ದೇಶದ ಬಡ್ಜೆಟ್ಟನ್ನು ವಿಶ್ಲೇಷಣೆ ಮಾಡುವಾಗ ಸಾಮಾನ್ಯವಾಗಿ ಈ ಮೊದಲಿನ ಮುಂಗಡಪತ್ರಗಳು ಅಥವಾ ಈ ಮೊದಲಿನ ಸರಕಾರಗಳ ಮುಂಗಡಪತ್ರಗಳಿಗೆ ತುಲನೆ ಮಾಡಿದಾಗ ಅದರ ಚಿತ್ರಣ ಹೆಚ್ಚು ಸ್ಪಷ್ಟ ಆಗುವುದು.. ಆದರೆ ದೇಶದ ಇಂದಿನ ಆರ್ಥಿಕ ಸ್ಥಿತಿ ಹಾಗೂ ಸವಾಲುಗಳ ಅಧ್ಯಯನ ಮಾಡಿ ನಂತರ ಅದೇ ಮಜಲಿನಲ್ಲಿ ನಿಂತು ನೋಡಿದಾಗಲೇ ಬಡ್ಜೆಟ್ ಅಧ್ಯಯನ ಹೆಚ್ಚು ಪಾರದರ್ಶಕ ಹಾಗೂ ವೈಜ್ಞಾನಿಕ ಎನಿಸುತ್ತವೆ ಅನ್ನುವುದು ಬಹಳ ಸ್ಪಷ್ಟ.
ಎರಡು ವರ್ಷಗಳ ಕರೋನದ ಸಂಕಷ್ಟದಿಂದಾಗಿ ದೇಶದ ಆರ್ಥಿಕತೆ ಮಾರಕವಾಗಿ ಹೊಡೆತ ತಿಂದಿದೆ, ಸರಕಾರದ ಸ್ಥಿತಿ ತೀರಾ ನಾಜೂಕು ಅನ್ನಿಸಿದೆ ಹಾಗೂ ಜನ ಸಾಮಾನ್ಯರ ಆರ್ಥಿಕ ಭವಿಷ್ಯದ ಬಗ್ಗೆ ಕರಿನೆರಳನ್ನೂ ಚೆಲ್ಲಿದೆ. ಹಾಗಾಗಿ ಈ ಎರಡು ವರ್ಷಗಳ ಬಡ್ಜೆಟ್ಗಳು ತೀರಾ ಅಸಾಮಾನ್ಯ ಎನಿಸಿದ್ದವು. ಸಾಮಾನ್ಯ ಜನರ ನಿತ್ಯ ಸಂಪಾದನೆ ಕನಿಷ್ಟ 30% ಕಡಿತವಾಗಿ, ದೊಡ್ಡ ಸಂಖ್ಯೆಯ ಮಾಮೂಲು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದು, ಅಸಂಘಟಿತ ಕ್ಷೇತ್ರದ ಕಾರ್ಮಿಕರು ಹತಾಶೆಯಿಂದ ಗ್ರಾಮಗಳಿಗೆ ಮರು ವಲಸೆ ಬಂದಿರುವುದು ಎಲ್ಲವೂ ನಡೆದಿದೆ, ಸಮಾಜ ಚಿಂತಕ ರೂಸ್ಸೋ ಹೇಳುವಂತೆ ಸರಕಾರಗಳು ಜನರಲ್ ವಿಲ್ ಅಥವಾ ಜನರ ಇಚ್ಛೆಗೆ ಅನುಗುಣವಾಗಿ ನಡೆಯುವ ಜವಾಬ್ದಾರಿ ಹೊಂದಿರಬೇಕು. ಅಂದರೆ ಸಂಕಷ್ಟ ಕಾಲದಲ್ಲಿ ಜನರ ಸಮಸ್ಯೆಯನ್ನು ಗುರುತು ಮಾಡಿ ಅದಕ್ಕೇ ಔಷಧಿ ನೀಡುವುದು ಸರ್ಕಾರದ ಕರ್ತವ್ಯ.. ಅಂತೆಯೇ ಸರಕಾರ ಕರೋನಾ ಸಂಕಷ್ಟ ಅಪ್ಪಳಿಸಿದ ಮರುಕ್ಷಣದಲ್ಲಿ ತನ್ನ ವಿತ್ತೀಯ ಶಿಸ್ತನ್ನು ತಕ್ಷಣ ಸಡಿಲಗೊಳಿಸಿದೆ.
FRBM Act ನಂತೆ 3.3% ಇರಬೇಕಾಗಿದ್ದ ಸಾಲದ ಪ್ರಮಾಣವನ್ನು(fiscal deficit) ತಕ್ಷಣ ಅಂದಾಜು 9% ಕ್ಕೆ ಏರಿಸಿಕೊಂಡಿದೆ. ಅಂದರೆ ಸಮಸ್ಯೆ ಪರಿಹಾರಾರ್ಥವಾಗಿ ಸುಮಾರು 15 ಲಕ್ಷ ಕೋಟಿಗಿಂತಲೂ ಹೆಚ್ಚುವರಿ ಸಾಲವನ್ನು ತನ್ನ ಮೇಲೆಳೆದುಕೊಂಡಿತ್ತು.. ನರೇಗಾ ಯೋಜನೆಗೆ ನಿಗದಿಯಾಗಿದ್ದ 64,000 ಕೋಟಿಯ ಬದಲಿಗೆ ಸುಮಾರು 1,20,000 ಕೋಟಿ ಹಣವನ್ನು ಹರಿಸಿದೆ.ಇಲ್ಲವೇ ಹಿಂದೆ ಇದ್ದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 68,000 ಕೋಟಿ ರೂಪಾಯಿಯನ್ನು ಬಡವರ ಕೈಯಲ್ಲಿ ಖರ್ಚಿಗಾಗಿ ತೆಗೆದಿರಿಸಿದೆ. ಗರೀಬ್ ಕಲ್ಯಾಣ ಯೋಜನೆಯಡಿ 80 ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆಗೆ ಉಚಿತ ಆಹಾರ ನೀಡಿದೆ. ವಿಲವಿಲ ಒದ್ದಾಡುತ್ತಿದ್ದ ಸಣ್ಣ ಉದ್ದಿಮೆಗಳಿಗೆ (MSME) ಸಾಲವನ್ನು ಸದ್ಯಕ್ಕೆ ಕಟ್ಟದಿದ್ದರೂ ಅಡ್ಡಿಯಿಲ್ಲ ಎಂದಿದೆ. ಕಾರ್ಪೊರೇಟ್ ಜಗತ್ತಿಗೆ ಸಹಾಯಹಸ್ತವನ್ನು ಚಾಚುತ್ತಾ ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತವನ್ನೂ ಮಾಡಲಾಗಿತ್ತು.
ಅಂದರೆ ಜನರಲ್ಲಿ ಕೊಳ್ಳುವ ಶಕ್ತಿ ಕಡಿಮೆ ಆದಾಗ ಬೇಡಿಕೆ ಹೆಚ್ಚಬೇಕು ಅನ್ನೋದು ಆರ್ಥಿಕ ನೀತಿಯ ಗುರಿ ಆಗಿರುತ್ತದೆ. ಜನ ಮಾರುಕಟ್ಟೆಗೆ ಪ್ರವೇಶ ಮಾಡಿ, ಕೊಳ್ಳಲು ಬೇಡಿಕೆ ಇಟ್ಟಾಗಲೇ ಆರ್ಥಿಕ ಚಟುವಟಿಕೆಯಲ್ಲಿ ಉತ್ಸಾಹ ವೃದ್ಧಿ ಆಗುವುದು. ಆದರೆ ಈಗಷ್ಟೇ ಕರೋನ ಮಾರಿಯ ಸಂಕಷ್ಟ ಹತೋಟಿಗೆ ಬಂದಿದ್ದು, ಸರ್ಕಾರ ಮತ್ತೆ ಆರ್ಥಿಕತೆಯನ್ನು ಹಳಿಯ ಮೇಲೆ ತಂದು ಕೂರಿಸಿ ವೇಗೋತ್ಕರ್ಷಗೊಳಿಸುವುದು ಇಂದಿನ ತುರ್ತು ಅಗತ್ಯ. ಆ ಹಿನ್ನೆಲೆಯಲ್ಲಿ ಈ ಬಾರಿಯ ಮುಂಗಡ ಪತ್ರ ಕಳೆದೆರಡು ವರ್ಷಗಳಿಂದ ಭಿನ್ನ ಹಾಗೂ ಇಷ್ಟು ಹಿನ್ನೆಲೆಯ ಆಧಾರದಲ್ಲಿ ಬಡ್ಜೆಟ್ ವಿಶ್ಲೇಷಣೆ ಮಾಡಿದಾಗ ಅದು ಹೆಚ್ಚು ಸಮಗ್ರ ಅಥವಾ cohesive ಎನ್ನಿಸಬಹುದು.
ದೇಶದ ಇಂದಿನ ಪ್ರಮುಖ ಸಮಸ್ಯೆಗಳಲ್ಲಿ ಒಂದು ಉದ್ಯೋಗ ಸೃಷ್ಟಿ. ಅದಕ್ಕಾಗಿ ಸರಕಾರ ಬಂಡವಾಳ ಖರ್ಚು (CAPEX) ಹೆಚ್ಚು ಮಾಡುವ ದೃಢ ನಿರ್ಧಾರ ಕೈಗೊಂಡಿದೆ. ಕಳೆದ ವರ್ಷ 5 ಲಕ್ಷ ಕೋಟಿಯಷ್ಟಿದ್ದ ಅದನ್ನು ಈ ಬಾರಿ 7.4 ಕೋಟಿಗೆ ಏರಿಸಲಾಗಿದ್ದು (35% ಹೆಚ್ಚಿಗೆ) ಅದೂ ಇಡೀ ದೇಶದ ಜಿ.ಡಿ.ಪಿಯ ಸುಮಾರು 4% ರಷ್ಟಾಗಿದ್ದು, ಇಂದಿನ ಸ್ಥಿತಿಯಲ್ಲಿ ಇದು ಗಣನೀಯ ಪ್ರಮಾಣವೆಂದೇ ಹೇಳಬಹುದು. ಇದಲ್ಲದೆ ರಾಜ್ಯಗಳಿಗೆ ಒಂದು ಲಕ್ಷ ಕೋಟಿಯಷ್ಟು ಬಡ್ಡಿ ರಹಿತ CAPEX ಸಾಲಕ್ಕಾಗಿ ಹಣ ಮೀಸಲಿಡಲಾಗಿದೆ.
ಸಂಕಷ್ಟ ಕಾಲದಲ್ಲಿ ಪರಿಹಾರ, ಸಮಾಧಾನದ ಕಾಲದಲ್ಲಿ ಉದ್ಯೋಗ ಸೃಷ್ಟಿ, ಮೂಲಭೂತ ಸೌಕರ್ಯಗಳ ಸೃಷ್ಟಿ, ಆಧುನೀಕರಣಗಳು ಅನಿವಾರ್ಯ. ಆ ಹಿನ್ನೆಲೆಯಲ್ಲಿ ಸರಕಾರದ ಈ ದೃಢ ನಿರ್ಧಾರ ಕೈಗೊಂಡಿರುವ ಹೆಜ್ಜೆ ಉಲ್ಲೇಖಾರ್ಹ. ಸಾಮಾನ್ಯವಾಗಿ ಪರಿಹಾರಕ್ಕಾಗಿ ಹಣ ವಿನಿಯೋಗ ಮಾಡಿದರೆ ಜನರನ್ನು ಖುಶಿ ಪಡಿಸುವುದು ಸುಲಭ. ಚುನಾವಣೆಗಳು ಕಣ್ಣೆದುರಲ್ಲೇ ಇದ್ದರೂ ಸರಕಾರ ಈ ಆಮಿಷಕ್ಕೆ ಬಲಿಯಾಗದೆ ಸಂತುಲಿತವಾದ ಮಾನಸಿಕತೆ ಉಳಿಸಿಕೊಂಡದ್ದು ಶ್ಲಾಘನೀಯ.
ಜಿ.ಎಸ್.ಟಿ ಸಂಗ್ರಹದಲ್ಲಿ ನಿಧಾನವಾಗಿ ಏರುಗತಿ ಕಾಣಿಸುತ್ತಿದೆ. ಇತ್ತೀಚೆಗಷ್ಟೇ ಬಂದ ಮಾಹಿತಿಯಂತೆ ಜನವರಿ ತಿಂಗಳ ಜಿ.ಎಸ್.ಟಿ ಸಂಗ್ರಹ 1.41 ಲಕ್ಷ ಕೋಟಿ. ಇಂದಿನ ಸ್ಥಿತಿಯಲ್ಲಿ ಇದು ದೊಡ್ಡ ಮೊತ್ತವೇ. ಹಾಗಿದ್ದರೂ ಜಿ.ಎಸ್.ಟಿ ಆರಂಭದ ಕಾಲದ ಜಟಿಲತೆಗಳು ಒಂದಷ್ಟು ದೀರ್ಘ ಅನಿಸಿದ್ದು, ಕರೋನದ ಹೊಡೆತ ಇಲ್ಲವಾಗಿದ್ದಲ್ಲಿ ಈಗ ಅದು ಏನಿದ್ದರೂ 1,80,000 ಕೋಟಿಯಷ್ಟು ದೊಡ್ಡದಾದ ಮೊತ್ತವಾಗಬಹುದಿತ್ತು ಅನ್ನುವುದು ಸ್ಪಷ್ಟ.
ಸರಕಾರದ ಒಟ್ಟು ತೆರಿಗೆ ಸಂಗ್ರಹದಲ್ಲಿ ರಾಜ್ಯಗಳ ಪಾಲು ಕಳೆದಾಗ ಕೇಂದ್ರಕ್ಕೆ ಉಳಿಯೋದು ಸುಮಾರು 19 ಲಕ್ಷ ಕೋಟಿ ಮಾತ್ರ. ಇತರ ಸಂಪಾದದನೆ ಸುಮಾರು 3 ಲಕ್ಷ ಕೋಟಿ. ಸಾಲಗಳು ಸುಮಾರು 17 ಲಕ್ಷ ಕೋಟಿ ಸೇರಿ ಅಂದಾಜು 39-40 ಲಕ್ಷ ಕೋಟಿ ರೂಪಾಯಿಯ ವಾರ್ಷಿಕ ವ್ಯವಹಾರ ಸರಕಾರದ ಮುಂದಿದೆ..
ಇದರಲ್ಲಿ ಪಿಂಚಣಿ ಸೇರಿ ರಕ್ಷಣೆಗೇ ಸುಮಾರು ಐದು ಲಕ್ಷ ಕೋಟಿ, ಬಡ್ಡಿ ಮರುಪಾವತಿ ಸುಮಾರು ಒಂದು ಲಕ್ಷ ಕೋಟಿ, ಪಿಂಚಣಿ ಅಂದಾಜು ಎರಡು ಲಕ್ಷ ಕೋಟಿ, ಆಹಾರ ಭದ್ರತೆ ಅಂದಾಜು 2.4 ಲಕ್ಷ ಕೋಟಿ ಹಾಗೆಯೇ ವಿವಿದ ಅಬ್ಸಿಡಿಗಳಿಗೆ ಸುಮಾರು 2.5 ಲಕ್ಷ ಕೋಟಿ ಹಣ ವಿನಿಯೋಗದ ಸವಾಲು ಸರಕಾರ ಇಟ್ಟುಕೊಂಡಿದೆ.
ಗ್ರಾಮೀಣ ಭಾರತ ಹಾಗೂ ಕೃಷಿಗೆ ಮೊದಲಿನ ಒತ್ತು ಈ ಬಡ್ಜೆಟ್ನಲ್ಲಿ ಇಲ್ಲ ಹಾಗೂ ಅದಕ್ಕೆ ಸಕಾರಣವೂ ಇದೆ. ಹಿಂದಿನ ದಿನ ಮಂಡಿಸಿದ economic survey report ನಂತೆ ಕೃಷಿ ಕ್ಷೇತ್ರದಲ್ಲಿ ಆರೋಗ್ಯಕರವಾದ 3.9% ಬೆಳವಣಿಗೆ ಕಂಡು ಬಂದಿದೆ. ಹಾಗಾಗಿ ಇಂದು ಆ ಕ್ಷೇತ್ರದಲ್ಲಿ ಕಳೆದೆರಡು ವರ್ಷದಷ್ಟು ಒತ್ತಡ ಇಲ್ಲ.. ಅಲ್ಲದೇ ಈ ವರ್ಷಗಳಲ್ಲಿ ಬಡತನದ ಪರಿಹಾರಕ್ಕಾಗಿ ಈ ಕ್ಷೇತ್ರಕ್ಕೆ ಮೀಸಲಿಟ್ಟ ಹಣವನ್ನು ಸುಮಾರು ಮೂರು ಪಟ್ಟು ಹೆಚ್ಚಿಸಲಾಗಿತ್ತು. ಹಾಗಾಗಿ ಈಗ ಕಡಿತ ಆಗಿರುವುದು ಕಳೆದೆರಡು ವರ್ಷದ ಹೆಚ್ಚುವರಿಯೇ ಹೊರತು, ಮೂಲದ ಸ್ಥಿತಿಯನ್ನು ಹಾಗೇಯೇ ಕಾಪಾಡಲಾಗಿದೆ. ಗೊಬ್ಬರ ಸಬ್ಸಿಡಿಯಲ್ಲಿ ಕಡಿತ ಇಲ್ಲ.. ನರೇಗಾದಲ್ಲಿ ಸಣ್ಣ ಪ್ರಮಾಣದ ಕಡಿತ, ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಮೊದಲಿನದ್ದೇ ಸ್ಥಿತಿಯನ್ನು ಉಳಿಸಿಕೊಳ್ಳಲಾಗಿದೆ.
ಗಣನೀಯ ಎನ್ನುವ ಇನ್ನೊಂದು ಕ್ಷೇತ್ರವೆಂದರೆ ರಕ್ಷಣೆ. ಸೇನೆಯ ಆಧುನೀಕರಣಕ್ಕಾಗಿ ಹತ್ತಿರ ಹತ್ತಿರ ಎರಡು ಲಕ್ಷ ಕೋಟಿಯ ಗುರಿ ಇರುವುದು ಒಂದು ಕಡೆಯಾದರೆ ಅದರಲ್ಲಿನ ಹೂಡಿಕೆ ಹಾಗೂ ಖರೀದಿಯ 50% ನ್ನೂ ದೇಶದೊಳಗೇ ತಯಾರಿಸುವ ಗುರಿ ಇಟ್ಟಿರುವ ಕಾರಣ ಆ ಹಣದ ಮೂಲಕ ಆಗುವ ಉದ್ಯೋಗ ಸೃಷ್ಟಿಯೂ ಆರ್ಥಿಕತೆಗೆ ಪೂರಕ ಆಗಬಲ್ಲುದು.
ಉದ್ಯೋಗ ಸೃಷ್ಟಿಯ ಅವಶ್ಯಕತೆ ಇರುವ ಕಾಲದಲ್ಲಿ, ಹತ್ತು ಸಾವಿರ ಕೋಟಿ ಹಣವನ್ನು ಯಾವ ಯಾವ ಕ್ಷೇತ್ರಕ್ಕೆ ಹಾಕಿದಾಗ ಎಷ್ಟೆಷ್ಟು ಉದ್ಯೋಗ ಸೃಷ್ಟಿ ಆಗುವುದು ಅನ್ನುವ ಮಾನದಂಡದಲ್ಲಿ ನೋಡಿದಾಗ ಈ ದಿಶೆಯಲ್ಲಿ ಅತೀ ಹೆಚ್ಚು ಉದ್ಯೋಗ ಸೃಷ್ಟಿ ಆಗುವ ಕ್ಷೇತ್ರ ಅಂದರೆ ಅದು ರಸ್ತೆ ಹಾಗೂ ಕಟ್ಟಡ ನಿರ್ಮಾಣ. ಹಾಗಾಗಿ ಸುಮಾರು ಎರಡು ಲಕ್ಷ ಕೋಟಿ ಹಣವನ್ನು ರಸ್ತೆಗಳ ಅಭಿವೃದ್ದಿಗೆ ಮೀಸಲಿಡಲಾಗಿದೆ.
ಕೃಷಿಕರ ಆದಾಯವನ್ನು ಡಬಲ್ ಮಾಡುವ ಗುರಿ, ಸಣ್ಣ ಉದ್ದಿಮೆಗಳಿಗೆ ಸಹಾಯ ಹಸ್ತದ ಬಗ್ಗೆ ಸರ್ಕಾರ ಎರಡು ಹಜ್ಜೆ ಹೆಚ್ಚು ಹಾಕಬಹುದಿತ್ತು ಎಂಬುದು ಅನಿಸಿಕೆ. ಇರುವ ಮಾಹಿತಿಯಂತೆ ರೈತರ ಆದಾಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ದೊಡ್ಡ ಹಿನ್ನೆಡೆ ಇರಬೇಕು. ಹಾಗೂ ಕೃಷಿ ಸುಧಾರಣೆ ಸ್ಕಿಲ್ ಇಂಡಿಯಾ ಹಾಗೂ ಮುದ್ರಾ ಯೋಜನೆಗಳ ವೇಗೋತ್ಕರ್ಷಗೊಳಿಸಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ.
ಒಟ್ಟಿನಲ್ಲಿ ರಾಜಕೀಯವಾಗಿ ಸುಲಭ ಲಾಭಗಳ ಪ್ರಲೋಭನೆಗೆ ಒಳಗಾಗದೆ ದೃಢತೆ ಹಾಗೂ ಬೆಳವಣಿಗೆಗೆ ಒತ್ತು ಕೊಡುವ ಸಂತುಲಿತ ಪ್ರಯತ್ನ ಈ ಮುಂಗಡ ಪತ್ರದಲ್ಲಿ ಆಗಿದೆ ಅಂತಾ ಅನ್ನಿಸುತ್ತದೆ.
ವಿಶ್ವೇಶ್ವರ ಭಟ್ ಬಂಗಾರಡ್ಕ