ಲೈಟ್ ಹೌಸ್ ಮುರಿದು ಮುಳುಗಿ ಹೋದ ಜಾಗ,
ಸ್ಟಾನ್ಲೆ ಬ್ರಿಡ್ಜು,
ಕಾಪ್ಟಿಕ್ ಚರ್ಚುಗಳು,
ಮಸೀದಿಗಳು,
ಚರ್ಚುಗಳ ಮೇಲಿನ ಅರೇಬಿಕ್ ಕೆತ್ತನೆಗಳು,ಚರ್ಚ್ ಗೆ ವಿಪರೀತ ಪೊಲೀಸ್ ಭದ್ರತೆ,ಎಲ್ಲವೂ ಸರಿ ಇಲ್ಲ ಎಂದು ಹೇಳುವಂತಿತ್ತು.
ಸಮುದ್ರಕ್ಕೆ ಹೊಂದಿಕೊಂಡಂತಿರುವ ಈಜಿಪ್ಟಿನ ಕೊನೆಯ ರಾಜನ ಅರಮನೆ ಇದೀಗ ಮಿಲಿಟರಿ ಕಂಟ್ರೋಲಿನಲ್ಲಿದೆ.
ಮೆಡಿಟರೇನಿಯನ್ ನ ಮೊದಲ ಗಾಳಿ,ಅದರ ಮೊದಲ ಸ್ಪರ್ಶ,ಅಲ್ಲಿನ ಇತಿಹಾಸಗಳೊಂದೊಂದೇ ಮನದಂಗಳದಲ್ಲಿ ತೇಲಿಹೋಗುತ್ತಿದ್ದವು.
ಇಲ್ಲೇ ಅಲ್ಲವಾ ಕ್ಲಿಯೋಪಾತ್ರ ಒಂದು ದಿನ ಬದುಕಿ, ಆಳಿ, ಮೆರೆದು,ಮಡಿದದ್ದು?
ಇಲ್ಲೇ ಅಲ್ಲವಾ ಅಲೆಕ್ಸಾಂಡರ್ ಮತ್ತವನ ಕುದುರೆಗಳು ಕೆನೆದದ್ದು?
ಜೂಲಿಯಸ್ ಸೀಝರ್,
ಟಾಲೆಮಿಗಳ ಇತಿಹಾಸವನ್ನೇ ಮೆಲುಕು ಹಾಕುತ್ತಾ ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ಅಲೆಕ್ಸಾಂಡ್ರಿಯಾ ಬಗ್ಗೆ ಒಂದು ಪೋಸ್ಟು ಬರೆದೇ ಅಂದು ರಾತ್ರಿ ಮಲಗಿದ್ದು.
ಮನೆಯಿಂದ ಹೋಗುವಾಗ ನಮ್ಮ ಮಗ್ಗಲಮಕ್ಕಿಯ ಗದ್ದೆ ಬಯಲಿನಲ್ಲಿ ಹರಿದು ಹೋಗುವ ಹೇಮಾವತಿ ನದಿಯಿಂದ ಅರ್ಧ ಲೀಟರಿನಷ್ಟು ನೀರನ್ನು ತೆಗೆದುಕೊಂಡು ಹೋಗಿದ್ದೆ.
ಅದನ್ನು ನೈಲ್ ನದಿ ಬಂದು ಸೇರುವ ಮೆಡಿಟರೇನಿಯನ್ಗೆ ಚೆಲ್ಲಿದ್ದೆ.
ಕೆಮಿಕಲಿ ನೀರು ಹೈಡ್ರೋಜನ್ ನ ಎರಡು ಆಕ್ಸಿಜನ್ ನ ಒಂದು ಕಣವಿರಬಹುದಷ್ಟೆ.
ಆದರೆ ಹೇಮೆಯ ಬಗ್ಗೆ ನನಗಿರುವ ಭಾವನಾತ್ಮಕತೆಯೇ ಬೇರೆ.
ಹೇಮೆ ಮೂಡಿಗೆರೆಯಲ್ಲಿ ಹುಟ್ಟಿ, ಹಾಸನ ದಾಟಿ, ಕಾವೇರಿಯೊಂದಿಗೆ ಬೆರೆತು, ತಮಿಳುನಾಡಿಗೆ ಹೋಗಿ ಹೋದಲ್ಲೆಲ್ಲ ಜನ,ಜಾನುವಾರುಗಳ ದಾಹ ನೀಗಿಸಿ,ರೈತರ ಜೀವಜಲವಾದ ನಂತರವೂ ಮಿಕ್ಕಿ ಬಂಗಾಲಕೊಲ್ಲಿ ಸೇರಿ ಹಿಂದು ಮಹಾಸಾಗರ ಬೆರೆತು, ಪೆಸಿಫಿಕ್ ಅಟ್ಲಾಂಟಿಕ್ ಗಳ ಗುದ್ದಾಟದೊಳಗೆ ಮೆಡಿಟರೇನಿಯನ್ ಮುಟ್ಟಿದ್ದಳೋ ಇಲ್ಲವೋ ಗೊತ್ತಿಲ್ಲ.
ಆದರೆ ನಾನಂತೂ ನೇರವಾಗಿ ಆಕೆಯನ್ನ ಮೆಡಿಟರೇನಿಯನ್ನಿಗೆ ಸೇರಿಸಿ ಬಂದು ಬಿಟ್ಟೆ.
ಅದೊಂದು ಭಾವ ಬೆಸುಗೆ.
ಬೆಳಗೆದ್ದು ಹೊರಟದ್ದು ಪ್ರಾಚೀನ ಜಗತ್ತಿನ ವಿಸ್ಮಯವೊಂದಕ್ಕೆ.
ಅದು ಗಿಝಾದ ಪಿರಮಿಡ್ಡುಗಳು.
ಅಲೆಕ್ಸಾಂಡ್ರಿಯಾದಿಂದ 222 ಕಿ.ಮೀ ದೂರದ ಗಿಝಾಕ್ಕೆ ಇಬ್ರಾಹಿಂ ಅವನ Mitsubishiಯಲ್ಲಿ ಮೂರು ಗಂಟೆಯಲ್ಲಿ ತಲುಪಿಸಿದ್ದ.
ಈ ನಡುವೆ ದಾರಿ ಮಧ್ಯೆಯಲ್ಲಿ ಹಲವಾರು ಕಡೆ ಗೋಲಾಕಾರದ, ಅದರೊಳಗೆ ಸಣ್ಣ ಸಣ್ಣ ತೂತು ಇರುವ ಗೂಡುಗಳು ಇದ್ದವು.
ಅವೇನೆಂದು ಕೇಳಿದಾಗ ಅವು ಪಾರಿವಾಳದ ಗೂಡುಗಳೆಂದು ತಿಳಿಯಿತು.
ಯಾಕಿಷ್ಟೊಂದು ಸಾಕಿದ್ದಾರೆ ಎಂದಾಗ ಅರ್ಧಂಬರ್ಧ ಇಂಗ್ಲೀಷಿನಲ್ಲಿ ರಹಸ್ಯವೊಂದು ನಿಧಾನಕ್ಕೆ ಇಬ್ರಾಹಿಂ ಬಾಯಿಂದ ಹೊರಬಂತು.
ಹಳ್ಳಿಗಳಲ್ಲಿ ಹೊಸಜೋಡಿಗಳು ಮದುವೆಯಾಗಿ ಮದುಮಗ ಅತ್ತೆಯ ಮನೆಗೆ ಹೋದಾಗ ಹದಿನೈದು ದಿನ ಅಳಿಯನಿಗೆ ಪಾರಿವಾಳದ ಊಟವೇ ಮಾಡಿಕೊಡಬೇಕಂತೆ.
ಯಾರು ಪಾರಿವಾಳದ ಅಡಿಗೆ ಮಾಡಿ ಮಧುಮಗನನ್ನು ಸಂತೃಪ್ತಗೊಳಿಸುವುದಿಲ್ಲವೋ ಆ ಕುಟುಂಬದ ಬಗ್ಗೆ ಮಧುಮಗನ ಕಡೆಯವರು ತಾತ್ಸಾರ ಧೋರಣೆ ತೋರುತ್ತಾರಂತೆ.
ಒಂದ್ ತರದಲ್ಲಿ ಅವ್ರು ಕೈ ಲಾಗದವರು ಅಂತ.
ಆದ್ರೆ ನಾನು ಪಾರಿವಾಳನೇ ಯಾಕೆ ಅಂತ ಕೇಳಿದ್ದುಕ್ಕೆ ಇಬ್ರಾಹಿಂ ಕೊಂಚ ನಾಚಿಕೆ ಮತ್ತು ನಗುತ್ತಾ ಪಾರಿವಾಳ ನ್ಯಾಚುರಲ್ ವಯಾಗ್ರ ಅಲ್ವ ಅದ್ಕೆ ಅಂದ.
ಮಧುಮಗ ಗಟ್ಟಿಮುಟ್ಟಾಗಿ ಕೆಲ್ಸ ಮಾಡ್ಬೇಕಲ ಅದ್ಕೆ ಇಸ್ಟೊಂದು ಪಾರಿವಾಳ ಸಾಕಿರೋದು ಸರ್ ಅಂದವನ ಮುಖದಲ್ಲಿ ನಾಚಿಕೆ,ಹಾಸ್ಯ,ನಗು ಮತ್ಯಾವುದೋ ಫ್ಲಾಶ್ ಬ್ಯಾಕ್ ಎಲ್ಲ ಒಮ್ಮೆಲೇ ಹಾದುಹೋದಂತಿತ್ತು.
GIZA ತಲುಪಿದಾಗ ಮಟಮಟ ಮಧ್ಯಾಹ್ನ.
ಮೊದಲ ಬಾರಿಗೆ ಪ್ರಾಚೀನ ಮಾನವ ನಿರ್ಮಿಸಿದ ಅತೀದೊಡ್ಡ ಸ್ಟ್ರಕ್ಚರ್ ಒಂದನ್ನು ನೋಡುತ್ತಿದ್ದೆ.
ರಣರಣ ಬಿಸಿಲಿನಲ್ಲೂ ಅದೇನೋ ಆಕರ್ಷಣೆ.
ಮೂರು ಬೃಹತ್ ಪಿರಮಿಡ್ಡುಗಳು ಎದ್ದು ಕಾಣುತ್ತಿದ್ದವು.
Ancient ಈಜಿಪ್ಟಿನಲ್ಲಿ ದೊರೆಗಳನ್ನು ದೇವರ ಸ್ವರೂಪಗಳೆಂದೇ ನಂಬಲಾಗಿತ್ತು.
ಈಜಿಪ್ಟಿನ ದೊರೆಗಳನ್ನು ಫೆರೋಗಳೆಂದು(Pharaoh) ಕರೆಯುತ್ತಿದ್ದರು.
ಈ ಫೆರೋಗಳು ತಾವು ಸತ್ತ ನಂತರವೂ ಬದುಕುತ್ತೇವೆಂಬ ಕಲ್ಪನೆಯಲ್ಲಿ ಸತ್ತ ಮೇಲೆ ತಾವು ಬಳಸುತ್ತಿದ್ದ ಎಲ್ಲಾ ವಸ್ತುಗಳೊಂದಿಗೆ ಸಮಾಧಿಯಾಗುತ್ತಿದ್ದುದೇ ಪಿರಮಿಡ್.
ಗಿಝಾದಲ್ಲಿ ನಿಮಗೆ ಪ್ರಮುಖವಾಗಿ ಕಾಣ ಸಿಗೋದು ಮೂರು ಪಿರಮಿಡ್ಡು ಗಳು ಮತ್ತೊಂದು ಸ್ಫಿಂಕ್ಸ್.
ತಾತ(ಖುಫು)
ಮಗ(ಖಫ್ರಾ)
ಮೊಮ್ಮಗನ(ಮೆನ್ಕೌರೆ) ಮೂರು ಪಿರಮಿಡ್ಡುಗಳೇ ಗ್ರೇಟ್ ಪಿರಮಿಡ್ಸ್ ಆಫ್ ಗಿಝಾ.
ಅದರ ಅಕ್ಕಪಕ್ಕದಲ್ಲೇ ಅವರ ರಾಣಿಯರುಗಳು ಪಿರಮಿಡ್ಡುಗಳಿದ್ದರೂ ಗಾತ್ರದಲ್ಲಿ ಇವುಗಳ ಮುಂದೆ ಅವು ನಗಣ್ಯ.
ಇದು ಪ್ರಾಚೀನ ಈಜಿಪ್ಟಿನಲ್ಲಿ ಮಹಿಳೆಯರಿಗಿದ್ದ ಸ್ಥಾನಮಾನವನ್ನೂ ಸೂಚಿಸುತ್ತದೆ.
ಇದರಲ್ಲಿ ಅತ್ಯಂತ ದೊಡ್ಡದೆಂದರೆ KHUFU ನದ್ದು.
481 ಅಡಿ ಎತ್ತರ 756 ಅಡಿ ಉದ್ದ ಮತ್ತು ಅಗಲದ ತ್ರಿಕೋನವೊಂದನ್ನು ಊಹಿಸಿಕೊಂಡರೆ ಸಾಕು ನಿಮಗದರ ಅಗಾಧತೆ ಗೊತ್ತಾಗುತ್ತೆ.
ಈ ಪಿರಮಿಡ್ಡು ಕಟ್ಟಲು ಬಳಸಿದ್ದು ಸುಮಾರು ಐದು ಮಿಲಿಯನ್ನು ಟನ್ನಿನಷ್ಟು ತೂಕದ ಸುಣ್ಣದ ಕಲ್ಲು
ಎಂಟು ಸಾವಿರ ಟನ್ನಿನಷ್ಟು ಗ್ರಾನೈಟು
ಐದು ಲಕ್ಷ ಟನ್ನಿನಷ್ಟು ಗಾರೆಯಂತೆ.
ಇದೊಂದು ಪಿರಮಿಡ್ಡನ್ನು ಕಟ್ಟಲು ಕನಿಷ್ಟ ಹತ್ತು ಸಾವಿರ ಜನ ತೆಗೆದುಕೊಂಡದ್ದು ಬರೋಬ್ಬರಿ ಇಪ್ಪತ್ತೇಳು ವರ್ಷವಂತೆ.
ಅದೂ ಸುಣ್ಣದ ಕಲ್ಲನ್ನು ಹತ್ತು ಕಿ.ಮೀ ದೂರದಿಂದ,
ಗ್ರಾನೈಟ್ ಅನ್ನು 900 ಕಿ.ಮೀ ದೂರದ ಆಸ್ವಾನಿನಿಂದ ಬೋಟುಗಳಲ್ಲಿ ನೈಲ್ ನದಿಯಲ್ಲಿ ಹೇರಿಕೊಂಡು ಬಂದು ಪಿರಮಿಡ್ಡಿನ ಮೇಲಿಗೆ ಸಾಗಿಸಬೇಕಿತ್ತಂತೆ.
ಇದರ ಕಲ್ಲುಗಳನ್ನೆಲ್ಲ ಬಿಚ್ಚಿ ಅಗಲಕ್ಕಿಂದು ಹರಡಿದರೆ ಅದು ಹದಿಮೂರು ಎಕರೆಯಷ್ಟಾಗುತ್ತದಂತೆ ಎಂದರೆ ನೀವೆ ಊಹಿಸಿಬಿಡಿ ಅದರ ಬೃಹತ್ ಗಾತ್ರವನ್ನು.
ಅದೆಷ್ಟು ಜನ ಸತ್ತರೋ?
ಅದೆಷ್ಟು ಜನರ ಗೋಳು ಹುಯ್ದುಕೊಂಡರೋ?
ಈ ಇಪ್ಪತ್ತೇಳು ವರುಷದಲಿ ಕೆಲವರು ತಮ್ಮ ಸಂಪೂರ್ಣ ಯೌವ್ವನವನ್ನೇ ಮುಡಿಪಾಗಿಟ್ಟಿದ್ದರಂತೆ.
ಅದೊಂದು ಶುಧ್ಧ ಹುಚ್ಚುತನ ಅಂದರೆ ತಪ್ಪಿಲ್ಲ.
ಆದರೆ ಇಂದಿಗೆ ಸುಮಾರು ನಾಲ್ಕವರೆ ಸಾವಿರ ವರ್ಷಗಳ ಹಿಂದೆ ಆದುನಿಕ ತಂತ್ರಜ್ಞಾನವಿಲ್ಲದೇ ಅಷ್ಟೊಂದು ಕರಾರುವಕ್ಕಾಗಿ ಇಂತಹದೊಂದು ಅದ್ಭುತವನ್ನು ಕಟ್ಟಿದ್ದರಲ್ಲ ಅನ್ನೋದು ವಿಸ್ಮಯಗಳ ವಿಸ್ಮಯವಷ್ಟೇ.
ಪ್ರಾಚೀನ ಈಜಿಪ್ಟಿಯನ್ನರ ಇಚ್ಛಾಶಕ್ತಿ, ಮೆಥೆಮ್ಯಾಟಿಕ್ಸ್,ಜಿಯಾಗ್ರಫಿ,ಇಂಜಿನೀಯರಿಂಗಿಗೆ ಪ್ರಾಚೀನ ಈಜಿಪ್ಟಿಯನ್ನರೇ ಸಾಟಿಯಷ್ಟೆ.
ಪಿರಮಿಡ್ಡಿನ ಒಳಗೆ, ಹೊರಗೆ, ಅಲ್ಲೇ ದೂರದಲ್ಲಿ ಒಂಟೆ ಮೇಲೆಲ್ಲ ಸುತ್ತಿದ ನನಗನಿಸಿದ್ದು, ಇಂದಿನ ಗಿಝಾ ಕೊಳಕು ಹಿಡಿದ,ಮಾಸಿ ಹೋದ, ಕೇವಲ ಡುಡ್ಡು ಮಾಡುವ ತಾಣವೆಂದು.
ಟಿಕೇಟ್ಟೇ ಇಲ್ಲದೆ ಮಾಮೂಲಿ ಕೊಟ್ರೆ ಪಿರಮಿಡ್ ಒಳಗೂ ಬಿಡ್ತಾರೆ.
ಅಂತವರದೊಂದು ದೊಡ್ಡ ಗ್ಯಾಂಗೇ ಅಲ್ಲಿದೆ.
ಶೌಚಾಲಯಗಳಂತೂ ನರಕಮಯವಾಗಿವೆ.
ಇನ್ನೂರು EGP ಕೊಟ್ಟು ಟಿಕೇಟ್ ಕೊಂಡೂ ನೀವು ಉಚ್ಚೆ ಹುಯ್ಯಲು 10 EGP(ಐವತ್ತು ರೂಪಾಯಿ)Extra ತೆರಬೇಕು.
ಈ ಕಾಸ್ಟ್ಲಿ ಉಚ್ಚೆ ಪ್ರಸಂಗ ನೋಡಿ ನನ್ನ ಟ್ರಾವೆಲ್ ಪಾರ್ಟ್ನರ್ ಯಾರತ್ರನೋ ಫೋನಲ್ಲಿ,
ನೀನ್ ಈಜಿಪ್ಟಿಗೆ ಬಂದು ಉಚ್ಚೆ ಹುಯ್ಸೋ ಬ್ಯುಸ್ನೆಸ್ ಮಾಡ,ಉದ್ದಾರ ಆಗ್ತಿಯ ಅಂತ ಕಾಲೆಳಿತಿದ್ರು.
ಸಂಜೆ ಗಿಝಾದ ಸೌಂಡ್ ಆ್ಯಂಡ್ ಲೈಟ್ ಶೋನಲ್ಲಿ ಪಿರಮಿಡ್ಡುಗಳ ಹಾಗೂ ಅವನ್ನು ಕಾಯುತ್ತಾ ನಿಂತಿರುವ ಸಿಂಹ ದೇಹ ಮನುಷ್ಯ ಮುಖದ ಅರವತ್ತಾರು ಅಡಿ ಎತ್ತರದ Sphinx ಮೇಲೆ ಬೀಳುವ ಬಣ್ಣದ ಬೆಳಕಿನಾಟ ಇತಿಹಾಸದ ಹಲವು ಕಥೆಗಳು,ಒಂದಷ್ಟು ತಣ್ಣನೆಯ ವಾತಾವರಣ ಹಿತಕರವಾಗಿತ್ತು.
ಇನ್ನು ಕೈರೋದ ಮ್ಯೂಸಿಯಂ ಬಗ್ಗೆ ಹೇಳಲೇಬೇಕು.
ಈಜಿಪ್ಟಿನ ಪ್ರಾಚೀನ ಶ್ರೀಮಂತಿಕೆಯ ಶಾಸನಗಳು,ಕೆತ್ತನೆಗಳು,ಅಲ್ಲಿಯ ಉಡುಗೆ ತೊಡುಗೆಗಳು,ರಿಯಲ್ ಮಮ್ಮಿಗಳು,ಮಮ್ಮಿಗಳೊಂದಿಗೆ ಇಡುತ್ತಿದ್ದ ವಸ್ತುಗಳ ಲೋಕವೊಂದನ್ನೇ ತೆರೆದಿಡುತ್ತೆ ಮ್ಯೂಸಿಯಂ.
ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರದಷ್ಟು ಪ್ರಾಚೀನ ವಸ್ತು ವಿಷಯಗಳು ಇಲ್ಲಿವೆ.
ಸುಣ್ಣದ ಕಲ್ಲು,ಗ್ರಾನೈಟು,ಅಲಬಸ್ಟಾರ್ ನಿಂದ ತಯಾರಿಸಿದ ಕೆತ್ತನೆ,ಶಾಸನಗಳಿವೆ.
ಒಂದಷ್ಟು ನಿಜವಾದ ಮಮ್ಮಿಗಳಿವೆ.
ಅವೆಲ್ಲ ಗ್ಲಾಸ್ ಪೆಟ್ಟಿಗೆಯಲ್ಲಿ ಕ್ಲೀನಾಗಿ ಸೀಲ್ ಆಗಿವೆ.
ಈ ಮಮ್ಮಿಗಳ ರಚನೆ ಮತ್ತವುಗಳ ಬಗೆಗಿನ ಲೋಕವೇ ಒಂದು ಪುಸ್ತಕಕ್ಕಾಗೋಷ್ಟು ಬರೆಯಬಹುದು.
ರಾಜನೊಬ್ಬ ಸತ್ತ ನಂತರ ಆತನ ಮುಂದಿನ ಜೀವನಕ್ಕೆ(ಕತ್ತಲಲೋಕ/ಅಂಡರ್ ವರ್ಲ್ಡ್)
ಹೋಗಲು ಆತನ ದೇಹವನ್ನು ತಯಾರಿ ಮಾಡಿ ಅವನ ಬಳಸುತ್ತಿದ್ದ,ಪುನರ್ಜನ್ಮದಲ್ಲಿ ಆತನಿಗೆ ಬೇಕಾಗಬಹುದಾದ ವಸ್ತುಗಳೊಂದಿಗೆ ಅವನನ್ನು ಬ್ಯೂರಿಯಲ್ ಚೇಂಬರಿನಲ್ಲಿಟ್ಟು ಮುಚ್ಚುವುದು ಪ್ರಾಚೀನ ಈಜಿಪ್ಟಿಯನ್ನರ ನಂಬಿಕೆ.
ಮೊದಲು ಸತ್ತ ದೇಹದಲ್ಲಿನ ಎಲ್ಲ ತೇವಾಂಶ ತೆಗೆಯುವ ಪ್ರಕ್ರಿಯೆ.
ದೇಹದ ಎಡಭಾಗದಲ್ಲಿ ಕೊಯ್ದು ಎಲ್ಲ ಅಂಗ(Organ)ಗಳನ್ನು ಹೊರ ತೆಗೆದು ಅವುಗಳನ್ನೆಲ್ಲ ಒಂದೊಂದು ಜಾರ್ ಗಳಲ್ಲಿ ಇಡಲಾಗುತ್ತಿತ್ತು.
ಶ್ವಾಸಕೋಶ,ಜಠರ,ಕರುಳುಗಳು,ಲಿವರ್ ಇವುಗಳನ್ನು ನಾಲ್ಕು ಬೇರೆ ಬೇರೆ ಜಾರುಗಳಲ್ಲಿ ಇಡಲಾಗುತ್ತಿತ್ತು.
ಹೃದಯವೊಂದನ್ನು ಮಾತ್ರ ದೇಹದಲ್ಲಿ ಬಿಡಲಾಗುತ್ತಿತ್ತು.
ಅಂಗಾಂಗಳನ್ನೆಲ್ಲ ತೆಗೆದ ಮೇಲೆ ದೇಹದ ಒಳಗೆಲ್ಲ ವೈನ್ ಹಾಗೂ ನೈಲ್ ನದಿಯ ನೀರು ಬಳಸಿ ಶುಚಿ ಮಾಡಿ,
ಆಮೇಲೆ ಒಂದಷ್ಟು ತಾಳೆ(Palm) ಎಣ್ಣೆ,ಹಾಗೂ ನ್ಯಾಚುರಲ್ ಪ್ರಿಸರ್ವೇಟಿವ್ಸ್ ಗಳನ್ನು ದೇಹದ ಒಳಗೆ ಹೊರಗೆ ಲೇಪಿಸಲಾಗುತ್ತಿತ್ತು.
ಇನ್ನೂ ದೇಹದಲ್ಲಿ ಉಳಿದ ತೇವಾಂಶವನ್ನು ಹೀರಿಕೊಳ್ಳಲು ಒಂದು ಬಗೆಯ ಉಪ್ಪನ್ನು ದೇಹದಲ್ಲಿ ತುಂಬಿ ಅದರಲ್ಲಿ ಮುಚ್ಚಿಡಲಾಗುತ್ತಿತ್ತು.
ನಲವತ್ತು ದಿನಗಳ ಈ ಪ್ರಕ್ರಿಯೆ ನಂತರ ದೇಹಕ್ಕೆ ಒಂದು ಬಗೆಯ ಗೋಂದನ್ನು ಸವರಿ ಸಂಪೂರ್ಣ ದೇಹವನ್ನು ನಾರಿನಿಂದ(Linen) ಸುತ್ತಲಾಗುತ್ತಿತ್ತು.
ಆಮೇಲೆ ಅದರ ಮೇಲೆ ಅಲಂಕಾರ ಮಾಡಿ ಸ್ತೋತ್ರಗಳನ್ನೆಲ್ಲ ಬರೆದು,ಅದಕ್ಕೊಂದು ಮುಖವಾಡ ಹಾಕಿ ಅದನ್ನು ಕಾಫಿನ್ ಎಂದು ಕರೆಯಲಾಗುವ ಬಾಕ್ಸ್ ನಲ್ಲಿ ಇಡಲಾಗುತ್ತಿತ್ತು.
ಈ ಸಂಪೂರ್ಣ ಪ್ರಕ್ರಿಯೆಯೇ ಮಮ್ಮಿಫಿಕೇಷನ್(Mummification).
ದೊರೆ ಸತ್ತ ದಿನದಿಂದ ಆತನ ಮಮ್ಮಿ ರೆಡಿಯಾಗಲು ತಗಲೋದು ಬರೋಬ್ಬರಿ ಎಪ್ಪತ್ತು ದಿನಗಳಂತೆ.
ಆನಂತರ ವಿಧಿ ವಿಧಾನಗಳೊಂದಿಗೆ ಅತ್ತೂ ಕರೆದು ಆತನ ಮಮ್ಮಿಯನ್ನು ಬೃಹತ್ ಬೆಟ್ಟದೊಳಗೆ ಕೊರೆದಿರುವ ಚೇಂಬರಿನೊಳಗೋ,ಬೃಹತ್ ಪಿರಮಿಡ್ಡಿನೊಳಗೋ ಆತನ ವಸ್ತುಗಳು,ಆತನ ಅಂಗಾಂಗಗಳೊಂದಿಗೆ ಇಟ್ಟು ಬಿಡುತ್ತಿದ್ದರು.
ಆನಂತರ ಆ ರಾಜನ ಆತ್ಮ ಮತ್ತು ದೇಹ ಕತ್ತಲ ಲೋಕದಲ್ಲಿ ಚಲಿಸುತ್ತ ಹೋಗುತ್ತದೆ.
ಅಲ್ಲಿ ಅಂಡರ್ ವರ್ಲ್ಡಿನ ದೇವರಾದ ಅನುಬಿಸ್(ANUBIS) ಅವನನ್ನು ಹೃದಯದ ತೂಕ ಹಾಕಲು ಕರೆದೊಯ್ಯುತ್ತಾನೆ.
ಸತ್ತ ರಾಜನ ಹೃದಯದ ತೂಕವು ಒಂದು
ಪುಕ್ಕದಷ್ಟು(Feather Of Truth)ಮಾತ್ರ ತೂಗಿದರೆ ಆತನಿಗೆ ಇನ್ನೊಂದು ಲೋಕಕ್ಕೆ ಜೀವಂತ ಎಂಟ್ರಿ,
ಹೃದಯವೇನಾದರೂ ಫೆದರ್ ಗಿಂತ ಭಾರವಿದ್ದರೆ ಆತನನ್ನು ಕೆಳಗೆ ತಳ್ಳಿ ರಾಕ್ಷಸವೊಂದಕ್ಕೆ ಆಹಾರವಾಗಿಸಲಾಗುವುದೆಂಬ ನಂಬಿಕೆ Ancient Egyptiansದು.
ಬದುಕ್ಕಿದ್ದಾಗ ಅವನೆಷ್ಟು ಒಳ್ಳೆಯ ಕೆಲಸಗಳನ್ನು ಮಾಡಿರುತ್ತಾನೆಯೋ,
ಅವನದೆಷ್ಟು ಹಗುರ ಹೃದಯವೋ,
ಅದರ ಮೇಲೆ ಆತನ ಹೃದಯದ ಭಾರ ಅಂಡರ್ವರ್ಲ್ಡಿನಲ್ಲಿ ನಿರ್ಧಾರಿತವಾಗುತ್ತೆ ಎಂಬ ಅಂದಿನ ನಾಗರೀಕತೆಯ ನಂಬಿಕೆಯಲ್ಲಿ ನಾವು ರಾಜನಿಗಿರಬೇಕಾದ ನೈತಿಕತೆ ಮತ್ತು ಗೌರವವನ್ನು ಕಾಣಬಹುದು.
ಮುಂದುವರೆದು ಮ್ಯೂಸಿಯಂನ ಎರಡನೇ ಮಹಡಿಯಲ್ಲಿ ಟುಟಾಂಖ್ಅಮುನ್ ನ ಸಮಾಧಿಯಲ್ಲಿ ಸಿಕ್ಕ ಎಲ್ಲ ಚಿನ್ನದ ವಸ್ತುಗಳಿವೆ.
ಪ್ರಾಚೀನ ಈಜಿಪ್ಟಿನ ಅದೆಷ್ಟೋ ವಂಡರುಗಳನ್ನ ಕಳ್ಳರು,ಆಕ್ರಮಣಕಾರರು,ವ್ಯಾಪಾರಿಗಳು,
ವಿದೇಶಿಯರು,ಈಜಿಪ್ಟನ್ನು ಆಳಿದವರು ಕೊಳ್ಳೆ ಹೊಡೆದುಕೊಂಡು ಹೋಗಿದ್ದಾರೆ.
ಹಾಗಾಗಿ ಬಹುತೇಕ Egyptian Antiquities ಜಗತ್ತಿನಾದ್ಯಂತ ಹರಿದು ಹಂಚಿ ಹೋಗಿವೆ.
ಒಂದಷ್ಟು ವಸ್ತು ಪ್ರದರ್ಶನದೆಸರಲ್ಲಿ ಜಗತ್ತು ಸುತ್ತುತ್ತಿವೆ.
ಸರ್ಕಾರ ಈ ಎಲ್ಲವುಗಳನ್ನು ಒಂದೆಡೆ ಸೇರಿಸಲು ಹೊಸದಾಗೊಂದು ಮ್ಯೂಸಿಯಂ ಅನ್ನು ಕಳೆದೆರಡು ವರ್ಷದಿಂದ ಗಿಝಾದಲ್ಲಿ ಕಟ್ಟಲಾಗುತ್ತಿದೆ.ಅದರೆಸರು Egyptian Grand Museum ಎಂದು.
ಇದಕ್ಕೆ ಜಗತ್ತಿನಾದ್ಯಂತ ಇರುವ Archeologists ಸಹ ಕೈಗೂಡಿಸಿದ್ದಾರೆ.
ಬಹುತೇಕ 2022 ರ ಮಧ್ಯಭಾಗಕ್ಕೆ ಇದು ಉದ್ಘಾಟನೆ ಆಗಲಿದೆ.
ಹಾಗಾದಲ್ಲಿ ಪ್ರಾಚೀನ ನಾಗರೀಕತೆಯ ವೈಭವದ ದಿನಗಳನ್ನು ಒಂದೇ ಕಡೆ ಗ್ರಾಂಡ್ ಮ್ಯೂಸಿಯಂನಲ್ಲಿ ಕಣ್ತುಂಬಿಕೊಳ್ಳಬಹುದು
ಈಜಿಪ್ಟಿಗೆ ಬಂದು ನಾಲ್ಕು ದಿನ ಕಳೆದಿತ್ತು.
ತಾಯ್ನಾಡು ಮಿಸ್ ಆದಂಗೆ ಅನ್ನಿಸ್ತಿತ್ತು.
ನಮ್ಮ ಅಕ್ಕಿ ರೊಟ್ಟಿ,ಅನ್ನ ಸಾಂಬಾರ್ ಇತ್ಯಾದಿ ಮರೆತೇ ಹೋದಂಗಿತ್ತು.
ಭಾರತೀಯ ರೆಸ್ಟೋರೆಂಟ್ ಯಾವುದಾದ್ರು ಇದೀಯ ಅಂತ ಹುಡುಕ್ದೋರಿಗೆ ಕೈರೋದಲ್ಲಿ ಸಿಕ್ಕಿದ್ದು “ನಮಸ್ತೆ” ಅನ್ನೋ Indian Restaurant.
ಸೀರೆ ಮತ್ತು ಬಾರತೀಯ ಉಡುಗೆ ತೊಟ್ಟಿದ್ದ ಸಿಬ್ಬಂದಿ,
ಬ್ಯಾಕ್ ಗ್ರೌಂಡಲ್ಲಿ ಬಾಲಿವುಡ್ಡಿನ ಸಾಂಗು,
ಚಪಾತಿ,ಅನ್ನ, ಚಿಕನ್ ಕರ್ರಿ,ಮೊಸರನ್ನ ಉಪ್ಪಿನಕಾಯಿ ತಿಂದು ಬರಗೆಟ್ಟುಹೋಗಿದ್ದ ನಾಲಿಗೆಯನ್ನೆಲ್ಲ ಸರಿಮಾಡ್ಕೊಂಡ್ವಿ.
ಅದು ಕೈರೋದಲ್ಲಿನ ನಮ್ಮ ಕೊನೆಯ ರಾತ್ರಿ.
ಬೆಳಗೆದ್ದು ಇಲ್ಲಿಂದ 900 ಕಿ.ಮೀ ದೂರದ ಈಜಿಪ್ಟಿನ ದಕ್ಷಿಣ ಭಾಗಕ್ಕೆ ಹೋಗಬೇಕಿತ್ತು.
ಕೈರೋಗೆ ವಿದಾಯ ಹೇಳುವ ಮೊದಲು ನಮ್ಮ ಡ್ರೈವರ್ ಇಬ್ರಾಹಿಂಗೆ ಅವನೇ ಸಜೆಸ್ಟ್ ಮಾಡಿದ ಅಲ್ಲಿನ ಬೆಸ್ಟ್ ಬೇಕರಿಯೊಂದರಲ್ಲಿ ಒಂದಷ್ಟು ಸ್ವೀಟು ಪಾರ್ಸೆಲ್ಲು ಕೊಡಿಸಿ, ನಾವೂ ಒಂದಷ್ಟು ಕೊಂಡು ಏರ್ಪೊರ್ಟ್ಗೆ ಹೊರಟೆವು.
ಈಜಿಪ್ಟ್ ಏರ್ ನಮ್ಮನ್ನು ಈಜಿಪ್ಟಿನ ದಕ್ಷಿಣ ಭಾಗದೆಡೆಗೆ ಎತ್ತಿಕೊಂಡು ಹೊರಟಿತ್ತು.
ಈಜಿಪ್ಟಿನ ನಿಜವಾದ ಸೊಬಗು ಮತ್ತು ಇತಿಹಾಸ ಇರೋದೆ ದಕ್ಷಿಣದಲ್ಲಿ.
ಕಾರ್ನಾಕ್,
ಅಬು ಸಿಂಬೆಲ್
ಲಕ್ಸರ್
ವ್ಯಾಲಿ ಆಫ್ ದಿ ಕಿಂಗ್ಸ್
ಕೊಮ್ ಒಂಬೋ
ಎಡ್ಫು
ಫಿಲೇ ಟೆಂಪಲ್
Egyptian Mythology
ಒಂದಾ ಎರಡಾ ಅಲ್ಲಿರೋದು…
ಪ್ರಾಚೀನ ಈಜಿಪ್ಟ್ ನ ಇತಿಹಾಸದ ಪ್ರಕಾರ ಸುಮಾರು ಮೂವತ್ತು ಡೈನಾಸ್ಟಿಗಳು ಈ ದೇಶವನ್ನು ಆಳಿವೆ.
ಅವುಗಳನ್ನು
Old Kingdom (about 2,700-2,200 B.C.)
The Middle Kingdom (2,050-1,800 B.C.)
ಮತ್ತು
New Kingdom (about 1,550-1,100 B.C.) ಎಂದು ವಿಭಜಿಸಬಹುದು.
ಮೊದಲು ಈಜಿಪ್ಟು Upper Egypt ಮತ್ತು Lower Egypt ಗಳೆಂಬ ಎರಡು ದೇಶಗಳಾಗಿತ್ತು.
ಮೊದಲನೆ ಡೈನಾಸ್ಟಿಯ ರಾಜ ನಾರ್ಮರ್ ವಿರೋಧಿಗಳನ್ನು ಸದೆ ಬಡಿದು ಇದನ್ನು ಒಂದೇ ದೇಶವನ್ನಾಗಿಸಿದ್ದು.
ಅಂದಿಗೆ ವಿಶ್ವಕ್ಕೇ ಪ್ರಸಿದ್ದಿಯಾಗಿದ್ದ ರಾಜಧಾನಿ “ಥೀಬ್ಸ್”,
ಪ್ರಸಿದ್ದ ದೊರೆಗಳಾದ
Rameses 2,
ಅಖೆನಾಟೆನ್,
ಅಮೆನ್ ಹೊಟೆಪ್,
ಟುಟ್ಮೋಸ್
ಪ್ರಸಿದ್ಧ ರಾಣಿಯರಾದ
ನೆಫರ್ಟಿಟಿ,
ನೆಫರ್ಟಾರಿ,
Hatshepsut ಎಲ್ಲ ಇಲ್ಲಿಯವರೇ.
ಆದರೆ ಹಟ್ಸೆಪ್ಸುಟ್ ಳದ್ದೇ ವಿಭಿನ್ನ ಸ್ಟೋರಿ.
ಆಕೆ ತನ್ನನ್ನು ರಾಣಿ ಎಂದು ಬಿಂಬಿಸಿಕೊಳ್ಳದೇ ರಾಜ ಎಂದೇ ಕರೆಸಿಕೊಂಡು ರಾಜ್ಯವನ್ನಾಳಿದವಳು.
“She is Not Queen She is King Hatshepsut”
ಆಕೆ ಗಂಡಸರಂತೆಯೇ ವೇಷ ಭೂಷಣಗಳನ್ನು ಮಾಡಿಕೊಳ್ಳುತ್ತಿದ್ದಳಂತೆ.
ಆಕೆ ಫೆರೋ ಆಗಿಯೇ ಹದಿನೈದು ವರ್ಷ ಈಜಿಪ್ಟನ್ನು ಆಳಿದವಳು.
ಆಕೆ ವಿಶ್ವದ ಎರಡನೇ ಮಹಿಳಾ ಚಕ್ರವರ್ತಿ.
ರಾಜ ಖುರ್ಚಿ ವಂಶಪಾರಂಪರ್ಯವಾಗಿ ಗಂಡುಮಕ್ಕಳಿಗೆ ಮಾತ್ರವೇ ಇದ್ದ ಕಾಲದಲ್ಲಿ, ಮಹಿಳೆಯರಿಗೆ ಅತ್ಯಂತ ಕೆಳ ಸ್ಥಾನಮಾನಗಳಿದ್ದ ಅಂದಿನ ಕಾಲದಲ್ಲಿ ಆಕೆ ರಾಜನಂತೆ ಹದಿನೈದು ವರ್ಷ ಆಳಿದ ಗಟ್ಟಿಗಿತ್ತಿ.
ಒಂದುವರೆ ಗಂಟೆ ನಮ್ಮನ್ನೊತ್ತ ವಿಮಾನ ಆಸ್ವಾನ್ ಬರುತ್ತಿದ್ದಂತೆ ಅಲ್ಲೇ ಒಂದು ಪ್ರದಕ್ಷಿಣೆ ಹಾಕುತ್ತಿತ್ತು.
ನೈಲ್ ನ ಹಿನ್ನೀರು ಅಲ್ಲಲ್ಲಿ ನಿಂತಿದ್ದರಿಂದ ದೊಡ್ಡ ಸರೋವರದಂತೆ ಮೇಲಿನಿಂದ ನೈಲು ಕಾಣುತ್ತಿತ್ತು.
ಕೈರೋದ ಮಾಸಿದ ಕಟ್ಟಡಗಳು,ಕೊಳಚೆಯೊಂದಿಗೆ ಹರಿಯುತ್ತಿದ್ದ ನೈಲು,ಗಿಝಾದ ಭಣಗುಟ್ಟುವ ಜನರಿಂದ ಒಂದಷ್ಟು ರೋಸಿ ಹೋಗಿದ್ದ ನಾನು ಆಸ್ವಾನಿನಲ್ಲಿ ನೈಲ್ ನದಿಯ ನಿಜ ಸ್ವರೂಪವನ್ನು ಕಂಡು ಫುಲ್ ದಿಲ್ ಖುಷ್.
ನೈಲು ನೀಲಿಬಣ್ಣದ ಸೀರೆಯನುಟ್ಟು ಶುಭ್ರವಾಗಿ ಸೂರ್ಯನ ಕಿರಣಗಳಿಗೆ ಮಿರಮಿರ ಮಿಂಚುತ್ತಿದ್ದರೆ ಆಕೆಯ ಮೇಲೊಂತರಾ ಲವ್ವಾಗೋಯ್ತು.
ಅದರಲ್ಲೂ ನೈಲಿನ ಬೃಹತ್ ಗಾತ್ರ ಮತ್ತು ಅಗಾಧತೆ ಎಂತವರನ್ನೂ ಮಂತ್ರ ಮುಗ್ಧರನ್ನಾಗಿಸೋದು ಖಚಿತ.
ನದಿಯಲ್ಲಿ ಹಾಯಿ ದೋಣಿಗಳು,ಫೆಲುಕ್ಕಾಗಳು,ಕ್ರೂಸುಗಳು,
ಮೋಟಾರು ಬೋಟುಗಳು ಅಲ್ಲಲ್ಲಿ ತೇಲುತ್ತಲೇ ಇದ್ದವು.
ನಮ್ಮ ಹೊಟೇಲ್ Movenpick,
ಸುತ್ತಲೂ ಹರಿಯುವ ನೈಲ್ ನದಿಯ ಐಲ್ಯಾಂಡೊಂದರಲ್ಲಿತ್ತು.
ಒಂದು ಬದಿಯಿಂದ ಸಣ್ಣ ಮೋಟಾರು ಬೋಟಿನಲ್ಲಿ ದಾಟಿ ನೈಲಿನೊಂದೊಗೆ ಒಂದಷ್ಟು ಸೆಲ್ಫಿ ಎತ್ತಿಕೊಂಡು ಆಕೆಯನ್ನೊಮ್ಮೆ ಹಿತವಾಗಿ ಮುಟ್ಟಿ ಫೀಲು ಮಾಡಿಕೊಂಡು ಹೊಟೇಲು ಸೇರಿದೆ.
ನಮ್ಮ ಹೊಸ ಟೂರ್ ಗೈಡ್ ಮಹಮ್ಮದ್ ಸ್ಥಳೀಯನೂ ಒಂದಷ್ಟು ಉತ್ತಮ ಭಾಷಾ ಕೌಶಲ್ಯವನ್ನೂ ಹೊಂದಿದವನಂತೆ ಕಂಡು ಬಂದ.
ವೆಲ್ಕಮ್ ಡ್ರಿಂಕ್ ಆಗಿ ಅದ್ಯಾವುದೋ ಧೋಮ್ {DOUM(Hyphaene thebaica)}ಮರದ ಹಣ್ಣಿನ ಜ್ಯೂಸ್ ಅನ್ನು ಕೊಟ್ಟರು.
It was really Good.
ಅಲ್ಲಿಂದ ನಾವು ಎಂಟ್ರಿ ಕೊಟ್ಟಿದ್ದು ನುಬಿಯನ್ ಲೋಕದೊಳಗೆ.
ನುಬಿಯನ್ ಅನ್ನೊದೊಂದು ಬುಡಕಟ್ಟು ಜನಾಂಗ.
ಉತ್ತರದ ಸೂಡಾನ್ ಹಾಗೂ ದಕ್ಷಿಣದ ಈಜಿಪ್ಟಿನಲ್ಲಿರುವ ಒಂದು ಸೀಮಿತ ಜನಾಂಗ.
ಅವರದೇ ಆದ ಭಾಷೆ ಇದ್ದರೂ ಅದಕ್ಕೆ ಲಿಪಿ ಇಲ್ಲ.
ಒಟ್ಟು ನುಬಿಯನ್ ಜನಸಂಖ್ಯೆ ಈಜಿಪ್ಟಿನ ಒಂದು ಪರ್ಸೆಂಟ್ ಗೂ ಕಮ್ಮಿ.
ಎಲ್ಲೆಡೆ ನೀಲಿಬಣ್ಣ ತುಂಬಿದ ಮನೆಗಳು,
ಅಲ್ಲಲ್ಲಿ ಅವರ ಕೈ ಕುಸುರಿ ವಸ್ತುಗಳು,
ಅವರೇ ನೇಯ್ದಿದ್ದ ಬಟ್ಟೆಯ ವಸ್ತುಗಳು,
ವಿಚಿತ್ರ ಸರಗಳು,
ಬೇರೆ ಬೇರೆ ಪ್ರಾಣಿಗಳ ಮುಖ ಹೋಲುವ ಆಟಿಕೆಗಳು,
ಕಪ್ಪು ಬಣ್ಣದ ಎತ್ತರದ ಮೈಕಟ್ಟು,
ಮುಗ್ಧತೆ,ಅವರ ಹಾಡುಗಳು,
ಎಲ್ಲವೂ ಸೂಪರ್.
ಅವರು ಮನೆಗಳ ನೆಲಕ್ಕೆ ಮರಳು ಹಾಕಿರುತ್ತಿದ್ದರು.
ಕಸ ಗುಡಿಸೋ ರಿಸ್ಕೇ ಇಲ್ಲ.
ಬಹುತೇಕರು ಮನೆಯಲ್ಲಿ ಮೊಸಳೆ ಸಾಕಿದ್ದರು.
ಪ್ರಾಚೀನ ಈಜಿಪ್ಟಿಯನ್ನರು ಪ್ರಕೃತಿಯಲ್ಲಿನ ಬಹುತೇಕ ಪ್ರಾಣಿ ಪಕ್ಷಿಗಳಲ್ಲಿ ದೇವರನ್ನು ಕಾಣುತ್ತಿದ್ದರು.
ಹದ್ದು Falcon god HORUS ಆದರೆ
ಹಸು goddess HATHOR
ನರಿ ಮುಖದ ಮನುಷ್ಯ God ANUBIS
ಅವುಗಳಲ್ಲಿ ಮೊಸಳೆಯ ಹೆಸರು God SOBEK.
ವಿಶೇಷವೆಂದರೆ ಅವರು ಮೊಸಳೆಯನ್ನೂ ತಿನ್ನುತ್ತಾರಂತೆ.
ಇಡೀ ಈಜಿಪ್ಟಿನಲ್ಲಿ ನನಗೆ ಅತ್ಯಂತ ಇಷ್ಟವಾದ ಜಾಗದಲ್ಲಿ ನುಬಿಯನ್ ವಿಲೇಜ್ ಕೂಡ ಒಂದು.
ಅಲ್ಲೇ ನುಬಿಯನ್ ಮನೆಯೊಂದರ ಟೆರೇಸಿಗೆ ಎಂಟ್ರಿಕೊಟ್ಟಾಗ ಕೆಲವು ವಿದೇಶಿಯರು ಅಲ್ಲಿನ ಲೋಕಲ್ ಆರ್ಟಿಸ್ಟೊಬ್ಬನ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದರು.
ಆತನ ಕಂಠ ಮತ್ತು ಬಡಿತ ಎರಡೂ ಅದ್ಭುತ.
ಹಿಂದೂ ಮುಂದೂ ನೋಡದೆ ನಾನು ಹೋಗಿ ಸೇರ್ಕೊಂಡೆ.
ಒಂದತ್ ನಿಮಿಷ ಕಂಟಿನ್ಯೂಯಸ್ ಕುಣಿತ.
ಅಲ್ಲೊಬ್ಬಳು ನುಬಿಯನ್ ಹೆಂಗಸು ಮಣಿಗಳಿಂದ ಪೋಣಿಸಿದ್ದ ರಿಸ್ಟ್ ಬ್ಯಾಂಡೊಂದನ್ನು ಮಾರಲು ಬಂದಳು.
ನಾನು ಒಂದೇ ಸಾಕು ಎಂದು ಹಣ ಕೊಟ್ಟೆ.
ಆಕೆ ಒಂದರದ್ದು ಮಾತ್ರ ಹಣ ಪಡೆದು ನೀವಿಬ್ಬರಿದ್ದೀರಿ ಎಂದು ಸಂಕೇತ್ ಗೆ ಒಂದು ಫ್ರೀಯಾಗಿ ಕೊಟ್ಟಳು.
ಅಲ್ಲೇ ಅವಳು ಟಾರ್ಜಾನ್ ರೀತಿಯಲ್ಲಿ ಕೂಗಿ ಒಂದಷ್ಟು ರಂಜಿಸಿದಳು.
ಯುರೋಪಿಯನ್ ವಿದೇಶಿ ಹೆಂಗಸೊಬ್ಬಳು ಬಂದು From India? ಅಂದಳು.
ಹೌದೆಂದಾಗ ಐ ಹ್ಯಾವ್ ವಿಸಿಟೆಡ್ ಕೇರಳ.ಇಟ್ಸ್ ಸೋ ನೈಸ್ ಅಂದಳು.
ನಾನವಳಿಗೆ ಜಗತ್ತಿನ ಬೆಸ್ಟ್ ಕಾಫೀ ಬೆಳೆಯುವ ಚಿಕ್ಕಮಗಳೂರೆಂಬ ಜಾಗದಿಂದ ನಾವು ಬಂದಿರೋದೆಂದು, ಅಲ್ಲಿಗೊಮ್ಮೆ ವಿಸಿಟ್ ಮಾಡಲು ಹೇಳಿದೆ.
ಅಷ್ಟರಲ್ಲಾಗಲೇ ಚಂದಮಾಮ ಬಂದಿದ್ದ.
ತಣ್ಣಗೆ ಬೆಳದಿಂಗಳಲ್ಲಿ ನೈಲ್ ಹರಿಯುತ್ತಿದ್ದಳು
ಆಮೇಲೆ ಅಲ್ಲೇ ಟೆರೇಸಿನಲ್ಲಿ ಮಿಂಟ್ ಟೀ ಕುಡಿದ್ವಿ.
ಬೇಡ ಅಂದರೂ ನಮ್ ಗೈಡ್ ಮಹಮ್ಮದ್ ಅದರ ಹಣ ಕೊಟ್ಟ.
ದಾರಿಯಲ್ಲಿ ನನಗೊಂದು ನುಬಿಯನ್ ಹ್ಯಾಟು ಧೃತಿಗೊಂದು ವಿಶೇಷ ಆಕಾರದಲ್ಲಿದ್ದ ಮರದ ಪೆನ್ಸೀಲನ್ನು ಖರೀದಿಸಿ ಮತ್ತೆ ಬೋಟಿನ ಟೆರೇಸಿನಲ್ಲಿ ಮುಕ್ಕಾಲು ಗಂಟೆಯ ವಾಪಾಸು ಜರ್ನಿಯ ನಂತರ ನಮ್ಮ ಹೊಟೇಲು ತಲುಪಿದೆವು.
ರಾತ್ರಿ ಹೊಟೇಲಿನಲ್ಲಿ ಊಟಕ್ಕೆ ಹೋದಾಗ ಗಮ್ಮತ್ತು ಕಾದಿತ್ತು.
ಬಫೆ ಊಟ ಮಾಡಲು ಹೋಗಿ ನೋಡಿದರೆ ದಾಲ್,ಸಬ್ಜಿ, ಚಪಾತಿ,ಅನ್ನ,ಸಾಂಬಾರು,ರಸಂ,ಮಟನ್ನು,ಚಿಕನ್ನು ಕರಿ,ಫಿಶ್ ನೋಡಿ ಗಾಬರಿಯಾಯ್ತು.
ಇಸ್ ಇಟ್ ಏ ಇಂಡಿಯನ್ ಹೊಟೇಲ್ ಎಂದಾಗ ಗೊತ್ತಾಗಿದ್ದೇನೆಂದರೆ ಯಾರೋ ಒಂದಿಪ್ಪತ್ತು ಗುಜರಾತಿಗಳಿಲು ರೂಮ್ ಬುಕ್ ಮಾಡಿದ್ದರಂತೆ.
ಅವರ ಮನವಿಯ ಮೇರೆಗೆ ಇಂಡಿಯನ್ ಊಟ ತಯಾರಿಸಲಾಗಿತ್ತಂತೆ.
ನಾವು ಟೆಸ್ಟ್ ಮ್ಯಾಚ್ ತರ ನಿಧಾನಕ್ಕೆ ರಾಜಭೋಜನ ಮಾಡಿ ಭಾರತ್ ಮಾತಾ ಕಿ ಜೈ ಅಂದು ಮರು ದಿನ ಬೆಳಗ್ಗೆ ಮೂರಕ್ಕೇ ಏಳಲು
ರೆಡಿಯಾದ್ವಿ.
Wake Up ಕಾಲ್ ನ ಸದ್ದು ಆಳನಿದ್ದೆಯನ್ನು ಕಿತ್ತೊಗೆಯುತ್ತಿದ್ದಂತೆಯೇ ಬೇಗನೆ ರೆಡಿಯಾಗಿ ಬೋಟನ್ನೇರಿ ನೈಲು ದಾಟಿ ನಮಗಾಗಿ ಕಾಯುತ್ತಿದ್ದ ಕಿಯಾ ಸೆಡಾನಿನಲ್ಲಿ ಕೂತಾಗ ಸುಮಾರು ನಾಲ್ಕು ಗಂಟೆ ಇರಬಹುದು.
ಮಾರ್ಗ ಮಧ್ಯೆ ಹಲವಾರು ಮಿಲಿಟರಿ ಚೆಕ್ ಪೋಸ್ಟುಗಳನ್ನು ದಾಟಿ ಕಾರು ಮುಂದೆ ಸಾಗುತ್ತಿತ್ತು.
ಆಸ್ವಾನಿನಿಂದ 290 ಕಿ.ಮೀ ದೂರದ ಆಲ್ಮೋಸ್ಟು ಈಜಿಪ್ಟಿನ ದಕ್ಷಿಣದ, ಸೂಡಾನ್ ಗಡಿಯ, ಅಬುಸಿಂಬೆಲ್ ಗೆ ನಾವು ಹೋಗುತ್ತಿದ್ದದ್ದು.
ಅದೊಂದು ಯುನೆಸ್ಕೋ ಹೆರಿಟೇಜ್.
ಅಲ್ಲಿ ಎರಡು ದೊಡ್ಡ ಕಲ್ಲಿನಿಂದ ಕೆತ್ತಿ ಮಾಡಿದ ದೇವಸ್ಥಾನಗಳಿವೆ.
ಪ್ರಾಚೀನ ಇತಿಹಾಸದ ದೊಡ್ಡ ಯುದ್ಧಗಳಲ್ಲೊಂದಾದ ಖಾದೀಶ್(Battle Of khadeesh) ಯುದ್ಧದ ಗೆಲುವಿಗಾಗಿ
ದೊರೆ ಎರಡನೇ ರ್ಯಾಮ್ಸೆ ಕಟ್ಟಿಸಿದ, ಹೊರಗಡೆ ಆತನದೇ ಬೃಹತ್ ಶಿಲಾವಿಗ್ರಹಗಳ ಒಳಗಡೆ ಈಜಿಪ್ಟ್ ಶಕ್ತಿಶಾಲಿ ದೇವರಾದ “ಆಮುನ್-ರಾ” ನಿಗಾಗಿ ಕಟ್ಟಿಸಿದ ಒಂದು ದೇವಸ್ಥಾನವಿದೆ.
ಪಕ್ಕದಲ್ಲೇ ದೇವತೆ HATHOR ಗಾಗಿ ತನ್ನ ಫೆವರೀಟು ರಾಣಿ ನೆಫರ್ಟಾರಿಯ ದೊಡ್ಡವಿಗ್ರಹಗಳೊಂದಿಗೆ ಎರಡನೇ ರ್ಯಾಮ್ಸೆಯೂ ನಿಂತಿರುವ ಇನ್ನೊಂದು ದೇವಸ್ಥಾನವಿದೆ.
ಕ್ರಿ.ಪೂರ್ವ ಹದಿಮೂರನೇ ಶತಮಾನದಲ್ಲಿ ಕಟ್ಟಿದ ಈ ಬೃಹತ್ ಶಿಲಾ ವಿಗ್ರಹಗಳು ಪ್ರಾಚೀನ ಮಾನವ ನಿರ್ಮಾಣದ ಅದ್ಭುತಗಳಲ್ಲೊಂದು.
ರ್ಯಾಮ್ಸೆ ತನ್ನನ್ನು, ದೇವರಾದ ಅಮುನ್-ರಾ ಎಂದೂ,
ಹೆಂಡತಿ ನೆಫರ್ಟಾರಿ ಅಮುನ್ ರಾನ ಪತ್ನಿ ಎಂದೂ ಬಿಂಬಿಸಿರುವ ಶಿಲಾ ಕೆತ್ತನೆಗಳಿವು.
ಮೂಲತಃ ಈ ದೇವಸ್ಥಾನಗಳು ಈಗಿರುವ ಸ್ಥಳದಲ್ಲಿರಲಿಲ್ಲ.
ಮರಳಿನಲ್ಲಿ ಹುದುಗಿ ಹೋಗಿದ್ದ ಈ ದೇವಸ್ಥಾನಗಳನ್ನು 1813ರಲ್ಲಿ ಸ್ವಿಟ್ಜರ್ಲ್ಯಾಂಡಿನ Explorer ಒಬ್ಬ ರೀ ಡಿಸ್ಕವರ್ ಮಾಡುವವರೆಗೆ ಆಧುನಿಕ ಜಗತ್ತಿಗೆ ಇದರ ಸುಳಿವೇ ಇರಲಿಲ್ಲ.
ನಂತರ 1964 ರಲ್ಲಿ ಈಜಿಪ್ಟಿನ ಅಂದಿನ ಅಧ್ಯಕ್ಷ
ಅಬ್ದುಲ್ ನಾಸೆರ್ ಈಜಿಪ್ಟಿನ ವಿವಿದೋದ್ದೇಶ ಯೋಜನೆಗಳಿಗಾಗಿ ನೈಲ್ ನದಿಗೆ ಆಸ್ವಾನಿನಲ್ಲಿ ಹೈ ಡ್ಯಾಮ್ ನಿರ್ಮಿಸಲು ಮುಂದಾದಾಗ ನೀರಿನ ಮಟ್ಟ ಏರಿ ಈ ದೇವಸ್ತಾನಗಳು ಮುಳುಗಡೆಯಾದವಂತೆ.
ಆಗ ಯುನೆಸ್ಕೋ ಈ ಅದ್ಭುತ ಶಿಲ್ಪಕಲೆಯನ್ನು ಉಳಿಸುವ ಉದ್ದೇಶದಿಂದ ಮೂಲ ದೇವಸ್ಥಾನವನ್ನು ಅಲ್ಲಿಂದ 65 ಮೀಟರ್ ಎತ್ತರದ ಇನ್ನೂರು ಮೀ ದೂರಕ್ಕೆ ಸ್ವಿಝರ್ಲ್ಯಾಂಡ್ ಕಂಪೆನಿಯೊಂದಿಗೆ ಅಂದಿನ ಕಾಲಕ್ಕೇ ಇನ್ನೂರು ಮಿಲಿಯನ್ ವೆಚ್ಛದಲ್ಲಿ ಮರು ಸ್ಥಳಾಂತರಿಸಲಾಯಿತು.
ಈ ಮರು ಸ್ಥಳಾಂತರ ಆಧುನಿಕ ಇಂಜಿನಿಯರಿಂಗ್ ನ ದೊಡ್ಡ ಸಾಧನೆಗಳಲ್ಲೊಂದು.
ಸಂಪೂರ್ಣ ದೇವಸ್ಥಾನವನ್ನು ಸುಮಾರು ಒಂದು ಸಾವಿರ ಪೀಸುಗಳನ್ನಾಗಿ ಕತ್ತರಿಸಿ
ಮೂಲ ಸ್ವರೂಪದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಸ್ಥಳಾಂತರಿಸಲಾಗಿದೆ.
ಅದೆಷ್ಟು ಕರಾರುವಾಕ್ಕಾಗಿ ಅದನ್ನು ಜೋಡಿಸಲಾಗಿದೆಯೆಂದರೆ,
ಪ್ರತೀ ವರ್ಷ ಅಕ್ಟೋಬರ್ 21 ಹಾಗೂ ಫೆಬ್ರವರಿ 21 ರಂದು ಸೂರ್ಯನ ಕಿರಣಗಳು ದೇವಸ್ಥಾನದ ಗರ್ಭಗುಡಿಯ ನಾಲ್ಕು ದೇವತೆಗಳಲ್ಲಿ ಮೂರರ ಮೇಲೆ ಬೀಳುವಂತೆ(God Of Dark ಹೊರತುಪಡಿಸಿ) ಪ್ರಾಚೀನ ಈಜಿಪ್ಟಿಯನ್ನರು ನಿರ್ಮಿಸಿದಂತೆಯೇ ವಾಸ್ತವತೆಯಲ್ಲೂ ಉಳಿಸಿಕೊಳ್ಳಲಾಗಿದೆ.
ಅದೃಷ್ಟವಶಾತ್ ನಾವು ಅಬುಸಿಂಬೆಲ್ ಗೆ ಹೋದ ದಿನವೂ ಅಕ್ಟೋಬರ್ ಇಪ್ಪತ್ತೊಂದು.
ಅಂದಿನ ಈಜಿಪ್ಟಿಯನ್ನರ ಖಗೋಳಜ್ಞಾನ ಅನ್ಬಿಲೀವಬಲ್.
ಇನ್ನು ಎರಡನೇ ರ್ಯಾಮ್ಸೆ ಮಹಾನುಭಾವನ ಬಗ್ಗೆ ಹೇಳಬೇಕೆಂದರೆ ಪುರುಸೊತ್ತಿದ್ದಾಗ ಇವನ ಬಗ್ಗೆ ಗೂಗಲ್ಲನ್ನೊಮ್ಮೆ ಜಾಲಾಡಿ.
ಆತನಿಗೆ ಪ್ರಮುಖವಾಗಿ ಐದು ಹೆಂಡತಿಯರಿದ್ದರೂ ಒಟ್ಟು ಅರವತ್ತಕ್ಕೂ ಹೆಚ್ಚು ಪತ್ನಿಯರಿದ್ದರಂತೆ.
ಇನ್ನೂರಕ್ಕೂ ಹೆಚ್ಚು ಮಕ್ಕಳಿದ್ದವಂತೆ.
ಆತ ತನ್ನ ಮಕ್ಕಳನ್ನೂ ಮದುವೆಯಾಗಿದ್ದನಂತೆ.
ಗ್ರೀಕರಲ್ಲಿದ್ದಂತೆ Ancient ಈಜಿಪ್ಟಿಯನ್ನರಲ್ಲೂ ಅಣ್ಣ ತಂಗಿಯರು ಮದುವೆಯಾಗಯತ್ತಿದ್ದ ಸಂಪ್ರದಾಯ ಬಹುತೇಕ ಎಲ್ಲಾ ಡೈನಾಸ್ಟಿಗಳಲ್ಲೂ ಕಂಡು ಬರುತ್ತದೆ.
ಇವೆಲ್ಲ ಇಂದಿಗೆ ಮೂರ್ನಾಲ್ಕು ಸಾವಿರ ವರ್ಷಗಳ ಹಿಂದಿನ ಮಾತು.
ಅಬುಸಿಂಬೆಲ್ಲು ಮುಗಿಸಿ ನೈಲ್ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಆಸ್ವಾನ್ ಹೈ ಡ್ಯಾಮಿನ ಕಡೆಗೆ ವಾಪಾಸು ಹೊರಟಾಗ ಮಟಮಟ ಮಧ್ಯಾಹ್ನ.
ಮರಳು ಗಾಡಿನೆಲ್ಲೆಡೆ ಮರೀಚಿಕೆಗಳು ಕಾಣುತ್ತಿದ್ದವು.
1964 ರಲ್ಲಿ ಅಧ್ಯಕ್ಷ ಅಬ್ದುಲ್ ನಾಸೀರ್ ಈ ಡ್ಯಾಮು ಕಟ್ಟಿದ್ದರಿಂದ ಉದ್ದಕ್ಕೆ ಹರಿಯುತ್ತಿದ್ದ ನೈಲ್ ತಗ್ಗು ಪ್ರದೇಶಗಳಿಗೆಲ್ಲ ಆವರಿಸಿ ದೊಡ್ಡ ಸರೋವರದಂತಾಗಿದ್ದಾಳೆ.
ಅದನ್ನೀಗ “ಲೇಕ್ ನಾಸೀರ್”ಎಂತಲೇ ಕರೆಯೋದು.
ಡ್ಯಾಮಿನಮಟ್ಟ ಏರಿದ್ದರಿಂದ ಅದೀಗ ಸುಮಾರು 500 ಕಿ.ಮೀ ವರೆಗೆ ವಿಸ್ತರಿಸಿ ಅಕ್ಷರಶಃ ಸಮುದ್ರದಂತೆ ಕಾಣುತ್ತೆ.
ಅದರಲ್ಲಿ 350 ಕಿ.ಮೀ ಈಜಿಪ್ಟಿನಲ್ಲಿದ್ದರೆ,150 ಕಿ.ಮೀ.ಸೂಡಾನಿನವರೆಗೆ ವಿಸ್ತರಿಸಿದೆ ಅಂದರೆ ನೀವದರ ಬೃಹತ್ ಗಾತ್ರವನ್ನು ಊಹಿಸಬಹುದು.
ಅಲ್ಲಿನ ಲಕ್ಷಾಂತರ ಜಲಚರಗಳಿದ್ದು ಫೇಮಸ್ ಎಂದರೆ ನೈಲ್ ಕ್ರೋಕೋಡೈಲ್.
ಈ ಮಧ್ಯೆ ದಾರಿಯುದ್ದಕ್ಕೂ ಮಿಲಿಟರಿ ಚೆಕ್ ಪೋಸ್ಟುಗಳಲ್ಲಿ ನಮ್ಮ ಕಾರು ನಿಲ್ಲಿಸಿ ಆರ್ಮಿಯವರು,ಪೊಲೀಸರೂ, ಪ್ರಶ್ಣಿಸುತ್ತಿದ್ದಾಗ
ನಮ್ಮ ಡ್ರೈವರ್ ನಮ್ಮನ್ನು ಪದೇ ಪದೇ “ಹಿಂದಿ”
“ಹಿಂದಿ” ಅನ್ನುತ್ತಿದ್ದ.
ಈಜಿಪ್ಟಿಗೂ ಬಂದರೂ ನಮ್ಮ ಮೇಲೆ “ಈ ಹಿಂದಿ ಹೇರಿಕೆ” ನಿಲ್ತಿಲ್ವಲ್ಲ ಅಂತ ಒಳಗೊಳಗೆ ಸಿಟ್ಟು ಬಂತು.
ಆದರೆ ಅವ ಹೇಳುತ್ತಿರೋದು ಹಿಂದುಸ್ತಾನದವರಿರಬೇಕು ಅಂತ ಅಂದುಕೊಂಡು ಸಮಾಧಾನಪಟ್ಟು ಕೊಂಡೆ.
ಆದರೂ ನನ್ನೊಳಗಿನ ಕನ್ನಡ ಅಸ್ಮಿತೆ ಜಾಗೃತವಾಯ್ತು.
ಬ್ಯಾಗಿನಲ್ಲಿ ಜೋಪಾನವಾಗಿ ಇಲ್ಲಿಂದ ಕೊಂಡೋಗಿದ್ದ ಕನ್ನಡ ಧ್ವಜ ನೆನಪಾಯ್ತು.
ಹೈಡ್ಯಾಮು ತಲುಪಿದ ಕೂಡಲೇ ಇದನ್ನೊಮ್ಮೆ ಹಾರಿಸಲೇಬೇಕೆಂದು ತೀರ್ಮಾನಿಸಿದೆ.
ತಲುಪಿದ ಕೂಡಲೇ ಮಾಡಿದ ಮೊದಲ ಕೆಲಸವೇ ಅದಾಗಿತ್ತು.
ರಷ್ಯಾ ಸಹಭಾಗಿತ್ವದಲ್ಲಿ ಕಟ್ಟಿದ ಈ ಡ್ಯಾಮು ಈಜಿಪ್ಟಿನ ನೀರಾವರಿ,ವಿದ್ಯುಚ್ಛಕ್ತಿಯ ಜೀವಾಳ.
ಈ ಡ್ಯಾಮಿನ ನಂತರ ಹರಿಯುವ ನೀರಿನಲ್ಲಿ ಮೊಸಳೆಗಳಿರುವುದಿಲ್ಲವಂತೆ.
ಹಾಗೇನಾದರೂ ಬಂದರೆ ಟರ್ಬೈನುಗಳಿಗೆ ಸಿಲುಕು ಬದುಕುಳಿಯುವುದಿಲ್ಲವಂತೆ ಅಂದ ನಮ್ಮ ಟೂರ್ ಗೈಡ್ ಮಹಮ್ಮದ್.
ಮಹಮ್ಮದ್ ಒಳ್ಳೆಯ ಹುಡುಗ.
ಸುಮಾರು ಮೂವತ್ತಿರಬಹುದು ಅವನಿಗೆ.
ಈಜಿಪ್ಟಲ್ಲಿ ಟೂರ್ ಗೈಡ್ ಆಗೋದೆ ಒಂದೊಳ್ಳೆ ಪೋಸ್ಟಂತೆ.
ಅಲ್ಲಿನ ಸರ್ಕಾರ ಅವರಿಗೊಂದು ಐ.ಡಿ.ಕಾರ್ಡು ವಿತರಿಸಿರುತ್ತೆ.
ಬಹುತೇಕ ಕಡೆ ಅವರಿಗೆ ಫ್ರೀ ಎಂಟ್ರಿ.
ಚೀಟ್ ಮಾಡುವ ಯಾವುದೇ ಮನಸ್ಥಿತಿ ಅವನಿಗಿರಲಿಲ್ಲ.
ತುಂಬ ಆತ್ಮೀಯವಾಗೂ,ಪ್ರಾಮಾಣಿಕವಾಗೂ ಇದ್ದ.
ನನಗೀಗ ಅವನು ಫೇಸ್ಬುಕ್ ಫ್ರೆಂಡ್.
ಅವಾಗವಾಗ ವಾಟ್ಸಾಪಲ್ಲೂ ಮೆಸೇಜ್ ಹಾಕ್ತಿರುತ್ತಾನೆ.
ಭಾರತಕ್ಕೇನಾದರು ಬಂದರೆ ಬೆಂಗಳೂರು ಬರೋದು ಮರೀಬೇಡ ಐ ವಿಲ್ ಟೇಕ್ ಕೇರ್ ಆಫ್ ಯು ಅಂತೇಳೇ ಬಂದಿದ್ದು ಬೀಳ್ಕೊಡುವಾಗ.
ಹೈ ಡ್ಯಾಮು ಮುಗಿಸಿ ಹೋಗಿದ್ದು ನೈಲ್ ನದಿಯ ಒಂದು ಐಲ್ಯಾಂಡಿನಲ್ಲಿರುವ ಫಿಲೆ(Philae) ಟೆಂಪಲ್ಗೆ.
ಈಜಿಪ್ಟಿನ Mythology ಅದ್ಬುತ.
ನಮ್ಮ ಮಹಾಭಾರತ ,ರಾಮಾಯಣದ ಮುಂದೆ ಸಪ್ಪೆಯೆನಿಸಿದರೂ ಅದರದೇ ಆದ ಅದ್ಬುತ ಕತೆಗಳಿವೆ.
ಈಜಿಪ್ಟಿನ ದೇವರುಗಳು,ಅವುಗಳ ಆಕಾರ,ಅವುಗಳ ಶಕ್ತಿಗಳು, ಅವುಗಳ ಪ್ರಾಣಿಗಳ ಹೋಲಿಕೆ,ಅರ್ಧ ಮನುಷ್ಯ ಅರ್ಧ ಪ್ರಾಣಿಗಳ ದೇಹ,ದೇವರೊಂದಿಗೆ ರಾಜ ರಾಣಿಯರ ಹೋಲಿಕೆ,ಪುನರ್ಜನ್ಮಗಳ ಕಲ್ಪನೆಗಳೆಲ್ಲ ಅದ್ಭುತ ಲೋಕವೊಂದನ್ನೇ ತೆರೆದಿಡುತ್ತದೆ.
ರಾ ಸೂರ್ಯನಾದರೆ,ಅಮುನ್ ರಾ ಈಜಿಪ್ಟಿನ ಶ್ರೇಷ್ಠ ದೇವರು.
ಆಸಿರಿಸ್,ಅವನ ಹೆಂಡತಿ ಐಸಿಸ್,
ಅವರಿಬ್ಬರ ಮಗ ಹೋರಸ್
ಹೋರಸ್ ನ ಹೆಂಡತಿ ಹಥೋರ್,
ಸೆಟ್,ಅನುಬಿಸ್,ಸೊಬೆಕ್ ಎಲ್ಲವುಗಳ ಹಿಂದೊಂದು ಅದ್ಬುತವಾದ ಲೋಕವೊಂದಿದೆ.
ಅವೆಲ್ಲವುಗಳ ಪಾತ್ರದಂತೆ ಅಂದಿನ ರಾಜರುಗಳು ಅನುಕರಿಸಿ ತಾವೂ ದೇವರೆಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಕಾಲಾಂತರದಲ್ಲಿ ಈಜಿಪ್ಟನ್ನು ಆಕ್ರಮಣ ಮಾಡಿದ ಅಲೆಕ್ಸಾಂಡರ್,ನಂತರದ ಕ್ಲಿಯೋಪಾತ್ರ ಎಲ್ಲರೂ ಇದನ್ನೇ ಅನುಕರಣೆ ಮಾಡಿದ್ದಾರೆ.
ಈಜಿಪ್ಟಿನ ಮಿಥಾಲಜಿಯ ಬಗ್ಗೆ ಹಾಲಿವುಡ್ ಮೂವಿಗಳಾದ “Gods Of Egypt” ಹಾಗೂ “Exodus”ನೋಡಬಹುದು.
ಫಿಲೇ ಟೆಂಪಲ್ ಈಜಿಪ್ಟಿನ ದೇವತೆ ಐಸಿಸ್ ಳದ್ದು.
ಅಲೆಕ್ಸಾಂಡರನ ಅವಸಾನದ ನಂತರ ಈಜಿಪ್ಟನ್ನು ಆಳಿದ ಗ್ರೀಕ್ ಮೂಲದ ಟಾಲೆಮಿಗಳು ಕಟ್ಟಿದ ದೇವಸ್ಥಾನವಿದು.
ಗ್ರೀಕ್ ರೋಮನ್ ಶೈಲಿಯ ಸುಣ್ಣದಕಲ್ಲಿನ ವಂಡರ್.
ಸುಣ್ಣದ ಕಲ್ಲಿನ ಮೇಲೆಲ್ಲ ಪ್ರಾಚೀನ ಈಜಿಪ್ಟಿನ ಲಿಪಿ ಹೈರೋಗ್ಲಿಫ್ಸ್ ನಲ್ಲಿ ಎಲ್ಲವನ್ನೂ ವಿವರಿಸಲಾಗಿದೆ.
ಈ ಹೈರೋಗ್ಲಿಫ್ಸ್ ಬಗ್ಗೆ ವಿವರಿಸದೆ ಈಜಿಪ್ಟಿನ ಇತಿಹಾಸದ ಬಗ್ಗೆ ಹೇಳುವುದು ಅಪ್ರಸ್ತುತವಾದೀತು.
ಹೈರೋಗ್ಲಿಫ್ಸ್ ಇದೊಂದು ವಿಚಿತ್ರ ಆಕಾರಗಳ ಪ್ರಾಣಿ,ಪಕ್ಷಿಗಳ ಚಿತ್ರಗಳನ್ನೂ ಒಳಗೊಂಡ ಪ್ರತಿಯೊಂದು ಚಿಹ್ನೆಗೂ ಒಂದೊಂದು ಅರ್ಥವಿರುವ,ಸುಮಾರು ಸಾವಿರದಷ್ಟು ವರ್ಣಮಾಲೆಗಳ ಪ್ರಾಚೀನ ಈಜಿಪ್ಟಿನ ಲಿಪಿ.
ಈಜಿಪ್ಟಿನ ಯಾವುದೇ ಪುರಾತನ ದೇವಾಲಯಗಳಿಗೆ ಹೋದರೂ ನಿಮಗೆ ಅಲ್ಲಿನ ಡೀಟೇಲು ವಿವರಣೆ ಸಿಗೋದು ಹೈರೋಗ್ಲಿಫ್ಸ್ ನಿಂದ.
ಮಮ್ಮಿಗಳ ಹೂತಿಡುವ ಜಾಗದಿಂದ ಯಾವುದೇ ಕೆತ್ತನೆ,ಶಿಲಾಶಾಸನಗಳು, ಸ್ತಂಭಗಳನ್ನೂ ಇದು ಬಿಟ್ಟಿಲ್ಲ.
ಹೈರೋಗ್ಲಿಫ್ಸ್ ಲಿಪಿಯನ್ನು ನೋಡೋದೇ ಒಂದು ಅಂದ.
ಈಜಿಪ್ಟಿನ ಸಮಸ್ತ ಇತಿಹಾಸವನ್ನ ಇತಿಹಾಸಕಾರರು ಹೇಳಿದ್ದೇ ಈ ಹೈರೋಗ್ಲಿಫ್ಸ್ ನ ಡೀಟೇಲು ಅಧ್ಯಯನದಿಂದ.
ಫಿಲೇ ಟೆಂಪಲ್ಲು ಒಂದು ಸುಂದರ ಐಲ್ಯಾಂಡು. ವಾಪಾಸು ಬರೋವಾಗ ಇಲ್ಲಿಂದ ಕೊಂಡೋಯ್ದು ಮೆಡಿಟರೇನಿಯನ್ನಿಗೊಂದಿಷ್ಟು ಚೆಲ್ಲಿ ಮಿಕ್ಕುಳಿದಿದ್ದ ಹೇಮಾವತಿಯ ನೀರನ್ನು ನೈಲಿಗೆ ಚೆಲ್ಲಿ,ಅರ್ಧ ಲೀಟರ್ ನೈಲ್ ನೀರನ್ನು ಅಲ್ಲೇ ಬಾಟಲಿಗೆ ಎತ್ತಿಕೊಂಡು ಘಟಘಟನೆ ಕುಡಿದು, ಮತ್ತೊಮ್ಮೆ ಬಾಟಲು ಫುಲ್ಲು ನೀರು ತುಂಬಿಸಿಕೊಂಡು ಇಟ್ಟುಕೊಂಡೆ.
ಅಲ್ಲಿಂದ ಸೀದ ಬಂದಿದ್ದು ಕ್ರೂಸ್ ಗೆ.
ಅದರೆಸರು ಮೂನ್ ಡ್ಯಾನ್ಸ್.
ನೈಲು ಕ್ರೂಸಿನ ಮೊದಲ ದಿನ. ಅಂದು ರಾತ್ರಿಯೇ ಮೂನ್ ಡ್ಯಾನ್ಸ್ ಕ್ರೂಸು ಹೊರಡಬೇಕಿತ್ತು.ಆದರೆ ಫ್ರಾನ್ಸಿನ ಒಂದಷ್ಟು ಪ್ರವಾಸಿಗರು ಮಾರನೇ ದಿನ ಬರುವಂತಾದ್ದರಿಂದ ಅರ್ದ ದಿನ ಲೇಟಾಯ್ತು.
ರಾತ್ರಿ ಕ್ರೂಸಿನ ಮೇಲಿನ ಡೆಕ್ ಗೆ ಬಂದರೆ ಚಂದಮಾಮ ಬೆಳಗುತ್ತಿದ್ದ.
ನೈಲು ಶಾಂತವಾಗಿ ಹರಿಯುತ್ತಿದ್ದಳು.
ಅದೆಷ್ಟು ದೂರದಿಂದ ಆಕೆ ಹರಿದುಕೊಂಡು ಬರುತ್ತಿರೋದು.
ನೈಲ್ ನದಿ ಎಲ್ಲಿ ಹುಟ್ಟುತ್ತದೆ ಎಂದು ಕಂಡು ಹಿಡಿಯಲಿಕ್ಕೇ ಶತಮಾನಗಳೇ ಕಳೆದಿದ್ದವಂತೆ.
ಜೀವಮಾನವಿಡೀ ನೈಲ್ ನದಿಯ ಮೂಲವನ್ನು ಕಂಡು ಹಿಡಿಯಲು ಬದುಕು ಸವೆಸಿದ ಹಲವು ಕಥೆಗಳಿವೆ.
ಗ್ರೀಕ್ ಹಿಸ್ಟೋರಿಯನ್ ಹೆರೋಡಾಟಸ್ ಪ್ರವಾಹವನ್ನೇ ಹೊತ್ತು ತಂದು ಮೆಡಿಟರೇನಿಯನ್ ಗೆ ದುಮ್ಮಿಕ್ಕುವ ನದಿಯ ಬಗ್ಗೆ ಕ್ರಿಸ್ತ ಪೂರ್ವದಲ್ಲೇ ವರ್ಣಿಸಿದ್ದಾನೆ.
ನೈಲ್ ಎಲ್ಲಿಂದ ಹುಟ್ಟಿ ಬರುತ್ತದೆಂದು ಕಾಲಕಾಲಕ್ಕೆ ರಾಜರುಗಳು,ವಿದ್ವಾಂಸರು,ಸರ್ವಾಧಿಕಾರಿಗಳು ಹುಡುಕುತ್ತಲೇ ಬಂದಿದ್ದಾರೆ.
ಎರಡನೇ ಟಾಲಮಿ ಫಿಲಿಡೆಲ್ಫಸ್ ಎಂಬಾತನನ್ನು ಪ್ರವಾಹ ಉಂಟುಮಾಡುವ ನೈಲ್ ನ ಮೂಲ ಕಂಡು ಹಿಡಿಯಲು ಕಳುಹಿಸಿದ್ದನಂತೆ.
ಬಹುತೇಕ ಹಿಂದಿನ ದೊರೆಗಳು ಈಗಿನ ಇಥಿಯೋಪಿಯಾದ ಟಾನ(TANA) ಸರೋವರವೇ ನೈಲ್ ನ ಮೂಲ ಎಂದು ಭಾವಿಸಿದ್ದರು.
ಹದಿನಾಲ್ಕನೇ ಶತಮಾನದಲ್ಲಿ ಯುರೋಪಿನಿಂದ ಆಫ್ರಿಕಾಗೆ ಪೋಪ್ ಕಳುಹಿಸಿದ ವಿದ್ವಾಂಸರುಗಳೂ ಅಂದಿನ ಅಬಿಸೀನಿಯಾವೇ(ಇಂದಿನ ಇಥಿಯೋಪಿಯಾ) ನೈಲ್ ನ ಮೂಲ ಎಂದೇ ಭಾವಿಸಿದ್ದರು.
1858 ರಲ್ಲಿ ಬ್ರಿಟೀಷ್ ಜಾನ್ ಹ್ಯಾನಿಂಗ್ ಸ್ಪೀಕೆ ಹಾಗೂ ಅವನ ಗೆಳೆಯ ರಿಚರ್ಡ್ ಬರ್ಟನ್ ಸೂಡಾನಿನಿಂದ ದಕ್ಷಿಣಕ್ಕೆ ಚಲಿಸುತ್ತ ಇಂದಿನ ಆಫ್ರಿಕಾ ಖಂಡದ ಮಧ್ಯಭಾಗವನ್ನು ಪ್ರವೇಶಿಸುತ್ತಾರೆ.
ಬರ್ಟನ್ ಅನಾರೋಗ್ಯದಿಂದ ವಾಪಾಸಾದರೆ ಸ್ಪೀಕೆ ಮಾತ್ರ ಆಫ್ರಿಕಾದ ಮಧ್ಯದಲ್ಲೊಂದು ದೊಡ್ಡ ಸರೋವರನ್ನು ಕಂಡು ಹಿಡಿದು
ಆ ಸರೋವರಕ್ಕೆ ಇಂಗ್ಲೆಂಡ್ ರಾಣಿ ವಿಕ್ಟೋರಿಯಾಳ ಹೆಸರಿಡುತ್ತಾನೆ.
ಅದೇ ಇಂದಿನ ವಿಕ್ಟೋರಿಯಾ ಲೇಕ್.
ಅದುವೇ ಜಗತ್ತಿನ ಎರಡನೇ ಅತೀ ದೊಡ್ಡ ಸರೋವರ.
ಅಂತೂ ಆಧುನಿಕ ಜಗತ್ತಿಗೆ ಲೇಕ್ ವಿಕ್ಟೋರಿಯಾವೇ ನೈಲ್ ನ ಮೂಲ ಎಂದು ಜಾನ್ ಸ್ಪೀಕೆಯ ವಾದವನ್ನು ಖಚಿತಪಡಿಸಿದ್ದು ಹೆನ್ರಿ ಮೋರ್ಟನ್ ಸ್ಟಾನ್ಲೆ.
ವಿಕ್ಟೋರಿಯಾ ಸರೋವರಕ್ಕೆ ಹಲವಾರು ನದಿಗಳು ಒಳಗೆ ಹರಿದು ಬರುತ್ತವೆ.
ವಿಕ್ಟೋರಿಯಾ ಸರೋವರ ಇಂದಿನ ಕೀನ್ಯಾ,ತಾಂಝಾನಿಯ,ಹಾಗೂ ಉಗಾಂಡಗಳೊಂದಿಗೆ ಗಡಿ ಹಂಚಿಕೊಂಡಿದೆ.
ಬುರುಂಡಿ,ಕೀನ್ಯಾ,ರುವಾಂಡ,ತಾಂಝಾನಿಯಾ,ಉಗಾಂಡದ ಬೇರೆ ಬೇರೆ ನದಿಗಳು(ಮಾರ,ಗ್ರುಮ್ಮೆಟಿ,ಸಿಮಾವು,ಖಗೇರ,ಕಟೋಂಗ) ಬಂದು ಲೇಕ್ ವಿಕ್ಟೋರಿಯಾ ಸೇರುತ್ತವೆ.
ಇವೆಲ್ಲ ಒಳ ಬರುವ ನದಿಗಳು.
ಆದರೆ ಸ್ಟಾನ್ಲೆ ವಿಕ್ಟೋರಿಯಾ ಲೇಕ್ ನ,ರಿಪ್ಪನ್ ಫಾಲ್ಸ್ ಬಳಿಯೊಂದು ಕಡೆ ನದಿಯೊಂದು ಹೊರಹೋಗುವುದನ್ನು ಗಮನಿಸುತ್ತಾನೆ.
ಆ ಮೂಲಕ ಈ ಹಿಂದೆ ಜಾನ್ ಸ್ಪೀಕೆಯ ವಾದವಾದ ವಿಕ್ಟೋರಿಯಾ ಸರೋವರವೇ ನೈಲ್ ನ ಮೂಲವೆಂದು ತೋರಿಸಿಕೊಡುತ್ತಾನೆ.
ಅದುವೇ ಇಂದಿನ ವೈಟ್ ನೈಲ್.
ಹೀಗೆ ವಿಕ್ಟೋರಿಯಾದಲ್ಲಿ ಹುಟ್ಟಿದ ನೈಲ್ ಮುಂದೆ ಜಗತ್ತಿನ ಹತ್ತು ದೇಶಗಳಲ್ಲಿ ಹರಿದು( ಆ ದೇಶಗಳ ನೀರು ಪಡೆಯುತ್ತಾ ಬೆಳೆದು) ನಂತರ ಬಂದು ಸೇರೋದು ಈಜಿಪ್ಟು.
ಆ ದೇಶಗಳೆಂದರೆ
ಬುರುಂಡಿ
ತಾಂಝಾನಿಯಾ
ರುವಾಂಡ
ಡೆಮಾಕ್ರಟಿಕ್ ರಿಪಬ್ಲಿಲ್ ಆಫ್ ಕಾಂಗೋ
ಕೀನ್ಯಾ
ಕಾಂಗೋ
ಎರಿಟ್ರಿಯ
ಇಥಿಯೋಪಿಯಾ
ಸೌತ್ ಸೂಡಾನ್ ಹಾಗೂ
ಸೂಡಾನ್.
ಇಥಿಯೋಪಿಯಾದ ಟಾನ ಸರೋವರದಿಂದ ಹರಿದು ಬರುವ ನದಿಯೊಂದು ಇಂದಿನ ಸೂಡಾನ್ ರಾಜಧಾನಿ ಖರಟೋಮ್ ನಲ್ಲಿ ಬಿಳಿ ನೈಲ್ ಗೆ ಮತ್ತೊಬ್ಬಳು ಚೆಲುವೆ ಜೊತೆಯಾಗತ್ತಾಳೆ.
ಅವಳೇ ಬ್ಲೂ ನೈಲ್.
ಅವರಿಬ್ಬರೂ ಸೇರಿ ಮನ್ನಡೆಯೋದು ಸಹಾರ ಮರುಭೂಮಿಯೊಂದರ ಭಾಗವಾದ ಈಜಿಪ್ಟಿನೆಡಗೆ.
ಆಫ್ರಿಕಾ ಖಂಡದ ದಕ್ಷಿಣದ ಹಸಿರು ಭಾಗ ವಿಕ್ಟೋರಿಯಾದಲ್ಲಿ ಹುಟ್ಟಿ, ಮರುಭೂಮಿಯನ್ನು ಹೊಕ್ಕಿ ಅಲ್ಲೆಲ್ಲ ಬದುಕಿ ಬಾಳಿ ಮೆಡಿಟರೇನಿಯನ್ ಸೇರುವಷ್ಟರ ಹೊತ್ತಿಗೆ ಆಕೆ ಬರೋಬ್ಬರಿ 6695 ಕಿಲೋಮೀಟರು ಬಂದಿರುತ್ತಾಳೆ.
ಜಗತ್ತಿನ ಅತ್ಯಂತ ಉದ್ದದ ನದಿ ಅವಳು.
ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿ ಇರುವುದು ಸುಮಾರು ಮೂರುವರೆ ಸಾವಿರ ಕಿಲೋಮೀಟರ್.
ಅಂದರೆ ನೈಲ್ ಮಾಹಾತಾಯಿ ಸುಮಾರು ಅದರ ದುಪ್ಪಟ್ಟು ಹರಿಯುತ್ತಾಳೆಂದರೆ ನೀವೆಲ್ಲಾ ಊಹಿಸಬಹುದು ಅವಳ ಅಗಾಧ ಗಾತ್ರ ಮತ್ತು ಉದ್ದವನ್ನು.
ಕರುನಾಡಿಂದ ಕೊಂಡೊಯ್ದಿದ್ದ ಕನ್ನಡ ಬಾವುಟವನ್ನು ಆಕೆಗೆ ಬಾಗಿನವಾಗಿ ಕೊಟ್ಟೆ.
ಫ್ರಾನ್ಸಿನವರನ್ನು ಕಾಯುತ್ತಿದ್ದ ಕ್ರೂಸು ಮಧ್ಯಾಹ್ನ ಹನ್ನೆರಡಕ್ಕೆ ಹೊರಡಲಿತ್ತು.
ಅಲ್ಲಿಯವರೆಗೆ ಆಸ್ವಾನು ಟೌನನ್ನು ಸುತ್ತೋಣವೆಂದು ನಾನು ಸಂಕೇತ್ ಅಲ್ಲೇ ರಸ್ತೆ ಬದಿಯಲ್ಲಿದ್ದ ಟಾಂಗಾದವನೊಂದಿಗೆ ಬಾಡಿಗೆ ಮಾತಾಡಿ ಟಾಂಗ ಏರಿದ್ವಿ.
ಸುಮಾರು ಆರುವರೆ ಅಡಿ ಎತ್ತರದ ಸೈತಾನು ಆಳಂತಿದ್ದ ಟಾಂಗಾ ಮಾಲಿಕ ಹತ್ತಿದವನೇ ಸಣ್ಣ ಪ್ಲಾಸ್ಟಿಕ್ಕು ಪ್ಯಾಕೊಂದನ್ನು ನಮ್ಮ ಕೈಗಿತ್ತು ಯು ವಾನ್ನ ಸ್ಮೋಕ್?
ಪ್ಯೂರ್ ಆಫ್ರಿಕನ್ ಮರಿಜುವಾನ ಅಂದ.
ಅದೇನೋ ಬಾಯಿಗೆ ಬಂತು ಅಂತಾರಲ ಹಂಗಾಗಿತ್ತು ನನಗೆ.
ಜೀವನದಲ್ಲೇ ಒಂದೂ ಸಿಗರೆಟು ಸೇದದವನು ನಾನು.
ಇದ್ಯಾವ್ದೋ ಡ್ರಗ್ ಪೆಡ್ಲರ್ ಕೈಲಿ ಸಿಕಾಕೊಂಡ್ವಲಪ್ಪ.
ಪೊಲೀಸ್ ಗಿಲೀಸ್ ಕೈಲಿ ತಗ್ಲಾಕೊಂಡ್ರೆ ಇಲ್ಲೇ ಪರ್ಮುನೆಂಟ್ ಫಿಟ್ ಅನ್ಕೊಂಡು ಅವನ ಪ್ಲಾಸ್ಟಿಕ್ ಪ್ಯಾಕನ್ನು ಕರೆಂಟು ಹೊಡೆದ ಸ್ಪೀಡಲ್ಲಿ ಅವನಿಗೇ ವಾಪಾಸು ಕೊಟ್ಬಿಟ್ವಿ.
ಕುದುರೆ ರ್ಯಾಂಬೋ ನಮ್ಮನ್ನ ಆಸ್ವಾನು ಟೌನಲ್ಲೆಲ್ಲ ಸುತ್ತಾಡಿಸಿದ.
ಪಟ್ಟಣವೇನು ಅಷ್ಟೊಂದು ಕ್ಲೀನಿರಲಿಲ್ಲ.
ಅಲ್ಲಲ್ಲಿ ದೊಡ್ಡ ದೊಡ್ಡ ದನಗಳನ್ನು ಹಂಗೇ ಕಡಿದು ನೇತಾಕಿದ್ದರು.
ಅಂಗಡಿಗಳ ಮುಂದೆ ಅಲ್ಲಲ್ಲಿ ಹಚ್ಚಿದ್ದ ಧೂಪದ ಸುವಾಸನೆ ಘಂ ಎನ್ನುತ್ತಿತ್ತು.
ಮಾರ್ಕೇಟಿನಲ್ಲಿ ವ್ಯಾಪಾರಿಗಳು ನಮ್ಮನ್ನ ನೋಡಿದವರು ಇಂಡಿಯಾ, ಹಲೋ ಇಂಡಿಯಾ,
ನಮಸ್ತೇ, ಅನ್ನುತ್ತಿದ್ದರು.
ಅಲ್ಲಲ್ಲಿ ಹಿಂದಿ ಹೇರಿಕೆಯೂ ನಡೆದಿತ್ತು.
ಅಂಗಡಿಯೊಂದಕ್ಕೆ ಹೋಗಿ ಒಂದಷ್ಟು ಕೀ ಬಂಚುಗಳನ್ನು ತೆಗೊಂಡ್ವಿ.
ಆ ಅಂಗಡಿಯವನೂ ಮಹಮ್ಮದ್ ಅಂತ.
ಅವನ ಗರ್ಲ್ ಫ್ರೆಂಡು ದೆಹಲಿಯವಳಂತೆ.
ನಿಜಾ ಹೇಳಿದ್ನೋ ಸುಳ್ಳೇಳಿದ್ನೋ ಬೇರೆಯವರಿಗೆ ಹೋಲಿಸಿದಲ್ಲಿ ರೇಟ್ ಮಾತ್ರ ಕಮ್ಮಿ ಹೇಳ್ತಿದ್ದ.
ಅವನನ್ನೂ ಫೇಸ್ಬುಕ್ ಫ್ರೆಂಡ್ ಮಾಡಿಕೊಂಡು ನಾವು ಹೊರಟ್ವಿ.
ರ್ಯಾಂಬೋಗೆ ಟಿಪ್ಸ್ ನೀಡಿಅದರ ಮಾಲೀಕನಿಗೆ ಬಾಡಿಗೆ ಕೊಟ್ಟು ಮತ್ತೆ ಕ್ರೂಸನ್ನೇರಿ ಹೊರಟಾಗ ಮಧ್ಯಾಹ್ನ.
ನೈಲ್ ನದಿ ಹರಿಯುವ ಎರಡೂ ಭಾಗಗಳು ಫುಲ್ಲು ಹಸಿರಾಗಿ ಕಂಗೊಳಿಸುತ್ತವೆ.ಅಲ್ಲಿ ಭಾರತದಲ್ಲಿ ಬೆಳೆಯುವ ಬಹುತೇಕ ಬೆಳೆಗಳನ್ನು ಬೆಳೆಯುತ್ತಾರೆ.
ದನ,ಎಮ್ಮೆ,ಒಂಟೆ,ಕುದುರೆ,ಕತ್ತೆ,ಕುರಿಗಳಂತ ಪ್ರಾಣಿಸಂಪತ್ತು ಇದೆ.
ಕತ್ತೆಯೊಂದಕ್ಕೆ ನೇಗಿಲು ಕಟ್ಟಿ ಉಳುಮೆ ಮಾಡುತ್ತಿದ್ದರು.
ಬಾಳೆ,ಮಾವು,ಹಲಸು,ದ್ರಾಕ್ಷಿ,ಕಿತ್ತಲೆ,ಕಬ್ಬು,
ಖರ್ಜೂರದ ಬೆಳೆಗಳು ಕಂಡವು.
ನಾವು ನೆಕ್ಟು ಎಡ್ಫು ಮತ್ತು ಕೊಮ್ ಒಂಬೋಗೆ ಹೋಗುತ್ತಲಿದ್ದೆವು.
ಪ್ರವಾಸಿ ತಾಣಗಳು ಬಂದಾಗ ಕ್ರೂಸು ನಿಲ್ಲುತ್ತದೆ.
ಅವುಗಳನ್ನು ನೋಡಿ ಬಂದ ಮೇಲೆ ಕ್ರೂಸು ಮತ್ತೆ ಚಲಿಸುವುದು ನೈಲ್ ಕ್ರೂಸುಗಳ ಪ್ರತೀತಿ.
ಎಢ್ಫು ಟೆಂಪಲ್ ಫಾಲ್ಕನ್ ಗಾಡ್ ಹೋರಸ್ ನದಾದರೆ
ಕೊಮ್ ಒಂಬೋ ಟೆಂಪಲ್ ಹೋರಸ್ ಮತ್ತು ಮೊಸಳೆ ದೇವರಾದ ಸೊಬೆಕ್ ರದ್ದು.
ಇವೆರಡೂ ದೇವಸ್ಥಾನಗಳು ಈಜಿಪ್ಟನ್ನು ಆಳಿದ ಟಾಲೆಮಿಗಳ ಕಾಲದ್ದು.
ಅಲ್ಲೊಂದು ಕ್ರೋಕೋಡೈಲ್ ಮ್ಯೂಸಿಯಂ ಕೂಡ ಇದೆ.
ಸಾವಿರಾರು ವರ್ಷಗಳ ಹಿಂದೆ ಮೊಸಳೆಗಳ ಮಮ್ಮಿಯನ್ನೂ ಕೂಡ ಪ್ರಾಚೀನ ಈಜಿಪ್ಟಿಯನ್ನರು ಮಾಡಿದ್ದು ಅವುಗಳ ಸಂಗ್ರಹ ಅಲ್ಲಿದೆ.
ಮೊಸಳೆಗಳಂತೆಯೇ ಪ್ರಾಚೀನ ಈಜಿಪ್ಟಿಯನ್ನರು ಬೆಕ್ಕು,ನಾಯಿಗಳ ಮಮ್ಮಿಯನ್ನೂ ಮಾಡಿದ್ದರು.
ಅಲ್ಲಿಂದ ಮುಂದೆ ನಾವು ಹೊರಟಿದ್ದು ಇಡೀ ಈಜಿಪ್ಟಿಗೆ ಅತೀ ಹೆಚ್ಚು ಪ್ರವಾಸಿಗರು ಬರುವ ಸ್ಥಳದಲ್ಲೊಂದಾದ Valley Of The Kingsಗೆ.
ಪ್ರಾಚೀನ ಈಜಿಪ್ಟಿನ ರಾಜರುಗಳು ಒಂದು ತಲೆಮಾರಿನವರೆಗೆ ಸತ್ತ ನಂತರ ಬೃಹತ್ ಪಿರಮಿಡ್ಡು ಕಟ್ಟಿ ಅದರೊಳಗೆ ಅವರ ದೇಹವನ್ನು ಇಡುತ್ತಿದ್ದರು.
ಇದು ಭಾರೀ ಸಮಯ, ಶ್ರಮ,ಕಾರ್ಮಿಕರು,ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರಿಂದ ತದನಂತರದ ತಲೆಮಾರುಗಳು ಇದನ್ನು ಕೈಬಿಟ್ಟವು.
ಮಿಡಲ್ ಕಿಂಗ್ಡಮ್ ಹಾಗೂ ನ್ಯೂ ಕಿಂಗ್ಡಮ್ ನಲ್ಲಿ ರಾಜ ಮರಣಹೊಂದಿದ ನಂತರ ಅವನ ದೇಹವನ್ನು ಮಮ್ಮಿಫಿಕೇಷನ್ ಪ್ರಕ್ರಿಯೆಗೊಳಿಸಿ ಬೃಹತ್ ಸುಣ್ಣದಕಲ್ಲಿನ ಗುಡ್ಡದೊಳಗೆ ಸುರಂಗ ಕೊರೆದು,ಅಲಂಕರಿಸಿ ಹುಗಿದಿಡುತ್ತಿದ್ದರು.
ಹೀಗೆ ಹಲವಾರು ರಾಜರುಗಳನ್ನು ಹುಗಿದಿಟ್ಟ ಸ್ಥಳವೇ “ವ್ಯಾಲಿ ಆಫ್ ದಿ ಕಿಂಗ್ಸ್”.
ಇದುವರೆಗೂ ಅಲ್ಲಿ ಅರವತ್ತೆರಡು ರಾಜರುಗಳ ಸಮಾಧಿ ಆವಿಷ್ಕಾರಗೊಂಡಿದ್ದು ಅದರಲ್ಲೊಬ್ಬನ ಹೆಸರು ಮಾತ್ರ ಜಗತ್ತಿಗೇ ಪ್ರಸಿದ್ಧಿಯಾಗಿ ಹೋಯ್ತು.
ಅವನೇ ಟುಟ್-ಆಂಖ್-ಅಮುನ್.
ಪುನರ್ಜನ್ಮದಲ್ಲಿ ನಂಬಿಕೆಯಿಟ್ಟಿದ್ದ ಏನ್ಷಿಯಂಟ್ ಈಜಿಪ್ಟ್ಷಿಯನ್ಸ್ ಸತ್ತ ರಾಜನ ಸಮಾಧಿಯೊಂದಿಗೆ ಆತ ಬಳಸುತ್ತಿದ್ದ ವಸ್ತುಗಳು,ಭವಿಷ್ಯಕ್ಕೆ ಬೇಕಾಗುವ ವಸ್ತುಗಳನ್ನೂ ಇಡುತ್ತಿದ್ದರು.
ಅವೆಲ್ಲ ಬೆಲೆಬಾಳುವ ವಸ್ತುಗಳಲ್ಲದೇ ಹಲವಾರು ವಸ್ತುಗಳು ಚಿನ್ನದಿಂದಲೇ ಮಾಡಲ್ಪಟ್ಟಿದ್ದವು.
ಇವೆಲ್ಲವುಗಳು ಕಾಲಕಾಲಕ್ಕೆ ಕಳ್ಳರು,ಲೂಟಿಕೋರರು,ಆಕ್ರಮಣಕಾರರ ಪಾಲಾಗುತ್ತಲೇ ಬಂದಿದ್ದರಿಂದ ಮಮ್ಮಿಯೊಂದಿಗೆ ನಿಜವಾಗಿಯೂ ಇಟ್ಟಿರುತ್ತಿದ್ದ ವಸ್ತುಗಳ ಬಗ್ಗೆ ಯಾರೊಬ್ಬರಿಗೂ ಗೊತ್ತಿರಲಿಲ್ಲ.
ಪ್ರಾಚೀನ ನಾಗರೀಕತೆ ಅವಸಾನವಾಗಿ,ಇವೆಲ್ಲ ಮರಳು ಮತ್ತು ಭೂಮಿಯೊಳಗೆ ಹುದುಗಿ ಹೋಗಿ,
ಜಗತ್ತು ಯುರೋಪಿಯನ್ ವಸಾಹತುಶಾಹಿತ್ವಕ್ಕೆ ಒಳಗಾಗುವವರೆಗೆ ಇಂತದೊಂದು ನಾಗರೀಕತೆ ಅಸ್ತಿತ್ವದಲ್ಲಿತ್ತು ಎಂಬುದೇ ಬಾಹ್ಯ ಜಗತ್ತಿಗೆ ಗೊತ್ತಿರಲಿಲ್ಲ.
ಯುರೋಪಿಯನ್ ಉತ್ಖನನಗಾರರು ಒಂದೊಂದೇ ವಸ್ತು ವಿಷಯಗಳನ್ನು ಮರು ಆವಿಷ್ಕಾರ ಮಾಡುತ್ತ ಹೋದರೂ ಖಾಲಿ ಮಮ್ಮಿಗಳು ಮಾತ್ರ ದೊರೆಯುತ್ತಿದ್ದವು.
ಹತ್ತೊಂಬತ್ತನೇ ಶತಮಾನದಲ್ಲಿ ಹಾರ್ವರ್ಡ್ ಕಾರ್ಟರ್ ಎಂಬ ಬ್ರಿಟೀಷ್ ಆರ್ಕಿಯಾಲಜಿಸ್ಟ್ ಮಾತ್ರ ಇನ್ನೊಂದು ಮಮ್ಮಿ ಇಲ್ಲೇ ಎಲ್ಲೋ ಇದೆ.
ಆದರೆ ಅದು ಸಿಗುತ್ತಿಲ್ಲ ಎಂಬ ಕಠಿಣ ಉತ್ಖನನವನ್ನು ಮಾಡುತ್ತಲೇ ಇದ್ದ.
ಆದರೆ ಇವನು ಕೆಲಸ ಮಾಡುತ್ತಿದ್ದದು ಲಾರ್ಡ್ ಕಾರ್ನ್ವಾನ್(LORD CARNARVON)ಎಂಬ ಸ್ನೇಹಿತನ ಕಂಪೆನಿಯಡಿಯಲ್ಲಿ.
ಆಕಾಲಕ್ಕೇ ಉತ್ಖನನಕ್ಕಾಗಿಹಲವಾರು ದುಡ್ಡು ಖರ್ಚು ಮಾಡಿದ ಕಂಪೆನಿ ಲಾಸಾಗಿ ಮುಚ್ಚುವ ಹಂತಕ್ಕೆ ಬಂದುಬಿಟ್ಟಿತ್ತು.
ಪ್ಯಾಕ್ ಅಪ್ ಮಾಡಿಕೊಂಡು ವಾಪಾಸು ಬರುವಂತೆ ಕಂಪನಿಯಿಂದ ಆದೇಶವೂ ಬಂತು.
ವಾಪಾಸು ಇಂಗ್ಲೆಂಡಿಗೆ ಹೋದ ಕಾರ್ಟರ್ ಇನ್ನೊಂದಷ್ಟು ತಿಂಗಳು ಅನುಮತಿ ಹಾಗೂ ಹಣದ ಸಹಾಯ ನೀಡುವಂತೆ ಕಾರ್ನ್ವಾನ್ ಗೆ ದುಂಬಾಲು ಬಿದ್ದು ಹೇಗೋ ಅನುಮತಿ ಗಿಟ್ಟಿಸಿಕೊಂಡು ವಾಪಾಸು 1922 ರಲ್ಲಿ ಮತ್ತೆ ಈಜಿಪ್ಟಿಗೆ ಹೋಗುತ್ತಾನೆ.
ಮತ್ತೆ ಛಲ ಬಿಡದ ಉತ್ಖನನ,ವಿಫಲತೆ.
ಇನ್ನೇನು ಕೊಟ್ಟ ಸಮಯ ಮುಗಿಯುತ್ತಾ ಬಂತು ಈ ವಾರ ಪರ್ಮನೆಂಟ್ ಪ್ಯಾಕ್ ಅಪ್ ಆಗಲೇ ಬೇಕು ಅಂದುಕೊಳ್ಳುತ್ತಿದ್ದಾಗಲೇ ಕೆಲಸದ ಆಳುಗಳು ಓಡಿ ಬಂದು ಬೆಟ್ಟದ ತಳದಲ್ಲಿ ಯಾವುದೋ ಕಲ್ಲಿನಲ್ಲಿ ಮುಚ್ಚಿದ ಬಾಗಿಲು ಸಿಕ್ಕಿದೆ ಎಂದು ಹೇಳುತ್ತಾರೆ.
ಕಾರ್ಟರ್ ಹೋಗಿ ಅದನ್ನೆಲ್ಲ ಸೂಕ್ಷ್ಮವಾಗಿ ಪರಿಶೀಲಿಸಿ ಅದಕ್ಕೆ ಭದ್ರತೆ ಒದಗಿಸಿ ಲಾರ್ಡ್ ಕಾರ್ನ್ವಾನ್ ಗೆ “ವಿಶೇಷವಾದದ್ದೊಂದನ್ನು ಕಂಡು ಹಿಡಿದಿದ್ದೇನೆ,ಬಾಗಿಲು ಒಡೆದು ಒಳಹೋಗಬೇಕು,ಕೂಡಲೇ ಬಾ” ಎಂದು ಟೆಲಿಗ್ರಾಂ ಕಳಿಸುತ್ತಾನೆ
ಕಾರ್ನ್ವಾನ್ ಬಂದೊಡನೆ ಅದರ ಬಾಗಿಲು ಒಡೆದು ಒಳಹೋಗಲಾಗುತ್ತೆ.
ಒಂದಷ್ಟು ಮೆಟ್ಟಿಲುಗಳನ್ನು ಇಳಿದು ಕತ್ತಲೆಯಲಿ ಮೊದಲು ಹೋದ ಹಾರ್ವರ್ಡ್ ಕಾರ್ಟರ್ ಗೆ ಹಿಂದಿನಿಂದ ಕಾರ್ನ್ವಾನ್ ಕೇಳುತ್ತಾನೆ.
ಕ್ಯಾನ್ ಯೂ ಸೀ ಎನಿಥಿಂಗ್?.
“ಯಸ್,ವಂಡರ್ ಫುಲ್ ಥಿಂಗ್ಸ್’ ಎಂಬ ಉತ್ತರ ಅತ್ತ ಕಡೆಯಿಂದ ಬರುತ್ತೆ.
ಅಲ್ಲಿದ್ದ ನಾಲ್ಕು ಕೋಣೆಗಳಲ್ಲಿ ಸಿಕ್ಕಿದ್ದು ಐದು ಸಾವಿರಕ್ಕೂ ಹೆಚ್ವು ವಸ್ತುಗಳು ಮತ್ತು ಬಹುತೇಕಗಳೆಲ್ಲವೂ ಚಿನ್ನದಿಂದ ಮಾಡಿದ್ದು.
ರಾಜ ಬಳಸುತ್ತಿದ್ದ ರಥ,ಮಂಚ,ಛೇರು,ಚಿನ್ನದ ಮುಖವಾಡ,
ಆಭರಣಗಳು ಪ್ರತಿಯೊಂದೂ ಇದುವರೆಗೂ ಯಾರ ಕೈಗೂ ಸಿಗದೇ ಅಲ್ಲೇ ಇದ್ದವು.
ರಾಜನ ಮಮ್ಮಿಯನ್ನು ಮುಚ್ಚಿಟ್ಟಿದ್ದ ಕಾಫಿನ್ ಒಂದೇ ಬರೋಬ್ಬರಿ ನೂರ ಹತ್ತು ಕೆ.ಜಿ.ತೂಗುತ್ತಿತ್ತಂತೆ ಮತ್ತದು ಅಪ್ಪಟ ಚಿನ್ನದ್ದಾಗಿತ್ತು.
ಅದು ಜಗತ್ತಿನ ಅತೀ ಶ್ರೇಷ್ಟ ಮತ್ತು ಪ್ರಮುಖ ಆರ್ಕಿಯಲಾಜಿಕಲ್ ಡಿಸ್ಕವರಿಯಾಗಿ ಇತಿಹಾಸ ಮಾಡಿ ಬಿಡ್ತು.
ನೂರಾರು ಕೋಟಿಯ ವಸ್ತುಗಳು ಒಮ್ಮೆಲೇ ಸಿಕ್ಕಿಬಿಟ್ಟವು.
ಅದಕ್ಕಿಂತ ಹೆಚ್ಚಾಗಿ ಬೆಲೆಯೇ ಕಟ್ಟಲಾಗದ ನಾಗರೀಕತೆಯೊಂದರ ಇತಿಹಾಸದ ಡೀಟೇಲ್ಲು ಆಧುನಿಕ ಜಗತ್ತಿಗೆ ದೊರೆತು ಹೋಯ್ತು.
ಹಾಗೆ ಸಿಕ್ಕಿದ ಸಮಾಧಿಯೇ TOMB Number ಅರವತ್ತೆರಡು(62) ಹಾಗು ಅದು ಹತ್ತೊಂಬತ್ತನೇ ವಯಸ್ಸಿಗೇ ಸತ್ತುಹೋಗಿದ್ದ ಯುವರಾಜ ಟುಟಾಂಕಮುನ್(TUT-ANKH_AMUN)ನದ್ದಾಗಿತ್ತು.
ಈಜಿಪ್ಟಿನ ಹದಿನೆಂಟನೆಯ ಡೈನಾಸ್ಟಿಯಲ್ಲಿ ಅಖೆನಾಟೆನ್ ಎಂಬ ರಾಜನಿದ್ದ.
ಅವನ ಮಗನೇ ಟುಟಾಂಖಮುನ್.
ಯುವರಾಜ ಟುಟ್ 10 ವರ್ಷದವನಿದ್ದಾಗಲೇ ಅಖೆನಾಟೆನ್ ತೀರಿ ಹೋಗುತ್ತಾನೆ.
ಆಗ ಟುಟಾಂಕಮುನ್ ರಾಜನಾಗುತ್ತಾನೆ.
ದುರದೃಷ್ಟವಶಾತ್ ಟುಟಾಂಕಮುನ್ ಕೂಡ ಕೇವಲ ಹತ್ತೊಂಬತ್ತನೇ ವರ್ಷಕ್ಕೆ ಸತ್ತು ಹೋಗುತ್ತಾನೆ.
ಆತನ ಸಾವಿನ ಕಾರಣದ ಬಗ್ಗೆ ನಿಖರ ಮಾಹಿತಿಗಳಿಲ್ಲದಿದ್ದರೂ Scoliasis ನಿಂದಲೋ ಮಲೇರಿಯಾದಿಂದಲೋ ಅಥವಾ ಅಧಿಕಾರಕ್ಕಾಗಿ ಆಸ್ಥಾನದ ಅಧಿಕಾರಿಗಳೇ ಕೊಂದರೋ ಗೊತ್ತಿಲ್ಲ.
ಆದರೆ ಟುಟಾಂಕಮುನ್ ಪ್ರಸಿದ್ದಿಯಾದದ್ದು ಮಾತ್ರ ಆತನ ಸಮಾಧಿಯಲ್ಲಿ ದೊರೆತ ವಸ್ತುಗಳೊಂದಿಗೆ ಮತ್ತು ಆತನ ಸಮಾಧಿ ಬಗೆದವರಿಗೆ ಅದರ ಶಾಪ ತಟ್ಟಿ ಹಲವರು ಸತ್ತರೆಂಬ ಕಥೆಗಳ ಬಗ್ಗೆ.
ಇದಕ್ಕೆ ಇಂಬು ಕೊಡುವಂತೆ ಟುಟ್ ನ ಸಮಾಧಿಯ ಆವಿಷ್ಕಾರದ ನಂತರ ಹಾಗೂ ಅಲ್ಲಿದ್ದ ವಸ್ತುಗಳನ್ನ ಹೊರತೆಗೆದ ನಂತರ ಅಲ್ಲಿ ಕೆಲಸ ಮಾಡಿದ ಒಂದಷ್ಟು ಜನ ಧಿಡೀರ್ ಸತ್ತು ಹೋದರಂತೆ.
ಈ ಸಂಪೂರ್ಣ ಅನ್ವೇಷಣೆಗೆ ಫೈನಾನ್ಸು ಮಾಡಿದ ಕಾರ್ನ್ವಾನ್ ಇದಾದ ಆರೇ ತಿಂಗಳಿನಲ್ಲಿ ಸೊಳ್ಳೆಯೊಂದು ಕಡಿದು ಮಲೇರಿಯಾ ಬಂದು ಸತ್ತು ಹೋಗುತ್ತಾನೆ.
ಅಂದು ಟುಟಾಂಕಮುನ್ ಗೆ ಕಡಿದು ಮಲೇರಿಯಾ ಬರಿಸಿದ ಅದೇ ಸೊಳ್ಳೆಯೇ ಕಡಿದು ಇವನ ಸಾವಿಗೂ ಕಾರಣವಾಯಿತೆಂದೂ ಇದು ಟುಟ್ ನ ಆತ್ಮದ ಶಾಪವೆಂದೂ ಎಲ್ಲೆಡೆ ಪ್ರಚಾರವಾಗಿ ಹೋಯಿತು.
ಟುಟ್ ನ ವಸ್ತುಗಳನ್ನು ಕೈರೋಗೆ ಕೊಂಡೊಯ್ಯುತ್ತಿದ್ದ ವಾಹನವೂ ಅಪಘಾತಕ್ಕೀಡಾಗಿ ಒಂದಷ್ಟು ಜನಸತ್ತರಂತೆ.
ಆಮೇಲೆ ಇವೇ ವಸ್ತುಗಳನ್ನು ವಿದೇಶಕ್ಕೆ ವಸ್ತುಪ್ರದರ್ಶನಕ್ಕೆ ಕೊಂಡೊಯ್ಯಲು ಬಂದವರ ಬೋಟುಗಳು ಮುಳುಗಿ ಹೋದವಂತೆ.
ಹೀಗೆ ಹತ್ತು ಹಲವು ಭಯಹುಟ್ಟಿಸುವ ಕಥೆಗಳು ಹುಟ್ಟಿಕೊಂಡವು.
ಅದರಲ್ಲಿ ಕೆಲವೊಂದು ನಿಜಗಳೂ ಆಗಿದ್ದವು.
ಆದರೆ ಕಾಕತಾಳೀಯವಷ್ಟೆ.
ಉದಾಹರಣೆಗೆ ಇಷ್ಟೆಲ್ಲ ಆವಿಷ್ಕಾರದ ಮೂಲ ಮನುಷ್ಯ ಹಾಗೂ ಸಮಾಧಿಯೊಳಗೆ ಮೊದಲು ಹೋಗಿದ್ದ ಹಾರ್ವರ್ಡ್ ಕಾರ್ಟರ್ ಹದಿನೇಳು ವರ್ಷಗಳ ನಂತರ ಸಹಜವಾಗಿ ಸಾವನ್ನಪ್ಪುತ್ತಾನೆ.
ಅಂದು ಸಮಾಧಿಯೊಳಗೆ ಪ್ರವೇಶಿಸಿದ್ದ ಕಾರ್ನ್ವಾನ್ ನ ಮಗಳು ಎವ್ಲಿನ್ ಇದಾದ 58 ವರ್ಷಗಳ ನಂತರ ತೀರಾ ಇತ್ತೀಚೆಗೆ 1980ರಲ್ಲಿ ತನ್ನ ಎಂಬತ್ತನೇ ವಯಸ್ಸಿನಲ್ಲಿ ಸಹಜವಾಗಿ ಸಾವನ್ನಪ್ಪುತ್ತಾಳೆ.
ಟುಟಾಂಕಮುನ್ ಸಮಾಧಿಯ ಅನ್ವೇಷಣೆಯ ನಂತರ ಇನ್ನೂ ಅಪಾರ ಸಂಪತ್ತು ಇದೆ ಎಂದು ಕಳ್ಳಕಾಕರೆಲ್ಲ ವ್ಯಾಲಿ ಆಫ್ ದಿ ಕಿಂಗ್ಸ್ ಅನ್ನು ಬಗೆದು ಹಾಕಿದ್ದರಂತೆ.
ಅಂತವರಿಗೆ ಭಯ ಹುಟ್ಟಿಸಲು ಈ ಕಟ್ಟು ಕಥೆಗಳನ್ನೆಲ್ಲ ಹುಟ್ಟು ಹಾಕಲಾಯಿತು ಎಂಬ ವಾದವೂ ಇದೆ.
ಅವೇನೇ ಇರಲಿ ಇದೊಂದು ಗ್ರೇಟೆಸ್ಟು ಆರ್ಕಿಯಾಲಜಿಕಲ್ ಡಿಸ್ಕವರಿಯಾಗಿ ಇತಿಹಾಸದ ಪುಟಗಳಲ್ಲಿ ಸೇರಿ ಹೋಯಿತು.
ಇಂದು ಆ ವಸ್ತುಗಳಲ್ಲಿ ಬಹುತೇಕವುಗಳು ಕೈರೋದಲ್ಲಿರುವ ಮ್ಯೂಸಿಯಂನಲ್ಲಿವೆ.
ಅವೆಲ್ಲವುಗಳು ಸಿಸಿಟಿವಿ ಕಣ್ಗಾವಲಿನಲ್ಲಿದ್ದು ಫೋಟೋ ಕೂಡ ಹೊಡೆಯುವಂತಿಲ್ಲ.
ಆದರೆ ನಾನು ಆಗಿದ್ದಾಗಲಿ ಎಂದು ಹೆಂಗೋ ಕಾವಲುಗಾರರನ್ನು ಯಾಮಾರಿಸಿ ಟುಟ್ ನ ಕಾಫಿನ್ ಹಾಗೂ ಚಿನ್ನದ ಮಾಸ್ಕಿನೊಂದಿಗೆ ಒಂದು ಸೆಲ್ಫಿ ಎತ್ತುಕೊಂಡೇ ಬಂದೆ.
ವ್ಯಾಲಿ ಆಫ್ ದಿ ಕಿಂಗ್ಸ್ ನೋಡಿ ಮುಗಿದ ನಂತರ ನಮಗೆ ಬಾಕಿ ಉಳಿದಿದ್ದ ಎರಡೇ ಎರಡು ಪ್ರಮುಖ ಡೆಸ್ಟಿನೇಷನ್ನುಗಳೆಂದರೆ ಈಜಿಪ್ಟಿನ ಮೋಸ್ಟ್ ಪಾಪುಲರ್ ಗಾಡ್ ಆಮುನ್ -ರಾ ಗಾಗಿ ಕಟ್ಟಿಸಿದ ದೇವಸ್ಥಾನಗಳಾದ ಕಾರ್ನಾಕ್ ಮತ್ತು ಲಕ್ಸರ್ ಮಾತ್ರ.
ಅವು ನೈಲ್ ನ ಪೂರ್ವ ದಂಡೆಯಲ್ಲಿದ್ದವು.
ಮತ್ತೊಮ್ಮೆ ನೈಲು ದಾಟಿ ನಾವು ತಲುಪಿದ್ದು ಕಾರ್ನಾಕ್ ಗೆ.
ಕಾರ್ನಾಕ್ ನ ದೇವಸ್ಥಾನ ಈಜಿಪ್ಟಿನ ಅತೀ ದೊಡ್ಡ ದೇವಸ್ಥಾನ.
ಒಟ್ಟಾರೆ ಈ ದೇವಸ್ಥಾನದ ವಿಸ್ತೀರ್ಣ ಇನ್ನೂರು ಎಕರೆಗಳಿಗಿಂತಲೂ ಹೆಚ್ಚೆಂದರೆ ನೀವದರ ಬೃಹತ್ ಗಾತ್ರವನ್ನು ಊಹಿಸಬಹುದು.
ಇದೊಂದು ದೇವಾಲಯಗಳ ಸಂಕೀರ್ಣ.
ಪ್ರಾಚೀನ ಈಜಿಪ್ಟರಿಂದ ಅರಂಭವಾಗಿ ಮಧ್ಯಯುಗದ ಗ್ರೀಕು ಮೂಲದ ಟಾಲೆಮಿಗಳವರೆಗೆ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರಾಜರುಗಳು ಈ ದೇವಸ್ಥಾನವನ್ನು ಕಟ್ಟಿದ್ದಾರೆ.
ಕಾರ್ನಾಕ್ ದೇವಸ್ಥಾನದ ಬೃಹತ್ ಕಂಬಗಳು ಅವುಗಳ ಕೆತ್ತನೆಯನ್ನು ನೋಡುವುದೇ ಒಂದು ಸೊಬಗು.
ಅಲ್ಲಿ ಸುಮಾರು134 ಬೃಹತ್ ಕಂಬಗಳಿದ್ದು ಕೆಲವೊಂದು ಎಪ್ಪತ್ತು ಅಡಿಯಷ್ಟು ಉದ್ದವಿದ್ದರೆ ಕೆಲವೊಂದು 40ಅಡಿಯಷ್ಟು ಎತ್ತರವಾಗಿವೆ.
ಅಲ್ಲಲ್ಲಿ ಪಿಂಕ್ ಗ್ರಾನೈಟಿನಿಂದ ಕೆತ್ತಿದ ತ್ರಿಭುಜಾಕಾರದ ತುದಿ ಹೊಂದಿರುವ Obelisk ಎಂದು ಹೇಳಲಾಗುವ ಕಂಬಗಳಿವೆ.
ಅಲ್ಲೇ SCARAB ಎನ್ನುವ ದೇವರ ವಿಗ್ರಹವಿದ್ದು
ಅದು ಜೀರುಂಡೆಯಂತ ಕೀಟವೊಂದರ ಆಕಾರದಲ್ಲಿದೆ.
ಅದನ್ನು ಏಳು ಬಾರಿ ಸುತ್ತಿದರೆ ಬೇಡಿಕೊಂಡದ್ದು ಈಡೇರುತ್ತದೆಂಬ ನಂಬಿಕೆಯಿದೆ.
ಇದು ಭಾರತೀಯರ ಸಪ್ತಪದಿ ಕಾನ್ಸೆಪ್ಟಿಗೊಂದಷ್ಟು ಮ್ಯಾಚಾಗುತ್ತಿತ್ತು.
ಹಾಗೇಯೇ ಇನ್ನೊಂದು ಭಾರತೀಯ ಸಾಮ್ಯತೆಯೂ ಕಾರ್ನಾಕಿನಲ್ಲಿದೆ.
ಕಾರ್ನಾಕ್ ದೇವಸ್ಥಾನ ಹಾಗೂ ನಮ್ಮ ಒರಿಸ್ಸಾದ ಕೋನಾರ್ಕ್ ದೇವಸ್ಥಾನದ ಹೆಸರಿಗೆ ಒಂದಷ್ಟು ಮ್ಯಾಚ್ ಆಗುತ್ತೆ.
ಕಾರ್ನಾಕ್ ದೇವಸ್ಥಾನದ ದೇವರು ಅಮುನ್-ರಾ.ರಾ ಎಂದರೆ ಸೂರ್ಯ.
ಒರಿಸ್ಸಾದ ಕೋನಾರ್ಕ್ ದೇವಸ್ಥಾನ ಕೂಡ ಸೂರ್ಯರ್ನದೇ ಆಗಿದೆ.
ಈ ಟೆಂಪಲ್ಲಿನ ದ್ವಾರದಲ್ಲಿ ನೂರಾರು ಸ್ಪಿಂಕ್ಸ್ ಮತ್ತು ಟಗರಿನ ತಲೆಯ(Ram-Headed) ಮೂರ್ತಿಗಳನ್ನು ದ್ವಾರ ಪಾಲಕರಂತೆ ಮಲಗಿದ ಪೊಸಿಷನ್ನಿನಲ್ಲಿ ಕೆತ್ತಲಾಗಿದೆ.
ಬಹಳಷ್ಟು ನಾಶವೂ ಆಗಿವೆ.
ಹೀಗೆ ಈ ಸ್ಫಿಂಕ್ಸ್ ಗಳ ಕೆತ್ತನೆಗಳು ಕಾರ್ನಾಕಿನಿಂದ 2.7 ಕಿ.ಮೀ ದೂರವಿರುವ ಲಕ್ಸರ್ ಟೆಂಪಲ್ಲಿನವರೆಗೆ ಈ ಹಿಂದೆ ಇತ್ತಂತೆ.
ಅದನ್ನು “Avenue Of Sphinx” ಎಂದು ಕರೆಯುತ್ತಿದ್ದರಂತೆ.
ದೇವರಾದ ಅಮುನ್-ರಾ ಹಬ್ಬಗಳ ಸಂದರ್ಭದಲ್ಲಿ ಕಾರ್ನಾಕಿನಿಂದ ಲಕ್ಸರ್ ನ ವರೆಗೆ ಈ ದಾರಿಯಲ್ಲೇ ನಡೆದು ಹೋಗುತ್ತಿದ್ದನಂತೆ.
ಮುಚ್ಚಿ ಹೋಗಿದ್ದ ಈ ಐತಿಹಾಸಿಕ Kings Festival Road ಅನ್ನು 2021ರ ನವೆಂಬರ್ 25 ರಂದು ಮರು ಸ್ಥಾಪಿಸಲಾಗಿದೆ.
ನಾವು ಅಕ್ಟೋಬರ್ನಲ್ಲಿ ಹೋದಾಗ ಈ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿತ್ತು.
ಕಾರ್ನಾಕಿನಿಂದ ಸ್ಫಿಂಕ್ಸ್ ಅವೆನ್ಯೂನಲ್ಲೀಗ ಒಂದಿಪ್ಪತ್ತು ನಿಮಿಷ ನಡೆದು ಹೋದರೆ ಸಿಗೋದೇ ಲಕ್ಸರ್ ಟೆಂಪಲ್ಲು.
ಇತಿಹಾಸ ಪ್ರಸಿದ್ಧ ಪ್ರಾಚೀನ ಈಜಿಪ್ಟರ ಅಂದಿನ ರಾಜಧಾನಿ “ಥೀಬ್ಸ್” ಇವಾಗ ಲಕ್ಸರ್ ಎಂಬ ಹೆಸರಿನಿಂದ ಕರೆಯಲ್ಪಡುತ್ತೆ.
ಇದೂ ಕೂಡ ಗಾಡ್ ಅಮುನ್ -ರಾ ನದೇ ಟೆಂಪಲ್ಲು.
ಜೊತೆಗೆ ಆತನ ಹೆಂಡತಿ ಮಟ್,
ಮಗ ಖೋನ್ಸುವಿನ ಟೆಂಪಲ್ಲೂ ಇವೆಯಷ್ಟೆ.
ಇದೂ ಕೂಡ ಹಲವಾರು ಅದ್ಭುತ ಕೆತ್ತನೆಗಳ ಕಂಬಗಳಿಂದ ಕೂಡಿದೆ.
ಈ ಎಲ್ಲಾ ಟೆಂಪಲ್ಲುಗಳು,
ಅವುಗಳ ಮೇಲಿನ ಹೈರೋಗ್ಲಿಫ್ಸ್ ಕೆತ್ತನೆಗಳು ರಾತ್ರಿಯ ಫೋಕಸ್ ಲೈಟ್ ಅಡ್ಜಸ್ಟ್ ಮೆಂಟಿನಲ್ಲಿ ಪಳಪಳ ಹೊಳೆದಂತೆ ಭಾಸವಾಗುತ್ತದೆ.
ಇವೆಲ್ಲವುಗಳನ್ನೂ ಪದಗಳಿಂದ ವರ್ಣಿಸುವುದಕ್ಕಿಂತ ಖುದ್ದಾಗಿ ಅನುಭವಿಸಿಯೇ ನೋಡಬೇಕು.
ಕೊನೆಯ ದಿನದ ಬ್ಯುಸೀ ಷೆಡ್ಯೂಲು ಮುಗಿದಾಗ ಸುಮಾರು ಏಳೇ ಆಗಿತ್ತು.
ಲಕ್ಸರಿನ ಬುಕ್ ಷಾಪಿನಲ್ಲೊಂದಷ್ಟು ಪುಸ್ತಕಗಳನ್ನು ಖರೀದಿಸಿ ಈಜಿಪ್ಟಿನಲ್ಲಿನ ಕೊನೆಯ ರಾತ್ರಿಗಾಗಿ ಮತ್ತೆ ಕ್ರೂಸು ಹತ್ತಿದೆವು.
ಕ್ರೂಸಿನಲ್ಲಿ ಡ್ಯಾನ್ಸ್ ಪಾರ್ಟಿ ನಡೆಯುತ್ತಿತ್ತು.
ಒಂದಷ್ಟು ವಯಸ್ಕ ಫ್ರೆಂಚ್ ಜೋಡಿಗಳು ಅವರ ಲೋಕಲ್ಲು ಡ್ಯಾನ್ಸ್ ಮಾಡುತ್ತಿದ್ದರು.
ಅವರೆಲ್ಲ ಈಜಿಪ್ಟಿಯನ್ ಶೈಲಿಯ ಉಡುಗೆಗಳನ್ನು ತೊಟ್ಟಿದ್ದಿದ್ದು ವಿಶೇಷ.
ಸ್ವಲ್ಪಹೊತ್ತಿಗೆ ಅಲ್ಲಿಗೊಬ್ಬಳು ಬೆಲ್ಲಿ ಡ್ಯಾನ್ಸರ್ ಬಂದಳು.
ಕೆಂಪು ಬಣ್ಣದ ಮಾದಕ ಡ್ರೆಸ್ಸಿನಲ್ಲಿ ಎಂತವರನ್ನೂ ಸೆಳೆಯುವಂತಿತ್ತು ಆಕೆಯ ಮೈಮಾಟ.
ಆಕೆ ಕುಣಿಯುತ್ತಿದ್ದಂತೆ ನೋಡುಗರೆಲ್ಲ ಮಂತ್ರ ಮುಗ್ದರಾಗಿದ್ದರು.
ಆಕೆ ಜೊತೆಯಲ್ಲಿ ಬಂದು ಕುಣಿಯುವಂತೆ ಒಬ್ಬೊಬ್ಬರನ್ನೇ ಕರೆಯುತ್ತಿದ್ದಳು.
ಆ ಆಫರ್ರು ನನಗೂ ಬಂದಿತ್ತು.
ನನ್ನ ಸುಗ್ಗಿ ಕುಣಿತಕ್ಕೂ,ಆಕೆಯ ಪ್ರೊಫೆಷನಲ್ ಬೆಲ್ಲಿ ಡ್ಯಾನ್ಸಿಗೂ ಅಜಗಜಾಂತರ ವ್ಯತ್ಯಾಸ.
ಸುಮ್ಮನೆ ನಗೆಪಾಟಲಿಗೀಡಾಗುವುದು ಬೇಡವೆಂದು ನಯವಾಗಿ ತಿರಸ್ಕರಿಸಿದ್ದೆ.
ಈಜಿಪ್ಟಿನಲ್ಲಿನ ಎಂಟನೆಯ ರಾತ್ರಿ ಹಾಗೆ ಮುಗಿದಿತ್ತು.
ಬೆಳಗೆದ್ದು ಮತ್ತೆ RTPCR ಗೆ ಮತ್ತೆ 6000ರೂ ಕೊಟ್ಟು ಲಕ್ಸರ್ ಏರ್ಫೋರ್ಟಿನಿಂದ ಕೈರೋದಲ್ಲಿಳಿದು ಒಂದಷ್ಟು ಹೊತ್ತು ಕಾದು
ಕೈರೋದಿಂದ ದುಬೈ ಕಡೆ ಹೊರಟೆವು.
ನಮ್ಮನ್ನೊತ್ತ ಎಮಿರೇಟ್ಸ್ ಮೇಲೆ ಮೇಲೆ ಹೋಗುತ್ತಿದ್ದಂತೆ ನೈಲು,ಪಿರಮಿಡ್ಡುಗಳು ಕಿರಿದಾಗಿ ಕಾಣುತ್ತ ಕೊನೆಗೊಮ್ಮೆ ಮಾಯವಾದವು.
ಅದ್ಬುತ ಮಾಯಾಲೋಕವೊಂದರಿಂದ ಹೊರಬಂದ ಅನುಭವಗಳವು.
ಆದರೆ ಇಂದಿನ ಈಜಿಪ್ಟು ಪ್ರಾಚೀನ ಈಜಿಪ್ಟಿನ ಗತವೈಭವ ಇತಿಹಾಸದ ಮೇಲೆ ನಿಂತಿದೆಯಷ್ಟೆ.
ಅಲ್ಲಲ್ಲಿ ಕಸದ ರಾಶಿಗಳು,ಮೋಸ ಮಾಡುವವರು,ಹಣ ಮಾಡುವ ದಂಧೆ ಮಾಡಿಕೊಂಡವರು ಬಹಳಷ್ಟಿದ್ದಾರೆ ಅನ್ನಿಸಿತು.
ಅಲ್ಲಿನ ಬಹಳಷ್ಟು ಕೆತ್ತನೆಗಳು ಬಿದ್ದು ಹಾಳಾಗಿವೆ.
ಗೈಡುಗಳು ಅವರನ್ನು ಇವರು,ಇವರನ್ನು ಅವರು ಮೂಲಭೂತವಾದಿಗಳೆಂದು ಕರೆಯುತ್ತ ಪ್ರಾಚೀನ ದಂತಕಥೆಗಳನ್ನು ಹಾಳು ಮಾಡಿರುವ ಬಗ್ಗೆ ವಿವರಿಸುತ್ತಿರುವುದು ಕಂಡು ಬಂತು.
ಮನುಷ್ಯನಿಗೆ ಬದುಕಿಗಿಂತ ಯಾವುದೋ ಕಾಲದಲ್ಲಿ ಯಾರೋ ಭೋದಿಸಿದ ಧರ್ಮಗಳೇ ಹೆಚ್ಚಾಗಿ ಹೋದವಲ್ಲ ಅನಿಸಿತು.
UNESCO ಮತ್ತೊಂದಷ್ಟು ಪ್ರಾಕ್ತನಶಾಸ್ತ್ರಜ್ಞರು ಏನಾದರೂ ಇವುಗಳ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲದಿದ್ದಲ್ಲಿ ಎಲ್ಲವೂ ಇಷ್ಟೊತ್ತಿಗೆ ನಿರ್ನಾಮವಾಗಿರುತ್ತಿತ್ತೇನೋ.
ಎಂತಹ ಅದ್ಭುತ ಮಾಯಾಲೋಕವದು ಒಂದು ಕಾಲಕ್ಕೆ..!
ದುಬೈನಿಂದ ಮತ್ತೆ ಎಮಿರೇಟ್ಸು ನಮ್ಮನ್ನ ಬೆಂಗಳೂರಿಗೆ ತಂದು ಬಿಸಾಕಿದಾಗ ಬೆಳಗಾಗಿತ್ತು.
ಏರ್ಪೋರ್ಟು ರಸ್ತೆಯಿಂದ ಚಿಕ್ಕಮಗಳೂರ ಕಡೆ ಹೊರಟವನಿಗೆ ಅನಿಸಿದ್ದು ಎಷ್ಟಾದರೂ ನಮ್ಮೂರೇ ನಮಗೆ ಚೆಂದ.ಅದರಲ್ಲೂ ನಮ್ಮ ಪಶ್ಚಿಮಘಟ್ಟಗಳು ಭೂಲೋಕದ ಸ್ವರ್ಗವೇ ಎಂದು.
ಈಜಿಪ್ಟಿನ ನೆನಪಿಗಾಗಿ ಗಿಝಾದಿಂದ ಪ್ಯಾಪಿರಸ್ ಪೇಂಟಿಂಗ್ ಒಂದನ್ನೂ,
ವ್ಯಾಲಿ ಆಫ್ ದಿ ಕಿಂಗ್ಸ್ ನಿಂದ ಒಂದು ಸುಣ್ಣದ ಕಲ್ಲನ್ನೂ,
ಆಸ್ವಾನಿನಿಂದ ಅರ್ಧ ಲೀಟರ್ ನೈಲು ನೀರನ್ನೂ ತಂದಿದ್ದೆ.
ನೈಲು ನೀರನ್ನು ಒಂದಷ್ಟು ಇಟ್ಟುಕೊಂಡು ಉಳಿದಿದ್ದನ್ನು ಹೇಮಾವತಿಗೆ ಚೆಲ್ಲುತ್ತ
ಮತ್ತೊಂದು ಭಾವ ಬೆಸುಗೆಗೆ ಸಾಕ್ಷಿಯಾದೆ.
ಸ್ನೇಹಿತರೊಂದಷ್ಟು ಜನ ಕೇಳಿದರು ಈಜಿಪ್ಟಿಂದ ನನಗೇನು ತಂದೆ ಎಂದು.
ನಿಮಗಾಗಿ ಅದ್ಭುತವಾದ ನೆನಪುಗಳನ್ನು ತಂದಿದ್ದೇನೆಂಬುದು ನನ್ನ ಉತ್ತರವಾಗಿತ್ತು. (Travel Diaries of Egypt From 15/10/2021 To 23/10/2021)