ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಈ ಹಿಂದೆ ಜಾರಿಯಲ್ಲಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ತೀರ್ಮಾನಿಸಿರುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಕಾರ್ಯಾಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಗಳಿಗೆ ಆಮಿಷ ತೋರಿಸಿ, ಹೆದರಿಸಿ, ಮರುಳು ಮಾಡಿ ಬಲವಂತವಾಗಿ ಮತಾಂತರಿಸುವುದನ್ನು ನಾವು ವಿರೋಧಿಸುತ್ತೇವೆ. ಇಂತಹ ಮತಾಂತರ ಪ್ರಕ್ರಿಯೆಗೆ ತಡೆಯಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂತೆಗೆದಿರುವುದನ್ನು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಅಲ್ಪಸಂಖ್ಯಾತರಲ್ಲದೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದು, ಕಾಂಗ್ರೆಸ್ ತನ್ನ ಈ ಹಿಂದೂ ವಿರೋಧಿ ನಡೆಯಿಂದ ತನಗೆ ಮತ ಹಾಕಿದ ಸಮಸ್ತ ಹಿಂದೂ ಸಮಾಜಕ್ಕೆ ದ್ರೋಹ ಬಗೆದಂತಾಗಿದೆ. ಹಾಗೆಯೇ ತನ್ನ ಸಂಕುಚಿತ ಭಾವನೆಯಿಂದ ರಾಷ್ಟ್ರಪುರುಷ ಸಾವರ್ಕರ್ ಕುರಿತಾದ ಪಾಠವನ್ನು ಕೈಬಿಟ್ಟಿರುವುದನ್ನು ಖಂಡಿಸುತ್ತೇವೆ. ಮಂತ್ರಿ ಮಂಡಲವು ತಾನು ತೆಗೆದುಕೊಂಡಿರುವ ಈ ನಿರ್ಧಾರಗಳನ್ನು ಕೂಡಲೇ ಹಿಂತೆಗೆದುಕೊಂಡು ಉತ್ತಮ ಆಡಳಿತ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇಂದು ಪ್ರತಿಭಟನೆ :
ವಿಶ್ವ ಹಿಂದು ಪರಿಷತ್ – ಬಜರಂಗದಳ ಬೆಂಗಳೂರು ಮಹಾನಗರದ ವತಿಯಿಂದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ದಿನಾಂಕ 16-06-2023 ಸಂಜೆ 4.00ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.