ಬೆಂಗಳೂರು: ತನ್ನತನವನ್ನು ಮರೆತು ಸಂಕಷ್ಟದಲ್ಲಿದ್ದ ಭಾರತೀಯ ಸಮಾಜವನ್ನು ಜಾಗೃತಿಗೊಳಿಸುವುದಕ್ಕೋಸ್ಕರ ದೇಶದ ಉದ್ದಗಲ ಓಡಾಡಿ ದೇಶಕ್ಕಾಗಿ ಬದುಕುವುದಕ್ಕೆ ಪ್ರೇರೇಪಿಸಿದವರು ಸ್ವಾಮಿ ವಿವೇಕಾನಂದರು. ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂದು ಕರೆಕೊಡುವ ಮೂಲಕ ಮಲಗಿದ್ದ ಸಮಾಜವನ್ನು ಎಚ್ಚರಿಸಿದರು. ಅಂತಹ ಪ್ರೇರಣಾದಾಯಿ ವ್ಯಕ್ತಿಯ ಉತ್ತಮನಾಗು ಉಪಕಾರಿಯಾಗು ಎಂಬ ಹೇಳಿಕೆಯನ್ನೇ ಧ್ಯೇಯವಾಗಿಟ್ಟುಕೊಂಡು ಸಮರ್ಥ ಭಾರತ ಪ್ರತಿ ವರ್ಷ BE GOOD DO GOOD ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ಹಾಗೂ ಸಮರ್ಥ ಭಾರತದ ಮಾರ್ಗದರ್ಶಕ ನಾ. ತಿಪ್ಪೇಸ್ವಾಮಿ ಹೇಳಿದರು.

ಸಮರ್ಥ ಭಾರತದ ವತಿಯಿಂದ ಆಯೋಜಿಸಿರುವ BE GOOD DO GOOD -2023 ಅಭಿಯಾನದ ಅಂಗವಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ WALKATHON – ವಿವೇಕ ನಡಿಗೆಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.

ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ಭಾರತ ದೇಶದ ಕಡೆಗೆ ಇಂದು ಜಗತ್ತಿನ ಗಮನವಿದೆ. ತನ್ನತನವನ್ನು ಜೊತೆಗಿಟ್ಟುಕೊಂಡು ಶಕ್ತಿಶಾಲಿ ರಾಷ್ಟ್ರವಾಗಿ ಭಾರತ ಬೆಳೆಯುತ್ತಿದೆ. ಭಾರತ ಸುಖವಾಗಿದ್ದರೆ ಜಗತ್ತು ನೆಮ್ಮದಿಯಿಂದಿರುತ್ತದೆ ಎನ್ನುವುದನ್ನು ಈ ನಾಡಿನ ಯುವಕರು ಅರಿತು ದೇಶ ಮೊದಲು ಎಂಬ ದೃಷ್ಟಿಕೋನದಿಂದ ಯೋಚನೆ ಮಾಡಬೇಕು. ನಮ್ಮ ರಾಷ್ಟ್ರ ಪುನಃ ವಿಶ್ವಗುರುವಾಗಲು ಸನ್ನಿಹಿತವಾಗಿರುವ ಸಂದರ್ಭದಲ್ಲಿ ಪ್ರತಿ ಯುವಕ ಉತ್ತಮನಾಗು ಉಪಕಾರಿಯಾಗು ಎಂಬ ಮಾತನ್ನು ಹೃದಯದಲ್ಲಿರಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ನುಡಿದರು.


ಕಾರ್ಯಕ್ರಮದಲ್ಲಿ ಖ್ಯಾತ ಸಾಮಾಜಿಕ ಜಾಲತಾಣ ವಿಶ್ಲೇಷಕ ಕಿರಣ್ ಕೆ. ಎಸ್ ಮಾತನಾಡಿ ಧರ್ಮ ಸಾಧನೆಗಾಗಿ ಶರೀರವು ಅತ್ಯಗತ್ಯ ಮಾಧ್ಯಮ ಎನ್ನುವುದನ್ನು ನಮ್ಮ ಆಚರಣೆಗಳು ತಿಳಿಸುತ್ತವೆ. ಹಾಗಾಗಿ ಆರೋಗ್ಯಯುತ ಜೀವನಶೈಲಿಯತ್ತ ನಮ್ಮ ಚಿತ್ತವಿರಬೇಕು. ರಾಷ್ಟ್ರೀಯ ಯುವ ದಿನದ ಸಂದರ್ಭದಲ್ಲಿ 21 ದಿನಗಳ ಕಾಲ ಉತ್ತಮ ಜೀವನಶೈಲಿಯ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಪ್ರಯತ್ನ ಪಡೋಣ. ನಂತರ ನಮ್ಮ ಹವ್ಯಾಸ ರೂಢಿಯಾಗುತ್ತದೆ. ಈ ನಿಟ್ಟಿನಲ್ಲಿ ರೂಪುಗೊಂಡ ನಮ್ಮ ವ್ಯಕ್ತಿತ್ವ ನಮ್ಮನ್ನು ಅನುಸರಿಸುವವರಿಗೆ ಸ್ಪೂರ್ತಿಯಾಗುತ್ತದೆ. ಇಂತಹ ಕಾಯಕದ ಆರಂಭಕ್ಕೆ ನಮಗೆಲ್ಲರಿಗೂ ಸ್ವಾಮಿ ವಿವೇಕಾನಂದರೇ ಪ್ರೇರಣೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ತನುಜಾ ಚಲನಚಿತ್ರದ ನಿರ್ದೇಶಕ ಹರೀಶ್ ಎಂಡಿ ಹಳ್ಳಿ ಸ್ವಾಮಿ ವಿವೇಕಾನಂದರ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂಬ ಮಾತೇ ನನ್ನ ಕೆಲಸಗಳಿಗೆ ಆದರ್ಶ. ಜೀವನದಲ್ಲಿ ಏನೇ ಬರಲಿ ಭರವಸೆಯನ್ನು ಕಳೆದುಕೊಳ್ಳದೆ ಪ್ರಯತ್ನಪಡಬೇಕು. ತನುಜಾ ಚಿತ್ರದ ಮೂಲಕವೂ ಭರವಸೆಯನ್ನು ಕಳೆದುಕೊಳ್ಳದೆ ನಿರಂತರ ಪ್ರಯತ್ನಪಟ್ಟು ಉನ್ನತ ಶಿಕ್ಷಣ ಪಡೆಯುತ್ತಿರುವ ಓರ್ವ ವಿದ್ಯಾರ್ಥಿನಿಯ ಜೀವನ ಸಂದೇಶವನ್ನು ಹೇಳಹೊರಟಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನೂರಾರು ಯುವಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.