ಆಕಾಶದ ನೀಲಿಯಲ್ಲಿ, ಚಂದ್ರ, ತಾರೆ ತೊಟ್ಟಿಲಲ್ಲಿ..ಬೆಳಕನಿಟ್ಟು ತೂಗಿದಾಕೆ, ನಿನಗೆ ಬೇರೆ ಹೆಸರು ಬೇಕೆ ? ಸ್ತ್ರೀ ಎಂದರೆ ಅಷ್ಟೇ ಸಾಕೇ…
ಕವಿ ಜಿ.ಶಿವರುದ್ರಪ್ಪನವರು ಹೆಣ್ಣಿನ ಕುರಿತಾಗಿ ಆಕೆಯ ತಾಳ್ಮೆ,ಶಕ್ತಿ, ಸಂಯಮ ಹಾಗೂ ಸಾಧನೆಗಳಿಗೆ ಪದಗಳಕಟ್ಟಿ ರೂಪಿಸಿದ ಈ ಸಾಲುಗಳು ಸದಾ ಜೀವಂತ ಹಾಗೂ ಪ್ರಸ್ತುತ..
ಪ್ರಾಚೀನ ಕಾಲದಲ್ಲೇ ಗಾರ್ಗಿ, ಮೈತ್ರಿಯಿಯರಂತ ಮಹಾ ಮಹಿಳೆಯರನ್ನು ಕಂಡಂತಹ, ಓಬವ್ವ,ರಾಣಿ ಲಕ್ಷ್ಮೀಬಾಯಿ, ಚೆನ್ನಮ್ಮ, ಚೆನ್ನಾಭೈರಾದೇವಿಯರಂತಹ ಶೌರ್ಯದಲ್ಲಿ ಮಿಂದೆದ್ದ ಈ ಪುಣ್ಯ ಭೂಮಿ ಮನುಕುಲಕ್ಕೆ ಮಾದರಿ. ಸ್ತ್ರೀ ಎಂದರೆ ಇಷ್ಟೇ ಅಲ್ಲಾ, ಎಲ್ಲವೂ ಎಂಬುದನ್ನು ಶತಮಾನಗಳ ಹಿಂದೆಯೇ ಮಹಿಳೆಯರು ನಿರೂಪಿಸಿದ್ದಾರೆ.
ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆಯ ಮೆಟ್ಟಿಲೇರಿರುವ ಮಹಿಳೆಯರು ಹಲವರು. ಆದರೆ, ಸಮಸ್ಯೆಗಳ ರೂಪ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇದ್ದು, ಕಾಲದ ಜತೆಯಲ್ಲೇ ಹೆಣ್ಣಿನ ಪಾತ್ರವೂ ಬದಲಾಗುತ್ತಿದೆ. ಈ ಆಧುನಿಕ ಕಾಲದಲ್ಲಿ ಶೌರ್ಯವಷ್ಟೇ ಅಲ್ಲಾ, ಬುದ್ಧಿವಂತಿಕೆ, ಇಚ್ಛಾಶಕ್ತಿ, ವಿದ್ಯೆ ಅವುಗಳ ಜತೆಗೆ ಪ್ರಭಾವವೂ ಬಹಳ ಮುಖ್ಯ! ಅಂತಹದ್ದೊಂದು ಸ್ಥಾನಮಾನ ಪಡೆದುಕೊಳ್ಳಲು ಸಮಸ್ಯೆಗಳೊಂದಿಗೆ ಹೋರಾಟಕ್ಕಿಳಿದು ಇಂದಿಗೆ ಯಶಸ್ವಿ ವಕೀಲೆಯಾಗಿ, ಯುವತಿಯರಿಗೆ ಮಾದರಿಯಾಗಿರುವ ಹೆಣ್ಣು ರೇಖಾ ಆರಾಧ್ಯ..
ಬಾಲ್ಯವಿವಾಹವೆಂಬುದು ಸ್ವಾತಂತ್ರ್ಯದ ಪೂರ್ವದ ಪಿಡುಗು. ಸಮಾಜದಲ್ಲಿ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಕಿತ್ತೊಗೆಯಲು ನಡೆದ ಹೋರಾಟ, ತ್ಯಾಗ, ಬಲಿದಾನಗಳು ಅಚ್ಚಳಿಯದ ಇತಿಹಾಸವಾಗಿ ಉಳಿದಂತವು. ಆಧುನಿಕ ಸಮಾಜ, ಶೈಕ್ಷಣಿಕವಾಗಿ, ತಾಂತ್ರಿಕವಾಗಿ, ಆರ್ಥಿಕವಾಗಿಯೂ ಮುಂದುವರಿದಿದ್ದರೂ ಇಂದಿಗೂ ಅಲ್ಲಲ್ಲಿ ಬಾಲ್ಯವಿವಾಹವೆಂಬ ಪಿಡುಗು ಜೀವಂತವಾಗಿದೆ.ಇಂತಹದ್ದೇ ಸಮಸ್ಯೆಗೆ ಸಿಲುಕಿನಲುಗಿದಾಕೆ ರೇಖಾ..
ಶ್ರೀಮಂತರ ಮನೆಗೆ ಮದುವೆಯಾದರೆ ಮಗಳ ಬಾಳು ಹಸನಾಗುತ್ತದೆಂಬ ತಂದೆಯ ದಡ್ಡತನಕ್ಕೋ ,ತಿಳುವಳಿಕೆ ಇಲ್ಲದ ಮುಗ್ಧತೆಯಿಂದಲೂ ರೇಖಾ ತಮ್ಮ ೧೩ನೇ ವಯಸ್ಸಿನಲ್ಲಿ ತನಗಿಂತ ೨೦-೨೫ ವರ್ಷ ಹಿರಿಯ ವ್ಯಕ್ತಿಗೆ ಕೊರಳೊಡ್ಡಬೇಕಾಯಿತು . ಈ ಬಳಿಕವೂ ೧೦ನೇ ತರಗತಿ ಪರೀಕ್ಷೆ ಬರೆಯುವುದಕ್ಕಾಗಿ ತಂದೆಯ ಮನೆಯಲ್ಲೇ ಉಳಿದಿದ್ದ, ಓದಿನ ಬಗ್ಗೆ ತೀವ್ರ ಆಸಕ್ತಿ ಇದ್ದಂತಹ ಉಜ್ವಲ ಭವಿಷ್ಯದ ಕನಸು ಕಂಡಿದ್ದ ಹೆಣ್ಣುಮಗಳು. ಪರೀಕ್ಷೆ ಬಳಿಕ ಇಷ್ಟವಿಲ್ಲದಿದ್ದರೂ ಗಂಡನ ಮನೆಗೆ ತೆರಳಿದ ಆಕೆ, ಆ ನಂತರ ಕಂಡಿದ್ದೆಲ್ಲ ಬರೀ ಕಣ್ಣೀರೆ.. ದೈಹಿಕವಾಗಿ, ಮಾನಸಿಕವಾಗಿ ಆ ಮದುವೆ ಆಕೆಯನ್ನು ನಲುಗಿಸಿ ಹಾಕಿತ್ತು. ಆಡುವ ವಯಸ್ಸಿಗಾಗಲೇ ಮಡಿಲಲ್ಲಿ ಮಗುವೂ ಆಡುವಂತಾಯ್ತು.. ಹೆತ್ತ ಮಗುವಿಗೆ ಅಮ್ಮ, ಗಂಡನಿಗೆ ಹೆಂಡತಿ, ಮನೆಗೆ ಆಳಾಗಿ ಇರಬೇಕೆಂಬುದು ಗಂಡನ ಮನೆಯವರ ಇರಾದೆಯಾಗಿತ್ತು..
ಗಂಡನಿಂದಾಗುತ್ತಿದ್ದ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ಮನನೊಂದ ರೇಖಾ, ಮನೆತೊರೆಯಲು ನಿರ್ಧರಿಸಿದರು. ತನ್ನಂತೆಯೇ ಮತ್ತಷ್ಟು ಹೆಣ್ಣುಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು,ಅವರ ಹಕ್ಕುಗಳನ್ನು ಯಾರೂ ಕಸಿಯಬಾರದು ಎಂದು ಯೋಚಿಸಿ, ಹಸುಗೂಸನ್ನು ಎದೆಗವಚಿಕೊಂಡು, ಪುಸ್ತಕವನ್ನಿಡಿದು ಮನೆಯಿಂದ ಹೊರಬಿದ್ದರು.. ಗಂಡನ ಮನೆ ತೊರೆದ ಮಗಳಿಗೆ ತವರೂ ಕೂಡ ಆಸರೆ ನೀಡಲಿಲ್ಲ. ಆದರೆ, ಆಕೆ ಧೃತಿಗೆಡದೆ ಸ್ನೇಹಿತರ ಸಹಾಯ ಪಡೆದು ಪುಟ್ಟದೊಂದು ಮನೆಯನ್ನು ಬಾಡಿಗೆ ಪಡೆದು ಜೀವನವನ್ನು ಮರು ಆರಂಭಿಸುತ್ತಾರೆ.
ಆಸ್ಪತ್ರೆಯಲ್ಲಿ ಸಹಾಯಕ ದಾದಿಯಾಗಿ, ನ್ಯಾಯಾಧೀಶರೊಬ್ಬರ ಮನೆಯ ಕೆಲಸದಾಕೆಯಾಗಿ ಹೊತ್ತಿನ ಊಟಕ್ಕೆ ದಾರಿಹುಡುಕಿಕೊಳ್ಳುತ್ತಾರೆ. ಇದರ ನಡುವೆಯೇ ಪಿಯುಸಿ ಪರೀಕ್ಷೆ ಕಟ್ಟಿ ಉತ್ತೀರ್ಣರಾಗಿದ್ದರು. ಮಂಡ್ಯದ ನ್ಯಾಯಾಲಯದ ಮುಂದೆ ಟೀ ಅಂಗಡಿ ಹಾಕಿಕೊಂಡು, ತಳ್ಳುಗಾಡಿಯಲ್ಲಿ ಮಗುವನ್ನು ಮಲಗಿಸಿಕೊಂಡು ಪುಸ್ತಕ ಓದುತ್ತಿದ್ದ ರೇಖಾ, ಟೀ ಕುಡಿಯಲು ಬಂದ ವಕೀಲರೊಬ್ಬರಿಗೆ ಹೀಗೆ ವಕೀಲರಾಗುವುದು ಹೇಗೆ ಎಂದಿದ್ದರಂತೆ.. ನಂತರ ನಡೆದಿದ್ದೆಲ್ಲ ಪವಾಡ.. ಮಗನ ಓದಿನ ಜತೆಗೆ ತಾನೂ ಓದುತ್ತಾ, ಇತ್ತ ಕೆಲಸವನ್ನೂ ಮಾಡುತ್ತಾ ಮಗ ೮ನೇ ತರಗತಿ ತಲುಪುವ ವೇಳೆಗೆ ರೇಖಾ ವಕೀಲೆಯಾಗಿದ್ದರು..
ಯಾವ ನ್ಯಾಯಾಲಯದ ಮುಂದೆ ಟೀ ಅಂಗಡಿ ಇಟ್ಟು ನಿಂತಿದ್ದರೋ, ಇಂದು ಅದೇ ನ್ಯಾಯಾಲಯದಲ್ಲಿ ನೊಂದವರ ಪರ ವಾದ ಮಂಡಿಸುತ್ತಿದ್ದಾರೆ.. ಮಗನನ್ನೂ ಬಿಸಿಎ ಓದಿಸಿದ್ದು, ಪ್ರಾಣಿ ಪ್ರಿಯನಾದ ಆತನಿಗೆ ಸ್ವಂತ ಉದ್ಯೋಗ ನಡೆಸಲು ಈಕೆಯೇ ಸಾಥ್ ನೀಡುತ್ತಿದ್ದಾರೆ. ಸಮಾಜದಲ್ಲಿ ಹೆಣ್ಣನ್ನು ಗೌರವಿಸುವುದು, ಹಕ್ಕುಗಳಿಗಾಗಿ ಹೋರಾಡುವುದನ್ನು ಕಲಿಯಲಿ ಎಂಬ ಕಾರಣಕ್ಕೆ ಮಗನನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ಘಟಕ ಎಬಿವಿಪಿಗೆ ಸೇರಲು ಪ್ರೋತ್ಸಾಹಿಸಿದ್ದರಲ್ಲದೇ,ಕೆಲ ಕಾಲ ತಾವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.. ಒಟ್ಟಾರೆ ಯಾವುದು ಅಸಾಧ್ಯವಲ್ಲ, ಮನಸ್ಸಿದ್ದರೇ ಏನನ್ನು ಬೇಕಿದ್ದರು ಸಾಧಿಸಬಹುದು ಎಂಬುದಕ್ಕೆ ಈಕೆ ಜೀವಂತ ನಿದರ್ಶನ.. ಯಾವ ಹಕ್ಕುಗಳನ್ನು ನಾನು ಕಳೆದುಕೊಂಡಿದ್ದೆನೋ ಅದೇ ಹಕ್ಕುಗಳಿಂದ ವಂಚಿತರಾದವರಿಗೆ ಕಾನೂನಿನ ಮೂಲಕ ಪರಿಹಾರ ನೀಡಬೇಕೆಂಬ ಉದ್ದೇಶಕ್ಕೆ ವಕೀಲೆಯಾಗಿದ್ದೇನೆ ಎಂಬುದು ರೇಖಾರ ಮಾತು.. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಇಂತಹ ದಿಟ್ಟ ಮಹಿಳೆಯರು ಮತ್ತಷ್ಟು ಮಂದಿಗೆ ಸೂರ್ತಿಯಾಗಲಿ ಎಂಬುದೇ ಆಶಯ..
-ಅಶ್ವಿನಿ.ಸಿ